ಕಥಕ್ ದಂತಕಥೆ 83 ವರ್ಷದ ಪಂಡಿತ್ ಬಿರ್ಜು ಮಹಾರಾಜ್ ಅವರು ಹೃದಯಾಘಾತದಿಂದ ಭಾನುವಾರ ತಡರಾತ್ರಿ ದೆಹಲಿಯ ತಮ್ಮ ಮನೆಯಲ್ಲಿ ನಿಧನರಾಗಿದ್ದಾರೆ.
ಭಾರತದ ಅತ್ಯುತ್ತಮ ಕಲಾವಿದರಲ್ಲಿ ಒಬ್ಬರಾಗಿದ್ದ ಮತ್ತು ದೇಶದ ಎರಡನೇ ಅತ್ಯುನ್ನತ ನಾಗರಿಕ ಪ್ರಶಸ್ತಿಯಾದ ಪದ್ಮವಿಭೂಷಣವನ್ನು ಪಡೆದವರು ಪಂಡಿತ್ ಬಿರ್ಜು ಮಹಾರಾಜ್. ಅವರ ಶಿಷ್ಯರು ಮತ್ತು ಅನುಯಾಯಿಗಳು ಅವರನ್ನು ಪ್ರೀತಿಯಿಂದ ಪಂಡಿತ್-ಜಿ ಅಥವಾ ಮಹಾರಾಜ್-ಜಿ ಎಂದು ಕರೆಯುತ್ತಿದ್ದರು.
ವರದಿಗಳ ಪ್ರಕಾರ, ಭಾನುವಾರ ತಡರಾತ್ರಿ ಬಿರ್ಜು ಮಹಾರಾಜ್ ತನ್ನ ಮೊಮ್ಮಕ್ಕಳೊಂದಿಗೆ ಆಟವಾಡುತ್ತಿದ್ದಾಗ ಅವರ ಆರೋಗ್ಯ ಹದಗೆಟ್ಟು ಅವರು ಪ್ರಜ್ಞಾಹೀನರಾದರು. ನಂತರ ಅವರನ್ನು ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು ಅಲ್ಲಿ ಅವರು ಕೊನೆಯುಸಿರೆಳೆದಿದ್ದಾರೆ ಎಂದು ತಿಳಿದುಬಂದಿದೆ.
ಈ ಘಟನೆ ಸಂಭವಿಸಿದಾಗ ಅವರು ನಮ್ಮೊಂದಿಗಿದ್ದರು. ಅವರು ಸಂಗೀತ ಪ್ರಿಯರಾಗಿದ್ದರಿಂದ ಭೋಜನ ಮಾಡಿದ ನಂತರ ಅವರು ಮತ್ತು ನಾವು ‘ಅಂತಕ್ಷರಿ’ ನಡೆಸುತ್ತಿದ್ದೆವು. ಅವರು ಮಲಗಿದ್ದರು ತದನಂತರ ಇದ್ದಕ್ಕಿದ್ದಂತೆ ಅವರ ಉಸಿರಾಟವು ಏರಿಳಿತವಾಯಿತು. ಅವರು ಹೃದ್ರೋಗಿಯೂ ಆಗಿದ್ದರಿಂದ ಇದು ಹೃದಯ ಸ್ತಂಭನ ಎಂದು ನಾವು ಭಾವಿಸುತ್ತೇವೆ ಎಂದು ಕುಟುಂಬ ಸದಸ್ಯರು ತಿಳಿಸಿದ್ದಾರೆ.
“ಇದು ಮಧ್ಯರಾತ್ರಿ 12.15 ರಿಂದ 12.30 ರ ನಡುವೆ ಸಂಭವಿಸಿದೆ. ನಾವು ಆಸ್ಪತ್ರೆಗೆ ದಾಖಲಿಸಿದೆವು ಆದರೆ ದುರದೃಷ್ಟವಶಾತ್, ನಮಗೆ ಅವರನ್ನು ಉಳಿಸಲು ಸಾಧ್ಯವಾಗಲಿಲ್ಲ. ಆಸ್ಪತ್ರೆಯನ್ನು ತಲುಪುವ ಮೊದಲೇ ಅವರು ಸಾವನ್ನಪ್ಪಿದರು. ಈ ಘಟನೆ ಸಂಭವಿಸಿದಾಗ ಅವರ ಇಬ್ಬರು ಶಿಷ್ಯರು ಮತ್ತು ಅವರ ಇಬ್ಬರು ಮೊಮ್ಮಕ್ಕಳು, ನನ್ನ ತಂಗಿ ಯಶಸ್ವಿನಿ ಮತ್ತು ನಾನು ಅವರೊಂದಿಗೆ ಇದ್ದೆವು, ಅವರು ತಮ್ಮ ಕೊನೆಯ ಕ್ಷಣಗಳಲ್ಲಿ ನಗುತ್ತಿದ್ದರು” ಎಂದು ಸ್ವತಃ ಕಥಕ್ ನೃತ್ಯಗಾರ್ತಿ ಬಿರ್ಜು ಮಹಾರಾಜ್ ಅವರ ಮೊಮ್ಮಗಳು ರಾಗಿಣಿ ತಿಳಿಸಿದ್ದಾರೆ ಎಂದು ಪಿಟಿಐ ಸುದ್ದಿ ಸಂಸ್ಥೆ ಉಲ್ಲೇಖಿಸಿದೆ.
ಅಂದಹಾಗೆ ಬಿರ್ಜು ಮಹಾರಾಜ ಅವರ ದೇಹ ಪಾಶ್ಚಾತ್ಯ ನೃತ್ಯಪಟುಗಳಂತೆ ತೆಳ್ಳಗೆ ಸಪೂರವಾಗಿರಲಿಲ್ಲ. ತಮ್ಮನ್ನು ತಾವು ಖಾತೆಪೀತೆ ಘರ್ ಕಾ ಎಂದು ಕರೆದುಕೊಳ್ಳುತ್ತಿದ್ದ ಅವರು ಚೆನ್ನಾಗಿ ತಿಂದು ದುಂಡದುಂಡಗೆ ಇದ್ದರು. ಒಂದು ಸಲ ವಿದೇಶದಲ್ಲಿ ಕಾರ್ಯಕ್ರಮ ನೀಡಬೇಕಾಗಿತ್ತು. ಆಗ ಅಲ್ಲಿಯ ಭದ್ರತಾ ಸಿಬ್ಬಂದಿ, ಬಿರ್ಜು ಮಹಾರಾಜ ಅವರ ತಂಡದವರಿಗೆ ಒಳಗೇ ಬಿಡಲಿಲ್ಲ. ಇಲ್ಲ, ನಾವೇ ನೃತ್ಯಪಟುಗಳು, ಈಗ ಕಾರ್ಯಕ್ರಮ ನೀಡಬೇಕಾಗಿದ್ದು ನಾವೇ ಎಂದು ಪದೇಪದೇ ವಿನಂತಿಸಿಕೊಂಡರೂ ಬಿಡಲಿಲ್ಲ. ಕೊನೆಗೆ ಇವರ ಮನವಿಗೆ ಸೋತು, ಆ ಭದ್ರತಾ ಸಿಬ್ಬಂದಿ ಕೊನೆಗೂ ತಂಡದವರನ್ನು ಒಳಗೆ ಬಿಡಲು ಒಪ್ಪಿದ. ಆದರೆ ಯಾವ ಆಂಗಲ್ ನಲ್ಲೂ ನೃತ್ಯ ಮಾಡುವವನಂತೆ ಕಾಣದ ಈ ಒಬ್ಬ ವ್ಯಕ್ತಿಯನ್ನು, ಮಾತ್ರ ಒಳಗೆ ಬಿಡಲು ಒಪ್ಪಲಿಲ್ಲ. ಆ ವ್ಯಕ್ತಿಯೇ ಬಿರ್ಜು ಮಹಾರಾಜ. ಇದನ್ನು ತಾವೇ ಒಂದು ಕಾರ್ಯಕ್ರಮದಲ್ಲಿ ಹೇಳಿಕೊಂಡಿದ್ದರು ಬಿರ್ಜು ಮಹಾರಾಜ ಅವರು.
ಅವರ ನಿಧನದ ಸುದ್ದಿ ಬರುತ್ತಿದ್ದಂತೆ ಸಾಗರೋಪಾದಿಯಲ್ಲಿ ಸಂತಾಪಗಳು ಹರಿದು ಬಂದಿವೆ.
“ಲೆಜೆಂಟರಿ ಪಂಡಿತ್ ಬಿರ್ಜು ಮಹಾರಾಜ್ ಅವರ ನಿಧನವು ಒಂದು ಯುಗದ ಅಂತ್ಯವನ್ನು ಸೂಚಿಸುತ್ತದೆ. ಇದು ಭಾರತೀಯ ಸಂಗೀತ ಮತ್ತು ಸಾಂಸ್ಕೃತಿಕ ಜಾಗದಲ್ಲಿ ಆಳವಾದ ಶೂನ್ಯವನ್ನು ಉಂಟುಮಾಡುತ್ತದೆ. ಅವರು ಕಥಕ್ ಅನ್ನು ಜಾಗತಿಕವಾಗಿ ಜನಪ್ರಿಯಗೊಳಿಸಲು ಅಪ್ರತಿಮ ಕೊಡುಗೆಯನ್ನು ನೀಡುವ ಮೂಲಕ ಐಕಾನ್ ಆದವರು ಎಂದು ರಾಷ್ಟ್ರಪತಿ ರಾಮ್ ನಾಥ್ ಕೋವಿಂದ್ ಅವರು ಟ್ವೀಟ್ ಮೂಲಕ ಅವರ ಕುಟುಂಬ ಮತ್ತು ಅಭಿಮಾನಿಗಳಿಗೆ ಸಾಂತ್ವನ ಹೇಳಿದ್ದಾರೆ.
“ಭಾರತೀಯ ನೃತ್ಯಕ್ಕೆ ವಿಶ್ವದಾದ್ಯಂತ ವಿಶೇಷ ಮನ್ನಣೆ ನೀಡಿದ ಪಂಡಿತ್ ಬಿರ್ಜು ಮಹಾರಾಜ್ ಜಿ ಅವರ ನಿಧನದಿಂದ ತೀವ್ರ ದುಃಖವಾಗಿದೆ. ಅವರ ಅಗಲಿಕೆ ಇಡೀ ಕಲಾ ಜಗತ್ತಿಗೆ ತುಂಬಲಾರದ ನಷ್ಟವಾಗಿದೆ. ಈ ದುಃಖದ ಸಮಯದಲ್ಲಿ ಅವರ ಕುಟುಂಬ ಮತ್ತು ಅಭಿಮಾನಿಗಳಿಗೆ ನನ್ನ ಸಂತಾಪ” ಎಂದು ಪ್ರಧಾನಿ ನರೇಂದ್ರ ಮೋದಿ ಸಂತಾಪ ಸೂಚಿಸಿದ್ದಾರೆ.
ಇದನ್ನೂ ಓದಿ: ಸಂಸ್ಕೃತ ಬೇಡ, ಕನ್ನಡ ಬೇಕು: ಗೋಕಾಕ್ ಚಳವಳಿ ಕುರಿತು ಚಂಪಾರವರ ಸಂದರ್ಶನದ ಆಯ್ದ ಭಾಗ


