ಕನ್ನಡಿಗರ ಕಸುವನ್ನು ಹೀರಿ, ಕನ್ನಡ ಸಂಸ್ಕೃತಿಯ ಮೇಲೆ ಯಜಮಾನಿಕೆ ಸಾಧಿಸುವ ಸಂಸ್ಕೃತದ ಹುನ್ನಾರಗಳು ಇಂದು ನಿನ್ನೆಯವಲ್ಲ. ಸಂಸ್ಕೃತಿಯ ಹೆಸರಿನ ಪ್ರಭುತ್ವ ರಾಜಕಾರಣದ ಭಾಷಿಕ ಅಸ್ತ್ರವೇ ಸಂಸ್ಕೃತ ಎಂಬುದನ್ನು ಭಾರತದ ಸಾಂಸ್ಕೃತಿಕ ರಾಜಕಾರಣದ ಚರಿತ್ರೆಯನ್ನು ಅರಿತವರಿಗೆ ಸರಳವಾಗಿಯೇ ತಿಳಿಯುವ ಸತ್ಯ. ದ್ರಾವಿಡ ಭಾಷಾ ಬಳಗಕ್ಕೆ ಸೇರಿದ ಕನ್ನಡವನ್ನು ಸಂಸ್ಕೃತದ ಅಧೀನ ಭಾಷೆಯಾಗಿ ಅಥವಾ ಸಂಸ್ಕತವನ್ನು ಎಲ್ಲ ಭಾಷೆಗಳ ತಾಯಿ ಎಂಬ ಹುಸಿ ನಂಬಿಕೆಯನ್ನು ಹುಟ್ಟುಹಾಕಿ ಸಂಸ್ಕೃತದ ಶ್ರೇಷ್ಠತೆಯನ್ನು ಸ್ಥಾಪಿಸುವ ಸದ್ದಿಲ್ಲದ ತಂತ್ರಗಾರಿಕೆಯೂ ಎಂದಿನಿಂದಲೂ ನಡೆದು ಬಂದಿದೆ. ಕಳೆದ ನಾಲ್ಕು ದಶಕಗಳ ಹಿಂದಿನ “ಗೋಕಾಕ್ ವರದಿ”ಯ ಹಿಂದೆಯೂ ಸಂಸ್ಕೃತವನ್ನು ಶೈಕ್ಷಣಿಕ ವಲಯದಲ್ಲಿ ನೆಲೆಯೂರಿಸುವ ಸಂಚುಗಳಿದ್ದದ್ದು, ಆದರೆ ಚಂಪಾ ಮತ್ತಿತರ ಕನ್ನಡಪರರ ಮಧ್ಯಪ್ರವೇಶ ಹಾಗೂ ವಿ.ಕೃ.ಗೋಕಾಕರಿಗಿದ್ದ ಕನ್ನಡದ ಬದ್ಧತೆಯ ಕಾರಣಕ್ಕೆ ಅಂತಹ ಪ್ರಯತ್ನಗಳು ವಿಫಲಗೊಂಡಿದ್ದನ್ನು ಚಂಪಾ ಅವರು ದಶಕಗಳ ಹಿಂದೆಯೇ ಸಂದರ್ಶನವೊಂದರಲ್ಲಿ ಬಯಲುಗೊಳಿಸಿದ್ದಾರೆ.
ಕನ್ನಡ ವಿಶ್ವವಿದ್ಯಾಲಯದ, ಡಾ.ರಾಮಮನೋಹರ ಲೋಹಿಯಾ ಅಧ್ಯಯನ ಪೀಠದ ಯೋಜನೆಯೊಂದರ ಭಾಗವಾಗಿ ಪ್ರಕಟವಾದ “ಸಮಾಜವಾದಿ ಹೋರಾಟಗಾರರ ಸಂದರ್ಶನಗಳು” ಸಂಪುಟ 2ರಲ್ಲಿ ಈ ಮಾತುಕತೆ ದಾಖಲಾಗಿದೆ. ಬಿ.ಪೀರ್ ಬಾಷಾ ಅವರು ಚಂದ್ರಶೇಖರ್ ಪಾಟೀಲರೊಂದಿಗೆ ನಡೆಸಿದ ಸುದೀರ್ಘ ಸಂದರ್ಶನದಿಂದ ಈ ಕೆಳಗಿನ ಭಾಗವನ್ನು “ನಾನುಗೌರಿ” ಆಯ್ದುಕೊಂಡಿದೆ. ಈ ಸಂದರ್ಶನದ ಸಂಪೂರ್ಣ ಪಠ್ಯವು ಕನ್ನಡ ವಿಶ್ವವಿದ್ಯಾಲಯದ ಪ್ರಸಾರಾಂಗವು ಪ್ರಕಟಿಸಿದ ಈ ಮೇಲಿನ ಕೃತಿಯಲ್ಲಿ ಲಭ್ಯವಿದೆ.
ಕರ್ನಾಟಕದ ಶೈಕ್ಷಣಿಕ ಕ್ರಮದಲ್ಲಿ ಸಂಸ್ಕೃತವನ್ನು ನೆಲೆಯೂರಿಸುವ ನಿಟ್ಟಿನಲ್ಲಿ ಅಂದಿನ ಪೇಜಾವರ ಮಠಾಧೀಶರು ಮುಖ್ಯಮಂತ್ರಿಗಳಾಗಿದ್ದ ಗುಂಡೂರಾವ್ ಅವರ ಮೇಲೆ ನಯವಾದ ಒತ್ತಡ ಹಾಕಿದ್ದನ್ನು, ಅದರ ಪರಿಣಾಮವಾಗಿ ಗುಂಡುರಾಯರು ಪಠ್ಯಕ್ರಮದಲ್ಲಿ ಸಂಸ್ಕೃತದ ಸ್ಥಾನಮಾನ ನಿರ್ಧರಿಸುವ ಹೊಣೆಯನ್ನು ವಿ.ಕೃ.ಗೋಕಾಕ್ ಅವರಿಗೆ ವಹಿಸಿದ್ದನ್ನು ಚಂಪಾ ಈ ಸಂದರ್ಶನದಲ್ಲಿ ನೆನಪಿಸಿಕೊಂಡಿದ್ದಾರೆ. ಅಂತೆಯೇ ಸಂಸ್ಕೃತದ ಅಗತ್ಯವನ್ನು ಬದಿಗೆ ಸರಿಸಿದ ಗೋಕಾಕರ ಕನ್ನಡದ ಬದ್ಧತೆ ಕನ್ನಡ ಮತ್ತು ಕನ್ನಡಿಗರ ಅಸ್ಮಿತೆಯನ್ನು ಉಳಿಸಿಕೊಳ್ಳುವ ನಿಟ್ಟಿನಲ್ಲಿ ಗೋಕಾಕರು ವರದಿ ರೂಪಿಸಿದ್ದನ್ನು ಇಲ್ಲಿ ಪ್ರಸ್ತಾಪಿಸಿದ್ದಾರೆ.
ಕರ್ನಾಟಕದಲ್ಲಿ ಸಂಸ್ಕೃತ ವಿಶ್ವವಿದ್ಯಾಲಯ ಸ್ಥಾಪಿಸಬೇಕೆಂಬ ಬಿ.ಜೆ.ಪಿ.ಸರಕಾರದ ಕ್ರಮವನ್ನು ಕನ್ನಡದ ಬರಹಗಾರರು ಹಾಗೂ ಹೋರಾಟಗಾರರು ವಿರೋಧಿಸುತ್ತಿರುವ ಸಂದರ್ಭದಲ್ಲಿ ಚಂಪಾ ಅವರ ಸಂದರ್ಶನದ ಓದು ಸಕಾಲಿಕವಾದದ್ದು ಎಂಬ ಹಿನ್ನೆಲೆಯಲ್ಲಿ ಈ ಆಯ್ದಭಾಗವನ್ನು “ನಾನುಗೌರಿ” ಪ್ರಕಟಿಸುತ್ತಿದೆ.
ಗೋಕಾಕ್ ನೇತೃತ್ವದ ಸಮಿತಿಗೆ ನೀವು ಪ್ರತಿಭಟಿಸಿ “ಗೋ-ಕಾಕ್, ಗೋ-ಬ್ಯಾಕ್’ ಹೋರಾಟ ಮಾಡಿದ್ದ ಬಗ್ಗೆ ಹೇಳ್ರೀ
ಗೋಕಾಕರ ಅಧ್ಯಕ್ಷತೆಯೊಳಗೆ ಒಂದು ಸಮಿತಿ ಆತು. ಅದಕ್ಕಿಂತ ಮುಂಚೆ ಈ ಸಂಸ್ಕೃತದ ಪ್ರಾಧಾನ್ಯವನ್ನು ಪ್ರತಿಭಟನೆ ಮಾಡಿ ಮೊಟ್ಟ ಮೊದಲು ಕನ್ನಡ ಚಳುವಳಿಯನ್ನು ಪ್ರಾರಂಭ ಮಾಡಿದವು ಬಂಡಾಯ ಸಾಹಿತ್ಯ ಸಂಘಟನೆಯವು. ಇದನ್ನ ಯಾರೂ ಹೇಳಿಲ್ಲ. ಅವ್ರೂ ಹೇಳ್ಕೊಳ್ತಾ ಇಲ್ಲ. ಬೆಂಗಳೂರಿನ ಬೀದಿ ಬೀದಿಯೊಳಗ ಕನ್ನಡದ ಸ್ಥಾನಮಾನಕ್ಕಾಗಿ ಆಗ್ರಹ ಮಾಡಿ ಮೆರವಣಿಗೆ ಮಾಡಿದವ್ರು. ಬಂಡಾಯ ಸಾಹಿತ್ಯ ಸಂಘಟನೆಯವ್ರು.
ಗೋಕಾಕ್ ಸಮಿತಿ ನೇಮಕ ಆದಮ್ಯಾಲೆ, ಈ ಸಮಿತಿಯ ಸದಸ್ಯರು ಯಾರ್ಯಾರು ಅಂತಾ ನೋಡಿದಾಗ ಸ್ಪಷ್ಟವಾಗಿ ಗೊತ್ತಾಯ್ತು ಇದು ಕನ್ನಡದ ಪರವಾದ ವರದಿ ಕೊಡ್ಲಿಕ್ಕೆ ಸಾಧ್ಯಾನೇ ಇಲ್ಲ. ಇದು ಸಂಸ್ಕೃತದ ಪರವಾದ ಸಮಿತಿ ಅಂತಾ ನಮಗೆ ಅನಿಸಿದ ಕೂಡ್ಲೆ ಅವರು ಅಭಿಪ್ರಾಯ ಸಂಗ್ರಹಣೆಗಂತ ಹೊಂಟ್ರಲ್ಲ, ಹಳೇ ಮೈಸೂರಿನ್ಯಾಗ ಮನವಿ ಗಿನವಿ ಸ್ವೀಕರಿಸಿ ಧಾರವಾಡಕ್ಕೆ ಬಂದು, ಅದರ ಹಿಂದಿನ ದಿವಸನಾ ನಾನೇ ಸ್ವತಃ ತಿರುಗಾಡಿ ಒಂದು ಸ್ಟೇಟ್‌ಮೆಂಟ್ ಕೊಡಿಸಿದ್ದೆ ಸಾಹಿತಿಗಳ ಮೂಲಕ, ನಾವು ಇದನ್ನ ವಿರೋಧ ಮಾಡ್ತೀವಿ ಅಂತಾ, ಶಂಬಾ ಜೋಶಿಯವರು ನಮಗಿದಕ್ಕೆ ಲೀಡರು ಅವಾಗ. ಬ್ರಾಹ್ಮಣ ಆದ್ರೂ ಭಾಳಾ ವೈಚಾರಿಕ ಮನ್ಷ್ಯಾ.
ಸಮಿತಿ ಧಾರವಾಡಕ್ಕೆ ಬಂತು. ನಾವಾ ಗೋಕಾಕರ ಹಳೇ ಶಿಷ್ಯರು, ಗೋ-ಕಾಕ್, ಗೋ-ಬ್ಯಾಕ್ ಅಂತಾ ಶುರು ಮಾಡಿಬಿಟ್ಟೆ, ಕಪ್ಪು ಬಾವುಟ ಪ್ರದರ್ಶನ ಮಾಡಿ ಅದು ಮುಂದೆ ಬೆಳಗಾಂವಕ್ಕೆ ಹೋತು, ಬಿಜಾಪುರಕ್ಕೆ ಹೋತು. ಹೆಚ್ಚಾಗ್ತಾನ ಹೋತು ಪ್ರತಿಭಟನೆ. ಬಿಜಾಪುರದಿಂದ ಸೀದಾ ಗುಡಿಚಾಪೆ ಕಿತ್ಕಂಡು ಅವು ಬೆಂಗಳೂರಿಗೆ ಹೋಗ್ಬೇಕಾದಂತಹ ಪರಿಸ್ಥಿತಿ ಬಂತು. ಅಷ್ಟರೊಳಗ ಧಾರವಾಡಕ್ಕೆ ಬಂದಾಗ ಗೋಕಾಕರು ಕರೆದು, ಭಾಳಾ ಪ್ರೀತಿಯಿಂದ ಏಕವಚನದಿಂದ “ಏ ಚಂದ್ರಶೇಖರ ಬಾ ಇಲ್ಲಿ, ನಿನ್ನ ಕೂಡ ಒಂಚೂರು ಆಪ್‌ಸಾಥ್ ಮಾತಾಡಾದೈತಿ’ ಅಂತಾ. ನಾನು ಹೋದೆ ಐ.ಬಿಗೆ ಭಾಳಾ ಮಜಾ ಆತದು. “ನೀನು ಇದ್ರ ಬಗ್ಗೆ ಏನೂ ಬ್ಯಾರೆಯಗೆ ಹೇಳಾದಿಲ್ಲ ಅಂದ್ರ, ನಿನಗ ಕೆಲ ವಿಷಯ ಹೇಳೀನಿ’ ಅಂದ್ರು ಅವ್ರು. ‘ಇಲ್ಲ ಸಾರ್ ಹಂಗಾಗಲ್ಲ ಅದು. ನೀವ್ ಏನ್ ಹೇಳ್ತಿರೋ ಅದನ್ನ ತಕ್ಷಣ ಹೊರಾಗೋಗಿ ಎಲ್ಲಾನೂ ಹೇಳವ್ವಾ ನಾನು ಅಂದೆ’ ‘ಹಂಗಾರ ನಾ ಹೇಳಲ್ಲ ಅಂದ್ರು’, ‘ಬಿಡ್ರಿ’ ಅಂದೆ. ‘ಇದನ್ನೂ ಹೇಳೀನಿ ನಾನು’ ಅಂದೆ. ಆಮ್ಯಾಲೆ ನಾನು ಹೇಳೆ. ‘ಆ ಸರ್ಕ್ಯುಲರ್ ತರಿಸೀ” ಅಂದೆ. ಆ ಆದೇಶ ತರಿಸಿ ನೋಡಿದ್ರೆ ಗೋಕಾಕ್ ರಿಗೇ ಶಾಕ್, ಕಮಿಟಿ ಅಧ್ಯಕ್ಷರು ಅವ್ರು. ಪಠ್ಯಕ್ರಮದಲ್ಲಿ ಸಂಸ್ಕೃತದ ಸ್ಥಾನ ನಿರ್ಧಾರ ಮಾಡ್ಲಿಕ್ಕೆ ಈ ಸಮಿತಿ ಅಂತಾ ಹೇಳಿ ಇತ್ತೇ ಹೊರತು ಕನ್ನಡ ಅಂತಾ ಇಲ್ಲ, ಬ್ಯಾರೇ ಇಲ್ಲ.
ಸಮಿತಿಯ ಅಧ್ಯಕ್ಷರಿಗೇ, ಸಮಿತಿ ನೇಮಕವಾದ ಉದ್ದೇಶ ಗೊತ್ತಿದ್ದಿಲ್ಲ ಅಂದ್ರ ಆಶ್ಚರ್ಯ….. ಇದು!
ಹೌದು. ಗೊತ್ತೇ ಇಲ್ಲ. ಆಮ್ಯಾಲೆ ಅವರಿಗೆ ಕನ್‌ವಿನ್ಸ್ ಆಗಿತ್ತು. ನಾವೆಲ್ಲ ಪ್ರತಿಭಟನೆ ಮಾಡಿದ ನಂತರ ಅವ್ರು ಹೋಗಿ ಸಂಪೂರ್ಣ ಕನ್ನಡದ ಪರವಾದ ವರದಿಯನ್ನು ಕೊಟ್ರು. ಗೋಕಾಕ್ ವರದಿ ಅಂತ ಏನ್ ಕರೀತೀವಿ ಅದು. ಅದು ಬಂದ ಕೂಡ ಗುಂಡೂರಾಯನಿಗೆ ಗಂಟಲಿನ್ಯಾಗ ಸಿಕ್ಕೊಂಡಂಗಾತು. ಅದರ ಅನುಷ್ಠಾನಕ್ಕೆ ಹಿಂದೆ ಮುಂದ ನೋಡ್ಲಿಕ್ಕೆ ಶುರುಮಾಡಿದ್ರು ಅವಾಗ.
ಈ ಗೋಕಾಕ್ ವರದಿ ಜಾರಿಗೆ ಬರಲಿ ಅಂತ ಈ ಚಳುವಳಿ ಶುರು ಆಗಿದ್ದು ೧೯೮೦ ಅಕ್ಟೋಬರ್ ೨೩. ಅದು ಪ್ರತಿಭಟನೆ, ಅವ್ರು ಹೋಗಿ ವರದಿ ಬಂದಮ್ಯಾಗ ಅದರ ಅನುಷ್ಠಾನಕ್ಕ ಚಳುವಳಿ ಶುರು ಆತು. ಮುಂದ ಗೋಕಾಕ್ ಚಳುವಳಿ ಬೆಳೀತು. ರಾಜಕುಮಾರ್ ಎಂಟ್ರಿ ಆದಮ್ಯಾಗ ದೊಡ್ಡ ಜನಾಂದೋಲನ ಆತು. ಮೊದಲ ಹಂತದಾಗ ಕೆಲ ಅಧ್ಯಾಪಕರು, ಬುದ್ಧಿಜೀವಿಗಳಿಂದ ಸಣ್ಣ ಚಳುವಳಿಯಾಗಿ ಶುರು ಆಗಿದ್ದು ಜನಾಂದೋಲನದ ಸ್ವರೂಪ ಬಂದಿದ್ದು ರಾಜಕುಮಾರ್ ಎಂಟ್ರಿ ಆದ್ಮಾಲೆ, ಅದನ್ನ ಯಾರೂ ಅಲ್ಲಗೆಳೀಲಿಕ್ಕೆ ಆಗಲ್ಲ.
ರಾಜಕುಮಾರ ಪ್ರವೇಶಿಸಿದ್ದು ವರದಿಯ ವಿವರ ಹಿನ್ನೆಲೆಗಳ ಅರಿವಿನಿಂದನೋ ಅಥವಾ ಕನ್ನಡಪರ ಅಭಿಮಾನದ ನೆಲೆಯಿಂದಾನೋ?
ಕನ್ನಡಕ್ಕೆ ಏನಾದ್ರೂ ಆದ್ರೆ ನಾನು ಧುಮುಕಬೇಕು ಅಂತಾ ಅಷ್ಟಾ. ಕನ್ನಡದ ನೆಲ, ಕನ್ನಡದ ಭಾಷೆ, ಹೀಗೆ ಅಪ್ಪಟ ಪಾರದರ್ಶಕವಾದ ಕನ್ನಡದ ಪ್ರೀತಿ, ಅವರೇನು ಗೋಕಾಕ್ ವರದಿ ಓದ್ದಿಲ್ಲ, ಗೊತ್ತಿಲ್ಲ. ಯಾರ ಕೇಳಿದ್ರಂತ, ಸುದ್ದಿಗಾರರು. “ನೀವು ಓದಿರೇನು ವರದಿ, ಅಂತಾ. ‘ನಾನು ಓದಿಲ್ಲಪ್ಪಾ’ ಅಂದ್ರಂತ, ಮತ್ಯಾಕ ಮಾಡ್ತೀರಿ ಅಂದ್ರೆ ಕನ್ನಡಕ್ಕೆ ಅನ್ಯಾಯ ಆಗೇದಂತ ತಿಳಿದವ್ರು ಹೇಳ್ತಿದಾರ. ಮತ್ತು ನಾವು ಹೋರಾಟ ಮಾಡ್ಬೇಕು ಅಷ್ಟಾ, ನೇರವಾದ ಉತ್ತರ. ಅದು ಅವರ ಗ್ರೇಟ್‌ನೆಸ್ ಅದು.
ಗೋಕಾಕ್ ವರದಿ ಹೋರಾಟಕ್ಕೆ ಬಂಡಾಯ ಸಾಹಿತ್ಯ ಸಂಘಟನೆಯ ಸ್ಪಂದನೆ ಮತ್ತು ತೊಡಗಿಸಿಕೊಳ್ಳುವಿಕೆ ಯಾವ ರೀತಿಯದ್ದಾಗಿತ್ತು? ಆಂತರಿಕ ಚರ್ಚೆಯನ್ನೇನಾದ್ರೂ ಹುಟ್ಟುಹಾಕ್ತಾ?
ಬಂಡಾಯದವ್ರು ಕನ್ನಡದ ಸ್ಥಾನಮಾನದ ಬಗ್ಗೆ ಹೋರಾಟ ಮಾಡಿದ್ರು. ಆಮ್ಯಾಲೆ ಇದು ಜನಾಂದೋಲನ ಆಗ್ತಕ್ಕಂತ ಸಂದರ್ಭದೊಳಗ ಕೋಲಾರದೊಳಗ ರಾಜ್ಯಮಟ್ಟದ ಬಂಡಾಯ ಸಾಹಿತ್ಯ ಸಮ್ಮೇಳನದಾಗ ಒಂದು ರಾಜ್ಯಮಟ್ಟದ ಸಭೆ. ಅವಾಗ ನಾನಿದ್ರಾಗ ಭಾಳಾ ಲೀಡಿಂಗ್ ಇದ್ನೆಲ್ಲ. ಅವಾಗ ನನ್ನನ್ನ ಭಾಳಾ ಕೌಂಟರ್ ಮಾಡಿದ್ರು. ಮುಖ್ಯವಾಗಿ ಮಾರ್ಕ್ಸಿಸ್ಟು. ಇದು ಭಾಷಿಕ ಸಮಸ್ಯೆ, ಜನಾಂಗ-ಜನಾಂಗಗಳ ನಡುವೆ ಕಿಚ್ಚು ಹಚ್ಚಬಹುದಾದ ಸಮಸ್ಯೆ ಇದು. ಇದ್ರಾಗ ಬಂಧ ಸಂಬಂಧಪಟ್ಟವು ಪಾಲ್ಗೊಳ್ಳದರ ಬಗ್ಗೆ ಚರ್ಚೆ ಮಾಡಬೇಕು ಅಂತ ಶುರು ಹಚ್ಕೊಂಡ್ರು ಮಾರ್ಕ್ಸಿಸ್ಟ್ ಡಾಮಿನೇಷನ್ ಶುರು ಆಗಿತ್ತು ಆಗ್ಲೆ ಬಂಡಾಯದೊಳಗ, ನಾವಿಬ್ರೇ ಸಮಾಜವಾದಿಗಳು ಇದ್ದದ್ದು ಅಲ್ಲಿ, ನಾನು ಕಾಳೇಗೌಡ ಇಬ್ರೆ, ಆಮ್ಯಾಲೆ ದಲಿತರು ಇದ್ರು. ಅವರೂ ಅಷ್ಟೊತ್ತಿಗೆ ಡಿಸ್ಟೆನ್ಸ್‌ನಲ್ಲಿದ್ರು.
ಗೋಕಾಕ್ ವರದಿ ಜಾರಿಯ ಹೋರಾಟ ಸರ್ವಮಾನ್ಯವಾದುದೇನಾಗಿರಲಿಲ್ಲ. ಈ ಹೋರಾಟ ಸಂಘಟನೆಯ ಒಳಗೆ ಚರ್ಚೆ ಹುಟ್ಟು ಹಾಕಿತು, ಹೊರಗಡೆಯೂ ಅನೇಕ ಭಿನ್ನಾಭಿಪ್ರಾಯಗಳು ಕಾಣಿಸಿಕೊಂಡವು. ಇವುಗಳ ಸ್ವರೂಪವೇನು?
ಹರಿಕುಮಾರ್, ಡಿ.ಆರ್.ನಾಗರಾಜ್, ಶೂದ್ರ ಶ್ರೀನಿವಾಸ, ಅನಂತಮೂರ್ತಿ ಇವರೆಲ್ಲ ಒಂದು ಗುಂಪಾಗಿ ಈ ಭಾಷಿಕ ಆಂದೋಲನವನ್ನು ಹತ್ತಿಕ್ಕಬೇಕು ಅಂತಾ ಭಾಳಾ ವ್ಯವಸ್ಥಿತವಾಗಿ ಶುರು ಮಾಡಿದ್ರು ನನ್ನ ಮ್ಯಾಲೆ ಅಟ್ಯಾಕು. ಅದೇ ಸಂದರ್ಭದೊಳಗ ಬಂಡಾಯದ ಸಭೆಯೊಳಗ ನೇರವಾಗಿ ಮುಖಾಮುಖಿ ಆಯ್ತದು. ನಾನು ಹೇಳ್ತ ನಾನು ಕನ್ನಡ ಚಳುವಳಿಯಲ್ಲಿ ಸಕ್ರಿಯವಾಗಿ ಇರೋನು. ಯಾಕಂದ್ರ ಲೋಹಿಯಾರವರ ಸಿದ್ಧಾಂತ ಜನ ಭಾಷೆಗಳ ಪರವಾಗಿ ಇರೋದದು. ನನಗೆ ಬಂಡಾಯನೂ ಭಾಳಾ ಮುಖ್ಯ, ಕನ್ನಡ ಚಳುವಳಿ ಬ್ಯಾರೆ, ಬಂಡಾಯ ಚಳುವಳಿ ಬ್ಯಾರೆ ಅಂತಾ ನಾನು ಬಗೆಯೋದಿಲ್ಲ. ಒಂದು ವೇಳೆ ಅಲ್ಟಿಮೇಟ್ಲಿ ನನ್ನೆದುರು ‘ಕನ್ನಡ ಅಥವಾ ಬಂಡಾಯ’ ಅಂತಾ ಆಯ್ಕೆ ಇತ್ತು ಅಂದ್ರ ನನ್ನ ಸ್ಪಷ್ಟವಾದ ಆಯ್ಕೆ ಕನ್ನಡ, ಅಂತ ಹೇಳಿ ಬಂಡಾಯ ಸಾಹಿತ್ಯ ಸಂಘಟನೆಗೆ ರಾಜಿನಾಮೆ ಕೊಟ್ಟು ಬಂದು ಬಿಟ್ಟೆ ನಾನು, ಮುಗೀತು ಅಲ್ಲಿಗೆ ೮೦ ರಲ್ಲೆ.
ಮುಂದೆ ಏನಾತು, ಈ ಚಳುವಳಿಯನ್ನ ಹಾಳು ಮಾಡೋದಿಕ್ಕೆ ಏನೇನ್ ಮಾಡ್ಬೇಕೋ ಅದೆಲ್ಲಾ ಮಾಡಿದ್ರು ಈ ಹರಿಕುಮಾರ್ ಅಂಡ್ ಕಂಪನಿ, ಲೇಟರ್ ಆಗಿ ಅನಂತಮೂರ್ತಿ, ಈ ಅನಂತಮೂರ್ತಿ ಅವಾಗ ಹೇಳಿದ್ದು ಇದೊಂದು ಸಮೂಹ ಸನ್ನಿ ಅಂತ. ಮಾಸ್ ಹಿಸ್ಟೀರಿಯಾ ಅಂತ ದೊಡ್ಡದೊಂದು ಫೇಮಸ್ ಸ್ಟೇಟ್‌ಮೆಂಟ್ ಕೊಟ್ಟುಬಿಟ್ರು, ಅವತ್ತಿಂದ್ಲೇ ನಮ್ಮ ಅವರ ಕನ್ನಡದ ವಿಷಯಕ್ಕೆ ಅದು ‘ಕೊರಳು ಹರ್ದಂಗಾತು’ ಅಂತಾರಲ್ಲ ಹಂಗ ಆಗಿ ಬಿಡ್ತು, ಅದು.
ನಮ್ದು ನಡೀತು ನಡೀತು. ಬಂಡಾಯ ಸಾಹಿತ್ಯ ಸಂಘಟನೆ ಕೂಡ ನನ್ನ ಸಂಪರ್ಕ ಕಡಿಮಿ ಆತು. ಆದ್ರೆ ಹೋಗ್ತಿದ್ದೆ ನಾನು ಭಾಷಣ ಮಾಡ್ಲಿಕ್ಕೆ, ಹಂಗಂತ ಪೂರ್ಣ ಕಳಚಿಕೊಳ್ಳಿಲ್ಲ ನಾನು. ಈಗ ಅಲ್ಲಿ ದಲಿತರೂ ದೂರ ಹೋಗಿಬಿಟ್ರು. ನನ್ನಂತಹ ಒಂದಿಬ್ಬರು ಸೋಷಲಿಸ್ಟು ಹೋಗಿಬಿಟ್ರು. ಉಳಿದವರೆಂದರೆ ಬರೇ ಮಾರ್ಕ್ಸಿಸ್ಸು, ಲೆಡ್ ಬೈ ಬರಗೂರು, ಬರಗೂರು ಆಕ್ಟಿವ್ ಆಗಿದ್ರು ಮೊದಲನೇ ದಿನದೊಳಗ, ಕನ್ನಡದ ಸ್ಥಾನಮಾನದ ಬಗ್ಗೆ. ಆ ಮೇಲೆ ತಣ್ಣಗಾದ್ರು.
ಮಾರ್ಕ್ಸ್ವಾದಿಗಳ ಧೋರಣೆ ಏನಿತ್ತು?
ಅವರ ಪ್ರಕಾರ ಭಾಷೆ ಅನ್ನಾದು ಸೂಪರ್ ಸ್ಟ್ರಕ್ಚರ್ರು, ಭಾಷೆ ಹೆಸರಿನ್ಯಾಗ ಚಳುವಳಿ ಹೋರಾಟಗಳು ಬ್ಯಾಡ ಅಂತಾ ಅವರು ವಿರುದ್ಧ ಮಾಡಿದ್ರು. ನನ್ನ ವಿರುದ್ಧ ಹೇಳಿಕೆ ಕೊಟ್ರು. ಕನ್ನಡ ಕನ್ನಡ ಅಂತಾರ ತಮ್ಮ ಮಕ್ಕಳನ್ನು ಇಂಗ್ಲೀಷ್ ಕಾನ್ವೆಂಟ್ ಶಾಲಿಗೆ ಕಳಿಸ್ತಾರ ಅಂತಾ. ನಾನವಾಗ ಹರಿಕುಮಾರ್‌ಗೆ ನೋಟೀಸ್ ಕೊಟ್ಟೆ, ಬಂದ್ ನೋಡು ನನ್ನ ಮಕ್ಕು ಎಲ್ಲಿ ಓದ್ತಾರ ಅಂತ. ಆಮ್ಯಾಲೆ ಗಪ್ಪಾದ್ರು.
ಗೋಕಾಕ್ ಹೋರಾಟ ಕುರಿತು ದಲಿತ ಚಳುವಳಿಯ ನಿಲುವು ಏನಾಗಿತ್ತು?
ಅವ್ರು ತಟಸ್ಥವಾಗುಳಿದು ಬಿಟ್ಟು ನಮಗೆ ಅನ್ನಾ ಮುಖ್ಯ, ಉದ್ಯೋಗ ಮುಖ್ಯ, ಸಮಾನತೆ ಮುಖ್ಯ ಅಂತಾ, ಜನಪರವಾಗಿ ಇದ್ರು. ಒಟ್ಟಾರೆ ವ್ಯಾಪಕ ಬೆಂಬಲ ಬಂತು ಇದಕ್ಕ, ದಕ್ಷಿಣ ಕನ್ನಡ ಒಂದ ಬಿಟ್ರೆ, ಇಡೀ ರಾಜ್ಯದ ತುಂಬಾ ಬೆಂಬಲ, ನಮ್ಮ ಸಾಹಿತಿಗಳದ್ದಂತೂ ಬಿಡ್ರಿ ಇವತ್ತಿಗೂ ಸೈತ ನಮ್ಮ ಸಾಹಿತಿಗಳಲ್ಲಿ ಭಾಳಾ ಕಾಂಟ್ರಡಿಕ್ಷನ್ಸ್ ಅದಾವ.
ಭಾಷಾ ಚಳುವಳಿ ಸಮಾಜವಾದಿಗಳ ನಡುವೆಯೂ ಬಿರುಕು ಮೂಡಿಸಿತ್ತು ಅಲ್ಲವಾ? ಇಲ್ಲ, ಲೋಹಿಯಾ ಸಮಾಜವಾದಿಗಳ ನಡುವೆ ಎಂದೂ ಬಿರುಕು ಬಂದಿಲ್ಲ.
ಸಂದರ್ಶಸಿದವರು: ಬಿ.ಪೀರ್ ಭಾಷಾ

(ಕವಿ, ಲೇಖಕ ಮತ್ತು ಹೋರಾಟಗಾರರಾದ ಬಿ. ಪೀರ್ ಭಾಷರವರು ಮೂಲತಃ ಬಳ್ಳಾರಿ ಜಿಲ್ಲೆಯ ಹೂವಿನ ಹಡಗಲಿಯವರಾಗಿದ್ದು ಸದ್ಯ ಕೊಪ್ಪಳ ಜಿಲ್ಲೆಯ ಕಾರಟಗಿಯಲ್ಲಿ ನೆಲೆಸಿದ್ದಾರೆ. ಸಮಾಜ ವಿಜ್ಞಾನ ಅಧ್ಯಯನ ಸಂಸ್ಥೆಯ ಜೊತೆಗೆ ಹಲವಾರು ಜನಪರ ಚಳವಳಿಗಳಲ್ಲಿ ಸಕ್ರಿಯರಾಗಿದ್ದಾರೆ. ಅಕ್ಕ ಸೀತಾ ನಿನ್ನಂತೆ ನಾನೂ ಶಂಕಿತ ಅವರ ಪ್ರಸಿದ್ದ ಕವನ ಸಂಕಲನವಾಗಿದೆ.)
ಇದನ್ನೂ ಓದಿ: ಚಂಪಾ ಸ್ಮರಣೆ: ‘ಸಂಕ್ರಮಣ’ದ ಸಂಕ್ರಮಣ


