Homeಮುಖಪುಟಚಂಪಾ ಸ್ಮರಣೆ: ‘ಸಂಕ್ರಮಣ’ದ ಸಂಕ್ರಮಣ

ಚಂಪಾ ಸ್ಮರಣೆ: ‘ಸಂಕ್ರಮಣ’ದ ಸಂಕ್ರಮಣ

- Advertisement -
- Advertisement -

‘ಸಂಕ್ರಮಣ’ ಎಂದರೆ ವಿಶೇಷವಾಗಿ ದಾಟುವುದು, ಚಲಿಸುವುದು. ಸೂರ್ಯ ಪಥ ಬದಲಿಸುವ ಕ್ರಿಯೆಯನ್ನು ಸಂಕ್ರಾಂತಿ ಎನ್ನುತ್ತೇವೆ. ಆಕಸ್ಮಿಕವಾಗಿ ಚಂಪಾ ಮಕರ ಸಂಕ್ರಾಂತಿಯ ಮುನ್ನಾ ದಿನಗಳಲ್ಲೇ ದೇಹಬಿಟ್ಟರು. ‘ಕ್ರಮ’ ಶಬ್ದಕ್ಕೆ ಒಂದಾದ ಬಳಿಕ ಮತ್ತೊಂದು ಅಲೆ ಕ್ರಮಬದ್ಧವಾಗಿ ಬರುವ ವ್ಯವಸ್ಥೆ ಎಂಬರ್ಥವೂ ಇದೆ. ರನ್ನನ ದುರ್‍ಯೋಧನನು ಕುರುಕ್ಷೇತ್ರದಲ್ಲಿ ದುಶ್ಯಾಸನನ ಹೆಣವನ್ನು ತಬ್ಬಿಕೊಂಡು, ಸಾವಿನಲ್ಲಿ ಕ್ರಮಭಂಗ ಮಾಡಿ ನನಗಿಂತ ಮೊದಲೇ ಯಾಕೆ ಮಡಿದೆ ಎಂದು ರೋದಿಸುತ್ತಾನೆ. ವಿಕ್ರಮವೆಂದರೆ, ಸ್ಥಾಪಿತವಾದ ವ್ಯವಸ್ಥೆಯನ್ನು ಭಗ್ನಗೊಳಿಸಿ ಹೊಸ ವ್ಯವಸ್ಥೆ ಆರಂಭಿಸುವ ನಡಿಗೆ ಎಂಬರ್ಥವಿದೆ. 20ನೇ ಶತಮಾನದ ಉತ್ತರಾರ್ಧದಲ್ಲಿ ‘ಸಂಕ್ರಮಣ’ ಪತ್ರಿಕೆಯು ಕನ್ನಡ ಸಾಹಿತ್ಯ ಮತ್ತು ಕರ್ನಾಟಕ ಸಮಾಜದಲ್ಲಿದ್ದ ಚಿಂತನಾಕ್ರಮವನ್ನು ಭಗ್ನಗೊಳಿಸಿ ಹೊಸದನ್ನು ಹುಟ್ಟಿಸಲೆಂದೇ ಜನ್ಮತಾಳಿದಂತೆ ಪ್ರಕಟವಾಗಿ, 55 ವರ್ಷ ಕಾಲ (1964-2018) ನಡೆದು ಕಣ್ಮುಚ್ಚಿತು.

ಪತ್ರಿಕೆಯನ್ನು ಆರಂಭಿಸಿದ ಸಂಪಾದಕರಲ್ಲಿ ಮೂವರೂ ಧಾರವಾಡ ಸೀಮೆಯವರು; ಕರ್ನಾಟಕ ವಿಶ್ವವಿದ್ಯಾಲಯದ ಸಾಹಿತ್ಯದ ಅಧ್ಯಾಪಕರು. ಚಂಪಾ-ಗಿರಡ್ಡಿ ಆಂಗ್ಲ ವಿಭಾಗದವರಾದರೆ, ಪಟ್ಟಣಶೆಟ್ಟಿಯವರು ಹಿಂದಿ. ಆದರೆ ಮೂವರೂ ಬರೆದಿದ್ದು ಕನ್ನಡದಲ್ಲಿ. ಆಧುನಿಕ ಕನ್ನಡ ಸಾಹಿತ್ಯದ ಮಟ್ಟಿಗೆ ಇದೇನು ಹೊಸ ವಿದ್ಯಮಾನವಲ್ಲ. ಆಧುನಿಕ ಕನ್ನಡ ಸಾಹಿತ್ಯ ಚಳವಳಿಯನ್ನು ಆರಂಭಿಸಿದ ಬಿಎಂಶ್ರೀ ಕೂಡ ಆಂಗ್ಲ ಪ್ರಾಧ್ಯಾಪಕರಾಗಿದ್ದರು. ಅವರ ಚಾರಿತ್ರಿಕ ಮಹತ್ವದ ‘ಕನ್ನಡ ಮಾತು ತಲೆಯೆತ್ತುವ ಬಗೆ’ ಭಾಷಣವು (1911) ಧಾರವಾಡದಲ್ಲೇ ಮಾಡಲ್ಪಟ್ಟಿತು. ಮುಂದೆ ಗೋಕಾಕ ಚಳವಳಿಗೆ ನಾಂದಿ ಹಾಡಿದ್ದೂ ಇದೇ ಧಾರವಾಡ ಮತ್ತು ಅಲ್ಲಿನ ಲೇಖಕರು. ಆಂಗ್ಲ ಪ್ರಾಧ್ಯಾಪಕರೂ ವಿದ್ಯಾಗುರುಗಳೂ ಆಗಿದ್ದ ಪ್ರೊ.ಗೋಕಾಕರಿಗೆ ‘ಗೋಬ್ಯಾಕ್’ ಎಂದು ಚಂಪಾ ಧಿಕ್ಕರಿಸುವ ಮೂಲಕ 80ರ ದಶಕದ ಕನ್ನಡ ಚಳವಳಿ ಜಿಗಿದೆದ್ದಿತು. ಚಂಪಾ ಚಳವಳಿಯನ್ನು ಮುನ್ನಡೆಸಿದ ‘ಕನ್ನಡ ಕ್ರಿಯಾಸಮಿತಿ’ಯ ಕಾರ್ಯದರ್ಶಿಯಾಗಿದ್ದರು. ‘ಸಂಕ್ರಮಣ’ ಕನ್ನಡ ಚಳವಳಿಯ ಸಂಗಾತಿಯಾಯಿತು. ಕರ್ನಾಟಕತ್ವವನ್ನು ವ್ಯಾಖ್ಯಾನಿಸುವ ಮತ್ತು ಪ್ರಾದೇಶಿಕ ರಾಜಕಾರಣವನ್ನು ಹುಡುಕಾಡುವ ಚಿಂತನೆಗಳಿಗೆ ಅದು ವೇದಿಕೆಯೂ ಆಯಿತು. ಒಕ್ಕೂಟ ವ್ಯವಸ್ಥೆಯಲ್ಲಿ ಕರ್ನಾಟಕವು ತನ್ನ ಪ್ರ್ರಾದೇಶಿಕತೆ, ಜನ, ಭಾಷೆ, ಸಾಹಿತ್ಯ, ಸಂಪನ್ಮೂಲ, ಸಂಸ್ಕೃತಿಯ ವಿಶಿಷ್ಟ ಚಹರೆ ಮತ್ತು ಅಧಿಕಾರಗಳನ್ನು ಉಳಿಸಿಕೊಳ್ಳಲು ಮಾಡಬೇಕಾದ ಚಿಂತನೆಗಳನ್ನು ಅದು ಪ್ರಕಟಿಸಿತು.

ಬೆಂಗಳೂರು-ಮೈಸೂರು ಭಾಗದ ಮೇಲ್ಜಾತಿಯ ಲೇಖಕರೇ ಪ್ರಧಾನವಾಗಿದ್ದ ನವ್ಯಸಾಹಿತ್ಯದಲ್ಲಿ, ಉತ್ತರ ಕರ್ನಾಟಕದ ಶೂದ್ರ ಲೇಖಕರ ಬರೆಹಗಳನ್ನು ಪ್ರಕಟಿಸುವುದಕ್ಕಾಗಿ ಎಂಬಂತೆ ಹುಟ್ಟಿಕೊಂಡ ‘ಸಂಕ್ರಮಣ’ವು, ತನ್ನ ಜೀವಿತಾವಧಿಯಲ್ಲಿ ಎರಡು ಮುಖ್ಯ ರೂಪಾಂತರಗಳನ್ನು ಕಂಡಿತು. ಮೊದಲನೆಯದು ನವ್ಯ ಸಾಹಿತ್ಯದಿಂದ ದಲಿತ-ಬಂಡಾಯ ಚಳವಳಿಗಳ ಭಾಗವಾಗಿ ಬದಲಾಗಿದ್ದು. ಗಿರಡ್ಡಿ-ಪಟ್ಟಣಶೆಟ್ಟಿಯವರು ಸಂಪಾದಕ ಸ್ಥಾನದಿಂದ ನಿರ್ಗಮಿಸಲು ಈ ರೂಪಾಂತರದ ಪ್ರಕ್ರಿಯೆಯ ಮೊದಲ ಚಲನೆಗಳೇ ಕಾರಣವಾಗಿದ್ದು ಆಕಸ್ಮಿಕವಲ್ಲ. ಸಾಂಪ್ರದಾಯಿಕ ಚಿಂತ್ರನಕ್ರಮದ ಪ್ರತೀಕವೆಂದು ಚಂಪಾ ಪರಿಭಾವಿಸಿದ್ದ ಜಿ.ಬಿ.ಜೋಶಿಯವರ ಅಟ್ಟದ ಜತೆ ಗಿರಡ್ಡಿಯವರು ಸಾಧಿಸಿದ ಸಾಮೀಪ್ಯದಿಂದ ಹುಟ್ಟಿದ ಭಿನ್ನಮತವು- ಇದರ ಬಗ್ಗೆ ಸಂಕ್ರಮಣದ ಸಂಪಾದಕೀಯಗಳಲ್ಲಿ ಉದ್ದಕ್ಕೂ ಕುಟುಕು ಟೀಕೆಗಳಿವೆ-ಅವರ ನಿರ್ಗಮನಕ್ಕೆ ನಾಂದಿಯಾಯಿತು. ಮೈಸೂರಿನಲ್ಲಿ ಶೂದ್ರ ಲೇಖಕರ ಮುಂದಾಳತ್ವದಲ್ಲಿ ನಡೆದ ‘ಬರೆಹಗಾರರ ಕಲಾವಿದರ ಒಕ್ಕೂಟ’ದ (1974) ಸಮಾವೇಶವನ್ನು ‘ಸಂಕ್ರಮಣ’ ಬೆಂಬಲಿಸಿತು. ಸಮಾವೇಶವು ತಾಳಿದ ಬ್ರಾಹ್ಮಣವಿರೋಧಿ ನಿರ್ಣಯಕ್ಕೆ ಪತ್ರಿಕೆಯು ಕೊರಳೊಡ್ಡಬಾರದು ಎಂದು ಭಿನ್ನಮತ ಸೂಚಿಸಿ ಪಟ್ಟಣಶೆಟ್ಟಿಯವರು ಹೊರಬಂದರು. ಸಾಮಾಜಿಕ ಆಯಾಮವುಳ್ಳ ಈ ಎರಡೂ ನಿರ್ಗಮನಗಳು, ಪರೋಕ್ಷವಾಗಿ ‘ಸಂಕ್ರಮಣ’ದ ಮತ್ತು ಚಂಪಾರ ರಾಜಕೀಯ-ಸಾಮಾಜಿಕ ನಿಲುವನ್ನೂ ಮುಂದಿನ ಹಾದಿಯನ್ನೂ ಖಚಿತಗೊಳಿಸಿದವು. ಲೋಹಿಯಾ, ಗಾಂಧಿ, ಅಂಬೇಡ್ಕರ್‌ವಾದಿ ಚಿಂತನೆಗಳ ಭಿತ್ತಿಯಲ್ಲಿ ಸಮಾಜ ಸಾಹಿತ್ಯ ಭಾಷೆ ರಾಜಕಾರಣವನ್ನು ರೂಪಿಸುವ ಹಾದಿಯದು.

‘ಸಂಕ್ರಮಣ’ದ ಎರಡನೇ ರೂಪಾಂತರವು, ಚಂಪಾ ಅವರು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾಗಿ ಧಾರವಾಡ ಬಿಟ್ಟು ಬೆಂಗಳೂರಿಗೆ ಪ್ರಸ್ಥಾನ ಮಾಡುವ ಮೂಲಕ ಸಂಭವಿಸಿತು. ಅಧಿಕಾರ ಕೇಂದ್ರಗಳಿರುವ ಮಹಾನಗರದಲ್ಲಿದ್ದುಕೊಂಡೇ ಅವರು ಸಾಹಿತ್ಯ ಪರಿಷತ್ತಿನ ಚುನಾವಣೆಗೆ ನಿಂತು ಗೆದ್ದರು. ಸೋತರು. ರಾಜಕೀಯ ಪಕ್ಷಗಳಿಗೆ ಸೇರುವ-ಬಿಡುವ ಪ್ರಯೋಗ ಮಾಡಿದರು. ಪ್ರಧಾನಧಾರೆಯನ್ನು ಪ್ರತಿರೋಧಿಸುವ ಚಳವಳಿ, ಸಾಹಿತ್ಯ ಪರಂಪರೆಗಳ ಹುಟ್ಟಿನ ಹಿಂದೆ ಅವಿಭಾಜ್ಯ ಭಾಗವಾಗಿದ್ದ ಅವರು, ಈಗ ಕನ್ನಡ ಸಾಹಿತ್ಯ ಪರಿಷತ್ತು, ಧಾರವಾಡದ ‘ಸಾಹಿತ್ಯ ಸಂಭ್ರಮ’, ‘ಆಳ್ವಾಸ್ ನುಡಿಸಿರಿ’ ಮೊದಲಾದವುಗಳ ಭಾಗವಾಗುತ್ತ ಹೋದರು. ಅವರ ಈ ಸಾಹಿತ್ಯಕ ಧೋರಣೆಗಳ ‘ಸಂಕ್ರಮಣ’ದ ಮೇಲೂ ಪ್ರಭಾವ ಬೀರಿದವು. ಬೆಂಗಳೂರು ವಾಸದಿಂದ ಸಂಪಾದಕರ ಸಂಪರ್ಕ ವಿಸ್ತಾರಗೊಂಡಿರಬಹುದು. ಚಂದಾದಾರರ ಸಂಖ್ಯೆಯೂ ಅಧಿಕಗೊಂಡಿರಬಹುದು. ಆದರೆ ಚಂಪಾ ಧಾರವಾಡದಲ್ಲಿದ್ದಾಗ, ಅಧಿಕಾರ ಕೇಂದ್ರದಿಂದ ದೂರವಿದ್ದಾಗ ಪುಟಿಸುತ್ತಿದ್ದ ಸೃಜನಶೀಲತೆ ಮತ್ತು ತೀವ್ರತೆಯಲ್ಲಿ ಮಂಕು ಕಾಣಿಸಿತು. ‘ಸಂಕ್ರಮಣ’ದ ಮೂಲ ಗುಣಕ್ಕೆ ಇದು ವ್ಯತಿರಿಕ್ತವಾಗಿತ್ತು. ಪತ್ರಿಕೆ ತನ್ನ ಚಾರಿತ್ರಿಕ ಪಾತ್ರವನ್ನು ಮುಗಿಸಿ ರಂಗನಿರ್ಗಮನಕ್ಕೆ ತಯಾರಾಗತೊಡಗಿತು. ಅರ್ಧಶತಮಾನ ಚರಿತ್ರೆಯ ಹೆಗ್ಗಳಿಕೆಯಿಂದ ಯಾಂತ್ರಿಕ ವಿಧಿಯಂತೆ ಪ್ರಕಟವಾಗುತ್ತಿತ್ತು. ಅದು ಅಂಚೆಯಲ್ಲಿ ಬಂದರೆ ಬಿಡಿಸಿನೋಡಲು ಮೊದಲಿನ ಉತ್ಸಾಹ ಉಳಿದಿರಲಿಲ್ಲ. ಬಹುತೇಕ ಲೇಖನಗಳಲ್ಲಿ ಜೀವ ಕಡಿಮೆಯಾಗಿತ್ತು.

ವೈಯಕ್ತಿಕ ಜಗಳ ತಗಾದೆ ಸೋಲುಗಳನ್ನು ತಾತ್ವೀಕರಿಸಿ ಸಾರ್ವಜನಿಕ ವಿದ್ಯಮಾನವೆಂಬಂತೆ ಮಂಡಿಸುತ್ತಿದ್ದ ಸಂಪಾದಕೀಯಗಳು, ಓದುಗರನ್ನು ಹಿಡಿದಿಡಲು ಸೋಲುತ್ತಿದ್ದವು. ಸಂವಾದಕ್ಕೆ ಆಸ್ಪದವಿಲ್ಲದ ಕಹಿತನ ಮತ್ತು ವಿಷಯದ ಘನತೆ ಕಳೆಯಬಲ್ಲ ಜೋಕುಗಳಿಂದ ಕೂಡಿದ ಸಂಪಾದಕೀಯಗಳು ಈ ಎರಡನೇ ಘಟ್ಟದಲ್ಲಿ ಹೆಚ್ಚಾಗಿ ಕಾಣಿಸಿದವು. ಕಿಡಿಯಿದ್ದು ಬೆಳಕು ಕ್ಷೀಣಗೊಳ್ಳುತ್ತಿದ್ದ ಈ ರೂಪಾಂತರವು ಪತ್ರಿಕೆಯ ಸಹಜ ವೃದ್ಧಾಪ್ಯವಾಗಿತ್ತು. ಹೊಸ ಶತಮಾನದಲ್ಲಿ ಕಾಣಿಸಿದ ಮತೀಯವಾದಿ ಅಬ್ಬರ ಮತ್ತು ಜನಪರ ಚಳವಳಿಗಳ ಹಿಂಜರಿಕೆಗಳೂ ಈ ಮಂಕುತನಕ್ಕೆ ಪೂರಕವಾಗಿದ್ದವು. ಹೊಸ ಚಾರಿತ್ರಿಕ ಸನ್ನಿವೇಶಕ್ಕೆ ಹೊಸ ನುಡಿಗಟ್ಟಿನಲ್ಲಿ, ಹೊಸ ತಾತ್ವಿಕತೆಯಲ್ಲಿ, ಹೊಸತಲೆಮಾರಿನ ಜತೆ ಸಂವಾದ ಮಾಡುವ ಯಾವುದೋ ಲಗತ್ತುಕೊಂಡಿಯ ಗೈರು, ಕಸುವಿನ ಕೊರತೆ ಅದನ್ನು ಅಪ್ರಸ್ತುತಗೊಳಿಸುತ್ತ ಹೋಯಿತು. ಮುಖ್ಯವಾಗಿ ಹೊಸ ತಲೆಮಾರಿನ ಪ್ರತಿಭೆಗಳನ್ನು ಅದು ಒಳಗೊಳ್ಳಲಿಲ್ಲ ಅಥವಾ ಹೊಸತಲೆಮಾರು ಅದರೊಡನೆ ಗುರುತಿಸಿಕೊಳ್ಳಲಿಲ್ಲ. ಪ್ರತಿ ತಿಂಗಳ ಪುಳಕದಂತೆ ಬರುತ್ತಿದ್ದ ಪತ್ರಿಕೆ ಬೇಡವಾದ ಅತಿಥಿಯಂತೆ, ದಾಕ್ಷಿಣ್ಯದಿಂದ ಕೊಟ್ಟ ಚಂದಾ ತಪ್ಪಿಗೆ ಬಂದು ಬೀಳುತ್ತಿತ್ತು. ಹೀಗಾಗಿಯೇ ಅದು ನಿಂತಾಗ ಆಘಾತಕರವೆನಿಸಲಿಲ್ಲ. ಈ ದುರವಸ್ಥೆ ಜನಾಂಗದ ಕಣ್ಣನ್ನು ತೆರೆದ ಅನೇಕ ಲೇಖಕರ ವ್ಯಕ್ತಿತ್ವಗಳಿಗೂ ಬರೆಹಗಳಿಗೂ ಪತ್ರಿಕೆಗಳಿಗೂ ವಿದ್ಯಾಸಂಸ್ಥೆಗಳಿಗೂ ಸಂಭವಿಸಿತು. ಇದನ್ನು ಬಾಳಗತಿಯಲ್ಲಿ ಸಹಜವಾಗಿ ಸಂಭವಿಸುವ ಗತಿವಿಗತಿಗಳ ಲಯವೆನ್ನಬೇಕೊ, ಬದಲಾದ ಕಾಲಕ್ಕೆ ಮರುಹುಟ್ಟು ಪಡೆಯಲಾಗದ ಲೇಖಕ-ಸಂಪಾದಕ, ಪತ್ರಿಕೆ-ಬರೆಹ-ಸಂಸ್ಥೆಗಳ ನೈತಿಕ ಸೋಲೆನ್ನಬೇಕೊ ತಿಳಿಯದು.

ಆದರೆ ‘ಸಂಕ್ರಮಣ’ವು ತನ್ನ ಬಾಳುವೆಯ ಮೊದಲ ನಾಲ್ಕು ದಶಕಗಳಲ್ಲಿ, ಕರ್ನಾಟಕದ ವೈಚಾರಿಕ ಜಗತ್ತಿನಲ್ಲಿ ಸಂಚಲನವುಂಟು ಮಾಡಿದ ಕಿರುಪತ್ರಿಕೆಗಳಲ್ಲಿ ಒಂದು. ಚಂಪಾರ ಹೆಸರಲ್ಲಿ ಚಂದ್ರನಿದ್ದಾನೆ. ವೈಚಾರಿಕ ಪ್ರಖರತೆಯನ್ನು ಸೂರ್ಯನಿಗೆ ಹೋಲಿಸುವುದಾದರೆ, ಅವರೂ ಅವರ ಪತ್ರಿಕೆಯೂ ಅವರ ಮೊದಲ ಘಟ್ಟದ ಬರೆಹವೂ ಸೂರ್ಯಸಂಸ್ಕೃತಿಗೆ ಸೇರಿದ್ದು. ಈ ಅರ್ಥದಲ್ಲಿ ಚಂಪಾ ಬೇಂದ್ರೆಯವರನ್ನು ಗೇಲಿ ಮಾಡುತ್ತಿದ್ದುದು ಸಹಜವಾಗಿದೆ ಮತ್ತು ಅವರು ಧಾರವಾಡದಲ್ಲಿ ಬೇಂದ್ರೆಯವರ ಚಂದ್ರಸಂಸ್ಕೃತಿಯನ್ನು ವಿರೋಧಿಸುತ್ತಿದ್ದ ಸೂರ್ಯೋಪಾಸಕ ದಾರ್ಶನಿಕರಾದ ಶಂಬಾ ಜೋಶಿಯವರ ಪಕ್ಷದವರು. ಶಂಬಾ ಪ್ರತಿಪಾದಿಸುತ್ತಿದ್ದ ವೈಚಾರಿಕತೆಯನ್ನು ‘ಸಂಕ್ರಮಣ’ ಸಮಾಜವಾದಿ ಆಯಾಮದಲ್ಲಿ ಪ್ರತಿನಿಧಿಸುತ್ತಿತ್ತು. ಕರ್ನಾಟಕದ ವಿಚಾರವಾದಿ ಚಳವಳಿಯಲ್ಲಿ ಸಂಕ್ರಮಣದ ಪಾತ್ರ ದೊಡ್ಡದು. ಅದು ಕರ್ನಾಟಕ ಏಕೀಕರಣದ ಆಶೋತ್ತರವನ್ನೂ ಸಾಹಿತ್ಯ ಮತ್ತು ಸಂಸ್ಕೃತಿ ನೆಲೆಯಲ್ಲಿ ಪ್ರತಿನಿಧಿಸಿತು. ಅದರಲ್ಲಿ ಬರೆದ ಲೇಖಕರ ಪಟ್ಟಿಯನ್ನು ಗಮನಿಸಬೇಕು. ಅಲ್ಲಿ ಕರ್ನಾಟಕದ ಎಲ್ಲ ಭಾಗ ಹಾಗೂ ಜಾತಿವರ್ಗ ಧರ್ಮಗಳನ್ನು, ತಾತ್ವಿಕ ಪ್ರಸ್ಥಾನಗಳನ್ನು ಪ್ರತಿನಿಧಿಸುವ ಲೇಖಕರಿದ್ದಾರೆ. ಅಡಿಗರ ‘ಸಾಕ್ಷಿ’ ಅನಂತಮೂರ್ತಿಯವರ ‘ರುಜುವಾತು’ಗಳಿಗೆ ಹೋಲಿಸಿದರೆ ‘ಸಂಕ್ರಮಣ’ವು ಕರ್ನಾಟಕದ ಬಹುತ್ವವನ್ನು ಹೆಚ್ಚು ಪ್ರತಿನಿಧಿಸಿತು. ಇದಕ್ಕೆ ಒಂದು ಕಾರಣ, ಅದು ಉತ್ತರ ಕರ್ನಾಟಕದ ಸಾಂಸ್ಕೃತಿಕ ಕೇಂದ್ರವಾಗಿದ್ದ ಧಾರವಾಡದಲ್ಲಿ ಬೇರುಬಿಟ್ಟಿದ್ದು. ಅದು ನೂರಾರು ಗ್ರಾಮೀಣ ಲೇಖಕರ ಮೊದಲ ಬರೆಹಗಳನ್ನು ಪ್ರಕಟಿಸಿತು. ನನ್ನ ತಲೆಮಾರಿನವರು ಸಂಕ್ರಮಣದ ಲೇಖನ ಮತ್ತು ಸಂಪಾದಕೀಯಗಳ ಮೂಲಕ ನಮ್ಮ ಲೋಕದೃಷ್ಟಿಯನ್ನು ಕಟ್ಟಿಕೊಂಡೆವು. ‘ಸಂಕ್ರಮಣ’ ಬಂತೆಂದರೆ ವಾರಕಾಲ ವೈಚಾರಿಕ ಹಬ್ಬ. ಪತ್ರಿಕೆಯ ಹೆಸರಿನ ವಿಶಿಷ್ಟ ಅಕ್ಷರ ವಿನ್ಯಾಸ, ಅದರ ನಿರಲಂಕಾರೀ ಮುಖಪತ್ರ, ಅದರಲ್ಲಿ ಪ್ರಕಟವಾಗುತ್ತಿದ್ದ ಲೇಖನಗಳ ಪಟ್ಟಿ ಎಲ್ಲವೂ ಆಪ್ತವಾಗಿತ್ತು.

ನಾಲ್ಕು ದಶಕಗಳ ಕಾಲ ಅದರ ಚಂದಾದಾರನೂ ಓದುಗನೂ ಲೇಖಕನೂ ಆಗಿದ್ದ ನನ್ನ ವ್ಯಕ್ತಿತ್ವ ರೂಪಿಸುವಲ್ಲಿ ‘ಸಂಕ್ರಮಣ’ದ ಪಾತ್ರವನ್ನು ಕೃತಜ್ಞತೆಯಿಂದ ನೆನೆಯುತ್ತೇನೆ. ಅಲ್ಲಿ ಪ್ರಕಟವಾದ ಲೇಖನಗಳು ನನಗೊಂದು ಚಹರೆ ದೊರಕಿಸಿಕೊಟ್ಟವು. ‘ಪಾವಿತ್ರ್ಯನಾಶವೂ ಪ್ರತಿಸಂಸ್ಕೃತಿ ನಿರ್ಮಾಣವೂ’ ಎಂಬ ಲೇಖನವು ವಿವಾದ-ಚರ್ಚೆ ಎಬ್ಬಿಸಿದಾಗ, ಆ ಕುರಿತು ಬಂದ ಪ್ರತಿಕ್ರಿಯೆಗಳನ್ನು ಪತ್ರಿಕೆ ಒಂದು ವರ್ಷಕಾಲ ಪ್ರಕಟಿಸಿತು. ‘ಸಂಕ್ರಮಣ’ವು ಪ್ರಕಟಿಸದೇ ಹೋದ ನನ್ನ ಏಕೈಕ ಲೇಖನ, ಅವರ ಕಾವ್ಯದ ಮೇಲೆ ಬರೆದಿದ್ದು. ಅದರಲ್ಲಿ ಅವರ ಕಾವ್ಯದ ಮಹತ್ವವನ್ನು ವಿಶ್ಲೇಷಿಸಿದ್ದೆ. ಜತೆಗೆ ಕಾವ್ಯದಲ್ಲಿರುವ ಸೆಕ್ಸಿಸ್ಟ್ ಗ್ರಹಿಕೆ, ಅಗ್ಗದ ತಮಾಶೆ, ವಿಡಂಬನೆಗಳಲ್ಲಿ ನಾನೇ ಸರಿತನಗಳನ್ನು ತುಸು ಕಟುವಾಗಿ ವಿಮರ್ಶೆ ಮಾಡಿದ್ದೆ. ಕೊನೆಯಲ್ಲಿ ‘ಹೋಗಿಬರ್‍ತೇನಜ್ಜ ಹೋಗಿಬರ್‍ತೇನೆ, ನಿನ್ನ ಪಾದದ ಧೂಳಿ ನನ್ನ ಹಣೆಯ ಮೇಲಿರಲಿ. ಅದು ಕಣ್ಣೊಳಗೆ ಮಾತ್ರ ಬೀಳದಿರಲಿ’ ಎಂಬ ಅವರ ಹೇಳಿಕೆಯನ್ನು ಉಲ್ಲೇಖಿಸಿ- ಇದು ಬೇಂದ್ರೆಯವರನ್ನು ಕುರಿತು ಚಂಪಾ ಆಡಿದ್ದು-ನಮ್ಮನ್ನು ಬೆಳೆಸಿದ ಪರಂಪರೆಯ ಭಾಗವಾದ ಚಂಪಾರಂತಹ ಹಿರಿಯರನ್ನು, ನಮ್ಮ ತಲೆಮಾರು ವಿಮರ್ಶಾತ್ಮಕ ಎಚ್ಚರದಿಂದಲೇ ಅನುಸಂಧಾನ ಮಾಡಬೇಕಿದೆ ಎಂದು ಮುಗಿಸಿದ್ದೆ. ಅವರಿಗದು ಇಷ್ಟವಾಗಲಿಲ್ಲವೆಂದು ಕಾಣುತ್ತದೆ.

ನನಗೆ ನೆನಪಿದೆ. ಪತ್ರಿಕೆ ಬಂದೊಡನೆ ನಾವು ಮೊದಲಿಗೇ ಓದುತ್ತಿದ್ದುದು ಸಂಪಾದಕೀಯ. ಈ ಸಂಪಾದಕೀಯಗಳು ಕರ್ನಾಟಕ ಸಮಾಜ ರಾಜಕಾರಣ ಭಾಷೆ ಸಾಹಿತ್ಯ ಚಳವಳಿಗಳಿಗೆ ಸಂಬಂಧಿಸಿದ ಅಪೂರ್ವ ದಾಖಲೆಗಳು. ‘ಯಾವುದು ಕವನ?’ ಎಂಬ ಕಾವ್ಯಮೀಮಾಂಸಕ ಚರ್ಚೆಯನ್ನು ಮಾಡುವ ಸಂಪಾದಕೀಯವು ಆರಂಭವಾಗುವುದೇ, ಸಂಪಾದಕನು ಹೋಟೆಲಿನಿಂದ ಹೊರಬರುವಾಗ ಕಂಕುಳಲ್ಲಿ ಬಿಕ್ಕೆ ಬೇಡುತ್ತ ನಿಂತ ಬಾಲೆಯ ಉಲ್ಲೇಖದೊಂದಿಗೆ. ನೈತಿಕ ತುರ್ತಿನಲ್ಲಿ ಸಾಹಿತ್ಯವು ಉರಿಯುವ ವರ್ತಮಾನಕ್ಕೆ ಮೈಗೊಟ್ಟೇ ಬದುಕಬೇಕೆಂಬ ತತ್ವವನ್ನು ಅದು ಎಷ್ಟು ಸರಳವಾಗಿ ಹೇಳಿತ್ತೆಂದು
ಸೋಜಿಗವಾಗಿತ್ತು. ಸಂಕ್ರಮಣದ ಲೇಖನಗಳ ಮತ್ತು ಸಂಪಾದಕೀಯಗಳಿಂದ ತಮ್ಮ ಚಿಂತನೆ ಮತ್ತು ಕ್ರಿಯಾಶೀಲತೆ ರೂಪಿಸಿಕೊಂಡವರು ಸಾಮಾನ್ಯವಾಗಿ, ಒಂದಲ್ಲಾ ಒಂದು ಜನಪರ ಚಳವಳಿಯಲ್ಲಿ ತೊಡಗಿದ್ದವರೂ ಆಗಿದ್ದರು. ಚಂಪಾ ಅವರು ಕಪ್ಪುಶಾಯಿಯ ಪೆನ್ನಲ್ಲಿ ಹಳದಿಕಾರ್ಡಿನ ಮೇಲೆ ಚಂದಾ ವಸೂಲಿಗೆಂದು ಬರೆದಿರುವ ಪತ್ರಗಳು ಸಹಸ್ರಾರು ಕನ್ನಡಿಗರನ್ನು ಮುಟ್ಟಿವೆ. ಅವರು ನಾಡಿನಾದ್ಯಂತ ಸಭೆ ಕಮ್ಮಟ ಸಮ್ಮೇಳನ ಎಂದು ಮಾಡುತಿದ್ದ ಓಡಾಟ, ಮಾಡುತ್ತಿದ್ದ ಭಾಷಣ, ಹರಡಿಕೊಂಡಿದ್ದ ಪತ್ರಿಕೆಯ ಚಂದಾದಾರರ ಜಾಲ ಮತ್ತು ಅವರು ಚಂದಾ ವಸೂಲಿ ಮಾಡುತ್ತಿದ್ದ ಜಾಣ್ಮೆ ಇವೆಲ್ಲವೂ, ಕರ್ನಾಟಕದ ಜನಪರ ಚಳವಳಿಗೆ ಬೇಕಾದ ಮನಸ್ಸುಗಳನ್ನು ಒಗ್ಗೂಡಿಸುವ ತಂತ್ರವೂ ಆಗಿತ್ತೆಂದು ಈಗನಿಸುತ್ತಿದೆ. ಇದನ್ನು ಏಕೀಕರಣಗೊಂಡ ಕರ್ನಾಟಕವನ್ನು ಬೆಸೆದಿಡುವ ಬಂಧವಾಗಿ ಲೇಖಕರ ತಿರುಗಾಟ ಮತ್ತು ಕಿರುಪತ್ರಿಕೆಗಳ ಪ್ರಸಾರ, ಚಳವಳಿಗಳು ನಿರ್ವಹಿಸಿರುವ ಪಾತ್ರದ ಭಾಗವಾಗಿ ನೋಡಬೇಕಾಗಿದೆ. ಒಬ್ಬ ಲೇಖಕ-ಅಧ್ಯಾಪಕ, ಚಂದಾದಾರರನ್ನು ಕಾಡಿಬೇಡಿ ನಡೆಸಿದ ಒಂದು ಕಿರುಪತ್ರಿಕೆಯು ಮಾಡಿದ ದೊಡ್ಡ ಪರಿಣಾಮಕ್ಕೆ ‘ಸಂಕ್ರಮಣ’ವು ಸಾಕ್ಷಿಯಾಗಿದೆ. ಇಂತಹದೊಂದು ನಿದರ್ಶನ ಭಾರತದಲ್ಲಿ ಮತ್ತೊಂದು ಇದೆಯೊ ಇಲ್ಲವೊ ತಿಳಿಯದು.

ಪ್ರೊ. ರಹಮತ್ ತರೀಕೆರೆ

ಪ್ರೊ. ರಹಮತ್ ತರೀಕೆರೆ
ರಹಮತ್ ತರೀಕೆರೆ ಕನ್ನಡನಾಡಿನ ಖ್ಯಾತ ಚಿಂತಕರು. ನಾಥಪಂಥ, ಕರ್ನಾಟಕದ ಸೂಫಿಗಳು, ಗುರುಪಂಥಗಳು ಹೀಗೆ ನಾಡಿನ ಹಲವು ಬಹುತ್ವದ ಪಂಥಗಳು ಮತ್ತು ಸೌಹಾರ್ದ ಬದುಕಿನ ಬಗ್ಗೆ ವಿಶೇಷ ಅಧ್ಯಯನಗಳನ್ನು ಮಾಡಿ ಪುಸ್ತಕ ರಚಿಸಿದ್ದಾರೆ. ಇವರ ವಿಮರ್ಶಾ ಸಂಕಲನ ’ಕತ್ತಿಯಂಚಿನ ದಾರಿ’ಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿಯ ಗೌರವ ಸಂದಿದೆ


ಇದನ್ನೂ ಓದಿ: ಚೆನ್ನಣ್ಣನೆಂಬ ಬಂಡಾಯದ ಲಾವಣೀಕಾರ… ; ಬಂಡಾಯ ಸಾಹಿತ್ಯ ಸಂಘಟನೆಯ ಆರಂಭದ ದಿನಗಳ ನೆನೆಪು.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಮೋದಿ ದ್ವೇಷ ಭಾಷಣದ ಕುರಿತು ಅಭಿಪ್ರಾಯ ವ್ಯಕ್ತಪಡಿಸಿದ ಬಿಜೆಪಿ ಜಿಲ್ಲಾಧ್ಯಕ್ಷ ಪಕ್ಷದಿಂದಲೇ ಉಚ್ಚಾಟನೆ!

0
ಪ್ರಧಾನಿ ನರೇಂದ್ರ ಮೋದಿಯವರು ಮುಸ್ಲಿಮರ ವಿರುದ್ಧ ಮಾಡಿರುವ ದ್ವೇಷ ಭಾಷಣದ ಬಗ್ಗೆ ಮಾಧ್ಯಮವೊಂದರಲ್ಲಿ ತನ್ನ ಅಭಿಪ್ರಾಯ ವ್ಯಕ್ತಪಡಿಸಿದ್ದಕ್ಕೆ ರಾಜಸ್ಥಾನದ ಬಿಕಾನೇರ್ ಬಿಜೆಪಿ ಅಲ್ಪಸಂಖ್ಯಾತ ಮೋರ್ಚಾದ ಜಿಲ್ಲಾಧ್ಯಕ್ಷನನ್ನು ಪಕ್ಷದಿಂದಲೇ ಉಚ್ಚಾಟಿಸಲಾಗಿದೆ. ಈ ವಿಚಾರ ಈಗ...