ಎನ್‌ಡಿಟಿವಿಯ ಹಿರಿಯ ಪತ್ರಕರ್ತ ಕಮಲ್ ಖಾನ್ ಉತ್ತರ ಪ್ರದೇಶದ ಲಕ್ನೋದಲ್ಲಿರುವ ಮನೆಯಲ್ಲಿ ಹೃದಯಾಘಾತದಿಂದ ಇಂದು (ಜ.14) ಮೃತಪಟ್ಟಿದ್ದಾರೆ. ಕಳೆದ ಮೂರು ದಶಕಗಳಿಂದ ಎನ್‌ಡಿಟಿವಿಯ ಜೊತೆಗಿದ್ದರು.
ಉತ್ತರ ಪ್ರದೇಶ ರಾಜಕೀಯದ ಆಳವಾದ ಒಳನೋಟ ಮತ್ತು ಸೊಗಸಾದ ಭಾಷೆಗೆ ಹೆಸರುವಾಸಿಯಾಗಿದ್ದ 61 ವರ್ಷ ವಯಸ್ಸಿನ ಕಮಲ್ ಖಾನ್, ಎನ್ಡಿಟಿವಿಯಲ್ಲಿ ಕಾರ್ಯನಿರ್ವಾಹಕ ಸಂಪಾದಕರಾಗಿ ಕೆಲಸ ಮಾಡುತ್ತಿದ್ದರು. ರಾಮನಾಥ್ ಗೋಯೆಂಕಾ ಪ್ರಶಸ್ತಿ ಮತ್ತು ಗಣೇಶ್ ಶಂಕರ್ ವಿದ್ಯಾರ್ಥಿ ಪ್ರಶಸ್ತಿಯನ್ನು ಪಡೆದಿದ್ದಾರೆ.
“ಇದು ಎನ್‌ಡಿಟಿವಿ ಕುಟುಂಬಕ್ಕೆ ಭರಿಸಲಾಗದ ನಷ್ಟ. ಎನ್‌ಡಿಟಿವಿ ಅವರನ್ನು ಒಬ್ಬ ಲೆಜೆಂಡರಿ ವರದಿಗಾರರಾಗಿ ನೆನಪಿನಲ್ಲಿಟ್ಟುಕೊಳ್ಳುತ್ತದೆ. ಅವರ ವರದಿಯ ಗ್ರಹಿಕೆ, ಸಮಗ್ರತೆ ಮತ್ತು ಕಾವ್ಯಾತ್ಮಕ ಕೌಶಲ್ಯದೊಂದಿಗೆ ಕಠಿಣ ಸತ್ಯಗಳನ್ನು ಅವರು ನೀಡಿದ ರೀತಿ ಎದ್ದು ಕಾಣುತ್ತದೆ. ಎಲ್ಲಕ್ಕಿಂತ ಹೆಚ್ಚಾಗಿ, ಅವರು ಅದ್ಭುತ ಮತ್ತು ಉದಾರ ವ್ಯಕ್ತಿಯಾಗಿದ್ದರು. ಅವರನ್ನು ಭೇಟಿಯಾದ ಯಾರಿಗಾದರೂ ಒಳ್ಳೆಯ ಮಾತುಗಳು ಹೇಳುತ್ತಿದ್ದರು. ನಾವು ಮತ್ತು ಅವರ ಕುಟುಂಬಕ್ಕೆ ಇದು ದೊಡ್ಡ ನಷ್ಟ. ನೋವಿನಲ್ಲಿಯೇ ಅವರು ಯುಪಿ ಅಸೆಂಬ್ಲಿ ಚುನಾವಣೆಗೆ ಮುಂಚಿತವಾಗಿ ಬಿಜೆಪಿ ಶಾಸಕರ ರಾಜೀನಾಮೆ ಬಗ್ಗೆ ಮಾಡಿರುವ ಕೊನೆಯ ವರದಿಯನ್ನು ಹಂಚಿಕೊಳ್ಳುತ್ತೇವೆ” ಎಂದು ಗೌರವ ಸೂಚಿಸಿದ್ದಾರೆ.
ಇದನ್ನೂ ಓದಿ: ಯುಪಿ ಬಿಜೆಪಿ: ಅತ್ತ ರಾಜೀನಾಮೆ ಪರ್ವ, ಇತ್ತ ಸೀಟು ಹಂಚಿಕೆಯಲ್ಲಿ ಪಾಲು ಹೆಚ್ಚಳಕ್ಕೆ ಮಿತ್ರಪಕ್ಷಗಳ ಪಟ್ಟು
ಪತ್ರಕರ್ತ ಕಮಲ್ ಖಾನ್ ನಿಧನಕ್ಕೆ ಪತ್ರಕರ್ತರು, ರಾಜಕಾರಣಿಗಳು, ಅಭಿಮಾನಿಗಳು ಸೇರಿದಂತೆ ಗಣ್ಯರು ಸಂತಾಪ ಸೂಚಿಸಿದ್ದಾರೆ.
ಪತ್ರಕರ್ತ ರಾಜ್‌ದೀಪ್ ಸರ್ದೇಸಾಯಿ ಇದು ತೀವ್ರ ದುಖಃದ ಸಂಗತಿ ಎಂದಿದ್ದಾರೆ.
ಉತ್ತರ ಪ್ರದೇಶದ ಮಾಜಿ ಮುಖ್ಯಮಂತ್ರಿ ಮಾಯಾವತಿ, ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ವಾದ್ರಾ, ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್, ಬಿಜೆಪಿ ನಾಯಕ ಜಿತಿನ್ ಪ್ರಸಾದ್, ಕೇಂದ್ರ ಸಚಿವ ಹರ್ದಿಪ್ ಸಿಂಗ್ ಪುರಿ, ಬಿಜೆಪಿಯ ಜ್ಯೋತಿರಾಧಿತ್ಯ ಸಿಂಧಿಯಾ ಸೇರಿದಂತೆ ಪಕ್ಷಾತೀತರಾಗಿ ಕಮಲ್ ಖಾನ್ ನಿಧನಕ್ಕೆ ಸಂತಾಪ ಸೂಚಿಸಿದ್ದಾರೆ.
ಪತ್ರಕರ್ತ ಕಮಲ್ ಖಾನ್ ಅವರ ವರದಿಯ ಜನಪ್ರಿಯ ಸುದ್ದಿಯೊಂದರ ತುಣುಕು ಇಲ್ಲಿದೆ.