Homeಕರ್ನಾಟಕಸಂಸ್ಕೃತ ಕಲಿತು ಮೇಷ್ಟ್ರಾಗಬೇಕಷ್ಟೇ, ಬೇರೆ ಅವಕಾಶಗಳಿಲ್ಲ: ಸಂಸ್ಕೃತ ಪ್ರಾಧ್ಯಾಪಕ ವೇಣುಗೋಪಾಲ್

ಸಂಸ್ಕೃತ ಕಲಿತು ಮೇಷ್ಟ್ರಾಗಬೇಕಷ್ಟೇ, ಬೇರೆ ಅವಕಾಶಗಳಿಲ್ಲ: ಸಂಸ್ಕೃತ ಪ್ರಾಧ್ಯಾಪಕ ವೇಣುಗೋಪಾಲ್

ಎಚ್‌.ವಿ.ವೇಣುಗೋಪಾಲ್ ಅವರು ಬೆಂಗಳೂರಿನ ನ್ಯಾಷನಲ್ ಕಾಲೇಜಿನ ಸಂಸ್ಕೃತ ವಿಭಾಗದ ಮುಖ್ಯಸ್ಥರಾಗಿ ಸೇವೆ ಸಲ್ಲಿಸಿದವರು. ಕಾಲೇಜಿನ ಪ್ರಾಂಶುಪಾಲರೂ ಆಗಿದ್ದರು. ಸಂಸ್ಕೃತ ವಿವಿ ವಿವಾದಕ್ಕೆ ಸಂಬಂಧಿಸಿದಂತೆ ಇಲ್ಲಿ ಪ್ರತಿಕ್ರಿಯೆ ನೀಡಿದ್ದಾರೆ.

- Advertisement -
- Advertisement -

“ಸಂಸ್ಕೃತ ಕಲಿತು ಸಂಸ್ಕೃತ ಮೇಷ್ಟ್ರಾಗಬೇಕೇ ಹೊರತು, ಬೇರೆ ಅವಕಾಶಗಳಿಲ್ಲ” ಎಂದು ನಿವೃತ್ತ ಸಂಸ್ಕೃತ ಪ್ರಾಧ್ಯಾಪಕ ಎಚ್‌.ವಿ.ವೇಣುಗೋಪಾಲ್‌ ತಿಳಿಸಿದ್ದಾರೆ.

ಎಚ್‌.ವಿ.ವೇಣುಗೋಪಾಲ್ ಅವರು ಬೆಂಗಳೂರಿನ ನ್ಯಾಷನಲ್ ಕಾಲೇಜಿನ ಸಂಸ್ಕೃತ ವಿಭಾಗದ ಮುಖ್ಯಸ್ಥರಾಗಿ ಸೇವೆ ಸಲ್ಲಿಸಿದವರು. ಕಾಲೇಜಿನ ಪ್ರಾಂಶುಪಾಲರೂ ಆಗಿದ್ದರು. ಸಂಸ್ಕೃತ ವಿವಿ ವಿವಾದಕ್ಕೆ ಸಂಬಂಧಿಸಿದಂತೆ ವೇಣುಗೋಪಾಲ್ ಅವರು ತಮ್ಮ ಅಭಿಪ್ರಾಯಗಳನ್ನು ‘ನಾನುಗೌರಿ.ಕಾಂ’ ಹಾಗೂ ‘ನ್ಯಾಯಪಥ’ ವಾರಪತ್ರಿಕೆಯೊಂದಿಗೆ ಹಂಚಿಕೊಂಡರು.

“ಸಂಸ್ಕೃತವನ್ನು ಜ್ಞಾನಕ್ಕಾಗಿ ಕಲಿಯುತ್ತಾರಷ್ಟೇ. ಅದು ಒಂದೇ ಚಾನೆಲ್‌. ಒಂದು ಪೈಪ್‌ನೊಳಗೆ ಹಾಕಿ ಹುಡುಗರನ್ನು ಕಳಿಸಿದ ಹಾಗೆ ಆಗುತ್ತದೆ. ಈ ಕಡೆಯಿಂದ ಹೋದರೆ, ಆ ಕಡೆಯಿಂದ ಹೊರಗೆ ಬರಬೇಕಾಗುತ್ತದೆಯಷ್ಟೇ. ಇನ್ನೊಂದು ದಾರಿ ಇಲ್ಲವೇ ಇಲ್ಲ” ಎಂದರು.

“ಮೇಷ್ಟ್ರಾಗದಿದ್ದರೆ ಸಂಶೋಧನೆ ಮಾಡಿ, ಪೇಪರ್‌ ಪಬ್ಲಿಷ್ ಮಾಡಬಹುದು. ಆ ಮೇಲೆ ಪುಸ್ತಕ ಬರೆದು ಪಬ್ಲಿಷ್ ಮಾಡಿ, ಎಲ್ಲ ಜನರಿಗೂ ಹಂಚಬೇಕು. ಯಾರು ಕೊಂಡುಕೊಳ್ಳುತ್ತಾರೆ? ದೇವರ ಬಗ್ಗೆ, ವ್ರತದ ಬಗ್ಗೆ ಬರೆದರೆ ಹೆಚ್ಚು ಜನ ಕೊಂಡುಕೊಳ್ಳುತ್ತಾರೆ. ಬ್ರಹ್ಮಸೂತ್ರದಲ್ಲಿ ಹೀಗೆ ಹೇಳಿದೆ, ಶಂಕರಚಾರ್ಯರು ಹೀಗೆ ಹೇಳಿದ್ದಾರೆ ಎಂದು ಬರೆದರೆ ನಾಲ್ಕು ಜನ ಶಂಕರರು, ನಾಲ್ಕು ಜನ ಮಾಧ್ವರು ಕೊಂಡುಕೊಳ್ಳುತ್ತಾರಷ್ಟೇ” ಎಂದು ಪ್ರತಿಕ್ರಿಯಿಸಿದರು.

“ಸಾಮಾನ್ಯ ಜನರು, ಸಂಸ್ಕೃತ ಗೊತ್ತಿಲ್ಲದವರು ತಿಳಿದಿರುವಂತೆ ಸಂಸ್ಕೃತ ವಿವಿಯಲ್ಲಿ ಮಂತ್ರ ಕಲಿಸುತ್ತಾರೆ, ಪೂಜೆ ಮಾಡೋದನ್ನು ಕಲಿಸುತ್ತಾರೆ ಎಂಬುದು ತಪ್ಪು ಅಭಿಪ್ರಾಯ. ಪಾರಂಪರಿಕವಾದ ತರ್ಕ, ನ್ಯಾಯ, ವೇದವಿದ್ಯೆ ಮುಂತಾದವನ್ನು ಇಲ್ಲಿ ಕಲಿಸುತ್ತಾರೆ. ಅಂದರೆ ಜ್ಞಾನಶಾಖೆಗಳನ್ನು ಅಧ್ಯಯನ ಮಾಡಲಾಗುತ್ತದೆ. ಅದರಲ್ಲಿ ವಿಶೇಷವೇನೂ ಇಲ್ಲ. ಸಂಸ್ಕೃತ ವಿಶ್ವವಿದ್ಯಾನಿಲಯ ಇಲ್ಲದಿದ್ದರೂ ಈ ವಿಷಯಗಳನ್ನು ಆಸಕ್ತರು ಈವರೆಗೆ ಕಲಿಯುತ್ತಿದ್ದರು. ಮೊದಲೆಲ್ಲ ಸಂಸ್ಕೃತದ ಬಿ.ಎ., ಎಂ.ಎ. ಇರಲಿಲ್ಲ. ಸಂಸ್ಕೃತ ವಿವಿಯಿಂದ ಬಿ.ಎ., ಎಂ.ಎ. ಸಾಧ್ಯವಾಗುತ್ತದೆ. ಸಂಸ್ಕೃತ ವಿವಿಯಲ್ಲಿ ಕಲಿತು ಮೇಷ್ಟ್ರಾಗಬಹುದೇ ಹೊರತು ಬೇರೇನೂ ಆಗಲು ಸಾಧ್ಯವಿಲ್ಲ” ಎಂದು ಸುಮಾರು 38 ವರ್ಷಗಳ ಕಾಲ ಸಂಸ್ಕೃತ ಬೋಧಿಸಿರುವ ವೇಣುಗೋಪಾಲ್‌ ಹೇಳಿದರು.

“ಸಂಸ್ಕೃತ ವಿಶ್ವವಿದ್ಯಾನಿಲಯ ಸ್ಥಾಪನೆಯಾಗಿ ಬಹಳ ವರ್ಷಗಳಾಗಿವೆ. ಕೆಲಸವೂ ನಡೆಯುತ್ತಿವೆ. ಹೊಸದಾಗಿ ಸ್ಥಾಪನೆಯನ್ನೇನೂ ಮಾಡುತ್ತಿಲ್ಲ. ಆದರೆ ಅದನ್ನು ವಿಸ್ತಾರ ಮಾಡುತ್ತಿದ್ದಾರೆ. ಈಗ ಆಗುತ್ತಿರುವ ಚರ್ಚೆಯನ್ನು ಗಮನಿಸಿದೆ. ಕನ್ನಡಕ್ಕೆ ಆದ್ಯತೆ ಕೊಡಿ ಸಂಸ್ಕೃತ ಆಮೇಲಿಡಿ ಎಂಬ ವಾದ ಸರಿ ಇದೆ” ಎಂದು ಸ್ಪಷ್ಟಪಡಿಸಿದರು.

“ಈಗ ಬರುತ್ತಿರುವ ವಿರೋಧಗಳು ನಿಜವಾಗಿವೆ. ಹಣ ಹಾಗೂ ಜಾಗದ ದುರುಪಯೋಗದ ಪ್ರಶ್ನೆ ಮೇಲೆದ್ದಿರುವುದು ಸರಿಯೇ ಇದೆ. ಸಂಸ್ಕೃತ ವಿವಿ ಈಗ ಇರುವ ಮಾದರಿಯಲ್ಲೇ ಇದ್ದರೆ ನಷ್ಟವೇನೂ ಆಗಲ್ಲ. ಯಾಕೆಂದರೆ ಸಂಸ್ಕೃತ ಓದುತ್ತಿರುವವರೂ ಕಡಿಮೆ ಇದ್ದಾರೆ. ಸಂಸ್ಕೃತದಿಂದ ಉಪಯೋಗ ಪಡೆಯುವವರೂ ಕಡಿಮೆ” ಎಂದು ಹೇಳಿದರು.

“ತುಂಬಾ ಸಂಪ್ರದಾಯಸ್ಥರು ಸಂಸ್ಕೃತ ಓದುತ್ತಾರೆ. ತ್ರಿಮಸ್ಥರು ಬೇರೆ ಬೇರೆ ಸಂಸ್ಕೃತ ಕಾಲೇಜುಗಳನ್ನು ರೂಪಿಸಿಕೊಂಡು ಅವರಿಗೆ ಸಂಬಂಧಿಸಿದ್ದನ್ನು ಮಾತ್ರ ಬೋಧಿಸುತ್ತಾರೆ. ಇದೆಲ್ಲ ಮಾಮೂಲಿಯಾಗಿ ನಡೆದುಕೊಂಡು ಬಂದಿದೆ. ಇದರಿಂದ ಯಾರಿಗೇನೂ ತೊಂದರೆಯಾಗಿರಲಿಲ್ಲ. ಆದರೆ ಒಂದು ಸರ್ಕಾರ ಇಷ್ಟು ದೊಡ್ಡ ಪ್ರಮಾಣದ ದುಡ್ಡು ಕೊಟ್ಟು, ಜಾಗ ಕೊಟ್ಟು ಏನೋ ಮಾಡುತ್ತೇನೆ ಎನ್ನುವುದು ಸದ್ಯದ ಸಂದರ್ಭದಲ್ಲಿ ತಪ್ಪಾಗಿದೆ” ಎಂದು ಅಭಿಪ್ರಾಯಪಟ್ಟರು.

ಸಂಶೋಧನೆಗಳು ಮಗ್ಗುಮ್ಮಾಗಿ ನಡೆಯುತ್ತದೆ. ಇದಕ್ಕೆ ತಕರಾರು ತೆಗೆಯಬೇಕಿಲ್ಲ. ಕೆಲವರು ಸಂಶೋಧನೆಯಲ್ಲೇ ತೊಡಗಿಸಿಕೊಂಡು ಅದೇ ಕೆಲಸವನ್ನು ಮಾಡುತ್ತಿರುತ್ತಾರೆ. ಬೇರೆಯವರು ಆ ಕಡೆ ಹೋಗುವುದೂ ಇಲ್ಲ. ಹೋಗಬೇಕಾಗಿಯೂ ಇಲ್ಲ” ಎಂದು ವಿವರಿಸಿದರು.

“ಸಂಸ್ಕೃತ ವಿಶ್ವವಿದ್ಯಾನಿಲಯವನ್ನು ವಿರೋಧಿಸುವುದಕ್ಕಿಂತ ವಿಶ್ವವಿದ್ಯಾನಿಲಯಕ್ಕೆ ಇಷ್ಟು ಜಾಗ ಕೊಟ್ಟು, ದುಡ್ಡು ಕೊಡುತ್ತಿರುವುದನ್ನು ವಿರೋಧಿಸಬೇಕು ಎನ್ನುವುದು ಸರಿ. ಸಂಸ್ಕೃತ ಸಂಶೋಧನೆಗೆ ಹಣ ಕೊಟ್ಟಿಲ್ಲ. ಸಂಶೋಧನೆಗೆ ಹಣ ಕೊಡಲಿ. ಈ ಹಿಂದಿನ ವಿದ್ವಾಂಸರು ತಮ್ಮ ವೈಯಕ್ತಿಕ ಖರ್ಚು ವೆಚ್ಚದಲ್ಲಿ ರೂಪಿಸಿದ ಸಂಸ್ಕೃತ ಕೃತಿಗಳನ್ನು ಓದುತ್ತಾ ಬಂದಿದ್ದೇವೆ. ಹೀಗಾಗಿ ಹೊಸ ಸಂಶೋಧನೆಗಳಿಗೆ ಸರ್ಕಾರ ಹಣ ನೀಡಬೇಕು” ಎಂದು ಆಗ್ರಹಿಸಿದರು.

ಕೊನೆಯದಾಗಿ, “ಇಷ್ಟೆಲ್ಲ ದೊಡ್ಡ ಮಟ್ಟದಲ್ಲಿ ಹಣ ಕೊಟ್ಟು, ಸಂಸ್ಕೃತ ವಿವಿಯನ್ನು ಬೃಹತ್ತಾಗಿ ರೂಪಿಸುತ್ತೇವೆ ಎಂದು ಭಾವಿಸೋಣ. ಇಷ್ಟಾದರೂ ಸಂಸ್ಕೃತ ಜನಭಾಷೆಯಾಗಿ ರೂಪುಗೊಳ್ಳಲು ಸಾಧ್ಯವೆ?” ಎಂದು ‘ನಾನುಗೌರಿ.ಕಾಂ’ ಪ್ರಶ್ನಿಸಿತು. ಇದಕ್ಕೆ ಸ್ಪಷ್ಟವಾಗಿ ಪ್ರತಿಕ್ರಿಯೆ ನೀಡಿದ ವೇಣುಗೋಪಾಲ್‌ ಅವರು, “ಖಂಡಿತವಾಗಿಯೂ ಜನಭಾಷೆಯಾಗಿ ಸಂಸ್ಕೃತ ರೂಪುಗೊಳ್ಳುವುದಿಲ್ಲ. ಜನಭಾಷೆಯಾಗಿ ಮಾಡುವ ಅಗತ್ಯವೂ ಇಲ್ಲ. ಇಷ್ಟವಿದ್ದರೆ ಓದಿಕೊಳ್ಳಬಹುದು. ನನಗೆ ಇಷ್ಟವಿದೆ ಓದಿಕೊಳ್ಳುತ್ತೇನೆ. ನನಗೊಂದು ವಿಷಯ ಬೇಕಾದರೆ ಪುಸ್ತಕ ತಿರುವು ಹಾಕಿ ರೆಫರ್‌ ಮಾಡುತ್ತೇನೆ. ಅದು ಬಿಟ್ಟು ಸಂಸ್ಕೃತವನ್ನು ಇಂಜೆಕ್ಟ್‌ ಮಾಡಲು ಸಾಧ್ಯವಿಲ್ಲ- ನಿನಗೊಂದು ಡೋಸ್, ಸೆಕೆಂಡ್ ಡೋಸ್‌ ಎನ್ನಲು ಸಾಧ್ಯವಿಲ್ಲ” ಎಂದರು.


ಇದನ್ನೂ ಓದಿರಿ: ನಾರಾಯಣ ಗುರುಗಳ ಟ್ಯಾಬ್ಲೊ ನಿರಾಕರಣೆ ವಿವಾದ: ಸುಳ್ಳು ಹೇಳಿದ ಸಚಿವ ಸುನಿಲ್ ಕುಮಾರ್‌?

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

1 COMMENT

  1. ನಿಂಗೂ ಅನ್ನ ಕೊಟ್ಟ ತಪ್ಪಿಗೆ ಸಂಸ್ಕೃತಮಾತೆ ಪಶ್ವಾತ್ತಾಪ ಪಡುತ್ತಿರಬಹುದು.

LEAVE A REPLY

Please enter your comment!
Please enter your name here

- Advertisment -

Must Read

ಮಹಿಳೆಯ ಅಪಹರಣ ಪ್ರಕರಣ: ಹೆಚ್‌.ಡಿ ರೇವಣ್ಣ ನಾಲ್ಕು ದಿನ ಎಸ್‌ಐಟಿ ವಶಕ್ಕೆ

0
ಲೈಂಗಿಕ ದೌರ್ಜನ್ಯ ಪ್ರಕರಣದ ಸಂತ್ರಸ್ತೆ ಎನ್ನಲಾದ ಮನೆ ಕೆಲಸದ ಮಹಿಳೆಯ ಅಪಹರಣ ಪ್ರಕರಣದಲ್ಲಿ ಬಂಧಿತರಾಗಿರುವ ಶಾಸಕ ಹೆಚ್‌.ಡಿ ರೇವಣ್ಣ ಅವರನ್ನು  ನಾಲ್ಕು ದಿನಗಳ ಕಾಲ ವಿಶೇಷ ತನಿಖಾ ತಂಡ (ಎಸ್‌ಐಟಿ) ವಶಕ್ಕೆ ನೀಡಿ...