ಕೋವಿಡ್‌ನಿಂದ ಸಾವನ್ನಪ್ಪಿದವರ ಕುಟುಂಬಗಳಿಗೆ ಪರಿಹಾರವನ್ನು ನೀಡುವಲ್ಲಿ ವಿಫಲವಾದ ಮತ್ತು ಪರಿಹಾರ ಪಾವತಿ ಮಾಡುವಲ್ಲಿ ವಿಳಂಬ ಮಾಡಿದ ರಾಜ್ಯಗಳನ್ನು ಸುಪ್ರೀಂ ಕೋರ್ಟ್ ಬುಧವಾರ ತರಾಟೆಗೆ ತೆಗೆದುಕೊಂಡಿದೆ.
ಆಂಧ್ರ ಪ್ರದೇಶ ಮತ್ತು ಬಿಹಾರ ಸರ್ಕಾರಗಳ ಮುಖ್ಯ ಕಾರ್ಯದರ್ಶಿಗಳು ಮಧ್ಯಾಹ್ನ 2 ಗಂಟೆಯ ವಿಚಾರಣೆಗೆ ಹಾಜರಾಗಬೇಕೆಂದು ನ್ಯಾಯಮೂರ್ತಿ ಎಂಆರ್ ಶಾ ನೋಟಿಸ್ ನೀಡಿದ್ದಾರೆ. ಅವರ್‍ಯಾರು ಕಾನೂನಿಗಿಂತ ಮೇಲಲ್ಲ ಎಂದು ನ್ಯಾಯಮೂರ್ತಿಗಳು ಕಿಡಿ ಕಾರಿದ್ದಾರೆ.
ಜೊತೆಗೆ ಕೇರಳ, ಹರಿಯಾಣ, ಗುಜರಾತ್ ಸೇರಿದಂತೆ ಇತರ ರಾಜ್ಯಗಳ ಸಾವಿನ ಲೆಕ್ಕ ಮತ್ತು ಪರಿಹಾರ ಅರ್ಜಿಗಳ ಲೆಕ್ಕದ ಬಗ್ಗೆ ನ್ಯಾಯಾಲಯ ಪ್ರಶ್ನಿಸಿದ್ದು ರಾಜ್ಯ ಸರ್ಕಾರಗಳ ಕ್ರಮಕ್ಕೆ ಆಕ್ಷೇಪ ವ್ಯಕ್ತಪಡಿಸಿದೆ.
ಹಿಂದಿನ ನ್ಯಾಯಾಲಯದ ಆದೇಶದ ನಂತರ ಆಂಧ್ರಪ್ರದೇಶವು ಸುಮಾರು 36,000 ಪರಿಹಾರ ಅರ್ಜಿಗಳನ್ನು ದಾಖಲಿಸಿದೆದೆ, ಅದರಲ್ಲಿ 31,000 ಅರ್ಜಿಗಳು ಪರಿಹಾರಕ್ಕೆ ಅರ್ಹವಾಗಿವೆ. ಆದರೆ, ಇದುವರೆಗೆ 11,000 ಅರ್ಜಿದಾರರಿಗೆ ಮಾತ್ರ ಪರಿಹಾರ ನೀಡಲಾಗಿದೆ ಎಂಬುದನ್ನು ನ್ಯಾಯಾಲಯ ಗಮನಿಸಿದೆ.
ಇದನ್ನೂ ಓದಿ: ಆಸ್ಕರ್ ಯೂಟ್ಯೂಬ್ ಚಾನೆಲ್‌ನಲ್ಲಿ ’ಜೈ ಭೀಮ್’ ದೃಶ್ಯಗಳು: ಅತ್ಯುನ್ನತ ಗೌರವ ಎಂದ ತಂಡ
“ಪರಿಹಾರವನ್ನು ಪಾವತಿಸಲು ಪದೇ ಪದೇ ನಿರ್ದೇಶನಗಳನ್ನು ನೀಡಲಾಗುತ್ತಿದೆ. ಈ ವಿಷಯದಲ್ಲಿ ಆಂಧ್ರಪ್ರದೇಶದ ಭಾಗದಲ್ಲಿ ಸಂಪೂರ್ಣ ನಿರ್ದಯತೆ ಇದೆ. ಈ ನ್ಯಾಯಾಲಯದ ಆದೇಶಗಳನ್ನು ಅನುಸರಿಸುವಲ್ಲಿ ರಾಜ್ಯವು ಗಂಭೀರವಾಗಿಲ್ಲ ಎಂದು ತೋರುತ್ತಿರುವುದು ಅತ್ಯಂತ ದುರದೃಷ್ಟಕರವಾಗಿದೆ. ಪರಿಹಾರ ನೀಡದಿರುವುದಕ್ಕೆ ಯಾವುದೇ ಸಮರ್ಥನೆ ಇಲ್ಲ” ಎಂದು ನ್ಯಾಯಾಲಯ ಕಿಡಿಕಾರಿದೆ.
“ಅರ್ಹ ಹಕ್ಕುದಾರರಿಗೆ ಪರಿಹಾರ ಪಾವತಿ ಮಾಡದಿರುವುದು ನಮ್ಮ ಹಿಂದಿನ ಆದೇಶಕ್ಕೆ ತೋರಿದ ಅವಿಧೇಯತೆಯಾಗಿದೆ. ಇದಕ್ಕೆ ಮುಖ್ಯ ಕಾರ್ಯದರ್ಶಿ ಜವಾಬ್ದಾರರಾಗಿರುತ್ತಾರೆ. ಮುಖ್ಯ ಕಾರ್ಯದರ್ಶಿಯವರು ವಾಸ್ತವಿಕವಾಗಿ ಮಧ್ಯಾಹ್ನ 2 ಗಂಟೆಗೆ ಹಾಜರಾಗಿ, ಸ್ಪಷ್ಟನೆ ನೀಡಲಿ” ಎಂದು ನ್ಯಾಯಮೂರ್ತಿ ಶಾ ಹೇಳಿದ್ದಾರೆ.
ಇನ್ನು, ಬಿಹಾರವು ತೀರಾ ಕಡಿಮೆ ಕೊರೊನಾ ಸಾವುಗಳ ವರದಿ ಮಾಡಿದೆ ಎಂದ ನ್ಯಾಯಾಲಯ, “ನೀವು ಡೇಟಾವನ್ನು ಸಹ ನವೀಕರಿಸುವುದಿಲ್ಲ. ನಿಮ್ಮ ಪ್ರಕಾರ ಕೇವಲ 12,000 ಜನರು ಸಾವನ್ನಪ್ಪಿದ್ದಾರೆ. ನಮಗೆ ನೈಜ ಸಂಗತಿಗಳು ಬೇಕು. ನಮ್ಮ ಹಿಂದಿನ ಆದೇಶದ ನಂತರ ಇತರ ರಾಜ್ಯಗಳಲ್ಲಿ ಸಂಖ್ಯೆಗಳು ಹೆಚ್ಚಿವೆ. ಬಿಹಾರದಲ್ಲಿ ಕೇವಲ 12,000 ಮಂದಿ ಸತ್ತಿದ್ದಾರೆ ಎಂಬುದನ್ನು ಒಪ್ಪಿಕೊಳ್ಳಲು ನಾವು ಸಿದ್ಧರಿಲ್ಲ” ಎಂದು ತರಾಟೆ ತೆಗೆದುಕೊಂಡಿದ್ದಾರೆ.
ಬಿಹಾರದಲ್ಲಿ ಇದುವರೆಗೆ ಸುಮಾರು ಎಂಟು ಲಕ್ಷ ಕೊರೊನಾ ಪ್ರಕರಣಗಳಿಂದ 12,145 ಕೋವಿಡ್ ಸಂಬಂಧಿತ ಸಾವುಗಳು ವರದಿಯಾಗಿವೆ.
ಇದನ್ನೂ ಓದಿ: ಸಂಸ್ಕೃತ ಕಲಿತು ಮೇಷ್ಟ್ರಾಗಬೇಕಷ್ಟೇ, ಬೇರೆ ಅವಕಾಶಗಳಿಲ್ಲ: ಸಂಸ್ಕೃತ ಪ್ರಾಧ್ಯಾಪಕ ವೇಣುಗೋಪಾಲ್
ಕೊರೊನಾ ಪರಿಹಾರಕ್ಕಾಗಿ ಸ್ವೀಕರಿಸಿದ ಅರ್ಜಿಗಳ ಸಂಖ್ಯೆ ಮತ್ತು ರಾಜ್ಯಗಳಲ್ಲಿ ದಾಖಲಾದ ಸಾವುಗಳ ನಡುವಿನ “ಅತ್ಯಂತ ಗಂಭೀರ” ಅಂತರದ ಬಗ್ಗೆ ಉನ್ನತ ನ್ಯಾಯಾಲಯವು ಕೇರಳ ಸೇರಿದಂತೆ ಇತರ ರಾಜ್ಯಗಳನ್ನು ಸಹ ತರಾಟೆಗೆ ತೆಗೆದುಕೊಂಡಿದೆ.
ಗುಜರಾತ್‌ನಲ್ಲಿ 10,174 ಸಾವುಗಳು ವರದಿಯಾಗಿವೆ. ಆದರೆ ಸುಮಾರು 91,000 ಪರಿಹಾರ ಅರ್ಜಿಗಳು ಸಲ್ಲಿಕೆಯಾಗಿವೆ ಎಂದು ನ್ಯಾಯಾಲಯವು ತೋರಿಸಿದೆ.
ಇದಕ್ಕೆ ವ್ಯತಿರಿಕ್ತವಾಗಿ, ಕೇರಳವು 51,000 ಕ್ಕೂ ಹೆಚ್ಚು ಸಾವುಗಳನ್ನು ವರದಿ ಮಾಡಿದೆ. ಆದರೆ 27,000 ಅರ್ಜಿಗಳು ಮಾತ್ರ ಸಲ್ಲಿಕೆಯಾಗಿವೆ. ಹರಿಯಣದಲ್ಲಿ 10,000 ಕ್ಕೂ ಹೆಚ್ಚು ಸಾವುಗಳಾಗಿದ್ದು, 7,360 ಅರ್ಜಿಗಳನ್ನು ಸ್ವೀಕರಿಸಿದೆ ಎಂದು ಹರಿಯಾಣ ನ್ಯಾಯಾಲಯಕ್ಕೆ ತಿಳಿಸಿದೆ.
“ಕೇರಳ ಕೇವಲ 27,000 ಅರ್ಜಿಗಳನ್ನು ಹೇಗೆ ಸ್ವೀಕರಿಸಿದೆ..? ಇತರ ರಾಜ್ಯಗಳಲ್ಲಿ ಸಾವುಗಳಿಗಿಂತ ಹೆಚ್ಚು ಅರ್ಜಿಗಳು ದಾಖಲಾಗಿವೆ. ಇಲ್ಲಿ ಏಕೆ ವಿರುದ್ಧ ಪ್ರವೃತ್ತಿ ಇದೆ..? ನೀವು ಈಗಾಗಲೇ ಮೃತರ ವಿವರಗಳನ್ನು ಹೊಂದಿದ್ದೀರಿ. ನಿಮ್ಮ ಅಧಿಕಾರಿಗಳು ಹೋಗಿ ಪರಿಹಾರದ ಬಗ್ಗೆ ಸಂತ್ರಸ್ತ ಕುಟುಂಬಗಳಿಗೆ ಹೇಳಬೇಕು. ಅವರಿಗೆ ಪರಿಹಾರವನ್ನು ನೀಡಲೇಬೇಕು,” ಎಂದು ನ್ಯಾಯಾಲಯ ಆದೇಶಿಸಿದೆ.
ಅಕ್ಟೋಬರ್‌ನಲ್ಲಿ ನ್ಯಾಯಾಲಯವು ಯಾವುದೇ ರಾಜ್ಯವು ಕೊರೊನಾ ಪರಿಹಾರವನ್ನು ನಿರಾಕರಿಸುವಂತಿಲ್ಲ. ಅರ್ಜಿ ಸಲ್ಲಿಸಿದ 30 ದಿನಗಳಲ್ಲಿ ಹಣವನ್ನು ವಿತರಿಸಬೇಕು ಎಂದು ಆದೇಶಿಸಿತ್ತು.


