ಶರೀರ ಪೂರ್ತಿ ಮಂಜುಗಡ್ಡೆಯಲ್ಲಿ ಆವೃತ್ತವಾಗಿರುವಂತೆ ಕಾಣುತ್ತಿರುವ ಪದ್ಮಾಸನ ಹಾಕಿಕೊಂಡು ಕೂತಿರುವ ವ್ಯಕ್ತಿಯೊಬ್ಬರ ಕಪ್ಪುಬಿಳುಪಿನ ಚಿತ್ರವೊಂದು ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದೆ. ಸಾಮಾಜಿಕ ಮಾಧ್ಯಮಗಳಲ್ಲಿ ಈ ಚಿತ್ರದಲ್ಲಿ ಇರುವ ವ್ಯಕ್ತಿಯನ್ನು ‘ಹಿಮಾಲಯದಲ್ಲಿ ಇರುವ ಯೋಗಿ’ ಎಂದು ಪ್ರತಿಪಾದಿಸಲಾಗುತ್ತಿದೆ.
ಟ್ವಿಟರ್‌ನಲ್ಲಿ ಈ ಚಿತ್ರವನ್ನು ರಿನಿತಿ ಚಟರ್ಜಿ ಎನ್ನುವ ಖಾತೆಯೊಂದು, ‘ಮಂಜುಗಡ್ಡೆಯನ್ನು ಹೊದ್ದುಕೊಂಡಿರುವ ಹಿಮಾಲಯದ ಯೋಗಿ’ ಎಂದು ಹೇಳಿಕೊಂಡಿದೆ. ಈ ಖಾತೆಯು ಸುಮಾರು ಒಂದು ಲಕ್ಷಕ್ಕೂ ಹೆಚ್ಚು ಫಾಲೋವರ್ ಅನ್ನು ಹೊಂದಿದೆ. ಈ ಚಿತ್ರವನ್ನು ನಿಖಿಲ್ ಠಾಕರ್ ಎನ್ನುವ ಬಿಜೆಪಿ ಬೆಂಬಲಿಗ ವ್ಯಕ್ತಿಯೊಬ್ಬರು ಹಂಚಿಕೊಂಡಿದ್ದಾರೆ. ವಿಷೇಶವೇನೆಂದರೆ ನಿಖಿಲ್ ಅವರನ್ನು ಪ್ರಧಾನಿ ನರೇಂದ್ರ ಮೋದಿ ಮತ್ತು ಅಮಿತ್ ಶಾ ಅವರು ಫಾಲೊ ಮಾಡುತ್ತಿದ್ದಾರೆ.

ಇದನ್ನೂ ಓದಿ:ಫ್ಯಾಕ್ಟ್‌ಚೆಕ್: ತುಮಕೂರು ಜಿಲ್ಲೆಗೆ ಮನುಷ್ಯ ರೂಪದ ವಿಚಿತ್ರ ಪ್ರಾಣಿ ಬಂದಿದ್ದು ನಿಜವೇ?
ಚಿತ್ರವು ಕೇವಲ ಟ್ವಿಟರ್ ಮಾತ್ರವಲ್ಲದೆ ಪೇಸ್‌ಬುಕ್‌ನಲ್ಲೂ ಹರಿದಾಡುತ್ತಿದೆ. ಫೇಸ್‌ಬುಕ್‌ನಲ್ಲಿ, “ಇಂತಹ ತಪಸ್ಸು, ಹಠಮಾರಿತನ, ಸಾಧನೆ ಇರುವುದು ಸನಾತನದಲ್ಲಿ ಮಾತ್ರ, ಇಂದ್ರಿಯಗಳನ್ನು ಗೆದ್ದುಕೊಂಡ ಸಾವಿರಾರು ಉದಾಹರಣೆಗಳಿವೆ, ಇಂತಹ ಉದಾಹರಣೆ ಬೇರೆ ಯಾವ ಸಂಸ್ಕೃತಿಯಲ್ಲಾಗಲಿ, ಧರ್ಮದಲ್ಲಾಗಲಿ ಕಾಣುವುದಿಲ್ಲ” ಎಂದು ಚಿತ್ರದಲ್ಲಿರುವ ವ್ಯಕ್ತಿ ಅತಿಮಾನುಷವಾದುದನ್ನು ಮಾಡುತ್ತಿದ್ದಾರೆ ಎಂದು ಪ್ರತಿಪಾದಿಸಲಾಗಿದೆ.
ಇದೇ ಪ್ರತಿಪಾದನೆಯನ್ನು ಟ್ವಿಟರ್‌ನಲ್ಲೂ ಮಾಡಲಾಗಿದೆ. ಅದನ್ನುಇಲ್ಲಿ ಮತ್ತು ಇಲ್ಲಿ ನೋಡಬಹುದಾಗಿದೆ. ಈ ಚಿತ್ರವನ್ನು ವೈರಲ್ ಮಾಡಿರುವ ಸಾಮಾಜಿಕ ಜಾಲತಾಣದ ಎಲ್ಲಾ ಹ್ಯಾಂಡಲ್‌ಗಳು ಬಿಜೆಪಿ ಪರವಾಗಿ ಪ್ರೊಪಗಾಂಡ ಸೃಷ್ಟಿಸುವ ಪೇಜ್‌ಗಳಾಗಿವೆ.
ಇದನ್ನೂ ಓದಿ:ಫ್ಯಾಕ್ಟ್‌ಚೆಕ್: ತಿರುಪತಿ ದೇವಸ್ಥಾನದ ಪುರೋಹಿತರ ಮನೆಯಲ್ಲಿ 128Kg ಚಿನ್ನ ಸಿಕ್ಕಿದ್ದು ನಿಜವೇ?
ಫ್ಯಾಕ್ಟ್‌ಚೆಕ್
ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿರುವ ಈ ಚಿತ್ರವನ್ನು ನಾನುಗೌರಿ.ಕಾಂ ರಿವರ್ಸ್ ಸರ್ಚ್ ಮೂಲಕ ಹುಡುಕಾಡಿದಾಗ ಈ ಚಿತ್ರವು ‘ಬಾಬಾ ಸರ್‌ಬಂಗಿ I’ ಎನ್ನುವ ಫೇಸ್‌ಬುಕ್ ಪೇಜ್‌ನಲ್ಲಿ ಪತ್ತೆಯಾಗಿದೆ. ಈ ಚಿತ್ರವನ್ನು ಮೂರು ವರ್ಷಗಳ ಹಿಂದೆ ಅಪ್‌ಲೋಡ್ ಮಾಡಲಾಗಿದೆ. ಪೇಜ್‌ನಲ್ಲಿ ಇರುವ ಈ ಚಿತ್ರವನ್ನು ಬಳಸಿಕೊಂಡು ಚಿತ್ರವನ್ನು ಕಪ್ಪುಬಿಳುಪಾಗಿ ಎಡಿಟ್ ಮಾಡಿ ಅದನ್ನು ವೈರಲ್ ಮಾಡಲಾಗಿದೆ.
ಫೇಸ್‌ಬುಕ್ ಪೇಜ್‌ನಲ್ಲಿ ಈ ವ್ಯಕ್ತಿಯನ್ನು ‘ಬಾಬಾ ಭಲೇ ಗಿರಿ ಜಿ ಮಹಾರಾಜ್’ ಎಂದು ಹೇಳಿಕೊಂಡಿದೆ. ಪೇಜ್‌ನಲ್ಲಿ ಇರುವ ಫೇಸ್‌ಬುಕ್ ಚಿತ್ರದಲ್ಲಿ ಕಂದು ಬಣ್ಣದ ‘ಬೂದಿ’ ಅವರ ಮೈಮೇಲೆ ಇರುವಂತೆ ಸ್ಪಷ್ಟವಾಗಿ ಕಾಣುತ್ತದೆ. ಜೊತೆಗೆ ಹಿನ್ನಲೆಯಲ್ಲಿ ‘ಬೆರಣಿ’ ಜೋಡಿಸಿರುವುದು ಕೂಡಾ ಕಾಣುತ್ತದೆ.
ಈ ಮಾಹಿತಿಯ ಎಳೆಯನ್ನು ಹುಡುಕಿಕೊಂಡು ನಾವು ಮತ್ತಷ್ಟು ಹುಡುಕಿದ್ದೇವೆ. ಈ ವ್ಯಕ್ತಿಯನ್ನು ಜನರು ‘‘ಶ್ರೀಶ್ರೀ 1008 ಮಹಂತ್ ಬಾಬಾ ಭಲೇ ಗಿರಿ ಜಿ ಮಹಾರಾಜ್” ಎಂದು ಕರೆಯುತ್ತಾರೆ. ಇದು ಹರಿಯಾಣ ರಾಜ್ಯದ ರಿಂಧಾನದಲ್ಲಿರುವ ‘ಪರಾಶರ್ ತೀರ್ಥ’ದಲ್ಲಿ ಮಾಡಲಾಗಿರುವ ಧಾರ್ಮಿಕ ಆಚರಣೆಯೊಂದರ ಚಿತ್ರವಾಗಿದೆ.
ಇದನ್ನೂ ಓದಿ:ಫ್ಯಾಕ್ಟ್‌ಚೆಕ್: ರಾಯಚೂರಿನಲ್ಲಿ ಏಕ್ ಮಿನಾರ್ ಮಸೀದಿ ಕೆಡವಿದಾಗ ಶಿವನ ದೇವಾಲಯ ಪತ್ತೆಯಾಯಿತೆ?
ಈ ಆಚರಣೆಯಲ್ಲಿ ಬೆರಣಿಯನ್ನು ಹಲವು ದೊಡ್ಡ ದೊಡ್ಡ ಗುಂಪಾಗಿ ಜೋಡಿಸಿ ಅದರ ನಡುವೆ ಅವರು ಕುಳಿತುಕೊಳ್ಳುತ್ತಾರೆ. ಈ ವೇಳೆ ಅವರ ಮೈಮೇಲೆ ಬೆರಣಿಯ ಬೂದಿ ಅಂಟಿಕೊಂಡಿದ್ದಾಗಿರಬಹುದಾಗಿದೆ.
ಪ್ರಸ್ತುತ ವೈರಲ್ ಆಗಿರುವ ಚಿತ್ರವು ಮೂರು ವರ್ಷಗಳಷ್ಟು ಹಳೆಯದಾದರೂ, ‘ಬಾಬಾ ಸರ್‌ಬಂಗಿ I‘ ಫೇಸ್‌ಬುಕ್ ಪೇಜ್‌ನಲ್ಲಿ ಈ ಆಚರಣೆಯ ಹಳೆಯ ಚಿತ್ರಗಳು ಮತ್ತು ಇತ್ತೀಚೆಗೆ ಕ್ಲಿಕ್ ಮಾಡಿರುವ ಚಿತ್ರಗಳು ಎಂಬಂತೆ ತೋರುವ ಹಲವಾರು ಚಿತ್ರಗಳು ಇವೆ.

ಒಟ್ಟಿನಲ್ಲಿ ಹೇಳಬಹುದಾದರೆ, ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿರುವ ಈ ಚಿತ್ರವು ಯಾವುದೆ ಹಿಮಾಲಯದ ಯೋಗಿಯದ್ದಲ್ಲ ಮತ್ತು ಅವರ ಮೈಮೇಲೆ ಇರುವುದು ಹಿಮವೂ ಅಲ್ಲ. ಅವರು ಹರಿಯಾಣ ರಾಜ್ಯದವರಾಗಿದ್ದು, ಅವರ ಮೈಮೇಲೆ ಇರುವುದು ಬೂದಿಯಾಗಿದೆ.
ಇದನ್ನೂ ಓದಿ:ಫ್ಯಾಕ್ಟ್‌ಚೆಕ್: ಯೋಗಿ ಆದಿತ್ಯನಾಥರ ಬೆಂಗಾವಲಿನ ಮೇಲೆ ದಾಳಿ ಮಾಡಿದ ಯುವಕರ ವಿಡಿಯೊ ಈಗಿನದ್ದಲ್ಲ