ಗಣರಾಜ್ಯೋತ್ಸವದಂದು ಪಂಜಾಬ್‌ನ ಅಮೃತಸರದ ಹೆರಿಟೇಜ್ ಸ್ಟ್ರೀಟ್‌ನಲ್ಲಿ ಡಾ. ಬಾಬಾಸಾಹೇಬ್ ಅಂಬೇಡ್ಕರ್ ಅವರ ಪ್ರತಿಮೆಯನ್ನು ಧ್ವಂಸಗೊಳಿಸಿದ ಕೆಲವೇ ಗಂಟೆಗಳ ನಂತರ, ಅವರ ಮೊಮ್ಮಗ ಮತ್ತು ವಂಚಿತ್ ಬಹುಜನ್ ಅಘಾಡಿ ಸಂಸ್ಥಾಪಕ ಪ್ರಕಾಶ್ ಅಂಬೇಡ್ಕರ್ ಪ್ರತಿಕ್ರಿಯಿಸಿ, “ಸಂವಿಧಾನವನ್ನು ಬದಲಿಸಿ ಮನುಸ್ಮೃತಿಯನ್ನು ಪುನಃ ಪರಿಚಯಿಸಲು ದೇಶಾದ್ಯಂತ ದೊಡ್ಡ ಭೂಗತ ಪಿತೂರಿ ನಡೆಯುತ್ತಿದೆ” ಎಂದು ಹೇಳಿದರು.
ಬಾಬಾಸಾಹೇಬ್ ಅವರ ಪ್ರತಿಮೆಗಳು ಮತ್ತು ಸಂವಿಧಾನದ ಧ್ವಂಸ ಘಟನೆಗಳು ಹೆಚ್ಚುತ್ತಿರುವ ಬಗ್ಗೆ ತನಿಖೆ ನಡೆಸಬೇಕೆಂದು ಅವರು ಒತ್ತಾಯಿಸಿದರು.
“ಸಂವಿಧಾನವನ್ನು ಬದಲಿಸಲು ಮತ್ತು ಮನುಸ್ಮೃತಿಯನ್ನು ಪುನಃ ಪರಿಚಯಿಸಲು ದೇಶಾದ್ಯಂತ ದೊಡ್ಡ ‘ಭೂಗತ’ ಪಿತೂರಿ ನಡೆಯುತ್ತಿದೆ, ಇದು ಬಾಬಾಸಾಹೇಬ್ ಅವರ ಪ್ರತಿಮೆಗಳು ಮತ್ತು ಸಂವಿಧಾನದ ಧ್ವಂಸ ಘಟನೆಗಳು ಹೆಚ್ಚುತ್ತಿರುವುದೇ ಇದಕ್ಕೆ ಉದಾಹರಣೆಯಾಗಿದೆ” ಎಂದು ಪ್ರಕಾಶ್ ಅಂಬೇಡ್ಕರ್ ಹೇಳಿದರು.
“ಬಾಬಾಸಾಹೇಬ್ ಅವರ ಪ್ರತಿಮೆಗಳನ್ನು ಧ್ವಂಸಗೊಳಿಸುವುದು ದುಷ್ಕರ್ಮಿಗಳ ಕ್ರಿಮಿನಲ್ ಕೃತ್ಯಕ್ಕಿಂತ ಹೆಚ್ಚಿನದಾಗಿದೆ! ಇಂತಹ ವಿಧ್ವಂಸಕ ಕೃತ್ಯಗಳು ಬಾಬಾಸಾಹೇಬರ ಸಾಮಾಜಿಕ ಸುಧಾರಣೆಗಳು, ರಾಜಕೀಯ ತತ್ವಶಾಸ್ತ್ರ ಮತ್ತು ಶ್ರೀಮಂತ ಪರಂಪರೆಯ ಬಗ್ಗೆ ದುಷ್ಕರ್ಮಿಗಳ ದ್ವೇಷವನ್ನು ಪ್ರದರ್ಶಿಸುತ್ತವೆ” ಎಂದು ಅವರು ಹೇಳಿದರು.
“ಹೇಳಬೇಕಾಗಿಲ್ಲ, ಈ ದ್ವೇಷದ ಪ್ರದರ್ಶನ ಭಯಾನಕವಾಗಿದೆ. ಆದರೆ ಹೆಚ್ಚು ಭಯಾನಕ ಸಂಗತಿಯೆಂದರೆ, ಈ ಘಟನೆ ಅಮೃತಸರದಲ್ಲಿ ಭಾರತದ 76 ನೇ ಗಣರಾಜ್ಯೋತ್ಸವದಂದು ಸಂಭವಿಸಿದೆ. ಭಾರತವು ಬಾಬಾಸಾಹೇಬರ ಅಧ್ಯಕ್ಷತೆಯಲ್ಲಿ ರಚಿಸಲಾದ ಸಂವಿಧಾನವನ್ನು ಅಂಗೀಕರಿಸಿದ ದಿನ ಮತ್ತು ವಸಾಹತುಶಾಹಿ ನೊಗ ಮತ್ತು ಮನುಸ್ಮೃತಿಯ ಆದೇಶದಿಂದ ತನ್ನನ್ನು ಮುಕ್ತಗೊಳಿಸಿದ ದಿನ” ಎಂದು ಅವರು ಹೇಳಿದರು.
ದುಷ್ಕರ್ಮಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲು ಮತ್ತು ಅಂತಹ ಘಟನೆಗಳು ಮರುಕಳಿಸದಂತೆ ತಡೆಯಲು ಅವರು ಎಎಪಿ ಮತ್ತು ಪಂಜಾಬ್ ಪೊಲೀಸರನ್ನು ಒತ್ತಾಯಿಸಿದರು.
ಇದನ್ನೂ ಓದಿ; ಪಂಜಾಬ್| ಹಾಡುಹಗಲೇ ಸುತ್ತಿಗೆಯಿಂದ ಅಂಬೇಡ್ಕರ್ ಪ್ರತಿಮೆ ಧ್ವಂಸಗೊಳಿಸಿದ ಕಿಡಿಗೇಡಿ


