ರಾಜ್ಯ ಬಜೆಟ್ ಮಂಡಿಸಲು ಬಂದ ಮುಖ್ಯಮಂತ್ರಿ, ಹಣಕಾಸು ಸಚಿವ ಬಸವರಾಜ ಬೊಮ್ಮಾಯಿ ಅವರನ್ನು ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಕಿವಿ ಮೇಲೆ ಹೂವು ಇಟ್ಟುಕೊಂಡು ಸ್ವಾಗತಿಸಿದ್ದಾರೆ. ಇದು, ಸರ್ಕಾರ ಜನರ ಕಿವಿಗೆ ಹೂ ಇಡುವ ಬಜೆಟ್ ಎನ್ನುವುದನ್ನು ಸೂಚಿಸುವ ವಿಭಿನ್ನ ಪ್ರತಿಭಟನೆಯಾಗಿದೆ.
ಬಸವರಾಜ ಬೊಮ್ಮಾಯಿ ಅವರು ಬಜೆಟ್ ಭಾಷಣ ಆರಂಭಿಸುತ್ತಿದ್ದಂತೆ ಸಿದ್ದರಾಮಯ್ಯ ಅವರು, ಕಿವಿ ಮೇಲೆ ಹೂವು ಇಟ್ಟುಕೊಂಡು ‘ರಾಜ್ಯದ ಜನತೆಗೆ ಬೊಮ್ಮಾಯಿ ಅವರು ಕಿವಿ ಮೇಲೆ ಹೂವು ಇಡಲು ಬಂದಿದ್ದಾರೆ’ ಎಂದು ವ್ಯಂಗ್ಯವಾಡಿದರು.
ಈ ವೇಳೆ ಸಿದ್ದರಾಮಯ್ಯ ನಡೆಗೆ ಆಕ್ಷೇಪ ವ್ಯಕ್ತಪಡಿಸಿದ ಬೊಮ್ಮಾಯಿ, ”ವಿರೋಧ ಪಕ್ಷದ ನಾಯಕರು ಹೀಗೆ ಕಿವಿ ಮೇಲೆ ಹೂವು ಇಟ್ಟುಕೊಳ್ಳುವುದು ಸರಿಯಲ್ಲ ಎಂದು ನಾನು ಹೇಳುತ್ತೇನೆ, ಉಳಿದದ್ದು ನಿಮ್ಮ ಇಚ್ಛೆ. ಇಷ್ಟು ದಿನ ಸಿದ್ದರಾಮಯ್ಯನವರು ಜನರ ಕಿವಿ ಮೇಲೆ ಹೂವು ಇಟ್ಟಿದ್ದರು. ಜನ ಈಗ ಸಿದ್ದರಾಮಯ್ಯ ಅವರ ಕಿವಿ ಮೇಲೆ ಹೂ ಇಟ್ಟಿದ್ದಾರೆ. ಮುಂದಿನ ಸಲವೂ ರಾಜ್ಯದ ಜನತೆ ಅವರ ಕಿವಿ ಮೇಲೆ ಹೂವು ಇಡುವ ಪರಿಸ್ಥಿತಿ ಬರುತ್ತದೆ” ಎಂದು ಬೊಮ್ಮಾಯಿ ಟೀಕಿಸಿದರು.
ಇದನ್ನೂ ಓದಿ: ದೂರದೃಷ್ಟಿಯಿಲ್ಲದ, ಕೃಷಿಕರ ಪರವಿಲ್ಲದ ಗುಮಾಸ್ತ ತಯಾರಿಸಿದ ಲೆಕ್ಕಾಚಾರದ ಬಜೆಟ್: ಬಡಗಲಪುರ ನಾಗೇಂದ್ರ
ಅದಕ್ಕೆ ಸಿದ್ದರಾಮಯ್ಯ, ”ನಾವು ಕಿವಿ ಮೇಲೆ ಹೂವು ಇಟ್ಟುಕೊಂಡಿರುವುದು, ಈ ಬಜೆಟ್ ಮೂಲಕ ಇಡೀ ರಾಜ್ಯದ ಏಳು ಕೋಟಿ ಜನರ ಕಿವಿ ಮೇಲೆ ಹೂವು ಇಡಲು ಹೊರಟಿದ್ದಾರೆ ಎನ್ನುವುದನ್ನು ತಿಳಿಸಲು” ಎಂದರು.
ಸಿದ್ದರಾಮಯ್ಯ ಮಾತಿಗೆ ಎದ್ದು ನಿಂತ ಸಚಿವ ಶ್ರೀರಾಮುಲು, ಆರ್ ಅಶೋಕ ಅವರು, ಬಜೆಟ್ ಮಂಡನೆ ವೇಳೆ ಈ ರೀತಿಯ ನಡೆದುಕೊಳ್ಳುವುದು ಸಂಪ್ರದಾಯ ಅಲ್ಲ ಎಂದರು. ಆಗ ಸಿದ್ದರಾಮಯ್ಯ, ”ಬಿಜೆಪಿಯವರಿಗೆ ಮಾನ ಮರ್ಯಾದೆಯೇ ಇಲ್ಲ. ಈವರೆಗೂ ಕೊಟ್ಟ 600 ಭರವಸೆಗಳಲ್ಲಿ 51 ಭರವಸೆ ಈಡೇರಿಸಲು ಆಗಿಲ್ಲ ನಿಮ್ಮ ಕೈಯಲ್ಲಿ” ಎಂದು ಅಧಿವೇಶನದಲ್ಲೇ ವಾಗ್ದಾಳಿ ನಡೆಸಿದರು.
ಈ ವೇಳೆ ಕೆಲ ಕಾಲ ಆಡಳಿತ ಮತ್ತು ಪ್ರತಿಪಕ್ಷದ ನಾಯಕರ ನಡುವೆ ಗದ್ದಲ ಏರ್ಪಟ್ಟಿತ್ತು. ಗದ್ದಲದ ನಡುವೆಯೇ ಸಿದ್ದರಾಮಯ್ಯ, ”ಬೊಮ್ಮಾಯಿ ಸುಳ್ಳುಗಳನ್ನು ಹೇಳಲು ಬಂದಿದ್ದಾರೆ. ಬಿಜೆಪಿ ಸುಳ್ಳಿನ ಫ್ಯಾಕ್ಟರಿ” ಎಂದು ಹೇಳಿದರು, ಆಗ ಬೊಮ್ಮಾಯಿ, ಅವರು ಹೂ ಇಟ್ಟುಕೊಂಡರೆ ನಮ್ಮದೇನೂ ಅಭ್ಯಂತರವಿಲ್ಲ ಎಂದರು.
ಈ ಗಲಾಟೆಯನ್ನು ನಿಲ್ಲಿಸಲು ಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಅವರು ಹರಸಾಹಸಪಟ್ಟರು. ಸಿದ್ದರಾಮಯ್ಯ ನಡೆಗೆ ಸಭಾಧ್ಯಕ್ಷರು ಪ್ರತಿಕ್ರಿಯಿಸಿ, ”ನಾವು ನೀವೆಲ್ಲ ಸಂತೋಷ ಪಡಬೇಕು. ಸಿದ್ದರಾಮಯ್ಯ ಅವರು ಕೇಸರಿ ಬಣ್ಣದ ಹೂವನ್ನೇ ಇಟ್ಟುಕೊಂಡು ಬಂದಿದ್ದಾರೆ. ಹಾಗಾಗಿ ಬಿಜೆಪಿಯವರು ಸಂತೋಷ ಪಡಬೇಕು” ಎಂದರು. ಆಗ ಕಾಂಗ್ರೆಸ್ ನಾಯಕರು ಎದ್ದು ನಿಂತು ಕೇಸರಿ ಬಣ್ಣವನ್ನು ಗುತ್ತಿಗೆ ಪಡೆದಿದ್ದೀರಾ ಎಂದು ಕಾಗೇರಿ ಮಾತಿಗೆ ವಿರೋಧ ವ್ಯಕ್ತಪಡಿಸಿದರು.


