Homeಮುಖಪುಟಈ ದುರಿತ ಕಾಲದಲ್ಲಿ ನೆಟ್ಟಿಗರಿಗೊಂದು ಸಿಟ್ಟಿನ ಪತ್ರ

ಈ ದುರಿತ ಕಾಲದಲ್ಲಿ ನೆಟ್ಟಿಗರಿಗೊಂದು ಸಿಟ್ಟಿನ ಪತ್ರ

2009ರ ಚುನಾವಣೆಯಲ್ಲಿ ಕರ್ನಾಟಕದ ಮತದಾರರಲ್ಲಿ 41.6% ಜನ ಬಿಜೆಪಿಗೆ ಮತ ಹಾಕಿದರೆ, 2014 ರಲ್ಲಿ 43% ಮತದಾರರು ಬಿಜೆಪಿಗೆ ತಮ್ಮ ಮತ ನೀಡಿದರು. 2019ರಲ್ಲಿ ಬಿಜೆಪಿಯ ಮತದಾರರ ಪ್ರಮಾಣ 52%. ನಾವು, ನೆಟ್ಟಿಗರೂ, ಈ ಹೆಚ್ಚಳಕ್ಕೆ ಕಾರಣರಾಗಿದ್ದೇವೆಯೇ?

- Advertisement -
- Advertisement -

ಪ್ರಿಯ ನೆಟ್ಟಿಗರೆ,
ಕರ್ನಾಟಕದಲ್ಲಿ ಮೈತ್ರಿ ಸರಕಾರ ಸಂಕಷ್ಟದಲ್ಲಿದೆ. ಹಲವಾರು ಶಾಸಕರು ರಾಜೀನಾಮೆ ನೀಡಿದ್ದಾರೆ. ಕುದುರೆ ವ್ಯಾಪಾರ ನಡೆಯುತ್ತಿದೆ ಎನ್ನುವ ಸುದ್ದಿಗಳು ಪ್ರಚಲಿತವಾಗಿದೆ. ಸಾಮಾಜಿಕ ಜಾಲತಾಣಗಳಲ್ಲಿ ಎಲ್ಲಿ ನೋಡಿದರೂ ಇದರ ಬಗ್ಗೆಯೇ ಬರಹಗಳನ್ನು ಬರೆಯುತ್ತಿದ್ದೀರಿ. ಸದ್ಯದ ಸ್ಥಿತಿಯನ್ನು ವಿವರಿಸಲು ಇಷ್ಟು ಮಟ್ಟದ ಹಾಸ್ಯದ ವ್ಯಂಗ್ಯದ ಬಳಕೆಗೆ ಒಂದು ರೀತಿಯ ಪೈಪೋಟಿಯೇ ನಡೆಸಿದ್ದಂತಿದೆ.

ಈ ರೀತಿಯಲ್ಲಿ ಗೇಲಿ ಮಾಡಲು ನಮಗೆ ಸಂಪೂರ್ಣ ಅಧಿಕಾರವಿದೆ. ಎಲ್ಲಾ ರಾಜಕೀಯ ಹಿತಾಸಕ್ತಿಗಳಿಗೂ ಸಾಮಾಜಿಕ ಜಾಲತಾಣಗಳಲ್ಲಿ ಅವರ ಗೇಲಿಯಾಗುತ್ತಿದೆ ಎನ್ನುವ ಅರಿವಿದೆ. ಆದರೂ ಅವರೇನೂ ಮಾಡುವುದಿಲ್ಲ. ನಮಗೆ ಸಾಂವಿಧಾನಿಕವಾಗಿ ಸಿಕ್ಕ ಹಕ್ಕಿನ ಕಾರಣದಿಂದ, ಅವರೇನೂ ಮಾಡಲಾಗದೇ ನಿಷ್ಕ್ರಿಯರಾಗಿದ್ದಾರೆಂದು ನಾವೆಂದುಕೊಳ್ಳುತ್ತೇವೆ. ಆದರೆ ವಾಸ್ತವ ಅದಲ್ಲ. ಯಾವ ರಾಜಕೀಯ ಶಕ್ತಿಯೂ ನೇರವಾಗಿ ಯಾವ ಕ್ರಮಗಳನ್ನೂ ತೆಗೆದುಕೊಳ್ಳಲೇ ಇರುವುದಕ್ಕೆ ಕಾರಣವೆಂದರೆ ಈ ಬರಹಗಳು ಅವರಿಗೆ ಯಾವುದೇ ರೀತಿಯ ಅಪಾಯವನ್ನು ಒಡ್ಡುವುದಿಲ್ಲ. ಅಪಾಯ ಒಡ್ಡಿದಾಗ ಏನಾಗಬಹುದು ಎನ್ನುವುದನ್ನು ಈಗೀಗ ಕಾಣುತ್ತಿದ್ದೇವೆ.

ಸಾಮಾಜಿಕ ಜಾಲತಾಣಗಳಲ್ಲಿ ಬರೆಯುವುದರಿಂದ ನಮಗೆಲ್ಲ ಒಂದು ರೀತಿಯ ಸೆನ್ಸ್ ಆಫ್ ಪಾವರ್ ಸಿಗುತ್ತೆ; ನಾವು ಇತರರಿಗಿಂತ ಉತ್ತಮರು ಎನ್ನುವ ಮೇಲರಿಮೆಯ ಭಾವನೆಯನ್ನೂ ನೀಡುತ್ತದೆ. ಈ ಮೇಲರಿಮೆ ನಮ್ಮ ಮುಂದೆ ಇರುವ ಸವಾಲುಗಳನ್ನು ಸರಿಯಾದ ರೀತಿಯಲ್ಲಿ ಎದುರಿಸದೇ ಇರುವುದಕ್ಕೆ ಕಾರಣವಾಗಬಲ್ಲದು.

ಆದರೆ ಪ್ರಸಕ್ತ ಬೆಳವಣಿಗೆಗಳಿಂದ ನಮಗಾರಿಗೂ ಆಘಾತವಾದಂತೆ ತೋರುತ್ತಿಲ್ಲ. ಆಘಾತವಾಗುವಂತಹ ಸಂದರ್ಭಗಳೇ ನಮಗಿಲ್ಲವೇನೋ? ನಮ್ಮಲ್ಲಿ ಕೆಲವರು ಈ ಬೆಳವಣಿಗೆಗೆ ಸಿಟ್ಟನ್ನು ತೋರಿಸುತ್ತಿದ್ದಾರೆ. ಈ ಸಿಟ್ಟನ್ನು ನಮ್ಮ ಫೇಸ್‍ಬುಕ್‍ನ ಜಾಣ್ಮೆಯ ಬರಹಗಳಿಂದ ಮಾತ್ರ ತಣಿಸಬೇಕೆ? ಅಪಾಯವಿರುವುದು ಇಲ್ಲಿಯೇ ಗೆಳೆಯರೆ, ನಮ್ಮ ಸಿಟ್ಟು ತಣಿದುಬಿಡುತ್ತೆ ಕೆಲಮಟ್ಟಿಗೆ. ಸಿಟ್ಟು ತಣಿಯದಂತೆ ಉಳಿಸಿಕೊಳ್ಳುವುದು ನಮ್ಮೆಲ್ಲರ ಜವಾಬ್ದಾರಿ. ಇನ್ನೂ ಒಂದು ವಾದವಿದೆ. ಆ ಸಿಟ್ಟು ಯಾವ ಕಾರಣಕ್ಕೆ? ಇವರನ್ನು ಆಯ್ಕೆ ಮಾಡಿದಾಗ ಇವರು ಎಂಥವರು ಎನ್ನುವುದು ನಮಗೆಲ್ಲರಿಗೂ ಚೆನ್ನಾಗಿ ಗೊತ್ತಿತ್ತು. ಇನ್ಯಾಕೆ ಸಿಟ್ಟು? ಎಂಬುದು. ಅದೂ ಸಹಾ ಅರ್ಧಸತ್ಯದ ಮಾತು. ನಾವು ಎಂದೂ ಇದರ ಬದಲಾವಣೆಗೆ ಕೈ ಹಾಕದಂತೆ ಮಾಡುವ ವಾದ ಅದು.

ಇನ್ನೊಂದು ವಿಷಯ, ಸುಮಾರು 2010ರಿಂದ ನಾವು ಬಿಜೆಪಿಯ, ನರೇಂದ್ರ ಮೋದಿಯ ಬೆಂಬಲಿಗರನ್ನು ಭಕ್ತರೆಂದು ಕರೆದು ಗೇಲಿ ಮಾಡುತ್ತಲೇ ಬಂದಿದ್ದೇವೆ. ಅವರನ್ನು ಅನ್‍ಫ್ರೆಂಡ್ ಮಾಡುವ ಬೆದರಿಕೆ ಹಾಕುತ್ತಲೇ ಬಂದಿದ್ದೇವೆ. ಅದರಿಂದ ಆದ ಪರಿಣಾಮ ಏನು ಎನ್ನುವ ಉತ್ತರವನ್ನು ಹುಡುಕುವ ಸಮಯ ಬಂದಿದೆ. 2009ರ ಚುನಾವಣೆಯಲ್ಲಿ ಕರ್ನಾಟಕದ ಮತದಾರರಲ್ಲಿ 41.6% ಜನ ಬಿಜೆಪಿಗೆ ಮತ ಹಾಕಿದರೆ, 2014 ರಲ್ಲಿ 43% ಮತದಾರರು ಬಿಜೆಪಿಗೆ ತಮ್ಮ ಮತ ನೀಡಿದರು. 2019ರಲ್ಲಿ ಬಿಜೆಪಿಯ ಮತದಾರರ ಪ್ರಮಾಣ 52%. ನಾವು, ನೆಟ್ಟಿಗರೂ, ಈ ಹೆಚ್ಚಳಕ್ಕೆ ಕಾರಣರಾಗಿದ್ದೇವೆಯೇ?

ಆಯ್ತು, ನಾವು ಕಾರಣರಲ್ಲ ಎಂದಿಟ್ಟುಕೊಳ್ಳೋಣ. ಸದ್ಯದ ಈ ಅಸಹ್ಯಕರ, ಅವಮಾನಕರ ವಿದ್ಯಮಾನಗಳು ಮುಂದೆ ಮರುಕಳಿಸದಂತೆ ಮಾಡಲು ನಮ್ಮ ವ್ಯಂಗ್ಯ, ಸಿಟ್ಟು ಏನಾದರೂ ಮಾಡಬಲ್ಲವೇ? ಇಲ್ಲ. ಸಾಮಾಜಿಕ ಜಾಲತಾಣಗಳಲ್ಲಿ ನಾವು ಮಾಡುವ ಪ್ರತಿರೋಧ, ವ್ಯಂಗ್ಯಕ್ಕೆ ನೀಡಿರುವ ಸ್ವಾತಂತ್ರ್ಯವು ಒಂದು ಲೆಕ್ಕಾಚಾರದೊಂದಿಗೆ ನೀಡಲಾಗಿದ್ದು ಎನ್ನುವ ವಿಷಯವನ್ನು ಮನದಟ್ಟಾಗಿಸಬೇಕಿದೆ.

ಈ ವಿದ್ಯಮಾನಗಳು ನಮ್ಮನ್ನು, ನಮ್ಮ ರಾಜ್ಯವನ್ನು ಅವಮಾನಕ್ಕೆ ದೂಡಿವೆ ಎಂದರೆ ಇವು ಮರುಕಳಿಸದಂತೆ ಆಗದಂತೆ ಏನು ಮಾಡಬೇಕು ಎನ್ನುವ ಚಿಂತನೆಯೂ ಸಾಮಾಜಿಕ ಜಾಲತಾಣಗಳಲ್ಲಿ ಶುರು ಮಾಡಬೇಕಿದೆ. ಭವಿಷ್ಯವನ್ನು ರೂಪಿಸುವ ಚಿಂತನೆಗಳು ಶುರುವಾದರೆ ಅಲ್ಲಿ ವ್ಯಂಗ್ಯಕ್ಕೆ ಸ್ಥಾನವಿರುವುದಿಲ್ಲ; ಒಂದು ವೇಳೆ ಇದ್ದರೂ ಅದು Constructive ಆಗಿರುತ್ತೆ. ನಮ್ಮ ಪ್ರತಿ ಫೇಸ್‍ಬುಕ್ ಗೋಡೆಬರಹ ಸಕಾರಾತ್ಮಕ ಬದಲಾವಣೆಗೆ ಪೂರಕವಾಗಿದೆಯೇ ಎನ್ನುವ ಪ್ರಶ್ನೆ ಉದ್ಭವಿಸುತ್ತದೆ.

ರಾಜಕೀಯ ಸ್ಥಿತಿಯನ್ನು ಉತ್ತಮವಾಗಿ ವಿಶ್ಲೇಷಿಸಿದ್ದೇವೆ ಎಂದ ಮಾತ್ರಕ್ಕೆ ಹೆಮ್ಮೆ ಪಡುವುದನ್ನು ನಿಲ್ಲಿಸುತ್ತೇವೆ. ಖಾರವಾಗಿ ಬರೆಯುವುದರಿಂದ ಏನಾದರೂ ಲಾಭವಿದೆಯೇ ಎನ್ನುವುದನ್ನು ಕೇಳಿಕೊಳ್ಳುತ್ತೇವೆ. ಸತ್ಯವನ್ನು ನುಡಿದ ಮಾತ್ರಕ್ಕೆ ನಮ್ಮ ಕರ್ತವ್ಯ ಮುಗಿಯುವುದಿಲ್ಲ ಎಂದುದು ತಿಳಿಯುವುದೂ ಭವಿಷ್ಯಕ್ಕೆ ನಾವು ನಿಜವಾಗಿಯೂ ಜವಾಬ್ದಾರರಾದಾಗ ಮಾತ್ರ.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಹೈದರಾಬಾದ್: ಮತದಾರರ ಪಟ್ಟಿಯಿಂದ 5.41 ಲಕ್ಷ ಮತದಾರರನ್ನು ಕೈ ಬಿಟ್ಟ ಚುನಾವಣಾ ಆಯೋಗ; ವರದಿ

0
ಮತದಾರರ ಪಟ್ಟಿಯ ಶುದ್ಧತೆಯನ್ನು ಖಾತರಿಪಡಿಸುವ ನಿಟ್ಟಿನಲ್ಲಿ ತೆಲಂಗಾಣದ ಹೈದರಾಬಾದ್ ಜಿಲ್ಲೆಯ 5.41 ಲಕ್ಷ ಮಂದಿಯ ಹೆಸರನ್ನು ಚುನಾವಣಾ ಆಯೋಗ ಮತದಾರರ ಪಟ್ಟಿಯಿಂದ ಕೈ ಬಿಟ್ಟಿದೆ ಎಂದು ದಿ ಹಿಂದೂ ವರದಿ ಮಾಡಿದೆ. 2023ರ ಜನವರಿಯಿಂದೀಚೆಗೆ...