ಬೆಂಗಳೂರು: ಅಸ್ಪೃಶ್ಯ ಅಲೆಮಾರಿ ಸಮುದಾಯಗಳಿಗೆ ಜಸ್ಟೀಸ್ ನಾಗಮೋಹನ್ ದಾಸ್ ಆಯೋಗದ ವರದಿಯ ಅನ್ವಯ ಶೇ. 1ರಷ್ಟು ಪ್ರತ್ಯೇಕ ಮೀಸಲಾತಿಯನ್ನು ಕಲ್ಪಿಸುವಂತೆ ಸಾಹಿತಿಗಳು, ಚಿಂತಕರು, ಹೋರಾಟಗಾರರು, ಕಲಾವಿದರು ಹಾಗೂ ಸಮಾನ ಮನಸ್ಕರು ಕರ್ನಾಟಕ ಸರ್ಕಾರವನ್ನು ಒತ್ತಾಯಿಸಿದ್ದಾರೆ. ಮಂಗಳವಾರ ಬೆಂಗಳೂರಿನ ಶಾಸಕರ ಭವನದಲ್ಲಿ ನಡೆದ ಸಭೆಯಲ್ಲಿ ಈ ನಿರ್ಣಯ ತೆಗೆದುಕೊಳ್ಳಲಾಗಿದೆ.

ಕಳೆದ 30 ವರ್ಷಗಳಿಂದ ಒಳಮೀಸಲಾತಿಗಾಗಿ ಹೋರಾಟ ನಡೆಸುತ್ತಿರುವ ಈ ಸಮುದಾಯಗಳ ಹಕ್ಕೊತ್ತಾಯವನ್ನು ಪರಿಗಣಿಸಿ ಸರ್ಕಾರವು ನಾಗಮೋಹನ್ ದಾಸ್ ಆಯೋಗವನ್ನು ರಚಿಸಿ ಸಮೀಕ್ಷೆ ನಡೆಸಿತ್ತು. ವರದಿಯಲ್ಲಿ, ಅತ್ಯಂತ ಹಿಂದುಳಿದ 59 ಅಲೆಮಾರಿ ಸಮುದಾಯಗಳನ್ನು ‘A’ ಗುಂಪಿನಲ್ಲಿ ವರ್ಗೀಕರಿಸಿ, ಅವರಿಗೆ ಶೇ. 1ರಷ್ಟು ಮೀಸಲಾತಿ ನೀಡಬೇಕೆಂದು ಶಿಫಾರಸ್ಸು ಮಾಡಲಾಗಿತ್ತು. ಆದರೆ, ಸರ್ಕಾರ ಈ ಶಿಫಾರಸ್ಸನ್ನು ಬದಿಗೊತ್ತಿ, ಅಲೆಮಾರಿ ಸಮುದಾಯಗಳನ್ನು ಸ್ಪೃಶ್ಯ ಸಮುದಾಯಗಳೊಂದಿಗೆ ಸೇರಿಸುವ ಮೂಲಕ ಸಾಮಾಜಿಕ ನ್ಯಾಯದಿಂದ ವಂಚಿಸಿದೆ ಎಂದು ಸಭೆಯಲ್ಲಿ ತೀವ್ರ ಅಸಮಾಧಾನ ವ್ಯಕ್ತಪಡಿಸಲಾಯಿತು.

ಸಭೆಯ ಪ್ರಮುಖ ನಿರ್ಣಯಗಳು:
- ಪ್ರತ್ಯೇಕ ಮೀಸಲಾತಿ ಜಾರಿ: ಜಸ್ಟೀಸ್ ನಾಗಮೋಹನ್ ದಾಸ್ ಆಯೋಗದ ವರದಿಯಂತೆ ಅಸ್ಪೃಶ್ಯ ಅಲೆಮಾರಿ ಸಮುದಾಯಗಳಿಗೆ ಶೇ. 1ರಷ್ಟು ಪ್ರತ್ಯೇಕ ಮೀಸಲಾತಿಯನ್ನು ಯಥಾವತ್ತಾಗಿ ಜಾರಿಗೊಳಿಸಬೇಕು. ಇದಕ್ಕಾಗಿ ತೆಲಂಗಾಣ ಮಾದರಿಯಲ್ಲಿ ಮೀಸಲಾತಿ ಬಿಂದುವನ್ನು ಜಾರಿಗೊಳಿಸಬೇಕು ಎಂದು ಸರ್ವಾನುಮತದಿಂದ ನಿರ್ಧರಿಸಲಾಯಿತು.
- ಅಭಿವೃದ್ಧಿ ಕಾರ್ಯಕ್ರಮಗಳು: ಶೇ. 1ರಷ್ಟು ಮೀಸಲಾತಿಯ ಜೊತೆಗೆ, ಈ ಸಮುದಾಯಗಳ ಸರ್ವತೋಮುಖ ಅಭಿವೃದ್ಧಿಗೆ ಅಗತ್ಯವಿರುವ ಕಾರ್ಯಕ್ರಮಗಳನ್ನು ಕೂಡ ಜಾರಿಗೊಳಿಸಬೇಕು ಎಂದು ಒತ್ತಾಯಿಸಲಾಯಿತು.
- ನಿಗಮದ ವ್ಯಾಪ್ತಿ: ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಅಲೆಮಾರಿ ಅಭಿವೃದ್ಧಿ ನಿಗಮವನ್ನು ಅಲೆಮಾರಿ ಸೂಕ್ಷ್ಮ ಮತ್ತು ಅತೀ ಸೂಕ್ಷ್ಮ ವರ್ಗಕ್ಕೆ ಸೇರಿದ 49 ಸಮುದಾಯಗಳಿಗೆ ಮಾತ್ರ ಸೀಮಿತಗೊಳಿಸಿ ಆದೇಶ ಹೊರಡಿಸಬೇಕು. ಇತರ ಸಮುದಾಯಗಳನ್ನು ನಿಗಮದ ವ್ಯಾಪ್ತಿಯಿಂದ ಹೊರಗಿಡಬೇಕು ಎಂದು ಆಗ್ರಹಿಸಲಾಯಿತು.

ಒಳಮೀಸಲಾತಿ ಹೋರಾಟದ ಹಿರಿಯ ಹೋರಾಟಗಾರರಾದ ಎಸ್. ಮಾರೆಪ್ಪ ಅವರು ಸಭೆಯ ಅಧ್ಯಕ್ಷತೆ ವಹಿಸಿದ್ದರು. ಸಭೆಯಲ್ಲಿ ಪ್ರೊ. ರಹಮತ್ ತರೀಕೆರೆ, ರಾಜಪ್ಪ ದಳವಾಯಿ, ಪ್ರೊ. ನಿರಂಜನರಾಧ್ಯ, ಶಿವಸುಂದರ್, ಡಾ. ವಾಸು ಎಚ್. ವಿ, ಬಸವರಾಜ್ ಕೌತಾಳ್, ಅಂಬಣ್ಣ ಅರೋಲಿಕರ್, ಪ್ರೊ. ಎ. ಎಸ್. ಪ್ರಭಾಕರ್, ಡಾ. ಕೆ. ಷರೀಫಾ, ಬಹುಜನ ವೆಂಕಟೇಶ್, ದಾಸನೂರು ಕೂಸಣ್ಣ, ವಿನಯ್ ಶ್ರೀನಿವಾಸ್, ಮೈತ್ರೇಯಿ, ಡಾ. ಹುಲಿಕುಂಟೆ ಮೂರ್ತಿ, ಜಿ.ಬಿ ಪಾಟೀಲ್, ಪ್ರೊ. ಬಿ.ಸಿ. ಬಸವರಾಜ್, ಡಾ. ಟಿ. ಗೋವಿಂದರಾಜ್, ಪ್ರೊ. ಟಿ. ಯಲ್ಲಪ್ಪ, ದಯಾನಂದ, ಕೆಸ್ತಾರ ವಿ ಮೌರ್ಯ, ಡಿ. ಟಿ ವೆಂಕಟೇಶ್, ಶ್ರೀಪಾದ್ ಭಟ್, ಲೇಖಾ ಅಡವಿ, ನಾರಾಯಣ್ ಕ್ಯಾಸಂಬಳ್ಳಿ, ಪ್ರೊ. ನಾರಾಯಣಸ್ವಾಮಿ, ಕೆ.ವಿ ಭಟ್, ಕೆ. ಪಿ ಲಕ್ಷ್ಮಣ್, ವಿ.ಎಲ್ ನರಸಿಂಹಮೂರ್ತಿ, ಹೆಚ್.ಕೆ ಶ್ವೇತಾರಾಣಿ, ಮುತ್ತುರಾಜು, ವಿಕಾಸ್ ಆರ್ ಮೌರ್ಯ, ಚಂದ್ರು ತರಹುಣಿಸೆ, ಅಶ್ವಿನಿ ಬೋದ್, ಭರತ್ ಡಿಂಗ್ರಿ, ಕೋಡಿಹಳ್ಳಿ ಚಂದ್ರು, ವೇಣುಗೋಪಾಲ್ ಮೌರ್ಯ, ಮಹೇಶ್, ಸರೋವರ್ ಬೆಂಕೀಕೆರೆ ಸೇರಿದಂತೆ ಹಲವು ಗಣ್ಯರು ಭಾಗವಹಿಸಿದ್ದರು.
ಕುದುರೆಮುಖದ ಜಾಗವನ್ನು ಅರಣ್ಯ ಇಲಾಖೆಗೆ ಕೊಡುವುದಕ್ಕೆ ವಿರೋಧ: ಪರಿಸರ ಹೋರಾಟಗಾರ ಕಲ್ಕುಳಿ ವಿಠಲ್ ಹೆಗಡೆಯವರ ಎಚ್ಚರಿಕೆ


