ಪ್ರೊಫೆಸರ್ ಷಡಕ್ಷರ ಶೆಟ್ಟರ್(1935-2020) ಅವರಿಗೆ ನನ್ನನ್ನು ಪರಿಚಯಿಸಿದ್ದು ಅಭಿನವದ ರವಿಕುಮಾರ್. 2015ರ ಬೇಸಗೆಯಲ್ಲಿ NIAS ನಲ್ಲಿ ಅವರನ್ನು ಕಂಡು ‘ಹಳಗನ್ನಡ: ಲಿಪಿ, ಲಿಪಿಕಾರ, ಲಿಪಿ ವ್ಯವಸಾಯ’(2012) ಕೃತಿಗೆ ಹಸ್ತಾಕ್ಷರ ಪಡೆದಿದ್ದೆ. ಮುಂದೊಂದು ದಿನ ಅವರೊಂದಿಗೆ ಕೆಲಸ ಮಾಡುವ ಅವಕಾಶ ಒದಗಿಬರುವುದೆಂಬ ಕಲ್ಪನೆ ಕೂಡ ಇರಲಿಲ್ಲ. ನಾನು 2017ರಲ್ಲಿ ಆಕ್ಸ್‍ಫರ್ಡ್ ಯೂನಿವರ್ಸಿಟಿ ಪ್ರೆಸ್‍ನ ಸಂಪಾದಕ ಹುದ್ದೆ ತೊರೆದು ಮೈಸೂರಿಗೆ ಬಂದುಬಿಟ್ಟೆ. ಆಗ 2017ರ ನವೆಂಬರ್‍ನಲ್ಲಿ ಮತ್ತೆ ರವಿಕುಮಾರರಿಂದಾಗಿ ಶೆಟ್ಟರ್ ಅವರ ಸಂಪರ್ಕಕ್ಕೆ ಬಂದ ನಾನು, 2018ರ ಜನವರಿಯಿಂದ ಅವರ ವಚನಾನುವಾದ ಯೋಜನೆಯಲ್ಲಿ ಕೆಲಸ ಮಾಡಲು ಅರಂಭಿಸಿದೆ. ಬೆಂಗಳೂರಿನಲ್ಲಿ ಅವರ ಕಚೇರಿಯಲ್ಲೇ ಉಳಿದುಕೊಂಡಿದ್ದರಿಂದಾಗಿ ಅವರೊಂದಿಗೆ ಹತ್ತಿರದಿಂದ ಒಡನಾಡುವ ಅವಕಾಶ ಒದಗಿಬಂತು. ಆಗಲೇ ಅವರ ‘ಪ್ರಾಕೃತ ಜಗದ್ವಲಯ:ಪ್ರಾಕೃತ-ಕನ್ನಡ-ಸಂಸ್ಕೃತ ಭಾಷೆಗಳ ಅನುಸಂಧಾನ’ (2018) ಕೃತಿಗೆ ಹಿನ್ನುಡಿ ಬರೆದದ್ದು. ಕೆ.ವಿ. ತಿರುಮಲೇಶ್ ಮುನ್ನುಡಿ ಬರೆದಿದ್ದರು.
ಅವರ ಆಫೀಸನ್ನು ನೋಡಿಕೊಳ್ಳುತ್ತಿದ್ದೆನಾದ್ದರಿಂದ ಅವರು ಬರೆದಿದ್ದೆಲ್ಲವನ್ನೂ ಓದುವ, ಅವರೊಂದಿಗೆ ಚರ್ಚಿಸುವ ಸುಯೋಗ ನನ್ನದಾಗಿತ್ತು. ಎಂಬತ್ತು ದಾಟಿದ್ದರೂ ಅವರಷ್ಟು ತದೇಕಚಿತ್ತರಾಗಿ ದಿನಕ್ಕೆ ಕಡಿಮೆಯೆಂದರೂ ಹತ್ತು ಹನ್ನೆರಡು ಗಂಟೆ ಕೆಲಸ ಮಾಡುವ ವ್ಯಕ್ತಿಯನ್ನು ನಾನು ಇದುವರೆಗೂ ಕಂಡಿಲ್ಲ. ಕೇಂಬ್ರಿಜ್‍ನಂತಹ ವಿಶ್ವದ ಪ್ರತಿಷ್ಠಿತ ಯೂನಿವರ್ಸಿಟಿಯಲ್ಲಿ ಶಿಕ್ಷಣ ಪಡೆದಿದ್ದರಿಂದಾಗಿಯೋ ಏನೋ ಸಂಶೋಧನಾ ಶಿಸ್ತು, ಶ್ರದ್ಧೆಗಳೇ ಮೈವೆತ್ತಂತಿದ್ದ ಅವರು ಬರವಣಿಗೆಯಷ್ಟೇ ಮಾತಿನಲ್ಲೂ ಶಿಸ್ತು ತೋರಿಸುತ್ತಿದ್ದರು. ಒಂದು ಸಲ ಬರೆದಿದ್ದನ್ನು ಹತ್ತು, ಹದಿನೈದು ಸಲ ಮತ್ತೆ ಮತ್ತೆ ಓದಿ ತಿದ್ದುವಷ್ಟು ಸಂಯಮ ಅವರಲ್ಲಿತ್ತು. ಕನ್ನಡದಲ್ಲಿ ಎಲ್ಲರನ್ನು ತಲುಪುವಂತಹ ಚರಿತ್ರೆ ಬರವಣಿಗೆಯ ಮಾದರಿಯೊಂದನ್ನು ರೂಪಿಸುವ ನಿಟ್ಟಿನಲ್ಲಿ ಅವರ ಪರಿಶ್ರಮ ಬಹಳ ಕಾಲ ಉಳಿಯಲಿದೆ. ಅಂತಹ ಪರಿಶ್ರಮದ ಫಲವಾಗಿಯೇ ಅವರ ಸಂಶೋಧನಾ ಕೃತಿಗಳು ಕೂಡ ಹಲವು ಮರುಮುದ್ರಣಗಳನ್ನು ಕಾಣಲು ಸಾಧ್ಯವಾಗಿದೆ. ಕೇವಲ ಬರೆಹದಲ್ಲಿ ಮಾತ್ರವಲ್ಲ, ಅಗಾಧ ಜ್ಞಾನದಿಂದಾಗಿ ಗಂಟಾನುಗಟ್ಟಲೇ ನಿರರ್ಗಳವಾಗಿ ಮಾತನಾಡುವ ಭಾಷಣ ಕಲೆಯನ್ನು ಕೂಡ ಅವರು ರೂಢಿಸಿಕೊಂಡಿದ್ದರು.
ಐದು ದಶಕಗಳಿಗೂ ಮೀರಿದ ವೃತ್ತಿಜೀವನದಲ್ಲಿ ಅವರು ದಶಕಕ್ಕೊಮ್ಮೆಯೆಂಬಂತೆ ಕಲಾಚರಿತ್ರೆ, ಪ್ರಾಕ್ತನ ಶಾಸ್ತ್ರ, ಧರ್ಮಗಳ ಚರಿತ್ರೆ, ಕ್ಲಾಸಿಕಲ್ ಭಾಷೆಗಳ ಚರಿತ್ರೆಗಳಲ್ಲಿ ತಮ್ಮ ಸಂಶೋಧನಾ ಕ್ಷೇತ್ರ ಹಾಗೂ ವಿಧಾನಗಳನ್ನು ಬದಲಾಯಿಸಿಕೊಳ್ಳುತ್ತ ಬಂದಿದ್ದು ಗಮನಾರ್ಹ. ಇಷ್ಟು ದೊಡ್ಡ ಹರಹನ್ನು ಹೊಂದಿದ ಚರಿತ್ರೆಕಾರ ಕನ್ನಡದಲ್ಲಿ ಇದುವರೆಗೂ ಬಂದಿಲ್ಲವೆನ್ನುವುದು ಅತಿಶಯೋಕ್ತಿಯೇನಲ್ಲ. ಇಂಗ್ಲಿಷ್‍ನಲ್ಲಿ ಸಂಶೋಧನೆ ಹಾಗೂ ಬರೆಹ ಮಾಡಿ ದೇಶವಿದೇಶಗಳಲ್ಲಿ ಸಾಕಷ್ಟು ಮನ್ನಣೆ ಗಳಿಸಿದ್ದರೂ, ತಮ್ಮ ಕೊನೆಯ ಒಂದು ದಶಕವನ್ನು ಕನ್ನಡದಲ್ಲಿ ಬರೆಯುವುದಕ್ಕೆಂದೇ ಮೀಸಲಾಗಿರಿಸಿದ್ದು ಚಾರಿತ್ರಿಕ ಸಂಗತಿ. ಅವರು ಕನ್ನಡದಲ್ಲಿ ಬರೆಯುವವರೆಗೂ ಕನ್ನಡಿಗರನೇಕರಿಗೆ ಅವರ ಪರಿಚಯವೇ ಇಲ್ಲದಿದ್ದದ್ದು ಸೋಜಿಗದ ಸಂಗತಿ.
ನನ್ನ ಸೀಮಿತ ಓದಿನ ಮಟ್ಟಿಗೆ ಅವರು ಕನ್ನಡದಲ್ಲಿ ರಚಿಸಿದ ಕೃತಿಗಳಲ್ಲಿ ‘ಹಳಗನ್ನಡ’ ಕೃತಿ ಕನ್ನಡದಲ್ಲಿ ಯಾವುದೇ ಕ್ಷೇತ್ರ ಅಥವಾ ಪ್ರಕಾರದಲ್ಲಿ ಬಂದಿರುವ ಕೃತಿಗಳಲ್ಲೇ ಸಾರ್ವಕಾಲಿಕ ಶ್ರೇಷ್ಠ ಕೃತಿಗಳಲ್ಲಿ ಒಂದಾಗಿ ನಿಲ್ಲುತ್ತದೆ. ಹಾಗೆಯೇ, ಕನ್ನಡ ಸಾಹಿತ್ಯ ಚರಿತ್ರೆ ಕಟ್ಟುವುದಕ್ಕೆ ಬಹುದೊಡ್ಡ ಮಾದರಿಯಾಗಿ ಕೂಡ. ಶೆಟ್ಟರ್ ಇಂದು ಕನ್ನಡಕ್ಕೆ ಮುಖ್ಯರಾಗುವುದು ವಿದ್ವತ್ತಿಗೆ ಮಾತ್ರವಲ್ಲ, ತಮ್ಮ ಕೃತಿಗಳಲ್ಲಿ ಎತ್ತಿ ಹಿಡಿದ ಸೆಕ್ಯುಲರ್ ಮನೋಧರ್ಮಕ್ಕೂ ಕೂಡ. ಶಾಸನಗಳ ಅಧ್ಯಯನದ ಮೂಲಕ ಶಾಸನದಷ್ಟೇ ಅಚ್ಚಳಿಯದೆ ಉಳಿಯಲಿರುವ ಇಂತಹ ಅಪ್ರತಿಮ ಚರಿತ್ರೆಕಾರನಿಗೆ ಕೊನೆಗೂ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಕಕ್ಷತೆಯ ಗೌರವ ನೀಡದಿರುವುದು ಅವಮಾನದ ಸಂಗತಿ.


