Homeಮುಖಪುಟಅಭಿವ್ಯಕ್ತಿ ಸ್ವಾತಂತ್ರ್ಯ: ಆತಂಕ ಹುಟ್ಟಿಸುವ ಶರಣಾಗತಿ ಪ್ರವೃತ್ತಿ- ಎ. ನಾರಾಯಣ

ಅಭಿವ್ಯಕ್ತಿ ಸ್ವಾತಂತ್ರ್ಯ: ಆತಂಕ ಹುಟ್ಟಿಸುವ ಶರಣಾಗತಿ ಪ್ರವೃತ್ತಿ- ಎ. ನಾರಾಯಣ

- Advertisement -
- Advertisement -

 

ಎ. ನಾರಾಯಣ

ಕನ್ನಡ ಪತ್ರಿಕೆಯ ಓದುಗರು ಬಹುವಾಗಿ ಮೆಚ್ಚಿಕೊಳ್ಳುತ್ತಿರುವ ಅಂಕಣಕಾರರಲ್ಲಿ ಒಬ್ಬರಾದ ಎ.ನಾರಾಯಣ ಅವರು ಕಾಸರಗೋಡಿನವರು. ಇಂಗ್ಲೆಂಡಿನ ಸಸೆಕ್ಸ್ ವಿವಿಯಲ್ಲಿ ಪಿಎಚ್‍ಡಿ ಮಾಡುವಮುನ್ನ ಡೆಕ್ಕನ್ ಹೆರಾಲ್ಡ್‍ನಲ್ಲಿ ಪತ್ರಕರ್ತರಾಗಿ ಕೆಲಸ ಮಾಡಿದ್ದರು. ಪ್ರಸ್ತುತ ಅಜೀಂ ಪ್ರೇಮ್‍ಜಿ ವಿಶ್ವವಿದ್ಯಾಲಯದಲ್ಲಿ ರಾಜಕೀಯ ತತ್ವಶಾಸ್ತ್ರ ಮತ್ತು ಆಡಳಿತ ವಿಭಾಗದಲ್ಲಿ ಬೋಧಿಸುತ್ತಾರೆ. ಪ್ರಜಾವಾಣಿ ಪತ್ರಿಕೆಯ ಅಂಕಣಕಾರರಾಗಿ ರಾಜಕೀಯ, ಸಾಮಾಜಿಕ ವಿಷಯಗಳ ಕುರಿತಂತೆ ಭಿನ್ನ ರೀತಿಯ ಹರಿತ, ವಸ್ತುನಿಷ್ಠ ವಿಶ್ಲೇಷಣೆಗಳ ಬರಹಗಳನ್ನು ಬರೆಯುತ್ತಿದ್ದಾರೆ.

ಸಮಸ್ಯೆ ಇರುವುದು ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಹತ್ತಿಕ್ಕಲಾಗುತ್ತಿದೆ ಎನ್ನುವುದರಿಂದ ಮಾತ್ರವಲ್ಲ. ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಎಲ್ಲಾ ಕಾಲದಲ್ಲೂ ಎಲ್ಲಾ ಆಳುವ ಸರಕಾರಗಳೂ ಹತ್ತಿಕ್ಕುವ ಕೆಲಸವನ್ನು ಮಾಡುತ್ತಲೇ ಬಂದಿವೆ. ಈಗ ಅದು ಇನ್ನೂ ಹೆಚ್ಚಾಗಿದೆ ಅಥವಾ ತೀರಾ ಹೆಚ್ಚಾಗಿದೆ ಅಂತ ಬೇಕಾದರೆ ಹೇಳಬಹುದು. ನಮ್ಮ ಕಾಲದಲ್ಲಿ ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ಎದುರಾಗಿರುವ ಇನ್ನೂ ಮುಖ್ಯವಾದ ಆತಂಕ ಏನು ಎಂದರೆ ಈ ಸಂವಿಧಾನದತ್ತ ಹಕ್ಕನ್ನು ಬಳಸಿಕೊಳ್ಳುವಲ್ಲಿ ಇಡೀ ದೇಶವು ಒಂದು ರೀತಿಯ ಶಸ್ತ್ರಸನ್ಯಾಸವನ್ನು ಘೋಷಿಸಿಕೊಂಡಿದೆ ಎನ್ನುವುದು. ಯಾರ್ಯಾರು ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಸಂರಕ್ಷಿಸುವಲ್ಲಿ ಮುಂಚೂಣಿಯಲ್ಲಿರಬೇಕಿತ್ತೋ ಅವರೆಲ್ಲರೂ ಸೇರಿ ಅದನ್ನು ಅಧಿಕಾರಸ್ಥರ ಕಾಲಬುಡದಲ್ಲಿ ಒತ್ತೆಯಿಟ್ಟು ಒಂದು ರೀತಿಯ ಬಹುಪರಾಕು ಸಂಸ್ಕೃತಿಯನ್ನು ಅಳವಡಿಸಿಕೊಂಡಿದ್ದಾರೆ.

ಈಗ ನಡೆಯುತ್ತಿರುವ ಮಾಧ್ಯಮ ದಮನ, ತುರ್ತುಪರಿಸ್ಥಿತಿಯ ಕಾಲದಲ್ಲಿ ಏನೇನಾಯಿತೋ ಅದಕ್ಕಿಂತ ಭಿನ್ನವಾಗಿ ಏನೂ ಇಲ್ಲ ಎನ್ನುವ ಅಭಿಪ್ರಾಯವೊಂದಿದೆ. ಅದನ್ನೇ ಇನ್ನೊಂದು ರೀತಿಯಲ್ಲಿ ಹೇಳಬಹುದು: ಮಾಧ್ಯಮಗಳು ತುರ್ತುಪರಿಸ್ಥಿತಿಯ ಕಾಲದಲ್ಲಿ ತಗ್ಗಿಬಗ್ಗಿ ನಡೆದದ್ದಕ್ಕಿಂತಲೂ ಹೆಚ್ಚಿನ ರೀತಿಯಲ್ಲಿ ಈಗ ದಾಸ್ಯವನ್ನು ಒಪ್ಪಿಕೊಂಡಿವೆ. ಅಂದಿನ ಮಾಧ್ಯಮ ರಂಗದ ಬಗ್ಗೆ ಹಿರಿಯ ಬಿಜೆಪಿ ನಾಯಕ ಎಲ್.ಕೆ.ಅದ್ವಾಣಿ ಅವರು ಹೇಳಿದ್ದಾರೆ ಎನ್ನಲಾದ ಒಂದು ಮಾತು ಬಹಳ ಚಿರಪರಿಚಿತ. “ಮಾಧ್ಯಮಗಳನ್ನು ಸರಕಾರ ಬಗ್ಗುವಂತೆ ಸೂಚಿಸಿತ್ತು. ಆದರೆ ಮಾಧ್ಯಮಗಳು ಅಕ್ಷರಶಃ ನೆಲಕ್ಕೆ ಒರಗಿ ತೆವಳಿದವು” ಅಂತ. ಈಗ ಅವರ ಮಾತು ಅವರೇ ಕಟ್ಟಿರುವ ಪಕ್ಷ ಅಧಿಕಾರದಲ್ಲಿರುವಾಗ ಇನ್ನೂ ಹೆಚ್ಚು ಅರ್ಥಪೂರ್ಣವಾಗುತ್ತಿದೆ ಎನ್ನುವುದು ಇತಿಹಾಸದ ಒಂದು ಕ್ರೂರ ವ್ಯಂಗ್ಯ.

ತೀರಾ ಇತ್ತೀಚೆಗಿನ ಉದಾಹರಣೆ ಕಾಶ್ಮೀರದ ವಿಚಾರದಲ್ಲಿ ಭಾರತೀಯ ಮಾಧ್ಯಮಗಳು ಅನುಸರಿಸುತ್ತಿರುವ ನೀತಿ. ಕೇಂದ್ರ ಸರಕಾರ ಕಾಶ್ಮೀರಕ್ಕೆ ಸಂಬಂಧಿಸಿದ ಸಂವಿಧಾನದ 370ನೆಯ ವಿಧಿಯನ್ನು ಅಸಿಂಧುಗೊಳಿಸಿದ ಬಳಿಕ ಆ ರಾಜ್ಯದ ಜನಜೀವನದ ಮೇಲೆ ಹೇರಿರುವ ಭೀಕರ ನಿರ್ಬಂಧಗಳ ಕುರಿತು ಭಾರತೀಯ ಮಾಧ್ಯಮಗಳು ಸಂಪೂರ್ಣ ಕುರುಡಾಗಿ ವರ್ತಿಸುತ್ತಿವೆ. ಅಲ್ಲಿ ಜನಜೀವನ ಸಹಜ ಸ್ಥಿತಿಯಲ್ಲಿದೆ ಎಂದೂ, ನಿರ್ಬಂಧಗಳು ಅನಿವಾರ್ಯ ಎಂದೂ ಸರಕಾರ ಹೇಳುತ್ತಿರುವುದನ್ನು ಮುಖ್ಯವಾಹಿನಿ ಮಾಧ್ಯಮಗಳು ಏನೊಂದೂ ಚಿಕಿತ್ಸಕ ದೃಷ್ಟಿಯನ್ನು ಇಟ್ಟುಕೊಳ್ಳದೆ ಗಿಳಿಪಾಠ ಒಪ್ಪಿಸುತ್ತಿವೆ. ಅಂತಾರಾಷ್ಟ್ರೀಯ ಮಾಧ್ಯಮಗಳು ಮಾತ್ರ ಮಾಧ್ಯಮಗಳಿಗೆ ವಿಧಿಸಲಾದ ಎಲ್ಲಾ ನಿರ್ಬಂಧಗಳನ್ನು ಮೀರಿ ಆ ರಾಜ್ಯದಲ್ಲಿ ಆಗುತ್ತಿರುವ ದೈನಂದಿನ ಅನಾಹುತಗಳನ್ನು ಜಗತ್ತಿನ ಮುಂದಿಡುತ್ತಿವೆ. ಭಾರತೀಯ ಮಾಧ್ಯಮಗಳು ಇದನ್ನು ಮಾಡುತ್ತಿಲ್ಲ ಎನ್ನುವುದಕ್ಕಿಂತ ಹೆಚ್ಚಾಗಿ ಈ ವಿಚಾರದಲ್ಲಿ ಅವುಗಳು ಸರ್ಕಾರದ ಮುಖವಾಣಿಗಳಾಗಿ ಹೋಗಿರುವುದು ದುರಂತದ ಸಂಗತಿ. ಆಳುವ ಪಕ್ಷಗಳ ಅಥವಾ ಅಧಿಕಾರಸ್ಥ ರಾಜಕಾರಣಿಗಳ ಸ್ವಂತ ಬಂಡವಾಳದಲ್ಲಿ ನಡೆಯುವ ಅಥವಾ ಅವರನ್ನು ಓಲೈಸಲೆಂದೇ ಹುಟ್ಟಿಕೊಂಡಿರುವ ಮಾಧ್ಯಮಗಳು ಮಾತ್ರವೇ ಹೀಗೆ ನಡೆದುಕೊಳ್ಳುತ್ತವೆ ಎಂದಾಗಿದ್ದರೆ ಅದರಲ್ಲಿ ವಿಶೇಷವೇನಿರಲಿಲ್ಲ. ಆದರೆ ಇಂದು ಈ ಪ್ರವೃತ್ತಿ ಇಂತಹ ಮಾಧ್ಯಮಗಳಿಗೆ ಮಾತ್ರ ಸೀಮಿತವಾಗಿಲ್ಲ. ಅದು ಇಡೀ ಮುಖ್ಯವಾಹಿನಿ ಮಾಧ್ಯಮ ರಂಗವನ್ನು ಬಹುತೇಕ ಆವರಿಸಿಬಿಟ್ಟಿದೆ. ಕಾಶ್ಮೀರದ ವಿಚಾರದಲ್ಲೇನೋ ‘ದೇಶಭಕ್ತಿ’ ಮಾಧ್ಯಮಗಳ ಕೈಕಟ್ಟಿಹಾಕಿತು ಎನ್ನೋಣ. ಆದರೆ ಗುಂಪು ಹತ್ಯೆಗಳ ವಿಚಾರದಲ್ಲಿ ಮಾಧ್ಯಮಗಳು ಎತ್ತಬೇಕಾದ ಪ್ರಶ್ನೆಗಳನ್ನು ಎತ್ತದಿರುವುದನ್ನು ಏನೆಂದು ಕರೆಯೋಣ? ಬರಬರುತ್ತಾ ಗುಂಪು ಹತ್ಯೆಗಳ ಕುರಿತಾದ ಸುದ್ದಿಗಳು ಏನೋ ಮಾಮೂಲಿ ಘಟನೆಗಳ ವರದಿ ಎನ್ನುವಂತೆ ಒಳಪುಟಗಳಲ್ಲಿ ಕಾಣಿಸಿಕೊಳ್ಳಲಾರಂಭಿಸಿವೆ. ಸುಪ್ರೀಂಕೋರ್ಟ್ ಆದೇಶದ ಬಳಿಕವೂ ಸರಕಾರ ಈ ವಿಚಾರದಲ್ಲಿ ತೋರುತ್ತಿರುವ ಉದಾಸೀನ ಪ್ರವೃತ್ತಿಯನ್ನು ದೊಡ್ಡ ಧ್ವನಿಯಲ್ಲಿ ಪ್ರಶ್ನಿಸದೆ ಇರುವ ಮಾಧ್ಯಮಗಳು ಅಭಿವ್ಯಕ್ತಿ ಸ್ವಾತಂತ್ರವನ್ನು ಎಷ್ಟರಮಟ್ಟಿಗೆ ಬಳಸಿಕೊಳ್ಳುತ್ತಿವೆ ಎನ್ನುವ ಪ್ರಶ್ನೆ ಮೂಡುವುದಿಲ್ಲವೇ? ಇಂತಹ ಸಾವಿರ ಉದಾಹರಣೆಗಳಿವೆ. “ಇದರಲ್ಲಿ ಹೊಸದೇನಿಲ್ಲ, ಇಂತಹ ಪರಿಸ್ಥಿತಿ ಬಂದಾಗಲೆಲ್ಲಾ ಭಾರತೀಯ ಮಾಧ್ಯಮಗಳು ಹೀಗೆಯೇ ನಡೆದುಕೊಂಡಿರುವುದು – ಮತ್ತೊಂದು ಸಂದಿಗ್ಧತೆ ಎದುರಾಗಿದೆ, ಮಾಧ್ಯಮಗಳು ಮತ್ತದೇ ಪ್ರವೃತ್ತಿಯನ್ನು ತೋರುತ್ತಿವೆ. ಇದು ಒಂಥರಾ ಪಾವಲೋವನ ಪ್ರಯೋಗದ ನಾಯಿಯ ಕತೆ” ಅಂತ ಹಿರಿಯ ಪತ್ರಕರ್ತ ಕೃಷ್ಣಪ್ರಸಾದ್ ಇತ್ತೀಚಿಗೆ ಬರೆದರು (ಮನಶಾಸ್ತ್ರದ ವಿದ್ಯಾರ್ಥಿಗಳು ಕಲಿಯುವ ಪಾವಲೋವನ ಪ್ರಯೋಗದಲ್ಲಿ ಒಂದು ನಿರ್ದಿಷ್ಟ ಸಂಜ್ಞೆಗೆ ಒಂದೇ ರೀತಿ ಪ್ರತಿಕ್ರಿಯಿಸುವ ಪ್ರವೃತ್ತಿ ತೋರಿಸುತ್ತದೆ).

ಭಾರತೀಯ ಮಾಧ್ಯಮಗಳು ಹೀಗೆ ಆಳುವ ಸರಕಾರಗಳ ತಾಳಕ್ಕೆ ಸರಿಯಾಗಿ ಕುಣಿಯುವುದು ಅವುಗಳಿಗೆ ಒಪ್ಪಿಗೆಯಾಗಿ ಅಲ್ಲ, ಅವುಗಳು ಹಾಗೆ ಮಾಡುವುದು ಸರಕಾರ ಅನುಸರಿಸುತ್ತಿರುವ ಅಭಿವ್ಯಕ್ತಿ ಸ್ವಾತಂತ್ರ್ಯದ ದಮನ ನೀತಿಯ ಪರಿಣಾಮವಾಗಿ ಅಂತ ವಾದಿಸಬಹುದು. ಯಾಕೆಂದರೆ ಭಾರತದ ಮಾಧ್ಯಮ ಒಂದು ಉದ್ಯಮವಾಗಿ ಸದಾ ಸರಕಾರದ ಮರ್ಜಿಯಲ್ಲೇ ಇರಬೇಕಾದ ಅನಿವಾರ್ಯತೆ ಇದೆ. ಸರಕಾರದ ಜತೆ ನಿಷ್ಠುರವಾಗಿ ನಡೆದುಕೊಂಡರೆ ಮಾಧ್ಯಮಗಳನ್ನು ಸರಕಾರ ವಿವಿಧ ರೀತಿಯಲ್ಲಿ ಬಗ್ಗುಬಡಿಯಬಹುದು. ಸರಕಾರೀ ಜಾಹೀರಾತುಗಳನ್ನು ನಿಲ್ಲಿಸಬಹುದು, ಖಾಸಗಿ ಜಾಹೀರಾತುಗಳೂ ಸಿಗದೇ ಹೋಗುವಂತೆ ತಂತ್ರ ಹೂಡಬಹುದು. ಪತ್ರಿಕೆಯ ಮಾಲೀಕರ, ಅದರ ಹಿರಿಯ ಪತ್ರಕರ್ತರ ಮೇಲೆ ತನಿಖಾ ಸಂಸ್ಥೆಗಳನ್ನು ಛೂ ಬಿಡಬಹುದು. ಇದೆಲ್ಲಾ ಈ ದೇಶದಲ್ಲಿ ಹಿಂದೆ ಆಗಿಹೋಗಿದೆ. ಆದುದರಿಂದ ಮಾಧ್ಯಮೋದ್ಯಮ ಆರ್ಥಿಕವಾಗಿ ಅತ್ಯಂತ ಸೊರಗಿಹೋಗಿರುವ ಈ ಕಾಲದಲ್ಲಿ ಯಾರು ತಾನೇ ಸರಕಾರದ ದ್ವೇಷ ಕಟ್ಟಿಕೊಳ್ಳಲು ತಯಾರಿದ್ದಾರೆ? ಸಹಜವಾಗಿಯೇ ಮಾಧ್ಯಮಗಳು ಸರಕಾರವನ್ನು ಪ್ರಶ್ನಿಸುವುದನ್ನು ಬಿಟ್ಟು ಅದರ ಹೊಗಳುಭಟ್ಟರಾಗಿಬಿಟ್ಟಿವೆ. ಅಂದಮೇಲೆ ಅವುಗಳಿಗೇನು ಅಭಿವ್ಯಕ್ತಿ ಸ್ವಾತಂತ್ರ್ಯದ ಹಂಗು ಎನ್ನುವ ವಾದ ಒಪ್ಪತಕ್ಕದ್ದೇ. ಇಲ್ಲೇ ಇರುವುದು ಮಹತ್ವದ ವಿಚಾರ. ಒಂದು ವೇಳೆ ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಪ್ರಬಲವಾಗಿ ಉಳಿಸಿಕೊಳ್ಳಬೇಕು ಎನ್ನುವ ತುಡಿತವೊಂದು ಭಾರತದ ಸಮಾಜದಲ್ಲಿ ಆಳವಾಗಿ ನೆಲೆಸಿದ್ದರೆ ಇಷ್ಟೊತ್ತಿಗೆ ಸರಕಾರೀ ಮತ್ತು ಖಾಸಗೀ ಜಾಹೀರಾತುಗಳ ಹಂಗಿಲ್ಲದೆ ನಡೆಯಬಹುದಾದ ಮಾಧ್ಯಮೋದ್ಯಮದ ಮಾದರಿಯೊಂದು ಈ ದೇಶದಲ್ಲಿ ಸೃಷ್ಟಿಯಾಗುತಿತ್ತು. ಒಂದೋ ಸಹಕಾರೀ ತತ್ವದ ಆಧಾರದ ಮೇಲೆ ಅಥವಾ ದೊಡ್ಡ ಮಟ್ಟದ ದತ್ತಿಯೊಂದನ್ನು ಸ್ಥಾಪಿಸಿ ಅದರಿಂದ ಹುಟ್ಟುವ ಆದಾಯದ ಮೇಲೆ ಅವಲಂಬಿಸಿ ಸ್ವತಂತ್ರವಾಗಿ ನಡೆಯುವ ಮಾಧ್ಯಮ ಸಂಸ್ಥೆಯೊಂದು ಹುಟ್ಟಬಹುದಾಗಿತ್ತು. ಅಂತಹದ್ದೊಂದು ಪ್ರಯೋಗ ಸರಿಯಾಗಿ ಆಗಿಲ್ಲ ಅಥವಾ ಆದರೂ ಬಹುಕಾಲ ಉಳಿಯಲಿಲ್ಲ (ಉದಾಹರಣೆಗೆ ತೆಹೆಲ್ಕಾ) ಎಂಬುದು ಏನನ್ನು ಸೂಚಿಸುತ್ತದೆ? ಅಭಿವ್ಯಕ್ತಿ ಸ್ವಾತಂತ್ರ್ಯದ ರಕ್ಷಣೆಗೆ ನಾಗರಿಕ ಸಮಾಜ ಯಾಕೆ ಹೋರಾಟ ನಡೆಸುತಿಲ್ಲ. ವಾಸ್ತವದಲ್ಲಿ, ಈಗ್ಗೆ ನಾಲ್ಕು ವರ್ಷಗಳ ಹಿಂದೆ ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಹತ್ತಿಕ್ಕುವ ಪ್ರವೃತ್ತಿಯನ್ನು ಖಂಡಿಸಿ ನಡೆದ ‘ಪ್ರಶಸ್ತಿ ವಾಪಸಾತಿ ಚಳವಳಿ’ ಬಹಳ ಅರ್ಥಪೂರ್ಣವಾಗಿತ್ತು. ಆದರೆ ಅದು ಅಷ್ಟೇ ಬೇಗ ನಿಂತುಹೋಯಿತು. ಅದರ ವಿಚಾರದಲ್ಲಿ ಹುಟ್ಟಿಕೊಂಡ ಅಪಪ್ರಚಾರವನ್ನು ಮೆಟ್ಟಿ ನಿಲ್ಲಲು ಅದಕ್ಕೆ ಸಾಧ್ಯವಾಗಿಲ್ಲ. ಅಭಿವ್ಯಕ್ತಿ ಸ್ವಾತಂತ್ರ್ಯ ಎದುರಿಸುತ್ತಿರುವ ಸವಾಲುಗಳ ಬಗ್ಗೆ ಚಿಂತೆ ಮತ್ತು ಅದನ್ನು ಬಳಸಿಕೊಳ್ಳುವ ಧಾವಂತ ಏನಿದ್ದರೂ ಕೆಲವೇ ಕೆಲ ವ್ಯಕ್ತಿಗಳದ್ದು ಮತ್ತು ಕೆಲ ಪರ್ಯಾಯ ಮಾಧ್ಯಮಗಳದ್ದು ಎಂಬಂತ ಸ್ಥಿತಿಯೇ ಎಲ್ಲಾ ಕಾಲದಲ್ಲೂ ಇದ್ದದ್ದು.

ಇಡೀ ಭಾರತೀಯ ಸಮಾಜಕ್ಕೆ ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಬಳಸಿ ಅಧಿಕಾರಸ್ಥರನ್ನು ಹದ್ದುಬಸ್ತಿನಲ್ಲಿಡಬೇಕು ಎನ್ನುವುದರ ಬಗ್ಗೆ ವಿಶೇಷವಾದ ಕಾಳಜಿ ಇನ್ನೂ ಮೂಡಿಲ್ಲ ಅನ್ನಿಸುತ್ತದೆ. ಅರ್ಥಾತ್ ಅಭಿವ್ಯಕ್ತಿ ಸ್ವಾತಂತ್ರ್ಯದ ಹರಣ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯದ ವಿಚಾರದಲ್ಲಿ ಇರುವ ಉದಾಸೀನ ಎರಡೂ ಕೂಡಾ ಭಾರತದ ಪ್ರಜಾತಂತ್ರದ ಇನ್ನೊಂದು ದೊಡ್ಡ ಸವಾಲಿನ ಭಾಗಗಳು. ಆ ಸವಾಲು ಏನು ಅಂತ ಅಂದರೆ ಭಾರತೀಯ ಮನಸ್ಸುಗಳು ಪ್ರಜಾತಂತ್ರದ ಸಂಸ್ಕೃತಿಗೆ ತಯಾರಾಗುವ ಮುನ್ನವೇ ಈ ದೇಶಕ್ಕೆ ಪ್ರಜಾತಂತ್ರ ಬಂದದ್ದು. ಇದನ್ನೇ ಅಲ್ಲವೇ ಬಿ.ಆರ್.ಅಂಬೇಡ್ಕರ್ ಅಂದೇ ಎಚ್ಚರಿಸಿದ್ದು.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಕೇಂದ್ರದ ವಿಬಿ-ಜಿ ರಾಮ್ ಜಿಗೆ ಟಕ್ಕರ್ : ಪ. ಬಂಗಾಳದ ‘ಕರ್ಮಶ್ರೀ’ ಯೋಜನೆಗೆ ಮಹಾತ್ಮ ಗಾಂಧಿ ಹೆಸರಿಡುವುದಾಗಿ ಘೋಷಿಸಿದ ಮಮತಾ ಬ್ಯಾನರ್ಜಿ

ಪಶ್ಚಿಮ ಬಂಗಾಳ ಸರ್ಕಾರದ ಉದ್ಯೋಗ ಖಾತರಿ ಯೋಜನೆ 'ಕರ್ಮಶ್ರೀ'ಯನ್ನು ಮಹಾತ್ಮ ಗಾಂಧಿ ಹೆಸರಿನಲ್ಲಿ ಮರುನಾಮಕರಣ ಮಾಡುವುದಾಗಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಗುರುವಾರ (ಡಿಸೆಂಬರ್ 18) ಘೋಷಿಸಿದ್ದಾರೆ. ನರೇಗಾ ಯೋಜನೆಯಿಂದ ಮಹಾತ್ಮಾ ಗಾಂಧಿಯವರ ಹೆಸರನ್ನು ಕೈಬಿಟ್ಟಿರುವುದಕ್ಕೆ...

ಕೃಷಿ ಸಹಕಾರ ಸಂಘಗಳಿಗೆ ಹಣ ಬಿಡುಗಡೆ: ಶಾಸಕ ಕುಣಿಗಲ್ ರಂಗನಾಥ್ ವಿರುದ್ಧ ಕೆ.ಎನ್. ರಾಜಣ್ಣ ವಾಗ್ದಾಳಿ

ಕೃಷಿ ಸಹಕಾರ ಸಂಘಗಳಿಗೆ ಹಣ ಬಿಡುಗಡೆ ಮಾಡುವುದನ್ನು ಮಾಜಿ ಸಹಕಾರಿ ಸಚಿವ ಕೆ.ಎನ್. ರಾಜಣ್ಣ ಗುರುವಾರ ಬಲವಾಗಿ ಸಮರ್ಥಿಸಿಕೊಂಡಿದ್ದಾರೆ. ಆಡಳಿತ ಪಕ್ಷದೊಳಗಿನ ಸಾರ್ವಜನಿಕ ಭಿನ್ನಾಭಿಪ್ರಾಯದ ನಡುವೆಯೂ, "ಸಂಘಗಳಿಗೆ ವಿತರಿಸಲಾದ ನಿಧಿ ಠೇವಣಿದಾರರ ಹಣ,...

ತನ್ನದೇ ಶಾಸಕರ ಅನರ್ಹತೆ ಕೋರಿ ಬಿಆರ್‌ಎಸ್‌ ಅರ್ಜಿ : ತಿರಸ್ಕರಿಸಿದ ತೆಲಂಗಾಣ ಸ್ಪೀಕರ್

ಆಡಳಿತಾರೂಢ ಕಾಂಗ್ರೆಸ್‌ಗೆ ನಿಷ್ಠೆ ಬದಲಾಯಿಸಿದ್ದಾರೆಂದು ಹೇಳಲಾದ ಹತ್ತು ಬಿಆರ್‌ಎಸ್ ಶಾಸಕರನ್ನು ಅನರ್ಹಗೊಳಿಸುವಂತೆ ಕೋರಿದ್ದ ಅರ್ಜಿಗಳ ಪೈಕಿ ಐದು ಅರ್ಜಿಗಳನ್ನು ತೆಲಂಗಾಣ ವಿಧಾನಸಭೆಯ ಸ್ಪೀಕರ್ ಗದ್ದಂ ಪ್ರಸಾದ್ ಕುಮಾರ್ ಬುಧವಾರ (ಡಿಸೆಂಬರ್ 18) ತಿರಸ್ಕರಿಸಿದ್ದಾರೆ....

ಸಾಮಾಜಿಕ ಬಹಿಷ್ಕಾರ, ದ್ವೇಷ ಭಾಷಣ ತಡೆ ವಿಧೇಯಕಗಳು ವಿಧಾನಸಭೆಯಲ್ಲಿ ಅಂಗೀಕಾರ

ಕರ್ನಾಟಕ ಸಾಮಾಜಿಕ ಬಹಿಷ್ಕಾರ (ಪ್ರತಿಬಂಧ, ನಿಷೇಧ ಮತ್ತು ಪರಿಹಾರ) ವಿಧೇಯಕ-2025 ಗುರುವಾರ (ಡಿ.18) ವಿಧಾನಸಭೆಯಲ್ಲಿ ಸರ್ವಾನುಮತದ ಅಂಗೀಕಾರಗೊಂಡಿತು. ಬೆಳಗಾವಿ ಸುವರ್ಣ ಸೌಧದಲ್ಲಿ ನಡೆಯುತ್ತಿರುವ ಚಳಿಗಾಲದ ವಿಧಾನಮಂಡಲ ಅಧಿವೇಶನದ ವಿಧಾನಸಭೆ ಕಲಾಪದಲ್ಲಿ ಸಮಾಜ ಕಲ್ಯಾಣ ಇಲಾಖೆ...

ಆಕ್ರಮಿತ ಪೂರ್ವ ಜೆರುಸಲೆಮ್ ವಸಾಹತು ಪ್ರದೇಶದಲ್ಲಿ 9000 ವಸತಿ ಘಟಕಗಳ ಯೋಜನೆ ಮುಂದಿಟ್ಟ ಇಸ್ರೇಲ್ 

ಆಕ್ರಮಿತ ಪೂರ್ವ ಜೆರುಸಲೆಮ್‌ನಲ್ಲಿರುವ ಕೈಬಿಟ್ಟ ಖಲಾಂಡಿಯಾ ವಿಮಾನ ನಿಲ್ದಾಣದ ಸ್ಥಳ ಬಳಿ ಅಕ್ರಮ ವಸಾಹತು ಪ್ರದೇಶದಲ್ಲಿ ಸುಮಾರು 9,000 ಹೊಸ ವಸತಿ ಘಟಕಗಳನ್ನು ನಿರ್ಮಿಸಲು ಇಸ್ರೇಲಿ ಆಕ್ರಮಿತ ಅಧಿಕಾರಿಗಳು ಯೋಜನೆಗಳನ್ನು ರೂಪಿಸಲು ಸಜ್ಜಾಗಿದ್ದಾರೆ....

ವಿಪಕ್ಷಗಳ ತೀವ್ರ ವಿರೋಧದ ನಡುವೆಯೇ ಲೋಕಸಭೆಯಲ್ಲಿ ‘ವಿಬಿ-ಜಿ ರಾಮ್ ಜಿ ಮಸೂದೆ’ ಅಂಗೀಕಾರ

ಪ್ರತಿಪಕ್ಷಗಳ ತೀವ್ರ ವಿರೋಧದ ನಡುವೆಯೇ ಗುರುವಾರ (ಡಿ.18) ಲೋಕಸಭೆಯಲ್ಲಿ 'ವಿಕ್ಷಿತ್ ಭಾರತ್ ಗ್ಯಾರಂಟಿ ಫಾರ್ ರೋಜ್‌ಗಾರ್ ಅಂಡ್ ಅಜೀವಿಕ ಮಿಷನ್ (ಗ್ರಾಮೀಣ್ ) (ವಿಬಿ-ಜಿ ರಾಮ್ ಜಿ) ಮಸೂದೆ ಅಂಗೀಕಾರಗೊಂಡಿತು. ಈ ಮಸೂದೆ 2005ರಲ್ಲಿ...

ರಾಹುಲ್ ಗಾಂಧಿ ಆಪ್ತ ಸಹಾಯಕನ ಪತ್ನಿ ಪ್ರಜ್ಞಾ ಸತವ್ ಕಾಂಗ್ರೆಸ್ ಎಂಎಲ್‌ಸಿ ಸ್ಥಾನಕ್ಕೆ ರಾಜೀನಾಮೆ; ಬಿಜೆಪಿ ಸೇರುವ ನಿರೀಕ್ಷೆ

ಕಾಂಗ್ರೆಸ್ಸಿಗ ಮತ್ತು ಲೋಕಸಭಾ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿಯವರ ಆಪ್ತರಾಗಿದ್ದ ದಿವಂಗತ ರಾಜೀವ್ ಸತವ್ ಅವರ ಪತ್ನಿ ಸತವ್ ಬಿಜೆಪಿಗೆ ಸೇರುವ ನಿರೀಕ್ಷೆಯಿದೆ. ಮಹಾರಾಷ್ಟ್ರದ ಕಾಂಗ್ರೆಸ್ ನಾಯಕಿ ಪ್ರಜ್ಞಾ ಸತವ್ ಅವರು ಗುರುವಾರ...

ಭೂ ಕಬಳಿಕೆ ಆರೋಪ : ಸದನದಲ್ಲಿ ಚರ್ಚೆಗೆ ಸಿದ್ದ ಎಂದ ಸಚಿವ ಕೃಷ್ಣ ಬೈರೇಗೌಡ

"ಸದನದ ಸದಸ್ಯನಾಗಿ ನನ್ನ ಹಕ್ಕನ್ನು ಬಿಟ್ಟುಕೊಡಲು ಸಿದ್ದನಿದ್ದೇನೆ. ನನ್ನ ಬಗ್ಗೆ ಎತ್ತಿರುವ ವೈಯಕ್ತಿಕ ಆರೋಪದ ಬಗ್ಗೆ ಚರ್ಚೆಗೆ ಸಿದ್ದ" ಎಂದು ಸಚಿವ ಕೃಷ್ಣ ಬೈರೇಗೌಡ ಹೇಳಿದರು. ಗುರುವಾರ (ಡಿ.18) ವಿಧಾನಸಭೆಯ ಶೂನ್ಯ ವೇಳೆಯಲ್ಲಿ, ವಿಧಾನಪರಿಷತ್...

ಡಿಸೆಂಬರ್ 15 ರ ಪ್ರತಿಭಟನೆಯಲ್ಲಿ ಭಾಗವಹಿಸಿದ್ದಕ್ಕಾಗಿ ಜಾಮಿಯಾ ಮಿಲಿಯಾ ವಿದ್ಯಾರ್ಥಿಗಳಿಗೆ ವಿಶ್ವವಿದ್ಯಾಲಯದಿಂದ ಶೋಕಾಸ್ ನೋಟಿಸ್‌

2019 ರಲ್ಲಿ ವಿದ್ಯಾರ್ಥಿಗಳ ಮೇಲಿನ ಹಿಂಸಾಚಾರ ನಡೆದು ಆರು ವರ್ಷಗಳು ತುಂಬಿದ್ದು, ಅದರ ವಾರ್ಷಿಕ ನೆನಪಿನಲ್ಲಿ ಜಾಮಿಯಾ ಮಿಲಿಯಾ ಇಸ್ಲಾಮಿಯಾ ವಿದ್ಯಾರ್ಥಿಗಳು ಡಿಸೆಂಬರ್ 15 ರಂದು ಕ್ಯಾಂಪಸ್ ಒಳಗೆ ದೊಡ್ಡ ಪ್ರತಿಭಟನೆ ನಡೆಸಿದ್ದರು....

ಅಮೆರಿಕದ ಸುಂಕಗಳು ತಮಿಳುನಾಡಿನ ರಫ್ತು ಕೈಗಾರಿಕೆಗಳನ್ನು ಅಂಚಿಗೆ ತಳ್ಳುತ್ತವೆ: ಪ್ರಧಾನಿ ಮೋದಿಗೆ ಸಿಎಂ ಸ್ಟಾಲಿನ್ ಎಚ್ಚರಿಕೆ

ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಅವರು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿದ್ದು, ಭಾರತದ ರಫ್ತಿನ ಮೇಲೆ ಅಮೆರಿಕ ವಿಧಿಸಿರುವ ಭಾರೀ ಸುಂಕಗಳು ರಾಜ್ಯದ ಕೆಲವು ಉದ್ಯೋಗ- ಕೈಗಾರಿಕೆಗಳನ್ನು ತೀವ್ರ ಬಿಕ್ಕಟ್ಟಿನತ್ತ...