Homeಚಳವಳಿನುಡಿನಮನ: ನೇಮಿಚಂದ್ರ ಎಂಬ ಕಾಡು ಹೂವಿನ ಜೀವನ ಗಾಥೆ

ನುಡಿನಮನ: ನೇಮಿಚಂದ್ರ ಎಂಬ ಕಾಡು ಹೂವಿನ ಜೀವನ ಗಾಥೆ

ಒಳ್ಳೆಯ ಹಾಡುಗಾರ್ತಿ ಮತ್ತು ಕಲಾವಿದೆ ಆಗಿದ್ದ ನೇಮಿ ಒಂದರ್ಥದಲ್ಲಿ ಹೋರಾಟಗಳಲ್ಲಿ ಕೇಳಿ ಬರುತ್ತಿದ್ದ ದೊಡ್ಡ ದನಿಯಾಗಿದ್ದಳು. ನೊಂದವರ ಎಲ್ಲಾ ಹೋರಾಟವು ಅವಳದ್ದೆ ಆಗಿರುತ್ತಿತ್ತು.

- Advertisement -
- Advertisement -

ಅವಳು ಸದಾ ಹರಿಯಬಯಸುವ ನದಿಯಂತಿದ್ದಳು. ಶಾಂತವಾಗಿ, ನಿರಂತರವಾಗಿ ಇಕ್ಕೆಲಗಳಲ್ಲಿ ಹರಿಯುತ್ತ ಸಾಗುವ ನದಿಯಂತಲ್ಲ. ಶಾಂತವಾಗಿ ಹರಿಯುತ್ತ, ಹರಿಯುತ್ತ ಮತ್ತೊಂದು ಘಳಿಗೆಗೆ ಒಡಲೊಳಗೆ ಪ್ರವಾಹವನ್ನು ಹೊತ್ತ ನದಿಯಂತೆ ರಭಸದಿಂದ ಹರಿಯಬಯಸುತ್ತಿದ್ದಳು. ಅಡೆ, ತಡೆಗಳನ್ನು ಗಮನಿಸದೇ ಅವುಗಳನ್ನು ಕೊಚ್ಚಿಕೊಂಡು ತನ್ನಿಚ್ಛೆಯಂತೆ ತಾನು ಬಯಸಿದ ದಿಕ್ಕುಗಳಿಗೆಲ್ಲ ಹರಿಯಬಯಸುತ್ತದ್ದಳು. ಅದಕ್ಕಾಗಿ ಅವಳು ಯಾವುದನ್ನೂ ಲೆಕ್ಕಿಸದೇ ಮುನ್ನುಗ್ಗುತ್ತಿದ್ದಳು. ತನ್ನಿಚ್ಛೆಗೆ, ತನ್ನ ಇಚ್ಛೆಯಂತೆ ಹರಿವಿಗೆ ತಡೆಯುಂಟಾಗುತ್ತಿದೆ ಅನ್ನಿಸಿದಾಗ ಎದುರು ಬರುವ ಬಂಡೆ, ಬೆಟ್ಟಗಳೇ ಅದುರಿಹೋಗುವಂತೆ ಅರ್ಭಟಿಸುತ್ತಿದ್ದಳು. ಮರು ಘಳಿಗೆಯಲ್ಲಿ ಶಾಂತವಾಗಿ ಬಯಲು ಅರಣ್ಯದಲ್ಲಿ ಹರಿದು ಹೋಗುವಂತೆ ಸಾಗುತ್ತಿದ್ದಳು. ಅವಳು ಯಾರ ಅಂಕೆಗೂ ಸಿಲುಕದಂತೆ, ಯಾವ ಅಂಕೆಗಳನ್ನೂ ಬಯಸದಂತೆ ಹರಿಯುತ್ತ, ಹರಿಯುತ್ತ ಅಕಾಲಿಕವಾಗಿ ಬತ್ತಿಹೋದ ನದಿ. ಆ ನದಿಯ ಹೆಸರು ನೇಮಿಚಂದ್ರ.

ದೇಶದ ಪ್ರಖ್ಯಾತ ಲೇಖಕಿ ನೇಮಿಚಂದ್ರರಂತೆ ಮಗಳು ಖ್ಯಾತಿ ಪಡೆಯಲಿ ಎಂಬ ಆಶಯ ತಂದೆಗೆ. ಅದೇ ಕಾರಣಕ್ಕೆ ಆ ಹೆಸರನ್ನಿಟ್ಟಿದ್ದರು. ಆ ಹೆಸರನ್ನು ಹಸಿರುಗೊಳಿಸಲೋ ಎಂಬಂತೆ ಮಗಳು ಸಮಾಜದಲ್ಲಿ ಬೆಳೆದು ನಿಂತದ್ದು, ಎಲ್ಲರ ಪ್ರೀತಿಗೆ ಪಾತ್ರರಾಗಿದ್ದು ಅವಳನ್ನು ಕಳೆದುಕೊಳ್ಳುವವರೆಗೂ ಸ್ವತಃ ತಂದೆ ಸೇರಿದಂತೆ ಯಾರ ಅರಿವಿಗೂ ಬಂದಿರಲಿಲ್ಲ. ಸ್ವತಃ ಅವಳಿಗೂ ಗೊತ್ತಿತ್ತೋ ಇಲ್ಲವೋ. ಅರಿವಿನ ಹಂಗು ತೊರೆದು ಬೆಳೆದು ನಿಂತಿದ್ದಳು. ಅವಳು ಇಲ್ಲವಾದ ದಿನ ನಾಡಿನ ಇತಿಹಾಸದಲ್ಲಿ ನೇಮಿಚಂದ್ರ ಅನ್ನುವ ಹೆಸರು ಮತ್ತೊಮ್ಮೆ ಜೋರಾಗಿ ಕೇಳಿಬಂತು. ಎಲ್ಲರನ್ನು ಮಮ್ಮಲ ಮರುಗಿಸಿ ಮುಖಪುಟದ ಚರಿತ್ರೆಯಾದಳು ಬಟ್ಟಲು ಕಂಗಳ, ಆನೆ ಮುಖದ, ಸದಾ ನಗು ಮುಖದ ಆ ಹುಡುಗಿ. ನಗುವೇ ಕಣ್ಮರೆಯಾಯಿತೇನೋ ಅನ್ನೋವಷ್ಟು ಅವಳ ನಗುಮೊಗದ ಚಿತ್ರಗಳನ್ನು ಹಾಕಿ ನೋವು ಅನುಭವಿಸಿದವರು ಅವಳ ಒಡನಾಡಿಗಳು.

ನಾನು ಚಿಕ್ಕಂದಿನಿಂದಲೇ ನೇಮಿ ಬಲ್ಲೆ. ತಂದೆ ಮಾರುತಿ ಢಗೆಣ್ಣನವರ ನೇಕಾರ, ಕಾರ್ಮಿಕ ಹೋರಾಟಗಾರರು. ಬೆಳಗಾವಿಯ ನೇಕಾರರ ಪ್ರದೇಶವಾದ ವಡಗಾಂವಿಯಲ್ಲಿ ಹೆಸರುವಾಸಿ. ಅಜ್ಜ ಭಿಮರಾವ್ ಕಾನಡೆ ಕೂಡ ಕಾರ್ಮಿಕ ಹೊರಾಟಗಾರರೇ. ಕಾರ್ಮಿಕ ಮುಖಂಡರಾದರೂ ಮಾರುತಿಯವರ ಮನೆ ಕಡು ಬಡತನ, ಕೌಟುಂಬಿಕ ಸಮಸ್ಯೆಗಳಿಂದ ತುಂಬಿ ತುಳುಕುತ್ತಿತ್ತು. ಆಗಲೇ ನೇಮಿ ಅಕ್ಕಂದಿರು ಬೆಂಗಳೂರು ಸೇರಿ ಸಂಘಟನೆಯವರ ಒಡನಾಟದಲ್ಲಿ ಶಿಕ್ಷಣ ಮುಂದುವರೆಸಿದ್ದರು. ಸಾಕಷ್ಟು ವರ್ಷಗಳ ನಂತರ ನಾನು ನೇಮಿಯನ್ನು ಕಂಡದ್ದು ಬೆಂಗಳೂರಿನಲ್ಲಿ ನಡೆಯುತ್ತಿದ್ದ ಹೋರಾಟಗಳಲ್ಲಿ. ದಿಟ್ಟ ನಿಲುವಿನ, ಗಟ್ಟಿ ದನಿಯ, ಸದಾ ನಗು ಮುಖದ ಯುವತಿಯನ್ನಾಗಿ. ಉಡುಪಿ ಚಲೋ, ದಿಡ್ಡಳ್ಳಿ ಆದಿವಾಸಿಗಳ ಹೋರಾಟ, ತುಮಕುರು ಚಲೋ, ಗುಡಿಬಂಡೆ ಚಲೋ, ಭೂಮಿ ವಸತಿ ಹೋರಾಟ.. ಮಹಿಳೆಯರ ಹೋರಾಟ ಹೀಗೆ ಪಟ್ಟಿ ಬೆಲೆಯುತ್ತಲೆ ಇದೆ. ಅವಳು ಒಳ್ಳೆಯ ಹಾಡುಗಾರ್ತಿ ಮತ್ತು ಕಲಾವಿದೆ ಆಗಿದ್ದಳು. ಒಂದರ್ಥದಲ್ಲಿ ಹೋರಾಟಗಳಲ್ಲಿ ಕೇಳಿ ಬರುತ್ತಿದ್ದ ದೊಡ್ಡ ದನಿಯಾಗಿದ್ದಳು. ನೊಂದವರ ಎಲ್ಲಾ ಹೋರಾಟವು ಅವಳದ್ದೆ ಆಗಿರುತ್ತಿತ್ತು.

ಯಾವುದೇ ಹೋರಾಟಗಳು, ಕಾರ್ಯಕ್ರಮಗಳಿರಲಿ ಅಲ್ಲಿರುತ್ತಿದ್ದ ನೇಮಿ ಓಡಾಡಿಕೊಂಡು ನಗುನಗುತ್ತ ಎಲ್ಲರನ್ನು ಮಾತನಾಡಿಸುತ್ತಿದ್ದಳು. ಅವಳ ಒಡನಾಟದಲ್ಲಿದ್ದ ಬಹುಪಾಲು ಸಂಗಾತಿಗಳು ನನಗೆ ಪರಿಚಿತರು ಅಂತ ಗೊತ್ತಾದ ನಂತರ ಸ್ವಲ್ಪ ಹೆಚ್ಚಿನ ಸಲುಗೆಯಿಂದ ಇರುತ್ತಿದ್ದಳು. ಸಣ್ಣಪುಟ್ಟ ಸಹಾಯವನ್ನು ಕೇಳುತ್ತಿದ್ದಳು. ನಾನು ಆಗಲೂ ಅವಳನ್ನು ಸಣ್ಣ ಮಗವಿನಂತೆಯೇ ನೋಡುತ್ತಿದ್ದೆ. ನಗುತ್ತ ಬಂದು ಪಕ್ಕದಲ್ಲಿ ನಿಂತು ಕುಟುಂಬದ ಸದಸ್ಯರನ್ನು ವಿಚಾರಿಸುವಂತೆ ಎಲ್ಲದರ ವಿಚಾರಣೆಯನ್ನೂ ನಡೆಸುತ್ತಿದ್ದಳು. ನಂತರ ಅವಳು ನನಗೆ ಬಹಳ ಹತ್ತಿರವಾದದ್ದು ಅವಳು ಬೆಳಗಾವಿಗೆ ಬಂದ ನಂತರ. ಅನಾರೋಗ್ಯದ ತಾಯಿಯನ್ನು ನೋಡಿಕೊಳ್ಳಬೇಕೆಂಬ ಕಾರಣಕ್ಕೆ ಅವಳು ಬೆಳಗಾವಿಗೆ ಬಂದಿದ್ದಳು. ನಮ್ಮ ಸಂಘಟನೆಯ ಕಾರ್ಯಕ್ರಮಗಳಲ್ಲಿ ಭಾಗವಹಿಸುತ್ತಿದ್ದಳು. ನಮ್ಮ ಕಚೇರಿಗೆ ಬರುತ್ತಿದ್ದಳು. ಕೆಲವೇ ದಿನಗಳಲ್ಲಿ ನಮ್ಮ ಸಂಘಟನೆಯ ಬಹಳಷ್ಟು ಜನರಿಗೆ ಆತ್ಮೀಯಳಾಗಿ ಬಿಟ್ಟಳು. ನಮ್ಮ ಕಾರ್ಯಕ್ರಮಗಳಲ್ಲಿ ಅವಳು ಕೂಗುತ್ತಿದ್ದ ಘೋಷಣೆಗಳು ಎಲ್ಲರ ಗಮನ ಸೆಳೆಯುತ್ತಿದ್ದವು.

ನನಗೆ ವಾಸ್ತವದ ನೇಮಿ ಅರ್ಥವಾಗತೊಡಗಿದ್ದು ಆಗಲೇ. ಅವಳನ್ನು ಹತ್ತಿರದಲ್ಲಿಟ್ಟುಕೊಂಡು ನಿಭಾಯಿಸಬೇಕಾದ ಅನಿವಾರ್ಯಯತೆ ಬಂತು. ಆಗ ನನಗೆ ಗೊತ್ತಾಗಿದ್ದು, ಎಲ್ಲರೊಂದಿಗೆ ಆತ್ಮೀಯವಾಗಿ ಒಡನಾಡುತ್ತಿದ್ದ ನಗು ಮೊಗದ ನೇಮಿ ಅದಷ್ಟೇ ಆಗಿರಲಿಲ್ಲ. ಸದಾ ಕುದಿಯುವ ಲಾವಾರಸವನ್ನು ಒಳಗೆ ಹುದುಗಿಟ್ಟುಕೊಂಡಿದ್ದ ಜ್ವಾಲಾಮುಖಿಯಾಗಿದ್ದಳು. ಮೇಲ್ನೋಟಕ್ಕೆ ಶಾಂತವಾಗಿ ಕಂಡರೂ ಆಗಾಗ ಸ್ಪೋಟಿಸುತ್ತಿದ್ದಳು. ಆ ಸ್ಪೋಟದ ತೀವ್ರತೆ ಎಷ್ಟಿರುತ್ತಿತ್ತೆಂದರೆ ಎದುರಿಗಿರುವವರು ಬೆಚ್ಚಿಬೀಳಬೇಕು. ಆಗ ಅವಳನ್ನು ನಿಭಾಯಿಸಲು ಯಾರಿಂದಲೂ ಸಾಧ್ಯವಾಗುತ್ತಿರಲಿಲ್ಲ. ತನ್ನೊಳಗಿರುವ ನೋವಿಗೆಲ್ಲ ಆ ಕ್ಷಣಕ್ಕೆ ಸಿಕ್ಕವರನ್ನು ಹೊಣೆಗಾರರನ್ನಾಗಿಸಿ ದಾಳಿ ನಡೆಸುತ್ತಿದ್ದ ಅವಳು ಸಿಟ್ಟು ಕಡಿಮೆಯಾದ ನಂತರ ಏನೂ ನಡೆದೇ ಇಲ್ಲವೇನೋ ಎಂಬಂತೆ ಸಹಜವಾಗಿ ಇದ್ದು ಬಿಡುತ್ತಿದ್ದಳು. ಎದುರಿಗಿರುವ ವ್ಯಕ್ತಿ ಅದಕ್ಕೆ ಕಾರಣ ಹುಡುಕುವಷ್ಟರಲ್ಲಿ ಹಿಂದಿನದನ್ನೆಲ್ಲ ಮರೆತು ಮತ್ತೆ ನಗುವಿನೊಂದಿಗೆ ಎದುರು ನಿಲ್ಲುತ್ತಿದ್ದಳು. ಒಡಲಾಳದಲ್ಲಿ ಕಂಪನಗಳನ್ನಿಟ್ಟುಕೊಂಡ ಅವಳ ಮನಸ್ಸಿನ ಸಮುದ್ರದಲ್ಲಿ ಅಲೆಗಳು ಏಳುವುದು, ಅಪ್ಪಳಿಸುವುದು ಅವು ಯಾವವೂ ಅವಳ ಅಂಕೆಯಲ್ಲಿ ಇರಲಿಲ್ಲ. ಅದಕ್ಕೆ ಭಾಗಶ: ಅವಳು ಬೆಳೆದ ಕೌಟುಂಬಿಕ ಪರಿಸರವೇ ಕಾರಣವಾಗಿತ್ತು.

ಲೋಕ ವಿರೋಧಿಗಳಂತೆ ಎಲ್ಲರನ್ನು ವಿರೋಧಿಸುತ್ತಿದ್ದ ಅವಳು ಕೆಲ ಸಮಯದಲ್ಲಿಯೇ ವಾತ್ಸಲ್ಯದ ಸರೋವರವಾಗಿಬಿಡುತ್ತಿದ್ದಳು. ಅವಳಿಗೆ ಹೊದಿಕೆಗಳಿರಲಿಲ್ಲ. ಸಭ್ಯತೆ, ಸಜ್ಜನಿಕೆ, ಘನತೆ ಇಂಥವೆಲ್ಲ ಆಗಿಬರುತ್ತಿರಲಿಲ್ಲ. ಯಾವುದೇ ಕಾರಣಕ್ಕೆ ಸಿಟ್ಟು ಬಂದರೂ ಸಾಕು ಸಮಯ ಸಂದರ್ಭ ನೋಡದೇ ಮುಖಮೂತಿ ಯಾವುದನ್ನೂ ನೋಡದೇ ಆ ಕ್ಷಣದಲ್ಲಿ ಅವಳ ಮನದಲ್ಲಿ ಏಳುತ್ತಿದ್ದ ಸಿಟ್ಟಿನ ಅಲೆಗಳನ್ನು ನಮಗೆ ದಾಟಿಸಿ ಅವಳು ನಿರಾಳವಾಗಿ ನಗುತ್ತ ನಿಂತು ಬಿಡುತ್ತಿದ್ದಳು. ಎದುರಿಗಿನವರು ಆಘಾತದಿಂದ ಚೇತರಿಸಿಕೊಳ್ಳುವಷ್ಟರಲ್ಲಿ ಹಿಂದಿನದನ್ನೆಲ್ಲ ಮರೆತು ಹೊಸ ರೂಪದೊಂದಿಗೆ ಎದುರು ನಿಲ್ಲುತ್ತಿದ್ದಳು. ಕೆಲ ಕ್ಷಣದ ಹಿಂದಿದ್ದ ಹುಡುಗಿ ಇವಳೇನಾ? ಅನ್ನುವಷ್ಟು ಪ್ರೀತಿ ತುಂಬಿದ, ಅಂತಃಕರಣ ತುಂಬಿದ ವಾತ್ಸಲ್ಯ ಮೂರ್ತಿಯಂತೆ ಕಂಗೊಳಿಸುತ್ತದ್ದಳು. ಅವಳು ಎಲ್ಲರನ್ನೂ ವಿರೋಧಿಸುತ್ತಿದ್ದಳು ಮತ್ತು ಪ್ರೀತಿಸುತ್ತಿದ್ದಳು. ಹಾಗೆಯೇ…. ಎಲ್ಲರನ್ನೂ ಅವಳು ಕಳೆದುಕೊಂಡಿದ್ದಳು. ತನ್ನದೇ ಲೋಕದಿಂದ, ಕುಟುಂಬ ಸಂಬಂಧಗಳಿಂದ ಏನನ್ನು ಬಯಸುತ್ತಿದ್ದಳೊ ಅವುಗಳನ್ನು ಅವಳು ಕಳೆದುಕೊಂಡಿದ್ದಳು. ಅದೇ ಕಾರಣಕ್ಕೆ ಅವುಗಳನ್ನು ಬಯಸುತ್ತಿದ್ದಳು. ಅದಕ್ಕಾಗಿ ಹಂಬಲಿಸುತ್ತಿದ್ದಳು, ಸಿಗದೆ ಇದ್ದಾಗ ಸಿಡಿದು ಬೀಳುತ್ತಿದ್ದಳು.

ಆಗ ಅವಳಿಗೆ ಜಗತ್ತನ್ನೇ ವಿರೋಧಿಸಿ ಬದುಕುವ ಶಕ್ತಿ ಸಂಚಯವಾಗುತ್ತಿತ್ತು. ಹಾಗೇ ಬದುಕುತ್ತಿದ್ದಳು. ಬಿರುಗಾಳಿಯಂತೆ ಬದುಕಬೇಕೆಂದೇನೂ ಅವಳು ಬಯಸಿರಲಿಲ್ಲ. ತಂಗಾಳಿಯಂತೆ ತೇಲಬೇಕೆಂಬ ಎಲ್ಲ ಬಯಕೆಗಳೂ ಇದ್ದವು. ಅದಕ್ಕೆ ಅವಕಾಶ ಎಲ್ಲಿತ್ತು?

ಹುಟ್ಟಿ ಬೆಳೆಯುತ್ತಲೇ ಬದುಕೆಲ್ಲ ಮನೆಯಾಚೆಗಿನ ಲೋಕದೊಂದಿಗೆ ತನ್ನದು, ತನ್ನವರು ಅನ್ನುವವರೆಲ್ಲ ಬದುಕಿನ ಬಗ್ಗೆ ಭರವಸೆಯನ್ನೇ ಮೂಡಿಸದಾದಾಗ ಜಗತ್ತೇ ತನ್ನದು ಎಂದು ಬಯಲಾಗಿ ಬದುಕಿದಳು. ಬಯಲು ಅಂದ್ರೆ ಗಡಿ ಇರದ ಸಂಬಂಧಗಳೇ ಅವಳ ಸ್ವತ್ತು. ಅವಳು ಎಲ್ಲರ ಮೇಲೂ ತನ್ನ ಹಕ್ಕನ್ನು ಹೊಂದಿರುತ್ತಿದ್ದಳು. ಎಲ್ಲರೂ ತನ್ನವರೇ ಎಂದುಕೊಂಡಿದ್ದಳು. ಆದರೆ ಅವಳು ಬಯಸಿದ್ದು ಸಿಗದೇ ಇದ್ದಾಗ ಎದುರುಗೊಳ್ಳುತ್ತಿದ್ದಳು. ಹರಿಯುವ ನದಿ, ತನ್ನ ಹರಿವನ್ನು ರಕ್ಷಿಸುವ ಪಾತ್ರವನ್ನೇ ಸವೆಸುವಂತೆ.

ಅವಳು ಬದುಕಿದ್ದು ಬಿರುಗಾಳಿಯಂತೆ, ತಂಗಾಳಿಯಂತೆ, ಸಾರಾಶಗುಪ್ತಾಳ ಬದುಕಿನಂತೆ. ಅವಳ ಕವಿತೆಗಳಂತೆ.. ಅವಳ ಬದುಕಿಗೆ ಯಾವ ಅಂಕೆಗಳೂ ಇದ್ದಂತಿರಲಿಲ್ಲ… ಅಂತಿಮವಾಗಿ ಅವಳು ಬಯಸಿದ್ದು… ಹಿಡಿಯಷ್ಟು ಪ್ರೀತಿಯನ್ನು, ಭರವಸೆಯನ್ನು, ಬೆಂಬಲವನ್ನು. ಆದರೆ ಅವಳನ್ನು ನಿಭಾಯಿಸುವುದು ಅತ್ಯಂತ ಕಷ್ಟದ ಕೆಲಸವಾಗಿತ್ತು. ಅವಳು ನಿಭಾಯಿಸುವವರನ್ನು ಅಸಹಾಯಕರನ್ನಾಗಿಸಿ ಗೋಳಾಡಿಸಿ ಬಿಡುತ್ತಿದ್ದಳು. ಇವಳ ಸಹವಾಸವೇ ಬೇಡ ಅನ್ನಿಸುವಷ್ಟು ಹಠ, ಆವೇಶ.

ಕೊನೆಯದಾಗಿ ಅವಳನ್ನು ತಮ್ಮ ಮಗಳಂತೆ ಹೆಚ್ಚು ಪ್ರೀತಿ, ಕಾಳಜಿಯಿಂದ ನೋಡಿಕೊಂಡಿದ್ದ ಚಳುವಳಿಯ ಹಿರಿಯ ಸಂಗಾತಿ ನೂರ್ ಶ್ರೀಧರ್ ಅವರು ಬರೆದಿರುವ ಕೆಲ ಮಾತುಗಳು.

“ಕಾಡು ಹೂವಿನ ಜೀವನ ಗಾಥೆ. ಇದರಲ್ಲಿ ಹೂವು ಮತ್ತು ಮುಳ್ಳು ಎರಡೂ ಇದೆ. ನೇಮಿ ಎರಡರ ಮಿಶ್ರಣ. ನಿನ್ನೆ ತಾವೆಲ್ಲಾ ಕೊಂಡಾಡಿದ ಅದ್ಭುತ ಗುಣಗಳ ಜೊತೆ ಅಷ್ಟೇ ವಿಚಲಿತಗೊಳಿಸುವ ದೌರ್ಬಲ್ಯಗಳನ್ನೂ ಹೊಂದಿದ ವ್ಯಕ್ತಿತ್ವ ನೇಮಿಯದು. ಕಾಡು ಹೂವಿನ ಕುರಿತು ಕವನ ಬರೆಯುವುದು ಸುಲಭ, ದೂರದಿಂದ ನಿಂತು ಆಸ್ವಾದಿಸುವುದು ಸುಲಭ. ಅದರ ಜೊತೆ ಬಾಳ್ವೆ ಮಾಡುವುದು ಸುಲಭವಲ್ಲ. ಮುಳ್ಳಿನ ರುಚಿ ಮನೆಯವರಿಗೆ, ನೆರೆಯವರಿಗೆ, ಜೊತೆ ಸೇರಿ ಕೆಲಸ ಮಾಡುವವರಿಗೆ ಮಾತ್ರ ಗೊತ್ತಿರುತ್ತದೆ. ಕಾಡು ಹೂವಿನ ದ್ವಂದ್ವವೆಂದರೆ ದೂರದವರಿಗೆ ಚಂದಕಾಣುತ್ತದೆ. ಜೊತೆಗಿದ್ದವರಿಗೆ ಚುಚ್ಚಿ ಕಿರಿಕಿರಿ ಮಾಡುತ್ತದೆ. ಹತ್ತಿರವಿರುವವರು ಮುಳ್ಳನ್ನು ಮಾತ್ರ ನೋಡದೆ ಹೂವಿನ ಪರಿಮಳವನ್ನು ಆಸ್ವಾದಿಸುವುದ ಕಲಿಯಬೇಕು. ದೂರವಿರುವವರು ಅಂದದ ಗುಂಗಿನಲ್ಲಿ ಮಾತ್ರ ಮುಳುಗದೆ ಅದರ ಮುಳ್ಳುಗಳು ಸೃಷ್ಟಿಸಿರಬಹುದಾದ ಸಂಕಟವನ್ನೂ ಕಲ್ಪಿಸಿಕೊಳ್ಳುವಂತಾಗಬೇಕು.. ನೇಮಿಯ ಬದುಕನ್ನು ಬಿಚ್ಚಲು ನಾನು ಹೋಗುವುದಿಲ್ಲ. ಅದರ ಅಗತ್ಯವೂ ಇಲ್ಲ. ಕಾಡು ಹೂವು ಕಾಡು ಹೂವು ಅಷ್ಟೇ”

ಸಣ್ಣ ವಯಸ್ಸು, ಬದುಕಬೇಕಾದ ಜೀವ, ಚಳವಳಿಗೆ ನೀಡಬೇಕಾದ ಕೊಡುಗೆ ಇನ್ನೂ ಇತ್ತು. ಇಷ್ಟು ಬೇಗ ನಮ್ಮಿಂದ ದೂರವಾಗಬಾರದಿತ್ತು ಎಂಬ ನೋವಿನೊಂದಿಗೆ “ಹತ್ತಿರವಿರುವವರು ಮುಳ್ಳನ್ನು ಮಾತ್ರ ನೋಡದೆ ಹೂವಿನ ಪರಿಮಳವನ್ನು ಆಸ್ವಾದಿಸುವುದನ್ನು ಕಲಿಯಬೇಕು” ಎಂಬ ನೂರ್ ಶ್ರೀಧರ್ ಅವರ ಮಾತು ನಮ್ಮನ್ನು ಸದಾಕಾಲ ಕಾಡಲಿದೆ.

ನಿನ್ನನ್ನು ನಿಭಾಯಿಸಲಾಗದ ನಮ್ಮ ಅಸಹಾಯಕತೆಗಾಗಿ
“ನಮ್ಮನ್ನು ಕ್ಷಮಿಸಿಬಿಡು ನೇಮಿ”


ಇದನ್ನೂ ಓದಿ: ನಟಿ ಪಾರ್ವತಿ ತಿರುವೋತ್ ಅವರನ್ನು ನಿರಂತರ ಹಿಂಬಾಲಿಸಿ ಕಿರುಕುಳ ನೀಡಿದ ವ್ಯಕ್ತಿ ಬಂಧನ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

1 COMMENT

LEAVE A REPLY

Please enter your comment!
Please enter your name here

- Advertisment -

Must Read

ಪ್ರಧಾನಿ ಮೋದಿ ಚುನಾವಣೆಯಲ್ಲಿ ಸ್ಪರ್ಧಿಸದಂತೆ ನಿರ್ಬಂಧ ವಿಧಿಸಲು ಕೋರಿ ದೆಹಲಿ ಹೈಕೋರ್ಟ್‌ಗೆ ಅರ್ಜಿ

0
ಲೋಕಸಭೆ ಚುನಾವಣೆಗೆ "ದೇವರು ಮತ್ತು ಪೂಜಾ ಸ್ಥಳಗಳ" ಹೆಸರಿನಲ್ಲಿ ಮತ ಕೇಳುವ ಮೂಲಕ ಮಾದರಿ ನೀತಿ ಸಂಹಿತೆ (ಎಂಸಿಸಿ) ಉಲ್ಲಂಘಿಸಿರುವ ಆರೋಪದ ಮೇಲೆ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಕ್ರಮ ಕೈಗೊಳ್ಳುವಂತೆ ದೆಹಲಿ...