Homeಮುಖಪುಟಮಹಿಳಾ ಹೋರಾಟಗಾರ್ತಿಯರಿಗೆ ಅವಮಾನ: ವೀರ ರಾಣಿ ಅಬ್ಬಕ್ಕ ದೇವಿ ಪಾಠ ಕೈಬಿಟ್ಟ ಚಕ್ರತೀರ್ಥ ಸಮಿತಿ

ಮಹಿಳಾ ಹೋರಾಟಗಾರ್ತಿಯರಿಗೆ ಅವಮಾನ: ವೀರ ರಾಣಿ ಅಬ್ಬಕ್ಕ ದೇವಿ ಪಾಠ ಕೈಬಿಟ್ಟ ಚಕ್ರತೀರ್ಥ ಸಮಿತಿ

7ನೇ ತರಗತಿ ಸಮಾಜ ವಿಜ್ಞಾನ-2 ಪಠ್ಯದಿಂದ ಹೋರಾಟಗಾರ್ತಿಯರಾದ ಬಳ್ಳಾರಿ ಸಿದ್ದಮ್ಮ, ಯಶೋಧರಮ್ಮ ದಾಸಪ್ಪ, ಉಮಾಬಾಯಿ ಕುಂದಾಪುರರವರ ಪಾಠ ಕೈಬಿಡಲಾಗಿದೆ.

- Advertisement -
- Advertisement -

ಬಿಜೆಪಿ ಸರ್ಕಾರದ ನೂತನ ಪಠ್ಯ ಪರಿಷ್ಕರಣೆ ಸಮಿತಿಯ ಮಾಡಿರುವ ತಿದ್ದುಪಡಿಗಳಿಗೆ ತೀವ್ರ ವಿರೋಧ ವ್ಯಕ್ತವಾಗುತ್ತಿರುವ ಸಂದರ್ಭದಲ್ಲಿ ಮತ್ತೊಂದು ಅನಾಹುತ ಕಂಡುಬಂದಿದೆ. 7ನೇ ತರಗತಿ ಸಮಾಜ ವಿಜ್ಞಾನ-2 ಪಠ್ಯದಿಂದ ಕರ್ನಾಟಕದ ಮಹಿಳಾ ಹೋರಾಟಗಾರರಾದ ಉಲ್ಲಾಳದ ರಾಣಿ ಅಬ್ಬಕ್ಕ ದೇವಿ, ಬಳ್ಳಾರಿ ಸಿದ್ದಮ್ಮ, ಯಶೋಧರಮ್ಮ ದಾಸಪ್ಪ ಮತ್ತು ಉಮಾಬಾಯಿ ಕುಂದಾಪುರರವರ ಪಾಠ ಕೈಬಿಡಲಾಗಿದೆ.

ಕಳೆದ ವರ್ಷ 7ನೇ ತರಗತಿಯ ಮಕ್ಕಳು ‘ಮಹಿಳಾ ಸ್ವಾತಂತ್ರ್ಯ ಹೋರಾಟಗಾರರು’ ಎಂಬ ಪಾಠದಲ್ಲಿ ಬಹಳ ವಿವರವಾಗಿ ಕರ್ನಾಟಕದ ಹೋರಾಟಗಾರ್ತಿಯರ ಬಗ್ಗೆ ಅಭ್ಯಸಿಸಿದ್ದರು. ಗಾಂಧಿ ಪೂರ್ವ ಸ್ವಾತಂತ್ರ್ಯ ಹೋರಾಟದಲ್ಲಿ ಕಿತ್ತೂರು ರಾಣಿ ಚೆನ್ನಮ್ಮ, ಕೆಳದಿ ಚೆನ್ನಮ್ಮರ ಸಾಲಿನಲ್ಲಿ ನಿಲ್ಲುವ ಮತ್ತೊಬ್ಬ ಮಹಿಳೆ ಎಂದು ಹೆಸರಿಸಿ ರಾಣಿ ಅಬ್ಬಕ್ಕದೇವಿಯವರ ಪಾಠ ಇಡಲಾಗಿತ್ತು. ಅದರಲ್ಲಿ ಅವರು ಪೋರ್ಚುಗೀಸರ ವಿರುದ್ಧ ಕಾದಾಡಿದ್ದ ವಿವರಗಳಿದ್ದವು. ಉಳ್ಳಾಲದ ರಾಣಿ ಅಬ್ಬಕ್ಕ ಪೋರ್ಚುಗೀಸರಿಗೆ ಕಪ್ಪ ಕೊಡಲು ನಿರಾಕರಿಸಿದಾಗ 1568ರಲ್ಲಿ ಅವರು ದಾಳಿ ನಡೆಸುತ್ತಾರೆ. ಅದನ್ನು ಅಬ್ಬಕ್ಕ ಹಿಮ್ಮೆಟ್ಟಿಸಿದ್ದ ವಿವರಗಳನ್ನು ನೀಡಲಾಗಿತ್ತು. ಆದರೆ ನೂತನ ಪಠ್ಯ ಪರಿಷ್ಕರಣೆಯಲ್ಲಿ ಆ ಪಠ್ಯ ಕೈಬಿಡಲಾಗಿದೆ.

ಅದೇ ರೀತಿಯಾಗಿ ಕಳೆದ ವರ್ಷದ ಪಠ್ಯದಲ್ಲಿ ಕರ್ನಾಟಕದ ದಿಟ್ಟ ಹೋರಾಟಗಾರ್ತಿಯರಾದ ಬಳ್ಳಾರಿ ಸಿದ್ದಮ್ಮ, ಯಶೋಧರಮ್ಮ ದಾಸಪ್ಪ ಮತ್ತು ಉಮಾಬಾಯಿ ಕುಂದಾಪುರರವರ ಪಾಠವಿತ್ತು. ಅದನ್ನು ತೆಗೆದುಹಾಕಿರುವ ನೂತನ ಸಮಿತಿಯು ಕರ್ನಾಟಕ ಸಮಾಜಿಮುಖಿ ಚಳವಳಿಗಳ ಎಂಬ ಪಠ್ಯದಲ್ಲಿ ಕೇವಲ ಕಮಲಾದೇವಿ ಚಟ್ಟೋಪಾಧ್ಯಾಯ ಮತ್ತು ಅರುಣಾ ಅಸಫ್ ಅಲಿಯವರ ಪಠ್ಯ ಮಾತ್ರ ಇರಿಸಿಕೊಂಡಿದೆ. ಅವರ ಕುರಿತು ಸಮರ್ಪಕ ವಿವರಗಳಿಲ್ಲದೆ ಕೇವಲ 4 ಪ್ಯಾರಗಳಲ್ಲಿ ಮೇಲುಮಟ್ಟಕ್ಕೆ ಪರಿಚಯಿಸಿ ಕೈತೊಳೆದುಕೊಳ್ಳಲಾಗಿದೆ.

ನಮ್ಮ ಮಕ್ಕಳು ಏಕೆ ಕನ್ನಡದ ಹೋರಾಟಗಾರರ ಬಗ್ಗೆ ಅದರಲ್ಲಿಯೂ ಮಹಿಳಾ ಹೋರಾಟಗಾರ್ತಿಯರ ಬಗ್ಗೆ ತಿಳಿದುಕೊಳ್ಳಬಾರದು ಎಂಬ ಪ್ರಶ್ನೆ ಎದ್ದಿದೆ. “ಕಪ್ಪ, ನಿಮಗೇಕೆ ಕೊಡಬೇಕು ಕಪ್ಪ? ನಮ್ಮ ದೇಶಕ್ಕೆ ಕಳ್ಳರಂತೆ ನುಗ್ಗಿರುವ ನಿಮಗೆ ಕಪ್ಪ ಕೊಟ್ಟು ಹೇಡಿ ಎನಿಸಿಕೊಳ್ಳುವುದಕ್ಕಿಂತ ಹೋರಾಡಿ ಸಾಯುವುದೇ ಲೇಸು” ಎಂದು ಹೇಳಿದ್ದ ವೀರ ರಾಣಿ ಅಬ್ಬಕ್ಕನವರ ಪಠ್ಯ ಕೈಬಿಟ್ಟಿದ್ದೇಕೆ ಎಂದು ನೂತನ ಸಮಿತಿಯು ಉತ್ತರಿಸಬೇಕಿದೆ.

ಅದೇ ರೀತಿಯಾಗಿ ಸ್ವಾತಂತ್ರ್ಯ ಚಳವಳಿಯ ಇತಿಹಾಸದಲ್ಲಿ ಪ್ರಾಣತೆತ್ತ ನೂರಾರು ಮಹಿಳೆಯರ ಜೀವನ ಚಿತ್ರಣಗಳು ಹೂತು ಹೋಗಿವೆ. ಇರುವ ಕೆಲವರ ಬಗ್ಗೆಯಾದರೂ ನಮ್ಮ ಮಕ್ಕಳು ಓದಿ ಅವರನ್ನು ಆದರ್ಶವನ್ನಾಗಿ ಪರಿಗಣಿಸಬೇಕು. ಆದರೆ ನೂತನ ಸಮಿತಿಯು ಅಂತಹ ಮಹಿಳಾ ಹೋರಾಟಗಾರ್ತಿಯರ ಪಠ್ಯವನ್ನೇ ಕೈಬಿಟ್ಟಿರುವುದು ದುರಂತ.

ಇದನ್ನೂ ಓದಿ: ಕನ್ನಡ ದ್ರೋಹಿಯ ಮರು ಪರಿಷ್ಕರಣೆಯಲ್ಲಿ ‘ಡಾ. ರಾಜ್‌’ ಪಠ್ಯ ಇದ್ದರೆ, ಅವರಿಗೆ ಅವಮಾನ ಮಾಡಿದಂತೆ: ವರನಟನ ಪಾಠ ವಾಪಾಸ್

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -