ಮದ್ರಾಸ್ ಹೈಕೋರ್ಟ್ ಆದೇಶದ ಮೇರೆಗೆ ತಿರುವಲ್ಲೂರು ಪೊಲೀಸರು ಸೋಮವಾರ, 16 ವರ್ಷದ ಬಾಲಕನ ಅಪಹರಣ ಪ್ರಕರಣದಲ್ಲಿ ಭಾಗಿಯಾಗಿರುವ ಆರೋಪದ ಮೇಲೆ ತಮಿಳುನಾಡಿನ ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ (ಎಡಿಜಿಪಿ) ಎಚ್‌ಎಂ ಜಯರಾಮ್ ಅವರನ್ನು ಬಂಧಿಸಿದ್ದಾರೆ.
ತನಿಖೆಯನ್ನು ತಡೆದಿದ್ದಕ್ಕಾಗಿ ನ್ಯಾಯಾಲಯವು ಕೆ.ವಿ. ಕುಪ್ಪಂ ಶಾಸಕ ಮತ್ತು ಪುಥಿಯಾ ಭಾರತಮ್ ‘ಪೂವೈ’ ಅಧ್ಯಕ್ಷ ಜಗನ್ ಮೂರ್ತಿ ಅವರನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡಿದ್ದು, “ಯಾರೂ ಕಾನೂನಿಗಿಂತ ದೊಡ್ಡವರಲ್ಲ” ಎಂದು ಕಿಡಿಕಾರಿದೆ.
ಬಾಲಕನ ತಾಯಿ ಲಕ್ಷ್ಮಿ ನೀಡಿದ ದೂರಿನ ಮೇರೆಗೆ ಈ ಪ್ರಕರಣ ದಾಖಲಾಗಿದ್ದು, ಅವರ ಹಿರಿಯ ಮಗ ಧನುಷ್ (23) ಕುಟುಂಬದವರ ಇಚ್ಛೆಗೆ ವಿರುದ್ಧವಾಗಿ ವಿಜಯ ಶ್ರೀ (21) ಎಂಬ ಯುವತಿಯನ್ನು ಮದುವೆಯಾಗಿದ್ದಾನೆ ಎಂದು ಆರೋಪಿಸಲಾಗಿದೆ. ದಂಪತಿ ತಲೆಮರೆಸಿಕೊಂಡಿದ್ದಾಗ, ಹುಡುಗಿಯ ಕುಟುಂಬವು ಧನುಷ್ ಅವರ ಕಿರಿಯ ಸಹೋದರ ಇಂದ್ರಚಂದ್ (16) ಅವರನ್ನು ಮೇ 10 ರಂದು ತಿರುವಲಂಗಾಡು ಬಳಿಯ ಅವರ ಮನೆಯಿಂದ ಅಪಹರಿಸಿದೆ ಎಂದು ಆರೋಪಿಸಲಾಗಿದೆ. ನಂತರ ಬಾಲಕನನ್ನು ಗಾಯಗೊಂಡ ಸ್ಥಿತಿಯಲ್ಲಿ ಹೋಟೆಲೊಂದರ ಬಳಿ ಬಿಟ್ಟು ಹೋಗಿರುವುದಾಗಿ ವರದಿಯಾಗಿದೆ.
ಲೈವ್‌ಲಾ ಪ್ರಕಾರ, ದಂಪತಿಯನ್ನು ಪತ್ತೆ ಹಚ್ಚಲು ವಿಫಲವಾದ ನಂತರ ಯುವತಿಯ ಕುಟುಂಬ ಸಹಾಯಕ್ಕಾಗಿ ಶಾಸಕರನ್ನು ಸಂಪರ್ಕಿಸಿದೆ. ಶಾಸಕರು ಅಪಹರಣಕ್ಕೆ ಸಂಚು ರೂಪಿಸಿದ್ದಾರೆ ಎಂದು ಆರೋಪಿಸಲಾಗಿದೆ ಮತ್ತು ನಂತರ ಪೊಲೀಸರು ಅವರನ್ನು ಪ್ರಶ್ನಿಸದಂತೆ ತಡೆದಿದ್ಧಾರೆ. ಪಕ್ಷದ ಬೆಂಬಲಿಗರು ಅವರ ಮನೆಯನ್ನು ಸುತ್ತುವರೆದಿದ್ದರು.
ಈ ನಡುವೆ, ಎಡಿಜಿಪಿ ಜಯರಾಮ್ ಅವರ ಅಧಿಕೃತ ವಾಹನವನ್ನು ಬಳಸಿಕೊಂಡು ಬಾಲಕನನ್ನು ಅಪಹರಣ ಮಾಡಲಾಗಿದೆ ಎಂದು ಬಂಧಿತ ಇಬ್ಬರು ಶಂಕಿತರು ಒಪ್ಪಿಕೊಂಡಿದ್ದಾರೆ ಎಂದು ಟೈಮ್ಸ್ ಆಫ್ ಇಂಡಿಯಾ ವರದಿ ಮಾಡಿದೆ. ಅವರ ಜೊತೆ ಮಾಜಿ ಪೊಲೀಸ್ ಅಧಿಕಾರಿ ಮಹೇಶ್ವರಿ ಮತ್ತು ವಕೀಲ ಶರತ್ ಇದ್ದರು ಎನ್ನಲಾಗಿದೆ.
ಶಾಸಕ ಜಗನ್ ಮೂರ್ತಿ ಸಲ್ಲಿಸಿದ್ದ ನಿರೀಕ್ಷಣಾ ಜಾಮೀನು ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಪಿ. ವೇಲ್ಮುರುಗನ್, ಎಡಿಜಿಪಿ ವಿರುದ್ಧ ಕ್ರಮ ಕೈಗೊಳ್ಳುವಲ್ಲಿ ವಿಳಂಬ ಮಾಡಿದ್ದಕ್ಕಾಗಿ ಪೊಲೀಸರನ್ನು ಟೀಕಿಸಿದ್ದಾರೆ. ವಿಚಾರಣೆಯ ಸಮಯದಲ್ಲಿ, ಹೆಚ್ಚುವರಿ ಪಬ್ಲಿಕ್ ಪ್ರಾಸಿಕ್ಯೂಟರ್ ದಾಮೋದರನ್ ನ್ಯಾಯಾಲಯಕ್ಕೆ ಮಾಹಿತಿ ನೀಡಿ, ಪೊಲೀಸರು ಮೊದಲು ಶಾಸಕರನ್ನು ಪ್ರಶ್ನಿಸಲು ಉದ್ದೇಶಿಸಿದ್ದರಿಂದ ಎಡಿಜಿಪಿ ವಿರುದ್ಧ ಇನ್ನೂ ಪ್ರಕರಣ ದಾಖಲಾಗಿಲ್ಲ ಎಂದಿದ್ದಾರೆ. ನಂತರ ನ್ಯಾಯಾಧೀಶರು ಶಾಸಕರು ಮತ್ತು ಎಡಿಜಿಪಿ ಇಬ್ಬರನ್ನೂ ನ್ಯಾಯಾಲಯಕ್ಕೆ ಹಾಜರಾಪಡಿಸುವಂತೆ ನಿರ್ದೇಶಿಸಿದ್ಧಾರೆ.
ನ್ಯಾಯಾಲಯದಲ್ಲಿ, ನ್ಯಾಯಮೂರ್ತಿ ವೇಲ್ಮುರುಗನ್ ಅವರು ಶಾಸಕರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ : “ನೀವು ಸಾಮಾನ್ಯ ವ್ಯಕ್ತಿಯಲ್ಲ. ನೀವು ನಾಗರಿಕರಿಗೆ ಮಾದರಿಯಾಗಿರಬೇಕು. ಬದಲಾಗಿ, ನೀವು ಮೂರನೇ ದರ್ಜೆಯ ವ್ಯಕ್ತಿಯಂತೆ ವರ್ತಿಸುತ್ತಿದ್ದೀರಿ. ಜನರು ನಿಮಗೆ ಮತ ಹಾಕಲು ಬಿಸಿಲಿನಲ್ಲಿ, ಕೆಲವೊಮ್ಮೆ ಊಟ ಮಾಡದೆ ಬಂದಿರಬಹುದು. ನೀವು ಅವರಿಗೆ ಹೀಗೆ ಸೇವೆ ಮಾಡುತ್ತೀರಾ?” ಎಂದು ಕಿಡಿಕಾರಿದ್ದಾರೆ.
“ಕಾಂಗರೂ ನ್ಯಾಯಾಲಯಗಳ” ಬಳಕೆಯನ್ನು ಟೀಕಿಸಿದ ನ್ಯಾಯಾಲಯ, ಶಾಸಕರು ಕಾನೂನಿಗೆ ಸಹಕರಿಸುವ ಬದಲು ರಾಜಕೀಯ ಶಕ್ತಿಯನ್ನು ಪ್ರದರ್ಶಿಸಿದ್ದಕ್ಕಾಗಿ ತರಾಟೆಗೆ ತೆಗೆದುಕೊಂಡಿದೆ. “ಇಂತಹ ನಡವಳಿಕೆ ಮುಂದುವರಿದರೆ, ಪ್ರಕರಣದಲ್ಲಿ ಸಹಕರಿಸಿರುವ ಪ್ರತಿಯೊಬ್ಬ ಬೆಂಬಲಿಗರ ವಿರುದ್ಧವೂ ಪ್ರಕರಣ ದಾಖಲಿಸಬೇಕಾಗುತ್ತದೆ ಎಂದು ಎಚ್ಚರಿಸಿದ್ದಾರೆ.
ಈ ಬಲವಾದ ಟೀಕೆಗಳ ನಂತರ, ನ್ಯಾಯಾಲಯವು ಶಾಸಕರಿಗೆ ನಿರೀಕ್ಷಣಾ ಜಾಮೀನು ನೀಡಲು ನಿರಾಕರಿಸಿದೆ. ತನಿಖೆಗೆ ಸಂಪೂರ್ಣವಾಗಿ ಸಹಕರಿಸುವಂತೆ ನಿರ್ದೇಶಿಸಿದೆ. ನ್ಯಾಯಾಧೀಶರು ಪೊಲೀಸರಿಗೆ ಎಡಿಜಿಪಿ ಜಯರಾಮ್ ಅವರನ್ನು ‘ಕಾನೂನಿನ ಪ್ರಕಾರ’ ಬಂಧಿಸುವಂತೆ ನಿರ್ದೇಶಿಸಿದ್ದಾರೆ. ಅಧಿಕಾರಿ ಸೂಕ್ತ ವೇದಿಕೆಯ ಮುಂದೆ ಜಾಮೀನು ಪಡೆಯಲು ಸ್ವತಂತ್ರರು ಎಂದು ಹೇಳಿದ್ದಾರೆ.
ಅಸ್ಸಾಂ | 600 ಕ್ಕೂ ಹೆಚ್ಚು ಮನೆಗಳನ್ನು ಕೆಡವಲು ಪ್ರಾರಂಭಿಸಿದ ಬಿಜೆಪಿ ಸರ್ಕಾರ


