ಮಧ್ಯಪ್ರದೇಶದ ಜಬಲ್ಪುರದಲ್ಲಿ ಅಕ್ಟೋಬರ್ 1 ರಂದು ಹಿಂದುಳಿದ ವರ್ಗದ ಡಾ.ಭಾಗವತ್ ದೇವಾಂಗನ್ ಎಂಬ 28 ವರ್ಷ ವಯಸ್ಸಿನ ಪ್ರಥಮ ವರ್ಷದ ವೈದ್ಯಕೀಯ ವಿದ್ಯಾರ್ಥಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಅವರನ್ನು “ಮೇಲ್ಜಾತಿ” (ಸವರ್ಣ)ಯ ಸೀನಿಯರ್ ವಿದ್ಯಾರ್ಥಿಗಳು ಕೆಲವು ತಿಂಗಳುಗಳಿಂದ ಮಾನಸಿಕವಾಗಿ ಹಿಂಸಿಸುತ್ತಿದ್ದರು ಮತ್ತು ಕಿರುಕುಳ ನೀಡುತ್ತಿದ್ದರು ಎಂದು ಕುಟುಂಬದ ಸದಸ್ಯರು ಆರೋಪಿಸಿದ್ದಾರೆ.
ಭಾಗವತ್ ದೇವಾಂಗನ್ ಜಂಜಗೀರ್ ಚಂಪಾದ ಸಣ್ಣ ಪಟ್ಟಣವಾದ ರಹೌದ್ ನಿವಾಸಿಯಾಗಿದ್ದು, ಅವರ ತಂದೆ ತಮ್ಮ ಊರಿನಲ್ಲಿ ಪಾತ್ರೆಗಳನ್ನು ಮಾರಾಟ ಮಾಡಿ ಜೀವನ ದೂಡುತ್ತಿದ್ದರು. ಪ್ರತಿಭಾವಂತ ವಿದ್ಯಾರ್ಥಿಯಾಗಿದ್ದ ಭಾಗವತ್ ಆರನೆ ತರಗತಿಯ ತನಕ ಸ್ಥಳೀಯ ಶಾಲೆಯಲ್ಲಿ ಅಧ್ಯಯನ ಮಾಡಿದ್ದರು. ನಂತರ ನವೋದಯ ವಿದ್ಯಾಲಯದಲ್ಲಿ 12 ನೇ ತನಕ ಅಧ್ಯಯನ ಮಾಡಿ ಪುಣೆಯ ಬೈರಂಜಿ ಜೀಜೀಭಾಯ್ ಸರ್ಕಾರಿ ವೈದ್ಯಕೀಯ ಕಾಲೇಜಿನಲ್ಲಿ ಎಂಬಿಬಿಎಸ್ ಮುಗಿಸಿದ್ದರು.
ಇದನ್ನೂ ಓದಿ: ದಲಿತ ಹೆಣ್ಣುಮಕ್ಕಳ ಮೇಲಿನ ಅತ್ಯಾಚಾರ, ಕೊಲೆ: ರಾಜ್ಯದಲ್ಲಿ ಸಿಡಿದೆದ್ದ ಆಕ್ರೋಶ -ತೀವ್ರಗೊಂಡ ಸರಣಿ ಪ್ರತಿಭಟನೆಗಳು

ಐದು ಸೀನಿಯರ್ ವಿದ್ಯಾರ್ಥಿಗಳು ನಿರಂತರ ಕಿರುಕುಳ ನೀಡುತ್ತಿರುವುದೇ ಇದಕ್ಕೆ ಕಾರಣ ಎಂದು ಕುಟುಂಬ ಸದಸ್ಯರು ಆರೋಪಿಸಿದ್ದಾರೆ. ಜುಲೈ 1 ರಂದು ಕಾಲೇಜಿಗೆ ಸೇರಿದ ಹದಿನೈದು ದಿನಗಳ ನಂತರ, ಭಾಗವತ್ ತಮ್ಮ ಜಾತಿ ಮತ್ತು ಆರ್ಥಿಕ ಹಿನ್ನೆಲೆಯ ಕಾರಣಕ್ಕಾಗಿ ದೈಹಿಕವಾಗಿ ಮತ್ತು ಮಾನಸಿಕವಾಗಿ ಕಿರುಕುಳಕ್ಕೊಳಗಾಗಿದ್ದಾರೆ ಎಂದು ಅವರು ತಿಳಿಸಿದ್ದಾರೆ.
“ನಮ್ಮ ಸೀನಿಯರ್ಸ್ ನಮ್ಮ ಜಾತಿ ಮತ್ತು ಬಡತನವನ್ನು ಉಲ್ಲೇಖಿಸಿ ದೈಹಿಕವಾಗಿ ಮತ್ತು ಮಾನಸಿಕವಾಗಿ ಹಿಂಸೆ ನೀಡುತ್ತಿದ್ದಾರೆ ಎಂದು ಭಾಗವತ್ ನನಗೆ ಪ್ರತಿಭಾರಿಯೂ ಹೇಳುತ್ತಿದ್ದ, ಆಡಳಿತ ಮಂಡಳಿಗೆ ಇದು ತಿಳಿದಿತ್ತು. ಆದರೆ ಮಧ್ಯಪ್ರವೇಶಿಸಿಲ್ಲ” ಎಂದು ಮೃತ ಭಾಗವತ್ ಸಹೋದರ ಪ್ರಹ್ಲಾದ್ ಹೇಳಿದ್ದಾರೆ.
“ಸರಿಯಾದ ಅಧ್ಯಯನವಿಲ್ಲದೆ ಮೀಸಲಾತಿ ಆಧಾರದಲ್ಲಿ ಪ್ರವೇಶ ಪಡೆದ್ದಾಗಿ, ತನ್ನನ್ನು ಪದೇ ಪದೇ ’ಅರ್ಹನಲ್ಲದವ’ ಎಂದು ಸೀನಿಯರ್‌ಗಳು ಕರೆಯುತ್ತಾರೆ” ಎಂದು ಹೇಳಿದ್ದಾಗಿ ಪ್ರಹ್ಲಾದ್ ಹೇಳುತ್ತಾರೆ.
ಇದನ್ನೂ ಓದಿ: ದಲಿತ ಚಳವಳಿಯಲ್ಲಿ ಯುವ ನಾಯಕತ್ವ ಅರಳುವ ಸಮಯ
ಕಿರುಕುಳದಿಂದಾಗಿ ಭಾಗವತ್ ಜುಲೈ 24 ರಂದು ಆತ್ಮಹತ್ಯೆಗೆ ಯತ್ನಿಸಿದ್ದರು, ಇದಕ್ಕಾಗಿ ಒಂದು ತಿಂಗಳ ಕಾಲ ಅವರನ್ನು ಮನೆಗೆ ಕಳುಹಿಸಲಾಯಿತ್ತು. ಇದಾಗಿ ಅವರ HOD ಕೋರಿಕೆಯ ಮೇರೆಗೆ ಅವರು ಮರಳಿದ್ದರು ಎನ್ನಲಾಗಿದ್ದು, ಆದರೂ ಕಿರುಕುಳ ನಿಲ್ಲಲಿಲ್ಲ. ವಿಕಾಸ್ ದ್ವಿವೇದಿ, ಸಲ್ಮಾನ್ ಖಾನ್, ಅಮನ್ ಗೌತಮ್, ಶುಭಮ್ ಶಿಂಧೆ ಮತ್ತು ಅಭಿಷೇಕ್ ಗ್ಯಾಮೆ ಮುಂತಾದವರ ವಿರುದ್ಧ ಕಿರುಕುಳ ನೀಡಿದ್ದಾರೆಂದು ಆರೋಪಿಸಿ ಕುಟುಂಬವು ದೂರು ದಾಖಲಿಸಿದೆ.
ವೈದ್ಯಕೀಯ ಕಾಲೇಜು ಹಾಸ್ಟೆಲ್‌ನ ವಾರ್ಡನ್ ಮತ್ತು ಕಾಲೇಜಿನ ಆಂಟಿ ರ‍್ಯಾಗಿಂಗ್ ಸಮಿತಿಯ ಸದಸ್ಯರಾದ ಡಾ.ಅರವಿಂದ್ ಶರ್ಮಾ ಹಾಸ್ಟೆಲ್ ಒಳಗೆ ರ‍್ಯಾಗಿಂಗ್ ಅಥವಾ ಯಾವುದೇ ರೀತಿಯ ಕಿರುಕುಳ ನಡೆದಿಲ್ಲ ಎಂದು ಹೇಳಿದ್ದಾರೆ.
ಅಕ್ಟೋಬರ್ 7 ರಿಂದ, ಕುಟುಂಬ ಮತ್ತು ಸಮುದಾಯದ ಸದಸ್ಯರು ಪೊಲೀಸ್ ನಿಷ್ಕ್ರಿಯತೆಗಾಗಿ ಕ್ಯಾಂಡಲ್ ಮಾರ್ಚ್ ಮಾಡಿದ್ದು, ಒಂದು ವಾರದಿಂದ ತನಿಖೆ ನಡೆಸುತ್ತಿದ್ದರೂ ಯಾವುದೇ ಎಫ್‌ಐಆರ್ ದಾಖಲಾಗಿಲ್ಲ. ಉದ್ದೇಶಪೂರ್ವಕವಾಗಿ ವಿಷಯವನ್ನು ಮುಂದೂಡಲು ಪ್ರಯತ್ನಿಸುತ್ತಿದೆ ಎಂದು ಅವರ ಸಮುದಾಯ ಆರೋಪಿಸುತ್ತಿದೆ. ಭಾಗವತ್ ಅವರ ಬಾಲ್ಯ ಸ್ನೇಹಿತ ದಿಲೀಪ್ ದೇವಾಂಗನ್ “ಜಸ್ಟಿಸ್ ಫಾರ್ ಭಾಗವತ್ ದೇವಾಂಗನ್” ಎಂಬ ಅಭಿಯಾನವನ್ನು ಪ್ರಾರಂಭಿಸಿದ್ದಾರೆ ಮತ್ತು ಮಧ್ಯಪ್ರದೇಶದ ಮುಖ್ಯಮಂತ್ರಿಗೆ 1000 ಪೋಸ್ಟ್‌ಕಾರ್ಡ್‌ಗಳನ್ನು ಕಳುಹಿಸಲಿದ್ದಾರೆ ಎಂದು ತಿಳಿದು ಬಂದಿದೆ.
ಛತ್ತೀಸ್‌ಗಡ ಆರೋಗ್ಯ ಸಚಿವ ಟಿ.ಎಸ್.ಸಿಂಗ್‌ದೇವ್ ಮಧ್ಯಪ್ರದೇಶದ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಅವರಿಗೆ ಗುರುವಾರ ಪತ್ರವೊಂದನ್ನು ಬರೆದಿದ್ದು, ಕಠಿಣವಾದ ರಾಗಿಂಗ್ ವಿರೋಧಿ ನಿಯಮಗಳ ಹೊರತಾಗಿಯೂ, ರ‍್ಯಾಗಿಂಗ್‌ನಿಂದಾಗಿ ವಿದ್ಯಾರ್ಥಿಗಳು ಮಾನಸಿಕ ಮತ್ತು ದೈಹಿಕ ಕಿರುಕುಳ ಅನುಭವಿಸುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.
ವೈದ್ಯಕೀಯ ವಿದ್ಯಾರ್ಥಿಗಳು ಮತ್ತು ಸಾಂಸ್ಥಿಕ ಕೊಲೆ
ತಳಸಮುದಾಯದ ವಿದ್ಯಾರ್ಥಿಗಳನ್ನು ಆತ್ಮಹತ್ಯೆಗೆ ತಳ್ಳುವ ವ್ಯವಸ್ಥಿತ ವಿಧಾನದ ಒಂದು ಭಾಗವಾಗಿ ಸೀನಿಯರ್ ವಿದ್ಯಾರ್ಥಿಗಳಿಂದ ದೈಹಿಕ ಮತ್ತು ಮಾನಸಿಕವಾಗಿ ನಡೆಯುವ ಜಾತಿವಾದಿ ಕಿರುಕುಳ ಹಾಗೂ ಆಡಳಿತ ಮಂಡಳಿಯ ಉದ್ದೇಶಪೂರ್ವಕ ನಿರ್ಲಕ್ಷ್ಯಕ್ಕಾಗಿ ಈ ಆತ್ಮಹತ್ಯೆಯನ್ನು ಅನೇಕ ಜನರು “ಸಾಂಸ್ಥಿಕ ಕೊಲೆ” ಎಂದು ಕರೆದಿದ್ದಾರೆ.
ಇದನ್ನೂ ಓದಿ: ಚಂದ್ರಶೇಖರ್ ಆಜಾದ್: ಮತ್ತೊಬ್ಬ ದಲಿತ ಸೂರ್ಯನ ಉದಯ
ಭಾರತದ ಪ್ರತಿಯೊಂದು ವಿಶ್ವವಿದ್ಯಾನಿಲಯದಲ್ಲೂ ಜಾತಿವಾದಿ ಹಿಂಸಾಚಾರವನ್ನು ಸಾಂಸ್ಥೀಕರಣಗೊಳಿಸಲಾಗಿದ್ದರೂ, ಇದು ಪಿಜಿ ವೈದ್ಯಕೀಯ ಕಾಲೇಜುಗಳಲ್ಲಿ ಸಾಂಕ್ರಾಮಿಕ ರೋಗವಾಗಿ ಮಾರ್ಪಟ್ಟಿದೆ. ಹಿಂದುಳಿದ ವರ್ಗಗಳ ಮಾನಸಿಕ ಆರೋಗ್ಯಕ್ಕೋಸ್ಕರ ಕೆಲಸ ಮಾಡುತ್ತಿರುವ ’ದಿ ಬ್ಲೂ ಡಾನ್’ ಈ ವಿಷಯದ ಬಗ್ಗೆ ಬರೆದಿದೆ,
It only goes to show, that the discourse around caste based reservation is only an excuse to subject DBA students to vile, casteist abuse, to prevent us from entering UC dominated centres of higher education.
— The Blue Dawn (@TheBlueDawn56) October 10, 2020
2010 ರಲ್ಲಿ ಏಮ್ಸ್‌ನ ದಲಿತ ವೈದ್ಯಕೀಯ ವಿದ್ಯಾರ್ಥಿ ಡಾ.ಬಾಲಮುಕುಂದ್ ಭಾರತಿ ಆತ್ಮಹತ್ಯೆ ಮಾಡಿಕೊಂಡಿದ್ದರು. ಆಡಳಿತ ಮಂಡಳಿಯು ಅವರು ಖಿನ್ನತೆಗೊಳಗಾಗಿದ್ದರು ಎಂದು ಹೇಳಿಕೊಂಡಿದೆ. ಹಾಗಾಗಿ ಅವರ ಮಾನಸಿಕ ಆರೋಗ್ಯವು ಜಾತಿ ಆಧಾರಿತ ಹಿಂಸೆಯಿಂದ ಹೀಗಾಗಿದೆ ಎಂದು ಒಪ್ಪಿಕೊಳ್ಳಲು ನಿರಾಕರಿಸಿತು.
ರೋಹಿತ್ ವೆಮುಲ ಆತ್ಮಹತ್ಯೆ ಪ್ರಕರಣದಲ್ಲೂ ಸರ್ಕಾರ ಸೇರಿದಂತೆ ಆಡಳಿತ ಮಂಡಳಿ ಇದನ್ನೇ ಹೇಳಿದ್ದವು. 2019 ರಲ್ಲಿ ಡಾ. ಪಾಯಲ್ ತಡ್ವಿ ಆತ್ಮಹತ್ಯೆ ಮಾಡಿಕೊಂಡಾಗ, ಆಕೆಯ ಪೋಷಕರು ದೌರ್ಜನ್ಯಕ್ಕೀಡು ಮಾಡಿದ ಮೇಲ್ಜಾತಿಯವರ ವಿರುದ್ಧ ದೂರು ನೀಡಿದರೂ ಮುಂಬೈನ ನಾಯರ್ ಕಾಲೇಜು ಕೂಡ ಇದನ್ನೇ ಹೇಳಿತ್ತು.

ಡಾ. ಪಾಯಲ್ ತಡ್ವಿ ಪ್ರಕರಣದಲ್ಲಿ, ಪ್ರತಿಭಟನಾಕಾರರು ಮತ್ತು ಅವರ ಕುಟುಂಬವು ಪೊಲೀಸರು ಮತ್ತು ಸರ್ಕಾರದ ಮೇಲೆ ಹೆಚ್ಚಿನ ಒತ್ತಡ ಹೇರಿತ್ತಾದರೂ, ಪ್ರಕರಣವನ್ನು ಮುಂದೆ ತೆಗೆದುಕೊಳ್ಳಲಾಗಿಲ್ಲ. ಅಕ್ಟೋಬರ್ 8 ರಂದು ಆರೋಪಿಗಳಿಗೆ ಜಾಮೀನು ನೀಡಲಾಯಿತು. ಸವರ್ಣರಿಂದ ಹಿಂದುಳಿದ ವರ್ಗಗಳ ಮೇಲೆ ಹಿಂಸಾಚಾರ ನಡೆದಾಗೆಲ್ಲ ಪೊಲೀಸರು ಮತ್ತು ಸರ್ಕಾರ ನಿರ್ಲಕ್ಷ್ಯ ವಹಿಸಿ ಸವರ್ಣರನ್ನು ರಕ್ಷಿಸಲು ಪ್ರಯತ್ನಿಸುತ್ತದೆ. ಹತ್ರಾಸ್ ಘಟನೆ ಇದಕ್ಕೆ ಉತ್ತಮ ಉದಾಹರಣೆಯಾಗಿದೆ.
ಇದನ್ನೂ ಓದಿ: 16 ನಿಮಿಷಕ್ಕೊಮ್ಮೆ ದಲಿತರ ವಿರುದ್ಧ ದೌರ್ಜನ್ಯ, ಪ್ರತಿನಿತ್ಯ 6 ದಲಿತ ಹೆಣ್ಣುಮಕ್ಕಳ ಮೇಲೆ ಅತ್ಯಾಚಾರ


