ಅತ್ಯಾಚಾರ

ಉತ್ತರ ಪ್ರದೇಶದಲ್ಲಿ ಹತ್ರಾಸ್ ಅತ್ಯಾಚಾರ ಮತ್ತು ಕೊಲೆ ಪ್ರಕರಣದಲ್ಲಿ ಅಲ್ಲಿನ ಪೊಲೀಸರು ಮತ್ತು ಯೋಗಿ ಆದಿತ್ಯನಾಥ್ ಸರ್ಕಾರ ನಡೆದುಕೊಂಡ ರೀತಿ ಖಂಡಿಸಿ ದೇಶಾದ್ಯಂತ ಆಕ್ರೋಶ ವ್ಯಕ್ತವಾಗಿದೆ. ರಾಜ್ಯದಲ್ಲಿಯೂ ಸಹ ಉತ್ತರ ಪ್ರದೇಶ ಸರ್ಕಾರದ ವಿರುದ್ಧ ತೀವ್ರ ಆಕ್ರೋಶ ವ್ಯಕ್ತವಾಗಿದ್ದು ಸರಣಿ ಪ್ರತಿಭಟನೆಗಳು ಆರಂಭವಾಗಿದೆ.

ಬೆಂಗಳೂರಿನಲ್ಲಿ ಅಖಿಲ ಭಾರತ ಜನವಾದಿ ಮಹಿಳಾ ಸಂಘಟನೆ.(ಎ.ಐ.ಡಿ.ಡಬ್ಲು,ಓ), ಭಾರತ ವಿದ್ಯಾರ್ಥಿ ಫೆಡರೇಶನ್ (ಎಸ್.ಎಫ್.ಐ), ದಲಿತ ಹಕ್ಕುಗಳ ಸಮಿತಿ (ಡಿ.ಎಚ್.ಎಸ್) ಅಖಿಲ ಭಾರತ ವಕೀಲರ ಸಂಘ (ಎ.ಐ.ಎಲ್.ಯು), ಸೋಷಿಯಲಿಸ್ಟ್ ಯೂನಿಟಿ ಸೆಂಟರ್ ಆಫ್ ಇಂಡಿಯಾ (ಎಸ್‌.ಯು.ಸಿ.ಐ) ಸಂಘಟನೆಗಳು ಪ್ರತಿಭಟನೆ ನಡೆಸಿ ಹೆಣ್ಣುಮಕ್ಕಳ ರಕ್ಷಣೆಗೆ ಕೂಡಲೇ ಕ್ರಮ ವಹಿಸುವಂತೆ ಒತ್ತಾಯಿಸಿವೆ.

ಜನವಾದಿ ಮಹಿಳಾ ಸಂಘಟನೆಯ ಗೌರಮ್ಮ ಮಾತನಾಡಿ “ದೇಶದ ಜನಮಾನಸವನ್ನು ಛಿದ್ರಗೊಳಿಸುವ ಹೃದಯವಿದ್ರಾವಕ ಘಟನೆಗಳು ಉತ್ತರ ಪ್ರದೇಶದದಲ್ಲಿ ನಡೆಯುತ್ತಿವೆ. ಬರ್ಭರ ಹಿಂಸಾತ್ಮಕ ಅತ್ಯಾಚಾರ ಘಟನೆಗಳಿಗೆ ಅಲ್ಲಿನ ಸರ್ಕಾರವೇ ನೇರ ಹೊಣೆಯಾಗಿದೆ. ಆರೋಪಿಗಳಿಗೆ ರಕ್ಷಣೆ ನೀಡುವ ಸರ್ಕಾರದ ಧೋರಣೆಗಳನ್ನು ನಾವು ಖಂಡಿಸುತ್ತವೆ” ಎಂದರು.

ಪ್ರತಿಭಟನೆಯ ಲೈವ್ ನೋಡಿ

ಉತ್ತರ ಪ್ರದೇಶದ ಹತ್ರಾಸ್‌ನಲ್ಲಿ ದಲಿತ ಯುವತಿಯ ಮೇಲೆ ನಡೆದ ಅತ್ಯಾಚಾರವನ್ನು ಖಂಡಿಸಿ ಬೆಂಗಳೂರಿನಲ್ಲಿ ನಡೆಸುತ್ತಿರುವ ಪ್ರತಿಭಟನೆ

Posted by Naanu Gauri on Wednesday, September 30, 2020

ಉತ್ತರ ಪ್ರದೇಶದ ಹತ್ರಾಸ್‌ನಲ್ಲಿ 19 ವರ್ಷದ ದಲಿತ ಯುವತಿಯ ಮೇಲೆ ಕ್ರೂರವಾಗಿ ಸಾಮೂಹಿಕ ಅತ್ಯಾಚಾರ ನಡೆಸಿದ್ದಲ್ಲದೇ, ಆಕೆಯ ಮೇಲೆ ಬರ್ಭರ ಹಿಂಸೆಯನ್ನೆಸಗಿ ಮಾರಣಾಂತಿಕವಾಗಿ ಗಾಯಗೊಳಿಸಲಾಗಿತ್ತು. ಸೆಪ್ಟೆಂಬರ್ 14 ರಿಂದ 29ರ ವರೆಗೆ ಸಾವು ಬದುಕುಗಳ ನಡುವೆ ಹೋರಾಟ ನಡೆಸಿದ ಯುವತಿ ಕೊನೆಗೂ ಸಾವನ್ನಪ್ಪಿದ್ದಾಳೆ. ಜೀವ ಇದ್ದಾಗಲೂ ಅಮಾನುಷವಾಗಿ ನಡೆಸಿಕೊಂಡ ಪೊಲೀಸ್ ಅಧಿಕಾರಿಗಳು ಮತ್ತು ಇಲಾಖೆ ಸಾವಿನಲ್ಲಿಯೂ ಆಕೆಗೆ ಘನತೆಯ ಅಂತ್ಯ ಸಂಸ್ಕಾರಕ್ಕೂ ಅವಕಾಶ ನೀಡದೆ ಕುಟುಂಬದವರನ್ನು ಕೂಡಿಟ್ಟು ಬಲವಂತವಾಗಿ ತಾವೇ ಬೆಳಗಿನ ಜಾವದಲ್ಲಿ ಅಂತ್ಯಸಂಸ್ಕಾರ ಮಾಡಿದ್ದಾರೆ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.

ಎಸ್‌.ಯು.ಸಿ.ಐ ಜಿಲ್ಲಾ ಕಾರ್ಯದರ್ಶಿ ಎಂ.ಎನ್.ಶ್ರಿರಾಮ್ ಮಾತನಾಡಿ, “ಉತ್ತರ ಪ್ರದೇಶವೊಂದು ಗೂಂಡಾ ರಾಜ್ಯದಂತಾಗಿದ್ದು ಅಲ್ಲಿ ನೆಲದ ಕಾನೂನುಗಳಿಗೆ ಬೆಲೆಯೇ ಇಲ್ಲದ ಜಂಗಲ್ ರಾಜ್ ಆಗಿದೆ. ಉನ್ನಾವೋ ಅತ್ಯಾಚಾರ ಘಟನೆಯಲ್ಲಿ ಆರೋಪಿ ಕುಲದೀಪ್‌ ಸಿಂಗ್ ಸೆಂಗರ್‌ನನ್ನು ರಕ್ಷಿಸಲು ಸರ್ಕಾರ ಇನ್ನಿಲ್ಲದ ಪ್ರಯತ್ನ ನಡೆಸಿತ್ತು. ಅದರ ತನಿಖೆ ನಡೆಸಿದ ಸಿ.ಬಿ.ಐ ಸ್ಥಳೀಯವಾಗಿ ಇಬ್ಬರು ಐ.ಪಿ.ಎಸ್ ಮತ್ತು ಒಬ್ಬರು ಐ.ಪಿ.ಎಸ್ ಅಧಿಕಾರಿಗಳ ಕರ್ತವ್ಯ ಲೋಪವನ್ನು ಎತ್ತಿ ತೋರಿಸಿ, ಕ್ರಮಕ್ಕೆ ಸೂಚನೆ ನೀಡಿದ್ದರೂ ಅವರ ಮೇಲೆ ಯೋಗಿ ಸರಕಾರ ಯಾವ ಕ್ರಮವನ್ನೂ ತೆಗೆದುಕೊಂಡಿಲ್ಲ. ಇದು ಅಲ್ಲಿ ಅತ್ಯಾಚಾರ ದೌರ್ಜನ್ಯಗಳನ್ನು ಎಸಗುವವರಿಗೆ ರಾಜಾರೋಷವಾಗಿ ಅನುಮತಿ ಕೊಟ್ಟಂತಾಗಿದೆ” ಎಂದು ಟೀಕಿಸಿದರು.

ಇಂದು ನಾವು ಅತ್ಯಾಚಾರ ಘಟನೆಗಳ ವಿರುದ್ಧ ಪ್ರತಿಭಟಿಸುತ್ತಿರುವಾಗಲೇ ಉತ್ತರ ಪ್ರದೇಶದ ಬಲರಾಂಪುರ ಮತ್ತು ಅರಮ್ ಘರ್ ಗಳಲ್ಲಿ ಅಪ್ರಾಪ್ತರ ಮೇಲೆ ಅತ್ಯಾಚಾರಗಳು ನಡೆದ ಸುದ್ದಿಗಳು ಬರುತ್ತಿವೆ. ಉತ್ತರ ಪ್ರದೇಶದಲ್ಲಿ ಕಾನೂನು ನಿಯಮಗಳು ಮನುಧರ್ಮ ಶಾಸ್ತ್ರದ ಶ್ರೇಣೀಕೃತ ಜಾತಿ ವ್ಯವಸ್ಥೆಯ ಭಾಗವಾಗಿ ನಡೆಯುತ್ತಿದೆ ಎಂಬುದು ಇದರಿಂದ ಮತ್ತೆ ಮತ್ತೆ ಸಾಬೀತಾಗುತ್ತಿದೆ ಎಂದು ಕಿಡಿಕಾರಿದರು.

ಹಕ್ಕೊತ್ತಾಯಗಳು

  • ಅತ್ಯಾಚಾರದ ಸಂತ್ರಸ್ಥೆಯ ಕುಟುಂಬಕ್ಕೆ ಸೂಕ್ತ ರಕ್ಷಣೆ ನೀಡಬೇಕು.
  • ಶವ ಸಂಸ್ಕಾರಕ್ಕೂ ಅವಕಾಶ ನೀಡದೆ ಅಪರಾತ್ರಿಯಲ್ಲಿ ತಾವೇ ಚಿತೆಗೆ ಬೆಂಕಿ ಇಟ್ಟ ಪೊಲೀಸ್ ಮತ್ತು ಇತರ ಅಧಿಕಾರಿಗಳ ಮೇಲೆ ಕಾನೂನಾತ್ಮಕ ಕ್ರಮ ಕೈಗೊಳ್ಳಬೇಕು.
  • ಸರಿಯಾಗಿ ಪ್ರಕರಣ ದಾಖಲಿಸಿಕೊಳ್ಳದೇ ಕಾನೂನಿಗೆ ಅಪಚಾರ ಮಾಡಿದ ಸ್ಥಳೀಯ ಪೊಲೀಸ್ ಅಧಿಕಾರಿಗಳ ಮೇಲೆ ಕ್ರಮ ಕೈಗೊಳ್ಳಬೇಕು.
  • ದೇಶಾದ್ಯಂತ ಹೆಣ್ಣಮಕ್ಕಳಿಗೆ ರಕ್ಷಣೆ ನೀಡುವಂತಹ ತುರ್ತು ಕ್ರಮಗಳನ್ನು ಕೈಗೊಳ್ಳಬೇಕು.

ಕರ್ನಾಟಕದ ಬಳ್ಳಾರಿಯ ಹಗರಿಬೊಮ್ಮನಹಳ್ಳಿಯ ಹೊಳಲು ಗ್ರಾಮದಲ್ಲಿ ದಿನಾಂಕ 6-9-2020 ರಂದು
ಮಹಿಳೆಯೊಬ್ಬರ ಮೇಲೆ ಬಲಾತ್ಕಾರ ಮತ್ತು ಕೊಲೆ ಪ್ರಯತ್ನ ನಡೆದಿದೆ ಎಂಬ ವರದಿಗಳಿವೆ. ಕರ್ನಾಟಕ ಸರಕಾರವು ಈ ಕೂಡಲೇ ಕಾರ್ಯಪ್ರವೃತ್ತವಾಗಿ ಪ್ರಕರಣದ ಸಂಪೂರ್ಣ ತನಿಖೆ ನಡೆಸಿ ತಪ್ಪಿತಸ್ಥರನ್ನು ಶಿಕ್ಷಿಸಿ ನ್ಯಾಯ ದೊರಕಿಸಿಕೊಡಬೇಕೆಂದು ಪ್ರತಿಭಟನಾಕಾರರು ಆಗ್ರಹಿಸಿದರು.

ಪ್ರತಿಭಟನೆಯಲ್ಲಿ ಸಿಐಟಿಯು ಅಧ್ಯಕ್ಷೆ ವರಲಕ್ಷ್ಮಿ, ಡಿಎಸ್ಎಸ್ ಮುಖಂಡ ಮೋಹನ್ ರಾಜ್, ದಲಿತ ಹಕ್ಕುಗಳ ಸಮಿತಿಯ ನಾಗಣ್ಣ, ಎಸ್‌ಎಫ್‌ಐ ರಾಜ್ಯ ಕಾರ್ಯದರ್ಶಿ ವಾಸುದೇವ್ ರೆಡ್ಡಿ, ಆರ್ ಇಂಡಿಯಾ ಲಾಯರ್ಸ್ ಯುನಿಯನ್ ರಾಜ್ಯ ಸಮಿತಿ ಸದಸ್ಯ ಶರಣ ಬಸಪ್ಪ ಮರದ್, ಎಐಎಂಎಂಎಸ್ ಮಹಿಳಾ ಸಂಘಟನೆಯ ರಾಜ್ಯ ಕಾರ್ಯದರ್ಶಿ ಎಸ್.ಶೋಭಾ ಮುಂತಾದವರು ಭಾಗವಹಿಸಿದ್ದರು.

ರಾಯಚೂರು ಜಿಲ್ಲೆಯ ಸಿಂಧನೂರಿನಲ್ಲಿಯೂ ಉತ್ತರ ಪ್ರದೇಶದ ಅತ್ಯಚಾರ ಘಟನೆ ಖಂಡಿಸಿ, ಯೋಗಿ ಆದಿತ್ಯನಾಥ್ ರಾಜೀನಾಮೆಗೆ ಒತ್ತಾಯಿಸಿ ಪ್ರಗತಿಪರ ಸಂಘಟನೆಗಳಿಂದ ಪ್ರತಿಭಟನೆ ನಡೆದಿದೆ.

ಉತ್ತರ ಪ್ರದೇಶದ ಹತ್ರಾಸ್ ಎಂಬಲ್ಲಿ ದಲಿತ ಯುವತಿಯ ಮೇಲೆ ನಡೆದ ಮನುಷ್ಯತ್ವ ತಲೆತಗ್ಗಿಸುವಂತ ಅತ್ಯಾಚಾರ ಮತ್ತು ಕೊಲೆ ಘಟನೆ ಖಂಡಿಸಿ ಪ್ರತಿಭಟನೆ

Posted by ಅಬ್ದುಲ್ ಸಮದ್ ಚೌದ್ರಿ on Wednesday, September 30, 2020


ಇದನ್ನೂ ಓದಿ: ಉತ್ತರ ಪ್ರದೇಶ: ಮತ್ತೊಬ್ಬ ದಲಿತ ಯುವತಿ ಮೇಲೆ ಅತ್ಯಾಚಾರ, ಕೊಲೆ

LEAVE A REPLY

Please enter your comment!
Please enter your name here