Homeಮುಖಪುಟಸಾಂವಿಧಾನಿಕ ರಕ್ಷಣೆಯನ್ನು ಎತ್ತಿಹಿಡಿದ ಈ ಎರಡು ಮಹತ್ವದ ತೀರ್ಪುಗಳು

ಸಾಂವಿಧಾನಿಕ ರಕ್ಷಣೆಯನ್ನು ಎತ್ತಿಹಿಡಿದ ಈ ಎರಡು ಮಹತ್ವದ ತೀರ್ಪುಗಳು

ಭಯೋತ್ಪಾದನೆ ವಿರೋಧಿ ಕಾನೂನುಗಳು ಎಂದು ಹೇಳಿಕೊಳ್ಳಲಾಗುವ ಯುಎಪಿಎ ಅಡಿ ಹೆಚ್ಚುತ್ತಿರುವ ಪ್ರಕರಣಗಳ ಸಂಖ್ಯೆ ತೋರಿಸುವುದೇನೆಂದರೆ, ಯಾವುದೇ ವಿವೇಚನೆ ಇಲ್ಲದೆ ಇವುಗಳನ್ನು ಆರೊಪಿಸುವುದರ ಪರಿಣಾಮದ ಬಗ್ಗೆ ಪೊಲೀಸರ ನಿರ್ಭಯತೆ.

- Advertisement -
- Advertisement -

ಭಿನ್ನಮತ ಮತ್ತು ಟೀಕೆಗಳು ಪ್ರಜಾಪ್ರಭುತ್ವವೊಂದರಲ್ಲಿ ಉತ್ತರದಾಯಿತ್ವಕ್ಕೆ ಅತ್ಯಂತ ಅಗತ್ಯ ಮತ್ತು ಅವು ಸ್ವಾತಂತ್ರ್ಯವನ್ನು ಉತ್ತೇಜಿಸುತ್ತವೆ. ಈ ಪ್ರಕ್ರಿಯೆಗೆ ತಡೆಯಾಗುವ ಯಾವುದೇ ಆಡಳಿತವು ಫ್ಯಾಸಿಸ್ಟ್ ಸಮಾಜಕ್ಕೆ ದಾರಿ ಮಾಡಿಕೊಡುತ್ತದೆ. ಭಾರತದಲ್ಲಿ ಬಲಪಂಥೀಯ ರಾಜಕೀಯದ ಬೆಳವಣಿಗೆ ಭಿನ್ನಮತದ ಧ್ವನಿಗಳನ್ನು ಹೆಚ್ಚೆಚ್ಚು ಅಡಗಿಸುವುದಕ್ಕೆ ಮುಂದಾಗಿದೆ.

ಆಸಕ್ತಿದಾಯಕವಾಗಿ, ಅಲಹಾಬಾದ್ ಹೈಕೋರ್ಟ್ ಮತ್ತು ಕೊಚ್ಚಿಯ ಎನ್‍ಐಎ ವಿಶೇಷ ನ್ಯಾಯಾಲಯಗಳ ತೀರ್ಪಿನಲ್ಲಿ, ಸುಳ್ಳು ಅರೋಪಗಳಿಗೆ ಬಲಿಯಾಗಿ ಕರಾಳ ಕಾಯಿದೆಗಳ ಅಡಿಯಲ್ಲಿ ಬಂಧಿತರಾಗಿದ್ದ ವ್ಯಕ್ತಿಗಳ ರಕ್ಷಣೆಗೆ ನ್ಯಾಯಾಂಗವು ಮುಂದೆ ಬಂದಿರುವುದನ್ನು ಮತ್ತು ವ್ಯಕ್ತಿಗತ ವಾಕ್ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಎತ್ತಿಹಿಡಿದಿರುವುದನ್ನು ನಾವು ಕಾಣುತ್ತೇವೆ.

ನಾಗರಿಕ ಸ್ವಾತಂತ್ರ್ಯಗಳನ್ನು ಉಳಿಸುವಲ್ಲಿ ಮತ್ತು ರಕ್ಷಣೆ ಮಾಡುವಲ್ಲಿ ಉದಾಹರಣೆಯೊಂದನ್ನು ಕಟ್ಟಿಕೊಟ್ಟ ತೀರ್ಪು

2020, ಸೆಪ್ಟೆಂಬರ್ 1ರಂದು ಅಲಹಾಬಾದ್ ಹೈಕೋರ್ಟ್ ಡಾ. ಕಫೀಲ್ ಖಾನ್ ಅವರನ್ನು ಬಿಡುಗಡೆ ಮಾಡುವಂತೆ ಉತ್ತರ ಪ್ರದೇಶ ಸರಕಾರಕ್ಕೆ ನಿರ್ದೇಶನ ನೀಡಿರುವುದು ಒಬ್ಬ ವ್ಯಕ್ತಿಯ ನಾಗರಿಕ ಸ್ವಾತಂತ್ರ್ಯಗಳನ್ನು ಗುರುತಿಸುವ ಅತ್ಯಂತ ಮಹತ್ವದ ತೀರ್ಪಾಗಿದೆ; ಏಕೆಂದರೆ, ಡಾ. ಖಾನ್ ಅವರನ್ನು ರಾಷ್ಟ್ರೀಯ ಭದ್ರತಾ ಕಾಯಿದೆ 1980ರ (ಎನ್‍ಎಸ್‍ಎ) ವಿಧಿ 3ರ ಅನ್ವಯ ಬಂಧಿಸಲಾಗಿತ್ತು ಮತ್ತು ಭಿನ್ನಮತವನ್ನು ಹೊಸಕಿಹಾಕಲು ಅದು ಯೋಗಿ ಆದಿತ್ಯನಾಥ ಸರಕಾರದ ಅತ್ಯಂತ ವಿಲಕ್ಷಣ ನಡೆಯಾಗಿತ್ತು.

ವಸಾಹತುಶಾಹಿ ಆಡಳಿತ ಕಾಲದಿಂದ ಪ್ರೇರಿತವಾದ ಎನ್‍ಎಸ್‍ಎಯ ವಿಧಿ 3 ಎಂಬುದು ಒಂದು ಕರಾಳ ಶಾಸನವಾಗಿದ್ದು, ಭಾರತದ ಭದ್ರತೆಗೆ ಅಪಾಯ ಒಡ್ಡುವ ಯಾವುದೇ ವ್ಯಕ್ತಿಯನ್ನು ತಡೆಯುವ ಸಲುವಾಗಿ ಅವರನ್ನು ಬಂಧಿಸುವ ಅಧಿಕಾರವನ್ನು ರಾಜ್ಯ ಮತ್ತು ಕೇಂದ್ರ ಸರ್ಕಾರಗಳಿಗೆ ನೀಡುತ್ತದೆ. ಕೋಮುವಾದಿಯಾದ ಮತ್ತು ಮುಸ್ಲಿಂ ವಿರೋಧಿಯಾದ ಪೌರತ್ವ ತಿದ್ದುಪಡಿ ಕಾಯಿದೆ (ಸಿಎಎ 2019)ಯನ್ನು ಸಂಸತ್ತಿನಲ್ಲಿ ಅಂಗೀಕರಿಸಿದುದರ ವಿರುದ್ಧ ಡಾ. ಖಾನ್ ಎತ್ತಿದ್ದ ಧ್ವನಿಯನ್ನು ಅಡಗಿಸುವ ಸಲುವಾಗಿ ಅವರ ವಿರುದ್ಧ ಇದೇ ಕಾಯಿದೆಯನ್ನು ಬಳಸಲಾಗಿತ್ತು.

ಡಾ.ಕಫೀಲ್ ಖಾನ್

ಡಾ. ಖಾನ್ ಅವರ ಬಂಧನ ಮತ್ತು ಅವರ ವಿರುದ್ಧ ರಾಷ್ಟ್ರೀಯ ಭದ್ರತಾ ಕಾಯಿದೆಯ ಹೇರಿಕೆಯ ಕುರಿತು ಚುಟುಕಾಗಿ ಪರಿಶೀಲಿಸುವಾಗ ನಮಗೆ ಏನು ತಿಳಿಯುತ್ತದೆ ಎಂದರೆ, ಅವರನ್ನು ನವೆಂಬರ್ 12ರಂದು ಆಲಿಗಢ್ ಮುಸ್ಲಿಂ ವಿಶ್ವವಿದ್ಯಾನಿಲಯದಲ್ಲಿ ಸಿಎಎ, ಎನ್‍ಆರ್‌ಸಿ, ಎನ್‍ಪಿಆರ್ ವಿರುದ್ಧ ಮಾಡಿದ ಭಾಷಣಕ್ಕಾಗಿ ಬಂಧಿಸಲಾಗಿತ್ತು ಎಂಬುದು. ಆದರೆ, ಈ ಬಂಧನವು ಭಾಷಣ ಮಾಡಿ 45 ದಿನಗಳು ಕಳೆದ ಬಳಿಕ 29 ಜನವರಿ 2020ರಂದು ನಡೆಯುತ್ತದೆ ಮತ್ತು ಅವರ ವಿರುದ್ಧ ಐಪಿಸಿ 153ಎ, 153ಬಿ, 109, 505(2) ಅನ್ವಯ ಆರೋಪಗಳನ್ನು ಹೊರಿಸಲಾಗುತ್ತದೆ.

ಆದರೆ, ಆಲಿಗಢ್‍ನ ಮುಖ್ಯ ಮ್ಯಾಜಿಸ್ಟ್ರೇಟ್ ನ್ಯಾಯಾಧೀಶರು ಫೆಬ್ರವರಿ 10, 2020ರಂದು ಅವರಿಗೆ ಜಾಮೀನು ನೀಡಿ ಅವರನ್ನು ಬಿಡುಗಡೆ ಮಾಡುವಂತೆ ನಿರ್ದೇಶಿಸುತ್ತಾರೆ. ಇದರ ಹೊರತಾಗಿಯೂ ಮಥುರಾ ಜಿಲ್ಲಾ ನ್ಯಾಯಾಲಯದ ಸೂಪರಿಂಟೆಂಡೆಂಟ್ ಈ ಆದೇಶವನ್ನು ಪಾಲಿಸದೆ, ಡಾ. ಖಾನ್ ಅವರನ್ನು ಬಿಡುಗಡೆಗೊಳಿಸಲು ನಿರಾಕರಿಸುತ್ತಾರೆ. ಆದುದರಿಂದ, ಫೆಬ್ರವರಿ 12, 2020ರಂದು ಅವರನ್ನು ತಕ್ಷಣ ಬಿಡುಗಡೆ ಮಾಡುವಂತೆ ಮ್ಯಾಜಿಸ್ಟ್ರೇಟ್ ಅವರು ಇನ್ನೊಂದು ಆದೇಶ ಹೊರಡಿಸುತ್ತಾರೆ.


ಇದನ್ನೂ ಓದಿ: ತೋರಿಕೆಯ ದೇಶಭಕ್ತಿಗೂ ನಿಜವಾದ ದೇಶಭಕ್ತಿಗೂ ತುಂಬಾ ವ್ಯತ್ಯಾಸವಿದೆ – ಡಾ.ಕಫೀಲ್ ಖಾನ್ ಸಂದರ್ಶನ


ಈ ಘಟನೆ ನಡೆಯುವವರೆಗೆ ಡಾ. ಕಫೀಲ್ ಖಾನ್ “ದೇಶದ ಭದ್ರತೆಗೆ ಅಪಾಯ ತರಬಹುದು” ಎಂಬ ಬಗ್ಗೆ ಮ್ಯಾಜಿಸ್ಟ್ರೇಟರಿಗಾಗಲೀ, ಡಿಐಜಿಗಾಗಲೀ ಯಾವುದೇ ಬಗೆಯ ಆತಂಕ ಇರಲಿಲ್ಲ ಎಂಬುದನ್ನು ಮುಖ್ಯವಾಗಿ ಗಮನಿಸಬೇಕು. ಫೆಬ್ರವರಿ 12, 2020ರಂದು ಖಾನ್ ಅವರ ಬಿಡುಗಡೆಗೆ ಮ್ಯಾಜೆಸ್ಟ್ರೇಟ್ ಎರಡನೇ ಆದೇಶ ಹೊರಡಿಸಿದ ಬಳಿಕವೂ ಮಥುರಾ ಜೈಲಿನಲ್ಲಿ ಮೂರು ದಿನಗಳ ಕಾಲ ಅಕ್ರಮವಾಗಿ ಬಂಧಿಸಿಟ್ಟ್ಟುಕೊಂಡಿದ್ದರ ನಂತರ ಆಲಿಗಢ್‍ನ ಡಿಐಜಿ/ ಸೀನಿಯರ್ ಸೂಪರಿಂಟೆಂಡೆಂಟ್ ಆಫ್ ಪೊಲೀಸ್, ಆಲಿಗಢ್ ವಿಶ್ವವಿದ್ಯಾಲಯದಲ್ಲಿ ಖಾನ್ ಅವರು ಮಾಡಿದ ಭಾಷಣದ ಆಧಾರದಲ್ಲಿ ರಾಷ್ಟ್ರೀಯ ಭದ್ರತಾ ಕಾಯಿದೆಯ ವಿಧಿ 3ರ ಅನ್ವಯ ಅವರನ್ನು ಬಂಧಿಸಲು ಅನುಮತಿ ಕೋರಿ ಜಿಲ್ಲಾ ಮ್ಯಾಜಿಸ್ಟ್ರೇಟ್ ಮುಂದೆ ಅರ್ಜಿ ಸಲ್ಲಿಸಿದ್ದುದು. ಈ ಅನುಮತಿಯ ಕೋರಿಕೆಯನ್ನು ಮನ್ನಿಸಿ ಮ್ಯಾಜಿಸ್ಟ್ರೇಟರು ಎನ್‍ಎಸ್‍ಎಯ ವಿಧಿ 3ನ್ನು ಪ್ರಕರಣಕ್ಕೆ ಅನ್ವಯಿಸಲು ನಿರ್ಧರಿಸಿದರು. ಪೊಲೀಸರು ನೀಡಿದ ಕಾರಣವೆಂದರೆ ಸಾರ್ವಜನಿಕ ಶಾಂತಿಯನ್ನು ಕಾಪಾಡಲು ಅಡಚಣೆ ಉಂಟುಮಾಡಬಹುದಾದ ಚಟುವಟಿಕೆಗಳನ್ನು ನಡೆಸದಂತೆ ಖಾನ್ ಅವರನ್ನು ತಡೆಯುವುದು. ಡಾ. ಖಾನ್ ಅವರು ಜೈಲಿನಲ್ಲಿ ಇರುವಾಗಲೇ, ಬಂಧನದ ಈ ಆದೇಶವನ್ನು ಜೈಲಿನಲ್ಲಿ ಇಡುವುದಕ್ಕೆ – ಬಂಧನಕ್ಕೆ ಕಾರಣ ಎಂದು ಮತ್ತು ಅದಕ್ಕೆ ಕೆಲವು ಪೂರಕ ದಾಖಲೆಗಳೊಂದಿಗೆ ನೀಡಲಾಯಿತು. ಅದರಲ್ಲಿ ಇದ್ದದ್ದು ಬರೇ ಒಂದು ಸಿಡಿ.

ಮೇ 6, 2020ರಂದು ಉತ್ತರ ಪ್ರದೇಶ ಸರಕಾರವು ಅದೇ ರಾಷ್ಟ್ರೀಯ ಭದ್ರತಾ ಕಾಯಿದೆ 1980ರ ವಿಧಿ 12ರ ಉಪ ವಿಧಿ (1)ನ್ನು ಅನ್ವಯಿಸಿ, ಬಂಧನದ ಅವಧಿಯನ್ನು ಬಂಧನದ ದಿನಾಂಕವಾದ ಫೆಬ್ರವರಿ 13, 2020ರಿಂದ ಆರು ತಿಂಗಳುಗಳ ಕಾಲ ವಿಸ್ತರಿಸಿತು. ಆಗಸ್ಟ್ 4, 2020ರಂದು ಮತ್ತೆ ಈ ಅವಧಿಯನ್ನು ಮೂರು ತಿಂಗಳುಗಳ ಕಾಲ ವಿಸ್ತರಿಸಿತು.

ಡಾ. ಖಾನ್ ಅವರ ಬಿಡುಗಡೆಯನ್ನು ನಿರ್ದೇಶಿಸಿ ನೀಡಿದ ಅಲಹಾಬಾದ್ ಹೈಕೋರ್ಟಿನ ಇಡೀ ತೀರ್ಪು ಆಲಿಗಢ್‍ನ ಡಿಐಜಿ/ಹಿರಿಯ ಪೊಲೀಸ್ ಸೂಪರಿಂಟೆಂಡೆಂಟ್ ಮತ್ತು ಮ್ಯಾಜೆಸ್ಟ್ರೇಟ್ ಅವರ ಕ್ರಮಗಳ ಬಗ್ಗೆ ತೀವ್ರ ಆಕ್ರೋಶ ವ್ಯಕ್ತಪಡಿಸಿದೆ. ನ್ಯಾಯಾಲಯವು ಡಾ. ಖಾನ್ ಅವರ ಇಡೀ ಭಾಷಣವನ್ನು ಸೂಕ್ಷ್ಮವಾಗಿ ವಿಶ್ಲೇಷಿಸಿದ್ದು, ಅದು ಸರಕಾರದ ನೀತಿಗಳನ್ನು ಖಂಡಿತವಾಗಿಯೂ ಟೀಕಿಸಿದೆಯಾದರೂ, ಬಂಧನದ ಅಗತ್ಯ ಬೀಳುವಂತಹುದು ಅದರಲ್ಲಿ ಏನೂ ಇಲ್ಲ ಎಂದು ಅಭಿಪ್ರಾಯಪಟ್ಟಿದೆ. ಭಾಷಣವನ್ನು ಸಂಪೂರ್ಣ ಓದಿದರೆ ಅದರಲ್ಲಿ ಡಾ. ಖಾನ್ ಅವರು ದ್ವೇಷ ಅಥವಾ ಹಿಂಸಾಚಾರವನ್ನು ಪ್ರಚೋದಿಸುವ ಯಾವ ಮಾತೂ ಇಲ್ಲ; ಬದಲಾಗಿ, ದೇಶದ ನಾಗರಿಕರ ಏಕತೆಗೆ ಮತ್ತು ಒಗ್ಗಟ್ಟಿಗೆ ಕರೆಕೊಡುತ್ತಾರೆ ಹಾಗೂ ಯಾವುದೇ ರೀತಿಯ ಹಿಂಸಾಚಾರವನ್ನು ಭಾಷಣ ವಿರೋಧಿಸುತ್ತದೆ ಎಂದು ನ್ಯಾಯಾಲಯ ಹೇಳಿದೆ.

ನ್ಯಾಯಾಲಯವು ಮುಂದುವರಿದು, ಭಾರತೀಯ ಸಂವಿಧಾನದ ವಿಧಿ 22 (5)ರ ಅನ್ವಯ ಖಾನ್ ಅವರನ್ನು ಪೂರ್ವಭಾವಿಯಾಗಿ ಬಂಧಿಸುವಾಗ ಅದನ್ನು ವಿರೋಧಿಸುವ ಅವರ ಹಕ್ಕಿನ ಭಾಗವಾಗಿ ಅಗತ್ಯ ದಾಖಲೆಗಳನ್ನು ಒದಗಿಸಬೇಕು; ಆದರೆ, ಖಾನ್ ಅವರಿಗೆ ಸಿಡಿಯೊಂದನ್ನು ಹೊರತುಪಡಿಸಿ ಬೇರೇನನ್ನೂ ನೀಡಲಾಗಿಲ್ಲ ಮಾತ್ರವಲ್ಲ ಸಿಡಿಯಲ್ಲಿ ಯಾವ ಭಾಷಣ ಇದೆ, ಯಾವ ವಿವರಗಳಿವೆ ಎಂದು ತಿಳಿಯಲು ಅದನ್ನು ಪ್ಲೇ ಮಾಡಬಲ್ಲ ಯಾವುದೇ ಸಾಧನ ಒದಗಿಸಲಾಗಿಲ್ಲ ಮತ್ತು ಅದರಲ್ಲಿ ಇರುವ ಮಾತುಗಳ ಬರಹದ ಪ್ರತಿಯನ್ನೂ ಕೊಡಲಾಗಿಲ್ಲ ಎಂದು ಹೇಳಿದೆ. ಉತ್ತರ ಪ್ರದೇಶ ಸರಕಾರ ಮತ್ತು ಆಲಿಗಢ್ ಪೊಲೀಸ್ ಅಧಿಕಾರಿಗಳ ಕಾರ್ಯವನ್ನು ಪರಿಗಣಿಸಿರುವ ನ್ಯಾಯಾಲಯವು ಅವರ ಬಂಧನವಷ್ಟೇ ಕಾನೂನುಬಾಹಿರವಲ್ಲ; ಬಂಧನದ ವಿಸ್ತರಣೆಯೂ ಕಾನೂನುಬಾಹಿರ ಮತ್ತು ಭಾರತೀಯ ಸಂವಿಧಾನದ ವಿಧಿ 21 ಮತ್ತು 22ನ್ನು ಉಲ್ಲಂಘಿಸುವಂತದ್ದು ಎಂದು ಹೇಳಿದೆ ಮತ್ತು ಅವರ ತಕ್ಷಣದ ಬಿಡುಗಡೆಗೆ ಆದೇಶಿಸಿದೆ.

ಒಬ್ಬ ವ್ಯಕ್ತಿಯನ್ನು ಪೂರ್ವಭಾವಿಯಾಗಿ ಬಂಧಿಸುವ ಅಧಿಕಾರದ ಬೇರು ಇರುವುದು ಸಂವಿಧಾನದ ವಿಧಿ 27(7)ರಲ್ಲಿ ಅಡಕವಾಗಿರುವ “ವ್ಯಕ್ತಿನಿಷ್ಠ ತೃಪ್ತಿದಾಯಕ”ದ ತತ್ವದಲ್ಲಿ ಎಂಬುದನ್ನು ಮುಖ್ಯವಾಗಿ ಗಮನಿಸಬೇಕು. ಅದು ಯಾವುದೇ ವ್ಯಕ್ತಿಯನ್ನು ಮೂರು ತಿಂಗಳುಗಳಿಗೂ ಹೆಚ್ಚು ಕಾಲ ಪ್ರತಿಬಂಧಕವಾಗಿ ಬಂಧಿಸಲು ಶಾಸನ ಮಾಡುವ ಅಧಿಕಾರವನ್ನು ಸಂಸತ್ತಿಗೆ ನೀಡುತ್ತದೆ. ಈ ಪ್ರತಿಬಂಧಕ ಬಂಧನದ ಯದ್ವಾತದ್ವಾ ಬಳಕೆಯು ಹೆಚ್ಚುತ್ತಿರುವುದರಿಂದ ವಿಧಿ 22(7)ನ್ನು ಪುನರ್ವಿಮರ್ಶೆ ಮಾಡಬೇಕಾದ ಕಾಲ ಬಂದಿದೆ.

ಯುಎಪಿಎ ಬಾಹುಗಳಿಂದ ವಿದ್ಯಾರ್ಥಿಗಳಿಗೆ ಸ್ವಾತಂತ್ರ್ಯ ನೀಡಿದ ತೀರ್ಪು

ಮೇಲಿನ ತೀರ್ಪಿನ ರೀತಿಯಲ್ಲೆ, ಇನ್ನೊಂದು ಕರಾಳ ಕಾಯಿದೆಯಾದ ಯುಎಪಿಎಯ ಹಿಡಿತದಿಂದ ಇಬ್ಬರು ವಿದ್ಯಾರ್ಥಿಗಳಿಗೆ ಬಂಧನವಾದ ಹತ್ತು ತಿಂಗಳುಗಳ ಬಳಿಕ ಬಿಡುಗಡೆ ದೊರೆತಿದೆ. ರಾಷ್ಟ್ರೀಯ ತನಿಖಾ ದಳ (ಎನ್‍ಐಎ)ದ ಕೊಚ್ಚಿ ವಿಶೇಷ ವಿಚಾರಣಾ ನ್ಯಾಯಾಲಯವು ಭಯೋತ್ಪಾದಕ ಸಂಘಟನೆಗಳ ಜೊತೆ ಸಂಪರ್ಕ ಹೊಂದಿದ್ದು, ಅದರ ಚಟುವಟಿಕೆಗಳನ್ನು ನಡೆಸಲು ಬೆಂಬಲ ನೀಡಿದ ಆರೋಪದ ಮೇಲೆ ಕಾನೂನುಬಾಹಿರ ಚಟುವಟಿಕೆ ತಡೆ ಕಾಯಿದೆ 1967ರ ವಿಧಿ 38 ಮತ್ತು 39ರ ಅನ್ವಯ ಬಂಧಿತರಾಗಿದ್ದ ಅಲ್ಲನ್ ಸುಹೈಬ್ (20) ಮತ್ತು ತ್ವಾಹಾ ಫಸಲ್ (24) ಎಂಬ ಇಬ್ಬರು ಕಾನೂನು ಮತ್ತು ಪತ್ರಿಕೋದ್ಯಮ (ಕ್ರಮವಾಗಿ) ವಿದ್ಯಾರ್ಥಿಗಳನ್ನು ಬಿಡುಗಡೆಗೊಳಿಸಿದೆ.

ಆರೋಪಿತ ವಿದ್ಯಾರ್ಥಿಗಳು ರಾಜಕೀಯವಾಗಿ ಸಕ್ರಿಯರಾಗಿದ್ದು ಸಿಪಿಐ (ಮಾಕ್ರ್ಸಿಸ್ಟ್) ಜೊತೆ ಸಂಪರ್ಕ ಹೊಂದಿದ್ದರು ಮತ್ತು ಹಲವರು ಪ್ರತಿಭಟನೆಗಳಲ್ಲಿ ಭಾಗವಹಿಸುತ್ತಿದ್ದರು, ಮುಂದುವರಿದು ಪಶ್ಚಿಮ ಘಟ್ಟ ರಕ್ಷಣೆಗೆ ಗಾಡ್ಗೀಳ್ ಸಮಿತಿಯ ವರದಿ ಜಾರಿ, ಮಾವೋವಾದಿಗಳ ಎನ್‍ಕೌಂಟರ್ ಹತ್ಯೆಗಳಿಗೆ ಖಂಡನೆ, ಕಾಶ್ಮೀರದ ವಿಶೇಷ ಸ್ಥಾನಮಾನ ತೆಗೆದುಹಾಕಿರುವುದಕ್ಕೆ ವಿರೋಧ, ಪೊಲೀಸರ ದೌರ್ಜನ್ಯಗಳ ವಿರುದ್ಧ ಪ್ರತಿಭಟನೆ ಹೀಗೆ ಮುಂತಾದ “ತೀಕ್ಷ್ಣ ಸಾಮಾಜಿಕ ಮತ್ತು ರಾಜಕೀಯ ಸಮಸ್ಯೆಗಳ” ಕುರಿತ ಕರಪತ್ರ, ನೋಟಿಸುಗಳು, ಬ್ಯಾನರುಗಳನ್ನು ಹೊಂದಿದ್ದರು.


ಇದನ್ನೂ ಓದಿ: ದೇಶದ್ರೋಹ ಎನ್ನಲಾಗುವುದಿಲ್ಲ: ಯುಎಪಿಎ ಅಡಿ ಬಂಧಿತರಾಗಿದ್ದ ಕೇರಳದ ಯುವಕರಿಗೆ ಜಾಮೀನು


ಕೇವಲ ಇಂತಹ ಸಾಮಗ್ರಿಗಳನ್ನು ಹೊಂದಿರುವುದು ಯುಎಪಿಎ ಕಾಯಿದೆಯಡಿ ಕ್ರಮ ತೆಗೆದುಕೊಳ್ಳಲು ಅಗತ್ಯವಿರುವಷ್ಟು ಹಿನ್ನೆಲೆ ಒದಗಿಸುವುದಿಲ್ಲ ಎಂದು ನ್ಯಾಯಲಯ ಗಮನಿಸಿತಲ್ಲದೆ, ಈ ಸಾಕ್ಷ್ಯಗಳು ಅವರು ಮಾವೋವಾದಿ ಸಿದ್ಧಾಂತಗಳ ಪರವಾಗಿದ್ದರು ಎಂಬುದನ್ನು ಸೂಚಿಸಬಹುದಾದರೂ, ಯಾವುದೇ ರೀತಿಯಿಂದ ಭಯೋತ್ಪಾದಕ ಚಟುವಟಿಕೆಗಳಿಗೆ ಉತ್ತೇಜನ ಅಥವಾ ನೆರವು ನೀಡುತ್ತಿದ್ದರು ಎಂಬುದಕ್ಕೆ ಆಧಾರ ಒದಗಿಸುವುದಿಲ್ಲ ಎಂದು ನ್ಯಾಯಾಲಯ ಹೇಳಿದೆ. ಅದಲ್ಲದೇ, ಯುಎಪಿಎಯ ವಿಧಿ 20ರ ಪ್ರಕಾರ ಅವರು ಭಯೋತ್ಪಾದಕ ಸಂಘಟನೆಯ ಸದಸ್ಯರಾಗಿದ್ದರು ಎಂಬ ಆರೋಪವನ್ನು ತನಿಖೆಯ ನಂತರ ಎನ್‍ಐಎ ಕೈಬಿಟ್ಟಿತ್ತು ಮತ್ತು ಅವರು ಭಯೋತ್ಪಾದಕ ಸಂಘಟನೆಯ ಸದಸ್ಯರಾಗಿದ್ದರು ಎಂದು ಸಾಬೀತುಪಡಿಸಲು ಯಾವುದೇ ಸಾಕ್ಷ್ಯಗಳಿಲ್ಲ ಎಂದು ನ್ಯಾಯಾಲಯ ಗುರುತಿಸಿದೆ.

PC:Madhyamam English

ಈ ವಿದ್ಯಾರ್ಥಿಗಳು ಪ್ರತಿಭಟನೆಗಳಲ್ಲಿ ಭಾಗಿಯಾಗಿದ್ದರು ಎಂದು ತೋರಿಸಲು ಎನ್‍ಐಎ ಸಲ್ಲಿಸಿದ್ದ ಸಾಕ್ಷ್ಯಗಳನ್ನು ತಿರಸ್ಕರಿಸಿದ ನ್ಯಾಯಾಲಯವು, ಪ್ರತಿಭಟನೆಯ ಹಕ್ಕು ಸಾಂವಿಧಾನಿಕವಾಗಿ ಖಾತರಿಪಡಿಸಿದ ಹಕ್ಕಾಗಿದೆ ಎಂದು ಸ್ಪಷ್ಟಪಡಿಸಿದೆ. ಅಷ್ಟು ಮಾತ್ರವಲ್ಲ; ತಪ್ಪು ಕಾರಣಕ್ಕಾಗಿಯೇ ಇರಲಿ, ಸರಕಾರದ ಯಾವುದೇ ನೀತಿಗಳನ್ನು ಅಥವಾ ನಿರ್ಧಾರಗಳನ್ನು ಪ್ರತಿಭಟಿಸುವುದು ದೇಶದ್ರೋಹ ಅಥವಾ ಅದು ಪ್ರತ್ಯೇಕತೆಯನ್ನು ಬೆಂಬಲಿಸುವ ಉದ್ದೇಶಪೂರ್ವಕ ಕೃತ್ಯ ಎಂದು ಪರಿಗಣಿಸಲು ಸಾಧ್ಯವಿಲ್ಲ ಎಂದು ನ್ಯಾಯಾಲಯವು ಸ್ಪಷ್ಟಪಡಿಸಿದೆ.

ಪರಿಣಾಮದ ಬಗ್ಗೆ ಭಯವಿಲ್ಲದ ಪೊಲೀಸ್ ಕೃತ್ಯ ಮತ್ತು ಭಿನ್ನಮತ ಅಡಗಿಸುವ ಕುತಂತ್ರ

ಈ ಎರಡು ಪ್ರಕರಣಗಳಲ್ಲಿ ನ್ಯಾಯಾಂಗವು ಸಕಾಲಿಕವಾಗಿ ಮತ್ತು ಸ್ಪಷ್ಟವಾಗಿ ಪೊಲೀಸ್ ಕೃತ್ಯಗಳನ್ನು ಕಟುವಾಗಿ ಖಂಡಿಸಿ, ವ್ಯಕ್ತಿಗತವಾಗಿ ನಾಗರಿಕ ಸ್ವಾತಂತ್ರ್ಯಗಳನ್ನು ರಕ್ಷಿಸಲು ಮುಂದಾಗಿದ್ದರೂ, ಭೀಮಾ ಕೋರೆಗಾಂವ್ ಪ್ರಕರಣದಲ್ಲಿ 12 ಕ್ಕೂ ಹೆಚ್ಚು ಮಾನವ ಹಕ್ಕುಗಳ ಹೋರಾಟಗಾರರು ಮತ್ತು ಸಿಎಎ ವಿರುದ್ಧ ಪ್ರತಿಭಟನೆಗಳಲ್ಲಿ ಭಾಗಿಯಾಗಿದ್ದ ಪ್ರತಿಭಟನಾಕಾರರು ನ್ಯಾಯಕ್ಕಾಗಿ ಇನ್ನೂ ಕಾಯುತ್ತಿದ್ದಾರೆ. ಕಾನೂನು ಪ್ರಕ್ರಿಯೆಯನ್ನು ಸಂಪೂರ್ಣವಾಗಿ ಉಲ್ಲಂಘಿಸಿ ಕಂಪ್ಯೂಟರ್ ಮುಂತಾದ ಸಾಧನಗಳಿಂದ ಪಡೆಯಲಾದ ದಾಖಲೆಗಳು, ಪತ್ರಗಳು ಇತ್ಯಾದಿಗಳನ್ನು ಸಾಕ್ಷ್ಯವಾಗಿ ಇವರ ವಿರುದ್ಧ ಮಂಡಿಸಲಾಗಿದೆ. ಇಲ್ಲಿ ಇವರ್ಯಾರಿಗೂ ಅವರನ್ನು ಬಂಧಿಸಲು ಬಳಸಿರುವ ಮತ್ತು ಅವರ ವಿರುದ್ಧ ಇವೆ ಎನ್ನಲಾಗುವ ವಾಸ್ತವಿಕವಾದ ಸಾಕ್ಷ್ಯಗಳನ್ನು ಒದಗಿಸಲಾಗಿಲ್ಲ ಎಂಬುದನ್ನು ಮುಖ್ಯವಾಗಿ ಗಮನಿಸಬೇಕು.

ನಮ್ಮ ದೇಶದಲ್ಲಿ ಬೇಕಾಬಿಟ್ಟಿ ಬಂಧನಗಳು ಹೆಚ್ಚುತ್ತಿರುವುದು ಸಾಮಾನ್ಯ ವಿದ್ಯಮಾನವಾಗಿಬಿಟ್ಟಿದೆ. ರಾಷ್ಟ್ರೀಯ ಅಪರಾಧ ದಾಖಲೆಗಳ ಬ್ಯೂರೋ (ಎನ್‍ಸಿಆರ್‌ಬಿ) ಏನನ್ನು ತೋರಿಸುತ್ತದೆ ಅಂದರೆ 2014ಕ್ಕೆ ಮೊದಲು ಯುಎಪಿಎ ಅಡಿಯಲ್ಲಿ ಯಾವುದೇ ಅಪರಾಧ ಪ್ರಕರಣ ದಾಖಲಾಗಿರಲಿಲ್ಲ. ಅದರೆ, ಯುಎಪಿಎ ಅಡಿಯಲ್ಲಿ 2014 ರಲ್ಲಿ 976 ಪ್ರಕರಣಗಳು ದಾಖಲಾಗಿದ್ದರೆ ಇದು 2015ಕ್ಕೆ 897, 2016ಕ್ಕೆ 992, 902 (2017), 1182 (2018) ಹೆಚ್ಚಾಗುತ್ತಾ ಹೋಗಿದ್ದು, ಭಿನ್ನಮತವನ್ನು ಹತ್ತಿಕ್ಕುವ ಪ್ರಭುತ್ವದ ಅಜೆಂಡಾವನ್ನು ಸ್ಪಷ್ಟವಾಗಿ ತೋರಿಸುತ್ತದೆ.

ಭಯೋತ್ಪಾದನೆ ವಿರೋಧಿ ಕಾನೂನುಗಳು ಎಂದು ಹೇಳಿಕೊಳ್ಳಲಾಗುವ ಯುಎಪಿಎ ಅಡಿ ಹೆಚ್ಚುತ್ತಿರುವ ಪ್ರಕರಣಗಳ ಸಂಖ್ಯೆ ತೋರಿಸುವುದೇನೆಂದರೆ, ಯಾವುದೇ ವಿವೇಚನೆ ಇಲ್ಲದೆ ಇವುಗಳನ್ನು ಆರೊಪಿಸುವುದರ ಪರಿಣಾಮದ ಬಗ್ಗೆ ಪೊಲೀಸರ ನಿರ್ಭಯತೆ. ನ್ಯಾಯಲಯಗಳ ಹಲವು ತೀರ್ಪುಗಳು ಮತ್ತು ಮಾರ್ಗಸೂಚಿಗಳು ಇದ್ದರೂ, ಮೇಲೆ ಅವಲೋಕಿಸಿರುವ ಎರಡು ತೀರ್ಪುಗಳು ತೋರಿಸುವುದೇನೆಂದರೆ, ಪೊಲೀಸರು ಕಾನೂನಿನ ನಿಯಮಗಳ ಬಗ್ಗೆ ಹೆಚ್ಚು ತಲೆಕೆಡಿಸಿಕೊಳ್ಳದೆ ಹೋಗಿರುವುದು ಮತ್ತು ಅವರ ಕ್ರಮಗಳೇ ಕಾನೂನು ಆಡಳಿತವಾಗಿದೆ ಎಂಬುದು.

  • ಬಸವ ಪ್ರಸಾದ್, (ಪ್ರಸಕ್ತ ಆಲ್ಟರ್ನೇಟಿಲ್ ಲಾ ಫೋರಂನಲ್ಲಿ ವಕೀಲರಾಗಿ ಸೇವೆ ಸಲ್ಲಿಸುತ್ತಿರುವ ಬಸವ ಅವರು, ಜಾತಿ ದೌರ್ಜನ್ಯಗಳ ಬಗ್ಗೆ ಅಧ್ಯಯನದಲ್ಲಿ ತೊಡಗಿಸಿಕೊಂಡು ಅವುಗಳ ವಿರುದ್ಧ ಹೋರಾಟ ಮತ್ತು ಜನಾಂದೋಲನಳಲ್ಲಿಯೂ ಸಕ್ರಿಯವಾಗಿ ಭಾಗಿಯಾಗಿದ್ದಾರೆ.)

ಅನುವಾದ: ನಿಖಿಲ್ ಕೋಲ್ಪೆ


ಇದನ್ನೂ ಓದಿ: ಕಾಡುಗೊಲ್ಲ ಅಭಿವೃದ್ಧಿ ನಿಗಮದ ಹೆಸರು ಬದಲಿಸಿದ್ದೇಕೆ?; ಸಿಎಂ ಮೇಲೆ ಒತ್ತಡ ತಂದವರು ಯಾರು?

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ದೇವಾಲಯ ಪ್ರವೇಶಿಸಿದ ದಲಿತ ಯುವಕನಿಗೆ ಡಿಎಂಕೆ ಮುಖಂಡನಿಂದ ಬೆದರಿಕೆ; ವಿಡಿಯೊ ವೈರಲ್‌

0
ಹಿಂದೂ ಮತ್ತು ಧಾರ್ಮಿಕ ದತ್ತಿ ಇಲಾಖೆ (ಎಚ್‌ಆರ್ ಮತ್ತು ಸಿಇ) ನಿರ್ವಹಿಸುತ್ತಿರುವ ದೇವಸ್ಥಾನಕ್ಕೆ ಪ್ರವೇಶಿಸಿದ್ದಕ್ಕಾಗಿ ದಲಿತ ಯುವಕನನ್ನು ಡಿಎಂಕೆ ಒಕ್ಕೂಟದ ಕಾರ್ಯದರ್ಶಿಯೊಬ್ಬರು ನಿಂದಿಸಿರುವುದು ಕ್ಯಾಮರಾದಲ್ಲಿ ಸೆರೆಯಾಗಿದೆ. ಪೊಲೀಸರ ಪ್ರಕಾರ, ತಮಿಳುನಾಡಿನ ತಿರುಮಲೈಗಿರಿ (ಸೇಲಂ ಜಿಲ್ಲೆ)ಯಲ್ಲಿರುವ...