| ಭರತ್ ಹೆಬ್ಬಾಳ್ |
ಇಂಗ್ಲಿಷ್ ನಲ್ಲಿ ಓದಲು ಇಲ್ಲಿ ಕ್ಲಿಕ್ ಮಾಡಿ
ಇಂಗ್ಲೀಷಿನಲ್ಲಿ ಗಾದೆಯೊಂದಿದೆ, “ಲಂಡನ್ನಿನ ಒಂದು ರಸ್ತೆಯಲ್ಲಿ ಒಬ್ಬ ವ್ಯಕ್ತಿ ತನಗೆ ಸಿಕ್ಕವರಿಗೆಲ್ಲ ಸತ್ಯ ಹೇಳುತ್ತ ಹೊರಟಲ್ಲಿ ಮುಂದಿನ ನೂರು ಮೀಟರ್‍ಗಳಲ್ಲೇ ಅವನ ಕೊಲೆಯಗಾಗುತ್ತೆ”. ಈ ಗಾದೆಯನ್ನು ಸತ್ಯವಾಗಿಸುವಂತೆ, ಬ್ರಿಟಿಷ್ ಪ್ರಧಾನಿ ತರೇಸಾ ಮೇ ಅವರು ವಿಕಿಲೀಕ್ಸ್‍ನ ಸಂಸ್ಥಾಪಕ ಜುಲಿಯಾನ್ ಅಸಾಂಜ್ ಅವರ ಬಂಧನಕ್ಕೆ ಆದೇಶಿಸಿದರು. ವಿಕಿಲೀಕ್ಸ್ ಸಂಸ್ಥಾಪಕ ಜೂಲಿಯಾನ್ ಅಸಾಂಜ್‍ರವರನ್ನು ಬಂಧಿಸಲು ಕಳೆದ 7 ವರ್ಷಗಳಿಂದ ಹಲವು ರಾಷ್ಟ್ರಗಳು ಕಾದುಕುಳಿತಿದ್ದವು. ಆದರೆ ಅಸಾಂಜ್ ಅವರು ಇಕ್ವಾಡಾರ್ ದೇಶದ ಎಂಬಸಿಯಲ್ಲಿ ಆಶ್ರಯ ಪಡೆದಿದ್ದರು. ಎಪ್ರಿಲ್ 11 ರಂದು ಲಂಡನ್ನಿನ ಪೊಲೀಸರು ಇಕ್ವಾಡಾರಿನ ರಾಯಭಾರಿ ಕಛೇರಿಗೆ ದಾಳಿ ಮಾಡಿ ಅಸಾಂಜ್ ಅವರನ್ನು ಹೊರತಂದು ಬಂಧಿಸಲಾಯಿತು. ಕಳೆದ ಕೆಲವು ವಾರಗಳಿಂದ ಅವರ ಬಂಧನದ ವದಂತಿಗಳು ಎಲ್ಲಡೆ ಹಬ್ಬಿದ್ದವು. ಲಂಡನ್ನಿನ ನ್ಯಾಯಾಲಯ ಅವರಿಗೆ ನೀಡಿದ್ದ ಬೇಲ್ ಮೀರಿದ್ದಕ್ಕಾಗಿ ಮತ್ತು ಇಕ್ವಾಡಾರ್ ದೂತಾವಾಸದಲ್ಲಿ ಆಶ್ರಯ ಪಡೆದು ಅಲ್ಲಿನ ನಿಯಮಾವಳಿಗಳನ್ನು ಪದೇ ಪದೇ ಉಲ್ಲಂಘಿಸಿದ ಆರೋಪದ ಮೇಲೆ ಈಗ ಅವರನ್ನು ಬಂಧಿಸಲಾಗಿದೆ. 2012 ರಲ್ಲಿ ಇಕ್ವಾಡಾರ್ ದೇಶವು ಜುಲಿಯಾನ್ ಅಸಾಂಜ್‍ಗೆ ಪೌರತ್ವ ನೀಡಿ ಆಶ್ರಯ ನೀಡಿತ್ತು. ಸ್ವೀಡನ್‍ನಲ್ಲಿ ಜುಲಿಯಾನ್ ವಿರುದ್ಧ ಮಾಡಲಾದ ಸುಳ್ಳು ಬಲಾತ್ಕಾರದ ಆರೋಪಗಳನ್ನು ಸ್ವತಃ ಹಿಂಪಡೆದಿದ್ದರೂ, ಅಮೇರಿಕದ ಡಿಪಾರ್ಟ್‍ಮೆಂಟ್ ಆಫ್ ಜಸ್ಟಿಸ್ ಜುಲಿಯಾನ್ ಮೇಲೆ ಗೂಢಚರ್ಯೆಯ ಪ್ರಕರಣ ದಾಖಲಿಸಿ ಅವರನ್ನು ಅಮೇರಿಕಗೆ ವಶಪಡಿಸಿಕೊಳ್ಳುವ ಸಿದ್ಧತೆ ಮಾಡಿದೆ. ಚೆಲ್ಸಿಯಾ ಮ್ಯಾನಿಂಗ್ ಎನ್ನುವವರು ರಹಸ್ಯ ಅಂತರ್ಜಾಲ ಶಿಷ್ಟಾಚಾರ ನೆಟ್‍ವರ್ಕ್ (ಸೀಕ್ರೆಟ್ ಇಂಟರ್‍ನೆಟ್ ಪ್ರೊಟೋಕಾಲ್ ನೆಟ್‍ವರ್ಕ್, ಎಸ್‍ಐಪಿಆರ್‍ನೆಟ್) ಗೆ ಸಂಬಂಧಿಸಿದ ಪೆಂಟಾಗಾನ್ ಕಂಪ್ಯೂಟರ್‍ಗಳಲ್ಲಿ ಸಂಗ್ರಹಿಸಿದ್ದ ಅಮೇರಿಕದ ರಹಸ್ಯ ಕಡತಗಳನ್ನು ಭೇದಿಸಲು ಸಹಾಯ ಮಾಡಿದರು ಎನ್ನುವುದು ಅಸಾಂಜ್ ಮೇಲೆ ಮಾಡಿರುವ ಆರೋಪ.

ಪ್ರಗತಿಪರ ಪ್ರಜಾಪ್ರಭುತ್ವದ ದೇಶಗಳ ಇತಿಹಾಸದಲ್ಲಿಯೇ ಅಭಿವ್ಯಕ್ತಿ ಸ್ವಾತಂತ್ರವನ್ನು ಮೊಟಕುಗೊಳಿಸುವ ಅತ್ಯಂತ ದುರದೃಷ್ಟಕರ ಮತ್ತು ನಾಚಿಕೆಗೇಡಿನ ಕೃತ್ಯವಾಗಿ ಇದನ್ನು ಕರೆಯಲಾಗುವುದು. ಪತ್ರಿಕೋದ್ಯಮದ ಧರ್ಮವನ್ನು ಎತ್ತಿಹಿಡಿದ ಒಂದು ಕಾರಣಕ್ಕಾಗಿಯೇ ಜುಲಿಯಾನ್ ಅಸಾಂಜ್ ಅವರನ್ನು ಹೊಸದಾಗಿ ತರಲಾದ ರಾಷ್ಟ್ರೀಯ ಸುರಕ್ಷತೆಯ ಅಡಿಯಲ್ಲಿ ಆರೋಪ ಹೊರಿಸುವ ವದಂತಿಗಳಿದ್ದವು. ಅಮೇರಿಕದಲ್ಲಿಯ ಪತ್ರಕರ್ತರು ತಮ್ಮ ಸುದ್ದಿಗಳ ಮೂಲವನ್ನು ರಕ್ಷಿಸಿದ್ದಕ್ಕೆ, ತಮ್ಮ ಚಾಟ್‍ಡೇಟಾ ಅಥವಾ ಮೆಟಾಡಾಟಾ ಅನ್ನು ಅಳಿಸಿಹಾಕಿದ್ದಕ್ಕೇ ಪ್ರಕರಣ ದಾಖಲಿಸಬಹುದಾಗಿದೆ. ಇದರಿಂದ ಒಂದು ಹೊಸ ನಿದರ್ಶನ ಹುಟ್ಟುಹಾಕುವಂತಿದೆ. ಇದು ಬರೀ ಪತ್ರಿಕೋದ್ಯಮದ ವೃತ್ತಿಯ ಮೇಲೆ ದಾಳಿಯಲ್ಲ, ಇದು ಅಂತರರಾಷ್ಟ್ರೀಯ ಕಾನೂನು ಮತ್ತು ಪತ್ರಿಕಾಸ್ವಾತಂತ್ರವನ್ನು ಖಾತ್ರಿಪಡಿಸುವ ಅಮೇರಿಕ ಸಂವಿಧಾನದ ಫಸ್ಟ್ ಅಮೆಂಡ್‍ಮೆಂಟ್ ಮೇಲೆ ಆದ ದಾಳಿಯೂ ಆಗಿದೆ. ಪಾಶ್ಚಿಮಾತ್ಯ ದೇಶಗಳಿಗೆ, ಅದರಲ್ಲೂ ಅಮೇರಿಕಗೆ ಅಂತರರಾಷ್ಟ್ರೀಯ ಕಾನೂನುಗಳು ಅನ್ವಯವಾಗುವುದಿಲ್ಲ ಎಂದು ಈ ಮೂಲಕ ಹೇಳುತ್ತಿರುವುದು ನಾಗರಿಕತ್ವದ ಮೇಲೆಯೇ ಮಾಡಿದ ದಾಳಿಯಾಗಿದೆ. ಆಶ್ರಯ (ಅಸೈಲಮ್) ಎನ್ನುವ ಇಡೀ ಪರಿಕಲ್ಪನೆಯ ಅಧೀಕೃತ ಫಲಾನುಭವಿಗಳಾಗಿದ್ದವರು ಜುಲಿಯಾನ್. ವಿಶ್ವಸಂಸ್ಥೆಯು ಅರ್ಬಿಟ್ರರಿ ಡಿಟೆನ್ಷನ್ ಬಗ್ಗೆ ಕರಾರು ಮಾಡಿಕೊಂಡಿತ್ತು ಮತ್ತು ಅದಕ್ಕೆ ಬ್ರಿಟನ್ ಕೂಡ ಸಹಿ ಹಾಕಿತ್ತು. ಒಂದು ವೇಳೆ ಜುಲಿಯಾನ್ ಅಸಾಂಜ್ ಅವರನ್ನು ಅಮೇರಿಕದ ವಶಕ್ಕೆ ನೀಡಿದಲ್ಲಿ ಅವರು ‘ಗಂಭೀರವಾದ ಮಾನವ ಹಕ್ಕುಗಳ ಉಲ್ಲಂಘನೆಯ ಅಪಾಯದಲ್ಲಿದ್ದಾರೆ ಎಂದು ವಿಶ್ವಸಂಸ್ಥೆ ಎಚ್ಚರಿಸಿದೆ.
![]()
ವಿಕಿಲೀಕ್ಸ್ ಅನ್ನು 2006 ರಲ್ಲಿ ಅಸಾಂಜ್ ಸ್ಥಾಪಿಸಿದರು. ವಿಶ್ವಾದ್ಯಾಂತದ ಸರಕಾರಗಳು ಮಾಡಿಕೊಳ್ಳುವ ರಹಸ್ಯ ಒಪ್ಪಂದಗಳು ಮತ್ತು ಮಹತ್ವದ ದಾಖಲೆಗಳನ್ನು ಲೀಕ್ ಮಾಡುವ ಹ್ಯಾಕರ್‍ಗಳ ಮತ್ತು ತಂತ್ರಜ್ಞಾನ ತಜ್ಞರ ಒಂದು ನಟ್‍ವರ್ಕ್ ಆಗಿದೆ. ಸರಕಾರಗಳು ತಮ್ಮ ಪ್ರಜೆಗಳಿಗೇ ಗೊತ್ತಾಗದಂತೆ ರಹಸ್ಯವಾಗಿಟ್ಟಿರುವ ಮಾಹಿತಿಯನ್ನು ಸೋರಿಕೆ ಮಾಡಿ ಸಾಮಾಜಿಕ ಜೀವನದಲ್ಲಿ ಪಾರದರ್ಶಕತೆಯನ್ನು ತರುವುದೇ ಇವರ ಗುರಿಯಾಗಿದೆ. ಅಸಾಂಜ್ ಪ್ರಕಾರ, ವಿವಿಧ ಪ್ರದೇಶಗಳಲ್ಲಿ ಮತ್ತು ಕ್ಷೇತ್ರಗಳಲ್ಲಿ ಪರಿಣಿತಿ ಹೊಂದಿದ 800 ಜನರನ್ನು ಈ ಸಂಘಟನೆ ಹೊಂದಿದೆ. ವಿಶ್ವದಲ್ಲೆಡೆ ನಾಗರಿಕ ಹಕ್ಕುಗಳನ್ನು ಮೊಟಕುಗೊಳಿಸುವುದು ಮತ್ತು ಎಲ್ಲೆಡೆ ಹರಡುತ್ತಿರುವ ಸರಕಾರದ ಕಣ್ಗಾವಲು, ಇವುಗಳ ಬಗ್ಗೆ ಇವರು ಸೋರಿಕೆ ಮಾಡಿದ ದಾಖಲೆಗಳು ವಿವರವಾಗಿ ತಿಳಿಸುತ್ತವೆ. ತಮ್ಮ ಬಳಿ ಇದ್ದ ಮಾಹಿತಿಯನ್ನು ಬಹಿರಂಗವಾಗಿ ಪ್ರಕಟಿಸಲು ಆಗದೇ ಇರುವವರಿಗೆ ವಿಕಿಲೀಕ್ಸ್ ಆಶ್ರಯತಾಣವಾಯಿತು. ಇದೇ ಸಮಯದಲ್ಲಿ ಎಡ್ವರ್ಡ್ ಸ್ನೋಡೆನ್ ಎನ್ನುವ ವ್ಯಕ್ತಿಯು ಸರಕಾರಗಳು ತನ್ನ ದೇಶದ ಪ್ರಜೆಗಳ ಮೇಲೆ ಮತ್ತು ಸ್ಥಳೀಯ ಸರಕಾರಗಳ ಸಹಕಾರದೊಂದಿಗೆ ಇತರೆ ದೇಶಗಳ ಪ್ರಜೆಗಳ ಮೇಲೆಯೂ ಹೇಗೆ ಕಣ್ಗಾವಲು ಇಡುತ್ತಿದೆ ಎನ್ನುವುದನ್ನು ಬಹಿರಂಗಪಡಿಸಿದರು.
ಅಸಾಂಜ್ ಅವರಿಗೆ ಇಕ್ವಾಡಾರ್‍ನ ಮಾಜಿ ಅಧ್ಯಕ್ಷ ರಫೇಲ್ ಕೊರಿಯಾ ಅವರಿಂದ ಆ ದೇಶದ ನಾಗರಿಕತ್ವ ನೀಡಿ, ಲಂಡನ್ನಿನಲ್ಲಿರುವ ಇಕ್ವಾಡಾರ್‍ನ ದೂತಾವಾಸದಲ್ಲಿ ಆಶ್ರಯ ನೀಡಲಾಗಿತ್ತು. ಆದರೆ ಮೇ 2017 ರಲ್ಲಿ ನಡೆದ ಸಂವಿಧಾನಾತ್ಮಕ ಕ್ಷಿಪ್ರಕಾರ್ಯಾಚರಣೆಯಲ್ಲಿ ರಫೇಲ್ ಕೊರಿಯಾ ಅವರನ್ನು ಪದಚ್ಯತಿಗೊಳಿಸಿ ದೇಶದಿಂದ ಹೊರಹಾಕಿ, ಲೆನಿನ್ ಮೊರೆನೋ ಅವರನ್ನು ಅಧ್ಯಕ್ಷರಾಗಿ ನೇಮಿಸಲಾಯಿತು. 2019 ರ ಎಪ್ರಿಲ್ 11 ರಂದು ಇಕ್ವಾಡಾರ್ ದೇಶವು ಅಸಾಂಜ್ ಅವರ ಆಶ್ರಯದ ಯಥಾಸ್ಥಿತಿಯನ್ನು ತೆಗೆದುಹಾಕಲಾಗಿ, ಈ ಕ್ರಮದಿಂದ ಅಸಾಂಜ್ ಅವರ ಬಂಧನ ಸುಲಭವಾಯಿತು. 4.2 ಬಿಲಿಯನ್‍ಗಳ ಅಂತರರಾಷ್ಟ್ರೀಯ ಮಾನಿಟರಿ ಫಂಡ್‍ನ ಬಿಡುಗಡೆಗಾಗಿ ಹಾಲಿ ಅಧ್ಯಕ್ಷ ಮೊರೆನೊ ಅವರು ಅಮೇರಿಕದ ಕಾಲಿಗೆ ಬಿದ್ದಿದ್ದಾಗಿ ಮಾಜಿ ಅಧ್ಯಕ್ಷ ಕೊರಿಯಾ ಆಪಾದಿಸಿದ್ದಾರೆ. ಅಸಾಂಜ್‍ನ ಬಂಧನವನ್ನು ಖಾತ್ರಿಪಡಿಸಿಕೊಂಡ ಮೇಲೆಯೇ ಅಮೆರಿಕ ಈ ಧನಸಹಾಯವನ್ನು ಬಿಡುಗಡೆ ಮಾಡಲಾಯಿತು ಎಂತಲೂ ಮಾಜಿ ಅಧ್ಯಕ್ಷ ಆಪಾದಿಸಿದ್ದಾರೆ. ಮೊರೆನೊ ಅವರ ಭ್ರಷ್ಟ ಒಪ್ಪಂದಗಳ ಬಗ್ಗೆ ವಿಕಿಲೀಕ್ಸ್ ಅನೇಕ ದಾಖಲೆಗಳನ್ನು ಬಿಡುಗಡೆ ಮಾಡಿದನ್ನು ನೆನಪಿನಲ್ಲಿಟ್ಟುಕೊಳ್ಳಬೇಕಿದೆ.
2010ರ ಎಪ್ರಿಲ್ ಮತ್ತು ನವೆಂಬರ್‍ಗಳ ಮಧ್ಯದ ಅವಧಿಯಲ್ಲಿ ವಿಕಿಲೀಕ್ಸ್ ತೊಂಬತ್ತು ಸಾವಿರಕ್ಕೂ ಹೆಚ್ಚು ಕಡತಗಳನ್ನು ಮತ್ತು ದಾಖಲೆಗಳನ್ನು ಬಿಡುಗಡೆ ಮಾಡಿತು. ಅದರಲ್ಲಿ ಮಿಲಿಟರಿ ರಹಸ್ಯಗಳು, ವಿಶ್ವದ ವಿವಿಧ ಭಾಗಗಳ ಅಮೇರಿಕಾದ ದೂತಾವಾಸದ ಕಡತಗಳು ಇದ್ದವು. ಅದರಲ್ಲಿ ಅಫ್ಘಾನಿಸ್ತಾನ್ ಮತ್ತು ಇರಾಕ್‍ನಲ್ಲಿ ನಡೆದ ಯುದ್ಧಗಳ ಮಾಹಿತಿಗಳೂ ಇದ್ದವು. ಈ ದಾಖಲೆಗಳು ಅಮೇರಿಕದ ಅತಿಕ್ರಮಣಕ್ಕಿಂತ ಮುಂಚೆ ಅಫ್ಘಾನಿಸ್ತಾನದಲ್ಲಿ ಆಗುತ್ತಿದ್ದ ಅಂತರಿಕ ಯುದ್ಧಗಳ ವಿವರಗಳನ್ನು ಮುಂದಿಟ್ಟರು. ತಾಲಿಬಾನ್, ಅಲ್-ಕೈದಾ ಮತ್ತು ಸೌದಿ ಅರೇಬಿಯಾಗಳ ಮಧ್ಯೆ ಇರುವ ಸಂಬಂಧಗಳನ್ನು ಈ ದಾಖಲೆಗಳು ಬಹಿರಂಗಪಡಿಸಿದವು. ತೈಲ ಸಂಪತ್ತನ್ನು ಹೊಂದಿದ ಮಧ್ಯಪ್ರಾಚ್ಯ ದೇಶಗಳು, ಅದರಲ್ಲಿ ಸೌದಿ ಅರೇಬಿಯಾ ಹೇಗೆ ಭಯೋತ್ಪಾದನೆಗೆ ಹಣಸಹಾಯ ಮಾಡುತ್ತಿದ್ದವು ಎನ್ನುವುದೂ ಈ ದಾಖಲೆಗಳಿಂದ ತಿಳಿಯಿತು. ಸೋರಿಕೆಯಾದ ಈ ದಾಖಲೆಗಳಲ್ಲಿ ‘ಕೊಲ್ಯಾಟರಲ್ ಮರ್ಡರ್’ ಎಂದೇ ಹೆಸರಾದ ಒಂದು ವೀಡಿಯೊ ಇತ್ತು. ಈ ವಿಡಿಯೋ ನಂತರ ವೈರಲ್ ಆಗಿ ಅನೇಕ ಮಾಧ್ಯಮಗಳಿಗೆ ದೊರಕಿತು. ಈ ವಿಡಿಯೋವನ್ನು ಒಂದು ಅಮೇರಿಕದ ಹೆಲಿಕಾಪ್ಟರ್‍ನಿಂದ ಚಿತ್ರೀಕರಿಸಲಾಗಿತ್ತು, ಅದರಲ್ಲಿ ಇರಾಕಿನ ರಾಜಧಾನಿ ಬಗ್ದಾದ್‍ನ ಹೊರವಲಯದಲ್ಲಿ ರಾಯಟರ್‍ನ ಇಬ್ಬರು ಪತ್ರಕರ್ತರನ್ನೊಳಗೊಂಡ 12 ಜನ ನಾಗರಿಕರ ಮೇಲೆ ಬೇಕಾಬಿಟ್ಟಿಯಾಗಿ ಗುಂಡುಚಲಾಯಿಸಿ, ಅವರನ್ನು ಕೊಂದಿದ್ದು ಮತ್ತು ಇಬ್ಬರು ಮಕ್ಕಳನ್ನು ಗಂಭೀರವಾಗಿ ಗಾಯಗೊಳಿಸಿದ್ದು ಚಿತ್ರೀಕರಿಸಲಾಗಿತ್ತು. ಒಬ್ಬ ಅಮೇರಿಕನ್ ಸೈನಿಕ ಹೇಳದ್ದೇನೆಂದರೆ, ಅವರೆಲ್ಲ ಒಂದು ಹಾಡನ್ನು ಹಾಡುತ್ತ ತರಬೇತಿ ಪಡೆದುಕೊಂಡಿದ್ದರೆಂತೆ. ‘ನಾನು ಮಾರ್ಕೆಟ್‍ಗೆ ಹೋದೆ, ಮಹಿಳೆಯರು ಖರೀದಿ ಮಾಡ್ತಿದ್ರು, ನಾನು ನನ್ನ ಮಚ್ಚನ್ನು ಹೊರತೆಗೆದೆ ಮತ್ತು ಎಲ್ಲರನ್ನು ಕೊಚ್ಚತೊಡಗಿದೆ’. ಇದು ಆ ಹಾಡಿನ ಸಾರಾಂಶ. ಇದು ಪಾಶ್ಚಿಮಾತ್ಯ ಶಕ್ತಿಗಳು ದಂಡನೆಯ ಯಾವುದೇ ಭೀತಿಯಿಲ್ಲದೇ ಹೇಗೆ ಕೆಲಸ ಮಾಡುತ್ತಿದ್ದವು ಎನ್ನುವುದನ್ನು ತೋರಿಸುತ್ತದೆ. ಅಮೇರಿಕದ ಸೈನ್ಯವು ಈ ಕ್ರಮಗಳನ್ನು ಸಮರ್ಥಿಸಿಕೊಂಡಿತು; ಯುದ್ಧಭೂಮಿಯಲ್ಲಿ ನಡೆಸಲಾಗುವ ಕಾರ್ಯಚರಣೆಯ ಭಾಗ ಎಂದು ಹೇಳಿತು. ವಿಪರ್ಯಾಸವೇನೆಂದರೆ, 17 ವರ್ಷಗಳ ಯುದ್ಧದಲ್ಲಿ ಇಡೀ ಪ್ರದೇಶವನ್ನು ವಿಧ್ವಂಸಗೊಳಿಸಿದ ನಂತರ ಅಲ್ಲೀಗ ಅಮೇರಿಕವು ತಾಲಿಬಾನ್‍ನೊಂದಿಗೆ ಅಧಿಕಾರಕ್ಕಾಗಿ ಹೊಂದಾಣಿಕೆ ಮಾಡಿಕೊಳ್ಳುತ್ತಿದೆ.
ವಿಕಿಲೀಕ್ಸ್ ಈ ದಾಖಲೆಗಳನ್ನು ಬಹಿರಂಗಪಡಿಸಿದ ನಂತರ ಅಮೇರಿಕದ ಸೈನ್ಯದಿಂದ ಮತ್ತು ಆಡಳಿತದಿಂದಲೇ ಅನೇಕ ತಪ್ಪೊಪ್ಪಿಕೆಯ ಹೇಳಿಕೆಗಳು ಹೊರಬಂದವು. ಅಮೇರಿಕದ ವಸಾಹತುಶಾಹಿ, ಅನವಶ್ಯಕ ಯುದ್ಧಗಳು ಹಾಗೂ ಯುದ್ಧದ ಹೆಸರಿನಲ್ಲಿ ಮುಗ್ಧ ನಾಗರಿಕರ ಮೇಲೆ ಮಾಡಿದ ದೌರ್ಜನ್ಯಗಳು ಬೆಳಕಿದೆ ಬಂದವು. ಇದರಿಂದ ಮಾಧ್ಯಮಗಳು ಹೇಗೆ ಆಡಳಿತ ವರ್ಗಗಳ ಪ್ರಚಾರದ ಅಂಗವಾಗಿ ಕೆಲಸ ನಿರ್ವಹಿಸಿದವು ಎನ್ನುವುದು ಜಗಜ್ಜಾಹಿರವಾಯಿತು. ಅಫ್ಘಾನಿಸ್ತಾನ್, ಇರಾಕ್, ಗ್ವಂಟಾನಮೋ ಬೇ ಮತ್ತು ಅಬು ಘ್ರಾಇಬ್ ನ ಚಿತ್ರಹಿಂಸೆಯ ಚಿತ್ರಣಗಳ ವಿಶ್ವದ ಅಂತಃಕರಣವನ್ನು ಕಲುಕಿದವು.

2016ರ ಅಮೇರಿಕದ ಅಧ್ಯಕ್ಷೀಯ ಚುನಾವಣೆಗಳಿಗೆ ಮುಂಚೆ ವಿಕಿಲೀಕ್ಸ್ ಮತ್ತೊಮ್ಮೆ ಪ್ರತ್ಯಕ್ಷವಾಗಿ, ಅಧ್ಯಕ್ಷೀಯ ಅಭ್ಯರ್ಥಿ ಹಿಲರಿ ಕ್ಲಿಂಟನ್ ಮತ್ತು ಆಡಳಿತದಲ್ಲಿ ಕಳುಹಿಸಲಾದ ಈ-ಮೇಲ್‍ಗಳನ್ನು ಪ್ರಕಟಿಸಿತು. ಅದರಲ್ಲಿ ಹಿಲರಿ ಕ್ಲಿಂಟನ್ ಮತ್ತು ಮಧ್ಯಪ್ರಾಚ್ಯದ ಭಯೋತ್ಪಾದನೆಗೆ ಧನಸಹಾಯ ಮಾಡುವ ಫೈನಾನ್ಷಿಯರ್‍ಗಳ ಮಧ್ಯೆ ಇರುವ ಸಂಬಂಧಗಳನ್ನು ಬಹಿರಂಗಪಡಿಸಿತು. ಇರಾಕ್ ಮತ್ತು ಸಿರಿಯಾದಲ್ಲಿ ಅನಾಹುತಗಳನ್ನು ಸೃಷ್ಟಿಸಲು ಪ್ರಾರಂಭಿಸಿದಾಗ ಹಿಲರಿ ಕ್ಲಿಂಟನ್ ಗೃಹಖಾತೆಯನ್ನು ವಹಿಸಿಕೊಂಡಿದ್ದರು. ಸೌದಿ ಅರೇಬಿಯಾದೊಂದಿಗೆ ಮಾಡಿಕೊಂಡ ಅತ್ಯಂತ ದೊಡ್ಡ ಶಸ್ತ್ರಾಸ್ತ್ರ ಒಪ್ಪಂದವನ್ನು ಆಯೋಜಿಸಿದ್ದು ಹಿಲರಿ ಕ್ಲಿಂಟನ್ ಎನ್ನುವುದನ್ನು ಈ ಸೋರಿಕೆಗಳು ಸಾಬೀತುಪಡಿಸಿದವು. ಹಿಲರಿ ಕ್ಲಿಂಟನ್ ಜಯಿಸಬೇಕೆಂದಿದ್ದ ಶಕ್ತಿಗಳು ತಕ್ಷಣ ಟ್ರಂಪ್ ಗೆಲುವನ್ನು ರಷಿಯನ್ನರ ಹಸ್ತಕ್ಷೇಪಕ್ಕೆ ತಳುಕಿಹಾಕಿದವು. ಚುನಾವಣೆಯಲ್ಲಿ ಸೋತ ಡೆಮಕ್ರೆಟಿಕ್ ಪಕ್ಷದ ಬೆಂಬಲಿಗರು ಜುಲಿಯಾನ್ ಅಸಾಂಜ್ ರಷಿಯಾದೊಂದಿಗೆ ಸೇರಿ ಪಿತೂರಿ ನಡೆಸಿ ಟ್ರಂಪ್ ಗೆಲ್ಲಲು ಕಾರಣವಾದರು ಎಂದು ಆರೋಪಿಸಿದರು. 2017ರ ಮಾರ್ಚ್‍ನಲ್ಲಿ ವೀಕಿಲೀಕ್ಸ್ ‘ವಾಲ್ಟ್ 7’ ಎನ್ನುವ ಹೆಸರಿನಲ್ಲಿ ಸಿಐಏ (ಸೆಂಟ್ರಲ್ ಇಂಟೆಲಿಜೆನ್ಸ್ ಎಜೆನ್ಸಿ) ಯ ದಾಖಲೆಗಳನ್ನು ಬಿಡುಗಡೆ ಮಾಡಲಾರಂಭಿಸಿತು. ಅದರಲ್ಲಿ ಸಿಐಏ ಯಾವ ರೀತಿಯಲ್ಲಿ ಎಲೆಕ್ಟ್ರಾನಿಕ್ ಕಣ್ಗಾವಲು ಇಡುತ್ತದೆ ಮತ್ತು ಸೈಬರ್ ಯುದ್ಧದ ಚಟುವಟಿಕೆಗಳ ವಿವರಗಳಿದ್ದವು. ಆ ಕಡತಗಳಲ್ಲಿ ಸಿಐಏ ಕಾರುಗಳನ್ನು, ಸ್ಮಾರ್ಟ್ ಟಿವಿಗಳನ್ನು, ವೆಬ್ ಬ್ರೌಸರ್‍ಗಳನ್ನು, ಆಪರೇಟಿಂಗ್ ಸಿಸ್ಟಮ್‍ಗಳನ್ನು ಮತ್ತು ಅಧಿಕಾಂಶ ಸ್ಮಾರ್ಟ್ ಫೋನ್‍ಗಳನ್ನು ಸಹ ಹೇಗೆ ಭೇದಿಸಬಹುದು ಎನ್ನುವ ವಿವರಗಳಿದ್ದವು. ವಿಶ್ವಾದ್ಯಂತ ಗೂಢಚರ್ಯೆಯ ಸಾಫ್ಟ್‍ವೇರ್ (ವೈರಸ್/ಮ್ಯಾಲ್‍ವೇರ್) ಅಳವಡಿಸಿ, ಅದನ್ನು ಮಾಡಿದ್ದು ರಷಿಯಾ ಮತ್ತು ಚೈನಾ ಎನ್ನುವಂತೆ ಬಿಂಬಿಸುವ ಸಿಐಏನ ಯೋಜನೆಗೆ ಕಲ್ಲುಬಿದ್ದಿತು, ಅದರಿಂದ ಸಹಜವಾಗಿಯೇ ಸಿಐಎ ಕೆಂಡಾಮಂಡಲವಾಯಿತು.
ಪತ್ರಿಕಾಸ್ವಾತಂತ್ರದ ಮೇಲೆ ಹೆಚ್ಚುತ್ತಿರುವ ನಿಗ್ರಹ ಹಾಗೂ ವಿಶ್ವಾದ್ಯಂತ ಬಹುತೇಕ ಮಾಧ್ಯಮಗಳು ಕಾರ್ಪೋರೇಟ್ ಹಿತಾಸಕ್ತಿಗಳಿಗಾಗಿ ಕೆಲಸ ಮಾಡುತ್ತಿರುವ ಸಮಯದಲ್ಲಿಯೇ ಜುಲಿಯಾನ್ ಅಸಾಂಜ್ ಅವರ ಬಂಧನವಾಗಿದೆ. ಭಾರತದಲ್ಲೂ ರೇಡಿಯೊ ಟೇಪ್‍ಗಳು ಮತ್ತು ಪನಾಮಾ ಪೇಪರ್‍ಗಳು ಸೋರಿಕೆಯಾದಾಗ ಬಹುತೇಕ ಮಾಧ್ಯಮಗಳು ಮೌನವಾಗಿದ್ದು, ಆ ದಾಖಲೆಗಳಲ್ಲಿ ಹೆಸರಿಸಲಾದ ವ್ಯಕ್ತಿಗಳ ವಿರುದ್ಧ ಯಾವುದೇ ಕ್ರಮಗಳನ್ನು ಕೈಗೊಳ್ಳಲಾಗಲಿಲ್ಲ. ಪಾಕಿಸ್ತಾನದ ಮಾಜಿ ಪ್ರಧಾನಿ ನವಾಜ್ ಶರೀಫ್ ಅವರ ಹೆಸರು ಪನಾಮಾ ಪೇಪರ್‍ಗಳಲ್ಲಿ ಕಂಡುಬಂದಿದ್ದರಿಂದ ಅವರನ್ನು ಬಂಧಿಸಲಾಯಿತು. ಆದರೆ ಬಾರತದಲ್ಲಿ ರೆಡಿಯೊ ಟೇಪ್‍ಗಳಲ್ಲಿ ಮತ್ತು ಪನಾಮಾ ಪೇಪರ್‍ಗಳಲ್ಲಿ ಕಂಡುಬಂದ ವ್ಯಕ್ತಿಗಳೆಲ್ಲರೂ ರಾಜಕೀಯ-ಕಾರ್ಪೋರೇಟ್ ಮತ್ತು ಮನೋರಂಜನೆಯ ನೆಕ್ಸಸ್ ಅನ್ನು ಗಟ್ಟಿಗೊಳಿಸುವಲ್ಲಿ ನಿರತರಾಗಿದ್ದಾರೆ.
ಪತ್ರಿಕಾ ಸ್ವಾತಂತ್ರದ ಸೂಚ್ಯಂಕದಲ್ಲಿ ಭಾರತವು 138ನೇ ಸ್ಥಾನದಲ್ಲಿದ್ದರೆ, ಪಾಕಿಸ್ತಾನವು 139ನೇ ಸ್ಥಾನದಲ್ಲಿದೆ. ಇತ್ತೀಚಿನ ವರದಿಗಳ ಪ್ರಕಾರ, ಆರ್‍ಟಿಐ(ಮಾಹಿತಿ ಹಕ್ಕು ಕಾಯಿದೆ) ಕಾರ್ಯಕರ್ತರ ಮೇಲೆ 300ಕ್ಕು ಹೆಚ್ಚು ಹಲ್ಲೆಗಳಾಗಿವೆ, 51 ಹತ್ಯೆಗಳಾಗಿವೆ ಹಾಗೂ 5 ಆತ್ಮಹತ್ಯೆಯ ಪ್ರಕರಣಗಳಾಗಿವೆ. ತನಿಖಾ ಪತ್ರಿಕೋದ್ಯಮ ಮಾಡುತ್ತಿರುವ, ಸಾಮಾಜಿಕ ಚಳವಳಿಗಳ ಮೂಲಕ ಸಮಾಜದಲ್ಲಿ ಪಾರದರ್ಶಕತೆ, ವಿವೇಚನೆ ಮತ್ತು ನ್ಯಾಯಕ್ಕಾಗಿ ಹೋರಾಡುತ್ತಿರುವ ವ್ಯಕ್ತಿಗಳ ಮೇಲೆ ಹಲ್ಲೆಗಳು, ಬೆದರಿಕೆಗಳು ಮತ್ತು ಕೊಲೆಗಳು ಹೆಚ್ಚುತ್ತಿವೆ. ಭಾರತದ ಅಧಿಕಾಂಶ ಮಾಧ್ಯಮಗಳು ಆಡಳಿತ ಪಕ್ಷದ ವಿಭಜನಕಾರಿ ಯೋಜನೆಗಳನ್ನು ಯಾವುದೇ ಪ್ರತಿರೋಧವಿಲ್ಲದೇ, ಪ್ರಶ್ನಿಸದೇ, ಅವರಿಂದ ಆಡಳಿತ ಪಕ್ಷ ಅಪೇಕ್ಷಿಸಿದ್ದಷ್ಟೇ ಬೆಂಬಲಿಸುತ್ತಿವೆ. ಹೆಚ್ಚುತ್ತಿರುವ ಕಣ್ಗಾವಲು ಮತ್ತು ಕಡಿಮೆಯಾಗುತ್ತಿರುವ ಸಾರ್ವಜನಿಕ ಮಧ್ಯಪ್ರವೇಶದಿಂದ ನಾಗರಿಕ ಸಮಾಜವು ಎದುರಿಸಬೇಕಾಗುವ ಸವಾಲೇನೆಂದರೆ, ಪ್ರತಿ ಮಗುವಿಗೆ ಸತ್ಯ ಮತ್ತು ಪ್ರಾಮಾಣಿಕತೆಯ ಬಗ್ಗೆ ಕಲಿಸಬೇಕಾಗಿದೆ. ಆ ಮಗು ವಯಸ್ಕಳಾ/ನಾದಾಗ ಅವಳ/ನನ್ನು ಸುಮ್ಮನಾಗಿಸುವ ಅಥವಾ ಕೊಲ್ಲುವ ವಿರೋಧಾಭಾಸವನ್ನು ಬಗೆಹರಿಸಬೇಕಿದೆ. ನಾಡಿನ ಮೂಲಭೂತ ಸಾಮಾಜಿಕ ಹೆಣಿಗೆಯನ್ನು ಬದಲಾಯಿಸುವ, ಆತಂಕದ ಸವಾಲುಗಳನ್ನು ಹೇಗೆ ಎದುರಿಸಬೇಕು ಎನ್ನುವುದು ವಿಶ್ವದ ನಾಗರಿಕರಿಗೆ ಬಿಟ್ಟದ್ದು. ಈ ಸಮಯದಲ್ಲಿ ಅಸಾಂಜ್‍ನೊಂದಿಗೆ ನಿಂತುಕೊಳ್ಳುವುದು ನಮ್ಮ ಗೌರಿಗಳೊಂದಿಗೆ, ಕಲ್ಬುರ್ಗಿಗಳೊಂದಿಗೆ, ಧಾಬೋಲ್ಕರ್‍ಗಳೊಂದಿಗೆ, ಪನ್ಸಾರೆ ಮತ್ತು ಆನಂದ್ ತೆಲ್ತ್ಬುಂಡೆಯವರೊಂದಿಗೆ ಮತ್ತು ಒಂದು ಪರ್ಯಾಯ ಜಗತ್ತನ್ನು ನಿರ್ಮಿಸಲು ಶ್ರಮಿಸುತ್ತಿರುವ ಸಾವಿರಾರು ಮುಖರಹಿತ, ಹೆಸರಿಲ್ಲದವರೊಂದಿಗೆ ನಿಂತಂತೆ.


