ಅಸ್ಸಾಂನ ‘ನಕಲಿ ಎನ್‌ಕೌಂಟರ್’ ಗಳ ವಿರುದ್ದ ಸಲ್ಲಿಸಿರುವ ಅರ್ಜಿಯನ್ನು ವಿಚಾರಣೆ ನಡೆಸಿರುವ ನ್ಯಾಯಮೂರ್ತಿ ಉಜ್ಜಲ್ ಭುಯಾನ್ ಅವರ ಸುಪ್ರೀಂ ಕೋರ್ಟ್ ಪೀಠ, “ಆರೋಪಿಗಳು ಈ ರೀತಿ ಪ್ರಾಣ ಕಳೆದುಕೊಳ್ಳುತ್ತಿರುವುದು ಕಾನೂನಿನಡಿ ಒಳ್ಳೆಯ ಬೆಳವಣಿಗೆಯಲ್ಲ” ಎಂದು ಟೀಕಿಸಿದ್ದಾರೆ.
ನ್ಯಾಯಮೂರ್ತಿ ಸೂರ್ಯ ಕಾಂತ್ ಅವರನ್ನೊಳಗೊಂಡ ಪೀಠದ ಭಾಗವಾದ ನ್ಯಾಯಮೂರ್ತಿ ಭುಯಾನ್ ಅವರು ಗೌಹಾಟಿ ಹೈಕೋರ್ಟ್ ಆದೇಶದ ವಿರುದ್ಧ ಸಲ್ಲಿಸಲಾಗಿರುವ ವಿಶೇಷ ರಜಾ ಅವಧಿಯ ಅರ್ಜಿಯ ವಿಚಾರಣೆ ನಡೆಸಿದ್ದಾರೆ.
ಅರ್ಜಿದಾರರು ನಕಲಿ ಎನ್‌ಕೌಂಟರ್‌ಗಳ ಬಗ್ಗೆ ತನಿಖೆ ನಡೆಸಲು ಕೋರಿ ಗೌಹಾಟಿ ಹೈಕೋರ್ಟ್‌ಗೆ ಮೊರೆ ಹೋಗಿದ್ದರು. ಆದರೆ, ಅವರ ಮನವಿಯನ್ನು ತಿರಸ್ಕರಿಸಿದ್ದ ಹೈಕೋರ್ಟ್, ಪ್ರತಿ ಪ್ರಕರಣದಲ್ಲೂ ರಾಜ್ಯದ ಅಧಿಕಾರಿಗಳು ತನಿಖೆ ನಡೆಸುತ್ತಿರುವುದರಿಂದ ಆಪಾದಿತ ಘಟನೆಗಳ ಬಗ್ಗೆ ಪ್ರತ್ಯೇಕ ತನಿಖೆ ಅಗತ್ಯವಿಲ್ಲ ಎಂದು ಹೇಳಿರುವುದಾಗಿ ವರದಿಯಾಗಿದೆ.
ಪ್ರಕರಣ ಸಂಬಂಧ ಅಫಿಡವಿಟ್ ಸಲ್ಲಿಸಲು ಅಸ್ಸಾಂ ಸರ್ಕಾರಕ್ಕೆ ಸಮಯ ನೀಡಿರುವ ಸುಪ್ರೀಂ ಕೋರ್ಟ್ ಅರ್ಜಿ ವಿಚಾರಣೆಯನ್ನು ಅಕ್ಟೋಬರ್ 22ಕ್ಕೆ ಮುಂದೂಡಿದೆ.
ಅರ್ಜಿ ವಿಚಾರಣೆ ವೇಳೆ, ನಕಲಿ ಎನ್‌ಕೌಂಟರ್‌ಗಳ ಕುರಿತ ತನಿಖೆಗೆ ನ್ಯಾಯಾಲಯ ಆಯೋಗ ರಚಿಸಲು ಉದ್ದೇಶಿಸಿರುವುದನ್ನು ನ್ಯಾಯಮೂರ್ತಿ ಕಾಂತ್ ಅವರು ಪುನರುಚ್ಚರಿಸಿದ್ದಾರೆ. ಆಯೋಗಕ್ಕೆ ನೇಮಕ ಮಾಡಲು ನಿವೃತ್ತ ನ್ಯಾಯಾಧೀಶರ ಹೆಸರನ್ನು ಸೂಚಿಸಲು ಕಕ್ಷಿದಾರಿಗೆ ಕೋರಿದ್ದಾರೆ.
ಒಂದು ಹಂತದಲ್ಲಿ, ಅಸ್ಸಾಂನ ಹೆಚ್ಚುವರಿ ಅಡ್ವೊಕೇಟ್ ಜನರಲ್ ನಳಿನ್ ಕೊಹ್ಲಿ ಅವರು, ಎನ್‌ಕೌಂಟರ್‌ನಲ್ಲಿ ಭಾಗಿಯಾಗಿದ್ದಾರೆ ಎನ್ನಲಾದ ಯಾವುದೇ ಪೊಲೀಸ್ ಸಿಬ್ಬಂದಿಗೆ ಬಡ್ತಿ ನೀಡಲಾಗಿಲ್ಲ ಎಂದು ಹೇಳಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿದ ನ್ಯಾಯಮೂರ್ತಿ ಭುಯಾನ್ ಅವರು “ಆರೋಪಿಗಳು ಸುಖಾ ಸುಮ್ಮನೆ ತಮ್ಮ ಪ್ರಾಣ ಕಳೆದುಕೊಳ್ಳುತ್ತಿರುವುದು ಕಾನೂನಿನಲ್ಲಿ ಒಳ್ಳೆಯದಲ್ಲ” ಎಂದಿದ್ದಾರೆ.
ಅಸ್ಸಾಂನ ವಕೀಲರಾದ ಆರಿಫ್ ಎಂಡಿ ಯಾಸಿನ್ ಜ್ವಾಡ್ಡರ್ ಅವರು, ಅಸ್ಸಾಂನಲ್ಲಿ ರಾಜ್ಯ ಪೊಲೀಸರು ನಡೆಸಿದ ಎನ್‌ಕೌಂಟರ್ ವಿಷಯವನ್ನು ಪ್ರಸ್ತಾಪಿಸಿ ಅರ್ಜಿ ಸಲ್ಲಿಸಿದ್ದಾರೆ.
ಮೇ 2021ರಿಂದ (ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಅಧಿಕಾರ ವಹಿಸಿಕೊಂಡಾಗಿಂದ) ಅಸ್ಸಾಂ ಪೊಲೀಸರು ಮತ್ತು ವಿವಿಧ ಪ್ರಕರಣಗಳ ಆರೋಪಿಗಳ ನಡುವೆ 80ಕ್ಕೂ ಹೆಚ್ಚು ನಕಲಿ ಎನ್‌ಕೌಂಟರ್‌ಗಳು ನಡೆದಿವೆ ಎಂದು ಆರೋಪಿಸಿರುವ ಅರ್ಜಿದಾರರು, ಸಿಬಿಐ, ಎಸ್‌ಐಟಿ ಅಥವಾ ಇತರ ರಾಜ್ಯಗಳ ಪೊಲೀಸ್ ತಂಡದಂತಹ ಸ್ವತಂತ್ರ ಏಜೆನ್ಸಿಯಿಂದ ಈ ಬಗ್ಗೆ ತನಿಖೆ ನಡೆಸುವಂತೆ ಕೋರಿದ್ದಾರೆ.
ಅರ್ಜಿ ಸಂಬಂಧ, ಕಳೆದ ವರ್ಷದ ಜುಲೈ 17ರಂದು ಅಸ್ಸಾಂ ಸರ್ಕಾರ, ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ ಮತ್ತು ಅಸ್ಸಾಂ ಮಾನವ ಹಕ್ಕುಗಳ ಆಯೋಗಕ್ಕೆ ಸುಪ್ರೀಂ ಕೋರ್ಟ್ ನೋಟಿಸ್ ನೀಡಿದೆ.
ಈ ವರ್ಷದ ಏಪ್ರಿಲ್‌ನಲ್ಲಿ, ಅರ್ಜಿದಾರರು ಕೆಲವು ಹೆಚ್ಚುವರಿ ಮಾಹಿತಿಗಳನ್ನು ನೀಡುವಂತೆ ನ್ಯಾಯಾಲಯ ಸೂಚಿಸಿತ್ತು. ಅದರಂತೆ ಅವರು ಟಿನ್ಸುಕಿಯಾ ಎನ್‌ಕೌಂಟರ್ ಪ್ರಕರಣದ ಸಂತ್ರಸ್ತರ ಅಫಿಡವಿಟ್‌ಗಳನ್ನು ಸಲ್ಲಿಸಿದ್ದಾರೆ ಎಂದು ಹೇಳಲಾಗ್ತಿದೆ. ಈ ಪ್ರಕರಣದಲ್ಲಿ ಮೂವರು ವ್ಯಕ್ತಿಗಳು (ದೀಪಜ್ಯೋತಿ ನಿಯೋಗ್, ಬಿಸ್ವನಾಥ್ ಬರ್ಗೋಹೈನ್ ಮತ್ತು ಮನೋಜ್ ಬುರಾಗೊಹೈನ್) ಪೊಲೀಸ್ ಗುಂಡಿನ ದಾಳಿಯಲ್ಲಿ ಗಾಯಗೊಂಡಿದ್ದಾರೆ.
ಟಿನ್ಸುಕಿಯಾ ಎನ್‌ಕೌಂಟರ್ ಪ್ರಕರಣದ ಇಬ್ಬರು ಬಲಿಪಶುಗಳ ಕುಟುಂಬ ಸದಸ್ಯರು, ಅಂದರೆ. ಬಿಸ್ವನಾಥ್ ಮತ್ತು ಮನೋಜ್‌ನ ಕುಟುಂಬಸ್ಥರು ಇಬ್ವರು ನಾಪತ್ತೆಯಾಗಿರುವುದಾಗಿ ದೂರು ದಾಖಲಿಸಲು ಮುಂದಾಗಿದ್ದರು. ಆದರೆ, ಅವರು ನಿಷೇಧಿತ ಉಗ್ರಗಾಮಿ ಸಂಘಟನೆ ಉಲ್ಫಾಗೆ ಸೇರಲು ತೆರಳಿದ್ದಾರೆ ಎಂದು ಒಪ್ಪಿಕೊಳ್ಳದ ಹೊರತು ದೂರು ದಾಖಲಿಸಿಕೊಳ್ಳುವುದಿಲ್ಲ ಎಂದು ಸ್ಥಳೀಯರ ಪೊಲೀಸರು ನಿರಾಕರಿಸಿದ್ದಾರೆ. ಎನ್‌ಕೌಂಟರ್ ಬಳಿಕ ಸಂತ್ರಸ್ತರ ಮೇಲೆಯೇ ಎಫ್‌ಐಆರ್ ದಾಖಲಿಸಲಾಗಿದೆ ಎಂದು ಅರ್ಜಿದಾರರು ನ್ಯಾಯಾಲಯಕ್ಕೆ ಹೇಳಿದ್ದಾರೆ.
ಅಸ್ಸಾಂನ ಧೋಲ್ಲಾ ಪೊಲೀಸ್ ಠಾಣೆಯ ಪ್ರಭಾರಿ ಅಧಿಕಾರಿ ಎನ್‌ಕೌಂಟರ್ ನಡೆದ ಸ್ಥಳದಲ್ಲಿ ಹಾಜರಿದ್ದರು. ಅವರ ಪಿಸ್ತೂಲ್ ಅನ್ನು ಸಂತ್ರಸ್ತೆ ದೀಪಜ್ಯೋತಿ ನಿಯೋಗ್ ಕಸಿದುಕೊಂಡಿದ್ದಾರೆ ಎಂದು ಆರೋಪಿಸಲಾಗಿದೆ. ಹೀಗಿರುವಾಗ, ಅದೇ ಪೊಲೀಸ್ ಅಧಿಕಾರಿ ತನ್ನನ್ನೇ ಪ್ರಕರಣದ ತನಿಖಾಧಿಕಾರಿಯಾಗಿ ನೇಮಿಸಿಕೊಂಡಿದ್ದಾರೆ ಎಂದು ಅರ್ಜಿದಾರ ನ್ಯಾಯಾಲಯಕ್ಕೆ ವಿವರಿಸಿದ್ದಾರೆ ಎಂದು ತಿಳಿದು ಬಂದಿದೆ.
ಇದನ್ನೂ ಓದಿ : ರಷ್ಯಾ ಸೇನೆಯಲ್ಲಿ ಭಾರೀ ಮೊತ್ತದ ವೇತನದ ಆಸೆಗೆ ಪಾಸ್ ಪೋರ್ಟ್ ತೊರೆದ ಭಾರತೀಯರು!


