ಉನ್ನಾವೋದಲ್ಲಿ ಅತ್ಯಾಚಾರ ಸಂತ್ರಸ್ಥೆಯ ಮೇಲೆ ಇಬ್ಬರು ಅತ್ಯಾಚಾರಿಗಳು ಮತ್ತು ಇತರ ಮೂವರು ಪೆಟ್ರೋಲ್ ಸುರಿದು ಬೆಂಕಿಹಚ್ಚಿದ್ದರು. ಆ ಹುಡುಗಿ ಕೊನೆಗೆ ಸಾವನಪ್ಪಬೇಕಾಯಿತು. ಈ ಘಟನೆ ನಡೆದ ಹಿಂದಿನ ದಿನ ಮಜಾಫರ್ ನಗರದ ಹಳ್ಳಿಯೊಂದರಲ್ಲಿ 30 ವರ್ಷದ ಮಹಿಳೆಯೊಬ್ಬರು ತನ್ನ ಮೇಲಾದ ಅತ್ಯಾಚಾರ ಪ್ರಕರಣವನ್ನು ನ್ಯಾಯಾಲಯದಿಂದ ಹಿಂಪಡೆಯಲು ನಿರಾಕರಿಸಿದ್ದಕ್ಕಾಗಿ ಆಸಿಡ್ ದಾಳಿಗೆ ಒಳಗಾಗಿದ್ದಾರೆ. ಮಹಿಳೆಯ ದೇಹದ ಶೇ.30ರಷ್ಟು ಭಾಗ ಸುಟ್ಟಿದ್ದು, ನಗರದ ಮೀರತ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಮಹಿಳೆಯು ನಾಲ್ವರು ಆರೋಪಿಗಳ ವಿರುದ್ಧ ಇಲ್ಲಿನ ಸೆಷನ್ ನ್ಯಾಯಾಲಯದಲ್ಲಿ ಅತ್ಯಾಚಾರ ದೂರು ದಾಖಲಿಸಿದ್ದರು. ದೂರನ್ನು ಹಿಂಪಡೆಯುವಂತೆ ಪೀಡಿಸಿದ್ದ ಆರೋಪಿಗಳು ಬುಧವಾರ ರಾತ್ರಿ ಮಹಿಳೆಯ ಮನೆಗೆ ನುಗ್ಗಿ ಆಕೆಯ ಮೇಲೆ ಆಸಿಡ್ ಸುರಿದಿದ್ದಾರೆ ಎಂದು ಶಹಪುರ್ ಪೋಲೀಸ್ ಠಾಣಾಧಿಕಾರಿ ಗಿರ್ಜಾ ಶಂಕರ್ ತ್ರಿಪಾಠಿ ತಿಳಿಸಿದ್ದಾರೆ.
ಮಹಿಳೆಯ ಮೇಲೆ ಆಸಿಡ್ ದಾಳಿ ಮಾಡಿದ ನಾಲ್ವರನ್ನು ಕಸರ್ವಾ ಗ್ರಾಮದ ಆರಿಫ್, ಶಹನಾವಾಜ್, ಪರೀಫ್ ಮತ್ತು ಅಬಿದ್ ಎಂದು ಗುರುತಿಸಲಾಗಿದೆ. ಈ ನಾಲ್ವರು ಪರಾರಿಯಾಗಿದ್ದು, ಶೀಘ್ರದಲ್ಲೇ ಅವರನ್ನು ಬಂಧಿಸುತ್ತೇವೆ ಎಂದು ಪೊಲೀಸರು ಹೇಳಿದ್ದಾರೆ.
ಮಹಿಳೆ ಅತ್ಯಾಚಾರದ ವಿರುದ್ಧ ಪೊಲೀಸರಿಗೆ ದೂರು ನೀಡುವ ಬದಲು ನ್ಯಾಯಾಲಯದಲ್ಲಿ ದೂರು ದಾಖಲಿಸಿದ್ದರ ಬಗ್ಗೆ ವಿವರಿಸಿದ ತ್ರಿಪಾಠಿ, ಈ ಹಿಂದೆ ಮಹಿಳೆ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರು. ಆದರೆ ತನಿಖೆ ವೇಳೆ ಅತ್ಯಾಚಾರಕ್ಕೆ ಸಂಬಂಧಿಸಿದ ಯಾವುದೇ ಪುರಾವೆಗಳು ದೊರೆಯದ ಕಾರಣ ಪ್ರಕರಣವನ್ನು ಮುಚ್ಚಲಾಗಿತ್ತು. ನಂತರ ಮಹಿಳೆ ನ್ಯಾಯಾಲಯದಲ್ಲಿ ದೂರು ದಾಖಲಿಸಿದ್ದಾರೆ ಎಂದು ತಿಳಿಸಿದ್ದಾರೆ.
ಆರೋಪಿಗಳ ವಿರುದ್ಧ ಆಸಿಡ್ ದಾಳಿ ಘಟನೆಗಳ ಹಿನ್ನೆಲೆಯಲ್ಲಿ ಜಾರಿಗೆ ತರಲಾಗಿರುವ ಭಾರತೀಯ ದಂಡ ಸಂಹಿತೆ(IPC)ಯ ಸೆಕ್ಷನ್ 326ಎ ಅಡಿಯಲ್ಲಿ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ. ಇದರನ್ವಯ ಅಪರಾಧ ಸಾಬೀತಾದರೆ ಅರೋಪಿಗಳಿಗೆ 10 ವರ್ಷ ಜೈಲು ಶಿಕ್ಷೆ ವಿಧಿಸಲಾಗುತ್ತದೆ.
ಎಫ್‌ಐಆರ್‌ನಲ್ಲಿ ಐಪಿಸಿ ಸೆಕ್ಷನ್ 323(ನೋವುಂಟು ಮಾಡುವುದು), 452(ಹಲ್ಲೆ ಮಾಡುವ ಉದ್ದೇಶದಿಂದ ಒಬ್ಬರ ಮನೆ ಮೇಲೆ ದಾಳಿ), 504(ಅವಮಾನ ಮಾಡುವುದು) ಮತ್ತು 506(ಪ್ರಾಣಬೆದರಿಕೆ)ಗಳನ್ನು ದಾಖಲಿಸಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.


