ಜನವರಿ 5 ರಂದು ಬುಧವಾರ ಸಾಮಾಜಿಕ ಹೋರಾಟಗಾರ್ತಿ ಬಿಂದು ಅಮ್ಮಿನಿ ಮೇಲೆ ಹಲ್ಲೆ ನಡೆಸಿದ್ದ ಆರೋಪಿ ಮೋಹನ್‌ದಾಸ್ ಎಂಬುವವರನ್ನು ಬಂಧಿಸಲಾಗಿದೆ. ಶಬರಿಮಲೆಗೆ ಪ್ರವೇಶ ಮಾಡಿದ್ದ 10 ರಿಂದ 50 ವರ್ಷದೊಳಗಿನ ಮೊದಲ ಮಹಿಳೆಯರಲ್ಲಿ ಬಿಂದು ಅಮ್ಮಿನಿ ಕೂಡ ಒಬ್ಬರು.
ಆರೋಪಿ ಕೋಝಿಕ್ಕೋಡ್‌ನ ಥೋಡಿಯಿಲ್‌ನವರು. ಘಟನೆ ಕುರಿತು ಹೆಚ್ಚಿನ ತನಿಖೆ ನಡೆಯುತ್ತಿದೆ ಎಂದು ಗುರುವಾರ ಕೋಝಿಕೋಡ್ ಜಿಲ್ಲೆಯ ವೆಲ್ಲಾಯಿಲ್ ಪೊಲೀಸರು ತಿಳಿಸಿದ್ದಾರೆ.
ಜನವರಿ 5 ರಂದು ಕೋಝಿಕ್ಕೋಡ್‌ನಲ್ಲಿ ಬಿಂಧು ಅಮ್ಮಿನಿ ಮೇಲೆ ವ್ಯಕ್ತಿಯೊಬ್ಬರು ಹಲ್ಲೆ ನಡೆಸಿದ್ದರು. ಈ ಹಲ್ಲೆಯ ವೀಡಿಯೊಗಳು ಮತ್ತು ಚಿತ್ರಗಳು ಸಾಕಷ್ಟು ವೈರಲ್ ಆಗಿದ್ದು, ದೃಶ್ಯದಲ್ಲಿ ಆರೋಪಿ ಬಿಂದು ಅವರ ಕುತ್ತಿಗೆ ಹಿಸುಕಿ ಉಸಿರುಗಟ್ಟಿಸಲು ಪ್ರಯತ್ನಿಸುತ್ತಿರುವುದು ಕಾಣಬಹುದಾಗಿದೆ.
ಹೋರಾಟಗಾರ್ತಿ ಬಿಂದು ಅವರ ಮೇಲೆ ದಾಳಿಯಾಗುತ್ತಿರುವುದು ಇದು ಮೊದಲೇನಲ್ಲ. ಕಳೆದ ಡಿಸೆಂಬರ್‌ನಲ್ಲಿಯೂ ಆಕೆಗೆ ಆಟೋರಿಕ್ಷಾ ಡಿಕ್ಕಿ ಹೊಡೆದು ತಲೆಗೆ ಗಾಯವಾಗಿತ್ತು. ಬಳಿಕ ಬಿಂದು ಕೊಯಿಲಾಂಡಿ ಪೊಲೀಸರಿಗೆ ದೂರು ನೀಡಿ, ತಾನು ಶಬರಿಮಲೆ ಅಭಿಯಾನ ನಡೆಸುತ್ತಿದ್ದ ಕಾರಣಕ್ಕೆ ದಾಳಿ ಮಾಡಲಾಗಿದೆ ಎಂದು ಆರೋಪಿಸಿದ್ದರು.
ಇದನ್ನೂ ಓದಿ: ಕೇರಳ: ತಂದೆ ಜೊತೆ ಶಬರಿಮಲೆಗೆ ತೆರಳಲು 9 ವರ್ಷದ ಬಾಲಕಿಗೆ ಹೈಕೋರ್ಟ್ ಅನುಮತಿ
“ನಾನು ಇನ್ನು ಮುಂದೆ ಇಲ್ಲಿ ಸುರಕ್ಷಿತವಾಗಿರಲಾರೆ, ದೇಶವನ್ನು ತೊರೆದು ಬೇರೆಡೆ ಆಶ್ರಯ ಪಡೆಯುವುದು ಒಂದೇ ನನ್ನ ಮುಂದಿನ ಆಯ್ಕೆಯಾಗಿದೆ” ಎಂದು ನೋವಿನಿಂದ ಬಿಂದು ಅಮ್ಮಿನಿ ಹೇಳಿದ್ದಾರೆ.
“ನಾನು ಶಬರಿಮಲೆಗೆ ಹೋಗಿ ಬಂದ ಬಳಿಕ ಇಂತಹ ದಾಳಿಗಳಿಗೆ ಒಳಗಾಗಿದ್ದೇನೆ. ನಿನ್ನೆಯ (ಜ.5) ಘಟನೆ ಕೂಡ ಪಿತೂರಿಯಿಂದ ಕೂಡಿದೆ. ಏಕೆಂದರೆ ನನ್ನನ್ನು ಎಲ್ಲಿ ನೋಡಿದರು ದಾಳಿ ಮಾಡುವಂತೆ ಎಲ್ಲಾ ಸಣ್ಣ ಮತ್ತು ದೊಡ್ಡ ಬಲಪಂಥೀಯ ಗುಂಪುಗಳಿಗೆ ಆದೇಶ ನೀಡಲಾಗಿದೆ. ನನ್ನ ಮೇಲೆ ದಾಳಿ ಮಾಡುವುದರಿಂದ ಅವರಿಗೆ ಬಹುಮಾನ ಮತ್ತು ಗೌರವ ಸಿಗುತ್ತದೆ” ಎಂದು ಬಿಂದು ಅಮ್ಮಿನಿ ಹೇಳಿದ್ದಾರೆ.
ಇದಲ್ಲದೆ, ’ರಾಜ್ಯದಲ್ಲಿ ಪೊಲೀಸರು ಸಂಘ ಪರಿವಾರದ ಪರವಾಗಿ ನಿಂತಿದ್ದಾರೆ. ತನ್ನ ಮೇಲಿನ ಯಾವುದೇ ದಾಳಿಯ ಬಗ್ಗೆ ಪೊಲೀಸರು ಸರಿಯಾದ ತನಿಖೆ ನಡೆಸಿಲ್ಲ’ ಎಂದು ಬಿಂದು ಅಮ್ಮಿನಿ ಆರೋಪಿಸಿದ್ದಾರೆ.
ಸೆಪ್ಟೆಂಬರ್ 2018 ರಲ್ಲಿ ಸುಪ್ರೀಂ ಕೋರ್ಟ್ ತನ್ನ ತೀರ್ಪಿನಲ್ಲಿ ಮಹಿಳೆಯರಿಗೆ ಶಬರಿಮಲೆ ದೇವಾಲಯಕ್ಕೆ ಪ್ರವೇಶ ಮಾಡಲು ಅನುಮತಿಸಿದ ನಂತರ, ಜನವರಿ 2, 2019 ರಂದು ಬಿಂದು ಮತ್ತು ಕನಕ ದುರ್ಗೆ ಎಂಬ ಇಬ್ಬರು ಮಹಿಳೆಯರು ಶಬರಿಮಲೆ ದೇಗುಲಕ್ಕೆ ತೆರಳುವ ಮೂಲಕ ಇತಿಹಾಸ ನಿರ್ಮಿಸಿದ್ದರು.


