ಅಪ್ರಾಪ್ತ ಬಾಲಕಿಗೆ ತನ್ನ ತಂದೆಯೊಂದಿಗೆ ಶಬರಿಮಲೆ ದೇವಸ್ಥಾನಕ್ಕೆ ತೆರಳಲು ಕೇರಳ ಹೈಕೋರ್ಟ್ ಮಂಗಳವಾರ ಅನುಮತಿ ನೀಡಿದೆ. ಒಂಬತ್ತು ವರ್ಷದ ಬಾಲಕಿ ಶಬರಿಮಲೆ ದೇಗುಲದ ಗರ್ಭಗುಡಿಗೆ ತನ್ನ ತಂದೆಯೊಂದಿಗೆ ಹೋಗಲು ಅನುಮತಿ ಕೋರಿ ಸಲ್ಲಿಸಿದ ಮನವಿಯ ಮೇಲೆ ಈ ಆದೇಶವನ್ನು ನೀಡಲಾಗಿದೆ.
ಬಾಲಕಿ ಮತ್ತು ಆಕೆಯ ತಂದೆ ಆಗಸ್ಟ್ 23 ರಂದು ಶಬರಿಮಲೆ ದೇವಸ್ಥಾನಕ್ಕೆ ತೆರಳಲಿದ್ದಾರೆ. ಬಾಲಕಿ 10 ವರ್ಷ ತುಂಬುವ ಮುನ್ನವೇ ಶಬರಿಮಲೆಗೆ ಹೋಗಲು ಬಯಸಿದ್ದಾಗಿ ಬಾಲಕಿ ಪರ ವಕೀಲರು ನ್ಯಾಯಾಲಯಕ್ಕೆ ತಿಳಿಸಿದ್ದರು.
ಈ ವರ್ಷದ ಏಪ್ರಿಲ್‌ನಲ್ಲಿ ನ್ಯಾಯಾಲಯವು ನೀಡಿದ್ದ ಇದೇ ಆದೇಶಕ್ಕೆ ಅನುಗುಣವಾಗಿ ಈ ತೀರ್ಪು ನೀಡಲಾಗಿದೆ. ಆದೇಶದಲ್ಲಿ ಲಸಿಕೆ ಹಾಕಿಸಿದ ವ್ಯಕ್ತಿಗಳ ಜೊತೆಯಲ್ಲಿ ಮಕ್ಕಳು ಎಲ್ಲಾ ಚಟುವಟಿಕೆಗಳಲ್ಲಿ ಭಾಗವಹಿಸಬಹುದು ಎನ್ನಲಾಗಿದೆ. ಕೇರಳ ರಾಜ್ಯ ಸರ್ಕಾರ ಕೂಡ ಇದೇ ಆದೇಶವನ್ನು ಜಾರಿಗೊಳಿಸಿದೆ.
ಇದನ್ನೂ ಓದಿ: ಭಾರತದ ಹಾಕಿ ತಾರೆ ಶ್ರೀಜೇಶ್‌ಗೆ 2 ಕೋಟಿ ರೂ. ಘೋಷಿಸಿದ ಕೇರಳ!
ಶಬರಿಮಲೆ ಅಯ್ಯಪ್ಪ ದೇವಸ್ಥಾನವು ಆಗಸ್ಟ್ 15 ರಂದು ಒಪನ್ ಆಗಲಿದೆ. ಕೋವಿಡ್ ನಿರ್ಬಂಧಗಳ ದೃಷ್ಟಿಯಿಂದ, ಒಂದು ದಿನದಲ್ಲಿ ಕೇವಲ 15,000 ಭಕ್ತರನ್ನು ಮಾತ್ರ ದರ್ಶನಕ್ಕೆ ಅನುಮತಿಸಲಾಗಿದೆ. ಆಗಸ್ಟ್ 23 ರ ಸಂಜೆಯೊಳಗೆ ಮಾಸಿಕ ಪೂಜೆಗಳು ಮುಗಿದ ನಂತರ ದೇಗುಲವನ್ನು ಮತ್ತೆ ಮುಚ್ಚಲಾಗುತ್ತದೆ.
2018 ರಿಂದ, 10 ರಿಂದ 50 ವಯಸ್ಸಿನ ಮಹಿಳೆಯರು ದೇವಸ್ಥಾನಕ್ಕೆ ಪ್ರವೇಶಿಸುವುದನ್ನು ತಡೆಯುವ ಕಾನೂನನ್ನು ಸುಪ್ರೀಂ ಕೋರ್ಟ್ ರದ್ದುಗೊಳಿಸಿದ ನಂತರ ದೇವಾಲಯ ಪ್ರವೇಶವು ವಿವಾದಗಳಲ್ಲಿ ಸಿಲುಕಿಕೊಂಡಿದೆ.
ಸುಪ್ರೀಂ ಕೋರ್ಟ್ ತೀರ್ಪಿನ ವಿರುದ್ಧ ರಾಜ್ಯದಾದ್ಯಂತ ಭಾರೀ ಪ್ರತಿಭಟನೆ ನಡೆದು, ಭಕ್ತರು ಬೀದಿಗಿಳಿದು ಹೋರಾಟ ನಡೆಸಿದ್ದರು.
ಇದನ್ನೂ ಓದಿ: ಪ್ರೇಮ ನಿವೇದನೆ ತಿರಸ್ಕರಿಸಿದ ಮಹಿಳೆಯರಿಗೆ ಕಿರುಕುಳ ನೀಡಿದರೆ ಕಠಿಣ ಶಿಕ್ಷೆ: ಕೇರಳ ಸಿಎಂ


