ಭರತ ಖಂಡಕ್ಕೆ ಜಾಗತಿಕ ಮನ್ನಣೆ ತಂದುಕೊಟ್ಟ ಮಹನೀಯರಲ್ಲಿ ಬುದ್ಧ, ಮಹಾವೀರ, ಗಾಂಧೀಜಿ, ಅಂಬೇಡ್ಕರ್ ಮೊದಲಾದವರು ಪ್ರಮುಖರು. ಇವರು ತಮ್ಮ ಬದುಕಿನುದ್ದಕ್ಕೂ ಮಾನವೀಯ ಮೌಲ್ಯಗಳನ್ನು ಪ್ರತಿಪಾದಿಸಿ ಇತಿಹಾಸದಲ್ಲಿ ಮಹತ್ವದ ಸ್ಥಾನ ಗಳಿಸಿದ್ದಾರೆ. ಮನುಕುಲದ ಉದ್ಧಾರಕ್ಕೆ ಅಹರ್ನಿಶಿ ಶ್ರಮಿಸಿದ ಇವರು ಶಕ್ತಿರಾಜಕಾರಣದಿಂದ ವಿಮುಖರಾಗಿ ದೀನದುರ್ಬಲ ವರ್ಗಗಳ ಮುಕ್ತಿದಾತರು ಮತ್ತು ಭಾಗ್ಯವಿದಾತರೆಂದು ಜನಮಾನಸದಲ್ಲಿ ಉಳಿದಿದ್ದಾರೆ.

ವಿಶೇಷವಾಗಿ ಮಹಾತ್ಮಗಾಂಧಿ ಭಾರತದ ಗಡಿಯನ್ನು ದಾಟಿ ವಿಶ್ವದೆಲ್ಲೆಡೆ ಅಹಿಂಸೆಯ ಪ್ರತಿಪಾದಕರೆಂಬ ಮನ್ನಣೆ ಗಳಿಸಿದ್ದಾರೆ. ಇವರು ಮನಸ್ಸು ಮಾಡಿದ್ದರೆ ಭಾರತದ ಮೊದಲ ಪ್ರಧಾನಿ ಹಾಗೂ ವಿಶ್ವಸಂಸ್ಥೆಯ ಮಹಾಪ್ರಧಾನ ಕಾರ್ಯದರ್ಶಿ ಪಟ್ಟವನ್ನು ಅಲಂಕರಿಸಬಹುದಿತ್ತು. ಸತ್ಯ, ಅಹಿಂಸೆ, ಪ್ರೀತಿ, ಸತ್ಯಾಗ್ರಹ ಮೊದಲಾದ ಮೌಲಿಕ ಅಸ್ತ್ರಗಳನ್ನು ಪರಿಣಾಮಕಾರಿಯಾಗಿ ಬಳಸಿ ಬ್ರಿಟಿಷರ ಬಂದೂಕು ಶಕ್ತಿಯನ್ನು ಮಣಿಸಿದರೆಂದು ಇಂಗ್ಲೆಂಡಿನ ಮಾಜಿ ಪ್ರಧಾನಿ ಹಾಗೂ ಉಕ್ಕಿನ ಮನುಷ್ಯ ಚರ್ಚಿಲ್ ಶ್ಲಾಘಿಸಿದ್ದಾರೆ.

ದೇಶ ವಿಭಜನೆಯ ಹಾನಿಕಾರಕ ಪರಿಣಾಮಗಳು

ರಾಷ್ಟ್ರವಿಭಜನೆ ಬ್ರಿಟಿಷರು ಭಾರತದ ಎದೆಗೆ ಹೊಡೆದ ಅತ್ಯಂತ ಅಪಾಯಕಾರಿ ಗುಂಡಾಗಿದ್ದು, ಉಪಖಂಡದಾದ್ಯಂತ ಜನರ ಹೃದಯ ಮತ್ತು ನೆನಪುಗಳಲ್ಲಿ ಅಳಿಸಲಾಗದ ಗುರುತು ಮೂಡಿಸಿದೆ. ದೇಶ ವಿಭಜನೆಯಾದ ನಂತರ ಜರುಗಿದ ಕೋಮುಗಲಭೆಗಳಿಂದ ಸುಮಾರು 20 ಲಕ್ಷ ಅಮಾಯಕರ ಹತ್ಯೆ, 1 ಲಕ್ಷ ಮಹಿಳೆಯರ ಅಪಹರಣ – ಮಾನಭಂಗ ಮತ್ತು 30 ಲಕ್ಷ ಪುರುಷರು, ಮಹಿಳೆಯರು ಮತ್ತು ಮಕ್ಕಳು ಅತಂತ್ರರಾಗಿರುವುದು ಇಂದಿಗೂ ಕೂಡ ದೇಶದ ಇತಿಹಾಸದಲ್ಲಿ ಆರದ ಗಾಯವಾಗಿದೆ. ರಾಷ್ಟ್ರವಿಭಜನೆಯಿಂದ ಭಾರತಕ್ಕೆ ವಿಶೇಷವಾಗಿ ಪೂರ್ವ ಮತ್ತು ಪಶ್ಚಿಮ ಭಾಗಗಳಲ್ಲಿ ಬಹಳಷ್ಟು ಭೂಪ್ರದೇಶಗಳ ನಷ್ಟವಾಯಿತು. ಅದೇ ಸಂದರ್ಭದಲ್ಲಿ ಭಾರತೀಯರನ್ನು ಭಾರತೀಯರ ವಿರುದ್ಧ, ಹಿಂದೂ ಮತ್ತು ಸಿಖ್ಖರನ್ನು ಮುಸಲ್ಮಾನರ ವಿರುದ್ಧ ಎತ್ತಿ ಕಟ್ಟುವ ಕೆಲಸವನ್ನು ದೇಶ ವಿರೋಧಿಗಳು ಮಾಡಿದರು.

ಆಗಸ್ಟ್ 15, 1947ರಂದು ಗಾಂಧಿ ಎಲ್ಲಿದ್ದರು?

ದೇಶ ವಿಭಜನೆಯ ನಿರ್ಧಾರವು ನೋವಿನ ಸಂಗತಿಯಾಗಿದ್ದು ಅದು ಭಾರತ ಮತ್ತು ಪಾಕಿಸ್ತಾನ ಗಳಿಸಿದ ಸ್ವಾತಂತ್ರ್ಯದ ಸಂತೋಷವನ್ನು ಕಸಿದುಕೊಂಡಿತು. ತಮ್ಮ ಬದುಕಿನುದ್ದಕ್ಕೂ ಭಾರತದ ಸ್ವಾತಂತ್ರ್ಯಕ್ಕಾಗಿ ಅವಿರತ ಹೋರಾಟ ನಡೆಸಿದ ಮಹಾತ್ಮಗಾಂಧಿ ಧರ್ಮದ ಆಧಾರದ ಮೇಲೆ ಭಾರತ ಮತ್ತು ಪಾಕಿಸ್ತಾನಗಳೆಂಬ ಎರಡು ದೇಶಗಳು ಉದಯಿಸಿದ ನಂತರ ಸ್ವಾತಂತ್ರ್ಯವನ್ನು ನವದೆಹಲಿಯಲ್ಲಿ ಸಂಭ್ರಮಿಸುವುದರ ಬದಲಿಗೆ ಬಂಗಾಳದ ಕಲ್ಕತ್ತಾ ಮತ್ತು ನೌಖಾಲಿಗಳಲ್ಲಿ ಹಿಂದೂ – ಮುಸಲ್ಮಾನರ ನಡುವಣ ಕೋಮುಗಲಭೆಗಳಲ್ಲಿ ನೊಂದವರ ಕಣ್ಣೀರು ಒರೆಸುವ ಕಾಯಕದಲ್ಲಿ ನಿರತರಾಗಿದ್ದರು.

ಅಂದು ದೇಶ ವಿಭಜನೆಯ ನಂತರ ಪಶ್ಚಿಮದ ಪಂಜಾಬ್ ಮತ್ತು ಪೂರ್ವದ ಬಂಗಾಳ ಪ್ರಾಂತ್ಯಗಳಲ್ಲಿ ಅಧಿಕ ಪ್ರಮಾಣದ ಸಾವು ನೋವುಗಳು ಸಂಭವಿಸಿದವು. ಬಂಗಾಳದ ನೌಖಾಲಿಯಲ್ಲಿ ಅಧಿಕ ಸಂಖ್ಯೆಯ ಮುಸಲ್ಮಾನರು ತೊಂದರೆಗೊಳಗಾಗಿದ್ದರು. ಗಾಂಧಿ ಭಾರತದಲ್ಲಿ ಸ್ವಾತಂತ್ರ್ಯವನ್ನು ಸಂಭ್ರಮಿಸುವುದಕ್ಕಿಂತ ಮಿಗಿಲಾಗಿ ನೌಖಾಲಿಗೆ ಖುದ್ದಾಗಿ ಭೇಟಿ ನೀಡಿ ಮುಸಲ್ಮಾನರ ಸಂಕಷ್ಟವನ್ನು ಪರಿಹರಿಸುವ ಕಾಯಕಕ್ಕೆ ಮಾನವೀಯತೆಯ ನೆಲೆಗಟ್ಟಿನಲ್ಲಿ ಹೆಚ್ಚಿನ ಮಹತ್ವ ನೀಡಿದರು. ಗಾಂಧಿಯ ಈ ನಡೆ ಬಹಳಷ್ಟು ಹಿಂದೂಗಳ ಕೆಂಗಣ್ಣಿಗೆ ಗುರಿಯಾಯಿತು. ಗಾಂಧಿ ಹಿಂದೂ ಧರ್ಮದ ಚಾತುರ್ವರ್ಣ ಪದ್ಧತಿಯನ್ನು ಸಮರ್ಥಿಸಿದರೂ ಕೂಡ ಹಿಂದೂ ಮೂಲಭೂತವಾದಿಯಾಗಿರಲಿಲ್ಲ.

ಗಾಂಧಿ ಆಗಸ್ಟ್ 09, 1947ರಂದು ಕಲ್ಕತ್ತಾ ನಗರಕ್ಕೆ ಭೇಟಿ ನೀಡಿ ಮೊಹಮ್ಮದ್ ಉಸ್ಮಾನ್ ಎಂಬುವರ ನೇತೃತ್ವದ ಮುಸ್ಲಿಮ್ ಲೀಗ್ ಬಂಧುಗಳನ್ನು ಭೇಟಿ ಮಾಡಿ ಕೋಮುಗಲಭೆಯಿಂದ ಮುಸಲ್ಮಾನರಿಗೆ ಅವಶ್ಯಕ ರಕ್ಷಣೆ ನೀಡುವುದಾಗಿ ಭರವಸೆ ನೀಡಿದರು. ಇಲ್ಲಿನ ಸಮಸ್ಯೆಗಳನ್ನು ಬಗೆಹರಿಸಿ ತದನಂತರ ನೌಖಾಲಿಗೆ ತೆರಳುವ ಉದ್ದೇಶವನ್ನು ಗಾಂಧಿ ಹೊಂದಿದ್ದರು. ಅವರು ಹೆಚ್.ಎಸ್.ಸುಹ್ರವರ್ದಿ ಎಂಬ ಬಂಗಾಳದ ಮಾಜಿ ಪ್ರಧಾನಿಯನ್ನು ಭೇಟಿ ಮಾಡಿ ಮುಸಲ್ಮಾನರಿಗೆ ನೀಡಬೇಕಾದ ಸಾಮಾಜಿಕ ಸುರಕ್ಷತೆ ಕುರಿತು ಚರ್ಚಿಸಿದರು. ಇಬ್ಬರು ಕೂಡಿ ಕಲ್ಕತ್ತಾ ನಗರದ ಬೇಲಿಯಾಘಾಟ್ ಬಳಿಯ ಹೈದರಿ ಮ್ಯಾನ್ಸನ್ ಎಂಬ ಭವನದಲ್ಲಿ ಉಳಿದು ವ್ಯಗ್ರರಾಗಿದ್ದ ಹಿಂದೂಗಳನ್ನು ಕೋಮು ಸೌಹಾರ್ದತೆ ಕಾಯ್ದುಕೊಳ್ಳಲು ಮನವೊಲಿಸಿದರು. ಆದಾಗ್ಯೂ ಇವರು ಉಳಿದಿದ್ದ ಭವನಕ್ಕೆ ಹಿಂದೂಗಳು ಧಾಳಿ ಮಾಡಿ ನೀವು ದೆಹಲಿಗೆ ಹೋಗಿ ಎಂದು ಬೆದರಿಕೆ ಹಾಕಿದರು.

ಗಾಂಧಿ ಆಮರಣಾಂತ ಉಪವಾಸ ಮಾಡಿ ಮುಸಲ್ಮಾನರ ಜೀವ ಮತ್ತು ಹಿಂದೂಗಳ ಘನತೆಯನ್ನು ಉಳಿಸುವುದಾಗಿ ದೃಢ ನಿರ್ಧಾರ ಕೈಗೊಂಡರು. ಭಜನೆ, ಪ್ರವಚನ, ಖಾದಿ ನೂಲುವುದು, ಸಾರ್ವಜನಿಕರ ಭೇಟಿ, ಕೋಮು ಸೌಹಾರ್ದತೆಗೆ ಪರಿಶ್ರಮ ಮೊದಲಾದವುಗಳಿಂದ ಆಗಸ್ಟ್ 14ರ ಮಧ್ಯ ರಾತ್ರಿ ಗಾಂಧಿ ನಿದ್ರೆಗೆ ಜಾರಿದರು. ಇದೇ ಸಂದರ್ಭದಲ್ಲಿ ನವದೆಹಲಿಯಲ್ಲಿ ನೆಹರು ಮತ್ತಿತರರು ಸ್ವತಂತ್ರ ಭಾರತದ ಭಾವುಟವನ್ನು ಹಾರಿಸಿದರು. ಗಾಂಧಿ ಕಲ್ಕತ್ತಾ ಮತ್ತು ನೌಖಾಲಿಗಳಲ್ಲಿ ಕೋಮುಗಲಭೆಗಳನ್ನು ಯಶಸ್ವಿಯಾಗಿ ನಿಯಂತ್ರಿಸಿ ಹಿಂದೂ ಮುಸಲ್ಮಾನರ ನಡುವೆ ಸಾಮರಸ್ಯ ಮೂಡಿಸಿದರು. ಹಿಂದೂಗಳು ಮಸೀದಿಗಳಲ್ಲಿ ಮತ್ತು ಮುಸಲ್ಮಾನರು ದೇಗುಲಗಳಲ್ಲಿ ಪ್ರಾರ್ಥನೆ ಸಲ್ಲಿಸಿ ಸ್ವತಂತ್ರ ಭಾರತದ ಸಮಗ್ರತೆ ಮತ್ತು ಪ್ರಗತಿಗಳಿಗೆ ಪಣತೊಟ್ಟರು. ತದನಂತರ ಹಿಂದೂ ಮೂಲಭೂತವಾದಿಗಳ ಕ್ರೌರ್ಯಕ್ಕೆ ಗಾಂಧಿ ಬಲಿಯಾಗಿ ಹುತಾತ್ಮರಾದರು.

ಇಂದು ಮೋದಿ ಮಾಡುತ್ತಿರುವುದೇನು?

ಅಂದು ಗಾಂಧಿ ಕೋಮುಸೌಹಾರ್ದತೆಗಾಗಿ ಪ್ರಾಣ ತ್ಯಾಗ ಮಾಡಿದರೆ ಪ್ರಧಾನಿ ಮೋದಿ ಆಗಸ್ಟ್ 14, 2021ರ ಮಧ್ಯರಾತ್ರಿ ‘ದೇಶ ವಿಭಜನೆಯ ಭಯಾನಕ ನೆನಪಿನ ದಿನ’ ಆಚರಿಸಿ ಕೋಮು ಸೌಹಾರ್ದತೆಗೆ ಧಕ್ಕೆಯುಂಟು ಮಾಡಿದ್ದಾರೆ. ಇಂತಹ ನಿಷ್ಟುರ ಚಿಂತನೆ ಮತ್ತು ನಡೆಯ ಹಿಂದಿನ ಕಾರ್ಯಸೂಚಿಯು ರಾಜಕೀಯ ಮಾತ್ರವಲ್ಲ ಅಪಾಯಕಾರಿಯಾದ ಕೋಮು ವಿಭಜನೆ ತಂತ್ರಗಾರಿಕೆಯೂ ಆಗಿದೆ. ಎಲ್ಲ ಭಾರತೀಯರನ್ನು ಧರ್ಮಾತೀತವಾಗಿ ಒಗ್ಗೂಡಿಸಿ ವಿಶ್ವಾಸಕ್ಕೆ ತೆಗೆದುಕೊಂಡು ಉದ್ಧರಿಸುವ ಕಾಯಕದಲ್ಲಿ ಪ್ರಧಾನಿ ಮೋದಿ ಸಫಲರಾಗಬೇಕು.
ಭಾರತದಲ್ಲಿ ತಿಂಗಳಾನುಗಟ್ಟಲೆ ಅನ್ನದಾತರು ಮೂರು ಹಾನಿಕಾರಕ ಕೃಷಿ ಮಸೂದೆಗಳನ್ನು ವಾಪಸ್ಸು ಪಡೆದು ಕೃಷಿ ಕ್ಷೇತ್ರದ ಸಾರ್ವಭೌಮತ್ವವನ್ನು ರಕ್ಷಿಸಬೇಕೆಂದು ನಡೆಸುತ್ತಿರುವ ಅಹಿಂಸಾತ್ಮಕ ಸತ್ಯಾಗ್ರಹವನ್ನು ಪ್ರಧಾನಿ ಸಂಧಾನ ಮಾರ್ಗದ ಮೂಲಕ ನಿಲ್ಲಿಸಿ ರೈತರ ಹಿತರಕ್ಷಣೆಗೆ ಮುಂದಾಗಬೇಕು. ಗ್ರಾಮೀಣ ಪ್ರದೇಶಗಳಲ್ಲಿ ಮೂಲಸೌಕರ್ಯಗಳು ಮತ್ತು ಜೀವನೋಪಾಯ ಮಾರ್ಗಗಳನ್ನು ಸೃಷ್ಟಿಸಿ ಕೋಟ್ಯಾಂತರ ಜನ ನಗರ ಪ್ರದೇಶಗಳಿಗೆ ಬಂದು ಕೊಳೆಗೇರಿಗಳಲ್ಲಿ ಪ್ರಾಣಿಗಳಿಗಿಂತಲೂ ಕೀಳಾಗಿ ಬದುಕುವ ಸ್ಥಿತಿಯನ್ನು ತಪ್ಪಿಸಬೇಕು. ದಲಿತರು, ಆದಿವಾಸಿಗಳು, ಅಲ್ಪಸಂಖ್ಯಾತರು ಮತ್ತು ಮಹಿಳೆಯರ ಮೇಲೆ ಮೂಲಭೂತ ವಾದಿಗಳು ನಡೆಸುತ್ತಿರುವ ದೌರ್ಜನ್ಯಗಳು ನಿಲ್ಲಬೇಕು. ಮಾನವ ಹಕ್ಕುಗಳ ನಿರಂತರ ಉಲ್ಲಂಘನೆಯಿಂದ ಜಾಗತಿಕ ಮಟ್ಟದಲ್ಲಿ ಕಳೆದು ಹೋಗಿರುವ ರಾಷ್ಟ್ರದ ಘನತೆಯನ್ನು ಕೇಂದ್ರ ಸರ್ಕಾರ ರಕ್ಷಿಸಬೇಕು.

ದೇಶ ವಿಭಜನೆ ಸಂದರ್ಭದಲ್ಲಿ ಜರುಗಿದ ದುರಂತ ಘಟನೆಗಳನ್ನು ಹಿಂದಕ್ಕೆ ತಳ್ಳಿ ಕೋಟ್ಯಾಂತರ ಭಾರತೀಯರ ಬದುಕಿನ ಮೇಲೆ ಹಾನಿಕಾರಕ ಪರಿಣಾಮ ಬೀರುವ ಗಂಭೀರ ಸಮಸ್ಯೆಗಳಾದ ಬಡತನ, ಅನಾರೋಗ್ಯ, ನಿರುದ್ಯೋಗ, ಸಾಮಾಜಿಕ ಸುರಕ್ಷತೆ, ರಾಷ್ಟ್ರೀಯ ಸಮಗ್ರತೆ ಮೊದಲಾದ ಸವಾಲುಗಳನ್ನು ಯಶಸ್ವಿಯಾಗಿ ನಿರ್ವಹಿಸುವತ್ತ ಪ್ರಧಾನಿ ಮೋದಿ ಮತ್ತು ಬಳಗ ಹೃದಯವಂತಿಕೆಯಿಂದ ಮುನ್ನಡೆಯಬೇಕು. ಪ್ರಧಾನಿ ಮೋದಿ ಉತ್ತರ ಪ್ರದೇಶ ಮೊದಲಾದೆಡೆ ಚುನಾವಣೆಯಲ್ಲಿ ಗೆಲುವು ಸಾಧಿಸಲು ಪೂರಕವಾದ ರಾಜಕೀಯ ಪ್ರವೃತ್ತಿಯನ್ನು ಮೀರಿ ಉನ್ನತ ಮಟ್ಟದ ರಾಜನೀತಿ ಮತ್ತು ಮುತ್ಸದ್ದಿತನಗಳನ್ನು ಪ್ರದರ್ಶಿಸಬೇಕೆಂದು ಪ್ರಜ್ಞಾವಂತ ಭಾರತೀಯರು ಆಶಿಸುತ್ತಾರೆ.

  • ಡಾ.ಬಿ.ಪಿ.ಮಹೇಶ ಚಂದ್ರ ಗುರು

(ಲೇಖಕರು ವಿಶ್ರಾಂತ ಪ್ರಾಧ್ಯಾಪಕರು, ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ, ಮೈಸೂರು ವಿಶ್ವವಿದ್ಯಾಲಯ. ಅಭಿಪ್ರಾಯಗಳು ಲೇಖಕರವು)


ಇದನ್ನೂ ಓದಿ: ನೆಹರು ಒಬ್ಬ ನೈಜ ಭಾರತೀಯ ಜಾತ್ಯತೀತ ವ್ಯಕ್ತಿ: ಇಂದಿನ ಕೋಮುವಾದಕ್ಕೆ ಅವರನ್ನು ದೂರಬೇಡಿ

LEAVE A REPLY

Please enter your comment!
Please enter your name here