ಭಾರತದ ಹಾಕಿ ತಾರೆ ಶ್ರೀಜೇಶ್‌ಗೆ 2 ಕೋಟಿ ರೂ. ಘೋಷಿಸಿದ ಕೇರಳ! | Naanu gauri

ಟೋಕಿಯೊ ಒಲಿಂಪಿಕ್ಸ್‌ನಲ್ಲಿ ಭಾರತದ ಪುರುಷರ ಹಾಕಿ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದ್ದ ತಂಡದ ಗೋಲ್ ಕೀಪರ್‌ ಪಿಆರ್‌‌ ಶ್ರೀಜೇಶ್‌ ಅವರಿಗೆ 2 ಕೋಟಿ ರೂ. ನೀಡುವುದಾಗಿ ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್‌ ಬುಧವಾರ ಹೇಳಿದ್ದಾರೆ. ಅಷ್ಟೇ ಅಲ್ಲದೆ, ಅವರಿಗೆ ಶಿಕ್ಷಣ ಇಲಾಖೆಯಲ್ಲಿ ಜಂಟಿ ನಿರ್ದೇಶಕರಾಗಿ ಬಡ್ತಿ ನೀಡುವುದಾಗಿ ಮುಖ್ಯಮಂತ್ರಿ ಹೇಳಿದ್ದಾರೆ.

ಪಿಆರ್‌‌ ಶ್ರೀಜೇಶ್‌ ಪ್ರಸ್ತುತ ಕೇರಳ ಸರ್ಕಾರದ ಸಾಮಾನ್ಯ ಮತ್ತು ಉನ್ನತ ಶಿಕ್ಷಣ ಇಲಾಖೆಯ ಮುಖ್ಯ ಕ್ರೀಡಾ ಸಂಘಟಕರಾಗಿ ಕೆಲಸ ಮಾಡುತ್ತಿದ್ದಾರೆ. ಭಾರತ ಹಾಕಿ ತಂಡದ ಕ್ಯಾಪ್ಟನ್‌ ಆಗಿಯು ಅವರು ಕಾರ್ಯ ನಿರ್ವಹಿಸಿದ್ದರು.

ಇದನ್ನೂ ಓದಿ: ‘ಪದಕದ ರುಚಿ ಉಪ್ಪುಪ್ಪಿದೆ’ – ಹಾಕಿ ಗೋಲ್‌‌ ಕೀಪರ್‌‌‌ ಶ್ರೀಜೇಶ್‌‌ ಹೀಗೇಕೆ ಹೇಳಿದರು?

ಕಂಚಿನ ಪದಕಕ್ಕಾಗಿ ಆಡಿದ ಪಂದ್ಯದಲ್ಲಿ, ಪಂದ್ಯವು ಮುಗಿಯಲು ಆರು ಸೆಕೆಂಡುಗಳು ಬಾಕಿ ಇರುವಾಗ, ಜರ್ಮನಿ ತಂಡವು ಪೆನಾಲ್ಟಿ ಕಾರ್ನರ್‌ ಪಡೆಯುವಲ್ಲಿ ಯಶಸ್ವಿಯಾಗಿತ್ತು. ಆದರೆ ಪಿಆರ್ ಶ್ರೀಜೇಶ್ ಅದನ್ನು ತಡೆದು ಭಾರತವನ್ನು ಗೆಲುವಿನ ದಡಕ್ಕೆ ತಲುಪಿಸಿದ್ದರು. ಕೇರಳ ಮೂಲದವರಾದ ಶ್ರೀಜೇಶ್‌ ಈ ಪಂದ್ಯದಲ್ಲಿ ಒಟ್ಟು ಒಂಬತ್ತು ಗೋಲ್‌ಗಳನ್ನು ತಡೆದು ಭಾರತದ ಗೆಲುವಿಗೆ ನೆರವಾಗಿದ್ದಾರೆ.

ಮುಖ್ಯಮಂತ್ರಿ ಪಿಣರಾಯಿ ವಿಜಯನ್ ನಿನ್ನೆ, “ಟೋಕಿಯೊ ಒಲಿಂಪಿಕ್ಸ್‌ನ ಹಾಕಿ ಪಂದ್ಯದಲ್ಲಿ ಕಂಚಿನ ಪದಕ ಗೆದ್ದು, ನಾಡಿನ ಖ್ಯಾತಿಯನ್ನು ಹೆಚ್ಚಿಸಿದ ಪಿ.ಆರ್. ಶ್ರೀಜೇಶ್ ಅವರಿಗೆ ರಾಜ್ಯ ಸರ್ಕಾರ 2 ಕೋಟಿ ರೂ.ಗಳ ಪ್ರೀತಿಯ ಉಡುಗೊರೆಯನ್ನು ನೀಡಲಿದೆ. ಇದರ ಜೊತೆಯಲ್ಲಿ, ಅವರು ಶಿಕ್ಷಣ ಇಲಾಖೆಯಲ್ಲಿ ಜಂಟಿ ನಿರ್ದೇಶಕರಾಗಿ ಬಡ್ತಿ ಪಡೆಯಲಿದ್ದಾರೆ” ಎಂದು ಹೇಳಿದ್ದಾರೆ.

ಇದನ್ನೂ ಓದಿ: 41 ವರ್ಷಗಳ ಕಾಯುವಿಕೆ ಅಂತ್ಯ | ಕೊನೆಗೂ ಪದಕಕ್ಕೆ ಮುತ್ತಿಟ್ಟ ಭಾರತೀಯ ಹಾಕಿ ತಂಡ!

ಇದರ ಜೊತೆಗೆ ಒಲಿಂಪಿಕ್ಸ್‌ನಲ್ಲಿ ಭಾಗವಹಿಸಿದ ಉಳಿದ ಮಲಯಾಳಿ ಕ್ರೀಡಾ ತಾರೆಗಳಿಗೂ, ಈ ಮೊದಲೆ ಪ್ರಕಟಿಸಿದ್ದ ತಲಾ ಐದು ಲಕ್ಷ ರೂ ಪ್ರೋತ್ಸಾಹ ಧನದ ಜೊತೆಗೆ ಮತ್ತೆ ತಲಾ ಐದು ಲಕ್ಷ ರೂ. ನೀಡುವುದಾಗಿ ಸಚಿವ ಸಂಪುಟ ತೀರ್ಮಾನಿಸಿದೆ ಎಂದು ಪಿಣರಾಯಿ ವಿಜಯನ್ ಪ್ರಕಟಿಸಿದ್ದಾರೆ.

ಈ ಬಾರಿಯ ಒಲಿಂಪಿಕ್ಸ್‌ನಲ್ಲಿ ಕಂಚಿಗಾಗಿ ನಡೆದ ಪುರುಷರ ಹಾಕಿ ಪಂದ್ಯಾಟದಲ್ಲಿ ಭಾರತೀಯ ತಂಡವು ಜರ್ಮನಿ ವಿರುದ್ದ 5-4 ಅಂತರದಲ್ಲಿ ಗೆದ್ದು ಕೊಂಡಿತ್ತು. ಈ ಮೂಲಕ ಭಾರತೀಯ ತಂಡವು ಕಳೆದ 41 ವರ್ಷಗಳ ನಂತರ ಇದೇ ಮೊದಲ ಬಾರಿಗೆ ಒಲಿಂಪಿಕ್ಸ್‌ನಲ್ಲಿ ಪದಕ ಗೆದ್ದುಕೊಂಡಿದೆ. ಭಾರತವು 1980 ರ ಮಾಸ್ಕೋ ಕ್ರೀಡಾಕೂಟದಲ್ಲಿ ಕೊನೆಯ ಬಾರಿಗೆ ಹಾಕಿಯಲ್ಲಿ ಪದಕ ಗೆದ್ದಿತ್ತು.

ಈ ಬಾರಿಯ ಒಲಿಂಪಿಕ್‌ನ ಹಾಕಿ ಪಂದ್ಯದಲ್ಲಿ ಭಾರತೀಯ ಮಹಿಳಾ ತಂಡವು ಉತ್ತಮ ಪ್ರದರ್ಶನ ನೀಡಿದೆ. ಒಲಿಂಪಿಕ್ ಇತಿಹಾಸದಲ್ಲೇ ಭಾರತದ ಮಹಿಳಾ ತಂಡ ಇದೇ ಮೊದಲ ಬಾರಿಗೆ ಸೆಮಿಫೈನಲ್‌ಗೆ ತಲುಪಿ ಇತಿಹಾಸ ನಿರ್ಮಿಸಿದೆ. ಆದರೆ ಪದಕ ಗೆಲ್ಲಲು ವಿಫಲವಾಗಿ ತಂಡವು ನಾಲ್ಕನೇ ಸ್ಥಾನಕ್ಕೆ ತೃಪ್ತಿಪಟ್ಟಕೊಂಡಿದೆ.

ಇದನ್ನೂ ಓದಿ: ವಂದನಾ ಕಟಾರಿಯಗೆ ಜಾತಿನಿಂದನೆ: ಮೊದಲ ಬಾರಿಗೆ ಸೆಮಿಫೈನಲ್ ತಲುಪಿದ್ದಕ್ಕೆ ದಲಿತರು ಹೆಚ್ಚು ಇದ್ದಿದ್ದು ಕಾರಣವಲ್ಲವೇ?

LEAVE A REPLY

Please enter your comment!
Please enter your name here