Homeಮುಖಪುಟವಿಶ್ಲೇಷಣೆ; ಡಿಎನ್‌ಎ ಮಸೂದೆ - ಆತಂಕ ಏಕೆ?

ವಿಶ್ಲೇಷಣೆ; ಡಿಎನ್‌ಎ ಮಸೂದೆ – ಆತಂಕ ಏಕೆ?

- Advertisement -
- Advertisement -

ಪ್ರತಿ ಅಧಿವೇಶನ ಶುರುವಾಗುವುದಕ್ಕಿಂತ ಮುನ್ನ ಸಂಸತ್ತು ಸರಕಾರದ ಕೈಗೊಳ್ಳಬಹುದಾದ ಕೆಲಸಗಳ ಪಟ್ಟಿಯನ್ನು ವಿರೋಧ ಪಕ್ಷಗಳಿಗೆ ಹಾಗೂ ಜನರಿಗೆ ತಿಳಿಸುತ್ತದೆ; ಸರಕಾರದ ಅಜೆಂಡಾ ಏನಿದೆ ಎಂಬುದು ಎಲ್ಲರಿಗೂ ತಿಳಿಯಲಿ ಎಂಬ ಆಶಯದೊಂದಿಗೆ.

ಈಗ ನಡೆಯುತ್ತಿರುವ ಮಳೆಗಾಲದ ಅಧಿವೇಶನದ ಪಟ್ಟಿಯಲ್ಲಿ ಡಿಎನ್‌ಎ ತಂತ್ರಜ್ಞಾನ (ಬಳಕೆ ಮತ್ತು ಅನ್ವಯ) ನಿಯಂತ್ರಣ ಮಸೂದೆ 2019ಅನ್ನು ಲೋಕಸಭೆಯಲ್ಲಿ ಪರಿಗಣನೆಗೆ ಮತ್ತು ಜಾರಿ ಮಾಡಲು ಸೇರಿಸಲಾಗಿತ್ತು. ಈ ಮಸೂದೆಯನ್ನು ಸದ್ಯದ ಸ್ವರೂಪದಲ್ಲಿ ಆಗಸ್ಟ್ 2019ರಲ್ಲಿ ಲೋಕಸಭೆಯಲ್ಲಿ ಮಂಡಿಸಲಾಗಿತ್ತು. ನಂತರ ಅದನ್ನು ಅಕ್ಟೋಬರ್ 2019ರಲ್ಲಿ ಸಂಸದೀಯ ಸ್ಥಾಯಿ ಸಮಿತಿಗೆ ಕಳುಹಿಸಲಾಗಿತ್ತು, ಈ ವರ್ಷದ ಫೆಬ್ರವರಿಯಲ್ಲಿ ಈ ಸಮಿತಿಯು ತನ್ನ ವರದಿಯನ್ನು ಸಲ್ಲಿಸಿತು. ಗಮನಾರ್ಹವಾದ ವಿಷಯವೆಂದರೆ, ಸ್ಥಾಯಿ ಸಮಿತಿಯ ಇಬ್ಬರು ಸದಸ್ಯರು (ಶ್ರೀ ಅಸಾದುದ್ದೀನ್ ಓವೈಸಿ, ಲೋಕಸಭೆ ಸದಸ್ಯ ಮತ್ತು ಶ್ರೀ ಬಿನೊಯ್ ವಿಶ್ವಂ ರಾಜ್ಯಸಭೆ ಸದಸ್ಯ) ತಮ್ಮ ಭಿನ್ನಮತವನ್ನು ಸಲ್ಲಿಸಿದರು; ಅದರಲ್ಲಿ ಅವರು ಸ್ಥಾಯಿ ಸಮಿತಿಯು ಬಗೆಹರಿಸಲು ವಿಫಲವಾದ ಮಸೂದೆಯಲ್ಲಿರುವ ಸಮಸ್ಯೆಗಳನ್ನು ಸ್ಪಷ್ಟಪಡಿಸಿದರು.

ಈ ಮಸೂದೆಯ ಉದ್ದೇಶವನ್ನು ಹೀಗೆ ವ್ಯಾಖ್ಯಾನಿಸಲಾಗಿದೆ; ಸಂತ್ರಸ್ತರ, ಅಪರಾಧ ಎಸಗಿದವರ, ಶಂಕಿತರ, ವಿಚಾರಣಾಧೀನ ಕೈದಿಗಳ, ನಾಪತ್ತೆಯಾದವರ ಹಾಗೂ ಅಪರಿಚಿತ ಮೃತ ವ್ಯಕ್ತಿಗಳನ್ನು ಗುರುತು ಪತ್ತೆ ಹಚ್ಚಲು ಡಿಎನ್‌ಎ ಬಳಕೆಯನ್ನು ನಿಯಂತ್ರಿಸುವುದು. ’ಶಂಕಿತ’ ಎಂಬ ವರ್ಗವನ್ನು ಈ ಮಸೂದೆಯಲ್ಲಾಗಲೀ
ಅಥವಾ ಭಾರತೀಯ ಕಾನೂನು ವ್ಯವಸ್ಥೆಯಲ್ಲಾಗಲೀ ವ್ಯಾಖ್ಯಾನಿಸಲಾಗಿಲ್ಲ. ’ಶಂಕಿತರು’ ಎಂಬುದರ ಅರ್ಥದಲ್ಲಿರುವ ದ್ವಂದವೇ ಒಂದು ರೀತಿಯ ಬೇಕಾಬಿಟ್ಟಿಯಾಗಿ ಬಳಸಲು ಅವಕಾಶ ಮಾಡಿದಂತಾಗುತ್ತದೆ; ಸರಕಾರವು ಶಂಕಿತ ಎಂದು ಪರಿಗಣಿಸಬಹುದಾದ ಯಾವ ವ್ಯಕ್ತಿಯ ಡಿಎನ್‌ಎ ಅನ್ನೂ ಸಂಗ್ರಹಿಸುವುದಕ್ಕೆ ಮುಕ್ತ ಹಸ್ತ ನೀಡಿದಂತಾಗುತ್ತದೆ. ’ಶಂಕಿತ’ ಎಂದು ಯಾರನ್ನು ಪರಿಗಣಿಸಬಹುದು ಎಂಬುದಕ್ಕೆ ಎಲ್ಲೆಯೇ ಇಲ್ಲ ಹಾಗೂ ಒಂದು ಕಾನೂನಾತ್ಮಕ ವ್ಯಾಖ್ಯಾನವಿಲ್ಲದೇ ಯಾರನ್ನಾದರೂ ಶಂಕಿತ ಎಂದು ಪರಿಗಣಿಸಬಹುದಾಗಿದೆ.

ಶಂಕಿತ ಎಂಬುದು ಎಲ್ಲರನ್ನೂ ಒಳಗೊಳ್ಳಬಹುದಾದ ವ್ಯಾಖ್ಯಾನವಾಗಿದೆ ಎಂಬುದರ ಹೊರತಾಗಿಯೂ, ಎಲ್ಲವನ್ನೂ ಸೇರಿಸಿಕೊಳ್ಳುವ ಈ ಮಸೂದೆಯ ಸ್ವರೂಪವನ್ನು ಡಿಎನ್‌ಎ ಸಂಗ್ರಹ, ನಿಯಂತ್ರಣ, ಶೇಖರಣೆಯನ್ನು ಯಾವ್ಯಾವ ವಿಷಯಗಳಿಗಾಗಿ ಮಾಡಬಹುದು ಎಂಬುದರ ಪಟ್ಟಿಯನ್ನು ಈ ಕೆಳಗಿನ ಚಿತ್ರದಲ್ಲಿ ನೋಡಿ ತಿಳಿದುಕೊಳ್ಳಬಹುದು.

ಇಲ್ಲಿ ಸ್ಪಷ್ಟವಾಗಿ ತಿಳಿಯುವಂತೆ, ಡಿಎನ್‌ಎ ಪರೀಕ್ಷೆ, ಸಂಗ್ರಹ, ಶೇಖರಣೆಯು ಕೇವಲ ಅಪರಾಧದ ವಿಷಯಗಳಿಗೆ ಸೀಮಿತವಾಗಿಲ್ಲ. ಇದು, ಎಷ್ಟು ವಿಶಾಲ ವ್ಯಾಪ್ತಿ ಹೊಂದಿದೆಯೆಂದರೆ, ಡಿಎನ್‌ಎ ತಜ್ಞರಿಗೂ ಈ ವಿಷಯಗಳಲ್ಲಿ ಡಿಎನ್‌ಎ ಹೇಗೆ ಉಪಯುಕ್ತ ಆಗಬಹುದು ಎಂಬುದನ್ನು ಹೇಳಲು ಸಾಧ್ಯವಾಗಿಲ್ಲ; ಉದಾಹರಣೆಗೆ ಅನೈತಿಕ
ಮಾನವಸಾಗಾಣಿಕೆ ಕಾಯಿದೆ, ಪ್ರಿ-ನ್ಯಾಟಲ್ ಡಯಾಗ್ನಾಸ್ಟಿಕ್ ಕಾಯಿದೆ, ಮೊಟಾರ್ ವಾಹನಗಳ ಕಾಯಿದೆ, ವೈದ್ಯಕೀಯ ನಿರ್ಲಕ್ಷ, ಸಂತಾನೋತ್ಪತ್ತಿ ತಂತ್ರಜ್ಞಾನಗಳಿಗೆ ಸಂಬಂಧಿಸಿದ ವಿಷಯಗಳು ಇತ್ಯಾದಿ.

ಡಿಎನ್‌ಎ ಬಳಕೆಯನ್ನು ಸಿವಿಲ್ ವಿಷಯಗಳಾದ ’ಪೆಡಿಗ್ರೀ, ವಲಸೆ(ಇಮಿಗ್ರೇಷನ್) ಮತ್ತು ವಲಸೆ ಸಂಬಂಧಿತ
(ಎಮಿಗ್ರೇಷನ್), ವೈಯಕ್ತಿಕ ಗುರುತನ್ನು ಖಚಿತಪಡಿಸುವುದು’ ಮುಂತಾದವುಗಳಲ್ಲಿಯೂ ಒಳಗೊಂಡಿರುವುದು ಸರಕಾರದ ಇರಾದೆಗಳನ್ನು ಸ್ಪಷ್ಟಪಡಿಸುತ್ತವೆ. ಡಾ. ಉಷಾ ರಾಮನಾಥನ್ ಅವರು ಹೇಳುವುದೇನೆಂದರೆ, ಇವೆಲ್ಲವುಗಳು ಕಾನೂನಾತ್ಮಕ ವಿಭಾಗಗಳಾಗಿರದೇ ರಾಜಕೀಯ ವಿಭಾಗಗಳಾಗಿವೆ. ಈ ಮಸೂದೆಯು ಇಂತಹ ರಾಜಕೀಯ ವಿಭಾಗಗಳನ್ನು ಅಧಿಕೃತಗೊಳಿಸುವ ಪ್ರಯತ್ನವಾಗಿದೆ. ಈ ರಾಜಕೀಯ ವಿಭಾಗಗಳನ್ನು ಅರ್ಥಮಾಡಿಕೊಳ್ಳಲು ನಾವು ಇತ್ತೀಚಿನ ಪೌರತ್ವ ತಿದ್ದುಪಡಿ ಕಾಯಿದೆ, 2019 ಹಾಗೂ ಎನ್‌ಆರ್‌ಸಿ ಪ್ರಕ್ರಿಯೆಯನ್ನು ಗಮನದಲ್ಲಿಟ್ಟುಕೊಳ್ಳಬೇಕಿದೆ.

ಸಿವಿಲ್, ಅಪರಾಧ ಅಥವಾ ಇತರ ಯಾವುದೇ ವಿಷಯಕ್ಕಾಗಿ ಡಿಎನ್‌ಎ ಸಂಗ್ರಹಿಸಲಾಗುತ್ತದೆ ಎಂಬುದರ ಹೊರತಾಗಿಯೂ, ಈ ಮಸೂದೆಯು ಹಲವಾರು ಸೂಚ್ಯಂಕಗಳನ್ನು ಕಲ್ಪಿಸುತ್ತದೆ, ಅವು ಹೀಗಿವೆ

1.ನಾಪತ್ತೆ ವ್ಯಕ್ತಿಗಳ ಸೂಚ್ಯಂಕ
2.ಗುರುತಿಲ್ಲದ ಮೃತಪಟ್ಟವರ ಸೂಚ್ಯಂಕ
3.ಅಪರಾಧ ನಡೆದ ಜಾಗದ ಸೂಚ್ಯಂಕ
4.ಅಪರಾಧಿಗಳ ಸೂಚ್ಯಂಕ
5.ಶಂಕಿತರ/ವಿಚಾರಣಾಧೀನ ಕೈದಿಗಳ ಸೂಚ್ಯಂಕ

ಈ ಸೂಚ್ಯಂಕಗಳು ಏಕೆಂದರೆ, ಡಿಎನ್‌ಎ ಸಂಗ್ರಹ ಮಾಡಿದ ಎಲ್ಲಾ ವ್ಯಕ್ತಿಗಳ ಪ್ರೊಫೈಲಿಂಗ್ ಮಾಡುವುದಕ್ಕೆ ಹಾಗೂ ಅವುಗಳನ್ನು ರಾಷ್ಟ್ರೀಯ ಡಿಎನ್‌ಎ ಡೇಟಾ ಬ್ಯಾಂಕ್/ರೀಜನಲ್ ಡೇಟಾ ಬ್ಯಾಂಕ್‌ನಲ್ಲಿ ಸಂಗ್ರಹಿಸಿಡುವುದಕ್ಕೆ.

ಈ ಡೇಟಾವನ್ನು ಮುಂಚೆ ಹೆಸರಿಸಿದ ಮಸೂದೆಯು ಸೃಷ್ಟಿಸುವ ಡೇಟಾ ಬ್ಯಾಂಕ್‌ಗಳು ನಿರ್ವಹಿಸುತ್ತವಾದರೂ, ಅದಕ್ಕೆ ಪರೀಕ್ಷೆಗಳನ್ನು ನಡೆಸುವ ಮಾಹಿತಿಯ ದಾಖಲೆಗಳನ್ನು ನಿರ್ವಹಿಸಲು ಖಾಸಗಿ ಪರೀಕ್ಷಾ ಪ್ರಯೋಗಶಾಲೆಗಳು ಬೇಕಾಗುತ್ತವೆ ಹಾಗೂ ಅದನ್ನು ರಾಷ್ಟ್ರೀಯ/ರೀಜನಲ್ ಡೇಟಾ ಬ್ಯಾಂಕ್‌ಗೆ ಸಲ್ಲಿಸಬೇಕಾಗುತ್ತದೆ. ಈ ಸೂಚ್ಯಂಕಗಳಲ್ಲಿ ವೈಯಕ್ತಿಕ ಗುರುತನ್ನು ಪ್ರೊಫೈಲಿಂಗ್ ಮಾಡಿದ ಡೇಟಾವನ್ನು ಯಾವ ಅವಧಿಯವರೆಗೆ ಸಂಗ್ರಹಿಸಿಡಬಹುದು ಎಂಬುದರ ಬಗ್ಗೆ ಉಲ್ಲೇಖವಿಲ್ಲ. ಇದರ ಪರಿಣಾಮವಾಗಿ, ಯಾವುದೇ ವೈಯಕ್ತಿಕ ಡೇಟಾ ರಕ್ಷಣೆಯ ಚೌಕಟ್ಟು ಇಲ್ಲದೇ, ನಮ್ಮ ಡಿಎನ್‌ಎ, ನಮ್ಮ ಹೆಸರುಗಳು, ನಮ್ಮ ಗುರುತುಗಳನ್ನು ಒಂದು ರೀತಿಯ ಸಮಯಾತೀತ ಡೇಟಾಬೇಸ್ ಆಗಿಡುವ ಸಾಧ್ಯತೆ ಇದರಲ್ಲಿದೆ.

ಈ ಮಸೂದೆಯಲ್ಲಿ ಡೇಟಾಬೇಸ್ ಸಲುವಾಗಿ ಡಿಎನ್‌ಎ ಸಂಗ್ರಹಿಸಲು ಒಂದು ’ಶರತ್ತುಬದ್ಧ ಸಮ್ಮತಿ’ಯ ಆಯ್ಕೆ ಅಥವಾ ಕ್ಲಾಸ್ ಇದೆ. ಈ ಕ್ಲಾಸ್‌ನ ಅನುಗುಣವಾಗಿ, 7 ವರ್ಷಕ್ಕೂ ಕಡಿಮೆ ಶಿಕ್ಷೆಯನ್ನು ಹೊಂದಿದ ಅಪರಾಧಗಳಿಗೆ ತನ್ನ ಡಿಎನ್‌ಎ ನೀಡಲು ನಿರಾಕರಿಸುವ ಅವಕಾಶ ಇದೆ. ಆದರೆ, 7 ವರ್ಷಕ್ಕೂ ಹೆಚ್ಚಿನ ಶಿಕ್ಷೆಯುಳ್ಳ ಅಪರಾಧಗಳು ಸಮ್ಮತಿ ನೀಡಲು ನಿರಾಕರಿಸಿದರೂ ಮ್ಯಾಜಿಸ್ಟ್ರೇಟ್ ಅವರಿಂದ ಡಿಎನ್‌ಎಅನ್ನು ಸಂಗ್ರಹಿಸಲು ಆದೇಶ ನೀಡಬಹುದು. ನಮ್ಮ ಡಿಎನ್‌ಎ ಅನ್ನು ಕೊಡುವ ಅನಿವಾರ್ಯತೆ, ಅದು ಡೇಟಾಬೇಸ್‌ಗೆ ಸೇರಿ, ಅಲ್ಲಿಯೇ ಶಾಶ್ವತವಾಗಿ ಉಳಿಯುವಂತೆ ಆಗುವ ಸಾಧ್ಯತೆ ನಮ್ಮ ಘನತೆಯ ಮೇಲೆ ಆಗುವ ದಾಳಿಯಾಗಿದೆ. ನೀವು ಮತ್ತು ನಾವು ಒಂದು ಸಲ ನಮ್ಮ ಡಿಎನ್‌ಎ ಸಂಗ್ರಹಿಸಿ, ಡೇಟಾಬ್ಯಾಂಕ್‌ನಲ್ಲಿ ಶೇಖರಿಸಿದ ನಂತರ ಅಲ್ಲಿಂದ ಅದನ್ನು ತೆಗೆದುಹಾಕಲು ನಮಗೆ ಯಾವುದೇ ದಾರಿಗಳಿಲ್ಲ. ಹಾಗೂ ಅದನ್ನು ಯಾವ ರೀತಿಯಲ್ಲಿ ಬಳಸಲಾಗುವುದು ಎಂಬುದರ ಬಗ್ಗೆ ನಮಗೆ ಯಾವುದೇ ಮಾಹಿತಿ ಇರುವುದಿಲ್ಲ. ಡಿಎನ್‌ಎ ಬಳಕೆಗೆ ಯಾವುದೇ ಮಿತಿಗಳ ಉಲ್ಲೇಖ ಮಸೂದೆಯಲ್ಲಿ ಇಲ್ಲದಿರುವುದರಿಂದ, ಈ ಡೇಟಬೇಸ್ ಅನ್ನು ಆಧಾರ್‌ಗೆ ಜೋಡಿಸುವ ಸಾಧ್ಯತೆಯೂ ಇದೆ; ಸರಕಾರಗಳಿಗೆ ಆಧಾರ್ ಬಗ್ಗೆ ಇರುವ ವ್ಯಾಮೋಹ ನೋಡಿದರೆ ಈ ಸಾಧ್ಯತೆಯನ್ನು ತಳ್ಳಿಹಾಕಲು ಆಗುವುದಿಲ್ಲ.

ನಾವು ತಿಳಿಯುವಂತೆ ಡಿಎನ್‌ಎ ಎಂಬುದು ವೈಯಕ್ತಿಕ ಆರೋಗ್ಯದ ಮಾಹಿತಿಯಾಗಿದ್ದು, ಅದನ್ನು ಸಂಗ್ರಹಿಸಿ ಶೇಖರಿಸಿಡುವ ಅಭಿಯಾನವನ್ನು ಸರಕಾರವು ಕೈಗೆತ್ತಿಕೊಂಡಿವೆ. ಈ ಡಿಎನ್‌ಎ ಮಸೂದೆ ತನ್ನ ವಿನ್ಯಾಸದಿಂದಲೇ ಸ್ಪಷ್ಟಪಡಿಸುವುದೇನೆಂದರೆ, ಇದೊಂದು ವ್ಯಕ್ತಿಗಳನ್ನು ಪ್ರೊಫೈಲಿಂಗ್ ಮಾಡುವ ಮಸೂದೆ. ಇದು ಖಾಸಗಿತನದ ಮೂಲಭೂತ ಹಕ್ಕಿನ ಮೇಲೆ ಸಂಘಟಿತ ದಾಳಿಯಾಗಿದೆ; ಈ ದಾಳಿಯನ್ನು ಈ ಮೂರು ಅಂಶಗಳು ಸ್ಪಷ್ಟಪಡಿಸುತ್ತವೆ: 1) ಒಬ್ಬ ವೈಕ್ತಿಯ ದೈಹಿಕ ಶರೀರದ ಮೇಲೆ ಒಳನುಗ್ಗುವಿಕೆಯ ದಾಳಿ, 2) ಮಾಹಿತಿಯ ಖಾಸಗಿತನದ ಮೇಲಿನ ದಾಳಿ ಹಾಗೂ 3) ಆಯ್ಕೆಯ ಖಾಸಗಿತನದ ಮೇಲಿನ ದಾಳಿ. ಈ ಡಿಎನ್‌ಎ ಮಸೂದೆಯಲ್ಲಿ ಖಾಸಗಿತನದ ಈ ಮೂರೂ ಅಂಶಗಳನ್ನು ಸಂಪೂರ್ಣವಾಗಿ ಕಡೆಗಣಿಸಲಾಗಿದೆ.

ಇತ್ತೀಚಿಗೆ ಏರ್ ಇಂಡಿಯಾ, ಬಿಗ್ ಬಾಸ್ಕೆಟ್ ಮತ್ತು ಡಾಮಿನೋಸ್‌ನ ದತ್ತಾಂಶದ ಬಹಿರಂಗಗೊಂಡು ಸೋರಿಕೆಯಾಯಿತು. ಅದರಲ್ಲಿ ಸಾಮಾನ್ಯ ಜನರಿಂದ ಹಿಡಿದು ಸರಕಾರಿ ಅಧಿಕಾರಿಗಳ ಇಮೇಲ್ ಐಡಿ ಮತ್ತು ಪಾಸ್‌ವರ್ಡ್‌ಗಳ ಬಹಿರಂಗಗೊಂಡವು. ಹಾಗಾಗಿ, ಡಿಎನ್‌ಎ ದತ್ತಾಂಶದ ಕಟ್ಟುನಿಟ್ಟಿನ ಸುರಕ್ಷತೆ ಇಲ್ಲದೇ ವ್ಯಕ್ತಿಗಳ ಡಿಎನ್‌ಎ ಸಂಗ್ರಹ ಮಾಡುವುದು ಒಂದು ಗಂಭೀರ ರಾಷ್ಟ್ರೀಯ ಭದ್ರತಾ ಅಪಾಯ ಎಂತಲೇ ಪರಿಗಣಿಸಬೇಕಿದೆ. ಈ ದತ್ತಾಂಶವನ್ನು ರಕ್ಷಿಸುವ ಸಾಮರ್ಥ್ಯ ಸರಕಾರ ಹೊಂದಿಲ್ಲ ಎಂಬುದು ನಿರ್ವಿವಾದಿತ ಸತ್ಯ.

ಈಗಿರುವ ಅಪರಾಧದ ನ್ಯಾಯ ವ್ಯವಸ್ಥೆಯೂ ಬೆರಳಚ್ಚು ಪರೀಕ್ಷೆ ಮತ್ತು ಡಿಎನ್‌ಎ ಪರೀಕ್ಷೆಯನ್ನು ಬಳಸುತ್ತದೆ. ಈ ಮಸೂದೆಗಳ ಉದ್ದೇಶ ಮತ್ತು ಗುರಿಯ ಬಗ್ಗೆ ನೀಡಿದ ಹೇಳಿಕೆಯು ವಿಚಾರಣೆಗಳಿಗೆ ಡಿಎನ್‌ಎ ಬಳಸುವುದರಲ್ಲಿ ಇರುವ ಸವಾಲುಗಳನ್ನು ಗುರುತಿಸುತ್ತದೆ; ವಿಚಾರಣೆಗಳಲ್ಲಿ ಆಗುವ ವಿಳಂಬ ಮತ್ತು ಡಿಎನ್‌ಎ ಸಾಕ್ಷ್ಯವನ್ನು ಅರ್ಥಮಾಡಿಕೊಳ್ಳುವ ತಜ್ಞರ ಅವಶ್ಯಕತೆ, ಆದರೂ ಈ ಮಸೂದೆಗೆ ಕಾರಣ ಎಂದು ಹೆಸರಿಸಲಾದ ಸವಾಲುಗಳನ್ನೇ ಉದ್ದೇಶಿಸುವಲ್ಲಿ ಈ ಮಸೂದೆ ವಿಫಲವಾಗಿದೆ. ಇಂಗ್ಲೆಂಡಿನಲ್ಲಿ ಡಿಎನ್‌ಎ ಸಂಗ್ರಹಿಸುವುದನ್ನು ಶುರು ಮಾಡಿದ್ದರೂ, ಅಲ್ಲಿ, ಡಿಎನ್‌ಎ ತಂತ್ರಜ್ಞಾನದ ಬಳಕೆಯ ಕಾರಣದಿಂದ ಅಪರಾಧ ದರಗಳನ್ನು ಕಡಿಮೆ ಮಾಡುವಲ್ಲಿ ವಿಫಲವಾಗಿದೆ. ಇಂಗ್ಲೆಂಡಿನ ಅನುಭವದಿಂದ ಸ್ಪಷ್ಟವಾಗುವುದೇನೆಂದರೆ, ಇಂತಹ ಡೇಟಾಬೇಸ್ (ದತ್ತಾಂಶ ಶೇಖರಣೆ) ಇಂದ ಅಪರಾಧಗಳನ್ನು ಬಗೆಹರಿಸಲು, ಕಾನೂನು ಕ್ರಮ ಜಾರಿಗೊಳಿಸುವಲ್ಲಿ ಯಾವುದೇ ಸಹಾಯ ಆಗಿಲ್ಲ ಎಂದು. ಈ ಎಲ್ಲಾ ಅರಿವು ಹೊಂದಿದ್ದೂ, ಸರಕಾರವು ಇದರ ಮೇಲೆ ಒಂದು ಸಮಯದ ಖರ್ಚು 20 ಕೋಟಿ ರೂಪಾಯಿಗಳನ್ನು ಹಾಗೂ 5 ಕೋಟಿ ಆವರ್ತಕ ವೆಚ್ಚವನ್ನು ಸಾರ್ವಜನಿಕರ ದುಡ್ಡಿನಿಂದ ವ್ಯಯಿಸುತ್ತಿದೆ. ಇದರ ಅವಶ್ಯಕತೆಯೂ ಇಲ್ಲ ಹಾಗೂ ಇದು ದೇಶದ ಜನರ ಹಿತಾಸಕ್ತಿಗೆ ಅನುಗುಣವಾಗಿಯೂ ಇಲ್ಲ. ಡಿಎನ್‌ಎ ತಂತ್ರಜ್ಞಾನವನ್ನು ನಿಯಂತ್ರಿಸಿ, ಅಪರಾಧ ನ್ಯಾಯದ ವ್ಯವಸ್ಥೆಯನ್ನು ಸುಧಾರಿಸುವ ನೆಪದಲ್ಲಿ ಸರಕಾರ ರಾಜಕೀಯ ಕಾರಣಕ್ಕಾಗಿ ಜನರನ್ನು ಗುರಿ ಮಾಡುವುದಕ್ಕೆ, ಅವರ ಪ್ರೊಫೈಲಿಂಗ್ ಮಾಡುವ ಉದ್ದೇಶದಿಂದ ಇನ್ನೊಂದು ಶಾಸನವನ್ನು ತರುತ್ತಿದೆ. ಡಿಎನ್‌ಎಯ ಇಂತಹ ವ್ಯಾಪಕವಾದ ಡೇಟಾಬೇಸ್ ಮಾಡುವುದಕ್ಕೆ ಸರಕಾರದ ಬಳಿ ಸೂಕ್ತವಾದ ಮತ್ತು ಅನಿವಾರ್ಯ ಕಾರಣಗಳು ಖಂಡಿತವಾಗಿಯೂ ಕಾಣುತ್ತಿಲ್ಲ.

ಈ ಡಿಎನ್‌ಎ ಮಸೂದೆ ಅಸ್ಪಷ್ಟವಾಗಿದ್ದು, ನಮ್ಮ ಡಿಎನ್‌ಎನ ಒಂದು ಡೇಟಾಬೇಸ್ ಸೃಷ್ಟಿಸಿ, ಅದರಿಂದ ನಮ್ಮನ್ನೆಲ್ಲ ಗುರಿಯಾಗಿಸುವ ಉದ್ದೇಶ ಹೊಂದಿದೆ ಹಾಗೂ ಇದನ್ನು ಎಲ್ಲರೂ ವಿರೋಧಿಸಲೇಬೇಕಿದೆ.

(ಕನ್ನಡಕ್ಕೆ): ರಾಜಶೇಖರ್ ಅಕ್ಕಿ

ಮಾನವಿ ಅತ್ರಿ
ಯುವ ವಕೀಲೆ, ಆಲ್ಟರ್ನೆಟಿವ್ ಲಾ ಫೋರಂನಲ್ಲಿ ಸಂಶೋಧಕಿಯಾಗಿದ್ದಾರೆ.


ಇದನ್ನೂ ಓದಿ: ಗೋಮಾಂಸ ತಿನ್ನುವವರ ಡಿಎನ್‌ಎ ನಮ್ಮಲಿಲ್ಲ- RSS ಮುಖ್ಯಸ್ಥರ ಹೇಳಿಕೆಗೆ ವಿಎಚ್‌ಪಿ ಸದಸ್ಯೆ ಸಾಧ್ವಿ ತಿರುಗೇಟು

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ದಲಿತ ಕುಟುಂಬದ ಮೂವರ ಹತ್ಯೆ ಪ್ರಕರಣ: ಪೊಲೀಸರ ವರ್ಗಾವಣೆ

0
ಉತ್ತರಪ್ರದೇಶದ ಕೌಶಂಬಿ ಜಿಲ್ಲೆಯ ಸಂದೀಪನ್ ಘಾಟ್ ಪ್ರದೇಶದಲ್ಲಿ ಜಮೀನು ವಿವಾದಕ್ಕೆ ಸಂಬಂಧಿಸಿ ದಲಿತ ಕುಟುಂಬದ ಮೂವರು ಸದಸ್ಯರ ಹತ್ಯೆ ನಡೆದಿದ್ದು, ಇದೀಗ ಸ್ಥಳೀಯ ಪೊಲೀಸ್ ಠಾಣಾಧಿಕಾರಿ ಮತ್ತು ಹೊರಠಾಣೆ ಪ್ರಭಾರ ಅಧಿಕಾರಿಯನ್ನು ವರ್ಗಾಯಿಸಲಾಗಿದೆ. ಸಾಂದೀಪನ್...