ನಟ ರಕ್ಷಿತ್ ಶೆಟ್ಟಿ ಅಭಿನಯದ ಬಹು ನಿರೀಕ್ಷಿತ ‘ಅವನೇ ಶ್ರೀಮನ್ನಾರಾಯಣ’ ಚಿತ್ರದ ಬಿಡುಗಡೆಗೆ ಮುಹೂರ್ತ ಫಿಕ್ಸ್ ಆಗಿದೆ. ಡಿಸೆಂಬರ್ 27ಕ್ಕೆ ಚಿತ್ರ ತೆರೆ ಅಪ್ಪಳಿಸಲಿದೆ ಎಂದು ರಕ್ಷಿತ್ ಶೆಟ್ಟಿ ತಿಳಿಸಿದ್ದಾರೆ.
ಸ್ಯಾಂಡಲ್ ವುಡ್ ನಲ್ಲಿ ಬಹುದಿನಗಳ ನಂತರ ರಕ್ಷಿತ್ ಅಭಿನಯದ ಚಿತರ ತೆರೆಗೆ ಬರಲು ಸಜ್ಜಾಗಿದೆ. ಕಿರಿಕ್ ಪಾರ್ಟಿ ಯಶಸ್ವಿ ಚಿತ್ರದ ನಂತರ ‘ಅವನೇ ಶ್ರೀಮನ್ನಾರಾಯಣ’ ಚಿತರದ ಮೂಲಕ ರಕ್ಷಿತ್ ಮತ್ತೆ ಹೊಸ ನಿರೀಕ್ಷೆ ಹುಟ್ಟುಹಾಕಿದ್ದಾರೆ. ಚಿತ್ರದ ಶೂಟಿಂಗ್ ಆರಂಭವಾದಂದಿನಿಂದ ಸಾಕಷ್ಟು ಕುತೂಹಲ ಮೂಡಿಸಿದೆ. ಚಿತ್ರದಲ್ಲಿ ರಕ್ಷಿತ್ ಹೊಸ ಅವತಾರದಲ್ಲಿ ಕಾಣಿಸಿಕೊಂಡಿದ್ದಾರೆ. ಈ ಹಿನ್ನೆಲೆ ಚಿತ್ರ ಮತ್ತಷ್ಟು ಸೆನ್ಸೇಷನಲ್ ಕ್ರಿಯೇಟ್ ಮಾಡಿದೆ.
ನಟ ರಕ್ಷಿತ್ ರನ್ನು ಹೊಸ ಮ್ಯಾನರಿಸಂನಲ್ಲಿ ನೋಡಬೇಕು ಎಂದು ಕಾಯುತ್ತಿರುವ ಅಭಿಮಾನಿಗಳಿಗೆ, ನಟನ ಹೊಸ ಲುಕ್ ನಿರೀಕ್ಷೆಯನ್ನು ದುಪ್ಪಟ್ಟಾಗಿಸಿದೆ. ಸಿನೆಮಾ ಬಿಡುಗಡೆಯ ದಿನಾಂಕವನ್ನು ತಮ್ಮ ಅಧಿಕೃತ ಟ್ವಿಟ್ಟರ್ ಖಾತೆಯಲ್ಲಿ ನಟ ರಕ್ಷಿತ್ ಹಂಚಿಕೊಂಡಿದ್ದಾರೆ. ಇನ್ನು ಮೂರು ವರ್ಷದ ಹಿಂದೆ ರಿಲೀಸ್ ಆಗಿದ್ದ ಕಿರಿಕ್ ಪಾರ್ಟಿ ಚಿತ್ರ ಹಿಟ್ ಆಗಿತ್ತು. ಅದೂ ಕೂಡ ಡಿಸೆಂಬರ್ 27ರಂದೇ ರಿಲೀಸ್ ಆಗಿತ್ತು. ಅಂದು ‘ನಾವು ಕಿರಿಕ್ ಪಾರ್ಟಿಯ ಮೂರು ವರ್ಷಗಳ ಸಂಭ್ರಮವನ್ನು ಆಚರಿಸಲಿದ್ದೇವೆ’, ಎಂದು ಬರೆದುಕೊಂಡಿದ್ದಾರೆ.
ಸಚಿನ್ ರವಿ ಅವರು ಮೊದಲ ಬಾರಿಗೆ ಆ್ಯಕ್ಷನ್ ಕಟ್ ಹೇಳಿರುವ ಅವನೇ ಶ್ರೀಮನ್ನಾರಾಯಣ ಚಿತ್ರ ಈ ಮೊದಲು ನವೆಂಬರ್ ಅಂತ್ಯದಲ್ಲಿ ಬಿಡುಗಡೆಯಾಗಲಿದೆ ಎಂದು ಚಿತ್ರತಂಡ ಹೇಳಿತ್ತು. ಆದರೆ ಈಗ ಡಿಸೆಂಬರ್ 27ಕ್ಕೆ ರಿಲೀಸ್ ಆಗಲಿದೆ. ಸುಮಾರು 80 ಕೋಟಿ ರೂಪಾಯಿ ವೆಚ್ಚದಲ್ಲಿ ಅವನೇ ಶ್ರೀಮನ್ನಾರಾಯಣ ಚಿತ್ರ ನಿರ್ಮಾಣವಾಗಿದೆ. ಪುಷ್ಕರ ಮಲ್ಲಿಕಾರ್ಜುನಯ್ಯ ಮತ್ತು ಎ.ಕೆ.ಪ್ರಕಾಶ್ ಬಂಡವಾಳ ಹೂಡಿದ್ದಾರೆ. ಬಿ.ಅಜನೀಶ್ ಲೋಕನಾಥ್ ಮತ್ತು ಚರಣ್ ರಾಜ್ ರಾಗ ಸಂಯೋಜನೆ ಮಾಡಿದ್ದಾರೆ.
ಅವನೇ ಶ್ರೀಮನ್ನಾರಾಯಣ ಚಿತ್ರ ನವಿರು ಪ್ರೇಮ ಮತ್ತು ಹಾಸ್ಯ ಮಿಶ್ರಿತ ಕಥೆಯಾಗಿದೆ. ಕರ್ಮ್ ಚಾವ್ಲಾ ಅವರ ಕ್ಯಾಮರಾ ಕೈಚಳಕ ಚಿತ್ರಕ್ಕಿದೆ. ಚಿತ್ರದಲ್ಲಿ ರಕ್ಷಿತ್ ಶೆಟ್ಟಿ ಮತ್ತು ಶಾನ್ವಿ ಶ್ರೀವಾಸ್ತವ್ ಪ್ರಧಾನ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಉಳಿದಂತೆ ಅಚ್ಯುತ್ ಕುಮಾರ್, ಪ್ರಮೋದ್ ಶೆಟ್ಟಿ, ಬಾಲಾಜಿ ಮನೋಹರ್ ತಾರಾಗಣದಲ್ಲಿದ್ದಾರೆ.


