ಸುಪ್ರೀಂಕೋರ್ಟ್‌ನ ಇಮೇಲ್‌ಗಳ ಕೆಳಭಾಗದಲ್ಲಿ ಕಂಡು ಬರುವ ಪ್ರಧಾನಿ ಮೋದಿ ಅವರ ಚಿತ್ರ ಮತ್ತು ‘ಸಬ್ ಕಿ ಸಾತ್ ಸಬ್ ಕಾ ವಿಕಾಸ್…’ ಎಂದು ಬರೆದಿರುವ ಟ್ಯಾಗ್‌ಲೈನ್‌ನ ಬ್ಯಾನರ್ ಅನ್ನು ತಕ್ಷಣವೆ ತೆಗೆದು ಹಾಕುವಂತೆ ಸುಪ್ರೀಂಕೋರ್ಟ್ ಶುಕ್ರವಾರ ನ್ಯಾಷನಲ್ ಇನ್ಫಾರ್ಮ್ಯಾಟಿಕ್ಸ್ ಸೆಂಟರ್ (ಎನ್‌ಐಸಿ) ಗೆ ಸೂಚಿಸಿದೆ.
‘ಎನ್‌ಐಸಿ’ ಡಿಜಿಟಲ್ ಇಂಡಿಯಾದ ಪ್ರಮುಖ ಉಪಕ್ರವಾಗಿದ್ದು, ಅದು ಸುಪ್ರೀಂ ಕೋರ್ಟ್‌ಗೆ ಇಮೇಲ್ ಸೇವೆಗಳನ್ನು ಒದಗಿಸುತ್ತದೆ. ಈ ಚಿತ್ರಗಳ ಬದಲಾಗಿ ಸುಪ್ರೀಂಕೋರ್ಟ್‌ನ ಚಿತ್ರವನ್ನು ಬಳಸಲು ಕೋರ್ಟ್ ಸೂಚಿಸಿದೆ ಎಂದು ವರದಿಯಾಗಿದೆ.
ಇದನ್ನೂ ಓದಿ: ಸುಪ್ರೀಂ ತೀರ್ಪು ಎಫೆಕ್ಟ್: ಅವಿವಾಹಿತ ಮಹಿಳೆಯರಿಗೆ ರಾಷ್ಟ್ರೀಯ ರಕ್ಷಣಾ, ನೌಕಾ ಅಕಾಡೆಮಿ ಪರೀಕ್ಷೆಗೆ ಯುಪಿಎಸ್‌ಸಿ ಅನುಮತಿ
ಈ ನಿರ್ದೇಶನಗಳನ್ನು ಎನ್‌ಐಸಿ ಅನುಸರಿಸಿದ್ದು, ಅದರ ಸ್ಕ್ರೀನ್‌ಶಾರ್ಟ್ ಅನ್ನು ಅಧಿಕಾರಿಗಳು ಹಂಚಿಕೊಂಡಿದ್ದಾರೆ ಎಂದು TNIE ವರದಿ ಮಾಡಿದೆ.
ಈ ಬಗ್ಗೆ ಪ್ರತಿಕ್ರಿಯಿಸಿರುವ ಎನ್‌ಐಸಿಯ ಅಧಿಕಾರಿಯೊಬ್ಬರು, “ಇದನ್ನು ಎಲ್ಲಾ ಎನ್‌ಐಸಿ ಪ್ಲಾಟ್‌ಫಾರ್ಮ್‌ಗಳಲ್ಲಿ ಬಳಸಲಾಗುತ್ತದೆ. ಇಂದು, ಇದನ್ನು ಸುಪ್ರೀಂಕೋರ್ಟ್‌ನ ಇ ಮೇಲ್‌ನಿಂದ ತೆಗೆದುಹಾಕಲು ಕ್ರಮಗಳನ್ನು ತೆಗೆದುಕೊಂಡಿದ್ದೇವೆ. ಈ ಹಿಂದೆ ಅಲ್ಲಿ ಗಾಂಧಿ ಜಯಂತಿಗೆ ಸಂಬಂಧಿಸಿದ ಸಂದೇಶವನ್ನು ಬಳಸಲಾಗುತ್ತಿತ್ತು” ಎಂದು ಹೇಳಿದ್ದಾರೆ.
ಶುಕ್ರವಾರ ಸುಪ್ರೀಂಕೋರ್ಟ್ ರಿಜಿಸ್ಟ್ರಿಯಿಂದ ವಕೀಲರಿಗೆ ಕಳುಹಿಸಲಾದ ಇಮೇಲ್‌ಗಳಲ್ಲಿ ಈ ಚಿತ್ರಗಳು ಕಂಡು ಬಂದಿತ್ತು . ಸುಪ್ರೀಂಕೋರ್ಟ್ ಅಡ್ವೊಕೇಟ್ಸ್-ಆನ್-ರೆಕಾರ್ಡ್ ಅಸೋಸಿಯೇಷನ್ ವಾಟ್ಸಾಪ್ ಗ್ರೂಪ್‌ನಲ್ಲಿ ಈ ಬಗ್ಗೆ ಆಕ್ಷೇಪವನ್ನು ಎತ್ತಲಾಗಿತ್ತು.
ಚಿತ್ರವು ನ್ಯಾಯಾಂಗ ಮತ್ತು ಕಾರ್ಯಾಂಗವನ್ನು ಬೇರ್ಪಡಿಸುವ ರೇಖೆಯನ್ನು ಮುಸುಕುಗೊಳಿಸುತ್ತದೆ ಎಂದು ವಕೀಲರು ಆರೋಪಿಸಿದ್ದರು.
ಇದನ್ನೂ ಓದಿ: ಪೆಗಾಸಸ್ ಹಗರಣ ತನಿಖೆಗೆ ಸಮಿತಿ ರಚನೆ: ಸುಪ್ರೀಂ ಹೇಳಿಕೆ


