ಕಾಳಿಘಾಟ್ ಬಳಿಕ ಕೋಲ್ಕತ್ತಾದ ದಕ್ಷಿಣೇಶ್ವರ ದೇವಸ್ಥಾನದಲ್ಲೂ ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ವಿರುದ್ದ ‘ಗೋ ಬ್ಯಾಕ್ ಘೋಷಣೆಗಳು’ ಕೇಳಿ ಬಂದಿವೆ.
ಮಂಗಳವಾರ (ಮಾ.10) ಬೆಳಿಗ್ಗೆ ಜ್ಞಾನೇಶ್ ಕುಮಾರ್ ದಕ್ಷಿಣೇಶ್ವರ ಕಾಳಿ ದೇವಸ್ಥಾನಕ್ಕೆ ಭೇಟಿ ನೀಡಿದ್ದರು. ಈ ವೇಳೆ ಗುಂಪೊಂದು ಕಪ್ಪು ಬಾವುಟ ಪ್ರದರ್ಶಿಸಿ ಪ್ರತಿಭಟಿಸಿತು ಎಂದು ಡೆಕ್ಕನ್ ಹೆರಾಲ್ಡ್ ವರದಿ ಮಾಡಿದೆ.
ಟಿಎಂಸಿ ಕಾರ್ಯಕರ್ತರು ಮತ್ತು ಸ್ಥಳೀಯರು ದಕ್ಷಿಣೇಶ್ವರ ಸ್ಕೈವಾಕ್ ಬಳಿ ಜಮಾಯಿಸಿ ಈ ಪ್ರತಿಭಟಿಸಿದ್ದಾರೆ.
ಪ್ರತಿಭಟನೆಯ ನಡುವೆಯೂ ಜ್ಞಾನೇಶ್ ಕುಮಾರ್ ಅವರು ದೇವಾಲಯದಲ್ಲಿ ಪೂಜೆ ಸಲ್ಲಿಸಿದ್ದಾರೆ. ನಂತರ ಅವರು ಸುದ್ದಿಗಾರರೊಂದಿಗೆ ಮಾತನಾಡಿ, ಪಶ್ಚಿಮ ಬಂಗಾಳದಲ್ಲಿ ಮುಕ್ತ ಮತ್ತು ನ್ಯಾಯಸಮ್ಮತ ಚುನಾವಣೆ ನಡೆಸಲು ಚುನಾವಣಾ ಆಯೋಗ ಬದ್ಧವಾಗಿದೆ ಎಂದು ಹೇಳಿದ್ದಾರೆ.
ದಕ್ಷಿಣೇಶ್ವರಕ್ಕೂ ಮುನ್ನ ಜ್ಞಾನೇಶ್ ಕುಮಾರ್ ಬೇಲೂರು ಮಠಕ್ಕೆ ಭೇಟಿ ನೀಡಿದ್ದರು, ಅಲ್ಲೂ ಸಹ ಪ್ರತಿಭಟನಾಕಾರರು ಅವರ ಬೆಂಗಾವಲು ವಾಹನಕ್ಕೆ ಅಡ್ಡಿಪಡಿಸಲು ಯತ್ನಿಸಿದ್ದಾರೆ ಎಂದು ವರದಿಯಾಗಿದೆ.
ಸೋಮವಾರ (ಮಾ.9) ಜ್ಞಾನೇಶ್ ಕುಮಾರ್ ಕೋಲ್ಕತ್ತಾ ನಗರದ ದಕ್ಷಿಣ ಭಾಗದಲ್ಲಿರುವ ಕಾಳಿಘಾಟ್ ಕಾಳಿ ದೇವಸ್ಥಾನಕ್ಕೆ ಭೇಟಿ ನೀಡಿದ್ದರು. ಈ ಸಂದರ್ಭದಲ್ಲೂ ಜನರು ಕಪ್ಪು ಬಾವುಟ ಪ್ರದರ್ಶಿಸಿ ಗೋ ಬ್ಯಾಕ್ ಘೋಷಣೆಗಳನ್ನು ಕೋಗಿದ್ದರು.
ಜ್ಞಾನೇಶ್ ಕುಮಾರ್ ಅವರು ಕೋಲ್ಕತ್ತಾ ವಿಮಾನ ನಿಲ್ದಾಣಕ್ಕೆ ಬಂದಿಳಿದಾಗಲೂ ಪ್ರತಿಭಟನಾಕಾರರು ಮುತ್ತಿಗೆ ಹಾಕಿ ಘೋಷಣೆಗಳನ್ನು ಕೂಗಿದ್ದಾರೆ ಎಂದು ವರದಿಯಾಗಿದೆ.
ಪಶ್ಚಿಮ ಬಂಗಾಳದ ಎಸ್‌ಐಆರ್‌ನಲ್ಲಿ ಲಕ್ಷಾಂತರ ಮತದಾರರ ಹೆಸರುಗಳನ್ನು ಮತದಾರರ ಪಟ್ಟಿಯಿಂದ ತೆಗೆದು ಹಾಕಿರುವುದನ್ನು ಖಂಡಿಸಿ ಮುಖ್ಯ ಚುನಾವಣಾ ಆಯುಕ್ತರ ವಿರುದ್ಧ ಜನರು ಪ್ರತಿಭಟನೆ ನಡೆಸಿದ್ದಾರೆ.


