ಒಕ್ಕೂಟ ಸರ್ಕಾರ ಘೋಷಿಸಿರುವ ಅಗ್ನಿಪಥ್ ನೇಮಕಾತಿ ಯೋಜನೆ ವಿರುದ್ಧ ಶುಕ್ರವಾರ ಮಧ್ಯಪ್ರದೇಶದ ಇಂದೋರ್‌ನಲ್ಲಿ ನಡೆದ ಪ್ರತಿಭಟನೆಗಳು ಹಿಂಸಾಚಾರಕ್ಕೆ ತಿರುಗಿದ್ದು, ನೂರಾರು ಪ್ರತಿಭಟನಾಕಾರರು ನಗರದ ರೈಲು ನಿಲ್ದಾಣದ ಬಳಿ ಹಳಿಗಳ ಮೇಲೆ ಜಮಾಯಿಸಿ ಕಲ್ಲು ತೂರಾಟ ನಡೆಸಿದ್ದಾರೆ.
ರೈಲುಗಳನ್ನು ರದ್ದುಗೊಳಿಸುವಂತೆ ಪ್ರತಿಭಟನಾಕಾರರು ಅಧಿಕಾರಿಗಳಿಗೆ ಒತ್ತಾಯಿಸಿದ್ದಾರೆ. ಪರಿಸ್ಥಿತಿಯನ್ನು ನಿಯಂತ್ರಿಸಲು ಪೊಲೀಸರು ಅಶ್ರುವಾಯು ಪ್ರಯೋಗಿಸಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಘಟನೆಯಲ್ಲಿ ಇಬ್ಬರು ಪೊಲೀಸರಿಗೆ ಸಣ್ಣಪುಟ್ಟ ಗಾಯಗಳಾಗಿವೆ, ಸುಮಾರು 15 ಪ್ರತಿಭಟನಾಕಾರರನ್ನು ಬಂಧಿಸಲಾಗಿದೆ ಮತ್ತು ಅವರ ವಿರುದ್ಧ ಕಾನೂನು ಕ್ರಮವನ್ನು ಪ್ರಾರಂಭಿಸಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ: ‘ಅಗ್ನಿ ಪಥ್’ ಯೋಜನೆ ಸೇನೆಗೆ ಅಪಾಯಕಾರಿ: ಕೊಡಗಿನ ವೀರ ಯೋಧರ ಆತಂಕ
“ಇಂದೋರ್‌ನ ಲಕ್ಷ್ಮೀಬಾಯಿ ನಗರ ರೈಲು ನಿಲ್ದಾಣದ ಬಳಿಯ ಹಳಿಗಳ ಮೇಲೆ ಸುಮಾರು 600 ಯುವಕರು ವಿವಿಧ ಗುಂಪುಗಳಲ್ಲಿ ಜಮಾಯಿಸಿದ್ದರು. ಕೆಲವು ರೈಲುಗಳನ್ನು ನಿಲ್ಲಿಸುವಂತೆ ರೈಲ್ವೇ ಅಧಿಕಾರಿಗಳನ್ನು ಒತ್ತಾಯಿಸಿದರು” ಎಂದು ಇಂದೋರ್ ಪೊಲೀಸ್ ಕಮಿಷನರ್ ಹರಿನಾರಾಯಣ ಚಾರಿ ಮಿಶ್ರಾ ಅವರನ್ನು ಪಿಟಿಐ ಉಲ್ಲೇಖಿಸಿದೆ.
ಪ್ರತಿಭಟನಾಕಾರರು ಕಲ್ಲು ತೂರಾಟದಲ್ಲಿ ತೊಡಗಿದಾಗ, ಪೊಲೀಸರು ಅಶ್ರುವಾಯು ಪ್ರಯೋಗಿಸಿದ್ದಾರೆ. ಪ್ರತಿಭಟನಾಕಾರನ್ನು ಚದುರಿಸಲು ಮತ್ತು ಪರಿಸ್ಥಿತಿಯನ್ನು ಹತೋಟಿಗೆ ತರಲು ಲಾಠಿ ಚಾರ್ಜ್ ಮಾಡಿದ್ದಾರೆ. ಘಟನೆಯಲ್ಲಿ ಇಬ್ಬರು ಪೊಲೀಸರಿಗೆ ಸಣ್ಣಪುಟ್ಟ ಗಾಯಗಳಾಗಿವೆ. ಆದರೆ, ಕಲ್ಲು ತೂರಾಟದಲ್ಲಿ ರೈಲು ಪ್ರಯಾಣಿಕರು ಗಾಯಗೊಂಡಿರುವ ಯಾವುದೇ ಮಾಹಿತಿ ಇದುವರೆಗೆ ಬಂದಿಲ್ಲ ಎಂದು ಮಾಹಿತಿ ನೀಡಿದ್ದಾರೆ.
ಪ್ರತಿಭಟನೆ ನಡೆಯುವ ಮುನ್ನೆಚ್ಚರಿಕೆಯಿಂದ ನಗರದ ವಿವಿಧ ನಿಲ್ದಾಣಗಳಲ್ಲಿ ಪೊಲೀಸರು ಮತ್ತು ರೈಲ್ವೆ ರಕ್ಷಣಾ ಪಡೆ (ಆರ್‌ಪಿಎಫ್) ಸಿಬ್ಬಂದಿಯನ್ನು ನಿಯೋಜಿಸಲಾಗಿದೆ.ಗುರುವಾರ ಸುಮಾರು 150 ಯುವಕರು ಇಂದೋರ್‌ನಲ್ಲಿ ಅಗ್ನಿಪಥ್ ಯೋಜನೆ ವಿರುದ್ಧ ಪ್ರತಿಭಟನೆ ನಡೆಸಿದ್ದರು. ಇಂದು ಅದು ಐದು ಪಟ್ಟು ಹೆಚ್ಚಾಗಿದೆ.
ಗ್ವಾಲಿಯರ್‌ನ ರೈಲು ನಿಲ್ದಾಣದ ಬಳಿ ಪ್ರತಿಭಟನಾಕಾರರು ಕಲ್ಲು ತೂರಾಟ ನಡೆಸಿದ್ದು, ಅಂಗಡಿಗಳಿಗೆ ಬೆಂಕಿ ಹಚ್ಚಿದ್ದು, ಗುರುವಾರ ಕೆಲ ಕಾಲ ರೈಲು ಸಂಚಾರಕ್ಕೆ ತೊಂದರೆಯಾಗಿತ್ತು. ಇನ್ನು ದೇಶಾದ್ಯಂತ ನಡೆಯುತ್ತಿರುವ ಯುವಜನರ ಪ್ರತಿಭಟನೆಯಲ್ಲಿ ಒಂದು ಸಾವು ಸಂಭವಿಸಿದ್ದು, 8 ಜನರ ಗಾಯಗೊಂಡಿದ್ದಾರೆ ಎಂದು ಮಾಧ್ಯಮಗಳು ವರದಿ ಮಾಡಿವೆ.
ಇದನ್ನೂ ಓದಿ: ಅಗ್ನಿಪಥ್ ವಿರುದ್ಧ ಸಿಡಿದೆದ್ದ ಯುವಜನತೆ: ಒಂದು ಸಾವು, 8 ಜನರಿಗೆ ಗಾಯ – ವಯಸ್ಸಿನ ಮಿತಿ ಹೆಚ್ಚಳಕ್ಕೆ ಮುಂದಾದ ಕೇಂದ್ರ


