Homeಕರ್ನಾಟಕ‘ಅಗ್ನಿ ಪಥ್’ ಯೋಜನೆ ಸೇನೆಗೆ ಅಪಾಯಕಾರಿ: ಕೊಡಗಿನ ವೀರ ಯೋಧರ ಆತಂಕ

‘ಅಗ್ನಿ ಪಥ್’ ಯೋಜನೆ ಸೇನೆಗೆ ಅಪಾಯಕಾರಿ: ಕೊಡಗಿನ ವೀರ ಯೋಧರ ಆತಂಕ

‘ಈ ಯೋಜನೆಯಿಂದಾಗಿ ಸೇನೆಯ ಸ್ಪಿರಿಟ್‌ಗೆ ಧಕ್ಕೆಯಾಗಬಹುದು’ ಎನ್ನುತ್ತಾರೆ ಕರ್ನಲ್‌ ಕೆ.ಸಿ.ಸುಬ್ಬಯ್ಯ... ‘ಚೆನ್ನಾಗಿದ್ದ ವ್ಯವಸ್ಥೆ ಹಾಳಾಗದಿರಲಿ” ಎನ್ನುತ್ತಾರೆ ಕರ್ನಲ್‌ ಸಿ.ಪಿ.ಮುತ್ತಣ್ಣ... (ಮುಂದೆ ಓದಿರಿ)

- Advertisement -
- Advertisement -

“ಕೇಂದ್ರ ಸರ್ಕಾರ ಜಾರಿಗೊಳಿಸಲು ಹೊರಟಿರುವ ಅಗ್ನಿಪಥ ಯೋಜನೆಯು ಸೇನೆಯ ಮೇಲೆ ಪ್ರತಿಕೂಲ ಪರಿಣಾಮ ಬೀರಲಿದೆ” ಎನ್ನುವುದು ಕೊಡಗಿನ ವೀರ ಯೋಧರ ಆತಂಕ.

ಸೈನಿಕ ನೇಮಕಾತಿಗೆ ಸಂಬಂಧಿಸಿದಂತೆ ‘ಅಗ್ನಿಪಥ’ ಎಂಬ ಹೊಸ ಯೋಜನೆಯೊಂದನ್ನು ಕೇಂದ್ರ ಸರ್ಕಾರ ಘೋಷಿಸಿದೆ. ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಮತ್ತು ಮೂವರು ಸೇನಾ ಮುಖ್ಯಸ್ಥರು ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಈ ಅಲ್ಪಾವಧಿಯ ರಕ್ಷಣಾ ನೇಮಕಾತಿ ಕುರಿತು ಮಾಹಿತಿ ನೀಡಿದ್ದಾರೆ. ಇದು ಸರ್ಕಾರದ ವತಿಯಿಂದ ಕೈಗೊಂಡ ಐತಿಹಾಸಿಕ ಕ್ರಮ ಎಂದು ಮಾಧ್ಯಮಗಳು ಬಣ್ಣಿಸುವ ವೇಳೆಗಾಗಲೇ ಈ ಯೋಜನೆಯನ್ನು ವಿರೋಧಿಸಿ ಲಕ್ಷಾಂತರ ಯುವಜನರು ಬೀದಿಗಿಳಿದಿದ್ದಾರೆ.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
₹100 ₹200 ₹500 ₹1000 Others

ಉತ್ತರ ಪ್ರದೇಶ, ಬಿಹಾರ, ಜಾರ್ಖಂಡ್ ಸೇರಿದಂತೆ ಇತರೆ ರಾಜ್ಯಗಳಲ್ಲಿ ಪ್ರತಿಭಟನೆಗಳನ್ನು ಹಿಂಸಾಚಾರಕ್ಕೆ ತಿರುಗಿವೆ. ಅಷ್ಟರಮಟ್ಟಿಗೆ ಯುವಜನರು ಕೇಂದ್ರ ಸರ್ಕಾರದ ವಿರುದ್ಧ ತಮ್ಮ ಆಕ್ರೋಶ ಹೊರ ಹಾಕಿದ್ದಾರೆ. ಅಷ್ಟೇ ಅಲ್ಲದೇ ಕೊಡಗಿನ ವೀರ ಯೋಧರೂ ಈ ಯೋಜನೆಯ ಕುರಿತು ಆತಂಕ ವ್ಯಕ್ತಪಡಿಸುತ್ತಿದ್ದಾರೆ.

ಕೊಡಗಿನ ಕರ್ನಲ್‌ ಕೆ.ಸಿ.ಸುಬ್ಬಯ್ಯ ಸೇನೆಯಲ್ಲಿ ಸುಮಾರು 28 ವರ್ಷ ಸೇವೆ ಸಲ್ಲಿಸಿದವರು. ಮೇಜರ್‌ ಆಗಿ ಯುನಿಟ್‌ ಮುನ್ನಡೆಸಿದವರು. ಮಾರಾಟವಾಗಿದ್ದ ಜನರಲ್‌ ತಿಮ್ಮಯ್ಯನವರ ಮನೆಯನ್ನು ಮರಳಿ ಪಡೆಯುವುದಕ್ಕಾಗಿ ಹೋರಾಡಿ ಬಳಿಕ ತಿಮ್ಮಯ್ಯ ಮ್ಯೂಸಿಯಂ ಮಾಡಿದವರು ಕೆ.ಸಿ.ಸುಬ್ಬಯ್ಯ. ಜೊತೆಗೆ ಫೀಲ್ಡ್‌ ಮಾರ್ಷಲ್‌ ಕಾರ್ಯಪ್ಪ, ಜನರಲ್ ತಿಮ್ಮಯ್ಯ ಫೋರಂ ರೂಪಿಸಿದ್ದಾರೆ. ಗೋಣಿಕೊಪ್ಪದಲ್ಲಿ ತಿಮ್ಮಯ್ಯ-ಕಾರ್ಯಪ್ಪ ಮೆಮೊರಿಯಲ್‌ ಸ್ಥಾಪನೆಯಾಗುವಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ. ಸೇನೆಯ ಕುರಿತು ಅಪಾರ ಪ್ರೀತಿಯನ್ನು ಹೊಂದಿರುವ ಇವರು, ‘ನಾನುಗೌರಿ.ಕಾಂ’ ಜೊತೆ ಮಾತನಾಡಿ ತಮ್ಮ ಅಭಿಪ್ರಾಯಗಳನ್ನು ಹಂಚಿಕೊಂಡರು.

ಇದನ್ನೂ ಓದಿರಿ: ಬಿಹಾರ, ಯುಪಿಯಲ್ಲಿ ‘ಅಗ್ನಿಪಥ್‌ ಯೋಜನೆ’ ವಿರೋಧಿಸಿ ಸೇನಾ ಆಕಾಂಕ್ಷಿಗಳ ಬೃಹತ್‌‌ ಪ್ರತಿಭಟನೆ

“ಅಗ್ನಿಪಥ್‌‌ನಲ್ಲಿ ಒಳ್ಳೆಯದು ಉಂಟು, ಕೆಟ್ಟದ್ದು ಉಂಟು. ರಕ್ಷಣಾ ಪಡೆ ಅತ್ಯಂತ ತಾರುಣ್ಯದಿಂದ ಕೂಡಿರುತ್ತದೆ ಎಂಬುದು ಒಳ್ಳೆಯ ವಿಚಾರ. ಆದರೆ ಈ ನಾಲ್ಕು ವರ್ಷಗಳಲ್ಲಿ ಆರು ತಿಂಗಳು ತರಬೇತಿಗೆ ಹೋಗುತ್ತದೆ. ಇನ್ನು ಮೂರುವರೆ ವರ್ಷವನ್ನು ಯೂನಿಟ್‌ನಲ್ಲಿ ಕಳೆಯುತ್ತಾನೆ. ಆದರೆ ಈ ಅಲ್ಪಾವಧಿಯಲ್ಲಿ ಹೊಂದಾಣಿಕೆ ಸಾಧ್ಯವಾಗುತ್ತದೆಯೇ ಎಂಬ ಸಂಶಯವಿದೆ. ಶೇ. 25ರಷ್ಟು ಜನರನ್ನು ಉಳಿಸಿಕೊಂಡು ಉಳಿದವರನ್ನು ವಾಪಸ್‌ ಕಳುಹಿಸುತ್ತಾರೆ. ಈ 25% ಜನರನ್ನು ಶಿಫಾರಸ್ಸು ಮಾಡುವವರು ಯಾರು? ಯುನಿಟ್‌‌ನ ಉಸ್ತುವಾರಿಗಳು ಮಾಡುತ್ತಾರೆ. ಕೆಲಸವನ್ನು ಉಳಿಸಿಕೊಳ್ಳಬೇಕೆಂದು ಈ ಯುವಕರು ಏನು ಬೇಕಾದರೂ ಮಾಡಬಹುದು. ಹೀಗಾಗಿ ಯುನಿಟ್‌ನೊಳಗಿನ ಸ್ಪಿರಿಟ್‌ ಇಲ್ಲವಾಗಿಬಿಡುತ್ತದೆ ಎಂಬ ಆತಂಕ ಕಾಡುತ್ತಿದೆ” ಎಂದರು.

“ಆರ್ಮಿಯಿಂದ ಹೊರಬಂದ ಮೇಲೆ ಬಿಎಸ್‌ಎಫ್‌, ಸಿಆರ್‌ಫಿಎಫ್‌‌, ಪೊಲೀಸ್ ಅಥವಾ ಇನ್ಯಾವುದೇ ಸರ್ಕಾರಿ ಉದ್ಯೋಗ ನೀಡುವ ಭರವಸೆಯನ್ನು ನೀಡಿದರೆ ಈ ಹುಡುಗರು ಉತ್ಸಾಹದಿಂದ ಸೇವೆ ಸಲ್ಲಿಸುತ್ತಾರೆ. ಈಗ ಒಂದೇ ಸಲಕ್ಕೆ 40 ಸಾವಿರ ಜನ ಸೇನೆಗೆ ಹೋಗಬಹುದು. ಆದರೆ ಎರಡನೇ ಅವಧಿಗೆ ಇಷ್ಟು ಯುವಕರು ಸಿಗುತ್ತಾರೆಯೇ ಎಂಬುದೇ ಅನುಮಾನ” ಎಂದು ತಿಳಿಸಿದರು.

“ಈ ನಾಲ್ಕು ವರ್ಷಗಳ ನಂತರ ತಾನು ಉಳಿಯಬೇಕೆಂದು ಇಲ್ಲದ ಸಲ್ಲದ ದೂರುಗಳನ್ನು ಹೇಳುತ್ತಾ, ಇಡೀ ಯೂನಿಟ್‌ ಹಾಳು ಮಾಡುವ ಸಾಧ್ಯತೆ ಇದೆ. ಈ ಅಗ್ನಿಪಥ್ ಯೋಜನೆ ಒಳ್ಳೆಯದೆಂದು ಕಾಣುತ್ತಿಲ್ಲ. ತರಾತುರಿಯಲ್ಲಿ ಮಾಡಿರುವ ಯೋಜನೆ ಇದು” ಎಂದು ಅಭಿಪ್ರಾಯಪಟ್ಟರು.

“ಆರ್ಮಿಯಿಂದ ಹೊರಗೆ ಬಂದ ಮೇಲೆ ಬೇರೆ ಕೆಲಸ ಕೊಡುವುದಾಗಿ ಈಗ ಹೇಳುತ್ತಿದ್ದಾರೆ. ಆದರೆ ನನ್ನ ಅನುಭವದಲ್ಲಿ ಹೇಳುವುದಾದರೆ ಯಾವುದೇ ಕೆಲಸವನ್ನೂ ಇವರು ಕೊಡುವುದಿಲ್ಲ. ಈ ಸಿಪಾಯಿಗಳು ಬಿಟ್ಟು ಬರುವಾಗ ಕನಿಷ್ಟ 32 ವರ್ಷಕ್ಕೆ ಕಾಲಿಟ್ಟಿರುತ್ತಾರೆ. ಇವರನ್ನು ಗನ್‌ ಮ್ಯಾನ್‌ ಅಲ್ಲದೆ ಬೇರೆ ಯಾವ ಕೆಲಸಕ್ಕೂ ತೆಗೆದುಕೊಂಡಿದ್ದು ನೋಡಿಲ್ಲ. 18 ವರ್ಷ ಸೇವೆ ಮಾಡಿ ಬಂದವರನ್ನೇ ತೆಗೆದುಕೊಳ್ಳಲಿಲ್ಲ ಅಂದ ಮೇಲೆ ನಾಲ್ಕು ವರ್ಷ ಕೆಲಸ ಮಾಡಿದವರನ್ನು ತೆಗೆದುಕೊಳ್ಳುತ್ತಾರೆಯೇ?” ಎಂದು ಪ್ರಶ್ನಿಸಿದರು.

“ಟ್ರೈನ್‌ ಆಗಿರುವ ಮಾನವ ಸಂಪನ್ಮೂಲ ಕೆಲಸವಿಲ್ಲದೆ ಕೂರುವುದೆಂದರೆ ಅದು ಈ ಸಮಾಜದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುವ ಸಾಧ್ಯತೆಗಳು ಕಾಣುತ್ತಿವೆ. ಹಣ ಉಳಿಸಿಕೊಳ್ಳಬೇಕೆಂಬ ಧಾವಂತದಲ್ಲಿ ಇಡೀ ಸೈನ್ಯವನ್ನು ಕೆಡಿಸಿಬಿಡುತ್ತಾರೋ ಎಂಬ ಭಯ ಕಾಡುತ್ತಿದೆ. ಒಂದು ಯೂನಿಟ್‌ಗಾಗಿ ಸೈನಿಕ ಈವರೆಗೆ ಸಾಯಲು ಸಿದ್ಧನಿದ್ದ. ನಾನು ಯೂನಿಟ್‌ ಮುನ್ನೆಡೆಸುವಾಗ ನನ್ನೊಂದಿಗೆ ನಲವತ್ತು ಯೋಧರಿದ್ದರು. ಗುಂಡು ಹಾರಿಸಿದರೂ ಎದೆಕೊಡಲು ಎಲ್ಲರೂ ಮುಂದೆ ಬರುತ್ತಿದ್ದರು. ಕಾರಣ ಒಂದು ಯೂನಿಟ್‌ ಎಂದರೆ- ನಂಬಿಕೆ, ಪ್ರೀತಿಯ ಧ್ಯೋತಕವಾಗಿರುತ್ತದೆ. ಒಂದು ಕುಟುಂಬವೇ ಆಗಿರುತ್ತದೆ. ಆದರೆ ಈ ಹೊಸ ಯೋಜನೆಯಿಂದಾಗಿ ಅದೆಲ್ಲವೂ ಹಾಳಾಗುವ ಸಾಧ್ಯತೆ ಇದೆ” ಎಂದು ಎಚ್ಚರಿಸಿದರು.

“ಹಣ ಉಳಿಸುವ ಮಾತುಗಳನ್ನಾಡುತ್ತಿದ್ದಾರೆ. ಭದ್ರತಾ ವಿಚಾರದಲ್ಲಿ ಚೌಕಾಸಿ ಬೇಡವಿತ್ತು. ನಾಲ್ಕೈದು ಯುದ್ಧಗಳು ನಡೆದಿವೆ. ಗೆದ್ದಿದ್ದೇವೆ. ಯುದ್ಧದಲ್ಲಿ ಸೋತಿದ್ದರೆ ಸೈನ್ಯದ ಬೆಲೆ ಏನು, ಸೇನೆ ಹೇಗೆ ಕೆಲಸ ಮಾಡುತ್ತದೆ ಎಂಬುದು ಈ ರಾಜಕಾರಣಿಗಳಿಗೆ ಗೊತ್ತಾಗುತ್ತಿತ್ತು. ಸಂಸತ್ತಿನ ಮೇಲೆ ಅಟ್ಯಾಕ್‌ ಆಯಿತು. ಕಣ್ಣಿಗೆ ಬಂದಿದ್ದನ್ನು ರೆಪ್ಪೆ ತಡೆಯಿತು ಎಂಬಂತೆ ಎಲ್ಲರೂ ಬಚಾವಾದರು. ಯಾರಾದರೂ ಸಚಿವರಿಗೂ ಸಂಸದರಿಗೋ ಜೀವ ಹಾನಿಯಾಗಿದ್ದರೆ ಈ ಡಿಫೆನ್ಸ್‌ ಫೋರ್ಸ್‌‌ನ ಬೆಲೆ ಏನೆಂಬುದು ಗೊತ್ತಾಗುತ್ತಿತ್ತು. ರಕ್ಷಣಾ ಪಡೆಯೊಂದಿಗೆ ಸರ್ಕಾರ ಚೆಲ್ಲಾಟವಾಡಬಾರದು” ಎಂದು ಮನವಿ ಮಾಡಿದರು.

“ಪಿಂಚಣಿಯನ್ನು ನಿಲ್ಲಿಸಲು ಯೋಚಿಸಿದ್ದಾರೆ. ಒಬ್ಬಾತ ಎಂಎಲ್‌ಎ ಆಗಿಯೋ ಎಂಪಿಯಾಗಿಯೋ ಐದು ಬಾರಿ ಆಯ್ಕೆಯಾದರೆ ಐದು ಪಟ್ಟು ಹೆಚ್ಚು ಪಿಂಚಣಿ ಪಡೆಯುತ್ತಾನೆ. ಏನಿದರ ಅರ್ಥ? ಯೋಧರಿಗೆ ನೀಡಬೇಕಾದ ಪಿಂಚಣಿಯನ್ನು ಜನರ ಬೊಕ್ಕಸದಿಂದಲೇ ಕೊಡಬೇಕಲ್ಲ. ಆರ್ಮಿಯೊಂದಿಗೆ ಚೆಲ್ಲಾಟವಾಡುತ್ತಿರುವುದು ಏತಕ್ಕೆ?” ಎಂದು ಪ್ರಶ್ನಿಸಿದರು ಕರ್ನಲ್‌ ಕೆ.ಸಿ.ಸುಬ್ಬಯ್ಯ.

ಚೆನ್ನಾಗಿದ್ದ ವ್ಯವಸ್ಥೆಯನ್ನು ಹಾಳು ಮಾಡುವುದು ಬೇಕಿಲ್ಲ: ಸಿ.ಪಿ.ಮುತ್ತಣ್ಣ

24 ವರ್ಷ ದೇಶಕ್ಕಾಗಿ ಸೇವೆ ಸಲ್ಲಿಸಿ ಸ್ವಯಂ ನಿವೃತ್ತಿ ಪಡೆದವರು ಕರ್ನಲ್‌‌ ಸಿ.ಪಿ.ಮುತ್ತಣ್ಣ. ‘ನಾನುಗೌರಿ.ಕಾಂ’ನಲ್ಲಿ ಮಾತನಾಡಿದ ಅವರು, “ವಿಶ್ವದಲ್ಲೇ ಅತ್ಯುತ್ತಮ ಸೇನೆ ಎಂಬ ಹೆಗ್ಗಳಿಕೆ ನಮ್ಮ ಆರ್ಮಿಗಿದೆ. ಎಲ್ಲವೂ ಚೆನ್ನಾಗಿರುವಾಗ ಅದಕ್ಕೆ ತೊಂದರೆ ಮಾಡುವ ಅವಶ್ಯಕತೆ ಇರಲಿಲ್ಲ. ಸರ್ಕಾರದ ಯೋಚನೆ ಸರಿ ಇರಬಹುದು. ಆದರೆ ಸರಿಯಾಗಿ ಆಲೋಚನೆ ಮಾಡಿದಂತಿಲ್ಲ” ಎಂದು ಅಭಿಪ್ರಾಯಪಟ್ಟರು.

“25% ಜನರನ್ನು ಉಳಿಸಿಕೊಂಡು ಉಳಿದವರನ್ನು ಕೆಲಸದಿಂದ ತೆಗೆಯಲು ಯೋಚಿಸಿದ್ದಾರೆ. ಹೀಗೆ ಮಾಡದೆ, ಸಿಆರ್‌ಪಿಎಫ್‌, ಬಿಎಸ್‌ಎಫ್‌, ಪೊಲೀಸ್‌, ಕೆಎಸ್‌ಆರ್‌ಪಿ- ಇವುಗಳಲ್ಲಿ ಸೈಡ್‌ ಸ್ಟೆಪ್‌ ಮಾಡಲು ಅವಕಾಶ ನೀಡಬಹುದು. ಇಲ್ಲವೆಂದರೆ ಪಾಪ, ಈ ಯುವಕರು ಎಲ್ಲಿಗೆ ಹೋಗಬೇಕು? ಕೊನೆಗೆ ಸೆಕ್ಯುರಿಟಿ ಆಗಬೇಕಷ್ಟೇ” ಎಂದು ತಿಳಿಸಿದರು.

“ಯುವಕರು ಪ್ರತಿಭಟನೆ ಮಾಡುತ್ತಿದ್ದಾರೆ. ಕೋವಿಡ್ ಬಿಕ್ಕಟ್ಟಿನಿಂದಾಗಿ ಎರಡು ವರ್ಷದಿಂದ ಆರ್ಮಿ ನೇಮಕಾತಿ ನಡೆದಿಲ್ಲ. ಕೆಲವರಿಗೆ ಪರೀಕ್ಷೆಗಳು ನಡೆದವು. ಆದರೆ ನೇಮಕಾತಿ ಪ್ರಕ್ರಿಯೆ ಅರ್ಧಕ್ಕೆ ನಿಂತು ಹೋಯಿತು. ಕೆಲವು ಯುವಕರು ವಯೋಮಿತಿಯನ್ನು ಕಳೆದುಕೊಳ್ಳುತ್ತಿದ್ದಾರೆ. ಈ ಯುವಕರು ಖಾಯಂ ಉದ್ಯೋಗದತ್ತ ನೋಡುತ್ತಿದ್ದಾರೆ. ಆದರೆ ಈ ರೀತಿಯ ಹೋರಾಟ ಅಗತ್ಯವಿಲ್ಲ. ಈ ಯುವಕರನ್ನು ರೌಡಿ ಶೀಟರ್‌ ಒಮ್ಮೆ ಗುರುತಿಸಿಬಿಟ್ಟರೆ ಮತ್ತೆಂದೂ ಯಾವುದೇ ಕೆಲಸ ಸಿಗುವುದಿಲ್ಲ. ಶಾಂತಿಯುತ ಹೋರಾಟಕ್ಕೆ ಮರಳಬೇಕು” ಎಂದು ಕಿವಿಮಾತು ಹೇಳಿದರು.

ಇದನ್ನೂ ಓದಿರಿ: Explainer: ಏನಿದು ಅಗ್ನಿಪಥ್ ಯೋಜನೆ? ಯಾಕಿಷ್ಟು ವಿರೋಧ?

“ಇದು ದೇಶದ ರಕ್ಷಣೆಯ ವಿಚಾರ. ಆರ್ಮಿ ಹೇಗಿರುತ್ತದೆ ಎಂಬುದು ರಾಜಕಾರಣಿಗಳಿಗೆ ಗೊತ್ತಿಲ್ಲ. ಈ ರಾಜಕಾರಣಿಗಳಾಗಲೀ, ಇವರ ತಂದೆಯವರೂ ಸೇನೆಯಲ್ಲಿ ಕೆಲಸ ಮಾಡಿರುವುದಿಲ್ಲ. ಈ ಅಗ್ನಿಪಥ್‌ ಯೋಜನೆ ಬೇಡವೆಂದು ಸೇನಾ ತಜ್ಞರೂ ಹೇಳುತ್ತಿದ್ದಾರೆ. ಇದೆಲ್ಲ ಈ ರಾಜಕಾರಣಿಗಳಿಗೆ ಅರ್ಥವಾಗುವುದಿಲ್ಲ” ಎಂದು ವಿಷಾದಿಸಿದರು.

“ಬೇರೆ ದೇಶದಲ್ಲಿಯೂ ಇದೇ ರೀತಿಯ ಯೋಜನೆಗಳಿವೆ ಎಂದು ಸಮರ್ಥಿಸುತ್ತಿದ್ದಾರೆ. ಬೇರೆ ದೇಶದಲ್ಲಿ ಮಾಡಿದರೆಂದೂ ನಾವು ಅದನ್ನೇ ಮಾಡಬೇಕಾ? ಈಗ ಇರುವ ವ್ಯವಸ್ಥೆಯೇ ಸದೃಢವಾಗಿದೆಯಲ್ಲ. ರಷ್ಯಾ- ಉಕ್ರೇನ್‌ ನಡುವೆ ಯುದ್ಧ ನಡೆಯುತ್ತಿದೆ. ರಷ್ಯಾ ಸೇನೆಯಲ್ಲಿ ಹೀಗೆಯೇ ಯುವಕರನ್ನು ಸೇರಿಸಿಕೊಳ್ಳಲಾಗಿದೆ. ಬಹುತೇಕರು ಆರು ತಿಂಗಳಲ್ಲಿ ಕೆಲಸ ಕಳೆದುಕೊಳ್ಳಲಿದ್ದಾರೆ. ಬಹುತೇಕ ಯೋಧರಿಗೆ ಈ ಕದನದ ಮೇಲೆ ಹೆಚ್ಚಿನ ಆಸಕ್ತಿ ಇಲ್ಲ” ಎಂದು ಉಲ್ಲೇಖಿಸಿದರು.

ಮಾಜಿ ಯೋಧರಾದ ಕೆ.ಜಿ.ಶಿವಂ ಮಾತನಾಡಿ, “ಸೇನೆಗೆ ಸೇರಿ ತರಬೇತಿ ಪಡೆದು ಹೊರಬಂದವರು ತಮ್ಮ ತರಬೇತಿಯನ್ನು ದುರುಪಯೋಗ ಮಾಡಿಕೊಳ್ಳಬಹುದು” ಎಂದರು.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

2 COMMENTS

LEAVE A REPLY

Please enter your comment!
Please enter your name here

- Advertisment -

Must Read

FACT CHECK : ಕಾಂಗ್ರೆಸ್ ನಾಯಕ ಅಧೀರ್ ರಂಜನ್ ಚೌಧರಿ ಬಿಜೆಪಿಗೆ ಮತ ಹಾಕುವಂತೆ...

0
ಪಶ್ಚಿಮ ಬಂಗಾಳದ ಕಾಂಗ್ರೆಸ್ ಅಧ್ಯಕ್ಷ ಹಾಗೂ ಹಿರಿಯ ರಾಜಕಾರಣಿ ಅಧೀರ್ ರಂಜನ್ ಚೌಧರಿ ಅವರಿ ಬಿಜೆಪಿ ಪರ ಮಾತನಾಡಿದ್ದಾರೆ ಎನ್ನಲಾದ ವಿಡಿಯೋವೊಂದು ವೈರಲ್ ಆಗಿದೆ. ವಿಡಿಯೋದಲ್ಲಿ " ತೃಣಮೂಲ ಕಾಂಗ್ರೆಸ್‌ (ಟಿಎಂಸಿ) ಪಕ್ಷಕ್ಕೆ ಮತ...