ಲೋಕಸಭೆ ಚುನಾವಣೆ ಹಿನ್ನೆಲೆ ಕಾಂಗ್ರೆಸ್ ಪಕ್ಷವು ಸೆಂಟ್ರಲ್ ವಾರ್‌ರೂಂನ್ನು ರಚಿಸಿದ್ದು, ‘ಸಂಘಟನಾ’ ವಾರ್‌ರೂಂ ಅಧ್ಯಕ್ಷರಾಗಿ ಮಾಜಿ ಐಎಎಸ್ ಅಧಿಕಾರಿ ಶಶಿಕಾಂತ್ ಸೆಂಥಿಲ್ ಅವರು ನೇಮಕಗೊಂಡಿದ್ದಾರೆ.
ತಮಿಳುನಾಡು ಕೇಡರ್‌ನ ಐಎಎಸ್ ಅಧಿಕಾರಿಯಾಗಿರುವ ಶಶಿಕಾತ್ ಸೆಂಥಿಲ್, ಐಎಎಸ್ ಹುದ್ದೆಗೆ ರಾಜೀನಾಮೆ ನೀಡಿ ಕಾಂಗ್ರೆಸ್ ಸೇರ್ಪಡೆಗೊಂಡಿದ್ದರು. ಇತ್ತೀಚಿನ ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ ಸೆಂಥಿಲ್ ಪ್ರಮುಖ ಚುನಾವಣಾ ತಂತ್ರಗಾರರಲ್ಲಿ ಒಬ್ಬರಾಗಿದ್ದರು. ಕೆಪಿಸಿಸಿಯ ವಾರ್ ರೂಂನ್ನು ಯಶಸ್ವಿಯಾಗಿ ನಿಭಾಯಿಸಿ ಕರ್ನಾಟಕದಲ್ಲಿ ಕಾಂಗ್ರೆಸ್ ಗೆಲುವಿನಲ್ಲಿ ಪಾತ್ರ ವಹಿಸಿದ್ದರು.
ವೈಭವ್ ವಾಲಿಯಾ ಅವರು ಸೆಂಟ್ರಲ್ ಸಂವಹನ ವಾರ್ ರೂಮ್‌ನ ಮುಖ್ಯಸ್ಥರನ್ನಾಗಿ ನೇಮಕಗೊಂಡಿದ್ದು, ಸಸಿಕಾಂತ್ ಸೆಂಥಿಲ್ ಅವರನ್ನು ‘ಸಂಘಟನಾ’ ವಾರ್ ರೂಮ್‌ನ ಅಧ್ಯಕ್ಷರನ್ನಾಗಿ ನೇಮಿಸಲಾಗಿದೆ. ಗೋಕುಲ್ ಬುತೈಲ್, ನವೀನ್ ಶರ್ಮ, ವರುಣ್ ಸಂತೋಷ್, ಅರವಿಂದ್ ಕುಮಾರ್‌ರನ್ನು ವಾರ್‌ರೂಂ ಉಪಾಧ್ಯಕ್ಷರುಗಳಾಗಿ ಆಯ್ಕೆ ಮಾಡಲಾಗಿದೆ.
ಎಐಸಿಸಿ ಕೋಶಾಧಿಕಾರಿ ಅಜಯ್ ಮಾಕೆನ್ ಅವರ ಸಂಚಾಲಕತ್ವದಲ್ಲಿ ಪ್ರಚಾರ ಸಮಿತಿಯನ್ನು ರಚಿಸಿದೆ ಮತ್ತು ಎಐಸಿಸಿ ಪ್ರಧಾನ ಕಾರ್ಯದರ್ಶಿಗಳಾದ ಜೈರಾಮ್ ರಮೇಶ್ ಮತ್ತು ಕೆ ಸಿ ವೇಣುಗೋಪಾಲ್, ಎಐಸಿಸಿ ಆಡಳಿತ ಉಸ್ತುವಾರಿ ಗುರುದೀಪ್ ಸಿಂಗ್ ಸಪ್ಪಲ್, ಮಾದ್ಯಮ ಮತ್ತು ಪ್ರಚಾರ ವಿಭಾಗದ ಮುಖ್ಯಸ್ಥ ಪವನ್ ಖೇರಾ ಮತ್ತು ಸಾಮಾಜಿಕ ಮಾಧ್ಯಮದ ಮುಖ್ಯಸ್ಥೆ ಸುಪ್ರಿಯಾ ಶ್ರೀನತೆ ಅವರು ಸಮಿತಿಯ ಭಾಗವಾಗಿದ್ದಾರೆ.
ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಮುಂಬರುವ ಲೋಕಸಭೆ ಚುನಾವಣೆ ಹಿನ್ನೆಲೆ ಸಾರ್ವತ್ರಿಕ ಚುನಾವಣೆಗೆ ಪ್ರಚಾರ ಸಮಿತಿಯನ್ನು ರಚಿಸಿದ್ದು, ಅಖಿಲ ಭಾರತ ಕಾಂಗ್ರೆಸ್ ಸಮಿತಿಯ ಖಜಾಂಚಿ ಅಜಯ್ ಮಾಕೆನ್ ಸಂಚಾಲಕರಾಗಿದ್ದಾರೆ ಎಂದು ಹೇಳಿದ್ದಾರೆ. ಎಐಸಿಸಿ ಸಂಘಟನಾ ಪ್ರಧಾನ ಕಾರ್ಯದರ್ಶಿ, ಎಐಸಿಸಿ ಪ್ರಧಾನ ಕಾರ್ಯದರ್ಶಿ (ಸಂವಹನ ವಿಭಾಗ), ಎಐಸಿಸಿ ಆಡಳಿತದ ಉಸ್ತುವಾರಿ, ಎಐಸಿಸಿ ಮಾದ್ಯಮ ಮತ್ತು ಪ್ರಚಾರ ವಿಭಾಗದ ಅಧ್ಯಕ್ಷರು ಮತ್ತು ಸಾಮಾಜಿಕ ಮಾಧ್ಯಮ ವಿಭಾಗದ ಅಧ್ಯಕ್ಷರು ಪ್ರಚಾರ ಸಮತಿಯ ಸದಸ್ಯರಾಗಿರುತ್ತಾರೆ.
ಏಪ್ರಿಲ್-ಮೇ ತಿಂಗಳಲ್ಲಿ ನಡೆಯಲಿರುವ ಲೋಕಸಭೆ ಚುನಾವಣೆಗೆ ಅಭ್ಯರ್ಥಿಗಳನ್ನು ಶಾರ್ಟ್‌ಲಿಸ್ಟ್ ಮಾಡಲು ಕಾಂಗ್ರೆಸ್ ಐದು ಸ್ಕ್ರೀನಿಂಗ್ ಕಮಿಟಿಗಳನ್ನು ರಚಿಸಿದ ಒಂದು ದಿನದ ನಂತರ ಈ ನೇಮಕಾತಿಗಳು ನಡೆದಿದೆ.
ಇದಲ್ಲದೆ ಎಐಸಿಸಿ ಇಂದು ರಾಜಸ್ಥಾನ, ಕೇರಳ, ತೆಲಂಗಾಣ, ಛತ್ತೀಸ್‌ಗಢ, ಹಿಮಾಚಲ ಪ್ರದೇಶ, ನಾಗಾಲ್ಯಾಂಡ್, ಮಣಿಪುರ ಮತ್ತು ತ್ರಿಪುರಾ, ಮಧ್ಯಪ್ರದೇಶಕ್ಕೆ ಚುನಾವಣಾ ಸಮಿತಿಗಳನ್ನು ರಚಿಸಿದ್ದು, ಇದಕ್ಕೆ ಎಐಸಿಸಿ ಅಧ್ಯಕ್ಷರಾದ ಮಲ್ಲಿಕಾರ್ಜುನ ಖರ್ಗೆ ಅವರು ತಕ್ಷಣದಿಂದ ಜಾರಿಗೆ ಬರುವಂತೆ ಅನುಮೋದನೆ ನೀಡಿದ್ದರು.
ಇದನ್ನು ಓದಿ: 8 ರಾಜ್ಯಗಳಿಗೆ ಚುನಾವಣಾ ಸಮಿತಿಗಳನ್ನು ನೇಮಿಸಿದ ಕಾಂಗ್ರೆಸ್


