ಮೋದಿ ನೇತೃತ್ವದ ನೂತನ ಎನ್‌ಡಿಎ ಸರಕಾರದಲ್ಲಿ ಎನ್‌ಸಿಪಿ ಬಣಕ್ಕೆ ಸಂಪುಟ ದರ್ಜೆಯ ಸ್ಥಾನಮಾನ ಸಿಗಲಿಲ್ಲ ಎಂದು ಅಸಮಾಧಾನಗೊಂಡಿದ್ದ ಅಜಿತ್ ಪವಾರ್, ಇದೀಗ ಮಾವ ಶರದ್ ಪವಾರ್‌ಗೆ ಅಭಿನಂದನೆಯನ್ನು ಸಲ್ಲಿಸಿದ್ದಾರೆ. ಕಳೆದ 24 ವರ್ಷಗಳಿಂದ ಎನ್‌ಸಿಪಿ ಪಕ್ಷವನ್ನು ಮುನ್ನಡೆಸಿದ್ದಕ್ಕಾಗಿ ಚಿಕ್ಕಪ್ಪ ಶರದ್ ಪವಾರ್ ಅವರನ್ನು ಅಭಿನಂದಿಸಿದ್ದಾರೆ. ಅಜಿತ್ ಬಣದಿಂದ ಶರದ್ ಬಣಕ್ಕೆ 18ಕ್ಕೂ ಅಧಿಕ ಶಾಸಕರು ತೆರಳಲು ಮುಂದಾಗಿದ್ದಾರೆ ಎಂಬ ಸುದ್ದಿಗಳ ಮಧ್ಯೆ ಈ ಬೆಳವಣಿಗೆ ನಡೆದಿದೆ.
2023ರಲ್ಲಿ ಶರದ್ ಪವಾರ್ ಸ್ಥಾಪಿಸಿದ ಎನ್‌ಸಿಪಿಯಿಂದ ಬೆಂಬಲಿಗ ಶಾಸಕರ ಜೊತೆ ತೆರಳಿದ್ದ ಅಜಿತ್ ಪವಾರ್ ಶಿಂಧೆ ಸರಕಾರದಲ್ಲಿ ಡಿಸಿಎಂ ಹುದ್ದೆಯನ್ನು ಪಡೆದುಕೊಂಡಿದ್ದರು. ಆ ಬಳಿಕ ಎನ್‌ಡಿಎ ಬಣದ ಭಾಗವಾಗಿದ್ದ ಅಜಿತ್ ಬಣ ಚುನಾವಣೆಯಲ್ಲಿನ ಹೀನಾಯ ಸೋಲು, ಕ್ಯಾಬಿನೆಟ್ ದರ್ಜೆಯ ಸ್ಥಾನಮಾನ ಸಿಗದ ಹಿನ್ನೆಲೆ ಮತ್ತೆ ಚಿಕ್ಕಪ್ಪನ ಜೊತೆ ಅಜಿತ್‌ಗೆ ಪ್ರೀತಿ ಹುಟ್ಟಿದ್ದು, ವಿಭಜಿತ ಎನ್‌ಸಿಪಿ ಮತ್ತೆ ಒಂದಾಗುತ್ತಾ ಎಂಬ ಪ್ರಶ್ನೆ ಮೂಡಿದೆ.
ಲೋಕಸಭೆ ಚುನಾವಣೆಯಲ್ಲಿ ಎನ್‌ಸಿಪಿ ಕೇವಲ ಒಂದು ಸ್ಥಾನವನ್ನು ಗಳಿಸುವ ಮೂಲಕ ಹೀನಾಯ ಸೋಲನುಭವಿದೆ. ಎನ್‌ಡಿಎ ಮಿತ್ರಪಕ್ಷವಾಗಿರುವ ಎನ್‌ಸಿಪಿ ಮೋದಿ 3.0 ಸರ್ಕಾರದಲ್ಲಿ ಕ್ಯಾಬಿನೆಟ್ ಸ್ಥಾನಕ್ಕಿಂತ ಕಡಿಮೆ ಇರುವ ಯಾವುದೇ ಸ್ಥಾನಕ್ಕೆ ಒಪ್ಪಿಕೊಳ್ಳುವುದಿಲ್ಲ ಎಂದು ಪುನರುಚ್ಚರಿಸಿದೆ.
ಇತ್ತೀಚಿನ ಸಾರ್ವತ್ರಿಕ ಚುನಾವಣೆಯಲ್ಲಿ, ಅಜಿತ್ ಪವಾರ್ ನೇತೃತ್ವದ ಎನ್‌ಸಿಪಿ ತಾನು ಸ್ಪರ್ಧಿಸಿದ ನಾಲ್ಕು ಸ್ಥಾನಗಳಲ್ಲಿ ಒಂದನ್ನು ಮಾತ್ರ ಗಳಿಸುವಲ್ಲಿ ಯಶಸ್ವಿಯಾಗಿದ್ದರೆ, ಶರದ್ ಪವಾರ್ ನೇತೃತ್ವದ ಪ್ರತಿಸ್ಪರ್ಧಿ ಬಣವು ಸ್ಪರ್ಧಿಸಿದ ಹತ್ತು ಕ್ಷೇತ್ರಗಳಲ್ಲಿ ಎಂಟನ್ನು ಗೆದ್ದುಕೊಂಡಿದೆ. ಅಜಿತ್ ಪತ್ನಿ ಸುನೇತ್ರಾ ಪವಾರ್, ಸೊಸೆ ಸುಪ್ರಿಯಾ ಸುಳೆ ವಿರುದ್ಧ ಬಾರಾಮತಿಯಲ್ಲಿ ಹೀನಾಯ ಸೋಲು ಅನುಭವಿಸಿದ್ದರು.
ಕಳೆದ 24 ವರ್ಷಗಳಿಂದ ಪಕ್ಷವನ್ನು ಮುನ್ನಡೆಸಿದ್ದಕ್ಕಾಗಿ ಶರದ್ ಪವಾರ್ ಅವರಿಗೆ ನಾನು ಧನ್ಯವಾದ ಹೇಳಲು ಬಯಸುತ್ತೇನೆ ಎಂದು ಅಜಿತ್ ಪವಾರ್ ಹೇಳಿದ್ದಾರೆ.
ಅಜಿತ್ ಪವಾರ್ ಅವರು ಮಹಾರಾಷ್ಟ್ರದಲ್ಲಿ ಶಿವಸೇನೆ-ಬಿಜೆಪಿ ಸರ್ಕಾರಕ್ಕೆ ಸೇರಿದ ಕಾರಣ ಜುಲೈ 2023ರಲ್ಲಿ ಶರದ್ ಪವಾರ್ ಸ್ಥಾಪಿಸಿದ ಎನ್‌ಸಿಪಿಯಿಂದ ಹೊರ ನಡೆದಿದ್ದರು. ಬಳಿಕ ಕೋರ್ಟ್ ಮೂಲಕ ತಮ್ಮದೇ ನೈಜ ಎನ್‌ಸಿಪಿ ಎಂದು ಮಾನ್ಯತೆ ಪಡೆದುಕೊಂಡಿದ್ದರು.
ಪಕ್ಷದ ನಾಯಕ ಸುನಿಲ್ ತಟ್ಕರೆ ಅವರು ರಾಯಗಡ ಲೋಕಸಭಾ ಸ್ಥಾನದಲ್ಲಿ ಗೆಲುವನ್ನು ಸಾಧಿಸುವ ಮೂಲಕ ಎನ್‌ಸಿಪಿಯ ಇಮೇಜ್‌ನ್ನು ಉಳಿಸಿಕೊಂಡಿದ್ದಾರೆ. ಎನ್‌ಸಿಪಿಗೆ ಉಂಟಾದ ಚುನಾವಣಾ ಹಿನ್ನಡೆಯಿಂದ ಆಂತರಿಕ ಸಮಸ್ಯೆಗಳನ್ನು ಪರಿಹರಿಸಬೇಕಾಗಿದೆ ಎಂದು ಹೇಳಿದ್ದಾರೆ.
ಇದನ್ನು ಓದಿ: ಮೂಲಭೂತ ಹಕ್ಕುಗಳಷ್ಟೇ ಗೌರವಯುತ ಅಂತ್ಯಕ್ರಿಯೆ ಮೃತ ವ್ಯಕ್ತಿಯ ಹಕ್ಕು: ಮುಂಬೈ ಹೈಕೋರ್ಟ್


