Homeಕರ್ನಾಟಕಮಾಸಿಕ ತಲಾ ಅನುಭೋಗ ವೆಚ್ಚ ವರದಿ- 2022-23: ರಾಕ್ಷಸಾಕಾರದ ಅಸಮಾನತೆಯ ಚಿತ್ರ

ಮಾಸಿಕ ತಲಾ ಅನುಭೋಗ ವೆಚ್ಚ ವರದಿ- 2022-23: ರಾಕ್ಷಸಾಕಾರದ ಅಸಮಾನತೆಯ ಚಿತ್ರ

- Advertisement -
- Advertisement -

ಪ್ರಸ್ತಾವನೆ

ನಮ್ಮ ಪ್ರಧಾನಮಂತ್ರಿ ನರೇಂದ್ರ ಮೋದಿ ಮತ್ತು ಹಣಕಾಸು ಮಂತ್ರಿ ನಿರ್ಮಲಾ ಸೀತಾರಾಮನ್ ಅವರು “ನಮ್ಮದು ಜಗತ್ತಿನಲ್ಲಿ ಐದನೆಯ ಬೃಹತ್ ಆರ್ಥಿಕತೆಯಾಗಿದೆ, ನಮ್ಮದು ಜಗತ್ತಿನಲ್ಲಿಯೇ ಅತಿವೇಗವಾಗಿ ಬೆಳೆಯುತ್ತಿರುವ ಆರ್ಥಿಕತೆ, ನಮ್ಮದು 2047ರಲ್ಲಿ ’ವಿಕಸಿತ್ ಭಾರತ’ವಾಗುತ್ತದೆ” ಎಂಬಿತ್ಯಾದಿ ಹೇಳಿಕೆಗಳನ್ನು ಆಗಿಂದಾಗ್ಗೆ ನೀಡುತ್ತಿರುತ್ತಾರೆ. ಇದರ ಜೊತೆಗೆ ನಮ್ಮ ದೇಶದ ಜಿಡಿಪಿಯನ್ನು 5 ಟ್ರಿಲಿಯನ್ ಡಾಲರ್ ಮಾಡುತ್ತೇವೆ ಎಂದೂ ಹೇಳುತ್ತಿರುತ್ತಾರೆ. ಗುಜರಾತ್ ವೈಬ್ರೆಂಟ್ ಸಮ್ಮೇಳನವನ್ನು ಉದ್ದೇಶಿಸಿ ಮಾತನಾಡುತ್ತಾ ವಿತ್ತಮಂತ್ರಿ ನಿರ್ಮಲಾ ಸೀತಾರಾಮನ್ ಅವರು ’ನಮ್ಮದು 2027-28ರಲ್ಲಿ ಮೂರನೆಯ ಬೃಹತ್ ಆರ್ಥಿಕತೆಯಾಗುತ್ತದೆ. ಆಗ ಅದರ ಜಿಡಿಪಿಯು 5 ಟ್ರಿಲಿಯನ್ ಡಾಲರ್‌ಗಳಾಗುತ್ತದೆ. ಕೆಳಮಟ್ಟದ ಅಂದಾಜು ಮಾಡಿದರೂ ನಮ್ಮ ಆರ್ಥಿಕತೆಯ ಜಿಡಿಪಿಯು 2047ರಲ್ಲಿ 30 ಟ್ರಿಲಿಯನ್ ಡಾಲರ್‌ಗಳಾಗುತ್ತದೆ’ ಎಂದು ಹೇಳಿದ್ದಾರೆ (ಬಿಸಿನೆಸ್ ಟುಡೇ. ಜನವರಿ 11, 2024). ಪೆಟ್ರೋಲಿಯಮ್ ಸಚಿವ ಹರ್‌ದೀಪ್ ಪುರಿ ಅವರು ’2024-25ರಲ್ಲಿ ನಮ್ಮ ಜಿಡಿಪಿಯು 5 ಟ್ರಿಲಿಯನ್ ಡಾಲರ್‌ಗಳಾಗುತ್ತದೆ’ ಎಂದು ಹೇಳಿ ’ಮುಂದಿನ 10 ವರ್ಷಗಳಲ್ಲಿ ನಮ್ಮ ಜಿಡಿಪಿಯು 10 ಟ್ರಿಲಿಯನ್ ಡಾಲರ್‌ಗಳಾಗುತ್ತದೆ’ ಎಂದು ಹೇಳಿದ್ದಾರೆ (ಮಿಂಟ್ ಜನವರಿ 23, 2024)’. ದಾವೊಸ್‌ನಲ್ಲಿ ವರ್ಲ್ಡ್ ಎಕನಾಮಿಕ್ ಸಮಾವೇಶವನ್ನುದೇಶಿಸಿ ಮಾತನಾಡುತ್ತಾ ಪ್ರಧಾನಮಂತ್ರಿ ಅವರು ’ನಮ್ಮ ದೇಶದ ಜಿಡಿಪಿಯು 2025ರಲ್ಲಿ 5 ಟ್ರಿಲಿಯನ್ ಡಾಲರ್‌ಗಳಾಗುತ್ತದೆ’ ಎಂದು ಘೋಷಿಸಿದ್ದಾರೆ (ಎನ್‌ಡಿಟಿವಿ ಜನವರಿ 23, 2023). ಈ ಸರ್ಕಾರವು ’ಜಿಡಿಪಿ ವ್ಯಸನ’ದಲ್ಲಿ ಮುಳುಗಿರುವಂತೆ ಕಾಣುತ್ತದೆ. ಐದು ಟ್ರಿಲಿಯನ್ ಡಾಲರ್ ಜಿಡಿಪಿ ಎನ್ನುವುದು ಒಂದು ರೀತಿಯಲ್ಲಿ ಇವರಿಗೆ ಮಂತ್ರವಾಗಿಬಿಟ್ಟಿದೆ. ಕನಸು ಕಾಣುವುದಕ್ಕೆ ಒಂದು ಮಿತಿಯಿರಬೇಕು ಮತ್ತು ಇಂತಹ ಘೊಷಣೆಗಳಿಗೆ ಅಧ್ಯಯನ ವರದಿಗಳ, ಅಂಕಿ-ಸಂಖ್ಯೆಗಳ ಆಧಾರವಿರಬೇಕು. ಒಬ್ಬರು 2025ಲ್ಲಿ 5 ಟ್ರಿಲಿಯನ್ ಡಾಲರ್‌ಗಳಾಗುತ್ತದೆ ಎಂದರೆ ಮತ್ತೊಬ್ಬರು 2027-28ರಲ್ಲಿ ಎನ್ನುತ್ತಾರೆ. ವಿತ್ತಮಂತ್ರಿಯವರು ಅಮೃತಕಾಲದ ಬಗ್ಗೆ ಮಾತನಾಡಿದರೆ ಪ್ರಧಾನಮಂತ್ರಿಯವರು ವಿಕಸಿತ್ ಭಾರತದ ಬಗ್ಗೆ ಮಾತನಾಡುತ್ತಿದ್ದಾರೆ. ಇದನ್ನು ಗಾಳಿಯಲ್ಲಿ ಗೋಪುರ ಕಟ್ಟುವುದು ಎಂದು ನಮ್ಮ ಹಿರಿಯರು ಹೇಳುತ್ತಾರೆ. ನಮ್ಮ ಆರ್ಥಿಕತೆಯ ಐದನೆಯ ಅಥವಾ ಮೂರನೆಯ ಬೃಹತ್ ಆರ್ಥಿಕತೆಯಾಗಬಹುದು. ನಮ್ಮ ಜಿಡಿಪಿಯು 5 ಟ್ರಲಿಯನ್ ಡಾಲರ್ ಅಥವಾ 10 ಟ್ರಿಲಿಯನ್ ಡಾಲರ್ ಕೂಡ ಆಗಬಹುದು. ಅದೇನು ಅಸಾಧ್ಯವಾದ ಸಂಗತಿಯೇನಲ್ಲ. ಆದರೆ ಇವರೆಲ್ಲ ಹೇಳುವ ಟ್ರಿಲಿಯನ್ ಡಾಲರ್ ವರಮಾನವೇ ಅಭಿವೃದ್ಧಿಯಲ್ಲ. ಮಾನವ ಅಭಿವೃದ್ಧಿ ಪ್ರಣಾಳಿಕೆ ಮತ್ತು ಮಾನವ ಅಭಿವೃದ್ಧಿ ಸೂಚ್ಯಂಕದ ರೂವಾರಿ ಮೆಹಬೂಬ್ ಉಲ್ ಹಕ್ 1990ರಲ್ಲಿಯೇ ಹೇಳಿರುವಂತೆ ’ವರಮಾನವೇ ಜನರ ಬದುಕಿನ ಒಟ್ಟು ಮೊತ್ತವಲ್ಲ’. ಇದು ಅಭಿವೃದ್ಧಿಯ ಒಂದು ಅಂಶ ಮಾತ್ರ. ನಮ್ಮ ಜನರನ್ನು ಕಾಡುತ್ತಿರುವ ಬಡತನ, ಹಸಿವು, ನಿರುದ್ಯೋಗ, ಆಹಾರ ಅಭದ್ರತೆ, ಅಸಮಾನತೆ, ಲಿಂಗ ತಾರತಮ್ಯ ಮುಂತಾದ ಜ್ವಲಂತ ವರ್ತಮಾನದ ಸಮಸ್ಯೆಗಳ ಬಗ್ಗೆ ಇವರುಗಳು ಮಾತನಾಡುವುದಿಲ್ಲ. ವಿತ್ತಮಂತ್ರಿಯವರು 2047ರ ಅಮೃತಕಾಲದ ಬಗ್ಗೆ ಮತ್ತೆಮತ್ತೆ ಮಾತನಾಡುತ್ತಿರುತ್ತಾರೆ. ಪ್ರಸ್ತುತ ಜನರ ಬದುಕಿನ ಸ್ಥಿತಿಗತಿ ಹೇಗಿದೆ, ಜನರ ಜೀವನೋಪಾಯ ಎಂತಹ ದುಸ್ಥಿತಿಯಲ್ಲಿದೆ ಎಂಬುದರ ಬಗ್ಗೆ ಅಪ್ಪಿತಪ್ಪಿಯೂ ಇವರಿಗೆ ಕಾಳಜಿಯಿಲ್ಲ. ಹೀಗೆ ಏರಿಕೆಯಾದ ಜಿಡಿಪಿಯು ಸಮಾಜದ ಯಾವ ವರ್ಗದ ಪಾಲಾಗುತ್ತದೆ? ಅದರ ಒಂದು ಸಣ್ಣ ಭಾಗವಾದರೂ ಸಮಾಜದ ಅಂಚಿನಲ್ಲಿರುವ ವಂಚಿತ ವರ್ಗಕ್ಕೆ ದೊರೆಯುತ್ತದೆಯೇ? ಹಸಿವನ್ನು ಎದುರಿಸುತ್ತಿರುವ ಕೋಟ್ಯಂತರ ಕುಟುಂಬಗಳ ಆಹಾರ ಅಭದ್ರತೆಯು ಇವರಿಗೆ ಯಾಕೆ ಮುಖ್ಯವಾಗುತ್ತಿಲ್ಲ? ಇಂತಹ ಪ್ರಶ್ನೆಗಳ ಹಿನ್ನೆಲೆಯಲ್ಲಿ ವರಮಾನದ ಬಗೆಗಿನ ಹೇಳಿಕೆಗಳೆಲ್ಲವು ಕೇವಲ ಒಣಘೋಷಣೆಗಳು ಎಂಬುದು ಸರ್ಕಾರ ಫೆಬ್ರವರಿಯಲ್ಲಿ ಪ್ರಕಟಿಸಿರುವ ಕುಟುಂಬ ಘಟಕಗಳ ತಲಾ ಅನುಭೋಗ ವೆಚ್ಚದ ವರದಿಯ ಅಧ್ಯಯನದಿಂದ ತಿಳಿದುಬರುತ್ತದೆ.

ನರೇಂದ್ರ ಮೋದಿ

ಒಕ್ಕೂಟ ಸರ್ಕಾರವು ಕುಟುಂಬ ಘಟಕ ತಲಾ ಅನುಭೋಗ ವೆಚ್ಚ ಸಮೀಕ್ಷೆ 2022-23 ಎಂಬ ವರದಿಯ ಮುಖ್ಯಾಂಶಗಳನ್ನು ಪ್ರಕಟಿಸಿದೆ (ಫ್ಯಾಕ್ಟ್‌ಶೀಟ್). ಪೂರ್ಣ ವರದಿಯು ಪ್ರಕಟವಾಗಿಲ್ಲ. ಮಾಸಿಕ ತಲಾ ಅನುಭೋಗ ಸಮೀಕ್ಷೆಯೊಂದು 2017-18ರಲ್ಲಿ ನಡೆದಿತ್ತು. ಆದರೆ ಅದರ ಮುಖ್ಯಾಂಶಗಳು ಸರ್ಕಾರಕ್ಕೆ ಇರುಸುಮುರಿಸುಉಂಟುಮಾಡುವ ರೀತಿಯಲ್ಲಿ ಇದ್ದುದುರಿಂದ ಸರ್ಕಾರ ಆ ವರದಿಯನ್ನೇ ಮುಚ್ಚಿಹಾಕಿತ್ತು. ಇದೇರೀತಿಯಲ್ಲಿ ಆರೋಗ್ಯ ಸಚಿವಾಲಯವು 2023ರಲ್ಲಿ ರಾಷ್ಟ್ರೀಯ ಕುಟುಂಬ ಆರೋಗ್ಯ ಸಮೀಕ್ಷೆ ನೀಡಿದ್ದ 5 ವರದಿಯ ಅಂಕಿಅಂಶಗಳು ಸರ್ಕಾರಕ್ಕೆ ಅನುಕೂಕರವಾಗಿರಲಿಲ್ಲ ಎಂಬ ಕಾರಣಕ್ಕೆ ಇಂಟರ್‌ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ಪಾಪ್ಯುಲೇಶನ್ ಸ್ಟಡೀಸ್ ಸಂಸ್ಥೆಯ ನಿರ್ದೇಶಕ ಕೆ. ಎಸ್. ಜೇಮ್ಸ್ ಅವರನ್ನು ವಿನಾಕಾರಣ ಅಮಾನತು ಮಾಡಿತ್ತು. ನಂತರ ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದರು. ಗ್ಲೋಬಲ್ ಹಂಗರ್ ಇಂಡೆಕ್ಸ್‌ನಲ್ಲಿ ಭಾರತದ ಸ್ಥಾನ 2023ರಲ್ಲಿ 125 ದೇಶಗಳ ಪೈಕಿ 111ರಲ್ಲಿತ್ತು. ಇದನ್ನು ಸಹಿಸದ ಸರ್ಕಾರಿ ಅರ್ಥಶಾಸ್ತ್ರಜ್ಞರು ಇದನ್ನು ’ಸ್ಟಾಟಿಸ್ಟಿಕಲ್ ಗಾರ್ಬೆಜ್’ ಎಂದು ಟೀಕಿಸಿದ್ದರು. ಈ ಸರ್ಕಾರಕ್ಕೆ ಅಧ್ಯಯನ ವರದಿಗಳ ಬಗ್ಗೆ, ವರದಿಗಳ ಸಾಂಖ್ಯಿಕ ವಿವರಗಳ ಬಗ್ಗೆ ನಂಬಿಕೆಯಿಲ್ಲ. ಈ ಸರ್ಕಾರವು ’ಡೇಟಾ ಫೋಬಿಯಾ’ದಿಂದ ನರಳುತ್ತಿದೆ. ಅಧ್ಯಯನ ವರದಿಗಳು ಮತ್ತು ಸಮೀಕ್ಷೆಗಳ ಫಲಿತಗಳು ತನಗೆ ಅನುಕೂಲಕರವಾಗಿದ್ದರೆ ಮಾತ್ರ ಅದನ್ನು ಸ್ವಾಗತಿಸಿ ಅದು ’ತನ್ನ ಸಾಧನೆ’ ಎಂದು ಘೋಷಿಸಿಕೊಳ್ಳುತ್ತದೆ. ತನ್ನ ಸಾಧನೆಯನ್ನು ಟೀಕಿಸುವ ಅಥವಾ ತನ್ನ ಸಾಧನೆಯ ಮಟ್ಟವನ್ನು ತಗ್ಗಿಸುವ ವರದಿಗಳನ್ನು ಒಂದೋ ಪ್ರಕಟಿಸುವುದಿಲ್ಲ ಅಥವಾ ಪ್ರಕಟವಾದರೆ ಅದನ್ನು ಒಪ್ಪಿಕೊಳ್ಳುವುದಿಲ್ಲ. ಡಿಮಾನಿಟೈಸೇಶನ್ ಉಂಟುಮಾಡಿದ ಯಾತನೆಯಲ್ಲಿ ನೂರಾರು ಜನರು ಸಾವಿಗೀಡಾದರು, ಕೋವಿಡ್ ಪೆಂಡಮಿಕ್‌ನಲ್ಲಿಯೂ ಸಾವಿರಾರು ವಲಸೆ ಕಾರ್ಮಿಕರು ಸಾವಿಗೀಡಾದರು. ದೆಹಲಿ ಗಡಿಗಳಲ್ಲಿ ’ಮೂರು ಕರಾಳ ಕೃಷಿ ಕಾಯಿದೆ’ಗಳ ವಿರುದ್ಧ ರೈತರು ನಡೆಸಿದ ಚಾರಿತ್ರಿಕ 15 ತಿಂಗಳ ಹೋರಾಟದಲ್ಲಿ 700ಕ್ಕೂ ಮಿಕ್ಕಿ ರೈತರು ಹುತಾತ್ಮರಾದರು. ಸಂಸತ್ತಿನಲ್ಲಿ ಇವೆಲ್ಲದರ ಬಗ್ಗೆ ಪ್ರಶ್ನೆ ಕೇಳಿದಾಗ ಅವುಗಳಿಗೆ ಸಂಬಂಧಿಸಿದ ಯಾವ ಮಾಹಿತಿಯೂ ನಮ್ಮಲ್ಲಿಲ್ಲ ಎಂದು ಚೂರೂ ನಾಚಿಕೆಯಿಲ್ಲದೆ ಸರ್ಕಾರ ಹೇಳಿತು. ಇದನ್ನು ’ಸರ್ಕಾರ’ ಎಂದು ಕರೆಯುವುದೇ ಒಂದು ರೀತಿಯಲ್ಲಿ ಅವಮಾನಕರ ಸಂಗತಿ. ಅನೇಕರು ಈ ಸರ್ಕಾರವನ್ನು ’ನೋ ಡೆಟಾ ಅವೈಲಬಲ್ (ಎನ್‌ಡಿಎ) ಸರ್ಕಾರ’ ಎಂದು ವ್ಯಂಗ್ಯ ಮಾಡುತ್ತಿದ್ದಾರೆ.

ಈ ಎಲ್ಲ ಸಂಗತಿಗಳ ಹಿನ್ನೆಲೆಯಲ್ಲಿ ಸರ್ಕಾರ ಈಗ ಪ್ರಕಟಿಸಿರುವ ಮಾಸಿಕ ತಲಾ ಅನುಭೋಗ ವೆಚ್ಚದ 2022-23ರ ವರದಿಯನ್ನು ಸೂಕ್ಷ್ಮವಾಗಿ ಪರಿಶೀಲಿಸಿದರೆ 5 ಟ್ರಿಲಿಯನ್ ಡಾಲರ್ ಜಿಡಿಪಿ ಅಥವಾ ಅಮೃತಕಾಲ ಅಥವಾ ವಿಕಸಿತ್ ಭಾರತ ಎನ್ನುವುದೆಲ್ಲ ಭ್ರಮಾತ್ಮಕ ಸಂಗತಿಗಳು ಮತ್ತು ಟೊಳ್ಳು ಘೋಷಣೆಗಳು ಎನ್ನುವುದು ಬಹಿರಂಗವಾಗುತ್ತದೆ. ಪ್ರಸ್ತುತ ಅಧ್ಯಯನದಲ್ಲಿ 2022-23ರ ಮಾಸಿಕ ಅನುಭೋಗ ವೆಚ್ಚದ ಪ್ರಮುಖ ಸಂಗತಿಗಳನ್ನು ಚರ್ಚಿಸಲು ಪ್ರಯತ್ನಿಸಲಾಗಿದೆ. ಈ ಪ್ರಬಂಧದಲ್ಲಿ ವರಮಾನವೇ ಅಭಿವೃದ್ಧಿಯಲ್ಲ ಎಂಬುದನ್ನು ಸೋದಾಹರಣವಾಗಿ ತೋರಿಸಲು ಪ್ರಯತ್ನಿಸಲಾಗಿದೆ. ಬಹಳ ಮುಖ್ಯವಾಗಿ ನಮ್ಮ ಆರ್ಥಿಕತೆಯು ಅನುಭವಿಸುತ್ತಿರುವ ಅಸಾಧಾರಣ ಮತ್ತು ಅಸಹನೀಯವಾದ ಅಸಮಾನತೆಯ ವಿವಿಧ ಮುಖಗಳ ಬಗ್ಗೆ ಚರ್ಚೆ ಮಾಡಲಾಗಿದೆ. ಅರ್ಥಶಾಸ್ತ್ರಜ್ಞ ಅಮರ್ತ್ಯ ಸೇನ್ ಅವರು ಹೇಳುತ್ತಿರುವಂತೆ ಅಭಿವೃದ್ಧಿಯಲ್ಲಿ ಜನರ ಬದುಕಿನ ಸಮೃದ್ಧತೆ ಮುಖ್ಯವೇ ವಿನಾ ಆರ್ಥಿಕತೆಯ ಸಮೃದ್ಧತೆಯಲ್ಲ. ನರೇಂದ್ರ ಮೋದಿ ಮತ್ತು ಅವರ ಸರ್ಕಾರ ಆರ್ಥಿಕತೆಯ ಸಮೃದ್ಧತೆಯ ಬಗ್ಗೆ ಮಾತನಾಡುತ್ತಿದೆಯೇ ವಿನಾ ಜನರ ಬದುಕು, ಅವರ ಜೀವನೋಪಾಯದ ಬಗ್ಗೆ, ಹಸಿವು ಮತ್ತು ಅಪೌಷ್ಟಿಕತೆಗಳ ಬಗ್ಗೆ ಮಾತನಾಡುತ್ತಿಲ್ಲ.

ಮಾಸಿಕ ತಲಾ ಅನುಭೋಗ ವೆಚ್ಚ ಸಮೀಕ್ಷೆ ಎಂದರೇನು?

ಇದೊಂದು ಅಖಿಲ ಭಾರತ ಸಮೀಕ್ಷೆಯಾಗಿದೆ. ಇದರಲ್ಲಿ ಗ್ರಾಮೀಣ ಮತ್ತು ನಗರ ಪ್ರದೇಶಗಳ ಅನುಭೋಗ ವೆಚ್ಚದ ವಿವರಗಳನ್ನು ಸಂಗ್ರಹಿಸಲಾಗುತ್ತದೆ. ಈ ಸಮೀಕ್ಷೆಯನ್ನು ರಾಷ್ಟ್ರೀಯ ಸ್ಯಾಂಪಲ್ ಸರ್ವೇ ಕಚೇರಿ (ಎನ್‌ಎಸ್‌ಎಸ್‌ಒ) ಸಂಸ್ಥೆಯು ಪ್ರತಿ ಐದು ವರ್ಷಗಳಿಗೊಮ್ಮೆ ನಡೆಸುತ್ತದೆ. ಕೆಲವು ರಾಜಕೀಯ ಕಾರಣಗಳಿಗಾಗಿ ಮೋದಿ ಸರ್ಕಾರವು 2017-18ರ ಮಾಸಿಕ ತಲಾ ಅನುಭೋಗ ವೆಚ್ಚದ ವರದಿಯನ್ನು ಬಹಿರಂಗಪಡಿಸಲಿಲ್ಲ. ಅಂದರೆ 2011-12ರಲ್ಲಿ ನಡೆದ ಸಮೀಕ್ಷೆಯ ನಂತರ 2022-23ರಲ್ಲಿ ಇದನ್ನು ನಡೆಸಲಾಗಿದೆ. ಮಾಸಿಕ ತಲಾ ಅನುಭೋಗ ವೆಚ್ಚ ವಿವರಗಳನ್ನು ರಾಜ್ಯವಾರು ಸಂಗ್ರಹಿಸಲಾಗುತ್ತದೆ.  ಈ ಸಮೀಕ್ಷೆಯಲ್ಲಿ ಉದ್ಯೋಗ-ನಿರುದ್ಯೋಗ ವಿವರಗಳು ಇರುತ್ತಿದ್ದವು. ಆದರೆ ಈಗ ಅನುಭೋಗ ವೆಚ್ಚವನ್ನು ಮಾತ್ರ ಸಂಗ್ರಹಿಸಲಾಗುತ್ತದೆ. ಉದ್ಯೋಗ-ನಿರುದ್ಯೋಗದ ಬಗ್ಗೆ ಪ್ರತ್ಯೇಕ ’ಪೀರಿಯಾಡಿಕಲ್ ಲೇಬೆರ್ ಪೋರ್ಸ್ ಸರ್ವೇ’ ಎಂಬ ವರದಿಯನ್ನು ಸಿದ್ಧಪಡಿಸಲಾಗುತ್ತದೆ.

ಮಾಸಿಕ ತಲಾ ಅನುಭೋಗ ವೆಚ್ಚ 2022-23ರ ವರದಿಯಲ್ಲೇನಿದೆ?

ಈ ವರದಿಗೆ ಅಗತ್ಯವಾದ ಮಾಹಿತಿಯನ್ನು ಏಪ್ರಿಲ್ 2022ರಿಂದ ಜುಲೈ 2023ರವರೆಗೆ ಸಂಗ್ರಹಿಸಲಾಗಿದೆ. ದೇಶದ 8723 ಹಳ್ಳಿಗಳಲ್ಲಿ ಮತ್ತು 6115 ನಗರ ಪ್ರದೇಶಗಳಲ್ಲಿ 261746 ಜನರಿಂದ (ಸ್ಯಾಂಪಲ್) ಮಾಹಿತಿಯನ್ನು ಕಲೆಹಾಕಲಾಗಿದೆ. ಈ ಸ್ಯಾಂಪಲ್ ಆಯ್ಕೆ ಮಾಡುವಾಗ ಗ್ರಾಮೀಣ ಪ್ರದೇಶದಲ್ಲಿ ಭೂಒಡೆತನವನ್ನು ನಗರ ಪ್ರದೇಶದಲ್ಲಿ ನಾಲ್ಕು ಚಕ್ರಗಳ ವಾಹನದ ಒಡೆತನವನ್ನು ಆಧಾರವಾಗಿಟ್ಟುಕೊಳ್ಳಲಾಗಿದೆ. ಸದರಿ ವರದಿಯ ಮುಖ್ಯ ಸಮಸ್ಯೆ ಇರುವುದೇ ಇಲ್ಲಿ. ಏಕೆಂದರೆ ಗ್ರಾಮೀಣ ಭಾರತದಲ್ಲಿ ಭೂಮಾಲೀಕರಿಗಿಂತ ಭೂರಹಿತ ಕೃಷಿ ಕಾರ್ಮಿಕರ ಸಂಖ್ಯೆಯು ಅಧಿಕವಾಗಿದೆ (ಉದಾ: ದೇಶದಲ್ಲಿನ 2011ರ ಜನಗಣತಿ ಪ್ರಕಾರ ಭೂಮಾಲೀಕರ ಸಂಖ್ಯೆ 11.88 ಕೋಟಿ. ಆದರೆ ಭೂರಹಿತ ದಿನಗೂಲಿ ಕೃಷಿ ಕಾರ್ಮಿಕರ ಸಂಖ್ಯೆ 14.43 ಕೋಟಿ. ಇದೇ ರೀತಿಯಲ್ಲಿ ಕರ್ನಾಟಕದಲ್ಲಿ 2011ರ ಜನಗಣತಿ ಪ್ರಕಾರ ಭೂಮಾಲೀಕರ ಸಂಖ್ಯೆ 65.80 ಲಕ್ಷ ಮತ್ತು ಭೂರಹಿತ ಕೃಷಿ ಕಾರ್ಮಿಕರ ಸಂಖ್ಯೆ 71.55 ಲಕ್ಷ. ಮಾಸಿಕ ತಲಾ ಅನುಭೋಗ ವೆಚ್ಚ ಸಮೀಕ್ಷೆಯಲ್ಲಿ ಇದಕ್ಕೆ ವ್ಯತಿರಿಕ್ತವಾಗಿ ಭೂಮಾಲೀಕರ ಪ್ರಾತಿನಿಧ್ಯವು ಅಧಿಕವಾಗಿದೆ. ನಮ್ಮ ನಗರ ಪ್ರದೇಶದಲ್ಲಿ ನಾಲ್ಕು ಚಕ್ರದ ವಾಹನಗಳನ್ನು ಉಳ್ಳವರ ಪ್ರಮಾಣ ಶೇ.8 ಮಾತ್ರ. ಇದರಿಂದಾಗಿ ಸ್ಯಾಂಪಲ್ಲಿನಲ್ಲಿ ಉಳ್ಳವರ ಪ್ರಾತಿನಿಧ್ಯ ಹೆಚ್ಚಿಗಿರುವಂತೆ ಕಾಣುತ್ತದೆ. ಈ ಕಾರಣದಿಂದಾಗಿ ಸರ್ಕಾರವು ಹೇಳಿಕೊಳ್ಳುತ್ತಿರುವಂತೆ 2011-12ರಿಂದ 2022-23ರ ನಡುವೆ ಮಾಸಿಕ ತಲಾ ಅನುಭೋಗ ವೆಚ್ಚದಲ್ಲಿ ಏರಿಕೆ ಕಾಣುತ್ತದೆ. ಇದು ವಾಸ್ತವ ಚಿತ್ರವಲ್ಲ. ಇದಕ್ಕೆ ಸಂಬಂಧಿಸಿದ ವಿವರಗಳನ್ನು ಕೆಳಗಿನ ಕೋಷ್ಟಕ 1ರಲ್ಲಿ ನೀಡಲಾಗಿದೆ. ಇಲ್ಲಿ ವಿವರಗಳನ್ನು 2011-12 ಮತ್ತು 2022-23 ಎರಡು ಕಾಲಾವಧಿಗೆ ಮತ್ತು ಚಾಲ್ತಿಯಲ್ಲಿರುವ ಹಾಗೂ 2011-12ರ ಸ್ಥಿರ ಬೆಲೆಗಳಲ್ಲಿ ನೀಡಲಾಗಿದೆ. ಈ ಅವಧಿಯಲ್ಲಿ (2011-12ರಿಂದ 2022-23) ಮಾಸಿಕ ತಲಾ ಅನುಭೋಗದಲ್ಲಿ ಏರಿಕೆಯಾಗಿರುವ ಪ್ರಮಾಣ ಚಾಲ್ತಿ ಬೆಲೆಗಳಲ್ಲಿ ಎಷ್ಟು ಮತ್ತು 2011-12ರ ಸ್ಥಿರ ಬೆಲೆಗಳಲ್ಲಿ ಎಷ್ಟು ಎಂಬುದು ತಿಳಿಯುತ್ತದೆ.  ಇದು ಬಹಳ ಮುಖ್ಯವಾದ ಸಂಗತಿಯಾಗಿದೆ. ಏಕೆಂದರೆ ಸ್ಥಿರ ಬೆಲೆಗಳಲ್ಲಿನ ಏರಿಕೆಯು ನೈಜ ಚಿತ್ರ ನೀಡುತ್ತದೆ. ಆದರೆ 2022-23ರ ಚಾಲ್ತಿ ಬೆಲೆಗಳಲ್ಲಿನ ಮಾಸಿಕ ತಲಾ ಅನುಭೋಗ ವೆಚ್ಚದಲ್ಲಿ ಬೆಲೆ ಏರಿಕೆಯ ಅಂಶವು ಅಡಗಿರುವುದರಿಂದ ಅದು ಅಧಿಕ ಪ್ರಮಾಣದಲ್ಲಿರುತ್ತದೆ. ಇದನ್ನು ಕೋಷ್ಟಕದಲ್ಲಿ ಕಾಣಬಹುದು.

ಕೋಷ್ಟಕ 1. ಕುಟುಂಬ ಘಟಕದ ಮಾಸಿಕ ತಲಾ ಅನುಭೋಗ ವೆಚ್ಚ ಸಮೀಕ್ಷೆ: 2022-23 (ರೂಪಾಯಿಗಳಲ್ಲಿ)

ಮೂಲ: ಭಾರತ ಸರ್ಕಾರ 2024. ಫ್ಯಾಕ್ಟ್ ಶೀಟ್.  ಹೌಸ್‌ಹೋಲ್ಡ್ ಕನ್‌ಸಂಪ್ಷನ್ ಎಕ್ಸ್‌ಪೆಂಡಿಚರ್ ಸರ್ವೇ 2022-23. ಮಿನಿಸ್ಟ್ರಿ ಆಫ್ ಸ್ಟಾಟಿಸ್ಟಿಕ್ಸ್ ಆಂಡ್ ಪ್ರೋಗ್ರಾಮ್ ಇಪ್ಲಿಮೆಂಟೇಶನ್, (ಎನ್‌ಎಸ್‌ಎಸ್‌ಒ).

ಕೋಷ್ಟಕ 1ರಲ್ಲಿ ಕುಟುಂಬ ಘಟಕದ ಮಾಸಿಕ ತಲಾ ಅನುಭೋಗ ವೆಚ್ಚದ ವಿವರಗಳನ್ನು ಎರಡು ಕಾಲಘಟ್ಟಗಳಿಗೆ ನೀಡಲಾಗಿದೆ. ಇದರ ಪ್ರಕಾರ 2011-12ರಿಂದ 2022-23ರ ಅವಧಿಯಲ್ಲಿ ಚಾಲ್ತಿ ಬೆಲೆಗಳಲ್ಲಿ ಅನುಭೋಗ ವೆಚ್ಚವು ಗ್ರಾಮೀಣ ಪ್ರದೇಶದಲ್ಲಿ ಶೇ.163.84ರಷ್ಟು ಏರಿಕೆಯಾಗಿದ್ದರೆ ನಗರ ಪ್ರದೇಶದಲ್ಲಿ ಇದು ಶೇ.145.58 ರಷ್ಟು ಏರಿಕೆಯಾಗಿದೆ. ಇದನ್ನು ಮೋದಿ ಸರ್ಕಾರವು ತನ್ನ ಮಹತ್ವದ ಸಾಧನೆ ಎಂದು ಹೇಳಿಕೊಳ್ಳುತ್ತಿದೆ. ಆದರೆ ಇಲ್ಲಿನ ನಿಜಾಂಶ ಬೇರೆಯೇ ಇದೆ. ಮಾಸಿಕ ತಲಾ ಅನುಭೋಗ ವೆಚ್ಚವನ್ನು ಚಾಲ್ತಿ ಬೆಲೆಗಳಿಗೆ ಬದಲಾಗಿ 2011-12ರ ಸ್ಥಿರ ಬೆಲೆಗಳಲ್ಲಿ ಲೆಕ್ಕ ಹಾಕಿದರೆ ಅನುಭೋಗ ವೆಚ್ಚದ ಏರಿಕೆಯು ಗ್ರಾಮೀಣದಲ್ಲಿ ಶೇ.40.41 ಮತ್ತು ನಗರ ಪ್ರದೇಶದಲ್ಲಿ ಏರಿಕೆಯು ಶೇ.33.46 ರಷ್ಟಾಗುತ್ತದೆ. ಅಂದರೆ ಮೋದಿ ಆಳ್ವಿಕೆಯ ಅವಧಿಯಲ್ಲಿ ಅನುಭೋಗ ವೆಚ್ಚದಲ್ಲಿ ತೀವ್ರ ಏರಿಕೆಯಾಗಿಲ್ಲ. ಒಟ್ಟಾರೆ ಚಾಲ್ತಿ ಬೆಲೆಗಳಲ್ಲಿ ಮಾಸಿಕ ತಲಾ ಅನುಭೋಗ ವೆಚ್ಚವು 2011-12ರಿಂದ 2022-23ರವರೆಗೆ ಸರಾಸರಿ 2.5ರಷ್ಟು ಏರಿಕೆಯಾಗಿದ್ದರೆ 2011-12ರ ಸ್ಥಿರ ಬೆಲೆಗಳಲ್ಲಿ ಏರಿಕೆಯು 1.4ರಷ್ಟಾಗಿದೆ.

ಈ ಸಮೀಕ್ಷೆಯು ತೋರಿಸುತ್ತಿರುವ ಚಾಲ್ತಿ ಬೆಲೆಗಳ ಅನುಭೋಗ ವೆಚ್ಚದಲ್ಲಿನ ಏರಿಕೆಯು ಜನರ ಜೀವನಸ್ಥಿತಿಯ ನಿಜ ಚಿತ್ರವನ್ನು ನೀಡುವುದಿಲ್ಲ ಎಂಬುದನ್ನು ರಾಷ್ಟ್ರೀಯ ಕುಟುಂಬ ಆರೋಗ್ಯ ಸಮೀಕ್ಷೆ 2019-2021 ಒದಗಿಸುವ ಮಕ್ಕಳು ಮತ್ತು ಮಹಿಳೆಯರಲ್ಲಿನ ಅಪೌಷ್ಟಿಕತೆಯ ವಿವರಗಳಿಂದ ತಿಳಿದುಕೊಳ್ಳಬಹುದು. ನೀತಿ ಆಯೋಗದ ಹೇಳಿಕೆಯಾದ ಬಡತನವು ಶೇ.5ಕ್ಕಿಂತ ಕಡಿಮೆಯಾಗಿದೆ ಎಂಬುದು ಅಪ್ಪಟ ಸುಳ್ಳು ಎಂಬುದಕ್ಕೆ ಎನ್‌ಎಫ್‌ಎಚ್‌ಎಸ್ 2019-2021 ವರದಿ ಸಾಕ್ಷಿಯಾಗಿದೆ. ಅಪೌಷ್ಟಿಕತೆಯನ್ನು ’ಮುಚ್ಚಿಟ್ಟ ಹಸಿವು’ ಎನ್ನಲಾಗುತ್ತದೆ. ದೇಶದಲ್ಲಿನ 6ರಿಂದ 59 ತಿಂಗಳು ವಯೋಮಾನದ ಒಟ್ಟು ಮಕ್ಕಳಲ್ಲಿ ಅನೀಮಿಯ 2015-16ರಲ್ಲಿ ಶೇ.60.9ರಷ್ಟಿದ್ದುದು 2019-2021ರಲ್ಲಿ ಇದು ಶೇ.65.5ಕ್ಕೇರಿದೆ. ಇದೇ ರೀತಿಯಲ್ಲಿ 15ರಿಂದ 49 ವರ್ಷಗಳ ವಯೋಮಾನದ ಮಹಿಳಯರಲ್ಲಿ ಅನೀಮಿಯ (ಅಪೌಷ್ಟಿಕತೆ) 2015-16ರಲ್ಲಿ ಶೇ.44.8ರಷ್ಟಿದ್ದುದು 2019-2021ರಲ್ಲಿ ಇದು ಶೇ.47.8ಕ್ಕೇರಿದೆ.

ಅಸಮಾನತೆಯ ಶ್ರೇಣೀಕರಣ

ಮೇಲಿನ ಚರ್ಚೆಯಲ್ಲಿ ಆರ್ಥಿಕತೆಯ ಒಟ್ಟು ಜನಸಂಖ್ಯೆಯ ಅನುಭೋಗ ವೆಚ್ಚವನ್ನು ಗಣನೆಗೆ  ತೆಗೆದುಕೊಳ್ಳಲಾಗಿದೆ. ಫ್ಯಾಕ್ಟ್‌ಶೀಟಿನಲ್ಲಿ ಒಟ್ಟು ಜನಸಂಖ್ಯೆಯಲ್ಲಿ ಮೇಲ್ವರ್ಗದ ಶೇ.5ರಷ್ಟು ಅತಿಶ್ರೀಮಂತರ ಮತ್ತು ತಳವರ್ಗದ ಶೇ.5ರಷ್ಟು ಕಡುಬಡವರ ಅನುಭೋಗ ವೆಚ್ಚದ ವಿವರಗಳನ್ನು ಪ್ರಕಟಿಸಲಾಗಿದೆ. ಇದರ ಪ್ರಕಾರ ಗ್ರಾಮೀಣ ಪ್ರದೇಶದ ಶೇ.5ರಷ್ಟು ತಳವರ್ಗದ ಮಾಸಿಕ ತಲಾ ಅನುಭೋಗ ವೆಚ್ಚವು 2022-23ರಲ್ಲಿ ರೂ.1373 (ದಿನವಹಿ ವೆಚ್ಚ ರೂ.41) ಮತ್ತು ನಗರದ ತಳವರ್ಗದ ಮಾಸಿಕ ತಲಾ ಅನುಭೋಗ ವೆಚ್ಚ ರೂ.2001 (ದಿನದ ವೆಚ್ಚ ರೂ. 67). ಆದರೆ ಜನಸಂಖ್ಯೆಯ ಮೇಲ್ವರ್ಗದ ಶೇ.5ರಷ್ಟು ಅತಿಶ್ರೀಮಂತರ ಗ್ರಾಮೀಣ ಮತ್ತು ನಗರ ಪ್ರದೇಶದ ಮಾಸಿಕ ತಲಾ ಅನುಭೋಗ ವೆಚ್ಚ ಕ್ರಮವಾಗಿ ರೂ. 10501 (ದಿನದ ವೆಚ್ಚ ರೂ.350) ಮತ್ತು ರೂ.20824 (ದಿನದ ವೆಚ್ಚ ರೂ.700). ಗ್ರಾಮೀಣ-ನಗರ ಪ್ರದೇಶದ ತಳವರ್ಗದ ಜನರ ದಿನದ ಅನುಭೋಗ ವೆಚ್ಚವು ಮೇಲ್ವರ್ಗದ ಅತಿಶ್ರೀಮಂತರ ಗ್ರಾಮೀಣ-ನಗರ ಪ್ರದೇಶದ ದಿನದ ಅನುಭೋಗ ವೆಚ್ಚದ ಕ್ರಮವಾಗಿ ಶೇ.13.07 ಮತ್ತು ಶೇ.9.6ರಷ್ಟಿದೆ. ಅಂದರೆ ಒಟ್ಟು ಜನಸಂಖ್ಯೆಯಲ್ಲಿನ ಮೇಲ್ವರ್ಗದ ದಿನವಹಿ ತಲಾ ಅನುಭೋಗ ವೆಚ್ಚವು ತಳವರ್ಗದ ಜನರ ದಿನವಹಿ ತಲಾ ಅನುಭೋಗಕ್ಕಿಂತ ಗ್ರಾಮೀಣದಲ್ಲಿ 8.5 ಪಟ್ಟು ಮತ್ತು ನಗರ ಪ್ರದೇಶದಲ್ಲಿ 10.44 ಪಟ್ಟು ಅಧಿಕವಾಗಿದೆ. ತಳವರ್ಗದ ವ್ಯಕ್ತಿಯೊಬ್ಬ ದಿನದಲ್ಲಿ ರೂ.40ರಿಂದ ರೂ.70 ವರಮಾನದಲ್ಲಿ ಹೇಗೆ ಜೀವನ ಸಾಗಿಸುತ್ತಾರೆ ಎಂಬುದನ್ನು ಊಹಿಸಿಕೊಳ್ಳುವುದು ಕಷ್ಟಸಾಧ್ಯ. ಕಡುಬಡವರು ಮತ್ತು ಅತಿಶ್ರೀಮಂತರ ನಡುವಿನ ಅಸಮಾನತೆಯ ಮಾಪನವಾಗಿ ಇದನ್ನು ಬಳಸಬಹುದು.

ಆರ್ಥಿಕತೆಯಲ್ಲಿ ಬಡತನವನ್ನು ’ನಿವಾರಣೆ’ ಮಾಡಲಾಗಿದೆಯೇ?

ಮಾಸಿಕ ತಲಾ ಅನುಭೋಗ ವೆಚ್ಚ 2022-23ರ ವರದಿಯ ಮುಖ್ಯಾಂಶಗಳು ಪ್ರಕಟವಾದ ಕೂಡಲೆ ನೀತಿ ಆಯೋಗದ ಮುಖ್ಯ ಕಾರ್ಯನಿರ್ವಹಣಾಧಿsಕಾರಿ ಬಿ. ವಿ. ಆರ್. ಸುಬ್ರಮಣ್ಯಮ್ ಅವರು ದೇಶದಲ್ಲಿ 2011-12ರಿಂದ 2022-23ರ ಅವಧಿಯಲ್ಲಿ ಬಡವರ ಪ್ರಮಾಣ ಶೇ.5ಕ್ಕಿಂತ ಕಡಿಮೆಯಾಗಿದೆ ಎಂದು ಸರ್ಕಾರದ ಸಾಧನೆಯನ್ನು ಬಣ್ಣಿಸಿದ್ದರು. ಇದಕ್ಕೆ ಅವರು ಯಾವ ಆಧಾರವನ್ನು ಅಥವಾ ಪುರಾವೆಯನ್ನು ನೀಡಿರಲಿಲ್ಲ. ಇವರ ಈ ಹೇಳಿಕೆಯನ್ನು ನಂಬುವುದಾದರೆ ನಮ್ಮ ದೇಶದಲ್ಲಿ ಇಂದು ಬಡತನವು ನಿವಾರಣೆಯಾಗಿದೆ ಎನ್ನಬೇಕಾಗುತ್ತದೆ. ಆದರೆ ಇದೊಂದು ಭ್ರಮಾತ್ಮಕ ಹೇಳಿಕೆ.

ಸಂತೋಷ್ ಮೆಹರೋತ್ರ ಮತ್ತು ರಾಖೇಶ್ ರಂಜನ್ ಕುಮಾರ್ ಅಧ್ಯಯನದ ಪ್ರಕಾರ (ದಿ ವೈರ್, ಫೆಬ್ರವರಿ 27, 2024) 2017-18ರಲ್ಲಿ ರೂ.100ರಿಂದ ರೂ.300ವರೆಗೆ ದಿನಗೂಲಿ ಪಡೆಯುತ್ತಿದ್ದವರ ಸಂಖ್ಯೆಯು 282.4 ಲಕ್ಷವಿದ್ದುದು 2021-22ರಲ್ಲಿ ಇದು 461.5 ಲಕ್ಷವಾಗಿದೆ. ಇವರನ್ನು ಬಡವರು ಮತ್ತು ದುಸ್ಥಿತಿಯಲ್ಲಿರುವವರು ಎಂದು ಸಂತೋಷ್ ಮತ್ತು ರಾಖೇಶ್ ವರ್ಗೀಕರಿಸಿದ್ದಾರೆ. ದುಸ್ಥಿತಿಯ ಬಡತನವನ್ನು ಅನುಭವಿಸುತ್ತಿರುವ ಈ 461.5 ಲಕ್ಷ ಜನರಲ್ಲಿ 267.9 ಲಕ್ಷದಷ್ಟು ಜನರು (ಶೇ.58.05) ಸ್ವಯಂ ಉದ್ಯೋಗಿಗಳಾಗಿದ್ದರೆ, 115.7 ಲಕ್ಷ ಜನರು (ಶೇ. 25.07) ಹಂಗಾಮಿ ಕೂಲಿಕಾರರಾಗಿದ್ದಾರೆ. ಈ ಒಟ್ಟು ದುಸ್ಥಿತಿಯ ಬಡತನ ಅನುಭವಿಸುತ್ತಿರುವವರಲ್ಲಿ ನಿಯಮಿತವಾಗಿ ಸಂಬಳ-ಪರಿಹಾರ ಪಡೆಯುತ್ತಿರುವವರ ಸಂಖ್ಯೆ 77.9 ಲಕ್ಷ. (ಶೇ.16.07). ಒಟ್ಟು 383.6 ಲಕ್ಷ (ಶೇ.83.12) ಜನರು ಅತ್ಯಂತ ಕನಿಷ್ಟಮಟ್ಟದ ಬದುಕು ಬದುಕುತ್ತಿದ್ದಾರೆ ಎಂಬುದು ಸ್ಟಷ್ಟ.  ಈ ಹಿನ್ನೆಲೆಯಲ್ಲಿ ನೀತಿ ಆಯೋಗದ ಸಿಇಒ ಹೇಳುತ್ತಿರುವ ಭಾರತದಲ್ಲಿ ಬಡತನವು 2011-12ರಿಂದ 2022-23ರಲ್ಲಿ ಶೇ.5ಕ್ಕಿಂತ ಕಡಿಮೆಯಾಗಿದೆ ಎನ್ನುವುದನ್ನು ನಂಬಲು ಅಸಾಧ್ಯ.

ಮಾಸಿಕ ತಲಾ ಅನುಭೋಗದ ಪ್ರಾದೇಶಿಕ ಸ್ವರೂಪ

ಒಕ್ಕೂಟ ಸರ್ಕಾರ ಪ್ರಕಟಿಸಿರುವ ಕುಟುಂಬ ಘಟಕಗಳ ಅನುಭೋಗ ವೆಚ್ಚ ವರದಿ 2022-23ರಲ್ಲಿ ಅದರ ವಿವರಗಳನ್ನು ರಾಜ್ಯವಾರು ವಿವರ ನೀಡಲಾಗಿದೆ. ಈ ವಿವರವನ್ನು ಪರಿಶೀಲಿಸಿದರೆ ಅನುಭೋಗ ಅಭದ್ರತೆ ಮತ್ತು ಕನಿಷ್ಟ ಅನುಭೋಗದ ವಿವರ ದೊರೆಯುತ್ತದೆ. ಇದರ ಪ್ರಕಾರ ದಕ್ಷಿಣ ಭಾರತದ 5 ರಾಜ್ಯಗಳ ಗ್ರಾಮೀಣ ಪ್ರದೇಶದಲ್ಲಿ ಮಾಸಿಕ ತಲಾ ಅನುಭೋಗ ವೆಚ್ಚ 2022-23ರಲ್ಲಿ ಕನಿಷ್ಟ ರೂ.4397ರಷ್ಟಿದ್ದರೆ ಗರಿಷ್ಟ ರೂ.5924ರಷ್ಟಿದೆ. ನಗರ ಪ್ರದೇಶವನ್ನು ತೆಗೆದುಕೊಂಡರೆ ಕನಿಷ್ಟ ರೂ.6782ರಷ್ಟಿದ್ದರೆ ಗರಿಷ್ಟ ರೂ.8158ರಷ್ಟಿದೆ. ಅಂದರೆ ಇದು ಗ್ರಾಮೀಣ ಮತ್ತು ನಗರ ಪ್ರದೇಶದ ರಾಷ್ಟ್ರೀಯ ಸರಾಸರಿ ಮಾಸಿಕ ತಲಾ ಅನುಭೋಗ ವೆಚ್ಚವಾದ ಕ್ರಮವಾಗಿ ರೂ.3773 ಮತ್ತು ರೂ. 6459ಕ್ಕಿಂತ ದಕ್ಷಿಣ ಭಾರತ ಐದು ರಾಜ್ಯಗಳಲ್ಲಿ ಅಧಿಕವಾಗಿದೆ. ಆದರೆ ಉತ್ತರ ಭಾರತದ ಬಿಹಾರ, ಜಾರ್ಖಂಡ್, ಮಧ್ಯ ಪ್ರದೇಶ, ರಾಜಸ್ಥಾನ ಮತ್ತು ಉತ್ತರ ಪ್ರದೇಶ ರಾಜ್ಯಗಳ ಗ್ರಾಮೀಣ ಮತ್ತು ನಗರ ಪ್ರದೇಶಗಳೆರಡರಲ್ಲಿಯೂ ಮಾಸಿಕ ತಲಾ ಅನುಭೋಗ ವೆಚ್ಚವು ರಾಷ್ಟ್ರೀಯ ಸರಾಸರಿ ವೆಚ್ಚಕ್ಕಿಂತ ಕಡಿಮೆಯಿದೆ. ಉದಾ: ಜಾರ್ಖಂಡ್ ರಾಜ್ಯದಲ್ಲಿನ 2022-23ರಲ್ಲಿ ಮಾಸಿಕ ತಲಾ ಅನುಭೋಗ ವೆಚ್ಚವು ಗ್ರಾಮೀಣ ಮತ್ತು ನಗರ ಪ್ರದೇಶದಲ್ಲಿ ಕ್ರಮವಾಗಿ ರಾಷ್ಟ್ರೀಯ ಸರಾಸರಿಯ ಶೇ.73.23 ಮತ್ತು ಶೇ.76.35ರಷ್ಟಿದೆ. ಆದರೆ ದಕ್ಷಿಣ ಭಾರತದ ಕೇರಳದಲ್ಲಿ ಗ್ರಾಮೀಣ ಮತ್ತು ನಗರ ಪ್ರದೇಶಗಳಲ್ಲಿನ ತಲಾ ಅನುಭೋಗ ವೆಚ್ಚವು ರಾಷ್ಟ್ರೀಯ ಸರಾಸರಿಯ ಕ್ರಮವಾಗಿ ಶೇ.157.01 ಮತ್ತು ಶೇ.109.58ರಷ್ಟಿದೆ. ಒಟ್ಟಾರೆ ದಕ್ಷಿಣ ಭಾರತದಲ್ಲಿ ತಲಾ ಅನುಭೋಗವು ಉತ್ತರ ಭಾರತದ ರಾಜ್ಯಗಳಲ್ಲಿ ಇರುವುದಕ್ಕಿಂತ ಉತ್ತಮವಾಗಿದೆ.

ಅನುಭೋಗ ವೆಚ್ಚದ ಸಾಮಾಜಿಕ ಗುಂಪುವಾರು ಶ್ರೇಣೀಕೃತ ಚಿತ್ರ

ಒಟ್ಟು ಜನಸಂಖ್ಯೆಯನ್ನು ಗಮನದಲ್ಲಿಟ್ಟುಕೊಂಡು ಅನುಭೋಗ ವೆಚ್ಚವನ್ನು ಪರಿಶೀಲಿಸಿದರೆ ಅದು ಸಮಾಜದ ನಿಜಚಿತ್ರವನ್ನು ನೀಡುವುದಿಲ್ಲ. ಏಕೆಂದರೆ ನಮ್ಮದು ಮೂಲತಃ ಅಸಮಾನತೆಯ ಮತ್ತು ಶ್ರೇಣೀಕೃತ ಸಮಾಜವಾಗಿದೆ. ಕೆಳಗಿನ ಕೋಷ್ಟಕದಲ್ಲಿ ಸಾಮಾಜಿಕ ವರ್ಗವಾರು ಮಾಸಿಕ ತಲಾ ಅನುಭೋಗ ವೆಚ್ಚದ ವಿವರಗಳನ್ನು ನೀಡಲಾಗಿದೆ.

ಕೋಷ್ಟಕ 2. ಸಾಮಾಜಿಕ ಗುಂಪುವಾರು ಮಾಸಿನ ತಲಾ ಅನುಭೋಗ ವೆಚ್ಚ 2022-23(ರೂಪಾಯಿಗಳಲ್ಲಿ)

 ಮೂಲ: ಭಾರತ ಸರ್ಕಾರ, ಫ್ಯಾಕ್ಟ್ ಸೀಟ್. ಸ್ಟೇಟ್‌ಮೆಂಟ್ 8. ಕುಟುಂಬ ಘಟಕ ಅನುಭೋಗ ವೆಚ್ಚ ಸಮೀಕ್ಷೆ 2022-23. ಸ್ಟಾಟಿಸ್ಟಿಕ್ಸ್ ಆಂಡ್ ಪ್ರೋಗ್ರಾಮ್ ಇಂಪ್ಲಿಮೆಂಟೇಶನ್ ಮಿನಿಷ್ಟ್ರಿ.

ಸಾಮಾಜಿಕವಾಗಿ ಕೆಳಸ್ತರದಲ್ಲಿರುವ ಪ.ಪಂ. ಮತ್ತು ಪ.ಜಾ. ಅನುಭೋಗ ವೆಚ್ಚವು ಒಬಿಸಿ ಮತ್ತು ಸಾಮಾನ್ಯ ವರ್ಗಗಳ ಅನುಭೋಗ ವೆಚ್ಚಕ್ಕಿಂತ ಕಡಿಮೆಯಿದೆ. ಜಾತಿ ಚೌಕಟ್ಟಿನಲ್ಲಿ ಯಾವ ಬಗೆಯ ಅಸಮಾನತೆಯಿದೆಯೋ ಅದೇರೀತಿಯ ಅಸಮಾನತೆ-ಶ್ರೇಣೀಕರಣವನ್ನು ಜಾತಿವಾರು ಅನುಭೋಗ ವೆಚ್ಚದ ರಚನೆಯಲ್ಲಿಯೂ ಕಾಣಬಹುದು. ಈ ಎಲ್ಲ ಹಿನ್ನೆಲೆಯಲ್ಲಿ ಭಾರತದಲ್ಲಿ ಕಳೆದ ಒಂದು ದಶಕದಲ್ಲಿ ಮಾಸಿಲ ತಲಾ ಅನುಭೋಗ ವೆಚ್ಚದಲ್ಲಿ ತೀವ್ರ ಏರಿಕೆಯಾಗಿಲ್ಲ. ಈ ಅನುಭೋಗ ವೆಚ್ಚದಲ್ಲಿನ ಸಾಮಾಜಿಕ ಅಸಮಾನತೆ-ಶ್ರೇಣೀಕರಣವು ಇಂದಿಗೂ ಮುಂದುವರಿಯುತ್ತಿದೆ. ಬಡತನದ ಪ್ರಮಾಣ, ಬಡವರ ಸಂಖ್ಯೆಯು ಕಡಿಮೆಯಾಗಿದೆ ಎಂಬ ನೀತಿ ಆಯೋಗದ ಸಿಇಒ ಅವರ ಹೇಳಿಕೆಯನ್ನು ಒಪ್ಪುವುದು ಸಾಧ್ಯವಿಲ್ಲ. ಅದೇರೀತಿಯಲ್ಲಿ ಮಾಸಿಕ ತಲಾ ಅನುಭೋಗ ವೆಚ್ಚವು 2011-12ರಿಂದ 2022-23ರ ನಡುವೆ ತೀವ್ರವಾಗಿ ಏರಿಕೆಯಾಗಿ ಎಂಬುದನ್ನೂ ಒಪ್ಪಲು ಸಾಧ್ಯವಿಲ್ಲ. ಒಂದು ಸಮಾಧಾನದ ಸಂಗತಿಯೆಂದರೆ 2011-12ರಲ್ಲಿ ಗ್ರಾಮೀಣ ಮಾಸಿಕ ತಲಾ ಅನುಭೋಗ ವೆಚ್ಚವು ನಗರದ ವೆಚ್ಚದ ಶೇ.54.37 ರಷ್ಟಿದ್ದುದು 2022-23ರಲ್ಲಿ ಇದು ಶೇ. 58.41ಕ್ಕೇರಿದೆ. ಇದೇನು ತೀವ್ರ ಏರಿಕೆಯಲ್ಲ. ಸ್ಥಿರ ಬೆಲೆಗಳಲ್ಲಿ 2011-12ರಿಂದ 2022-23ರ ನಡುವಿನ 12 ವರ್ಷಗಳಲ್ಲಿ ಮಾಸಿಕ ತಲಾ ಅನುಭೋಗ ವೆಚ್ಚದಲ್ಲಿನ ಏರಿಕೆಯು ಗ್ರಾಮೀಣದಲ್ಲಿ ಶೇ.40.42 ಮತ್ತು ನಗರ ಪ್ರದೇಶದಲ್ಲಿ ಶೇ.33.46. ಅಂದರೆ ಈ ಅವಧಿಯಲ್ಲಿನ ವಾರ್ಷಿಕ ಏರಿಕೆ ಗ್ರಾಮೀಣದಲ್ಲಿ ಶೇ.3.36ರಷ್ಟಾದರೆ ನಗರ ಪ್ರದೇಶದಲ್ಲಿ ಇದು ಶೇ.2.78ರಷ್ಟಾಗಿದೆ.

ಅನುಬಂಧ: ಭಾರತದಲ್ಲಿ ವರಮಾನ ಮತ್ತು ಸಂಪತ್ತು ಅಸಮಾನತೆಯ ವಿರಾಟ್ ರೂಪ 2022-23 (ಚಾಲ್ತಿ ಬೆಲೆಗಳಲ್ಲಿ)

ಮೂಲ: ನಿತಿನ್ ಕುಮಾರ್ ಭಾರ್ತಿ, ಲುಕಾಸ್ ಚಾನ್ಸೆಲ್, ಥಾಮಸ್ ಪಿಕ್ಕೆಟಿ ಮತ್ತು ಅನ್‌ಮೋಲ್ ಸೋಮಾನ್ಚಿ, 2024. “ಇನ್‌ಕಮ್ ಆಂಡ್ ವೆಲ್ಥ್ ಇನ್‌ಇಕ್ವಾಲಿಟಿ ಇನ್ ಇಂಡಿಯಾ: ದಿ ರೈಸ್ ಆಫ್ ಬಿಲಿಯನೇರ್‍ಸ್ ರಾಜ್”. ವರ್ಲ್ಡ್ ಇನ್‌ಇಕ್ವಾಲಿಟ ಲ್ಯಾಬ್. ವರ್ಕಿಂಗ್ ಪೇಪರ್ 2024/09. ಪುಟ 40.

ಭಾರತದಲ್ಲಿ 2022-23ರಲ್ಲಿ ವರಮಾನ ಮತ್ತು ಸಂಪತ್ತಿನ ಹಂಚಿಕೆಯಲ್ಲಿ ಯಾವ ಪ್ರಮಾಣದ ಅಸಮಾನತೆಯಿದೆ ಎಂಬುದನ್ನು ಮೇಲ್ಕಂಡ ವಿವರಗಳಲ್ಲಿ ನೋಡಬಹುದು.

  1. ಭಾರತದ ವಯಸ್ಕ ಜನಸಂಖ್ಯೆಯ ಮೇಲ್ವರ್ಗದ ಶೇ.10ರಷ್ಟು ಜನರು ದೇಶದ ಒಟ್ಟು ವರಮಾನದಲ್ಲಿ ಅನುಭವಿಸುತ್ತಿರುವ ಪ್ರಮಾಣ ಶೇ.57.7. ಆದರೆ ಅದೇ ವಯಸ್ಕ ಜನಸಂಖ್ಯೆಯ ತಳಸ್ತರದ ಶೇ.50 ರಷ್ಟು ಜನರು ಅನುಭವಿಸುತ್ತಿರುವ ವರಮಾನದಲ್ಲಿನ ಪ್ರಮಾಣ ಶೇ.15. ವಯಸ್ಕ  ಜನಸಂಖ್ಯೆಯ ಮೇಲ್ವರ್ಗದ ಸರಾಸರಿ ವರಮಾನ ರೂ.13.52 ಲಕ್ಷವಾದರೆ ಕೆಳಸ್ತರದ ಶೇ.50ರಷ್ಟು ವಯಸ್ಕ ಜನವರ್ಗದ ಸರಾಸರಿ ವರಮಾನ ರೂ.71163. ಇಲ್ಲಿ ಅಸಮಾನತೆಯ ರಾಕ್ಷಸ ರೂಪವನ್ನು ನೋಡಬಹುದು. ಇದಕ್ಕಿಂತ ಮುಖ್ಯವಾಗಿ ಒಟ್ಟು ವಯಸ್ಕ ಜನಸಂಖ್ಯೆಯ ಮೇಲುಮೇಲ್ವರ್ಗದ ಶೇ. 1ರಷ್ಟು ಜನರ ಸರಾಸರಿ ವರಮಾನ ರೂ.53 ಲಕ್ಷ.
  2. ಇದೇರೀತಿಯಲ್ಲಿ ವಯಸ್ಕ ಜನಸಂಖ್ಯೆಯ ಮೇಲ್ವರ್ಗದ ಶೇ.10ರಷ್ಟು ಜನರು ದೇಶದ ಒಟ್ಟು ಸಂಪತ್ತಿನಲ್ಲಿ ಶೇ.65ರಷ್ಟು ಅನುಭವಿಸುತ್ತಿದ್ದರೆ ತಳಸ್ತರದ ಶೇ.50ರಷ್ಟು ವಯಸ್ಕ ಜನರ ಪಾಲು ಕೇವಲ ಶೇ.6.4. ಮೇಲ್ವರ್ಗದ ಸರಾಸರಿ ಸಂಪತ್ತು ರೂ.87.70 ಲಕ್ಷವಾದರೆ ತಳಸ್ತರದ ಶೇ.50ರಷ್ಟು ಜನವರ್ಗದ ಸರಾಸರಿ ಸಂಪತ್ತು ರೂ.1.73 ಲಕ್ಷ. ಒಟ್ಟು ವಯಸ್ಕ ಜನಸಂಖ್ಯೆಯ ಶೇ.1ರಷ್ಟು ಮೇಲುಮೇಲ್ವರ್ಗದ ಜನರ ಸರಾಸರಿ ಸಂಪತ್ತು ರೂ.5.41 ಕೋಟಿ.
  3. ಇವರ ಅಧ್ಯಯನದಲ್ಲಿ ಕಂಡುಬಂದ ಒಂದು ಮುಖ್ಯ ಸಂಗತಿಯೆಂದರೆ ಸಮಾಜದಲ್ಲಿ ಮೇಲುಮೇಲ್ವರ್ಗದಲ್ಲಿ ಸಂಪತ್ತು ಮತ್ತು ವರಮಾನಗಳ ನಡುವಿನ ಅನುಪಾತವು ಅಧಿಕವಾಗಿದ್ದರೆ ತಳಸ್ತರದಲ್ಲಿ ಈ ಅನುಪಾತವು ಕಡಿಮೆಯಿರುತ್ತದೆ. ನಮ್ಮ ತೆರಿಗೆ ವ್ಯವಸ್ಥೆಯಲ್ಲಿ ವರಮಾನವು ತೆರಿಗೆಗೆ ಒಳಪಡುತ್ತಿದೆಯೇ ವಿನಾ ಸಂಪತ್ತು ಒಳಪಡುತ್ತಿಲ್ಲ. ಈ ಕಾರಣದಿಂದಾಗಿ ನಮ್ಮ ಆರ್ಥಿಕತೆಯಲ್ಲಿ ಮೇಲುಮೇಲ್ವರ್ಗದ ಮೇಲಿನ ತೆರಿಗೆ ಭಾರ ಅತ್ಯಂತ ಕಡಿಮೆ. ಆದ್ದರಿಂದ ಥಾಮಸ್ ಪಿಕ್ಕಟ್ಟಿ ಮುಂತಾದವರು ಭಾರತದಲ್ಲಿ ಸಂಪತ್ತಿನ ತೆರಿಗೆಯನ್ನು ಕನಿಷ್ಟ ಮೇಲುಮೇಲ್ವರ್ಗದ ಶೇ.1ರಷ್ಟು ಅತಿಶ್ರೀಮಂತರ ಮೇಲೆ ವಿಧಿಸಬೇಕು ಎಂದು ಒತ್ತಾಯ ಮಾಡುತ್ತಿದ್ದಾರೆ. ಇದರಿಂದ ಸರ್ಕಾರಕ್ಕೆ ಹೆಚ್ಚಿನ ರಾಜಸ್ವ ಸಂಪನ್ಮೂಲ ದೊರೆಯುತ್ತದೆ ಮತ್ತು ರವಷ್ಟಾದರೂ ಅಸಮಾನತೆಯನ್ನು ಕಡಿಮೆಯಾಗುತ್ತದೆ.

ಈ ರಾಕ್ಷಸಾಕಾರದ ವರಮಾನ ಮತ್ತು ಸಂಪತ್ತಿನ ಹಂಚಿಕೆಯಲ್ಲಿನ ಅಸಮಾನತೆಯ ಹಿನ್ನೆಲೆಯಲ್ಲಿ ಮಾಸಿಕ ತಲಾ ಅನುಭೋಗ ವೆಚ್ಚದ ವಿವರಗಳನ್ನು ಪರಿಶೀಲಿಸುವ ಅಗತ್ಯವಿದೆ. ಬಡತನ ನಿವಾರಣೆಯಾಗಿದೆ ಎಂಬ ಸರ್ಕಾರಿ ಪ್ರಭೃತಿಗಳ ಹೇಳಿಕೆಗಳು ಹಾಸ್ಯಾಸ್ಪದವಾಗಿ ಕಾಣುತ್ತವೆ. ಸಮಾಜದ ತಳಸ್ತರದ ಶೇ.5ರಷ್ಟು ಜನರ ಮಾಸಿಕ ತಲಾ ಅನುಭೋಗ ವೆಚ್ಚ ರೂ.1373 (ಗ್ರಾಮೀಣ) ಮತ್ತು ರೂ.2001 (ನಗರ)ರ ಸ್ಥಿತಿಯನ್ನು ಸಮಾಜದ ಮೇಲುಮೇಲ್ವರ್ಗದ ಶೇ.1ರಷ್ಟು ಜನವರ್ಗದ ಸರಾಸರಿ ವರಮಾನ ರೂ.53 ಲಕ್ಷಗಳ ನಡುವಿನ ಅಸಮಾನತೆಯು ಅಸಹನೀಯವಾಗಿದೆ.

ಡಾ. ಟಿ. ಆರ್. ಚಂದ್ರಶೇಖರ

ಟಿ. ಆರ್. ಚಂದ್ರಶೇಖರ
ಅಭಿವೃದ್ಧಿ ಅರ್ಥಶಾಸ್ತ್ರದ ಪ್ರಾಧ್ಯಾಪಕರಾಗಿ ಹಂಪಿ ವಿ.ವಿಯಲ್ಲಿ ಸೇವೆ ಸಲ್ಲಿಸಿರುವ ಚಂದ್ರಶೇಖರ್ ಅವರು ಅರ್ಥಶಾಸ್ತ್ರದ ವಿಷಯದಲ್ಲಿ ಹಲವು ಪುಸ್ತಕಗಳನ್ನು ರಚಿಸಿದ್ದಾರೆ. ಇತಿಹಾಸ-ಸಂಸ್ಕೃತಿಗಳ ಬಗ್ಗೆಯೂ ತಮ್ಮ ವಿಶಿಷ್ಟ ಚಿಂತನೆಗಳನ್ನು ಪ್ರಸ್ತುತಪಡಿಸುತ್ತಿರುವ ಮುಂಚೂಣಿ ಚಿಂತಕರು.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ನೀಟ್ ಕೃಪಾಂಕ ರದ್ದು ಹಗರಣ ಮುಚ್ಚಿ ಹಾಕುವ ಪ್ರಯತ್ನ : ಎಂ.ಕೆ ಸ್ಟಾಲಿನ್

0
ನೀಟ್ ವಿದ್ಯಾರ್ಥಿಗಳ ಕೃಪಾಂಕ ರದ್ದುಗೊಳಿಸಿ ಮರು ಪರೀಕ್ಷೆಗೆ ಮುಂದಾಗಿರುವುದು ಹಗರಣವನ್ನು ಮುಚ್ಚಿ ಹಾಕುವ ಪ್ರಯತ್ನ ಎಂದು ತಮಿಳುನಾಡು ಮುಖ್ಯಮಂತ್ರಿ ಎಂ.ಕೆ ಸ್ಟಾಲಿನ್ ಹೇಳಿದ್ದಾರೆ. ನೀಟ್ ಪರೀಕ್ಷೆಯಲ್ಲಿ ಹಗರಣದ ಆರೋಪ ಕೇಳಿ ಬಂದ ಬೆನ್ನಲ್ಲೇ 1,563...