ಆಲ್ಗಾರಿದಂ ಪಕ್ಷಪಾತ (Algorithm bias) ಕುರಿತು ಸಾಮಾಜಿಕ ಮಾಧ್ಯಮಗಳಲ್ಲಿ ಹೊಸ ಚರ್ಚೆ ನಡೆಯುತ್ತಿದೆ. ಪ್ರಮುಖ ಸಾಮಾಜಿಕ ನ್ಯಾಯ ಹೋರಾಟಗಾರ ಮತ್ತು ವಿದ್ವಾಂಸ ಡಾ. ವಿಜೇಂದರ್ ಸಿಂಗ್ ಚೌಹಾಣ್ ಅವರು, ಚಾಟ್‌ಜಿಪಿಟಿ (ChatGPT)ಯಂತಹ ಎಐ (ಕೃತಕ ಬುದ್ದಿಮತ್ತೆ) ಉಪಕರಣಗಳಲ್ಲಿ ದತ್ತಾಂಶ ಪಕ್ಷಪಾತ (data bias) ಇರುವ ಬಗ್ಗೆ ಪ್ರಶ್ನೆ ಎತ್ತಿದ್ದು, ಅದನ್ನು ಅವರು “ಸವರ್ಣ” (ಪ್ರಬಲ ಜಾತಿ) ಎಂದು ಕರೆದಿದ್ದಾರೆ. ಆ ಬಳಿಕ 21ನೇ ಶತಮಾನದ ಅತ್ಯುನ್ನತ ಅನ್ವೇಷಣೆ ಎಂದು ಕರೆಯಲ್ಪಡುವ ಎಐನಲ್ಲೂ ಜಾತಿ ತಾರತಮ್ಯ ಇರುವ ಬಗ್ಗೆ ಚರ್ಚೆ ಶುರುವಾಗಿದೆ.
“ಪ್ರೊಫೆಸರ್ಸ್ ಡೈರಿ”ಯ ಲೇಖಕ ಪ್ರೊ. ಲಕ್ಷ್ಮಣ್ ಯಾದವ್ ಅವರ ಹೊಸ ಪುಸ್ತಕ “ಜಾತಿ ಜನಗಣತಿ” ಬಿಡುಗಡೆ ಸಮಾರಂಭದಲ್ಲಿ ನಡೆದ ಚರ್ಚೆಯಲ್ಲಿ ಡಾ. ವಿಜೇಂದರ್ ಸಿಂಗ್ ಚೌಹಾಣ್ ಅವರು ಎಐ ತಂತ್ರಜ್ಞಾನದಲ್ಲಿ ಜಾತಿ-ಆಧಾರಿತ ಪಕ್ಷಪಾತವಿದೆ ಎಂದು ಆರೋಪಿಸಿದ್ದಾರೆ. ಇದು ಪುಸ್ತಕ ಬಿಡುಗಡೆಯಲ್ಲಿ ನಡೆದ ಚರ್ಚೆಯ ಭಾಗವಾದರೂ, ಬಿಜೆಪಿ-ಆರ್‌ಎಸ್‌ಎಸ್ ಬೆಂಬಲಿಗ ಟ್ರೋಲ್‌ಗಳು ಇದನ್ನು ಹೆಚ್ಚು ವೈರಲ್ ಆಗುವಂತೆ ಮಾಡಿದ್ದು, ಆ ಬಳಿಕ ಸಾಮಾಜಿಕ ಮಾಧ್ಯಮಗಳಲ್ಲಿ ದೊಡ್ಡ ಮಟ್ಟದ ಚರ್ಚೆ ನಡೆಯುತ್ತಿದೆ.
ಚೌಹಾಣ್ ಅವರ ಹೇಳಿಕೆಯ ಒಂದು ಸಣ್ಣ ಕ್ಲಿಪ್ ಜಾತಿ, ತಂತ್ರಜ್ಞಾನ, ರಾಜಕಾರಣದ ಕುರಿತ ದೊಡ್ಡ ಚರ್ಚೆಗೆ ನಾಂದಿ ಹಾಡಿದೆ. ಅವರ ಬೆಂಬಲಿಗರು ಇದನ್ನು ‘ವ್ಯವಸ್ಥಿತ ದಮನದ ವಿರುದ್ಧದ ಹೋರಾಟ’ವಾಗಿ ನೋಡುತ್ತಿದ್ದಾರೆ. ಸಂಘಪರಿವಾರದ ಬೆಂಬಲಿಗ ಟ್ರೋಲ್ ಪಡೆಗಳು ಇದನ್ನು “ಅತಿಯಾದ ಜಾತಿವಾದ” ಎಂದು ಹೇಳುತ್ತಿವೆ.
ವರದಿಗಳ ಪ್ರಕಾರ, ಜನವರಿ 17ರಂದು ದೆಹಲಿಯಲ್ಲಿ ನಡೆದ ಸಾಹಿತ್ಯ ಸಮಾರಂಭದಲ್ಲಿ (ವರ್ಲ್ಡ್ ಬುಕ್ ಫೇರ್) ಲೇಖಕ ಮತ್ತು ಸಾಮಾಜಿಕ ಕಾರ್ಯಕರ್ತ ಡಾ. ಲಕ್ಷ್ಮಣ್ ಯಾದವ್ ಅವರ ಹೊಸ ಪುಸ್ತಕ “ಜಾತಿ ಜನಗಣತಿ” ಬಿಡುಗಡೆಯಾಗಿತ್ತು. ಈ ಕಾರ್ಯಕ್ರಮದಲ್ಲಿ ಡಾ. ವಿಜೇಂದರ್ ಸಿಂಗ್ ಚೌಹಾಣ್ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದ್ದರು. ಜಾತಿ ಜನಗಣತಿ ಪುಸ್ತಕವು ಭಾರತದಲ್ಲಿ ಜಾತಿ ಆಧಾರಿತ ಜನಗಣತಿ, ಮೀಸಲಾತಿ ನೀತಿಗಳು ಮತ್ತು ಸಾಮಾಜಿಕ ನ್ಯಾಯದ ಅಗತ್ಯತೆಯ ಮೇಲೆ ಕೇಂದ್ರೀಕರಿಸುತ್ತದೆ. ಇದು ಪ್ರಸ್ತುತ ರಾಜಕೀಯ ವಾತಾವರಣದಲ್ಲಿ ಅತ್ಯಂತ ಸೂಕ್ಷ್ಮ ವಿಷಯವಾಗಿದೆ.
ಡಾ. ವಿಜೇಂದರ್ ಸಿಂಗ್ ಚೌಹಾಣ್ ಅವರು ಸ್ವತಃ ಸವರ್ಣ (ಪ್ರಬಲ ಜಾತಿ) ಹಿನ್ನೆಲೆಯಿಂದ ಬಂದವರಾಗಿದ್ದರೂ, ಅವರ 14 ನಿಮಿಷಗಳ ಭಾಷಣದಲ್ಲಿ ಎಐ ತಂತ್ರಜ್ಞಾನವನ್ನು ಜಾತಿ ವ್ಯವಸ್ಥೆಗೆ ಸಂಯೋಜಿಸಿ ಮಾತನಾಡಿದ್ದಾರೆ. ಚಾಟ್‌ಜಿಪಿಟಿಯಂತಹ ಟೂಲ್‌ಗಳು ‘ಪಕ್ಷಪಾತಿ’ ಎಂದು ಹೇಳಿದ್ದಾರೆ. ಅದರ ಸೃಷ್ಟಿಕರ್ತರು ಮತ್ತು ತರಬೇತುದಾರರು ಹೆಚ್ಚಾಗಿ ಸವರ್ಣ (ಪ್ರಬಲ ಜಾತಿ) ಜನರೇ ಆಗಿರುವುದರಿಂದ, ದತ್ತಾಂಶ ಸವರ್ಣ ದೃಷ್ಟಿಕೋನದಿಂದ ತುಂಬಿರುತ್ತದೆ ಎಂದಿದ್ದಾರೆ.
ಅಂತರ್ಜಾಲದಲ್ಲಿ ಲಭ್ಯವಿರುವ ದತ್ತಾಂಶ ಅಥವಾ ಮಾಹಿತಿಗಳು (ಇತಿಹಾಸ, ಸಾಹಿತ್ಯ, ಸಾಮಾಜಿಕ ವಿಜ್ಞಾನಗಳು) ಹೆಚ್ಚಾಗಿ ಸವರ್ಣ ಗುಂಪುಗಳಿಂದ ಬಂದಿರುವುದರಿಂದ, ಎಐ ಉತ್ತರಗಳು ಅದೇ ರೀತಿ ಪಕ್ಷಪಾತ ತೋರುತ್ತವೆ. ತಂತ್ರಜ್ಞಾನ ಕ್ಷೇತ್ರದಲ್ಲಿ ಒಂದುವೇಳೆ ಜಾತಿ ಜನಗಣತಿ ನಡೆದರೆ, ತಟಸ್ಥ ತಂತ್ರಜ್ಞಾನ ಎಂಬ ಮಿಥ್ಯೆ ಒಡೆದುಬೀಳುತ್ತದೆ ಎಂದು ಹೇಳಿದ್ದಾರೆ.
ಇತಿಹಾಸ, ಸಾಹಿತ್ಯ ಮತ್ತು ಸಮಾಜ ವಿಜ್ಞಾನಗಳ ಹೆಚ್ಚಿನ ವಿಷಯವು ಪ್ರಬಲ ಜಾತಿಗಳ ಪ್ರಾಬಲ್ಯ ಹೊಂದಿರುವ ಇಂಟರ್ನೆಟ್ ದತ್ತಾಂಶದ ಮೇಲೆ ಎಐ ಮಾದರಿಗಳನ್ನು ಹೇಗೆ ತರಬೇತಿ ನೀಡಲಾಗುತ್ತದೆ ಎಂಬುವುದರ ಉದಾಹರಣೆಗಳನ್ನು ಚೌಹಾಣ್ ಅವರು ನೀಡಿದ್ದು, ಉದಾಹರಣೆಗೆ : ಮನುಸ್ಮೃತಿಯನ್ನು ‘ಪ್ರಾಚೀನ ಕಾನೂನು’ ಎಂದು ವೈಭವೀಕರಿಸುವುದು ಎಂದಿದ್ದಾರೆ. ಜಾತಿವಾದಿ ಚಿಂತನೆಯ ವಿರುದ್ಧದ ಹೋರಾಟವು ಉಪಕುಲಪತಿಗಳು, ಅಧಿಕಾರಿಗಳು, ಮುಖ್ಯಮಂತ್ರಿಗಳು ಮತ್ತು ಪ್ರಧಾನ ಮಂತ್ರಿಗಳ ವಿರುದ್ಧ ಮಾತ್ರವಲ್ಲ, ನಾವು ಅಲ್ಗಾರಿದಂ ಪಕ್ಷಪಾತದ ವಿರುದ್ಧವೂ ಯುದ್ಧ ಮಾಡಬೇಕು ಎಂದು ಅವರು ಒತ್ತಿ ಹೇಳಿದ್ದಾರೆ.
ಚೌಹಾಣ್ ಅವರ ಹೇಳಿಕೆಯು ಮೂಲತಃ ಹೊಸ ಪುಸ್ತಕವನ್ನು ಉದ್ದೇಶಿಯಾಗಿತ್ತು, ಏಕೆಂದರೆ, ಅಲ್ಲಿ ಲೇಖಕರು ಜಾತಿ ಜನಗಣತಿಯು ಸಾಮಾಜಿಕ ನ್ಯಾಯಕ್ಕೆ ಅತ್ಯಗತ್ಯ ಮಾತ್ರವಲ್ಲದೆ ಡಿಜಿಟಲ್ ಜಗತ್ತಿನಲ್ಲಿ ‘ಜಾತಿ ಪಕ್ಷಪಾತ’ವನ್ನು ಬಹಿರಂಗಪಡಿಸಲು ಒಂದು ಅಸ್ತ್ರವಾಗಿಯೂ ಕಾರ್ಯನಿರ್ವಹಿಸುತ್ತದೆ ಎಂದು ವಾದಿಸಿದ್ದಾರೆ. ಆದರೆ, ಟ್ರೋಲ್ ಪಡೆಗಳು ಅವರ ಹೇಳಿಕೆಯ ಕೇವಲ 5-6 ಸೆಕೆಂಡ್‌ನ ಕ್ಲಿಪ್ ಅನ್ನು ಮಾತ್ರ ವೈರಲ್ ಮಾಡಿವೆ. “ಚಾಟ್‌ಜಿಪಿಟಿ ಸವರ್ಣ” ಎಂಬ ಹೇಳಿಕೆಯನ್ನು ಎತ್ತಿ ತೋರಿಸಿವೆ. ಅದನ್ನು ‘ಅಸಂಬದ್ಧ’ ಅಥವಾ ‘ನರ್ಸರಿ ಮಟ್ಟದ ತರ್ಕ’ ಎಂದು ಲೇಬಲ್ ಮಾಡುವ ಮೂಲಕ ವೈರಲ್ ಮಾಡಿವೆ ಎಂದು en.themooknayak.com ವರದಿ ಮಾಡಿದೆ.
ಟ್ರೋಲ್ ಪೇಜ್‌ಗಳ ಹಿಂದೆ ಜಾತಿ ಜನಗಣತಿ ಮತ್ತು ಮೀಸಲಾತಿಯ ವಿರೋಧಿಗಳು ಎಂದು ಹೇಳಲಾಗುವ ಬಿಜೆಪಿ-ಆರ್‌ಎಸ್‌ಎಸ್‌ನ ಬೆಂಬಲಿಗರಿದ್ದಾರೆ. ಇವರು ಚೌಹಾಣ್ ಅವರ ಭಾಷಣದ ಸಣ್ಣ ಕ್ಲಿಪ್ ವೈರಲ್ ಮಾಡಿ ವ್ಯಾಪಕವಾಗಿ ಅಪಹಾಸ್ಯ ಮಾಡುತ್ತಿದ್ದಾರೆ ಎಂದು ವರದಿ ಉಲ್ಲೇಖಿಸಿದೆ.
ಡಾ. ಲಕ್ಷ್ಮಣ್ ಯಾದವ್ ಅವರು ಈ ವಿಷಯದ ಬಗ್ಗೆ ವಿವರವಾದ ಪೋಸ್ಟ್‌ನಲ್ಲಿ ಪ್ರತಿಕ್ರಿಯೆ ನೀಡಿದ್ದು, ಇದನ್ನು ರಾಜಕೀಯ ದುರುದ್ದೇಶ ಅಥವಾ ದುಷ್ಟ ರಾಜಕೀಯ ಉದ್ದೇಶ ಎಂದು ಕರೆದಿದ್ದಾರೆ. ಕ್ಲಿಪ್ ಕತ್ತರಿಸಿ ವೈರಲ್ ಮಾಡುವುದು ಕೇವಲ ಟ್ರೋಲ್ ಅಲ್ಲ, ಇದು ಒಂದು ರೀತಿಯ ದಮನಕಾರಿ ರಾಜಕೀಯದ ಆಯುಧವಾಗಿದೆ. ಇದರ ಮೂಲಕ ಭಯ ಹುಟ್ಟಿಸುವುದು, ಧಮ್ಕಿ ಹಾಕುವುದು ಮತ್ತು ಮೊಕದ್ದಮೆಗಳನ್ನು ದಾಖಲಿಸುವುದು ನಡೆಯುತ್ತದೆ ಎಂದಿದ್ದಾರೆ. ಅಲ್ಲದೆ, ಚೌಹಾಣ್ ಅವರೊಂದಿಗೆ 14 ವರ್ಷಗಳಿಂದ ಕೆಲಸ ಮಾಡಿದ್ದೇನೆ. ದೇಶಕ್ಕೆ ಇಂತಹ ಸವರ್ಣರು ಬೇಕು, ಅವರು ದೇಶವನ್ನು ವಿಶ್ವಗುರು ಮಾಡಬಹುದು” ಎಂದು ಹೇಳಿದ್ದಾರೆ.
ಡಾ. ಚೌಹಾಣ್ ಅವರನ್ನು ‘ಸವರ್ಣರಾಗಿದ್ದರೂ ಧೈರ್ಯಶಾಲಿ’ ಎಂದು ಬಣ್ಣಿಸಿದ ಯಾದವ್, ಇಂತಹ ವ್ಯಕ್ತಿಗಳು ಸಮಸ್ಯೆ ‘ಜಾತಿ’ಯಲ್ಲ, ಬದಲಿಗೆ ‘ಜಾತಿವಾದಿ ಶಕ್ತಿ’ ಎಂದು ಸಾಬೀತುಪಡಿಸುತ್ತಾರೆ ಎಂದಿದ್ದಾರೆ.
ಟ್ರೋಲ್‌ಗಳ ಬಗ್ಗೆ ಪ್ರತಿಕ್ರಿಯಿಸಿರುವ ಸಮಾಜವಾದಿ ಎ.ಕೆ. ಸ್ಟಾಲಿನ್, ಇದನ್ನು ‘ಡಿಜಿಟಲ್ ಲಿಂಚಿಂಗ್’ ಎಂದು ಕರೆದಿದ್ದಾರೆ. “ಎಐನಲ್ಲಿ ಜಾತಿ ಪಕ್ಷಪಾತದ ಬಗ್ಗೆ ಡಜನ್‌ಗಟ್ಟಲೆ ವಿಮರ್ಶೆಗೆ ಒಳಪಟ್ಟ ಸಂಶೋಧನಾ ಪ್ರಬಂಧಗಳಿವೆ. ಅವುಗಳನ್ನು ಓದದೆ ವಿದ್ವಾಂಸರ ವಿರುದ್ಧ ಗುಂಪು ರಚಿಸುವುದು ಬೌದ್ಧಿಕ ದಿವಾಳಿತನ ಎಂದು ಅವರು ಹೇಳಿದ್ದಾರೆ. ಎಐ ಸಾಮಾಜಿಕ ಶ್ರೇಣಿಗಳನ್ನು ಪುನರಾವರ್ತಿಸುತ್ತದೆ ಎಂದು ಸಾಬೀತುಪಡಿಸಿದ ನೇಚರ್ ಜರ್ನಲ್‌ನಲ್ಲಿನ ಪ್ರಬಂಧ ಸೇರಿದಂತೆ ಅಂತಾರಾಷ್ಟ್ರೀಯ ಅಧ್ಯಯನಗಳನ್ನು ಸ್ಟಾಲಿನ್ ಉಲ್ಲೇಖಿಸಿದ್ದಾರೆ. ಅದೇ ರೀತಿ, ಲಖನ್ ಮೀನಾ ಅವರಂತಹ ಕಾರ್ಯಕರ್ತರು “ಡಾ. ಚೌಹಾಣ್ ಹೇಳಿರುವುದು ಶೇಕಡ 100ರಷ್ಟು ಸರಿ ಇದೆ. ಎಐ ದತ್ತಾಂಶ ಮನುವಾದಿಯಾಗಿದೆ, ಆದ್ದರಿಂದ ಅದರ ಪ್ರತಿಕ್ರಿಯೆಗಳು ಸಹ ಹಾಗೆಯೇ ಇವೆ ಎಂದಿದ್ದಾರೆ.


