ಪಂಜಾಬ್‌ನ ಅಮರಿಂದರ್ ನೇತೃತ್ವದ ಸರ್ಕಾರವು ಆಗಸ್ಟ್ 2 ರಿಂದ ಕೊರೊನಾ ಮಾರ್ಗಸೂಚಿಗಳನ್ನು ಅನುಸರಿಸಿಕೊಂಡು ರಾಜ್ಯದ ಎಲ್ಲಾ ತರಗತಿಗತಿಗಳಿಗೆ ಶಾಲೆಗಳನ್ನು ಪುನರಾರಂಭಿಸುವುದಾಗಿ ಶನಿವಾರ ಪ್ರಕಟಿಸಿದೆ.
ಪಂಜಾಬ್ ಸರ್ಕಾರದ ಅಧಿಸೂಚನೆಯ ಪ್ರಕಾರ, ಕೊರೊನಾ ಸೂಕ್ತ ನಡವಳಿಕೆಯನ್ನು ಖಚಿತಪಡಿಸಿಕೊಳ್ಳಲು ಶಾಲೆಗಳು ಸರಿಯಾದ ಮಾರ್ಗಸೂಚಿಯನ್ನು ಅನುಸರಿಸುವ ನಿರೀಕ್ಷೆಯಿದೆ. “ಶಾಲಾ ಶಿಕ್ಷಣ ಇಲಾಖೆಯು ಈ ನಿಟ್ಟಿನಲ್ಲಿ ಸೂಚನೆಗಳನ್ನು ನೀಡಲಿದೆ” ಎಂದು ಅಧಿಸೂಚನೆಯಲ್ಲಿ ತಿಳಿಸಲಾಗಿದೆ.
ಪಂಜಾಬ್‌ನಲ್ಲಿ ಸುಮಾರು ನಾಲ್ಕು ತಿಂಗಳು ಮುಚ್ಚಿದ್ದ 10 ರಿಂದ 12 ನೇ ತರಗತಿಯ ಶಾಲೆಗಳು ಜುಲೈ 26 ರಂದು ಪುನಾರಂಭಗೊಂಡಿದ್ದವು. ಆ ಸಮಯದಲ್ಲಿ, ಶಾಲಾ ಶಿಕ್ಷಣ ಇಲಾಖೆಯು ವಿವರವಾದ ಮಾರ್ಗಸೂಚಿಗಳನ್ನು ಹೊರಡಿಸಿ, ಸಂಪೂರ್ಣವಾಗಿ ಲಸಿಕೆ ಹಾಕಿದ ಶಿಕ್ಷಕರು ಮತ್ತು ಬೋಧಕೇತರ ಸಿಬ್ಬಂದಿಗೆ ಮಾತ್ರ ಶಾಲೆಗಳಿಗೆ ಖುದ್ದಾಗಿ ಹಾಜರಾಗಲು ಅನುಮತಿ ನೀಡಿದ್ದವು. ಮಕ್ಕಳನ್ನು ತರಗತಿಗಳಿಗೆ ಹಾಜರಾಗಲು ಪೋಷಕರಿಂದ ಲಿಖಿತ ಒಪ್ಪಿಗೆ ಪಡೆಯುವುದನ್ನು ಶಾಲೆಗಳಿಗೆ ಕಡ್ಡಾಯ ಮಾಡಲಾಗಿತ್ತು.
ಇದನ್ನೂ ಓದಿ: ಪಂಜಾಬ್: ನವಜೋತ್ ಸಿಧುಗೆ ಆಡಿಯೋ ಸಂದೇಶ ನೀಡಿ, ಕಾಂಗ್ರೆಸ್ ಕಾರ್ಯಕರ್ತ ಸಾವು
ಶುಕ್ರವಾರ, ಪಂಜಾಬ್‌ನಲ್ಲಿ 49 ಹೊಸ ಕೊರೊನಾ ಪ್ರಕರಣಗಳನ್ನು ವರದಿಯಾಗಿದೆ. ರಾಜ್ಯದಲ್ಲಿ ಇದುವರೆಗೂ ಒಟ್ಟು ಕೊರೊನಾ ಪ್ರಕರಣಗಳ ಸಂಖ್ಯೆ 5.99 ಲಕ್ಷಕ್ಕೆ ತಲುಪಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಶುಕ್ರವಾರದಂದು ರಾಜ್ಯದಲ್ಲಿ ಯಾವುದೇ ಕೊರೊನಾ ಸಂಬಂಧಿತ ಸಾವು ವರದಿಯಾಗಿಲ್ಲ.
ಪಂಜಾಬ್‌ನಲ್ಲಿ 544 ಸಕ್ರಿಯ ಕೊರೊನಾ ಪ್ರಕರಣಗಳಿದ್ದು, ಹೆಚ್ಚಿನ ಹೊಸ ಸೋಂಕುಗಳು ಜಲಂಧರ್, ಫಿರೋಜ್‌ಪುರ ಮತ್ತು ಲುಧಿಯಾನದಿಂದ ವರದಿಯಾಗಿವೆ.
ರಾಜ್ಯದ ಶಾಲೆಗಳು ದೈಹಿಕ ತರಗತಿಗಳ ಜೊತೆಗೆ ಆನ್‌ಲೈನ್ ತರಗತಿಗಳನ್ನು ಕೂಡಾ ನಡೆಸುತ್ತಿವೆ. ಭಾರತದ ಇತರ ಹಲವು ರಾಜ್ಯಗಳು ಕೆಲವು ವಯೋಮಾನದ ವಿದ್ಯಾರ್ಥಿಗಳಿಗಾಗಿ ಶಾಲೆಗಳಲ್ಲಿ ದೈಹಿಕ ತರಗತಿಗಳನ್ನು ಪುನರಾರಂಭಿಸಲು ಅವಕಾಶ ನೀಡಿವೆ.
ಕರ್ನಾಟಕದಲ್ಲೂ ಪದವಿ ಮತ್ತು ಸ್ನಾತಕೋತ್ತರ ಅಧ್ಯಯನ ಮಾಡುತ್ತಿರುವ ಲಸಿಕೆ ಪಡೆದ ವಿದ್ಯಾರ್ಥಿಗಳಿಗೆ ದೈಹಿಕ ತರಗತಿಗಳಿಗೆ ಹಾಜರಾಗಳು ಅನುಮತಿ ನೀಡಲಾಗಿದೆ. ಉಳಿದಂತೆ ಆನ್‌ಲೈನ್ ಮೂಲಕ ತರಗತಿಗಳು ನಡೆಯುತ್ತಿವೆ.
ಇದನ್ನೂ ಓದಿ: ರೈತ ಹೋರಾಟದ ಸಾವುಗಳ ಬಗ್ಗೆ ಮಾಹಿತಿ ಇಲ್ಲ ಎಂದ ಕೇಂದ್ರ: ಪಂಜಾಬ್ ಅಂಕಿ-ಅಂಶ ತಿಳಿಸಿದ್ದೇ ಬೇರೆ!


