ಭಾರತದಲ್ಲಿ ವಾಸಿಸುವ ಮತ್ತು ಕೆಲಸ ಮಾಡುವವರೆಲ್ಲರೂ ದೇಶದ ನಿಯಮಗಳನ್ನು ಪಾಲಿಸಬೇಕಾಗುತ್ತದೆ ಎಂದು ಹೊಸದಾಗಿ ಪ್ರಮಾಣವಚನ ಸ್ವೀಕರಿಸಿದ ಮಾಹಿತಿ ಮತ್ತು ತಂತ್ರಜ್ಞಾನ ಸಚಿವ ಅಶ್ವಿನಿ ವೈಷ್ಣವ್ ಅವರು ಗುರುವಾರ ಹೇಳಿದ್ದಾರೆ. ಹೊಸ ಐಟಿ ನಿಯಮಗಳ ಬಗ್ಗೆ ಟ್ವಿಟರ್ ಜೊತೆ ನಡೆಯುತ್ತಿರುವ ಸಂಘರ್ಷದ ಬಗ್ಗೆ ಒಕ್ಕೂಟ ಸರ್ಕಾರದ ನಿಲುವನ್ನು ಅವರು ವ್ಯಕ್ತಪಡಿಸಿದ್ದಾರೆ.
ಬಿಜೆಪಿ ಪ್ರಧಾನ ಕಾರ್ಯದರ್ಶಿ ಬಿ.ಎಲ್.ಸಂತೋಷ್ ಅವರನ್ನು ಪಕ್ಷದ ಕಚೇರಿಯಲ್ಲಿ ಭೇಟಿಯಾದ ನಂತರ ಅಶ್ವಿನಿ ವೈಷ್ಣವ್ ಸುದ್ದಿಗಾರರೊಂದಿಗೆ ಮಾತನಾಡುತ್ತಿದ್ದರು. ಟ್ವಿಟರ್ ಐಟಿ ನಿಯಮಗಳಿಗೆ ಬದ್ಧವಾಗಿಲ್ಲ ಎಂಬ ಪ್ರಶ್ನೆಯೊಂದಕ್ಕೆ ಉತ್ತರಿಸಿದ ಅವರು, ಭಾರತದಲ್ಲಿ ವಾಸಿಸುವ ಮತ್ತು ಕೆಲಸ ಮಾಡುವವರು ದೇಶದ ನಿಯಮಗಳಿಗೆ ಬದ್ಧರಾಗಿರಬೇಕು ಎಂದು ಹೇಳಿದ್ದಾರೆ.
ಇದನ್ನೂ ಓದಿ: ಕಾನೂನು ಉಲ್ಲಂಘನೆ: ಸಚಿವ ರವಿಶಂಕರ್ ಪ್ರಸಾದ್ ಟ್ವಿಟರ್ ಅಕೌಂಟ್‌ಗೆ ಒಂದು ಗಂಟೆ ನಿರ್ಬಂಧ
ಒಡಿಶಾದ ಸಂಸದರಾಗಿರುವ ಅಶ್ವಿನಿ ಅವರು ಬುಧವಾರ ಕ್ಯಾಬಿನೆಟ್ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದ್ದಾರೆ. ಅವರಿಗೆ ಮಾಹಿತಿ ಮತ್ತು ತಂತ್ರಜ್ಞಾನ ಸಚಿವಾಲಯದ ಜೊತೆಗೆ ರೈಲ್ವೆಯ ಉಸ್ತುವಾರಿ ನೀಡಲಾಗಿದೆ.
ದೇಶದ ಹೊಸ ಐಟಿ ನಿಯಮಗಳನ್ನು ಪಾಲಿಸಲು ವಿಫಲವಾದ ಆರೋಪದ ಮೇಲೆ ಅಮೆರಿಕಾ ಮೂಲದ ಕಂಪನಿಯಾಗಿರುವ ಟ್ವಿಟರ್ ಒಕ್ಕೂಟ ಸರ್ಕಾರದ ಕೆಂಗಣ್ಣಿಗೆ ಗುರಿಯಾಗಿದೆ.
ಮೇ 25 ರಂದು ಜಾರಿಗೆ ಬಂದ ಹೊಸ ಐಟಿ ನಿಯಮಗಳ ಪ್ರಕಾರ, 50 ಲಕ್ಷಕ್ಕೂ ಹೆಚ್ಚು ಬಳಕೆದಾರರನ್ನು ಹೊಂದಿರುವ ಎಲ್ಲಾ ಸಾಮಾಜಿಕ ಮಾಧ್ಯಮ ಕಂಪನಿಗಳು ಮುಖ್ಯ ಅನುಸರಣೆ ಅಧಿಕಾರಿ, ನೋಡಲ್ ಸಂಪರ್ಕ ವ್ಯಕ್ತಿ ಮತ್ತು ಕುಂದುಕೊರತೆ ಅಧಿಕಾರಿಯನ್ನು ನೇಮಿಸಬೇಕಾಗುತ್ತದೆ. ಈ ಎಲ್ಲಾ ಅಧಿಕಾರಿಗಳು ಭಾರತೀಯರಾಗಿರಬೇಕು ಎಂಬ ನಿಯಮವಿದೆ.
ನಿಯಮಗಳನ್ನು ಧಿಕ್ಕರಿಸುತ್ತಿದೆ ಎಂದು ಒಕ್ಕೂಟ ಸರ್ಕಾರವು ಟ್ವಿಟರ್ ಮೇಲೆ ವಾಗ್ದಾಳಿ ನಡೆಸುತ್ತಿದೆ. ನಿಯಮಗಳನ್ನು ಅನುಸರಿಸಲು ಕ್ರಮಗಳನ್ನು ತೆಗೆದುಕೊಳ್ಳುತ್ತಿದ್ದೇವೆ ಎಂದು ಟ್ವಿಟರ್ ಇಂಡಿಯಾ ಹೇಳುತ್ತಲೇ ಬಂದಿದೆ.
ಇದನ್ನೂ ಓದಿ: ಮುಂದುವರೆದ ಒಕ್ಕೂಟ ಸರ್ಕಾರ-ಟ್ವಿಟರ್ ಸಂಘರ್ಷ: ಮಧ್ಯಪ್ರದೇಶದಲ್ಲೂ ಕೇಸ್!


