ಜ್ಞಾನವಾಪಿ ಮಸೀದಿ ಆವರಣದಲ್ಲಿ ಹೆಚ್ಚಿನ ಸಮೀಕ್ಷೆಗಳನ್ನು ಕೈಗೊಳ್ಳಲು ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆಗೆ (ಎಎಸ್‌ಐ) ನಿರ್ದೇಶನ ನೀಡುವಂತೆ ಕೋರಿ ಸಲ್ಲಿಸಲಾದ ಎರಡು ಅರ್ಜಿಗಳ ವಿಚಾರಣೆಯನ್ನು ಅಲಹಾಬಾದ್ ಹೈಕೋರ್ಟ್ ಬುಧವಾರ (ಡಿ.18) ಮುಂದೂಡಿದೆ.
ಡಿಸೆಂಬರ್ 12ರಂದು ಮಧ್ಯಂತರ ಆದೇಶ ನೀಡಿದ್ದ ಸುಪ್ರೀಂ ಕೋರ್ಟ್ ಮುಂದಿನ ಆದೇಶದವರೆಗೆ ಮಸೀದಿಗಳ ಸಮೀಕ್ಷೆಗೆ ಸಂಬಂಧಿಸಿದಂತೆ ಯಾವುದೇ ಮಧ್ಯಂತರ ಅಥವಾ ಅಂತಿಮ ಆದೇಶಗಳನ್ನು ನೀಡದಂತೆ ಸೂಚಿಸಿದೆ. ಈ ಹಿನ್ನೆಲೆ, ಅರ್ಜಿಗಳ ವಿಚಾರಣೆಯನ್ನು ಮುಂದೂಡಲಾಗಿದೆ ಎಂದು ವರದಿಯಾಗಿದೆ.
ಸುಪ್ರೀಂ ಕೋರ್ಟ್ ಆದೇಶದ ಹಿನ್ನೆಲೆ, ಉತ್ತರ ಪ್ರದೇಶದ ಜೌನ್‌ಪುರ ಜಿಲ್ಲಾ ನ್ಯಾಯಾಲಯವು 14ನೇ ಶತಮಾನದ ಐತಿಹಾಸಿಕ ಅಟಾಲಾ ಮಸೀದಿಯ ಸಮೀಕ್ಷೆಗೆ ಆದೇಶಿಸಲು ಸೋಮವಾರ (ಡಿ.16) ನಿರಾಕರಿಸಿದೆ.
ಜ್ಞಾನವಾಪಿ ಮಸೀದಿ ಸಂಬಂಧಿಸಿದ ಮುಂದಿನ ವಿಚಾರಣೆಯನ್ನು 1991ರ ಆರಾಧನಾ ಸ್ಥಳಗಳ ಕಾಯ್ದೆಯ ಸಾಂವಿಧಾನಿಕ ಸಿಂಧುತ್ವವನ್ನು ಪ್ರಶ್ನಿಸಿ ಸಲ್ಲಿಸಲಾದ ಅರ್ಜಿಗಳ ವಿಚಾರಣೆಯನ್ನು ಸುಪ್ರೀಂ ಕೋರ್ಟ್ ನಿಗದಿಪಡಿಸಿದ ಒಂದು ವಾರದ ನಂತರ, ಅಂದರೆ 24 ಫೆಬ್ರವರಿ 2025ಕ್ಕೆ ಪಟ್ಟಿ ಮಾಡುವಂತೆ ನ್ಯಾಯಮೂರ್ತಿ ರೋಹಿತ್ ರಂಜನ್ ಅಗರ್ವಾಲ್ ಅವರ ಏಕಸದಸ್ಯ ಪೀಠ ನಿರ್ದೇಶಿಸಿದೆ.
ಜ್ಞಾನವಾಪಿ ಮಸೀದಿ ಆವರಣದಲ್ಲಿರುವ ‘ವುಝುಖಾನಾ’ (ನೀರಿನ ತೊಟ್ಟಿ) ಪ್ರದೇಶವನ್ನು ಸಮೀಕ್ಷೆ ಮಾಡುವಂತೆ ಎಎಸ್‌ಐಗೆ ನಿರ್ದೇಶಿಸಲು ಕೋರಿ ರಾಖಿ ಸಿಂಗ್ ಎಂಬವರು ಮೊದಲ ಬಾರಿಗೆ ಅರ್ಜಿ ಹಾಕಿದ್ದರು.
ಮೇ 2023 ರಲ್ಲಿ ವಾರಣಾಸಿ ನ್ಯಾಯಾಲಯ ನೀಡಿದ ಆದೇಶದನ್ವಯ ಮಸೀದಿಯಲ್ಲಿ ಸಮೀಕ್ಷೆ ನಡೆಸಲಾಗಿದೆ. ಈ ವೇಳೆ ಅಲ್ಲಿ ಶಿವಲಿಂಗದಂತಹ ರಚನೆ ಕಂಡು ಬಂದಿದೆ ಎಂದು ಹೇಳಲಾಗಿದೆ. ಆ ಬಳಿಕ ಸುಪ್ರೀಂ ಕೋರ್ಟ್‌ನ ಆದೇಶದ ಮೇರೆಗೆ ವುಝುಖಾನಾ ಸುತ್ತಮುತ್ತಲಿನ ಪ್ರದೇಶವನ್ನು ಮುಚ್ಚಲಾಗಿದೆ.
ಇದೇ ರೀತಿಯ ಮನವಿಯೊಂದಿಗೆ ಎರಡನೇ ಅರ್ಜಿಯನ್ನು ಲಾರ್ಡ್ ಆದಿ ವಿಶ್ವೇಶ್ವರ್ ಪರವಾಗಿ ಸಲ್ಲಿಸಲಾಯಿಗಿದೆ. ಈ ಅರ್ಜಿಯನ್ನು ವಕೀಲ ವಿಜಯ್ ಶಂಕರ್ ರಸ್ತೋಗಿ ಪ್ರತಿನಿಧಿಸಿದ್ದರು. ಜ್ಞಾನವಾಪಿ ಮಸೀದಿಯ ಮುಖ್ಯ ಗುಮ್ಮಟದ ಕೆಳಗೆ ‘ಸ್ವಯಂಭು ಜ್ಯೋತಿರ್ಲಿಂಗ’ ಇದೆ ಎಂದು ರಸ್ತೋಗಿ ತಮ್ಮ ಮನವಿಯಲ್ಲಿ ಹೇಳಿಕೊಂಡಿದ್ದರು.
ಎರಡೂ ಅರ್ಜಿಗಳು ವಾರಣಾಸಿ ನ್ಯಾಯಾಲಯದ ಅಕ್ಟೋಬರ್ 2023 ರ ಆದೇಶವನ್ನು ಪ್ರಶ್ನಿಸಿವೆ. ಅಕ್ಟೋಬರ್ 2023 ರ ಆದೇಶ ಜ್ಞಾನವಾಪಿ ಮಸೀದಿಯ ಸಂಪೂರ್ಣ ಆವರಣದ ಸಮೀಕ್ಷೆಯನ್ನು ನಡೆಸಲು ಎಎಸ್‌ಐಗೆ ನಿರ್ದೇಶಿಸಲು ನಿರಾಕರಿಸಿದೆ.
ಜ್ಞಾನವಾಪಿಗೆ ಸಂಬಂಧಿಸಿದ ಅರ್ಜಿಗಳ ಮುಂದಿನ ಪ್ರಕ್ರಿಯೆಗಳು ಸುಪ್ರೀಂ ಕೋರ್ಟ್‌ನ ಮುಂಬರುವ ತೀರ್ಪಿನ ಮೇಲೆ ನಿರ್ಧರಿತವಾಗಿರುತ್ತದೆ ಎಂದು ನ್ಯಾಯಮೂರ್ತಿ ಅಗರ್ವಾಲ್ ಹೇಳಿದ್ದಾರೆ.
ಇದನ್ನೂ ಓದಿ : ಪುರಾತನ ಮಸೀದಿ ಮಂದಿರವೆಂದು ಅರ್ಜಿ : ಸಮೀಕ್ಷೆಗೆ ಆದೇಶಿಸಲು ನಿರಾಕರಿಸಿದ ಕೋರ್ಟ್


