ಲೋಕಸಭೆಯ ಪ್ರತಿಪಕ್ಷ ನಾಯಕ ರಾಹುಲ್ ಗಾಂಧಿಯವರ ಭಾರತೀಯ ಪೌರತ್ವದ ಕುರಿತು ಶೀಘ್ರ ನಿರ್ಧಾರ ತೆಗೆದುಕೊಂಡು ತಿಳಿಸುವಂತೆ ಕೇಂದ್ರ ಗೃಹ ಸಚಿವಾಲಯಕ್ಕೆ ಅಲಹಾಬಾದ್ ಹೈಕೋರ್ಟ್ ಸೋಮವಾರ (ನ.26) ಸೂಚಿಸಿದೆ.
ಡಿಸೆಂಬರ್ 19ರೊಳಗೆ ಸರ್ಕಾರದ ತೆಗೆದುಕೊಂಡ ನಿರ್ಧಾರದ ಬಗ್ಗೆ ನ್ಯಾಯಾಲಯಕ್ಕೆ ತಿಳಿಸಬೇಕು ಎಂದು ನ್ಯಾಯಮೂರ್ತಿಗಳಾ ಅತಾವು ರೆಹಮಾನ್ ಮಸೂದಿ ಮತ್ತು ಸುಭಾಷ್ ವಿದ್ಯಾರ್ಥಿ ಅವರಿದ್ದ ಪೀಠ ನಿರ್ದೇಶಿಸಿದೆ.
ರಾಹುಲ್ ಗಾಂಧಿಯವರ ಪೌರತ್ವದ ಬಗ್ಗೆ ಸಿಬಿಐ ತನಿಖೆ ಕೋರಿ ಕರ್ನಾಟಕದ ಬಿಜೆಪಿ ಕಾರ್ಯಕರ್ತ ಎಸ್.ವಿಘ್ನೇಶ್ ಶಿಶಿರ್ ಎಂಬವರು ಸಲ್ಲಿಸಿದ್ದ ಅರ್ಜಿಗೆ ಸಂಬಂಧಿಸಿದಂತೆ ನ್ಯಾಯಾಲಯ ಮಧ್ಯಂತರ ಆದೇಶ ನೀಡಿದೆ. ರಾಹುಲ್ ಗಾಂಧಿಯುವರು ಬ್ರಿಟಿಷ್ ಪೌರತ್ವ ಹೊಂದಿದ್ದಾರೆ. ಅದಕ್ಕೆ ಪುರಾವೆಗಳಿವೆ ಎಂದು ಅರ್ಜಿದಾರ ಶಿಶಿರ್ ವಾದಿಸಿದ್ದಾರೆ.
ಕೇಂದ್ರ ಸರ್ಕಾರದ ಪರ ನ್ಯಾಯಾಲಯಕ್ಕೆ ಹಾಜರಾದ ಡೆಪ್ಯೂಟಿ ಸಾಲಿಸಿಟರ್ ಜನರಲ್ ಎಸ್.ಬಿ ಪಾಂಡೆ ಅವರು, ಅರ್ಜಿದಾರರು ಬರೆದಿರುವ ಪತ್ರವನ್ನು ಕೇಂದ್ರ ಸರ್ಕಾರ ಸ್ವೀಕರಿಸಿದ್ದು, ಪ್ರಕ್ರಿಯೆ ನಡೆಯುತ್ತಿದೆ ಎಂದು ತಿಳಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಪ್ರಕರಣ ಮುಂದೂಡಿದ ನ್ಯಾಯಾಲಯ, ಡಿಸೆಂಬರ್ 19ರೊಳಗೆ ಪತ್ರದ ಕುರಿತು ಕೈಗೊಂಡ ನಿರ್ಧಾರ ಏನೆಂದು ತಿಳಿಸುವಂತೆ ಸೂಚಿಸಿದೆ.
ಈ ಹಿಂದೆ ಹಿಂಪಡೆದಿರುವ ತನ್ನ ಅರ್ಜಿಯಲ್ಲಿ ವಿಘ್ನೇಶ್ ಅವರು ರಾಹುಲ್ ಗಾಂಧಿ ಬ್ರಿಟಿಷ್ ಪ್ರಜೆಯಾಗಿದ್ದು, ಸಂವಿಧಾನದ 84 (ಎ) ವಿಧಿಯ ಅಡಿಯಲ್ಲಿ ಚುನಾವಣೆಗೆ ಸ್ಪರ್ಧಿಸಲು ಅನರ್ಹರು ಎಂದು ಪ್ರತಿಪಾದಿಸಿದ್ದರು. ಇದೀಗ, ಈ ಸಂಬಂಧ ತಾನು ಕೇಂದ್ರಕ್ಕೆ ಸಲ್ಲಿಸಿದ ಮನವಿಗಳ ಮೇಲೆ ತೆಗೆದುಕೊಂಡ ಕ್ರಮಗಳ ಬಗ್ಗೆ ತಿಳಿಸುವಂತೆ ಕೋರಿ ನ್ಯಾಯಾಲಯದಲ್ಲಿ ಹೊಸ ಅರ್ಜಿಯನ್ನು ಸಲ್ಲಿಸಿದ್ದಾರೆ.
ರಾಹುಲ್ ಗಾಂಧಿಯವರ ಭಾರತೀಯ ಪೌರತ್ವ ಪ್ರಶ್ನಿಸಿ ಬಿಜೆಪಿ ನಾಯಕ ಸುಬ್ರಮಣಿಯಂ ಸ್ವಾಮಿ ಕೂಡ ದೆಹಲಿ ಹೈಕೋರ್ಟ್‌ಗೆ ಸಲ್ಲಿಸಿದ್ದಾರೆ. ಅಲಾಹಾಬಾದ್ ಹೈಕೋರ್ಟ್‌ನಲ್ಲಿ ಅರ್ಜಿ ಇತ್ಯರ್ಥಗೊಂಡ ನಂತರವೇ ಪ್ರಕರಣ ಆಲಿಸುವುದಾಗಿ ದೆಹಲಿ ಹೈಕೋರ್ಟ್ ಸೂಚಿಸಿದೆ.
ಆಗಸ್ಟ್ 2019ರಲ್ಲಿ ಕೇಂದ್ರ ಸರ್ಕಾರಕ್ಕೆ ಪತ್ರ ಬರೆದಿದ್ದ ಸುಬ್ರಮಣಿಯನ್ ಸ್ವಾಮಿ, “ರಾಹುಲ್ ಗಾಂಧಿ ಸ್ವಯಂ ಪ್ರೇರಿತರಾಗಿ ತಾನು ಬ್ರಿಟನ್ ಪ್ರಜೆ ಎಂದು ಬ್ರಿಟಿಷ್ ಸರ್ಕಾರಕ್ಕೆ ಹೇಳಿದ್ದಾರೆ. ಅಲ್ಲದೆ, ಅವರು ಅಲ್ಲಿನ ಪಾಸ್‌ಪೋರ್ಟ್ ಕೂಡ ಹೊಂದಿದ್ದಾರೆ. ಈ ಮೂಲಕ ಭಾರತೀಯ ಪೌರತ್ವ ನಿಯಮಗಳನ್ನು ಉಲ್ಲಂಘಿಸಿದ್ದಾರೆ” ಎಂದು ಆರೋಪಿಸಿದ್ದರು.
ರಾಹುಲ್ ಗಾಂಧಿ ಭಾರತದ ಸಂವಿಧಾನ ವಿಧಿ 9 ಮತ್ತು ಭಾರತೀಯ ಪೌರತ್ವ ಕಾಯ್ದೆ-1955 ಅನ್ನು ಉಲ್ಲಂಘಿಸಿದ್ದಾರೆ. ಇದರಿಂದ ಅವರು ಭಾರತೀಯ ಪೌರತ್ವ ಕಳೆದುಕೊಳ್ಳುತ್ತಾರೆ ಎಂದು ಹೇಳಿದ್ದರು.
ಭಾರತದ ಸಂವಿಧಾನದ 9ನೇ ವಿಧಿಯು ಯಾವುದೇ ವ್ಯಕ್ತಿಯು ಯಾವುದೇ ಇತರ ರಾಷ್ಟ್ರದ ಪೌರತ್ವವನ್ನು ಸ್ವಯಂ ಪ್ರೇರಣೆಯಿಂದ ಪಡೆದುಕೊಂಡರೆ, ಅವರನ್ನು ಭಾರತದ ಪ್ರಜೆ ಎಂದು ಪರಿಗಣಿಸಲಾಗುವುದಿಲ್ಲ ಎಂದು ಹೇಳುತ್ತದೆ.
ಇದನ್ನೂ ಓದಿ : ಬ್ಯಾಲೆಟ್ ಪೇಪರ್ ಮತದಾನ | ಮನವಿ ತಿರಸ್ಕರಿಸಿದ ಸುಪ್ರೀಂ ಕೋರ್ಟ್


