RSS ಮುಖ್ಯಸ್ಥ ಮೋಹನ್ ಭಾಗವತ್ ಅವರು ಬ್ರಾಹ್ಮಣರನ್ನು ಅವಹೇಳನ ಮಾಡಿದ್ದಾರೆ ಎನ್ನುವಂತಹ ಆರೋಪ ಕೇಳಿಬಂದಿದ್ದು, ಇದೀಗ ಅವರ ವಿರುದ್ಧ ಬಿಹಾರ ನ್ಯಾಯಾಲಯದಲ್ಲಿ ದೂರು ದಾಖಲಾಗಿದೆ.
ಭಾನುವಾರ ಮುಂಬಯಿಯಲ್ಲಿ ನಡೆದ ಸಂತ ರವಿದಾಸ್ ಅವರ ಜನ್ಮ ದಿನಾಚರಣೆಯ ಕಾರ್ಯಕ್ರಮದಲ್ಲಿ ಭಾಗವತ್ ಮಾತನಾಡುವಾಗ, ಈ ಜಾತಿ ವ್ಯವಸ್ಥೆಯನ್ನು ಬ್ರಾಹ್ಮಣ ಸಮುದಾಯ ಸೃಷ್ಟಿಸಿದೆ ಎಂದು ಹೇಳಿದ್ದಾರೆ. ಇದು ಬ್ರಾಹ್ಮಣರಿಗೆ ಅವಮಾನ ಮಾಡುವ ಹೇಳಿಕೆ ಎಂದು ವಕೀಲ ಸುಧೀರ್ ಕುಮಾರ್ ಓಜಾ ಅವರು ಮುಜಾಫರ್‌ಪುರ ಜಿಲ್ಲೆಯ ಮುಖ್ಯ ಜ್ಯುಡಿಷಿಯಲ್ ಮ್ಯಾಜಿಸ್ಟ್ರೇಟ್ (ಸಿಜೆಎಂ) ಕೋರ್ಟ್‌ನಲ್ಲಿ ಪ್ರಕರಣ ಹೂಡಿದ್ದಾರೆ. ಪ್ರಕರಣದ ವಿಚಾರಣೆಯನ್ನು ನ್ಯಾಯಾಲಯ ಫೆಬ್ರವರಿ 20ಕ್ಕೆ ಮುಂದೂಡಲಾಗಿದೆ.
ಭಾಷಣದಲ್ಲಿ ಭಾಗವತ್ ಮಾತುಗಳು:-
”ಹಿಂದೂ ಸಮಾಜದಲ್ಲಿ ಚಾಲ್ತಿಯಲ್ಲಿರುವ ಈ ಕೆಟ್ಟ ಜಾತಿ ಪದ್ಧತಿಯನ್ನು ಸೃಷ್ಟಿಸಿದ್ದು ದೇವರಲ್ಲ, ಅದು ಪುರೋಹಿತ ವರ್ಗದವರು ಸೃಷ್ಟಿ ಮಾಡಿರುವಂತಹದ್ದು” ಎಂದು ದೂಷಿಸಿದ್ದರು. ಪುರೋಹಿತಶಾಹಿಯೊಂದಿಗೆ ಸಂಬಂಧ ಹೊಂದಿರುವ ಬ್ರಾಹ್ಮಣರ ಬಗ್ಗೆ ಭಾಗವತ್ ಮಾತನಾಡಿದ್ದಾರೆ ಎಂದು ಕೆಲವು ಮಾಧ್ಯಮಗಳು ವರದಿ ಮಾಡಿವೆ.
ಇದನ್ನೂ ಓದಿ: ಬುದ್ಧ, ಬಸವ, ಅಂಬೇಡ್ಕರ್ ಹೇಳಿರುವುದನ್ನೇ ನಾನು ಹೇಳಿದ್ದೇನೆ, ಬ್ರಾಹ್ಮಣರನ್ನು ಅವಮಾನಿಸಿಲ್ಲ: ಹೆಚ್‌ಡಿಕೆ ಸ್ಪಷ್ಟನೆ
“ಸತ್ಯವೇ ದೇವರು. ವ್ಯಕ್ತಿಯೊಬ್ಬರ ಹೆಸರು, ಸಾಮರ್ಥ್ಯ ಮತ್ತು ಗೌರವ ಏನೇ ಇದ್ದರೂ ಎಲ್ಲರೂ ಒಂದೇ. ಅವರ ನಡುವೆ ಯಾವುದೇ ವ್ಯತ್ಯಾಸ ಇರುವುದಿಲ್ಲ. ಶಾಸ್ತ್ರಗಳ ಹೆಸರಿನಲ್ಲಿ ಕೆಲವು ಪಂಡಿತರು ಹೇಳುವುದು ಸುಳ್ಳು. ಜಾತಿ ಶ್ರೇಷ್ಠತೆಯ ವ್ಯಸನದಿಂದ ತಪ್ಪುದಾರಿಗೆ ನಮ್ಮನ್ನು ಎಳೆಯಲಾಗಿದೆ. ಈ ಭ್ರಮೆಯನ್ನು ತೊಲಗಿಸಬೇಕಿದೆ. ದೇಶದಲ್ಲಿ ಎಲ್ಲರಲ್ಲಿಯೂ ಆತ್ಮಸಾಕ್ಷಿ ಮತ್ತು ಜಾಗೃತಿ ಒಂದೇ ರೀತಿ ಇದೆ. ಆದರೆ ಅಭಿಪ್ರಾಯಗಳು ಮಾತ್ರ ಬೇರೆ ಬೇರೆ ಇರುತ್ತವೆ” ಎಂದು ಭಾಗವತ್ ಹೇಳಿದ್ದರು.
ಭಾಗವತ್ ಅವರು ಬ್ರಾಹ್ಮಣರ ಬಗ್ಗೆ ಮಾತನಾಡಿದ್ದಾರೆ ಎಂದು ಮಾಧ್ಯಮಗಳು ಸುದ್ದಿ ಬಿತ್ತರಿಸಿದ ಮೇಲೆ ಸೋಮವಾರ ಸ್ಪಷ್ಟನೆ ನೀಡಿದ್ದ ಭಾಗವತ್, ‘ಪಂಡಿತ್’ ಎನ್ನುವುದರ ಅರ್ಥ ಬ್ರಾಹ್ಮಣರು ಎಂದಲ್ಲ, ಬದಲಾಗಿ ‘ಬುದ್ಧಿಜೀವಿಗಳು’ ಎಂದು ಆತು ತಿರುಗಿಸುವ ಪ್ರಯತ್ನ ಮಾಡಿದರು. ಈ RSS ಕೂಡ ಭಾಗವತ್ ಅವರು ಯಾವುದೇ ನಿರ್ದಿಷ್ಟ ಜಾತಿಯನ್ನು ಉಲ್ಲೇಖಿಸಿಲ್ಲ ಎಂದು ಭಾಗವತ್ ಹೇಳಿಕೆಯನ್ನು ಸಮರ್ಥಿಸಿಕೊಳ್ಳುವ ಪ್ರಯತ್ನ ಮಾಡಿತು.
ಆದರೆ, ವಕೀಲ ಸುಧೀರ್ ಓಜಾ ಅವರು ದೂರು ಸಲ್ಲಿಸಿದ್ದು,”ರಾಷ್ಟ್ರೀಯ ಸ್ವಯಂ ಸೇವಕ ಸಂಘದ (ಆರೆಸ್ಸೆಸ್) ಮುಖ್ಯಸ್ಥ ಮೋಹನ್ ಭಾಗವತ್ ಅವರ ವಿರುದ್ಧ ನಾನು ಮುಜಫ್ಫರ್‌ಪುರ ಸಿಜೆಎಂ ನ್ಯಾಯಾಲಯದಲ್ಲಿ ಭಾರತೀಯ ದಂಡ ಸಂಹಿತೆ (ಐಪಿಸಿ) ಸೆಕ್ಷನ್ 504, 505 ಮತ್ತು 506ರ ಅಡಿ (ಶಾಂತಿ ಕದಡುವ ಉದ್ದೇಶದ ಅವಮಾನ) ದೂರು ದಾಖಲಿಸಿದ್ದೇನೆ. ಇದಲ್ಲದೆ, 153 ಮತ್ತು 153ಎ ಸೆಕ್ಷನ್‌ಗಳನ್ನು ಕೂಡ ದೂರಿನಲ್ಲಿ ಸೇರಿಸಲಾಗಿದೆ” ಎಂದು ಅವರು ತಿಳಿಸಿದ್ದಾರೆ.
”ಭಾಗವತ್ ಅವರು, ಫೆ. 5ರಂದು ಈ ಕೆಟ್ಟ ಜಾತಿ ವ್ಯವಸ್ಥೆಯನ್ನು ಬ್ರಾಹ್ಮಣರು ಸೃಷ್ಟಿಸಿದ್ದಾರೆ ಎಂದು ಆರೋಪಿಸಿ ಹೇಳಿಕೆ ನೀಡಿದ್ದರು. ಸಮಾಜದಲ್ಲಿ ವಿಭಜನೆ ಸೃಷ್ಟಿಸಲು ಉದ್ದೇಶಪೂರ್ವಕವಾಗಿ ಅವರು ಈ ಹೇಳಿಕೆ ಕೊಟ್ಟಿದ್ದಾರೆ. ಮತ ಬ್ಯಾಂಕ್ ರಾಜಕಾರಣವನ್ನು ಗಮನದಲ್ಲಿ ಇರಿಸಿಕೊಂಡು ಅವರು ಈ ರೀತಿ ಹೇಳಿದ್ದಾರೆ” ಎಂದು ಸುಧೀರ್ ಓಜಾ ಆರೋಪಿಸಿದ್ದಾರೆ.
”ಭಾಗವತ್ ಅವರ ಅಜಾಗರೂಕ ಹೇಳಿಕೆಯು ಇಡೀ ಬ್ರಾಹ್ಮಣ ಸಮುದಾಯಕ್ಕೆ ಮಾನಹಾನಿ ಉಂಟುಮಾಡಿದೆ. ಮೋಹನ್ ಭಾಗವತ್ ಅವರ ಹೇಳಿಕೆಯು ದೇಶಾದ್ಯಂತ ಸಮುದಾಯದಲ್ಲಿ ಆಕ್ರೋಶಕ್ಕೆ ಕಾರಣವಾಗಿದೆ” ಎಂದು ಸುಧೀರ್ ಓಜಾ ಹೇಳಿದ್ದಾರೆ.


