ಮಧ್ಯಪ್ರದೇಶದ ರಾಜಧಾನಿ ಭೋಪಾಲ್‌ನಲ್ಲಿರುವ ಮಸೀದಿಯನ್ನು “ಅಕ್ರಮ” ಮತ್ತು “ಭೂ ಜಿಹಾದ್”ನ ಭಾಗ ಎಂದು ಕರೆದು ಕೆಡವಲು ಹಿಂದುತ್ವ ಗುಂಪುಗಳು ಅಧಿಕಾರಿಗಳ ಮೇಲೆ ಒತ್ತಡ ಹೇರುತ್ತಿವೆ.
ತಮ್ಮ ಪ್ರತಿಭಟನೆಯ ಭಾಗವಾಗಿ ವಿಶ್ವ ಹಿಂದೂ ಪರಿಷತ್ (ವಿಎಚ್‌ಪಿ) ಮತ್ತು ಬಜರಂಗ ದಳದ ಸದಸ್ಯರು ಭಾನುವಾರದಂದು ಹತೈ ಖೇಡಾ ಪ್ರದೇಶದ ಮಸೀದಿಯ ಕಡೆಗೆ ಜೆಸಿಬಿಯನ್ನು ತಮ್ಮೊಂದಿಗೆ ತೆಗೆದುಕೊಂಡು ಮೆರವಣಿಗೆ ನಡೆಸಿದರು. ಮೂರು ಅಂತಸ್ತಿನ ಮಸೀದಿಯ ಕೆಲವು ಭಾಗಗಳು ನಿರ್ಮಾಣ ಹಂತದಲ್ಲಿವೆ. ಪ್ರತಿಭಟನೆಯ ನಂತರ ಆಡಳಿತವು ಸದ್ಯಕ್ಕೆ ನಿರ್ಮಾಣ ಕಾರ್ಯವನ್ನು ಸ್ಥಗಿತಗೊಳಿಸಿದೆ.
ಭಾನುವಾರ ಹಿಂದಿ ಸುದ್ದಿವಾಹಿನಿ ಜೀ ನ್ಯೂಸ್ ವರದಿಗಾರರೊಂದಿಗೆ ಮಾತನಾಡಿದ ಪ್ರತಿಭಟನಾಕಾರರೊಬ್ಬರು, ಆಡಳಿತವು ಮಸೀದಿಯ ವಿರುದ್ಧ ಬುಲ್ಡೋಜರ್ ಕ್ರಮಕೈಗೊಳ್ಳದಿದ್ದರೆ ತಾವೇ ಧಾರ್ಮಿಕ ಸ್ಥಳವನ್ನು ಕೆಡವುತ್ತೇವೆ ಎಂದು ಹೇಳಿದ್ದಾರೆ. ಹಿಂದುತ್ವ ಪ್ರತಿಭಟನಾಕಾರರು “ಭೂ ಜಿಹಾದ್‌ಗೆ ಅವಕಾಶ ನೀಡಲಾಗುವುದಿಲ್ಲ” ಎಂಬ ಘೋಷಣೆಗಳನ್ನು ಕೂಗಿದರು.
“ನಾವು ಯಾವುದೇ ಬೆಲೆ ತೆತ್ತಾದರೂ ಮಸೀದಿಯನ್ನು ಕೆಡವುತ್ತೇವೆ. ಸರ್ಕಾರ ಅನುಮತಿಸದಿದ್ದರೂ ನಾವು ಅದನ್ನು ಕೆಡವುತ್ತೇವೆ. ಸರ್ಕಾರ ಏನು ಬೇಕಾದರೂ ಮಾಡಲಿ. ಅವರು ನನ್ನನ್ನು ಕಂಬಿಗಳ ಹಿಂದೆ ಹಾಕಬಹುದು ಅಥವಾ ಗಲ್ಲಿಗೇರಿಸಬಹುದು” ಎಂದು ಮತ್ತೊಬ್ಬ ಪ್ರತಿಭಟನಾಕಾರ ಮಸೀದಿಯ ವಿರುದ್ಧ ಘೋಷಣೆಗಳನ್ನು ಕೂಗಿದರು.
ಇನ್ನೊಬ್ಬ ಪ್ರತಿಭಟನಾಕಾರರು ಇದು ಭೋಪಾಲ್‌ನ ಹಲವಾರು ಭಾಗಗಳಲ್ಲಿ ನಡೆಯುತ್ತಿರುವ “ಭೂ ಜಿಹಾದ್” ಎಂದು ಹೇಳಿದ್ದಾರೆ. ಅವರು ಮೂರು ಅಂತಸ್ತಿನ ಮಸೀದಿ ನಿರ್ಮಾಣಕ್ಕೆ ಆಕ್ಷೇಪ ವ್ಯಕ್ತಪಡಿಸಿದರು. ಪ್ರತಿಭಟನಾಕಾರರ ಗುಂಪೊಂದು ಬುಲ್ಡೋಜರ್ ಮೇಲೆ ಹತ್ತಿ ಸರ್ಕಾರಕ್ಕೆ ಎಚ್ಚರಿಕೆ ನೀಡಿತು.
ಮತ್ತೊಂದೆಡೆ ಹಿಂದೂ ಗುಂಪುಗಳು ದೇಶಾದ್ಯಂತ ಮಸೀದಿಗಳನ್ನು ಉದ್ದೇಶಪೂರ್ವಕವಾಗಿ ಗುರಿಯಾಗಿಸಿಕೊಂಡಿವೆ ಎಂದು ಮುಸ್ಲಿಮರು ಹೇಳುತ್ತಿದ್ದಾರೆ. “ಅವರಿಗೆ ಭಾರತದ ಎಲ್ಲಾ ಮಸೀದಿಗಳೊಂದಿಗೆ ಸಮಸ್ಯೆಗಳಿವೆ. ಅವರಿಗೆ ತಾಜ್ ಮಹಲ್ ಮತ್ತು ಕೆಂಪು ಕೋಟೆಯೊಂದಿಗೆ ಸಮಸ್ಯೆ ಇದೆ. ಇತ್ತೀಚೆಗೆ ಅವರು ಸಂಭಾಲ್ ಮಸೀದಿಯ ಸಮಸ್ಯೆಗಳನ್ನು ಕೆದಕಿದ್ದಾರೆ. ದೇವಾಲಯಗಳನ್ನು ಹುಡುಕಲು ಅವರು ಎಲ್ಲಾ ಮಸೀದಿಗಳನ್ನು ಅಗೆಯುತ್ತಿದ್ದಾರೆ ಎಂದು ಸ್ಥಳೀಯ ಮುಸ್ಲಿಂ ಒಬ್ಬರು ವ್ಯಂಗ್ಯವಾಗಿ ಹೇಳಿದರು.
“ಹಿಂದೂಗಳು ಮತ್ತು ಮುಸ್ಲಿಮರ ನಡುವೆ ಸಮಸ್ಯೆಗಳನ್ನು ಸೃಷ್ಟಿಸಲು ಸರ್ಕಾರ ಅವರನ್ನು ಉತ್ತೇಜಿಸುತ್ತಿದೆ. ಸರ್ಕಾರ ಪೂರ್ವಾಗ್ರಹ ಪೀಡಿತವಾಗಿದೆ. ಈ ಭೂಮಿ ಸರ್ಕಾರಕ್ಕೆ ಸೇರಿಲ್ಲ. ಮಸೀದಿಯ ಬಳಿ ಆ ಭೂಮಿಗೆ ಸಂಬಂಧಿಸಿದ ಎಲ್ಲಾ ದಾಖಲೆಗಳಿವೆ” ಎಂದು ಅವರು ಹೇಳಿದರು.
ಮಸೀದಿಯನ್ನು ಸರ್ಕಾರಿ ಭೂಮಿಯಲ್ಲಿ ನಿರ್ಮಿಸಲಾಗಿದೆ ಎಂದು ವಿಎಚ್‌ಪಿ ಸದಸ್ಯರು ಆರೋಪಿಸಿದ್ದಾರೆ. ಯಾವುದೇ ನಿರ್ದಿಷ್ಟ ಪುರಾವೆಗಳನ್ನು ಒದಗಿಸದೆ, ರೋಹಿಂಗ್ಯಾ ಮುಸ್ಲಿಮರನ್ನು ಈ ಪ್ರದೇಶದಲ್ಲಿ ನೆಲೆಸಲು ಕರೆತರಲಾಗುತ್ತಿದೆ ಎಂದು ಅವರು ಆರೋಪಿಸಿದ್ದಾರೆ.
ಹಿಂದೂತ್ವ ಗುಂಪುಗಳು ಮತ್ತು ಭಾರತೀಯ ಜನತಾ ಪಕ್ಷ (ಬಿಜೆಪಿ) ಆಳ್ವಿಕೆ ನಡೆಸುವ ರಾಜ್ಯಗಳಲ್ಲಿನ ಆಡಳಿತವು ಅತಿಕ್ರಮಣಗಳನ್ನು ತೆರವುಗೊಳಿಸುವ ಹೆಸರಿನಲ್ಲಿ ಮಸೀದಿಗಳನ್ನು ನಿರಂತರವಾಗಿ ಗುರಿಯಾಗಿಸಿಕೊಂಡಿದೆ. ಕೇಸರಿ ಗುಂಪುಗಳು ಉತ್ತರಪ್ರದೇಶ, ಉತ್ತರಾಖಂಡ, ಹಿಮಾಚಲಪ್ರದೇಶ, ಗುಜರಾತ್ ಮತ್ತು ಈಗ ಮಧ್ಯಪ್ರದೇಶದಲ್ಲಿನ ಮಸೀದಿಗಳ ವಿರುದ್ಧ ಪ್ರತಿಭಟನೆಗಳನ್ನು ನಡೆಸುತ್ತಿವೆ. ಉತ್ತರಪ್ರದೇಶ ಮತ್ತು ಗುಜರಾತ್‌ನಲ್ಲಿ ಈಗಾಗಲೇ ಕೆಲವು ಮಸೀದಿಗಳನ್ನು ಕೆಡವಲಾಗಿದೆ.


