ಬೆಂಗಳೂರು ದಕ್ಷಿಣ ಕ್ಷೇತ್ರದ ಬಿಟಿಎಂ ಲೇಔಟ್‌ನ ಮತಗಟ್ಟೆಯಲ್ಲಿ ನಕಲಿ ಮತದಾನ ನಡೆದಿರುವ ಆರೋಪ ಕೇಳಿ ಬಂದಿದೆ.
ಈ ಕ್ಷೇತ್ರದಲ್ಲಿ ಬಿಜೆಪಿಯ ತೇಜಸ್ವಿ ಸೂರ್ಯ ಮತ್ತು ಕಾಂಗ್ರೆಸ್‌ನ ಸೌಮ್ಯಾ ರೆಡ್ಡಿ ಸ್ಪರ್ಧಿಸುತ್ತಿದ್ದಾರೆ. ನಕಲಿ ಮತದಾನ ನಡೆದಿರುವ ಆರೋಪದ ಬಳಿಕ ಕಾಂಗ್ರೆಸ್ ನಾಯಕರು ಮಧ್ಯಪ್ರವೇಶಿಸಿದ್ದು, ಸಂಬಂಧಿತ ನಿಯಮಗಳ ಅಡಿಯಲ್ಲಿ ಮತ ಚಲಾಯಿಸಲು ಅವಕಾಶ ಮಾಡಿಕೊಡಲಾಗಿದೆ.
ಬೆಂಗಳೂರಿನ ಬಿಟಿಎಂ ಲೇಔಟ್‌ನ ನಲವತ್ತು ವರ್ಷದ ಸುಲ್ತಾನಾ ಮತ ಚಲಾಯಿಸಲು ಬೂತ್ ಸಂಖ್ಯೆ 195ಕ್ಕೆ ತೆರಳಿದ್ದರು, ಆದರೆ ಅವರ ಮತವನ್ನು ಈಗಾಗಲೇ ಹಾಕಲಾಗಿದೆ ಎಂದು ಮತಗಟ್ಟೆಯ ಸಿಬ್ಬಂದಿಗಳು ಹೇಳಿದ್ದಾರೆ. ಮಧ್ಯಾಹ್ನ 12.30ರ ಸುಮಾರಿಗೆ ನಾನು ಬೂತ್‌ಗೆ ಹೋದಾಗ ಚುನಾವಣಾ ಆಯೋಗದ ಅಧಿಕಾರಿಗಳು, ನಾನು ಈಗಾಗಲೇ ಮತವನ್ನು ಹಾಕಲಾಗಿದೆ ಎಂದು ಹೇಳಿದ್ದಾರೆ. ಇನ್ನೂ ಅನೇಕರಿಗೆ ಈ ರೀತಿ ಹೇಳುತ್ತಿರುವುದನ್ನು ನಾನು ಗಮನಿಸಿದ್ದೇನೆ ಎಂದು ಸುಲ್ತಾನಾ ಹೇಳಿದ್ದಾರೆ.
ಈ ಬಗ್ಗೆ ಚುನಾವಣಾಧಿಕಾರಿಗಳನ್ನು ಪ್ರಶ್ನಿಸಿದಾಗ, ಬುರ್ಖಾ ಧರಿಸಿದ್ದರಿಂದ ನಮಗೆ ಸರಿಯಾಗಿ ಗುರುತಿಸಲು ಸಾಧ್ಯವಾಗಲಿಲ್ಲ ಎಂದು ಹೇಳಿದ್ದಾರೆ. ಈ ಬಗ್ಗೆ ಮತದಾರರು ಮತ್ತು ಚುನಾವಣಾಧಿಕಾರಿಗಳ ನಡುವಿನ ವಾಗ್ವಾದದ ವಿಡಿಯೋ ವೈರಲ್ ಆಗಿದೆ, ಮತದಾರರು ಮತಗಟ್ಟೆಯೊಳಗೆ ಅಧಿಕಾರಿಗಳನ್ನು ಪ್ರಶ್ನಿಸುತ್ತಿರುವುದನ್ನು ವಿಡಿಯೋ ತೋರಿಸುತ್ತಿದೆ. ಅದೇ ಮತಗಟ್ಟೆಯ ಇತರ ಇಬ್ಬರು ಮತದಾರರು ಕೂಡ ತಮ್ಮ ಮತಗಳನ್ನು ಬೇರೆ ಯಾರೋ ಚಲಾಯಿಸಿದ್ದಾರೆ ಎಂದು ಆರೋಪಿಸಿದ್ದಾರೆ.
ನಕಲಿ ಮತಗಳ ನಿಖರ ಸಂಖ್ಯೆ ಸರಿಯಾಗಿ ತಿಳಿದು ಬಂದಿಲ್ಲ. ಈ ವೇಳೆ ಮಧ್ಯಪ್ರವೇಶಿಸಿದ ಮಾಜಿ ಮೇಯರ್ ಬಿಎನ್ ಮಂಜುನಾಥ್ ರೆಡ್ಡಿ, ಆ ಮತಗಟ್ಟೆಯಲ್ಲಿ 9 ಮತದಾರರು ಇದೇ ಪರಿಸ್ಥಿತಿ ಎದುರಿಸಿದ್ದಾರೆ. ನಾವು ರಿಜಿಸ್ಟರ್‌ನಲ್ಲಿ ನಕಲಿ ಮತದಾನ ಮಾಡಿದವರ ಸಹಿಯನ್ನು ತೋರಿಸಲು ಅಧಿಕಾರಿಗಳನ್ನು ಕೇಳಿದಾಗ, ಚುನಾವಣಾ ಅಧಿಕಾರಿಗಳು ನಿರಾಕರಿಸಿದರು. ಸಾಕಷ್ಟು ಪ್ರತಿಭಟನೆ ಮತ್ತು ವಾದದ ನಂತರ ಅವರು ಅಂತಿಮವಾಗಿ 5.30ಕ್ಕೆ ಜನರಿಗೆ ಮತ ಚಲಾಯಿಸಲು ಅವಕಾಶ ಮಾಡಿಕೊಟ್ಟರು ಎಂದು ಹೇಳಿದ್ದಾರೆ.
ಚುನಾವಣಾ ಅಧಿಕಾರಿ ಈ ಬಗ್ಗೆ ಮಾತನಾಡಿದ್ದು, ಇಂತಹ ಒಂದೇ ಒಂದು ಘಟನೆ ಮಾತ್ರ ನಡೆದಿದೆ. ನಾವು ಟೆಂಡರ್ ಮತದಾನಕ್ಕೆ ಅವಕಾಶ ನೀಡಿದ್ದೇವೆಯೇ ಹೊರತು ಸವಾಲಿನ ಮತಕ್ಕಲ್ಲ. ಘಟನೆ ಬೆಳಕಿಗೆ ಬಂದ ನಂತರ ಮತಗಟ್ಟೆ ಅಧಿಕಾರಿಯನ್ನು ಬದಲಾಯಿಸಲಾಗಿದೆ ಎಂದು ಹೇಳಿದ್ದಾರೆ.
ಸಂತ್ರಸ್ತ ಮತದಾರರಿಗೆ ಚಾಲೆಂಜಿಂಗ್ ವೋಟ್’ ಹಾಕಲು ಅವಕಾಶ ನೀಡಬೇಕಿತ್ತು ಆದರೆ ಅಧಿಕಾರಿಗಳು ಅದಕ್ಕೆ ಅವಕಾಶ ನೀಡಲಿಲ್ಲ. ಬದಲಿಗೆ ಟೆಂಡರ್ ಮತದಾನಕ್ಕೆ ಅವಕಾಶ ನೀಡಿದ್ದಾರೆ ಎಂದು ಮಂಜುನಾಥ್ ರೆಡ್ಡಿ ಹೇಳಿದ್ದಾರೆ. ಮತದಾರರು ತಮ್ಮ ಬದಲಿಗೆ ಯಾರಾದರೂ ಮೊದಲೇ ಮತದಾನ ಮಾಡಿದ್ದರೆ 49P ಅಡಿಯಲ್ಲಿ ಮತ್ತೆ ಮತ ಚಲಾಯಿಸಬಹುದು. ಈ ಟೆಂಡರ್ ಮತಗಳನ್ನು ಬ್ಯಾಲೆಟ್ ಪೇಪರ್‌ಗಳಲ್ಲಿ ಹಾಕಲಾಗುತ್ತದೆ. ಪ್ರತ್ಯೇಕವಾಗಿ ವಿನ್ಯಾಸ ಮಾಡಿರುವ ಬ್ಯಾಲೆಟ್ ಪೇಪರ್‌ನಲ್ಲಿ ಮತ ಚಲಾಯಿಸಲು ಮತದಾರರಿಗೆ ಅವಕಾಶ ಮಾಡಿಕೊಡಲಾಗುತ್ತದೆ.


