Homeಮುಖಪುಟಸೂರತ್ ಬಿಜೆಪಿ ಅಭ್ಯರ್ಥಿ ಅವಿರೋಧ ಆಯ್ಕೆ ಯೋಜಿತ ಕುತಂತ್ರ?

ಸೂರತ್ ಬಿಜೆಪಿ ಅಭ್ಯರ್ಥಿ ಅವಿರೋಧ ಆಯ್ಕೆ ಯೋಜಿತ ಕುತಂತ್ರ?

- Advertisement -
- Advertisement -

ದೇಶದಾದ್ಯಂತ ಲೋಕಸಭೆ ಚುನಾವಣೆಯ ಚಟುವಟಿಕೆಗಳು ಗರಿಗೆದರಿವೆ. ಈಗಾಗಲೇ ಎರಡು ಹಂತಗಳ ಮತದಾನ ಮುಗಿದಿದ್ದು, ಕರ್ನಾಟಕದಲ್ಲಿ ಮೊದಲ ಹಂತದಲ್ಲಿ 14 ಕ್ಷೇತ್ರಗಳ ಮತದಾನವೂ ಏಪ್ರಿಲ್ 26ರಂದು ನಡೆದಿದೆ.

ಈ ನಡುವೆ ಗುಜರಾತ್‌ನ ಸೂರತ್‌ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಮುಖೇಶ್ ದಲಾಲ್ ಅವಿರೋಧವಾಗಿ ಆಯ್ಕೆಯಾಗಿರುವುದು ಹಲವು ಅನುಮಾನಗಳಿಗೆ ಕಾರಣವಾಗಿದೆ.

ಸೂರತ್ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ನೀಲೇಶ್ ಕುಂಭಾಣಿ ಅವರ ನಾಮಪತ್ರವನ್ನು ಮೂವರು ಸೂಚಕರ ಸಹಿ ಇಲ್ಲಾ ಎಂಬ ಕಾರಣ ನೀಡಿ ಜಿಲ್ಲಾ ಚುನಾವಣಾಧಿಕಾರಿ ಏಪ್ರಿಲ್ 21 ರಂದು ತಿರಸ್ಕರಿಸಿದ್ದರು. ಅದೇ ಕಾರಣ ನೀಡಿ ಕಾಂಗ್ರೆಸ್‌ನ ಬದಲಿ ಅಭ್ಯರ್ಥಿ ಸುರೇಶ್ ಪಡಸಾಲ ಅವರ ನಾಮಪತ್ರವನ್ನೂ ಅಧಿಕಾರಿಗಳು ತಿರಸ್ಕರಿಸಿದ್ದರು. ಹಾಗಾಗಿ, ಕಾಂಗ್ರೆಸ್ ಪಕ್ಷಕ್ಕೆ ಅಭ್ಯರ್ಥಿ ಇಲ್ಲದಂತಾಯಿತು.

ನಂತರ ಬಿಜೆಪಿ ಅಭ್ಯರ್ಥಿ ಮುಖೇಶ್ ದಲಾಲ್ ಹೊರತುಪಡಿಸಿ ಎಲ್ಲಾ ಅಭ್ಯರ್ಥಿಗಳು ತಮ್ಮ ನಾಮಪತ್ರವನ್ನು ಹಿಂತೆಗೆಕೊಂಡರು. ಏಪ್ರಿಲ್ 22, 2024 ರಂದು ಸೂರತ್ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ‘ಅವಿರೋಧವಾಗಿ ಆಯ್ಕೆಯಾಗಿದ್ದಾರೆ’ ಎಂದು ಚುನಾವಣಾಧಿಕಾರಿಗಳು ಘೋಷಿಸಿದರು. ಮೇ 7ರಂದು ಕ್ಷೇತ್ರದಲ್ಲಿ ಮತದಾನ ನಡೆಯಬೇಕಿತ್ತು. ಅದಕ್ಕೂ ಎರಡು ವಾರಗಳ ಮೊದಲು ಈ ಬೆಳವಣಿಗೆ ನಡೆದಿದೆ.

ಅವಿರೋಧ ಆಯ್ಕೆ ಯೋಜಿತ ಕುತಂತ್ರ?

ಚುನಾವಣೆಯಲ್ಲಿ ಪ್ರತಿಸ್ಪರ್ಧಿಗಳು ಇಲ್ಲದಿದ್ದರೆ ಅಭ್ಯರ್ಥಿಗಳು ಅವಿರೋಧವಾಗಿ ಆಯ್ಕೆಯಾಗುವುದು ಸಾಮಾನ್ಯ ಪ್ರಕ್ರಿಯೆ. ಸೂರತ್‌ನಲ್ಲಿ ಹಾಗೆಯೇ ನಡೆದಿದೆ. ಆದರೆ, ಇಲ್ಲಿ ಯೋಜಿತ ಕುತಂತ್ರ ಮಾಡಿ ಬಿಜೆಪಿ ಅಭ್ಯರ್ಥಿಗೆ ಪ್ರತಿಸ್ಪರ್ಧಿಗಳು ಇಲ್ಲದಂತೆ ಮಾಡಲಾಗಿದೆಯಾ? ಎಂಬ ಅನುಮಾನ ಮೂಡಿದೆ.

ಕಾಂಗ್ರೆಸ್ ಅಭ್ಯರ್ಥಿಯ ನಾಮಪತ್ರಕ್ಕೆ ಸೂಚಕರಾಗಿ ಸಹಿ ಹಾಕಿದವರು ಆ ಸಹಿ ತಮ್ಮದಲ್ಲ ಎಂದು ಹೇಳಿದ್ದರಿಂದಾಗಿ ಅವರ ನಾಮಪತ್ರ ತಿರಸ್ಕೃತಗೊಂಡಿತ್ತು. ಇಲ್ಲಿ ಕುತೂಹಲಕಾರಿ ಅಂಶವೆಂದರೆ, ಕಾಂಗ್ರೆಸ್‌ ಅಭ್ಯರ್ಥಿಯ ನಾಪಪತ್ರಕ್ಕೆ ಸಹಿ ಹಾಕಿವರು ಅಭ್ಯರ್ಥಿಯ ಸ್ವಂತ ಭಾವ, ಅಳಿಯ ಮತ್ತು ಪಾಲುದಾರರು. ಕಾಂಗ್ರೆಸ್‌ನಿಂದ ನಾಮಪತ್ರ ಸಲ್ಲಿಸಿದ್ದ ಬದಲಿ ಅಭ್ಯರ್ಥಿಯ ಸೂಚಕರಲ್ಲಿ ಒಬ್ಬರು ತನ್ನ ಸಹಿ ಫೋರ್ಜರಿ ಮಾಡಲಾಗಿದೆ ಎಂದು ಹೇಳಿದ್ದರಿಂದ ಅವರ ನಾಮಪತ್ರವೂ ತಿರಸ್ಕೃತಗೊಂಡಿದೆ.

ಇಲ್ಲಿ ಅನುಮಾನಕ್ಕೆ ಕಾರಣವಾದ ಅಂಶವೇನೆಂದರೆ, ಅಭ್ಯರ್ಥಿಯ ಸ್ವಂತ ಭಾವ, ಅಳಿಯ ಮತ್ತು ಪಾಲುದಾರನೇ ಸಹಿ ನಮ್ಮದಲ್ಲ ಎಂದಿರುವುದು ಯಾಕೆ? ಹಾಗಾದರೆ, ಅವರು ಸಹಿ ಹಾಕದೆ ಇನ್ಯಾರು ಸಹಿ ಹಾಕಿದರು? ಒಂದು ವೇಳೆ ಸಹಿ ಅವರದ್ದೇ ಆದರೂ ನಮ್ಮದಲ್ಲ ಎಂದಿರುವುದು ಯಾಕೆ? ಈ ವಿಚಾರಗಳು ಅಭ್ಯರ್ಥಿಗೆ ಗೊತ್ತಿಲ್ಲವೇ? ಲೋಕಸಭೆ ಚುನಾವಣೆಯಂತಹ ಅತ್ಯಂತ ಮಹತ್ವದ ಸ್ಪರ್ಧೆಯಲ್ಲಿ ಅಭ್ಯರ್ಥಿ ಇಷ್ಟೊಂದು ನಿರ್ಲಕ್ಷ್ಯ ವಹಿಸಲು ಸಾಧ್ಯವೇ ಎಂಬುದಾಗಿದೆ.

ಬದಲಿ ಅಭ್ಯರ್ಥಿಯದ್ದೂ ಇದೇ ಕಥೆ. ಅವರ ಸೂಚಕರಲ್ಲಿ ಒಬ್ಬರು ತನ್ನ ಸಹಿ ಫೋರ್ಜರಿ ಮಾಡಲಾಗಿದೆ ಎಂದಿದ್ದರು. ಹಾಗಾದರೆ, ನಿಜವಾಗಿಯೂ ಸೂಚಕರ ಸಹಿ ಫೋರ್ಜರಿ ಮಾಡಲಾಗಿತ್ತಾ? ಒಂದು ವೇಳೆ ಮಾಡಿದ್ದರೂ ಯಾಕೆ? ಅಭ್ಯರ್ಥಿಯ ಗಮನಕ್ಕೆ ಬಾರದೆ ಇದು ನಡೆಯಿತಾ? ಎಂಬ ಪ್ರಶ್ನೆಗಳು ಮೂಡುತ್ತವೆ.

ಸ್ವತಂತ್ರ ಅಭ್ಯರ್ಥಿಗಳಿಂದ ನಾಮಪತ್ರ ಹಿಂತೆಗೆಸಿದ ಬಿಜೆಪಿ?

ಕಾಂಗ್ರೆಸ್‌ನ ಮುಖ್ಯ ಅಭ್ಯರ್ಥಿ ಮತ್ತು ಬದಲಿ ಅಭ್ಯರ್ಥಿ ಇಬ್ಬರ ನಾಮಪತ್ರವೂ ತಿರಸ್ಕೃತಗೊಂಡ ಬಳಿಕ, ಚುನಾವಣಾ ಕಣದಲ್ಲಿದ್ದ ಒಬ್ಬರು ಬಿಎಸ್‌ಪಿ ಮತ್ತು 8 ಮಂದಿ ಸ್ವತಂತ್ರ ಅಭ್ಯರ್ಥಿಗಳು ತಮ್ಮ ನಾಮಪತ್ರ ಹಿಂತೆಗೆದುಕೊಂಡಿದ್ದರು. ಈ ಮೂಲಕ ಬಿಜೆಪಿ ಅಭ್ಯರ್ಥಿ ಸ್ಪರ್ಧೆ ಇಲ್ಲದೆ ಆಯ್ಕೆಯಾಗಲು ದಾರಿ ಮಾಡಿ ಕೊಟ್ಟಿದ್ದರು. ಎಲ್ಲಾ ಸ್ವತಂತ್ರ ಅಭ್ಯರ್ಥಿಗಳು ಒಂದೇ ಬಾರಿ ಸ್ಪರ್ಧೆಯಿಂದ ಹಿಂದೆ ಸರಿದಿರುವುದು ಇಲ್ಲಿ ಅನುಮಾನಕ್ಕೆ ಎಡೆಮಾಡಿಕೊಟ್ಟಿದೆ.

ಬಿಜೆಪಿ ಸ್ವತಂತ್ರ ಅಭ್ಯರ್ಥಿಗಳ ನಾಮಪತ್ರ ಹಿಂತೆಗೆಸುವ ಮೂಲಕ ತನ್ನ ಅಭ್ಯರ್ಥಿಯ ಗೆಲುವಿಗೆ ದಾರಿ ಮಾಡಿಕೊಟ್ಟಿತ್ತು ಎಂಬ ಮಾತುಗಳು ಆರಂಭದಲ್ಲಿ ಕೇಳಿ ಬಂದಿತ್ತು. ಇದನ್ನು ಬಿಜೆಪಿ ರಾಷ್ಟ್ರೀಯ ಕಾರ್ಯದರ್ಶಿ ವಿನೋದ್ ತಾವ್ಡೆ ಏಪ್ರಿಲ್ 23ರಂದು ಒಪ್ಪಿಕೊಂಡಿದ್ದಾರೆ. “ಸೂರತ್‌ನಲ್ಲಿ ಸ್ವತಂತ್ರ ಅಭ್ಯರ್ಥಿಗಳಿಗೆ ನಾಮಪತ್ರ ಹಿಂಪಡೆಯುವಂತೆ ನಾವು ಕೇಳಿಕೊಂಡಿದ್ದೆವು” ಎಂದು ತಾವ್ಡೆ ಹೇಳಿದ್ದಾರೆ.

ಅಭ್ಯರ್ಥಿಯನ್ನು ಉಚ್ಚಾಟಿಸಿದ ಕಾಂಗ್ರೆಸ್‌ :

ಬಿಜೆಪಿ ಅಭ್ಯರ್ಥಿಯ ಅವಿರೋಧವಾಗಿ ಆಯ್ಕೆಯಾಗುತ್ತಿದ್ದಂತೆ ಕಾಂಗ್ರೆಸ್ ಅಭ್ಯರ್ಥಿ ನೀಲೇಶ್ ಕುಂಭಾಣಿ ನಾಪತ್ತೆಯಾಗಿದ್ದರು. ಅವರು ಬಿಜೆಪಿ ಸೇರಲಿದ್ದಾರೆ ಎಂಬ ಮಾತುಗಳು ಕೇಳಿ ಬಂದಿತ್ತು. ಕೆಲ ವರದಿಗಳು ಬಿಜೆಪಿಯವರು ನೀಲೇಶ್ ಅವರನ್ನು ಅಪಹರಿಸಿದ್ದಾರೆಯೇ? ಎಂಬ ಅನುಮಾನ ವ್ಯಕ್ತಪಡಿಸಿತ್ತು. ಕುಂಭಾಣಿ ಬಿಜೆಪಿ ರೂಪಿಸಿದ ಸಂಚಿನ ಪಾಲುದಾರ ಎಂಬ ಆರೋಪಗಳೂ ಕೇಳಿ ಬಂದಿತ್ತು.

ಈ ಎಲ್ಲಾ ಗೊಂದಲಗಳ ನಡುವೆ ನೀಲೇಶ್ ಕುಂಭಾಣಿಯನ್ನು ಕಾಂಗ್ರೆಸ್ 6 ವರ್ಷಗಳ ಕಾಲ ಪಕ್ಷದಿಂದ ಉಚ್ಚಾಟಿಸಿದೆ. ನೀಲೇಶ್ ಕುಂಭಾಣಿ ನಾಮಪತ್ರ ಸಲ್ಲಿಕೆ ವೇಳೆ ಅತ್ಯಂತ ನಿರ್ಲಕ್ಷ್ಯವಹಿಸಿದ್ದಾರೆ ಅಥವಾ ಬಿಜೆಪಿ ಜೊತೆ ಸಂಬಂಧ ಹೊಂದಿದ್ದಾರೆ ಎಂದು ಕಾಂಗ್ರೆಸ್ ಹೇಳಿದೆ. “ನಿಮ್ಮ ನಾಮಪತ್ರದ ತಿರಸ್ಕಾರವು ನೀವು ಅತ್ಯಂತ ನಿರ್ಲಕ್ಷ್ಯವಹಿಸಿರುವುದು ಅಥವಾ ಬಿಜೆಪಿಯೊಂದಿಗೆ ಸಂಬಂಧವನ್ನು ಹೊಂದಿದ್ದೀರಿ ಎಂಬುದನ್ನು ಸ್ಪಷ್ಟಪಡಿಸುತ್ತದೆ. ಆದರೂ, ನ್ಯಾಯದ ತತ್ವಗಳಿಗೆ ಅನುಸಾರವಾಗಿ, ಶಿಸ್ತು ಸಮಿತಿಯು ಅದರ ಮುಂದೆ ನಿಮ್ಮ ವಾದವನ್ನು ಮಂಡಿಸಲು ಪಕ್ಷ ಸಾಕಷ್ಟು ಸಮಯವನ್ನು ಒದಗಿಸಿತ್ತು. ಆದರೆ, ನೀವು ಪಕ್ಷಕ್ಕೆ ಯಾವುದೇ ವಿವರಣೆ ನೀಡದೆ ಏಕಾಏಕಿ ನಾಪತ್ತೆಯಾಗಿರುವುದು ನಿಮ್ಮನ್ನು ಆರು ವರ್ಷಗಳ ಕಾಲ ಅಮಾನತುಗೊಳಿಸುವ ನಿರ್ಧಾರಕ್ಕೆ ಕಾರಣವಾಗಿದೆ” ಎಂದು ಶಿಸ್ತು ಸಮಿತಿ ಸದಸ್ಯ ಬಾಲುಭಾಯ್ ಪಟೇಲ್ ಸಹಿ ಹಾಕಿರುವ ಅಮಾನತು ಆದೇಶದಲ್ಲಿ ಹೇಳಲಾಗಿದೆ.

ವಿಡಿಯೋ ಸಂದೇಶವೊಂದರಲ್ಲಿ ಕುಂಭಾಣಿ ಅವರು ತಾನು ನಾಪತ್ತೆಯಾಗಿರುವುದನ್ನು ನಿರಾಕರಿಸಿದ್ದಾರೆ. “ಕಾಂಗ್ರೆಸ್‌ ಪಕ್ಷಕ್ಕೆ ನಾನು ಬದ್ಧನಾಗಿದ್ದೇನೆ. ನಾನು ಕಾಂಗ್ರೆಸ್‌ನ ನಿಷ್ಠಾವಂತ ಸದಸ್ಯನಾಗಿದ್ದೇನೆ ಮತ್ತು ಪಕ್ಷದಲ್ಲೇ ಉಳಿಯುತ್ತೇನೆ. ಪಕ್ಷದ ಉನ್ನತ ನಾಯಕತ್ವದ ಮೇಲೆ ನನಗೆ ಸಂಪೂರ್ಣ ನಂಬಿಕೆ ಇದೆ” ಎಂದು ಹೇಳಿದ್ದಾರೆ.

‘ಮ್ಯಾಚ್ ಫಿಕ್ಸಿಂಗ್’ ಎಂದ ಜೈರಾಮ್ ರಮೇಶ್

ಬಿಜೆಪಿ ಅಭ್ಯರ್ಥಿಯ ಅವಿರೋಧ ಆಯ್ಕೆಯ ಕುರಿತು ಕಾಂಗ್ರೆಸ್ ನಾಯಕ ಜೈರಾಮ್ ರಮೇಶ್ ಅವರು ತೀವ್ರ ಕಳವಳ, ಆತಂಕ ವ್ಯಕ್ತಪಡಿಸಿದ್ದಾರೆ. ಪ್ರಜಾಪ್ರಭುತ್ವ ಅಪಾಯದಲ್ಲಿದೆ ಎಂದಿದ್ದಾರೆ.

ಮೋದಿಯವರ ‘ಅನ್ಯಾಯ ಕಾಲ’ದಲ್ಲಿ ಎಂಎಸ್‌ಎಂಇ ಮಾಲೀಕರು ಮತ್ತು ಉದ್ಯಮಿಗಳು ಎದುರಿಸುತ್ತಿರುವ ಸಂಕಷ್ಟ ಮತ್ತು ಅವರ ಆಕ್ರೋಶ ಬಿಜೆಪಿಯನ್ನು ಯಾವ ಹಂತಕ್ಕೆ ಕೊಂಡೊಯ್ದಿದೆ ಎಂದರೆ, ಅವರು 1984ರಿಂದ ಲೋಕಸಭೆ ಚುನಾವಣೆಯಲ್ಲಿ ಸತತವಾಗಿ ಗೆಲ್ಲುತ್ತಾ ಬಂದಿರುವ ಸೂರತ್ ಕ್ಷೇತ್ರದಲ್ಲಿ ‘ಮ್ಯಾಚ್-ಫಿಕ್ಸ್’ ಮಾಡಲು ಪ್ರಯತ್ನಿಸಿದ್ದಾರೆ” ಎಂದು ಜೈರಾಮ್ ರಮೇಶ್ ಹೇಳಿದ್ದಾರೆ.

“ನಮ್ಮ ಚುನಾವಣೆಗಳು, ನಮ್ಮ ಪ್ರಜಾಪ್ರಭುತ್ವ, ಬಾಬಾಸಾಹೇಬ್ ಅಂಬೇಡ್ಕರ್ ಅವರ ಸಂವಿಧಾನ ಎಲ್ಲವೂ ಅಪಾಯದಲ್ಲಿದೆ. ಇದು ನಮ್ಮ ಜೀವಮಾನದ ಪ್ರಮುಖ ಚುನಾವಣೆ!” ಎಂದಿದ್ದಾರೆ.

ಇದನ್ನೂ ಓದಿ : ಬಿಜೆಪಿ ಅಭ್ಯರ್ಥಿಯ ಅವಿರೋಧ ಆಯ್ಕೆಗೆ ಕಾರಣವಾದ ನೀಲೇಶ್ ಕುಂಭಾನಿ ಕಾಂಗ್ರೆಸ್‌ನಿಂದ ಉಚ್ಛಾಟನೆ: ಸೂರತ್‌ನ ಕಾಂಗ್ರೆಸ್‌ ಅಭ್ಯರ್ಥಿಗಿತ್ತಾ ಬಿಜೆಪಿ ಜೊತೆ ಸಂಬಂಧ?

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಲೋಕಸಭೆ ಚುನಾವಣೆ: ಮುಸ್ಲಿಂ ಸಮುದಾಯಕ್ಕೆ ಕಡಿಮೆ ಪ್ರಾತನಿಧ್ಯ ನೀಡಿದ ರಾಜಕೀಯ ಪಕ್ಷಗಳು

0
ಲೋಕಸಭೆ ಚುನಾವಣೆಯಲ್ಲಿ ಅಭ್ಯರ್ಥಿಗಳ ಆಯ್ಕೆ ವಿಚಾರದಲ್ಲಿ 2019ಕ್ಕೆ ಹೋಲಿಕೆ ಮಾಡಿದರೆ ಮುಸ್ಲಿಂ ಸಮುದಾಯಕ್ಕೆ ಈ ಬಾರಿ ಕಡಿಮೆ ಪ್ರಾತಿನಿಧ್ಯ ನೀಡಿರುವುದು ಕಂಡು ಬಂದಿದೆ. ಪ್ರಮುಖ ರಾಷ್ಟ್ರೀಯ ಪಕ್ಷ ಬಿಜೆಪಿ ಕೇವಲ ಓರ್ವ ಮುಸ್ಲಿಂ...