Homeಮುಖಪುಟಕೇಂದ್ರದ ಜೊತೆ ಜಟಾಪಟಿ ನಡೆಸಿ ರಾಜ್ಯಕ್ಕೆ ಬರ ಪರಿಹಾರ ತಂದ ಸಿದ್ದರಾಮಯ್ಯ ಸರಕಾರ: 3,454 ಕೋಟಿ...

ಕೇಂದ್ರದ ಜೊತೆ ಜಟಾಪಟಿ ನಡೆಸಿ ರಾಜ್ಯಕ್ಕೆ ಬರ ಪರಿಹಾರ ತಂದ ಸಿದ್ದರಾಮಯ್ಯ ಸರಕಾರ: 3,454 ಕೋಟಿ ರೂ. ಬರ ಪರಿಹಾರ ಘೋಷಣೆ

- Advertisement -
- Advertisement -

ಬರ ಪರಿಹಾರದ ವಿಚಾರದಲ್ಲಿ ಕರ್ನಾಟಕ ರಾಜ್ಯ ಸರಕಾರ ಮತ್ತು ಬಿಜೆಪಿ ನೇತೃತ್ವದ ಕೇಂದ್ರ ಸರಕಾರದ ನಡುವಿನ ಜಟಾಪಟಿಯಲ್ಲಿ ಕೊನೆಗೂ ರಾಜ್ಯ ಸರಕಾರಕ್ಕೆ ಗೆಲುವಾಗಿದೆ. ಇದೀಗ 3,454 ಕೋಟಿ ರೂ. ಬರ ಪರಿಹಾರವನ್ನು ಕೇಂದ್ರ ಸರಕಾರ ರಾಜ್ಯಕ್ಕೆ ಬಿಡುಗಡೆ ಮಾಡಿದೆ.

ಕರ್ನಾಟಕಕ್ಕೆ ಕೇಂದ್ರ ಸರಕಾರ 3,454 ಕೋಟಿ ರೂ. ಬರ ಪರಿಹಾರ ಘೋಷಣೆ ಮಾಡಿದೆ. ಕಳೆದ ವರ್ಷ ಸೆಪ್ಟೆಂಬರ್​ನಲ್ಲಿ ರಾಜ್ಯ ಸರ್ಕಾರ ಕೇಂದ್ರಕ್ಕೆ ಬರ ಪರಿಹಾರಕ್ಕಾಗಿ 18,174 ಕೋಟಿ ಹಣ ಬೇಡಿಕೆ ಇಟ್ಟಿತ್ತು. ಆದರೆ ಕೇಂದ್ರ ಸರ್ಕಾರ ಬರ ಪರಿಹಾರ ಬಿಡುಗಡೆ ಮಾಡಿರಲಿಲ್ಲ.

ರಾಜ್ಯಕ್ಕೆ ಬರ ಪರಿಹಾರ ನೀಡುವಲ್ಲಿ ಮೋದಿ ಸರ್ಕಾರ ತಾರತಮ್ಯ ನೀತಿ ಅನುಸರಿಸುತ್ತಿದೆ ಎಂದು ಸಿಎಂ ಸಿದ್ದರಾಮಯ್ಯ ಸೇರಿ ಡಿಸಿಎಂ, ಮಂತ್ರಿಗಳು ಸೇರಿ ಕಾಂಗ್ರೆಸ್‌ ಪಕ್ಷದ ಮುಖಂಡರು, ಕಾರ್ಯಕರ್ತರು ಧರಣಿ ನಡೆಸಿದ್ದರು. ಬರ ಪರಿಹಾರ ಸಿಗದಿದ್ದಾಗ ರಾಜ್ಯ ಸರ್ಕಾರ ದೆಹಲಿಯಲ್ಲಿ ಕೂಡ ಪ್ರತಿಭಟನೆ ಮಾಡಿತ್ತು. ಈ ಪ್ರತಿಭಟನೆ ದೇಶದ ಗಮನವನ್ನು ಸೆಳೆದಿತ್ತು.

ಈ ಮಧ್ಯೆ ಕೇಂದ್ರ ಸರಕಾರದಿಂದ ರಾಜ್ಯಕ್ಕೆ ಯಾವುದೇ ಪರಿಹಾರ ಬಿಡುಗಡೆಗೆ ಬಾಕಿಯಿಲ್ಲ ಎಂದು ಕೇಂದ್ರ ಸಚಿವೆ ನಿರ್ಮಾಲಾ ಸೀತಾರಾಮನ್‌ ಹೇಳಿದ್ದರು, ನಾನು ರಾಜ್ಯದ ಎಂಪಿಯಾಗಿದ್ದು, ನನಗೆ‌ ಜವಾಬ್ದಾರಿ ಇದೆ ಎಂದು ಹೇಳಿದ್ದರು. ಆದರೆ ಕಾಂಗ್ರೆಸ್‌ ಸರಕಾರ ಸಚಿವರು ಹೇಳಿದ್ದ ಸುಳ್ಳನ್ನು ದಾಖಲೆ ಸಹಿತ ಬಯಲು ಮಾಡಿತ್ತು. ಇದಲ್ಲದೆ ಸುಪ್ರೀಂಕೋರ್ಟ್‌ನಲ್ಲಿ ಧಾವೆಯನ್ನು ಹೂಡಿತ್ತು.

ಕೇಂದ್ರದಿಂದ ರಾಜ್ಯಕ್ಕೆ ಬರ ಬೇಕಿದ್ದ ಬರ ಪರಿಹಾರದ 35,162 ಕೋಟಿ ಬಿಡುಗಡೆ ಮಾಡುವಂತೆ ಕೇಂದ್ರ ಸರಕಾರಕ್ಕೆ ನಿರ್ದೇಶನಕ್ಕೆ ಕೋರಿ ರಾಜ್ಯ ಸರಕಾರ ಸುಪ್ರೀಂಕೋರ್ಟ್‌ ಮೊರೆ ಹೋಗಿತ್ತು. ಈ ಕುರಿತು ಅರ್ಜಿ ವಿಚಾರಣೆ ನಡೆಸಿದ ಸುಪ್ರೀಂಕೋರ್ಟ್‌ ಈ ಕುರಿತ ವಿವಾದವನ್ನು ಸೌಹಾರ್ದಯುತವಾಗಿ ಬಗೆಹರಿಸುವಂತೆ ಕೇಂದ್ರ ಸರ್ಕಾರಕ್ಕೆ ಸೂಚಿಸಿತ್ತು. ಚುನಾವಣಾ ಆಯೋಗವು ಸಮಸ್ಯೆಯನ್ನು ನಿಭಾಯಿಸಲು ಕೇಂದ್ರಕ್ಕೆ ಅನುಮತಿ ನೀಡಿದೆ ಎಂದು ಕೇಂದ್ರ ಸರಕಾರವು ಇದೇ ವೇಳೆ ಸುಪ್ರೀಂಕೋರ್ಟ್‌ ಗಮನಕ್ಕೆ ತಂದಿತ್ತು. ಸಮಸ್ಯೆಯನ್ನು ಒಂದು ವಾರದೊಳಗೆ ಪರಿಹರಿಸುವಂತೆ ಸುಪ್ರೀಂಕೋರ್ಟ್‌ ಕೇಂದ್ರಕ್ಕೆ ಸೂಚಿಸಿತ್ತು.

ಐದು ತಿಂಗಳು ಕಾದರೂ ಕೇಂದ್ರ ಸರ್ಕಾರ ಬರ ಪರಿಹಾರ ಕೊಟ್ಟಿಲ್ಲ. ಹಾಗಾಗಿ ಅನಿವಾರ್ಯವಾಗಿ ಸುಪ್ರೀಂ ಕೋರ್ಟ್ ಮೊರೆ ಹೋಗಿದ್ದೇವೆ. ಸರ್ಕಾರದ ವಿರುದ್ದ ಸಂವಿಧಾನದ ವಿಧಿ 32ರಡಿ ನಾವು ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದೇವೆ. ನಮಗೆ ಸಿಗಬೇಕಾದ ಪರಿಹಾರ ಸಿಗಬೇಕು ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದರು.

ಅಕ್ಟೋಬರ್‌ನಲ್ಲಿ ಕೇಂದ್ರ ತಂಡ ರಾಜ್ಯಕ್ಕೆ ಬಂದು‌ ಬರ ಪರಿಶೀಲನೆ ನಡೆಸಿ ಕೇಂದ್ರಕ್ಕೆ ವರದಿ ನೀಡಿದೆ. ಈ ವರದಿ ಕೊಟ್ಟ ಒಂದು ತಿಂಗಳಲ್ಲಿ ರಾಜ್ಯಕ್ಕೆ ಬರ ಪರಿಹಾರ ಕೊಡುವ ಬಗ್ಗೆ ತೀರ್ಮಾನ ತೆಗೆದುಕೊಳ್ಳಬೇಕು ಎನ್ನುವುದು ನಿಯಮ. ಆದರೆ ಪರಿಹಾರವನ್ನು ಬಿಡುಗಡೆ ಮಾಡಿರಲಿಲ್ಲ. ಕಂದಾಯ ಸಚಿವ ಕೃಷ್ಣಬೈರೇಗೌಡ ಅವರು ದೆಹಲಿಗೆ ಹೋಗಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರನ್ನು ಭೇಟಿ ಮಾಡಿ ಪರಿಹಾರ ಬಿಡುಗಡೆಗೆ ಮನವಿ ಮಾಡಿದ್ದರು. ಬೆಂಗಳೂರಿನಲ್ಲಿ ಪ್ರಧಾನಿ ಮೋದಿಯನ್ನು ಸಿಎಂ ಭೇಟಿ ಮಾಡಿ ಪರಿಹಾರ ಬಿಡುಗಡೆಗೆ ಮನವಿ ಮಾಡಿದ್ದರು. ಆದರೆ ಪರಿಹಾರ ಬಿಡುಗಡೆ ಮಾಡಿರಲಿಲ್ಲ. ಇದೀಗ ಸುಪ್ರೀಂ ನಿರ್ದೇಶನದ ಬಳಿಕ ಕೇಂದ್ರ ಸರಕಾರ ರಾಜ್ಯಕ್ಕೆ ಬರ ಪರಿಹಾರ ಬಿಡುಗಡೆ ಮಾಡಿದೆ.

ಇದನ್ನು ಓದಿ; ಬಿಜೆಪಿ ಅಭ್ಯರ್ಥಿಯ ಅವಿರೋಧ ಆಯ್ಕೆಗೆ ಕಾರಣವಾದ ನೀಲೇಶ್ ಕುಂಭಾನಿ ಕಾಂಗ್ರೆಸ್‌ನಿಂದ ಉಚ್ಛಾಟನೆ: ಸೂರತ್‌ನ ಕಾಂಗ್ರೆಸ್‌ ಅಭ್ಯರ್ಥಿಗಿತ್ತಾ ಬಿಜೆಪಿ ಜೊತೆ ಸಂಬಂಧ?

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read