ಬೆಳಗಾವಿಯ ಸುವರ್ಣ ವಿಧಾನಸೌಧದಲ್ಲಿ ನಡೆಯುತ್ತಿರುವ ಚಳಿಗಾಲ ಅಧಿವೇಶನದ ಕೊನೆಯ ದಿನದ ವಿಧಾನ ಪರಿಷತ್ ಕಲಾಪದಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಲಕ್ಷ್ಮಿ ಹೆಬ್ಬಾಳಕರ ಅವರ ಕುರಿತು ‘ಆಕ್ಷೇಪಾರ್ಹ’ ಪದ ಬಳಕೆ ಮಾಡಿದ ಆರೋಪದಲ್ಲಿ, ವಿಧಾನ ಪರಿಷತ್ ಬಜೆಪಿ ಸದಸ್ಯ ಸಿ.ಟಿ. ರವಿ ಅವರನ್ನು ಹಿರೇಬಾಗೇವಾಡಿ ಪೊಲೀಸರು ಬಂಧಿಸಿದ್ದಾರೆ.
ಲಕ್ಷ್ಮಿ ಹೆಬ್ಬಾಳ್ಕರ್ ಬೆಂಬಲಿಗರ ಜೊತೆಗಿನ ವಾಗ್ವಾದದ ಬಳಿಕ ಸುವರ್ಣ ಸೌಧದಲ್ಲೇ ಧರಣಿ ಕುಳಿತಿದ್ದ ಅವರನ್ನು ಬಂಧಿಸಿದ ಪೊಲೀಶರು, ಹೆಗಲ ಮೇಲೆ ಹೊತ್ತುಕೊಂಡು ಬಂದು ಜೀಪಿನಲ್ಲಿ ಕೂರಿಸಕೊಂಡು ಹಿರೇಬಾಗೇವಾಡಿ ಠಾಣೆಗೆ ಕರೆದೊಯ್ದರು.
“ಸದನದಲ್ಲಿ ಸಿಟಿ ರವಿ ತಮ್ಮ ಕಡೆಗೆ ನುಗ್ಗಿ ಬಂದು, ಸುಮಾರು 10 ಬಾರಿ ಆ ‘ಆಕ್ಷೇಪಾರ್ಹ’ ಪದ ಬಳಸಿದರು. ಅಶ್ಲೀಲವಾಗಿ ಸನ್ನೆ ಕೂಡ ಮಾಡಿ, ಮಾನಭಂಗ ಮಾಡಿದ್ದಾರೆ’ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.
ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಅಂಬೇಡ್ಕರ್ ಕುರಿತು ನೀಡಿದ ಹೇಳಿಕೆ ಸಂಬಂಧ ವಿಧಾನ ಪರಿಷತ್‌ನಲ್ಲಿ ಗುರುವಾರ ಬೆಳಿಗ್ಗೆ ಕಾಂಗ್ರೆಸ್ ಸದಸ್ಯರು ಪ್ರತಿಭಟನೆ ನಡೆಸುತ್ತಿದ್ದರು. ಆಗ ಸಿ.ಟಿ.ರವಿ ಅವರು ಲಕ್ಷ್ಮಿ ಹೆಬ್ಬಾಳಕರ ಅವರ ಕುರಿತು ಆಕ್ಷೇಪಾರ್ಹ ಪದ ಬಳಸಿ ನಿಂದಿಸಿದ್ದಾರೆ ಎಂದು ಆರೋಪಿಸಲಾಗಿದೆ.
ಸಿ.ಟಿ.ರವಿ ಅವರನ್ನು ಸದನದಿಂದ ಅಮಾನತುಗೊಳಿಸಬೇಕು. ಅವರ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸಿ ಬಂಧಿಸಬೇಕು ಎಂದು ಕಾಂಗ್ರೆಸ್ ಸದಸ್ಯರು ಆಗ್ರಹಿಸಿದ್ದಾರೆ.
ಕಣ್ಣೀರಿಟ್ಟ ಹೆಬ್ಬಾಳ್ಕರ್
ಬಿಜೆಪಿಯ ಸಿ.ಟಿ. ರವಿ ಅವರ ಮಾತು ಕೇಳಿ ಲಕ್ಷ್ಮಿ ಹೆಬ್ಬಾಳ್ಕರ್ ಕೆಂಡಾಮಂಡಲವಾಗಿದ್ದು, ಇದರಿಂದ ತಮಗಾದ ಅವಮಾನ ತಡೆದುಕೊಳ್ಳಲಾಗದೇ ಕಣ್ಣಿರು ಹಾಕುತ್ತಾ ಪರಿಷತ್ತಿನಿಂದ ಹೊರಗೆ ಹೋಗಿದ್ದಾರೆ ಎಂದು ವರದಿಯಾಗಿದೆ. ಹೆಬ್ಬಾಳ್ಕರ್ ಮಾತಿಗೆ ಕಾಂಗ್ರೆಸ್ ಸದಸ್ಯರು ಧ್ವನಿ ಗೂಡಿಸಿದ್ದು, ಹತ್ತು ಬಾರಿ ಅಸಂವಿಧಾನಿಕ ಪದ ಬಳಸಿದ್ದಾರೆ ಎಂದು ಹೆಬ್ಬಾಳ್ಕರ್ ಆರೋಪ ಮಾಡಿದ್ದಾರೆ.
ಲಕ್ಷ್ಮಿ ಹೆಬ್ಬಾಳ್ಕರ್ ಬಗ್ಗೆ ಸಿಟಿ ರವಿ ಅಶ್ಲೀಲ ಪದ ಬಳಸಿದ್ದಾರೆ ಎಂದು ಆಕ್ರೋಶಗೊಂಡ ಕಾಂಗ್ರೆಸ್ ಸದಸ್ಯರೆಲ್ಲರೂ ಸದನದಲ್ಲಿ ಕಿಡಿ ಕಾರಿದ್ದಾರೆ. ಸಹ ಸದಸ್ಯರನ್ನು ಕರೆತಂದು ಲಕ್ಷ್ಮಿ ಹೆಬ್ಬಾಳ್ಕರ್ ಸಭಾಪತಿ ಹೊರಟ್ಟಿ ಅವರಿಗೆ ದೂರು ನೀಡಿದ್ದಾರೆ.
ಇದನ್ನೂ ಓದಿ; ಸದನದಲ್ಲೆ ಅಶ್ಲೀಲವಾಗಿ ನಿಂದಿಸಿದ ಸಿಟಿ ರವಿಗೆ ಮಂತ್ರಿ ಲಕ್ಷ್ಮಿ ಹೆಬ್ಬಾಲ್ಕರ್ ಅವರ ಬೆಂಬಲಿಗರಿಂದ ಹಲ್ಲೆ


