ವಸಾಹತುಗಾರರು ಆಕ್ರಮಿಸಿರುವ ಪ್ಯಾಲೆಸ್ತೀನ್‌ನ ಗಾಝಾಕ್ಕೆ ಆಹಾರ, ನೀರು ಮತ್ತು ವೈದ್ಯಕೀಯ ಸಾಮಗ್ರಿಗಳೊಂದಿಗೆ ಹೊರಟಿರುವ ‘ಫ್ರೀಡಂ ಫ್ಲೋಟಿಲ್ಲಾ ಒಕ್ಕೂಟ’ದ ನೆರವು ಹಡಗು ‘ಮದ್ಲೀನ್’ ಮೇಲೆ ಸೋಮವಾರ ತಡರಾತ್ರಿ ಕಣ್ಗಾವಲು ಡ್ರೋನ್ ಕಂಡುಬಂದಿದೆ ಎಂದು ವರದಿಯಾಗಿದೆ. ಈ ಘಟನೆ ಗ್ರೀಕ್ ಪ್ರಾದೇಶಿಕ ಜಲಮಾರ್ಗದಿಂದ 68 ಕಿಲೋಮೀಟರ್ ದೂರದಲ್ಲಿ ಸಂಭವಿಸಿದೆ ಎಂದು ಫ್ರೀಡಂ ಫ್ಲೋಟಿಲ್ಲಾ ಒಕ್ಕೂಟ ಹೇಳಿದೆ. ಮದ್ಲೀನ್ ಎಲ್ಲಿದೆ ಎಂದು ಇಲ್ಲಿ ಕ್ಲಿಕ್ ಮಾಡಿ ನೋಡಬಹುದು. #AllEyesOnDeck
ಹೆಲೆನಿಕ್ ಕೋಸ್ಟ್ ಗಾರ್ಡ್ ಹೆರಾನ್ ಎಂದು ಗುರುತಿಸಲಾದ ಡ್ರೋನ್ ಈಗ ಹಡಗಿನ ಮೇಲಿನಿಂದ ಹೊರಟಿದೆ ಎಂದು ಒಕ್ಕೂಟ ಹೇಳಿಕೆಯಲ್ಲಿ ತಿಳಿಸಿದ್ದು, ಮದ್ಲೀನ್ ಹಡಗಿನಲ್ಲಿರುವ ಎಲ್ಲಾ 12 ವ್ಯಕ್ತಿಗಳು ಸುರಕ್ಷಿತವಾಗಿದ್ದಾರೆ ಎಂದು ತಿಳಿಸಿದೆ. ಅದಾಗ್ಯೂ, ಮದ್ಲೀನ್ ಹಡಗು ಇಟಲಿಯ ಸಿಸಿಲಿಯಿಂದ ಹೊರಟು ನಾಲ್ಕನೇ ದಿನದ ಸೂರ್ಯೋದಯವನ್ನು ಕಂಡಿದೆ ಎಂದು ಹಡಗಿನಲ್ಲಿ ಪ್ರಯಾಣಿಸುತ್ತಿರುವ ಬ್ರೆಜಿಲ್‌ನ ಥಿಯಾಗೊ ಅವಿಲಾ ಅವರು ಬುಧವಾರ ಬೆಳಿಗ್ಗೆ (ಭಾರತೀಯ ಕಾಲಮಾನ) ಹೇಳಿದ್ದಾರೆ. #AllEyesOnDeck
View this post on Instagram
“ನಮ್ಮ ಲೈವ್ ಅಪ್‌ಡೇಟ್‌ಗಳನ್ನು ಹಂಚಿಕೊಂಡ ಮತ್ತು ಮದ್ಲೀನ್‌ನಲ್ಲಿರುವವರನ್ನು ಬೆಂಬಲಿಸಿದ ಎಲ್ಲರಿಗೂ ಧನ್ಯವಾದಗಳು. ಇದು ನಾಗರಿಕ ಪ್ರತಿರೋಧದ ಶಾಂತಿಯುತ ಕ್ರಿಯೆಯಾಗಿದೆ. ಮದ್ಲೀನ್‌ನಲ್ಲಿರುವ ಎಲ್ಲಾ ಸ್ವಯಂಸೇವಕರು ಮತ್ತು ಸಿಬ್ಬಂದಿ ಅಹಿಂಸೆಯಲ್ಲಿ ತರಬೇತಿ ಪಡೆದಿದ್ದಾರೆ.” ಎಂದು ಒಕ್ಕೂಟ ಹೇಳಿದೆ. ಅದಾಗ್ಯೂ, ನಂತರ ಮತ್ತೊಂದು ಡ್ರೋನ್ ಹಡಗಿನ ಮೇಲೆ ಹಾರಾಡುತ್ತಿರುವುದು ಕಂಡುಬಂದಿದೆ ಎಂದು ವರದಿಯಾಗಿದೆ.
ಭಾನುವಾರ ಸಿಸಿಲಿಯಿಂದ ಹೊರಟ ಮದ್ಲೀನ್, ಬೇಬಿ ಫಾರ್ಮುಲಾ, ನ್ಯಾಪ್‌ಕಿನ್, ಹಿಟ್ಟು, ಅಕ್ಕಿ, ನೈರ್ಮಲ್ಯ ಉತ್ಪನ್ನಗಳು, ನೀರಿನ ಫಿಲ್ಟರ್‌ಗಳು ಮತ್ತು ವೈದ್ಯಕೀಯ ಸರಬರಾಜುಗಳನ್ನು ಒಳಗೊಂಡಂತೆ ಮಾನವೀಯ ಸಹಾಯವನ್ನು ಹೊತ್ತೊಯ್ಯುತ್ತಿದೆ. ಈ ಹಡಗು ಗಾಝಾದ ಮೇಲೆ ವಸಾಹತುಗಾರ ಇಸ್ರೇಲ್‌ನ ನೌಕಾ ದಿಗ್ಬಂಧನವನ್ನು ಮುರಿಯಲು ಫ್ರೀಡಂ ಫ್ಲೋಟಿಲ್ಲಾ ಒಕ್ಕೂಟವು ಆಯೋಜಿಸಿರುವ ಅಂತರರಾಷ್ಟ್ರೀಯ ಪ್ರಯತ್ನದ ಭಾಗವಾಗಿ ಪ್ರಯಾಣಿಸುತ್ತಿದೆ.
View this post on Instagram
ಯಾವುದೇ ಅಡೆತಡೆಗಳಿಲ್ಲದಿದ್ದರೆ 2,000 ಕಿಮೀ (1,250-ಮೈಲಿ) ಪ್ರಯಾಣವು ಏಳು ದಿನಗಳನ್ನು ತೆಗೆದುಕೊಳ್ಳುವ ನಿರೀಕ್ಷೆಯಿದೆ.
“2014 ರಲ್ಲಿ ಗಾಝಾದ ಮೊದಲ ಮತ್ತು ಏಕೈಕ ಮೀನುಗಾರ ಮಹಿಳೆಯಾದ ‘ಮದ್ಲೀನ್’ ಅವರ ಹೆಸರನ್ನು ಹಡಗಿಗೆ ಇಡಲಾಗಿದ್ದು, ಪ್ಯಾಲೆಸ್ತೀನಿ ಹೋರಾಟದ ಅವಿಶ್ರಾಂತ ಮನೋಭಾವ ಮತ್ತು ಇಸ್ರೇಲ್‌ನ ಸಾಮೂಹಿಕ ಶಿಕ್ಷೆ ಮತ್ತು ಉದ್ದೇಶಪೂರ್ವಕ ಹಸಿವು ನೀತಿಗಳ ಹೇರಿಕೆಗಳ ವಿರುದ್ಧ ಬೆಳೆಯುತ್ತಿರುವ ಜಾಗತಿಕ ಪ್ರತಿರೋಧವನ್ನು ಇದು ಸಂಕೇತಿಸುತ್ತದೆ” ಎಂದು ಫ್ರೀಡಂ ಫ್ಲೋಟಿಲ್ಲಾ ಒಕ್ಕೂಟ ಹೇಳಿದೆ.
ಸ್ವೀಡಿಷ್ ಮೂಲದ ಪರಿಸರ ಹೋರಾಟಗಾರ್ತಿ ಗ್ರೇಟಾ ಥನ್‌ಬರ್ಗ್ ಅವರೊಂದಿಗೆ ಜರ್ಮನಿಯ ಯಾಸೆಮಿನ್ ಅಕಾರ್, ಬ್ರೆಜಿಲ್‌ನ ಥಿಯಾಗೊ ಅವಿಲಾ, ಫ್ರಾನ್ಸ್‌ನ ಒಮರ್ ಫಯಾದ್, ರಿಮಾ ಹಸನ್, ಬ್ಯಾಪ್ಟಿಸ್ಟ್ ಆಂಡ್ರೆ, ಪ್ಯಾಸ್ಕಲ್ ಮೌರಿಯರಾಸ್, ಯಾನಿಸ್ ಮಹಮ್ದಿ, ಟರ್ಕಿಯ ಶುವಾಯ್ಬ್ ಒರ್ಡು, ರೆವಾ ವಿಯಾರ್ಡ್, ಸ್ಪೇನ್‌ನ ಸೆರ್ಗಿಯೊ ಟೊರಿಬಿಯೊ ಮತ್ತು ನೆದರ್ಲ್ಯಾಂಡ್ಸ್‌ನ ಮಾರ್ಕೊ ವ್ಯಾನ್ ರೆನ್ನೆಸ್ ಹಡಗಿನಲ್ಲಿ ಇದ್ದಾರೆ.
“ಈ ಕಾರ್ಯಾಚರಣೆ ಎಷ್ಟೇ ಅಪಾಯಕಾರಿಯಾಗಿದ್ದರೂ, ನರಮೇಧಕ್ಕೆ ಒಳಗಾಗುತ್ತಿರುವ ಜೀವಗಳ ಮುಂದೆ ಇಡೀ ಪ್ರಪಂಚದ ಮೌನದಷ್ಟು ಅಪಾಯಕಾರಿ ಅಲ್ಲ” ಎಂದು ಪರಿಸರ ಹೋರಾಟಗಾರ್ತಿ ಗ್ರೇಟಾ ಥನ್‌ಬರ್ಗ್ ಅವರು ಹೇಳಿದ್ದಾರೆ.
#FreedomFlotilla #BreakTheSiege #AllEyesOnDeck pic.twitter.com/n5yHQ2xdOj
— Freedom Flotilla Coalition (@GazaFFlotilla) June 3, 2025
ಗಾಝಾಗೆ ನೆರವು ತಡೆಯಲು ತಾನು ‘ಸನ್ನದ್ಧ’ ಎಂದ ಇಸ್ರೇಲ್
ಈ ಮಧ್ಯೆ, ಗಾಝಾ ಕಡೆಗೆ ಸಾಗುತ್ತಿರುವ ಮದ್ಲೀನ್ ಹಡಗನ್ನು ತಡೆಯಲು ತಾನು ಸಿದ್ಧ ಎಂದು ಪ್ಯಾಲೆಸ್ತೀನ್ ಅನ್ನು ಅಕ್ರಮವಾಗಿ ವಸಾಹತು ಮಾಡಿರುವ ಇಸ್ರೇಲ್ ಸೇನೆ ಹೇಳಿದೆ. ಇಸ್ರೇಲ್‌ನ ಕ್ರೂರ ಹತ್ಯಾಕಾಂಡದ ನಡುವೆಯು ಗಾಝಾದಲ್ಲಿ ನಡೆಯುತ್ತಿರುವ ಮಾನವೀಯ ದುರಂತದ ಬಗ್ಗೆ ಹೆಚ್ಚುತ್ತಿರುವ ಅಂತರರಾಷ್ಟ್ರೀಯ ಆತಂಕದ ನಡೆಯುವೆಯು ಇಸ್ರೇಲ್ ಈ ಹೇಳಿಕೆ ನೀಡಿದೆ.
ಇಸ್ರೇಲಿ ಸೇನಾ ವಕ್ತಾರ ಬ್ರಿಗೇಡಿಯರ್ ಜನರಲ್ ಎಫೀ ಡೆಫ್ರಿನ್ ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡುತ್ತಾ, “ಕಡಲು ಸೇರಿದಂತೆ ಎಲ್ಲಾ ರಂಗಗಳಲ್ಲಿ ಮಿಲಿಟರಿ ಕಾರ್ಯನಿರ್ವಹಿಸಲು ಸೇನೆ ಸಿದ್ಧವಾಗಿದೆ” ಎಂದು ಹೇಳಿದ್ದಾರೆ. ಹಡಗನ್ನು ನೇರವಾಗಿ ಹೆಸರಿಸದಿದ್ದರೂ,”ನಾವು ಸಿದ್ಧರಿದ್ದೇವೆ… ನಾವು ಅದಕ್ಕೆ ತಕ್ಕಂತೆ ಕಾರ್ಯನಿರ್ವಹಿಸುತ್ತೇವೆ. ನೌಕಾಪಡೆಯು ಇತ್ತೀಚಿನ ವರ್ಷಗಳಲ್ಲಿ ಅನುಭವವನ್ನು ಗಳಿಸಿದೆ” ಎಂದು ಅವರು ಹೇಳಿದ್ದಾರೆ.
ಇದಕ್ಕೆ ಫ್ರೀಡಂ ಫ್ಲೋಟಿಲ್ಲಾ ಒಕ್ಕೂಟವು ಕಾರ್ಯಾಚರಣೆಯ ಶಾಂತಿಯುತ ಸ್ವರೂಪವನ್ನು ಪುನರುಚ್ಚರಿಸುವ ಮೂಲಕ ಪ್ರತಿಕ್ರಿಯಿಸಿದೆ. “ಒಟ್ಟಾಗಿ, ನಾವು ಗಾಝಾಗೆ ಜನರ ಸಮುದ್ರ ಕಾರಿಡಾರ್ ಅನ್ನು ತೆರೆಯಬಹುದು” ಎಂದು ಅದು ಎಕ್ಸ್‌ನಲ್ಲಿ ಹೇಳಿದೆ.
ಇಸ್ರೇಲ್ ಮುತ್ತಿಗೆ ಹಾಕಿರುವ ಗಾಝಾದಲ್ಲಿ ಮೇ ತಿಂಗಳಿನಿಂದ ಸಂಪೂರ್ಣವಾಗಿ ಕ್ಷಾಮವನ್ನು ಎದುರಿಸುತ್ತಿದೆ ಎಂದು ವಿಶ್ವಸಂಸ್ಥೆ ಎಚ್ಚರಿಸಿದೆ. ಅಲ್ಲಿಗೆ ಆಹಾರ ಮತ್ತು ಇತರ ಸರಬರಾಜುಗಳ ಹರಿವನ್ನು ಇಸ್ರೇಲ್ ನಿರಂತರ ಅಡ್ಡಿಪಡಿಸುತ್ತಿದೆ.
2023ರ ಅಕ್ಟೋಬರ್ ತಿಂಗಳಿನಿಂದ ಇಸ್ರೇಲ್ ಸೇನೆಯು ಗಾಝಾದಲ್ಲಿ ನರಮೇಧವನ್ನು ನಡೆಸುತ್ತಿದೆ. ಈ ವರೆಗೆ 54,470 ಕ್ಕೂ ಹೆಚ್ಚು ಪ್ಯಾಲೆಸ್ತೀನಿಯರು ಹತ್ಯೆಯಾಗಿದ್ದಾರೆ ಎಂದು ವರದಿಯಾಗಿದ್ದು, ಅವರಲ್ಲಿ ಹೆಚ್ಚಿನವರು ಮಹಿಳೆಯರು ಮತ್ತು ಮಕ್ಕಳು ಇದ್ದಾರೆ. ಪ್ಯಾಲೆಸ್ಟೀನ್‌ನ ಅಧಿಕೃತ WAFA ಸುದ್ದಿ ಸಂಸ್ಥೆಯ ಪ್ರಕಾರ, ಸುಮಾರು 11,000 ಪ್ಯಾಲೆಸ್ತೀನಿಯನ್ನರು ನಾಶವಾದ ಮನೆಗಳ ಅವಶೇಷಗಳ ಅಡಿಯಲ್ಲಿ ಹೂತುಹೋಗಿದ್ದಾರೆ ಎಂದು ಶಂಕಿಸಲಾಗಿದೆ.
ಆದಾಗ್ಯೂ, ನಿಜವಾದ ಸಾವಿನ ಸಂಖ್ಯೆ ಗಾಝಾ ಅಧಿಕಾರಿಗಳು ವರದಿ ಮಾಡಿದ್ದಕ್ಕಿಂತ ತೀವ್ರ ಹೆಚ್ಚಾಗಿದ್ದು, ಸುಮಾರು 2 ಲಕ್ಷ ಜನರು ಸಾವಿಗೀಡಾಗಿದ್ದಾರೆ ಎಂದು ತಜ್ಞರು ಅಂದಾಜಿಸಿದ್ದಾರೆ. ನರಮೇಧದ ಅವಧಿಯಲ್ಲಿ, ಇಸ್ರೇಲ್ ಹೆಚ್ಚಿನ ಪ್ರದೇಶವನ್ನು ನಾಶಮಾಡಿದ್ದು, ಪ್ರಾಯೋಗಿಕವಾಗಿ ಅಲ್ಲಿನ ಎಲ್ಲಾ ಜನರನ್ನು ಸ್ಥಳಾಂತರಿಸಿದೆ. 20 ಲಕ್ಷಕ್ಕೂ ಹೆಚ್ಚು ಜನರು ವಾಸಿಸುವ ಗಾಝಾ ಪ್ರದೇಶದಲ್ಲಿ ಸನ್ನಿಹಿತವಾದ ಕ್ಷಾಮದ ಬಗ್ಗೆ ನೆರವು ಸಂಸ್ಥೆಗಳು ಎಚ್ಚರಿಸುತ್ತಲೇ ಇವೆ.
ನವೆಂಬರ್‌ನಲ್ಲಿ, ಅಂತರರಾಷ್ಟ್ರೀಯ ಕ್ರಿಮಿನಲ್ ನ್ಯಾಯಾಲಯವು ಇಸ್ರೇಲಿ ಪ್ರಧಾನಿ ಬೆಂಜಮಿನ್ ನೆತನ್ಯಾಹು ಮತ್ತು ಮಾಜಿ ರಕ್ಷಣಾ ಸಚಿವ ಯೋವ್ ಗ್ಯಾಲಂಟ್ ವಿರುದ್ಧ ಗಾಝಾದಲ್ಲಿ ಯುದ್ಧ ಅಪರಾಧಗಳು ಮತ್ತು ಮಾನವೀಯತೆಯ ವಿರುದ್ಧದ ಅಪರಾಧಗಳಿಗಾಗಿ ಬಂಧನ ವಾರಂಟ್‌ಗಳನ್ನು ಹೊರಡಿಸಿದೆ. #AllEyesOnDeck
ಇಲ್ಲಿ ಕ್ಲಿಕ್ ಮಾಡಿ
ಇದನ್ನೂಓದಿ: All eyes on Madleen | ನೆರವು ಹೊತ್ತು ಗಾಝಾದತ್ತ ‘ಮದ್ಲೀನ್’ ಹಡಗು; ಇಸ್ರೇಲ್‌ನ ನೌಕಾ ದಿಗ್ಬಂಧನ ಮುರಿಯಲಿದೆಯೆ!
All eyes on Madleen | ನೆರವು ಹೊತ್ತು ಗಾಝಾದತ್ತ ‘ಮದ್ಲೀನ್’ ಹಡಗು; ಇಸ್ರೇಲ್‌ನ ನೌಕಾ ದಿಗ್ಬಂಧನ ಮುರಿಯಲಿದೆಯೆ!
ಬಿಹಾರ | ಇಂಡಿಯಾ ಮೈತ್ರಿಗೆ ಸೇರಲು ಮುಂದಾದ ಎಐಎಂಐಎಂ; ಎಡಪಕ್ಷಗಳಿಂದ ತೀವ್ರ ವಿರೋಧ

