Homeಅಂತರಾಷ್ಟ್ರೀಯಅಫ್ಘಾನಿಸ್ತಾನದಲ್ಲಿ ಮೈತ್ರಿಗಳು: ಇಲ್ಲಿಂದ ಮುಂದೇನು?

ಅಫ್ಘಾನಿಸ್ತಾನದಲ್ಲಿ ಮೈತ್ರಿಗಳು: ಇಲ್ಲಿಂದ ಮುಂದೇನು?

- Advertisement -
- Advertisement -

ಅಫ್ಘಾನಿಸ್ತಾನದ ಆಡಳಿತವನ್ನು ತಾಲಿಬಾನ್ ಮರಳಿ ಪಡೆದಿದೆ. ಈ ಹೊತ್ತಿನಲ್ಲಿ ಅಫ್ಘಾನಿಸ್ತಾನದ ಹೊಸ ಪ್ರಭುತ್ವದ ಬಗ್ಗೆ ಭಾರತದ ಮುಂದಿನ ಹೆಜ್ಜೆಗಳು ಹೇಗಿರಬೇಕು ಎಂದು ಕೇಳಿಕೊಳ್ಳಬಹುದು. ಭಾರತವು ಆರಂಭದಲ್ಲಿ ಅಫ್ಘಾನಿಸ್ತಾನದೊಂದಿಗೆ ಬಹಳ ಆತ್ಮೀಯ ಸಂಬಂಧವನ್ನು ಹೊಂದಿತ್ತು. ಆದರೆ, ಅಫ್ಘಾನಿಸ್ತಾನದಲ್ಲಿ ತಾಲಿಬಾನ್ ತಲೆ ಎತ್ತುತ್ತಿದ್ದಂತೆ, ಭಾರತದ ನಿಲುವು ಹೆಚ್ಚು ತಂತ್ರಗಾರಿಕೆಯತ್ತ ತಿರುಗಿದೆ.

ಅಫ್ಘಾನಿಸ್ತಾನದಲ್ಲಿ ಭಾರತದ ಮಿತ್ರರು!

ತಾಲಿಬಾನ್ ಆಕ್ರಮಣಕ್ಕೂ ಮೊದಲು, ಅಫ್ಘಾನಿಸ್ತಾನದ ಬಿಡುಗಡೆಗಾಗಿ ಯುನೈಟೆಡ್ ಇಸ್ಲಾಮಿಕ್ ಫ್ರಂಟ್ ಅಥವಾ ಉತ್ತರ ಮೈತ್ರಿಕೂಟವನ್ನು (ನದರನ್ ಅಲಾಯನ್ಸ್) ಭಾರತ ಬೆಂಬಲಿಸಿತ್ತು. ಉತ್ತರ ಮೈತ್ರಿಕೂಟವು ತಾಲಿಬಾನ್ ವಿರುದ್ಧ ಹೋರಾಡಿದ ತುಕಡಿಗಳ ಒಂದು ಸಡಿಲವಾದ ಒಕ್ಕೂಟವಾಗಿತ್ತು. ಅಫ್ಘಾನಿಸ್ತಾನದ ಮೇಲೆ ಅಮೆರಿಕದ ಆಕ್ರಮಣಕ್ಕೂ ಮುನ್ನ ಉತ್ತರ ಮೈತ್ರಿಕೂಟವು (ನದರನ್ ಅಲಿಯನ್ಸ್) ಉತ್ತರ ಮತ್ತು ಪೂರ್ವ ಗಡಿಗಳಲ್ಲಿ ತನ್ನ ಪ್ರಾಬಲ್ಯ ಹೊಂದಿತ್ತು. ತಾಲಿಬಾನ್ ಕಾಬೂಲ್‌ಅನ್ನು ವಶಪಡಿಸಿಕೊಂಡ ನಂತರ ಮತ್ತು 1996ರಲ್ಲಿ ಉತ್ತರ ಮೈತ್ರಿಕೂಟವು ಒಗ್ಗೂಡಿ ಅಫ್ಘಾನಿಸ್ತಾನದ ಆಡಳಿತಗಾರರಾಗಿ ತಮ್ಮನ್ನು ತಾವು ಸ್ಥಾಪಿಸಿಕೊಂಡಿತು.

ತಾಲಿಬಾನ್ ಅಧಿಕಾರಕ್ಕೇರುವ ಮೊದಲು, ಈಗ ಉತ್ತರ ಮೈತ್ರಿಕೂಟದಲ್ಲಿರುವ ಅನೇಕರು ಪರಸ್ಪರ ವಿರೋಧಿಗಳಾಗಿದ್ದರು ಮತ್ತು ಕಾದಾಡುತ್ತಿದ್ದರು. ಅವರು ತಮ್ಮ ಸಾಮಾನ್ಯ ಶತ್ರುವಿನ ವಿರುದ್ಧ ಹೋರಾಡಲು ಒಟ್ಟುಗೂಡಿದರು. ಉತ್ತರ ಮೈತ್ರಿಕೂಟವು ಹೆಚ್ಚಾಗಿ ಜನಾಂಗೀಯ ಅಲ್ಪಸಂಖ್ಯಾತರನ್ನು ಒಳಗೊಂಡಿತ್ತು. ವಿಶೇಷವಾಗಿ ತಾಜಿಕ್‌ಗಳು ಮತ್ತು ಉಜ್ಬೆಕ್‌ಗಳು. ಅಂದಾಜುಗಳು ಬದಲಾಗುತ್ತಿದ್ದರೂ, ಅಮೆರಿಕದ ಆಕ್ರಮಣಕ್ಕೂ ಮೊದಲು ದೇಶದ ಹತ್ತನೇ ಒಂದು ಭಾಗಕ್ಕಿಂತಲೂ ಕಡಿಮೆ ಭಾಗವನ್ನು ಉತ್ತರ ಮೈತ್ರಿಕೂಟ ನಿಯಂತ್ರಿಸುತ್ತಿತ್ತು.

ಅಫ್ಘಾನಿಸ್ತಾನದಲ್ಲಿ ಇತರ ದೇಶಗಳು ಹೇಗೆ ತಮ್ಮ ಯುದ್ಧಗಳನ್ನು ನಡೆಸಿದವು?

ಅಫ್ಘಾನಿಸ್ತಾನವು ಅನೇಕ ಶಕ್ತಿಗಳ ನಡುವಿನ ಶೀತಲ ಸಮರಗಳ ತಾಣವಾಗಿ ಬದಲಾಗಿ ದಶಕಗಳಾಗಿವೆ. ಭಾರತ ಮತ್ತು ಪಾಕಿಸ್ತಾನ, ಇರಾನ್ ಮತ್ತು ಸೌದಿ ಅರೇಬಿಯಾ, ರಷ್ಯಾ ಮತ್ತು ಅಮೆರಿಕಗಳು ಪರೋಕ್ಷವಾಗಿ 2001 ರವರೆಗೆ, ಅಮೆರಿಕ ತಾಲಿಬಾನಿನ ಮೇಲೆ ಯುದ್ಧ ಘೋಷಿಸಿ, ಆಫ್ಘಾನಿಸ್ತಾನವನ್ನು ತನ್ನ ತೆಕ್ಕೆಗೆ ತೆಗೆದುಕೊಳ್ಳುವುದಕ್ಕಿಂತ ಮೊದಲು, ಅಲ್ಲಿ ಪರಸ್ಪರ ಯುದ್ಧ ನಡೆಸಿವೆ. ಅಮೆರಿಕನ್ನರು ಉತ್ತರ ಮೈತ್ರಿಕೂಟಕ್ಕೆ ಬೆಂಬಲವಾಗಿ ಹಣ ಸುರಿದರು ಮತ್ತು ಮೊದಲಿನಿಂದಲೂ ತಾಲಿಬಾನ್‌ಅನ್ನು ವಿರೋಧಿಸುತ್ತಿದ್ದ ಅವರನ್ನು ಸ್ವಾತಂತ್ರ್ಯ ಹೋರಾಟಗಾರರು ಎಂದು ಬಣ್ಣಿಸಲು ಪ್ರಾರಂಭಿಸಿದರು.

ಉತ್ತರ ಮೈತ್ರಿಕೂಟವು ತಾಲಿಬಾನ್ ಜೊತೆಗಿನ ಯುದ್ಧದ ಸಮಯದಲ್ಲಿ ಭಾರತ, ಇರಾನ್ ಮತ್ತು ರಷ್ಯಾಗಳ ಬೆಂಬಲವನ್ನು ಪಡೆದಿತ್ತು. ಅದರ ಕೆಲವು ಸದಸ್ಯರು ಈ ದೇಶಗಳೊಂದಿಗೆ ವಿಶೇಷವಾಗಿ ಆಪ್ತರಾಗಿದ್ದರು. ಉದಾಹರಣೆಗೆ, ಭಾರತದಲ್ಲಿ ಅಧ್ಯಯನ ಮಾಡಿದ ಅವರ ವಿದೇಶಾಂಗ ಸಚಿವ ಅಬ್ದುಲ್ಲಾ ಅಬ್ದುಲ್ಲಾ ಅನೇಕ ಭಾರತೀಯ ಅಧಿಕಾರಿಗಳೊಂದಿಗೆ ನಿಕಟ ಸಂಬಂಧ ಹೊಂದಿದ್ದರು. 90ರ ದಶಕದ ಉತ್ತರಾರ್ಧದಲ್ಲಿ ತಾಲಿಬಾನ್ ವಿರುದ್ಧ ಹೋರಾಡಲು ಭಾರತ ಉತ್ತರ ಮೈತ್ರಿಕೂಟಕ್ಕೆ ಹಲವು ರೀತಿಯ ನೆರವು ನೀಡಿತು.

ಅಫ್ಘಾನಿಸ್ತಾನದ ಮೇಲೆ ಅಮೆರಿಕ ಆಕ್ರಮಣ ಮಾಡಿದ ನಂತರ ಭಾರತಕ್ಕೆ ಈ ಸಂಬಂಧಗಳ ಲಾಭ ಪಡೆಯಲು ಸಾಧ್ಯವಾಯಿತು. ಉತ್ತರ ಮೈತ್ರಿಕೂಟವು ಅಮೆರಿಕನ್ ಸರ್ಕಾರದೊಂದಿಗೆ ಕೆಲಸ ಮಾಡುತ್ತಿತ್ತು. ಅದರ ಸದಸ್ಯರಿಗೆ ಹೊಸ ಸರ್ಕಾರದಲ್ಲಿ ಉನ್ನತ ಹುದ್ದೆಗಳನ್ನು ನೀಡಲಾಯಿತು.

ಹೊಸ ಸರ್ಕಾರ ರಚನೆಯಾದಾಗ, ಉತ್ತರ ಮೈತ್ರಿಕೂಟದ ಸದಸ್ಯರು ಪ್ರಬಲ ಸ್ಥಾನಗಳನ್ನು ಪಡೆದರು. ಉತ್ತರ ಮೈತ್ರಿಕೂಟವು ತಾಲಿಬಾನ್‌ನಷ್ಟು ಕ್ರೂರವಾಗಿರದೆ ಇರಬಹುದು ಮತ್ತು ಅವರು ಆ ಮಟ್ಟದ ಮೂಲಭೂತವಾದಿಗಳಾಗಿರದಿದ್ದರೂ, ನಾಗರಿಕ ಜನಸಂಖ್ಯೆಯ ವಿರುದ್ಧ ಅನೇಕ ಯುದ್ಧ ಅಪರಾಧಗಳ ಆರೋಪವನ್ನು ಅದು ಎದುರಿಸುತ್ತಿದೆ. ಅವರೊಂದಿಗೆ ಕೆಲಸ ಮಾಡಿರುವ ಯಾವುದೇ ದೇಶವು ಅಲ್ಲಿನ ಜನರ ಮೇಲಿನ ಹಿಂಸಾಚಾರದಲ್ಲಿ ಭಾಗಶಃ ತಪ್ಪಿತಸ್ಥವಾಗಿರುತ್ತದೆ ಮತ್ತು ಇದು ತಾಲಿಬಾನ್‌ಗೆ ಹೆಚ್ಚಿನ ಬೆಂಬಲಕ್ಕೆ ಕಾರಣವಾಗುತ್ತದೆ.

ಹಿಂದಿರುಗಿದ ಅಮೆರಿಕ ಮತ್ತು ಭಾರತದ ಪ್ರತಿಕ್ರಿಯೆ

ಉಳಿದಿರುವ ಉತ್ತರ ಮೈತ್ರಿಕೂಟದ ಬಿಡಿ ಗುಂಪುಗಳು ಈಗ ಮತ್ತೆ ಒಟ್ಟುಗೂಡುತ್ತಿವೆ ಮತ್ತು ಅಫ್ಘಾನಿಸ್ತಾನವನ್ನು ನಾಗರಿಕ ಅಂತರ್ಯುದ್ಧದ ಸ್ಥಿತಿಗೆ ಮರಳಿ ತರಬಹುದು. ಕನಿಷ್ಠ ಪಕ್ಷ, ಉತ್ತರ ಮೈತ್ರಿಕೂಟದ ಪುನರುತ್ಥಾನವು ಮುಂದುವರೆದ ಹಿಂಸೆಗೆ ಕಾರಣವಾಗುತ್ತದೆ. ಉತ್ತರ ಮೈತ್ರಿಕೂಟವನ್ನು ಬೆಂಬಲಿಸುವಲ್ಲಿ ಭಾರತದ ಅನುಭವವು, ಈ ತಂತ್ರಗಾರಿಕೆ ಎಷ್ಟು ದೂರದೃಷ್ಟಿಯಿಲ್ಲದ್ದು ಎಂಬುದನ್ನು ತೋರಿಸಬೇಕು. ಅಮೆರಿಕದ ಆಕ್ರಮಣದ ಸಮಯದಲ್ಲಿ ಭಾರತವು ತಾತ್ಕಾಲಿಕವಾಗಿ ಲಾಭ ಗಳಿಸಿದರೂ, ಅದಕ್ಕಿದ್ದ ಬೆಂಬಲ ಕಡಿಮೆಯಾಗಿತ್ತು. ಈಗ ಅಫ್ಘಾನಿಸ್ತಾನದ ಜನರು ಭಾರತವನ್ನು ಆಕ್ರಮಣದ ಬೆಂಬಲಿಗರು ಮತ್ತು ತಾಲಿಬಾನ್ ಸರ್ಕಾರದ ಶತ್ರುವಿನಂತೆ ಕಾಣುವ ಸಾಧ್ಯತೆ ಇದೆ.

ಜೂನ್ 2021ರಲ್ಲಿ ದೋಹಾದಲ್ಲಿ ತಾಲಿಬಾನ್ ನಿಯೋಗದೊಂದಿಗೆ ಭಾರತವು ಗೌಪ್ಯ ಮಾತುಕತೆ ನಡೆಸಿತು. ಇದು ಅಮೆರಿಕದ ಆಕ್ರಮಣದ ನಂತರ ಭಾರತವು ತಾಲಿಬಾನ್ ಜೊತೆ ನಡೆಸಿದ ಮೊದಲ ಸಂವಹನವಾಗಿದೆ. ಸಭೆಯ ವಿವರಗಳು ತಿಳಿದಿಲ್ಲ. ಅಧಿಕಾರ ವಹಿಸಿಕೊಂಡ ನಂತರ, ತಾಲಿಬಾನ್ ನೇತೃತ್ವದ ಸರ್ಕಾರವು ವ್ಯಾಪಾರವನ್ನು ಕಡಿತಗೊಳಿಸಲಿದೆ ಮತ್ತು ಭಾರತವು ಕಾಬೂಲ್‌ನಿಂದ ತನ್ನ ರಾಯಭಾರ ಕಚೇರಿಯನ್ನು ಹಿಂತೆಗೆದುಕೊಳ್ಳಲಿದೆ.

ಭಾರತವು ತಾಲಿಬಾನ್ ನೇತೃತ್ವದ ಅಫ್ಘಾನಿಸ್ತಾನವನ್ನು ಪಾಕಿಸ್ತಾನದ ಮಿತ್ರ ರಾಷ್ಟ್ರವಾಗಿ ಮತ್ತು ಭಯೋತ್ಪಾದನೆಗೆ ತರಬೇತಿ ನೀಡುವ ನೆಲೆಯಾಗಿ ನೋಡುತ್ತದೆ. ಸರ್ಕಾರದ ಉದ್ದೇಶವು ಮಾನವ ಹಕ್ಕುಗಳ ಕಾಳಜಿ ಅಥವಾ ಮೂಲಭೂತವಾದದ ಭಯದಿಂದ ಪ್ರೇರೇಪಿಸಲ್ಪಟ್ಟಿಲ್ಲ, ಬದಲಾಗಿ ಅಫ್ಘಾನಿಸ್ತಾನವು ಭೌಗೋಳಿಕ ಮಿಲಿಟರಿ ಪರಿಸ್ಥಿತಿಯ ಮೇಲೆ ಹೇಗೆ ಪ್ರಭಾವ ಬೀರುತ್ತದೆ ಮತ್ತು ಭಾರತವು ಅದರೊಂದಿಗೆ ಯಾವ ರೀತಿ ವ್ಯಾಪಾರ ವಹಿವಾಟಿನ ಸಂಬಂಧಗಳನ್ನು ಹಂಚಿಕೊಳ್ಳುತ್ತದೆ ಎಂಬುದರ ಬಗ್ಗೆ. ಆ ಕಳವಳಗಳಿಗೆ, ಈ ಪ್ರದೇಶದಲ್ಲಿ ಬಹುಪಕ್ಷೀಯ ಸಹಕಾರವನ್ನು ಖಚಿತಪಡಿಸಿಕೊಳ್ಳಲು, ಶಾಂತಿ ಮತ್ತು ಪರಸ್ಪರ ಲಾಭದಾಯಕತೆಯನ್ನು ಖಚಿತಪಡಿಸಿಕೊಳ್ಳಲು ಭಾರತವು ನಿಜವಾದ ಜಾಗತಿಕ ಮೈತ್ರಿಕೂಟವನ್ನು ನಿರ್ಮಿಸುವ ಕಡೆಗೆ ಕೆಲಸ ಮಾಡಬೇಕು. ಪ್ರಾಕ್ಸಿ ಯುದ್ಧಗಳು ಮತ್ತು ಪ್ರಾದೇಶಿಕ ಮಿಲಿಟರೀಕರಣವು ವ್ಯತಿರಿಕ್ತ ಪರಿಣಾಮ ಬೀರಬಲ್ಲ ಸಾಧ್ಯತೆಯಿರುತ್ತದೆ.

ಬಹಳ ಹಿಂದಿನಿಂದಲೂ ಭಾರತದ ಅಂತಾರಾಷ್ಟ್ರೀಯ ವಿದೇಶಾಂಗ ನೀತಿಯು ವಿದೇಶಗಳ ಸಾರ್ವಭೌಮತ್ವವನ್ನು ಗೌರವಿಸುವುದಾಗಿದೆ. ಭಾರತವು ಧಾರ್ಮಿಕ ಮೂಲಭೂತವಾದದ ವಿರುದ್ಧ ಹೋರಾಡಲು ಮತ್ತು ಮಾನವ ಹಕ್ಕುಗಳನ್ನು ರಕ್ಷಿಸಲು ಬಯಸಿದರೆ, ಬಹುಪಕ್ಷೀಯ ಜಾಗತಿಕ ಮೈತ್ರಿಯನ್ನು ನಿರ್ಮಿಸುವುದು ಮುಖ್ಯವಾಗುತ್ತದೆ. ಅಲ್ಪಾವಧಿಯಲ್ಲಿ, ತಾಲಿಬಾನ್ ನೇತೃತ್ವದ ಅಫ್ಘಾನಿಸ್ತಾನವು ಪಾಕಿಸ್ತಾನದ ಮಿತ್ರರಾಷ್ಟ್ರವಾಗಿರಲಿದೆ ಎಂಬುದನ್ನು ಭಾರತ ನಿರೀಕ್ಷಿಸಬೇಕು.

ವಿದೇಶಿ ಸರ್ಕಾರಗಳು ಹೇಗೆ ಪ್ರತಿಕ್ರಿಯಿಸಬೇಕು?

ಅಫ್ಘಾನಿಸ್ತಾನವು ದಶಕಗಳಿಂದ ಪ್ರಾಕ್ಸಿ ಯುದ್ಧಗಳ ದಾಳಿಯಲ್ಲಿದೆ. ಅಸಂಖ್ಯಾತ ಇತರ ಪ್ರಕರಣಗಳಂತೆ, ಪ್ರಾಕ್ಸಿ ಯುದ್ಧಗಳು ಪ್ರಗತಿಪರ ಚಳವಳಿಗಳನ್ನು ಹತ್ತಿಕ್ಕಬಹುದು. ವಿಶ್ವಸಂಸ್ಥೆಯು ಅಫ್ಘಾನಿಸ್ತಾನದಲ್ಲಿ ಯಾವುದೇ ಸಕಾರಾತ್ಮಕ ಪಾತ್ರವನ್ನು ವಹಿಸಬೇಕಾದರೆ, ಅಫ್ಘಾನಿಸ್ತಾನದ ಜನರನ್ನು ವಿದೇಶಿ ಪ್ರಾಯೋಜಿತ ಹಿಂಸೆಯಿಂದ ರಕ್ಷಿಸುವುದು ಮೊದಲು ಆದ್ಯತೆಯಾಗಬೇಕು. ಅಂತಾರಾಷ್ಟ್ರೀಯ ನ್ಯಾಯ ಮಂಡಳಿಯು ಮಾನವ ಹಕ್ಕುಗಳ ಉಲ್ಲಂಘನೆಯ ವಿಷಯಗಳಲ್ಲಿ ಮಧ್ಯಪ್ರವೇಶಿಸಲು ಸಿದ್ಧವಾಗಿರಬೇಕು. ನಾಜಿ ಜರ್ಮನಿ, ವರ್ಣಭೇದ ನೀತಿಯ ದಕ್ಷಿಣ ಆಫ್ರಿಕಾ ಮತ್ತು ಇತರ ಹಲವು ಪ್ರಕರಣಗಳಿಗಿಂತ ಭಿನ್ನವಾಗಿ, ಯುದ್ಧ ಅಪರಾಧಗಳ ಕುರಿತು ಅಂತಾರಾಷ್ಟ್ರೀಯು ವಿಚಾರಣೆಯ ಕೂಗನ್ನು ಅಫ್ಘಾನಿಸ್ತಾನದಲ್ಲಿ ಎಂದಿಗೂ ಕೇಳಲಾಗಿಲ್ಲ.

ಅಫ್ಘಾನಿಸ್ತಾನದ ಆಕ್ರಮಣ ಮತ್ತು ಪ್ರಾಕ್ಸಿ ಯುದ್ಧಗಳು ಅಫ್ಘಾನ್ ಜನರಲ್ಲಿ ತಾಲಿಬಾನ್ ಬೆಂಬಲವನ್ನು ಹೆಚ್ಚಿಸಿದೆ. ಯುದ್ಧದೊಳಗೆ ಸಿಕ್ಕಿಬಿದ್ದಾಗ ಜನರಿಗೆ ತಮ್ಮ ಭವಿಷ್ಯವನ್ನು ರೂಪಿಸಿಕೊಳ್ಳುವ ಬದಲು ಯಾರ ಪರವಾದ ನಿಲುವು ತೆಗೆದುಕೊಳ್ಳಬೇಕು ಎಂಬ ಒತ್ತಡ ಏರ್ಪಡುತ್ತದೆ. ಯುದ್ಧಗಳನ್ನು ಅಂತಾರಾಷ್ಟ್ರೀಯ ಶಕ್ತಿಗಳು ನಡೆಸಿವೆ, ಮತ್ತು ಈಗ ಅದನ್ನು ತಡೆಹಿಡಿಯುವ ಜವಾಬ್ದಾರಿಯನ್ನು ಕೂಡ ಅಂತಾರಾಷ್ಟ್ರೀಯ ಶಕ್ತಿಗಳೇ ಹೊಂದಿದೆ.

ಇರಾಕ್ ಅನುಭವವು ವಿಶ್ವಕ್ಕೆ ಸಿನಿಕತನವನ್ನು ತಂದಿದೆ. ಅಂತಾರಾಷ್ಟ್ರೀಯ ನ್ಯಾಯಮಂಡಳಿಗಳು ಕೇವಲ ನೆಪ ಮತ್ತು ನಾಟಕ ಎಂದು ತೋರಿಸಿ, ಅವು ಪ್ರಬಲ ರಾಷ್ಟ್ರಗಳ ಹಿತಾಸಕ್ತಿಗಳನ್ನು ಕಾಯುತ್ತವೆ ಎಂದು ತಿಳಿಸಿವೆ. ಯುದ್ಧ ಅಪರಾಧಗಳ ವಿರುದ್ಧ ನಿಲ್ಲಲು ಮತ್ತು ಅಫ್ಘಾನಿಸ್ತಾನದ ಜನರನ್ನು ಆಕ್ರಮಣಕಾರರಿಂದ ರಕ್ಷಿಸಲು ಇರುವ ಅಂತಾರಾಷ್ಟ್ರೀಯ ಬದ್ಧತೆಯ ಕೊರತೆಯು ಅಫ್ಘಾನಿಸ್ತಾನಕ್ಕೆ ಮಾತ್ರವಲ್ಲ, ಪ್ರಪಂಚಕ್ಕೆ ಕಾಡುವ ವಿಪತ್ತಿನ ಸಂಗತಿಯಾಗಿದೆ.

ಈ ಹಿಂದೆ ಈ ಪ್ರಯತ್ನಗಳು ಟೀಕೆ ಮತ್ತು ಕೃತ್ರಿಮತೆಯಿಂದ ಕೂಡಿದ್ದವು. ಆದರೆ ಅದು ಅಫ್ಘಾನಿಸ್ತಾನದ ಜನರಿಗೆ ಅತ್ಯುತ್ತಮ ಭರವಸೆಯಾಗಿವೆ. ಹೊರಗಿನ ಪ್ರಪಂಚದೊಂದಿಗಿನ ಸಂಬಂಧಗಳನ್ನು ಒಡೆದುಹೋದ ದೇಶದೊಳಗಿನ ಮಿಲಿಟರಿ ಮೈತ್ರಿಗಳಿಗಿಂತ, ಪ್ರಾಕ್ಸಿ ಯುದ್ಧಗಳನ್ನು ತಡೆಯಲು ಮತ್ತು ಪ್ರಗತಿಪರ ಚಳವಳಿಗಳನ್ನು ಪ್ರೋತ್ಸಾಹಿಸಲು ಮುಂದಾಗುವಂತೆ ಎಚ್ಚರ ವಹಿಸಬೇಕು.

(ಕನ್ನಡಕ್ಕೆ): ಬಿ ಎ ತೇಜಸ್ವಿ

ಕಿಶೋರ್ ಗೋವಿಂದ

ಕಿಶೋರ್ ಗೋವಿಂದ
ಬೆಂಗಳೂರಿನಲ್ಲಿ ನೆಲೆಸಿರುವ ಕಿಶೋರ್ ಅವರು ಗಣಿತಶಾಸ್ತ್ರಜ್ಞರು. ಜಾಗತಿಕ ರಾಜಕೀಯ ಆಗುಹೋಗುಗಳನ್ನು ನಿಕಟವಾಗಿ ಗಮನಿಸುವ ಅವರು ಪತ್ರಿಕೆಗಳಿಗೆ ಲೇಖನಗಳನ್ನು ಬರೆದಿದ್ದಾರೆ.


ಇದನ್ನೂ ಓದಿ: ಇಸ್ಲಾಮಿಕ್ ಎಮಿರೇಟ್ಸ್ ಆಫ್ ಅಫ್ಘಾನಿಸ್ತಾನ ಮತ್ತು ಶೀತಲ ಸಮರ 2.0

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಅಮೆರಿಕದ ‘ಪಿತ್ರಾರ್ಜಿತ ಆಸ್ತಿ ತೆರಿಗೆ’ ಬಗ್ಗೆ ಸ್ಯಾಮ್ ಪಿತ್ರೋಡಾ ಕೊಟ್ಟಿದ್ದ ವಿವರಣೆಯನ್ನು ‘ರಾಜಕೀಯ ಅಸ್ತ್ರ’...

0
ಲೋಕಸಭೆ ಚುನಾವಣೆ ಹಿನ್ನೆಲೆ ಪ್ರಧಾನಿ ಮೋದಿ ಹಾದಿಯಾಗಿ ಬಿಜೆಪಿ ನಾಯಕರು ವಿವಾದಾತ್ಮಕ ಹೇಳಿಕೆ ಮೂಲಕ ಕಾಂಗ್ರೆಸ್‌ ಪಕ್ಷವನ್ನು ಮತ್ತು ಕಾಂಗ್ರೆಸ್‌ನ ಪ್ರಣಾಳಿಕೆ ವಿರುದ್ಧ ವಾಗ್ಧಾಳಿ ನಡೆಸುತ್ತಾ ಬಂದಿದ್ದಾರೆ. ಈ ಮಧ್ಯೆ ಭಾರತೀಯ ಸಾಗರೋತ್ತರ...