ಕೊರೊನಾ ಕಾರಣಕ್ಕೆ ಆನ್‌ಲೈನ್ ಆರ್ಡರ್‌ಗಳಲ್ಲಿ ಏರಿಕೆ ಆಗಿರುವುದರಿಂದ ಅಮೆರಿಕಾದಲ್ಲಿ ಒಂದು ಲಕ್ಷ ಕಾರ್ಮಿಕರನ್ನು ನೇಮಿಸಿಕೊಳ್ಳುವುದಾಗಿ ಅಮೆಜಾನ್ ಡಾಟ್ ಕಾಮ್ ಹೇಳಿದೆ. ಕೊರೋನ ವೈರಸ್ ಸ್ಪೋಟಗೊಂಡ ನಂತರ ಅನೇಕ ಗ್ರಾಹಕರು ತಮ್ಮ ಅಗತ್ಯಗಳನ್ನು ಪೂರೈಸಲು ವೆಬ್‌ನತ್ತ ಮುಖ ಮಾಡಿದ್ದಾರೆ ಎನ್ನಲಾಗಿದೆ.
ಅಮೆಜಾನ್‌ನಂತೆಯೇ, ಅಮೆರಿಕಾದ ಸೂಪರ್ ಮಾರ್ಕೆಟ್ ಗಳಾದ ಆಲ್ಬರ್ಟ್‌ಸನ್ಸ್, ಕ್ರೊಗರ್ ಮತ್ತು ರೇಲಿಗಳು ಕಾರ್ಯನಿರತ ವಿಭಾಗಗಳಿಗೆ ಹೊಸ ನೇಮಕಾತಿಗಳನ್ನು ಮಾಡುತ್ತಿದ್ದಾರೆ. ಕೊರೊನಾ ವೈರಸ್ ಕಾರಣದಿಂದಾಗಿ ಕೆಲಸ ಕಳೆದುಕೊಂಡ ರೆಸ್ಟೋರೆಂಟ್, ಪ್ರಯಾಣ ಮತ್ತು ಮನರಂಜನಾ ವ್ಯವಹಾರಗಳಲ್ಲಿರುವ ಜನರ ಕಡೆಗೆ ಇವರು ನೊಡುತ್ತಿದ್ದಾರೆ.
“ಪರಿಸ್ಥಿತಿ ಸಾಮಾನ್ಯ ಸ್ಥಿತಿಗೆ ಮರಳುವವರೆಗೆ ಹಾಗೂ ಅವರ ಹಿಂದಿನ ಉದ್ಯೋಗದಾತ ಅವರನ್ನು ಮರಳಿ ಕೆಲಸಕ್ಕೆ ತೆಗೆದುಕೊಳ್ಳುವವರೆಗೂ ನಾವು ಅವರನ್ನು ನಮ್ಮ ತಂಡಗಳಲ್ಲಿ ಸ್ವಾಗತಿಸುತ್ತೇವೆ” ಎಂದು ಅಮೆಜಾನ್ ಬ್ಲಾಗ್ ಪೋಸ್ಟ್‌ನಲ್ಲಿ ತಿಳಿಸಿದೆ.
ಕೊರೊನಾ ವೈರಸ್ ಜಾಗತಿಕವಾಗಿ 7,100 ಕ್ಕೂ ಹೆಚ್ಚು ಸಾವುಗಳಿಗೆ ಕಾರಣವಾಗಿದೆ. ಹೊಸ ಉದ್ಯೋಗಿಗಳನ್ನು ಸೆಳೆಯಲು, ಅಮೆಜಾನ್ ಏಪ್ರಿಲ್ ನಂತರ ಅಮೆರಿಕಾದ ಕಾರ್ಮಿಕರ ವೇತನಕ್ಕೆ ಗಂಟೆಗೆ ಕನಿಷ್ಟ ವೇತನದ ಮೇಲೆ $2 ಸೇರಿಸುವುದಾಗಿ ಹೇಳಿದೆ.
ಸರ್ಕಾರದ ಹೊಸ ನಿರ್ಬಂಧಗಳು ಡೆಲೆವರಿಗಳ ಮೇಲೆ ಪರಿಣಾಮ ಬೀರುತ್ತದೆಯೇ ಎಂಬುದು ಸ್ಪಷ್ಟವಾಗಿಲ್ಲ. ಸೋಮವಾರ ಸ್ಯಾನ್ ಫ್ರಾನ್ಸಿಸ್ಕೊ ಕೊಲ್ಲಿ ಪ್ರದೇಶದಲ್ಲಿ, ಅಧಿಕಾರಿಗಳು ಅಗತ್ಯ ಕೆಲಸಗಳಿಗೆ ಹೊರತುಪಡಿಸಿ ಮನೆಯಲ್ಲಿಯೇ ಇರಬೇಕು ಎಂದು ಹೇಳಿದ್ದಾರೆ.


