Homeಕರ್ನಾಟಕಒಳಮೀಸಲಾತಿಯ ಮುಂಚೂಣಿ ನಾಯಕ ಅಂಬಣ್ಣ, ಬಿ.ಗೋಪಾಲ್ ಸೇರಿದಂತೆ ಹಲವರು ಕಾಂಗ್ರೆಸ್ ಸೇರ್ಪಡೆ

ಒಳಮೀಸಲಾತಿಯ ಮುಂಚೂಣಿ ನಾಯಕ ಅಂಬಣ್ಣ, ಬಿ.ಗೋಪಾಲ್ ಸೇರಿದಂತೆ ಹಲವರು ಕಾಂಗ್ರೆಸ್ ಸೇರ್ಪಡೆ

ದಲಿತ ರಾಜಕೀಯದ ಕುರಿತು ಎದ್ದಿರುವ ಪ್ರಶ್ನೆಗಳಿಗೆ ಅಂಬಣ್ಣ ಅವರು ‘ನಾನುಗೌರಿ.ಕಾಂ’ಗೆ ಪ್ರತಿಕ್ರಿಯಿಸಿದ್ದಾರೆ.

- Advertisement -
- Advertisement -

ಪರಿಶಿಷ್ಟ ಜಾತಿಯೊಳಗೆ ಒಳಮೀಸಲಾತಿ ಜಾರಿಗೊಳಿಸಬೇಕು ಎಂದು ನಡೆಯುತ್ತಿರುವ ಹೋರಾಟದಲ್ಲಿ ಮುಂಚೂಣಿಯಲ್ಲಿರುವ ನಾಯಕರಾದ ಅಂಬಣ್ಣ ಅರೋಲಿಕರ್‌, ಬಿ.ಗೋಪಾಲ್ ಸೇರಿದಂತೆ ಹಲವು ದಲಿತ ಮುಖಂಡರು ಕಾಂಗ್ರೆಸ್ ಸೇರ್ಪಡೆಯಾಗಿದ್ದಾರೆ.

ಬೆಂಗಳೂರಿನ ಕ್ವೀನ್ಸ್‌ ರಸ್ತೆಯಲ್ಲಿರುವ ಕಾಂಗ್ರೆಸ್ ಕಚೇರಿಯಲ್ಲಿ ಪಕ್ಷ ಸೇರ್ಪಡೆ ಕಾರ್ಯಕ್ರಮ ನಡೆಯಿತು. ಎಂಆರ್‌ಎಚ್‌ಎಸ್‌ನ ಅಂಬಣ್ಣ (ರಾಯಚೂರು) ಅವರೊಂದಿಗೆ, ಡಿಎಸ್‌ಎಸ್‌ ರಾಜ್ಯ ಸಂಚಾಲಕ ಹೆಣ್ಣೂರು ಶ್ರೀನಿವಾಸ್ (ಬೆಂಗಳೂರು), ದಸಂಸ ಮುಖಂಡ ಮಾರೇಶ್‌ ನಾಗಣ್ಣನವರ್‌ (ಧಾರವಾಡ), ಅಲೆಮಾರಿ ಸಮುದಾಯದ ರಾಜ್ಯ ಮುಖಂಡ ಸಣ್ಣಮಾರಣ್ಣ (ವಿಜಯನಗರ), ಮಾದಿಗ ದಂಡೋರದ ವೆಂಕಟೇಶ್ ಆಲೂರ್‌ (ಯಾದಗಿರಿ), ಸ್ಲಂ ನಿವಾಸಿಗಳ ರಾಜ್ಯ ಸಂಚಾಲಕ ನರಸಿಂಹಮೂರ್ತಿ (ತುಮಕೂರು), ದಸಂಸ ಮುಖಂಡ ಮರಿಸ್ವಾಮಿ ಕೊಟ್ಟೂರು (ವಿಜಯನಗರ), ಯುವ ಮುಖಂಡರಾದ ಮುರಳೀಧರ ಮೇಲಿನಮನಿ (ಕೊಪ್ಪಳ), ಹತವಾಡಿ ಲಕ್ಷ್ಮಣ್‌ (ಬೆಂಗಳೂರು), ವಿಜಯಕುಮಾರ್‌ (ಬೀದರ್‌), ಎಂಆರ್‌ಎಚ್‌ಎಸ್‌ ರಾಯಚೂರು ಜಿಲ್ಲಾ ಮುಖಂಡ ತಿಮ್ಮಪ್ಪ ಆಲ್ಕೂರು, ರಾಜಣ್ಣ (ಚಿತ್ರದುರ್ಗ), ಉಡುಚಪ್ಪ ಯಲ್ಲಮ್ಮ ಮಳಗಿ (ಹಾವೇರಿ), ಆದಿಜಾಂಬಜ ಜನಸಂಘದ ರಾಜ್ಯ ಮುಖಂಡ ಮುನಿಕೃಷ್ಣಯ್ಯ (ಬೆಂಗಳೂರು), ದಸಂಸ ಮುಖಂಡ ಯಲ್ಲಪ್ಪ ಗೊರಮಗೊಲ್ಲ (ಬೆಳಗಾವಿ), ಮಾರುತಿ ಸಿದ್ದಪ್ಪ ರಂಗಪುರಿ (ಬೆಳಗಾವಿ), ಬಿಎಸ್‌ಪಿ ಮಾಜಿ ರಾಜ್ಯಾಧ್ಯಕ್ಷರಾದ ಬಿ.ಗೋಪಾಲ್‌, ದಾವಣಗೆರೆ ಜಿಲ್ಲಾ ದಸಂಸ ಮುಖಂಡ ಎ.ಡಿ.ಈಶ್ವರಪ್ಪ, ಅಂಬೇಡ್ಕರ್‌ ಸೇನೆ ರಾಜ್ಯ ಮುಖಂಡ ಪಂಡಿತ್‌ ಮುನಿವೆಂಕಟಪ್ಪ, ಬೆಳಗಾವಿ ಡಿಎಸ್‌ಎಸ್ ಲೀಡರ್‌ ಪ್ರಭಾಕರ್‌ ಚಲವಾದಿ ತೇರದಾಳ, ಹಾಸನದ ಶಿವಪ್ಪ ದಿಣ್ಣೇಕೆರೆ, ಎಚ್‌.ಪಿ.ಸುಧಾಮ್ ದಾಸ್‌ ಕಾಂಗ್ರೆಸ್ ಸೇರಿದ್ದಾರೆ.

ಮೂವತ್ತು ವರ್ಷಗಳ ಇತಿಹಾಸವಿರುವ ಒಳಮೀಸಲಾತಿ ಹೋರಾಟ ಕಳೆದ ಡಿಸೆಂಬರ್‌ನಲ್ಲಿ ಪುನಾರಂಭವಾಗಿತ್ತು. ಅದರ ಮುಂದಾಳತ್ವವನ್ನು ಅಂಬಣ್ಣ ವಹಿಸಿದ್ದಾರೆ. ಎಲ್ಲಾ ರಾಜಕೀಯ ಪಕ್ಷಗಳನ್ನು ಕಟುವಾಗಿ ಟೀಕಿಸುತ್ತಾ, ಹೊಲೆಯ ಮತ್ತು ಮಾದಿಗ ಸಮುದಾಯಕ್ಕೆ ಆಗಿರುವ ಅನ್ಯಾಯದ ಕುರಿತು ದನಿ ಎತ್ತುತ್ತಾ ಬಂದಿರುವ ಅಂಬಣ್ಣ ಕಾಂಗ್ರೆಸ್ ಸೇರುವ ಮೂಲಕ ಹಲವು ರಾಜಕೀಯ ಕುತೂಹಲಗಳಿಗೆ ಕಾರಣವಾಗಿದ್ದಾರೆ. ಜೊತೆಗೆ ಹಲವು ಪ್ರಶ್ನೆಗಳನ್ನು ಹುಟ್ಟಿಹಾಕಿದ್ದಾರೆ.

Ambanna Arolikar (@AmbannaArolikar) / Twitter
ಒಳಮೀಸಲಾತಿ ಜಾರಿಗಾಗಿ ನಡೆಯುತ್ತಿರುವ ಹೋರಾಟದಲ್ಲಿ ಮುಂಚೂಣಿಯಲ್ಲಿರುವ ಅಂಬಣ್ಣ ಅರೋಲಿಕರ್‌

ಹೊಲೆಯ ಹಾಗೂ ಮಾದಿಗ ಸಮುದಾಯದ ಮುಖಂಡರು ಕಾಂಗ್ರೆಸ್ ಸೇರ್ಪಡೆಯಾಗಿರುವ ಕುರಿತು ‘ನಾನುಗೌರಿ.ಕಾಂ’ಗೆ ಅಂಬಣ್ಣ ಅರೋಲಿಕರ್‌‌ ಪ್ರತಿಕ್ರಿಯಿಸಿದ್ದಾರೆ.

ನಾನುಗೌರಿ: ಎಲ್ಲಾ ರಾಜಕೀಯ ಪಕ್ಷಗಳನ್ನು ಸಮನಾಂತರವಾಗಿ ವಿರೋಧಿಸುತ್ತಾ ಬಂದಿದ್ದೀರಿ. ಈಗ ಕಾಂಗ್ರೆಸ್ ಸೇರಿದ್ದೀರಿ. ಒಳಮೀಸಲಾತಿ ಹೋರಾಟಕ್ಕೆ ಸಂಬಂಧಿಸಿದಂತೆ ಮುಂದೆ ಬರುವ ಪ್ರಶ್ನೆಗಳಿಗೆ ನಿಮ್ಮ ಪ್ರತಿಕ್ರಿಯೆ ಏನು? ನಿಮ್ಮ ಮುಂದಿನ ನಡೆ ಏನು?

ಅಂಬಣ್ಣ: ಒಳಮೀಸಲಾತಿ ಹೋರಾಟದ ಭಾಗವಾಗಿಯೇ ನಾವು ಪಕ್ಷ ಸೇರಿದ್ದೇವೆ. ರಾಜಕೀಯ ಪಕ್ಷಗಳನ್ನು ಪ್ರಶ್ನಿಸುವ ಕೆಲಸವನ್ನು ಇದುವರೆಗೂ ಮಾಡಿದ್ದೇವೆ. ಮುಂದೆಯೂ ಮಾಡುತ್ತೇವೆ. ಕಾಂಗ್ರೆಸ್‌ ಪಕ್ಷದ ಪ್ರತಿನಿಧಿಯಾಗಿ ಅಥವಾ ಜನಪ್ರತಿನಿಧಿಯಾಗಿ ಹೋರಾಟವನ್ನು ಮುಂದುವರಿಸುವ ಪ್ರಕ್ರಿಯೆ ಇದಾಗಿದೆ. ಪಕ್ಷ ಸೇರ್ಪಡೆ ಎಂಬುದು ರಾಜಕಾರಣಕ್ಕೆ ಹೋದಂತೆ ಅಲ್ಲ, ಇದು ಕೂಡ ಒಂದು ರೀತಿಯಲ್ಲಿ ಹೋರಾಟವಾಗಿದೆ. ರಾಜಕೀಯೇತರವಾಗಿ ಹೋರಾಟ ಮಾಡಿದ್ದರಿಂದ ಎರಡು ಪಕ್ಷಗಳು ಬೆಚ್ಚಿಬಿದ್ದಿವೆ. ಕೆಲವೇ ದಿನಗಳಲ್ಲಿ ಎ.ಜೆ.ಸದಾಶಿವ ಆಯೋಗದ ವರದಿಯನ್ನು ಶಿಫಾರಸ್ಸು ಮಾಡಲು ನಿರ್ಧಾರವನ್ನು ಸರ್ಕಾರ ಕೈಗೊಳ್ಳುವ ಸಾಧ್ಯತೆ ಇದೆ.

ಈ ಹಿನ್ನೆಲೆಯಲ್ಲಿ ಕಾಂಗ್ರೆಸ್‌ ಪಕ್ಷವು ಚಿತ್ರದುರ್ಗದಲ್ಲಿ ಸಮಾವೇಶ ಮಾಡಿ, ನಮ್ಮ ಬಗ್ಗೆ ತೀರ್ಮಾನ ತೆಗೆದುಕೊಂಡಿದೆ. ಒಳಮೀಸಲಾತಿ ಹೋರಾಟದ ಮತ್ತೊಂದು ಮುಖ್ಯ ಬೇಡಿಕೆಯನ್ನೂ ಗಮನಿಸಬೇಕು. ಹೊಲೆಯ, ಮಾದಿಗ ಸಮುದಾಯಗಳನ್ನು ಸೇರಿದಂತೆ ಮೂಲ ಅಸ್ಪೃಶ್ಯರಾಗಿರುವ 96 ಜಾತಿಗಳಿಗೆ ಸೂಕ್ತ ರಾಜಕೀಯ ಪ್ರಾತಿನಿಧ್ಯವನ್ನು ನೀಡಬೇಕು. ಕನಿಷ್ಠ 28 ಕ್ಷೇತ್ರಗಳಲ್ಲಿ ಅಸ್ಪೃಶ್ಯ ಸಮುದಾಯಗಳಿಗೆ ಟಿಕೆಟ್ ನೀಡಬೇಕು. ಒಳಮೀಸಲಾತಿ ಹಂಚಿಕೆ ಸಿದ್ಧಾಂತವನ್ನು ಟಿಕೆಟ್ ವಿಚಾರದಲ್ಲೂ ನಾವು ಪ್ರತಿಪಾದಿಸುತ್ತಿದ್ದೇವೆ.

ಮಾದಿಗ ಸಮುದಾಯಕ್ಕೆ ಶೇ. 6ರಷ್ಟು, ಹೊಲೆಯ ಸಮುದಾಯಕ್ಕೆ ಶೇ. 5ರಷ್ಟು ಹಂಚಿಕೆ ಆಗಬೇಕಿದೆ. ನಾವು ಅಣ್ಣತಮ್ಮಂದಿರು ಐದೂವರೆ- ಐದೂವರೆ ಪಾಲನ್ನು ತೆಗೆದುಕೊಳ್ಳಲು ಒಪ್ಪಿಕೊಂಡಿದ್ದೇವೆ. ಹೀಗಾಗಿ 14 ಮೀಸಲು ಕ್ಷೇತ್ರಗಳಲ್ಲಿ ಹೊಲೆಯ ಸಮುದಾಯದ ಅಭ್ಯರ್ಥಿಗೆ, 14 ಕ್ಷೇತ್ರಗಳಲ್ಲಿ ಮಾದಿಗ ಸಮುದಾಯದ ಅಭ್ಯರ್ಥಿಗೆ ಟಿಕೆಟ್ ನೀಡಬೇಕು, ಪ್ರಥಮ ಅಧಿವೇಶನದಲ್ಲೇ ಒಳಮೀಸಲಾತಿಯನ್ನು ಜಾರಿಗೊಳಿಸಬೇಕು ಎಂಬುದು ನಮ್ಮ ಷರತ್ತಾಗಿದೆ.

2004ರಲ್ಲಿ ಸುಪ್ರೀಂಕೋರ್ಟ್‌ನಲ್ಲಿ ಒಳಮೀಸಲಾತಿ ವಿಚಾರ ರಿಜೆಕ್ಟ್ ಆಗಿತ್ತು. ಆ ಸಂದರ್ಭದಲ್ಲಿ ಕಾಂಗ್ರೆಸ್ ಸ್ವಯಂಪ್ರೇರಿತವಾಗಿ ಉಷಾ ಮೆಹ್ರಾ ಆಯೋಗವನ್ನು ಮಾಡಿತ್ತು. ಸಾಂವಿಧಾನಿಕವಾಗಿ ಅಖಿಲ ಭಾರತ ಮಟ್ಟದಲ್ಲಿ ಒಳಮೀಸಲಾತಿ ವಿಚಾರವನ್ನು ಚರ್ಚಿಸಲು ವೇದಿಕೆಯನ್ನು ಸಿದ್ಧಪಡಿಸಲಾಗಿದ್ದು, ಈ ಕಾರಣಕ್ಕಾಗಿ ನಾವು ನೇರವಾಗಿ ಕಾಂಗ್ರೆಸ್ ಪಕ್ಷವನ್ನು ಬೆಂಬಲಿಸಲು ಮುಂದಾಗಿದ್ದೇವೆ. ಇದು ಹೋರಾಟದ ಮುಂದುವರಿಕೆಯ ಭಾಗ. ಒಳಮೀಸಲಾತಿಯ ವಿಚಾರವನ್ನು ಎಲ್ಲಿ ಪ್ರತಿಪಾದಿಸಬೇಕೋ, ಅಲ್ಲಿ ಪ್ರತಿಪಾದಿಸಲು ಸಿದ್ಧರಾಗಿದ್ದೇವೆ. ನಾವು ಸ್ವಯಂಪ್ರೇರಿತವಾಗಿ ಹೋಗಿಲ್ಲ. ಕಾಂಗ್ರೆಸ್ ಪಕ್ಷವೇ ನಮ್ಮನ್ನು ಆಹ್ವಾನಿಸಿದೆ.

ಕಳೆದ 30 ವರ್ಷಗಳ ಹೋರಾಟದಲ್ಲಿ ಎಲ್ಲಾ ಪಕ್ಷಗಳನ್ನು ವಿರೋಧಿಸಿದ್ದೇವೆ. ಆದರೆ ನಮ್ಮ ಪರವಾಗಿ ಅಧಿಕೃತವಾಗಿ ಕಾಂಗ್ರೆಸ್ ಒಲುವು ತೋರಿದೆ. ನಮ್ಮ ಬೇಡಿಕೆಯನ್ನು ಒಪ್ಪಿಕೊಂಡಿದೆ. ಪಕ್ಷಕ್ಕೆ ಸೇರಿದ ಬಳಿಕ ಒಳಮೀಸಲಾತಿ ಹೋರಾಟವನ್ನು ಕೈಬಿಡುವ ಪ್ರಶ್ನೆಯೇ ಇಲ್ಲ. ಈ ಹೋರಾಟವನ್ನು ರಾಜಕೀಯವಾಗಿ ಹೇಗೆ ಮುಂದುವರಿಸಬೇಕು ಎನ್ನುವ ತಾಲೀಮು ಮಾಡುತ್ತಿದ್ದೇವೆ.

ಒಂದು ಪಕ್ಷವನ್ನು ಒಪ್ಪಿಕೊಳ್ಳುವುದರಿಂದ ಸಮುದಾಯಕ್ಕೆ ಒಳ್ಳೆಯದಾಗುತ್ತದೆ ಎನ್ನುವುದಾದರೆ, ಸಮುದಾಯದ ಮುಖಂಡರು ತಮ್ಮೊಂದಿಗೆ ಇರಬೇಕೆಂದು ಪಕ್ಷ ಬಯಸಿದಾಗ ಅದರೊಂದಿಗೆ ಹೋಗುವುದು ಸೂಕ್ತವೆನಿಸುತ್ತದೆ. ಹೊಲೆಯ ಮಾದಿಗ ಸಮುದಾಯಗಳಿಗೆ ಸಮನಾಂತರವಾಗಿ ಬಿ ಫಾರಂ ಕೊಡುತ್ತೇವೆ ಎಂದಾಗ, ಆರ್‌ಎಸ್‌ಎಸ್‌ ವ್ಯಕ್ತಿಯೇ ನೀನು ಎಂಬ ಪ್ರಶ್ನೆಗಳು ಬಂದಾಗ ಕಾಂಗ್ರೆಸ್ಅನ್ನು ಬಲವಂತವಾಗಿ ಒಪ್ಪಿಕೊಂಡಿದ್ದೇನೆ.

ಈವರೆಗೆ ನಾನು ಇವರಿಗೆ ಮತ ಹಾಕಿಲ್ಲ. ಹೀಗಿರುವವನು ಈ ಪಕ್ಷಕ್ಕೆ ಮತ ಹಾಕಿ ಎಂದು ಹೇಳಬೇಕೆಂದರೆ ಇಲ್ಲಿ ಬಲವಾದ ಸಿದ್ಧಾಂತವಿದೆ. ಹಂಚಿ ತಿನ್ನುವ ನ್ಯಾಯವಿದೆ. ಪ್ರಾಯೋಗಿಕವಾಗಿ ಈ ಸಿದ್ಧಾಂತವನ್ನು ಮುಂದುವರಿಸಬೇಕಿದೆ. ಚಳವಳಿಯ ಸಂಗಾತಿಗಳು ಬೀದಿ ಹೋರಾಟವನ್ನೂ ಮುಂದುವರಿಸುತ್ತಾರೆ. ಹೋರಾಟದ ಮುಂಚೂಣಿಯಲ್ಲಿರುವ ಕೆಲವೇ ಕೆಲವರು ಪಕ್ಷ ಸೇರಿದ್ದೇವೆ.

ನಮ್ಮ ಸ್ಥಿತಿ ಬಿಜೆಪಿ ಬಂದಾಗ ಬಿಜೆಪಿ, ಜೆಡಿಎಸ್ ಬಂದಾಗ ಜೆಡಿಎಸ್‌, ಕಾಂಗ್ರೆಸ್ ಬಂದಾಗ ಕಾಂಗ್ರೆಸ್ ಎಂಬಂತಾಗಿತ್ತು. ನಮ್ಮ ನಿಲುವು ಸ್ಪಷ್ಟವಾಗಿರಬೇಕಿತ್ತು. ಎಲ್ಲ ಪಕ್ಷಗಳೊಂದಿಗೆ ಹೊಂದಾಣಿಕೆ ಮಾಡಿಕೊಳ್ಳುವ ಇಬ್ಬಗೆ ನೀತಿ ಬೇಸರ ತರಿಸಿತು. ಎಲ್ಲರಿಂದಲೂ ನಿಷ್ಠುರವಾಗುವುದು ತಪ್ಪುತ್ತಿರಲಿಲ್ಲ, ಅದರಿಂದ ಸಮುದಾಯಕ್ಕೂ ಯಾವುದೇ ಲಾಭವೂ ಆಗಲಿಲ್ಲ. ಈ ವಾಸ್ತವವನ್ನು ಅರ್ಥಮಾಡಿಕೊಂಡು ಈ ನಿರ್ಧಾರ ತೆಗೆದುಕೊಂಡಿದ್ದೇವೆ.

ನಾನುಗೌರಿ: ನಿಮಗೆ ಟಿಕೆಟ್ ನೀಡುವ ಭರವಸೆಯನ್ನು ಕಾಂಗ್ರೆಸ್ ಪಕ್ಷ ನೀಡಿದೆಯೇ? 

ಅಂಬಣ್ಣ: ಒಳಮೀಸಲಾತಿ ಜಾರಿ ಮತ್ತು ಚುನಾವಣೆಯಲ್ಲಿ ಮಾದಿಗ ಸಮುದಾಯಕ್ಕೆ 14, ಹೊಲೆಯ ಸಮುದಾಯಕ್ಕೆ 14 ಬಿ ಫಾರಂ ನೀಡಬೇಕು ಎಂಬುದು ನಮ್ಮ ಷರತ್ತುಗಳಾಗಿವೆ. ದೊಡ್ಡ ಸಂಖ್ಯೆಯ ಮಾದಿಗ ಸಮುದಾಯವು ತಮ್ಮೊಂದಿಗೆ ಬರಲಿರುವುದರಿಂದ ಎಲ್ಲಾದರೂ ಟಿಕೆಟ್‌ ಕೊಡಬಹುದೆಂದು ವೈಯಕ್ತಿಕವಾಗಿ ಅನಿಸುತ್ತದೆ. ಅದರಲ್ಲಿ ನನಗೆ ಬಲವಾದ ನಂಬಿಕೆ ಇಲ್ಲ. ಈವರೆಗೆ ಪಕ್ಷದಲ್ಲಿ ಇರುವವರಿಗೆಯೇ ಟಿಕೆಟ್ ಸಿಗುವ ಸಾಧ್ಯತೆಗಳು ಕಡಿಮೆ ಇದೆ. ಪಕ್ಷದ ಸದಸ್ಯರಲ್ಲದ ನಮ್ಮಂಥವರನ್ನು ಹೇಗೆ ನೋಡುತ್ತಾರೆಂಬುದು ಸದ್ಯಕ್ಕೆ ತಿಳಿದಿಲ್ಲ. ಒಂದು ವೇಳೆ ಆ ರೀತಿಯಲ್ಲಿ ಪ್ರಿಯಾರಿಟಿ ನೀಡಿದರೆ, ರಾಜ್ಯದ 36 ಮೀಸಲು ಕ್ಷೇತ್ರಗಳಲ್ಲಿ ಎಲ್ಲಿ ಟಿಕೆಟ್ ನೀಡುತ್ತಾರೋ ಅಲ್ಲಿ ಚುನಾವಣೆ ಎದುರಿಸಬೇಕೆಂಬ ನಿರ್ಧಾರವನ್ನೂ ನಮ್ಮ ವೇದಿಕೆಯಿಂದ ಮಾಡಿಕೊಂಡಿದ್ದೇವೆ. ಕಾಂಗ್ರೆಸ್ ಬಹುದೊಡ್ಡ ಸಮುದ್ರವಾಗಿದ್ದು, ಟಿಕೆಟ್ ಸಿಗುತ್ತದೆ ಎಂಬುದು ನಮ್ಮ ನಿರೀಕ್ಷೆಗೆ ಮೀರಿರುವ ಮಾತು. ಪಾಲು ನೀಡುವ ತೀರ್ಮಾನವನ್ನು ಪಕ್ಷ ಮಾಡಿದರೆ ಸಕಾರಾತ್ಮಕವಾಗಿ ಸ್ವೀಕರಿಸುತ್ತೇವೆ.

ನಾನುಗೌರಿ: ಕಳೆದ ಮೂರು ತಿಂಗಳಿಂದ ನಡೆಯುತ್ತಿರುವ ಹೋರಾಟವು ಕಾಂಗ್ರೆಸ್ ಕೃಪಾಪೋಷಿತವಾಗಿತ್ತು ಎಂದು ಬಿಜೆಪಿ ಆರೋಪಿಸಲು ಈಗ ಅವಕಾಶ ನೀಡಿದಂತಾಗುತ್ತಿದೆಯಲ್ಲವೇ? 

ಅಂಬಣ್ಣ: ಒಳಮೀಸಲಾತಿಗಾಗಿ ಒಂದು ಆಯೋಗ ಮಾಡದೆ ಇರುವಂತಹ ಸಂದರ್ಭದಲ್ಲಿ, “ಮಾದಿಗರ ನೋವೇ ಕಾಂಗ್ರೆಸ್‌ನ ಸಾವು’’ ಎಂಬುದು ನಮ್ಮ ಘೋಷಣೆಯಾಗಿತ್ತು. ನಮ್ಮ ಬೇಡಿಕೆಗೆ ಸ್ಪಂದಿಸಿ ಆಯೋಗವನ್ನು ರಚಿಸಿದರು. ನಂತರದಲ್ಲಿ ಬಂದ ಬಿಜೆಪಿ, ಕಾಂಗ್ರೆಸ್‌ ಸರ್ಕಾರಗಳು ನಮಗೆ ಲಾಠಿ ಏಟು ಕೊಟ್ಟಿವೆ. ಯಾವ ಸಂದರ್ಭದಲ್ಲಿ ಯಾರ್‍ಯಾರನ್ನು ಸೋಲಿಸಬೇಕೋ ಅವರನ್ನು ಸೋಲಿಸಿದ್ದೇವೆ. ಈಗ ಕಾಂಗ್ರೆಸ್ ನಮ್ಮ ಬೇಡಿಕೆಯನ್ನು ಒಪ್ಪಿಕೊಂಡಿರುವುದರಿಂದ ಅವರ ಜೊತೆಯಲ್ಲಿ ಇರುವುದು ನಮ್ಮ ಆದ್ಯ ಕರ್ತವ್ಯವಾಗಿದೆ. ಅವರೊಂದಿಗೆ ಸೌಹಾರ್ದದಿಂದ ಇರುವುದು ತಪ್ಪಲ್ಲ. ನಮ್ಮ ಸಮುದಾಯ ಮಾತಿಗೆ ತಪ್ಪುವುದಿಲ್ಲ. ಕೃತಜ್ಞತೆಯನ್ನು ಮರೆಯದವರು ನಾವು. ನಿಯತ್ತಿನ ಜಾತಿಯ ವಾರಸುದಾರರಾಗಿರುವುದರಿಂದ ಕಾಂಗ್ರೆಸ್ ಪಕ್ಷವನ್ನು ಒಪ್ಪಿಕೊಂಡಿದ್ದೇವೆ.

ನಾನುಗೌರಿ: ಚಳವಳಿಯಲ್ಲಿದ್ದ ಬಿ.ಕೃಷ್ಣಪ್ಪನವರು ಬಿಎಸ್‌ಪಿಯನ್ನು ಅಪ್ಪಿಕೊಂಡಿದ್ದರಿಂದ ದಲಿತ ಸಂಘರ್ಷ ಸಮಿತಿ (ದಸಂಸ) ಒಡೆದು ಹೋಯಿತು ಎಂಬ ಮಾತುಗಳಿವೆ. ನಿಮ್ಮ ನಿರ್ಧಾರದಿಂದ ಚಳವಳಿಯಲ್ಲಿ ತೊಡಕು ಉಂಟಾಗಬಹುದೇ?

ಅಂಬಣ್ಣ: ರಾಜಕೀಯ ಮತ್ತು ಬೀದಿ ಹೋರಾಟ ಒಟ್ಟಿಗೆ ನಡೆಯಬೇಕು. ಅದು ನಿಂತು ಹೋಗಿತ್ತು. ಆದರೆ ಬೀದಿ ಹೋರಾಟಕ್ಕೆ ಪೂರಕವಾದ ಒಂದು ರಾಜಕೀಯ ಮೈತ್ರಿ ಅಗತ್ಯ ಎಂಬ ಪಾಠವನ್ನು ನಾವು ಕಲಿತ್ತಿದ್ದೇವೆ. ಇಲ್ಲವಾದರೆ ನಮ್ಮ ಗುರಿ ತಲುಪುದಿಲ್ಲ ಎಂಬುದು ಅರ್ಥವಾಗಿದೆ. ಈ ಹೋರಾಟದಲ್ಲಿ ಸಾವಿರಾರು ಭೀಮ ಸೈನಿಕರು, ಮಹಿಷಿ ಸೈನಿಕರು ಇದ್ದಾರೆ. ಹೀಗಾಗಿ ನಮ್ಮ ಹೋರಾಟ ದಿಕ್ಕು ತಪ್ಪುವುದಿಲ್ಲ. ಸಮುದಾಯದಲ್ಲಿ ರಾಜಕೀಯ ಪ್ರಜ್ಞೆ ಮೂಡಿದೆ. ಸಮುದಾಯದಲ್ಲಿ ದೊಡ್ಡ ಬದಲಾವಣೆಯನ್ನು ತರಬಹುದೆಂಬ ಭರವಸೆ ನಮಗೆ ಇದೆ. ಚಳವಳಿಗೆ ದ್ರೋಹವಾಗದಂತೆ, ರಾಜಕೀಯ ಪ್ರಾತಿನಿಧ್ಯಕ್ಕೂ ಚ್ಯುತಿ ಬಾರದಂತೆ ಮುಂದುವರಿಯುವ ಜವಾಬ್ದಾರಿ ನಮ್ಮ ಮೇಲಿದೆ ಎಂಬುದು ವಾಸ್ತವ.

ನಾನುಗೌರಿ: ಈಗ ಬಿಜೆಪಿ ಸರ್ಕಾರ ಜಸ್ಟೀಸ್ ಎ.ಜೆ.ಸದಾಶಿವ ಆಯೋಗದ ವರದಿಯನ್ನು ಕೇಂದ್ರಕ್ಕೆ ಶಿಫಾರಸ್ಸು ಮಾಡಿದರೆ ನಿಮ್ಮ ನಿಲುವು ಏನಾಗುತ್ತದೆ?

ಅಂಬಣ್ಣ: ರಾಜ್ಯ ಬಿಜೆಪಿ ಸರ್ಕಾರ ಆಯೋಗದ ವರದಿಯನ್ನು ಕೇಂದ್ರಕ್ಕೆ ಶಿಫಾರಸ್ಸು ಮಾಡುತ್ತದೆ ಎಂಬ ಭರವಸೆ ನಮಗೆ ಇದೆ. ಆದರೆ 17 ಪರ್ಸೆಂಟ್‌ಗೆ ಹೆಚ್ಚಿಸಲಾಗಿರುವ ಮೀಸಲಾತಿಯಲ್ಲಿ ಎಲ್ಲ ಸಮುದಾಯಗಳಿಗೆ ಸಮನಾಗಿ ಹಂಚಿಕೆ ಮಾಡುವ ತೀರ್ಮಾನವನ್ನು ಅದು ಕೈಗೊಳ್ಳುತ್ತಿದೆ ಎಂಬ ಸುಳಿವು ಸಿಕ್ಕಿದೆ. ಇದು ಅಸಾಂವಿಧಾನಿಕ. ಮೀಸಲಾತಿ ಹೆಚ್ಚಿಸಿದ್ದೇವೆ ಎಂಬ ಡ್ರಾಮಾದ ಜೊತೆಗೆ ಕೇಂದ್ರಕ್ಕೆ ಶಿಫಾರಸ್ಸು ಮಾಡುವ ಮತ್ತೊಂದು ಡ್ರಾಮಾವನ್ನು ಮಾಡಲು ಬಿಜೆಪಿ ಸಿದ್ಧವಾಗಿದೆ. ನಮ್ಮ ಬಗ್ಗೆ ಬದ್ಧತೆ, ಕಾಳಜಿ ಇದ್ದರೆ ಒಂದೇ ತಿಂಗಳೊಳಗೆ ಇಡಬ್ಲ್ಯುಎಸ್‌ ರೀತಿಯಲ್ಲಿ ಸುಗ್ರೀವಾಜ್ಞೆ ಮಾಡಿದರೆ ಅದು ಸರಿಯಾದ ತೀರ್ಮಾನವಾಗುತ್ತದೆ. ಯಾವುದೇ ತಜ್ಞರ ಶಿಫಾರಸ್ಸು ಇಲ್ಲದೆ, ಆಯೋಗದ ವರದಿ ಇಲ್ಲದೆ ಇಡಬ್ಲ್ಯುಎಸ್ ಜಾರಿಗೊಳಿಸಿದ್ದಾರೆ. ನಾವು 30 ವರ್ಷ ಹೋರಾಟ ಮಾಡಿದ್ದರೂ ಒಳಮೀಸಲಾತಿ ಜಾರಿ ಯಾಕೆ ಸಾಧ್ಯವಾಗುತ್ತಿಲ್ಲ? ಸಮುದಾಯವನ್ನು ದಿಕ್ಕುತಪ್ಪಿಸುವ ಕುತಂತ್ರ ರಾಜಕಾರಣದ ವಿರುದ್ಧ ಯಶಸ್ವಿ ರಾಜಕಾರಣವನ್ನು ನಾವು ಮಾಡಬೇಕಿದೆ. ಕುತಂತ್ರವನ್ನು ವಿಫಲ ಮಾಡುವ ಭಾಗವಾಗಿ ನಾವು ಕಾಂಗ್ರೆಸ್ ಸೇರಿದ್ದೇವೆ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಜಾರ್ಖಂಡ್‌ನಲ್ಲಿ ಮತ್ತೊಂದು ಗುಂಪುಹತ್ಯೆ: ದನ ಕಳ್ಳತನದ ಶಂಕೆಯಲ್ಲಿ ಮುಸ್ಲಿಂ ವ್ಯಕ್ತಿಯನ್ನು ಥಳಿಸಿ ಕೊಂದ ಗುಂಪು

ಜಾರ್ಖಂಡ್‌ನ ಗೊಡ್ಡಾ ಜಿಲ್ಲೆಯಲ್ಲಿ ಬುಧವಾರ ದನಗಳನ್ನು ಕದ್ದಿದ್ದಾನೆ ಎಂಬ ಶಂಕೆಯಲ್ಲಿ 45 ವರ್ಷದ ಮುಸ್ಲಿಂ ವ್ಯಕ್ತಿಯನ್ನು ಅಪರಿಚಿತ ಜನರ ಗುಂಪೊಂದು ಹೊಡೆದು ಕೊಂದಿದೆ ಎಂದು ಪಿಟಿಐ ವರದಿ ಮಾಡಿದೆ. ಪೊಲೀಸ್ ಅಧಿಕಾರಿಗಳನ್ನು ಉಲ್ಲೇಖಿಸಿ ವರದಿ...

ನ್ಯಾಷನಲ್ ಹೆರಾಲ್ಡ್ ಜಾಹೀರಾತು ವಿವಾದ: ಹಣಕಾಸಿನ ದಾಖಲೆ ಕೇಳಿ ಡಿಕೆ ಸಹೋದರರಿಗೆ ನೋಟಿಸ್  

ಕಾಂಗ್ರೆಸ್ ನೇತೃತ್ವದ ಕರ್ನಾಟಕ ಸರ್ಕಾರದಿಂದ ನ್ಯಾಷನಲ್ ಹೆರಾಲ್ಡ್ ಪತ್ರಿಕೆಗೆ ಬೇರೆ ಯಾವುದೇ ರಾಷ್ಟ್ರೀಯ ದಿನಪತ್ರಿಕೆಗಿಂತ ಹೆಚ್ಚಿನ ಜಾಹೀರಾತು ನಿಧಿ ದೊರೆತಿದೆ ಎಂದು ವರದಿಯಾಗಿದೆ, ಇದು ಸಾರ್ವಜನಿಕ ಹಣದ ಬಳಕೆಯ ಬಗ್ಗೆ ಪ್ರಶ್ನೆಗಳನ್ನು ಹುಟ್ಟುಹಾಕಿದೆ....

ಬಿಹಾರ: ಸರ್ಕಾರಿ ಶಾಲಾ ಶಿಕ್ಷಕರಿಗೆ ಬೀದಿ ನಾಯಿಗಳನ್ನು ಎಣಿಸುವ ಹೆಚ್ಚುವರಿ ಕರ್ತವ್ಯ ವಹಿಸಿದ ಪುರಸಭೆ  

ಪಾಟ್ನಾ: ಸುಪ್ರೀಂ ಕೋರ್ಟ್ ಬೀದಿ ನಾಯಿಗಳ ವಿಚಾರದಲ್ಲಿ ಮಹತ್ವದ ಆದೇಶ ನೀಡಿದೆ. ಸಾರ್ವಜನಿಕ ರಸ್ತೆಗಳು, ಬೀದಿಗಳು ಬೀದಿನಾಯಿ ಮುಕ್ತವಾಗಿರಬೇಕು ಎಂದು ಹೇಳಿದೆ. ಆದರೆ ಈ ಆದೇಶ ಸರ್ಕಾರಿ ಶಾಲಾ ಶಿಕ್ಷಕರ ಪಾಲಿಗೆ ದೊಡ್ಡ...

ಮಮತಾ ಬ್ಯಾನರ್ಜಿಯ ರಾಜಕೀಯ ಸಲಹಾ ಸಂಸ್ಥೆ ಐ-ಪ್ಯಾಕ್, ಅದರ ಮುಖ್ಯಸ್ಥ ಪ್ರತೀಕ್ ಜೈನ್ ಮನೆ ಮೇಲೆ ಇಡಿ ದಾಳಿ

ಗುರುವಾರ (ಜ.8) ಬೆಳಿಗ್ಗೆ ಕೋಲ್ಕತ್ತಾದ ಸಾಲ್ಟ್ ಲೇಕ್‌ನಲ್ಲಿರುವ ರಾಜಕೀಯ ಸಲಹಾ ಸಂಸ್ಥೆ ಐ-ಪಿಎಸಿ (ಐ-ಪ್ಯಾಕ್) ಕಚೇರಿ ಮತ್ತು ಅದರ ಮುಖ್ಯಸ್ಥ ಪ್ರತೀಕ್ ಜೈನ್ ಅವರ ಮನೆ ಮೇಲೆ ಜಾರಿ ನಿರ್ದೇಶನಾಲಯ (ಇಡಿ) ದಾಳಿ...

ಉತ್ತರಪ್ರದೇಶ: ಕಬ್ಬಿನ ಗದ್ದೆಯಲ್ಲಿ ಸುಟ್ಟ, ಅರೆನಗ್ನ ಮಹಿಳೆಯ ಮೃತದೇಹ ಪತ್ತೆ: ಅತ್ಯಾಚಾರ ಮಾಡಿ ಬೆಂಕಿ ಹಚ್ಚಿರುವ ಶಂಕೆ

ಹಾಪುರ್: ಉತ್ತರ ಪ್ರದೇಶದ ಹಾಪುರ್ ಜಿಲ್ಲೆಯಲ್ಲಿ ಆಘಾತಕಾರಿ ಘಟನೆಯೊಂದು ಬೆಳಕಿಗೆ ಬಂದಿದ್ದು, ಬಹದ್ದೂರ್‌ಗಢ ಪೊಲೀಸ್ ಠಾಣೆ ವ್ಯಾಪ್ತಿಯ ಲಹಾದ್ರಾ ಗ್ರಾಮದ ಇಟ್ಟಿಗೆ ಗೂಡುಗಳ ಹಿಂದಿನ ಕಬ್ಬಿನ ಗದ್ದೆಯಲ್ಲಿ ಸುಮಾರು 30 ವರ್ಷ ವಯಸ್ಸಿನ...

ಗೋಮಾಂಸ ಸೇವನೆ ಶಂಕೆಯಲ್ಲಿ ಮಾನಸಿಕ ಅಸ್ವಸ್ಥ ವ್ಯಕ್ತಿಯ ಮೇಲೆ ಕ್ರೂರ ಹಲ್ಲೆ : ಮೂವರು ದುಷ್ಕರ್ಮಿಗಳ ಬಂಧನ

ಸಾರ್ವಜನಿಕವಾಗಿ ಹಸುವನ್ನು ಕೊಂದು, ಅದರ ಮಾಂಸವನ್ನು ತಿಂದಿದ್ದಾರೆ ಎಂದು ಆರೋಪಿಸಿ ಮಾನಸಿಕ ಅಸ್ವಸ್ಥ ವ್ಯಕ್ತಿ ಮೇಲೆ ಸ್ವಘೋಷಿತ ಗೋರಕ್ಷಕರು ಕ್ರೂರವಾಗಿ ಹಲ್ಲೆ ನಡೆಸಿದ ಘಟನೆ ರಾಜಸ್ಥಾನದ ಝಾಲಾವರ್ ಜಿಲ್ಲೆಯ ಅಕ್ಲೇರಾ ತಾಲೂಕಿನ ಕಿಶನ್‌ಪುರ...

‘ನಿಮ್ಮನ್ನು ನಂಬಿ ಬಂದ ನಕ್ಸಲ್ ಕಾರ್ಯಕರ್ತರಿಗೆ ಕೊಟ್ಟ ಮಾತು ಉಳಿಸಿಕೊಳ್ಳಿ’: ಸಿದ್ದರಾಮಯ್ಯ ಅವರಿಗೆ ಮನವಿ ಮಾಡಿದ ಶಾಂತಿಗಾಗಿ ನಾಗರೀಕ ವೇದಿಕೆ

ಬೆಂಗಳೂರು: ‘ಮುಖ್ಯವಾಹಿನಿಗೆ ಬಂದ ಏಳೂ ಜನ ನಕ್ಸಲೀಯರು ಜೈಲಿನಲ್ಲೇ ಇದ್ದಾರೆ. ಬಹಳ ಸೊರಗಿದ್ದಾರೆ. ತೀವ್ರ ದೈಹಿಕ ಹಾಗೂ ಮಾನಸಿಕ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಅವರನ್ನು ಹೋಗಿ ಕಾಣುವುದೇ ನಮ್ಮ ಪಾಲಿಗೆ ದೊಡ್ಡ ಹಿಂಸೆಯಾಗಿದೆ ಎಂದು...

ಕೋಗಿಲು ಮನೆಗಳ ನೆಲಸಮ : ಪ್ರತಿಭಟಿಸಿದ ಹೋರಾಟಗಾರರ ಮೇಲೆ ಎಫ್‌ಐಆರ್

ಕೋಗಿಲು ಬಡಾವಣೆಯಲ್ಲಿ ಬಡವರ ಮನೆಗಳ ನೆಲಸಮ ವೇಳೆ ಬಿಗುವಿನ ವಾತಾವರಣ ಸೃಷ್ಟಿಸಿದ್ದಾರೆ ಎಂಬ ಆರೋಪದ ಮೇಲೆ ಹೋರಾಟಗಾರರ ವಿರುದ್ದ ಯಲಹಂಕ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ. ಜನಪರ ವೇದಿಕೆಯ ಮುಖಂಡರಾದ ಗೌರಮ್ಮ ಮತ್ತು ಮನೋಹರ್,...

17 ವರ್ಷದ ಮಹಿಳಾ ಅಥ್ಲೀಟ್ ಮೇಲೆ ಲೈಂಗಿಕ ದೌರ್ಜನ್ಯ ಆರೋಪ: ರಾಷ್ಟ್ರೀಯ ಶೂಟಿಂಗ್ ತರಬೇತುದಾರ ಅಮಾನತು

ಫರಿದಾಬಾದ್‌ನ ಹೋಟೆಲ್‌ನಲ್ಲಿ 17 ವರ್ಷದ ರಾಷ್ಟ್ರಮಟ್ಟದ ಮಹಿಳಾ ಶೂಟರ್ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪದ ಮೇಲೆ ಹರಿಯಾಣ ಪೊಲೀಸರು ಪ್ರಕರಣ ದಾಖಲಿಸಿದ ನಂತರ ರಾಷ್ಟ್ರೀಯ ಶೂಟಿಂಗ್ ತರಬೇತುದಾರ ಅಂಕುಶ್ ಭಾರದ್ವಾಜ್ ಅವರನ್ನು...

ಸುಪ್ರೀಂ ಕೋರ್ಟ್‌ನಿಂದ ಜಾಮೀನು : ಗುಲ್ಫಿಶಾ ಫಾತಿಮಾ ಸೇರಿದಂತೆ ನಾಲ್ವರು ಜೈಲಿನಿಂದ ಬಿಡುಗಡೆ

ಈಶಾನ್ಯ ದೆಹಲಿಯ 2020ರ ಗಲಭೆ ಪಿತೂರಿ ಆರೋಪದಲ್ಲಿ ಬಂಧಿತರಾಗಿದ್ದ ನಾಲ್ವರು ವಿದ್ಯಾರ್ಥಿ ಹೋರಾಟಗಾರರು ಬುಧವಾರ (ಜ.7) ಜೈಲಿನಿಂದ ಹೊರ ಬಂದಿದ್ದಾರೆ. ಗುಲ್ಫಿಶಾ ಫಾತಿಮಾ, ಮೀರಾನ್ ಹೈದರ್, ಶಿಫಾ ಉರ್ ರೆಹಮಾನ್ ಮತ್ತು ಮೊಹಮ್ಮದ್ ಸಲೀಮ್...